ಕಾಲನ ದಾಳ

ಕಾಲನ ದಾಳ

ಚಿತ್ರ

ಹಲಜನರು ತಂಗಿರುತ್ತಿದ್ದ ಮನೆಯೊಳಗೀಗಲೊಬ್ಬಂಟಿ ನಿಂತನೋರ್ವ
ಒಬ್ಬರೋ ಹಲವರೋ ಮೊದಲಿದ್ದ ಕಡೆಯಲ್ಲಿ ಕೊನೆಯಲಾರೂ ಕಾಣರು
ದಿನರಾತ್ರಿಯೆಂಬೆರಡು ದಾಳಗಳನುರುಳಿಸುತ ಎಡೆಬಿಡದೆ ಕಾಲಪುರುಷ
ಪಗಡೆಯನ್ನಾಡಿಹನು ಬುವಿಯ ಹಾಸನು ಹೂಡಿ ಜೀವಿಗಳ ಕಾಯಿ ನಡೆಸಿ

ಸಂಸ್ಕೃತ ಮೂಲ (ಭರ್ತೃಹರಿಯ ವೈರಾಗ್ಯ ಶತಕ, ಪದ್ಯ ೪೨):

ಯತ್ರಾನೇಕಃ ಕ್ವಚಿದಪಿ ಗೃಹೇ ತತ್ರ ತಿಷ್ಠತ್ಯಥೈಕೋ
ಯತ್ರಾಪ್ಯೇಕಸ್ತದನು ಬಹವಸ್ತ್ರತ್ರ ನೈಕೋಪಿ ಚಾಂತೇ
ಇತ್ಥಂ ನೇಯೌ ರಜನಿ ದಿವಸೌ ಲೋಲಯನ್ ದ್ವಾವಿನಾಕ್ಷೌ
ಕಾಲಃ ಕಲ್ಯೋ ಭುವನ ಫಲಕೇ ಕ್ರೀಡತಿ ಪ್ರಾಣಿಶಾರೈಃ

-ಹಂಸಾನಂದಿ
ಕೊ: ಅನುವಾದವು , ಪಂಚಮಾತ್ರಾ ಚೌಪದಿಯ ಧಾಟಿಯಲ್ಲಿ ಇದೆ. ಪ್ರತೀ ಸಾಲಿನಲ್ಲೂ ೫-೫-೫-೫-೫-೫-೨ ಈ ರೀತಿಯ ಗಣವಿಭಾಗವಿದೆ. ಆದರೆ, ಪ್ರಾಸವನ್ನಿಟ್ಟಿಲ್ಲ.
ಕೊ.ಕೊ: ಪಗಡೆಯಾಟದ ಮನೆಗಳಲ್ಲಿ ಯಾವ ಕಾಯೂ ಇದ್ದಲ್ಲೇ ಇರದು. ಬದಲಾಗುತ್ತಲೇ ಇರುತ್ತವೆ ಅಲ್ಲವೆ? ಅದೇ ರೀತಿ, ಈ ಜಗದ ಜೀವರಾಶಿಗಳೆಲ್ಲ ಬದಲಾಗುತ್ತಲೇ ಇರುತ್ತವೆ, ಯಾವುದೂ ಸ್ಥಿರವಲ್ಲ, ಕಾಲವನ್ನು ತಡೆಯೋರು ಯಾರೂ ಇಲ್ಲ  ಅನ್ನುವುದು ಪದ್ಯದ ಆಶಯ.

ಕೊ.ಕೊ.ಕೊ: ಸೂರ್ಯನು ಉತ್ತರದ ಕಡೆಗೆ ತನ್ನ ಚಲನೆಯನ್ನು ಬದಲಾಯಿಸುತ್ತಾನೆನ್ನಲಾಗುವ ಈ ಮಕರ ಸಂಕ್ರಾಂತಿಯಂದು ( ಅದು ಹೇಗೆ ಪೂರ್ತಿ ಸರಿಯಲ್ಲ ಅನ್ನುವುದಕ್ಕೆ ಇಲ್ಲಿ ಮತ್ತೆ ಇಲ್ಲಿ ಓದಿ ನೋಡಿ), ಹೀಗೆ ಕಾಲನಾಡುವ ಪಗಡೆಯಾಟದ ಪದ್ಯ ನನಗೆ ಸಿಕ್ಕಿದ್ದು ಅದೃಷ್ಟವೇ ಸರಿ. ಕಾಲದ ಕೈಯಲ್ಲಿ ನಾವೆಲ್ಲಾ ಆಟದ ಕಾಯಿಗಳು ತಾನೇ?
 

Rating
No votes yet

Comments

Submitted by nageshamysore Thu, 01/16/2014 - 22:32

ಪಗಡೆಯಾಟದಲ್ಲೆ ಜೀವನ ತತ್ವ ಸಾರುವ ಸೊಗಸಾದ ರಚನೆ ಹಂಸಾನಂದಿಯವರೆ. ಮತ್ತೊಂದು ಕುತೂಹಲಕರ ಅಂಶ - ತಮ್ಮ ಇಹ ಜೀವನ ಮುಗಿಸಿದ ಜೀವರಾಶಿಯ 'ಕಾಯಿಗಳು' ಮರು ಪಂದ್ಯದಲ್ಲಿ ಮತ್ತೆ ಹೊಸದಾಗಿ ಆಟವಾರಂಭಿಸುವುದು, ಜೀವಿಗಳು 'ಪುನರಪಿ ಜನನಂ, ಪುನರಪಿ ಮರಣಂ ' ಎನ್ನುತ್ತಾ ಮರುಕಳಿಸುವ ಪುನರ್ಜನ್ಮವನ್ನು ನೆನಪಿಸಿದಂತಿದೆ!
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು