ನನ್ನವ್ವ - ಈ ಜ್ಞಾನ ಗಂಗೆಯ ಗೋಪುರ - ಲಕ್ಷ್ಮೀಕಾಂತ ಇಟ್ನಾಳ
ನನ್ನವ್ವ - ಈ ಜ್ಞಾನ ಗಂಗೆಯ ಗೋಪುರ
- ಲಕ್ಷ್ಮೀಕಾಂತ ಇಟ್ನಾಳ
ಇವಳು ‘ನನ್ನವ್ವ’. ‘ನನ್ನವ್ವೆ’ಅಖಂಡ ಕರ್ನಾಟಕದ ಮುಕುಟಮಣಿ ಕರ್ನಾಟಕ ವಿಶ್ವವಿದ್ಯಾಲಯ. ಸಾಂಸ್ಕೃತಿಕ ನಗರಿ ಧಾರವಾಡದ ಹಿರಿಮೆ, ಗರಿಮೆ.
ಈ ನೆಲದಲ್ಲಿ ಸಂಸ್ಕೃತಿಯ ಸರಸ್ವತಿಯನ್ನು ಬಿತ್ತಿ ಬೆಳೆದ ಮೂಲನೆಲೆ, ಸೆಲೆ. ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೆ ಪಾತ್ರರಾದ ಕನ್ನಡದ ಎಂಟು ಜನ ಉದ್ಧಾಮ
ಸಾಹಿತಿಗಳಲ್ಲಿ ದ.ರಾ ಬೇಂದ್ರೆ, ವಿನಾಯಕ ಕೃಷ್ಣರಾವ್ ಗೋಕಾಕ, ಗಿರೀಶ ಕಾರ್ನಾಡ, ಹಾಗೂ ಚಂದ್ರಶೇಖರ ಕಂಬಾರ ಮಹನೀಯರುಗಳು
ಈ ವಿಶ್ವವಿದ್ಯಾಲಯದ ದೇಗುಲ ವಿಶಾರದರು. ಈ ನನ್ನವ್ವನ ಜ್ಞಾನವಾಲು ಕುಡಿದವರು. ಲಕ್ಷ ಲಕ್ಷಗಳ ಸಂಖ್ಯೆಯಲ್ಲಿ ವಿದ್ವಾನರು, ವಿಧ್ವಾಂಸರು, ವಿಜ್ಞಾನಿಗಳು,
ಸಂಶೋಧಕರು, ಯೋಧರು, ಆಟಗಾರರು, ಲೇಖಕರು, ಕವಿಗಳು, ಪಂಡಿತರು, ಎಂಜಿನೀಯರರು, ವೈದ್ಯರುಗಳು, ಹಾಗೂ ಅತ್ಯುತ್ತಮ ಆಡಳಿತಗಾರರನ್ನು,
ಮುಂದಾಳು, ರಾಜಕಾರಣಿಗಳನ್ನು, ಪ್ರಬುದ್ಧ ನಾಗರಿಕರನ್ನು, ಸುಸಂಸ್ಕೃತರನ್ನು ನಾಡಿಗೆ ನೀಡಿದ ಪುಣ್ಯ ದೇಗುಲವಿದು. ಕನ್ನಡವನ್ನು ಕಟ್ಟಿ ಬೆಳೆಸಿದ ಮಹಾನ್
ದೇಗುಲ ಈ ನನ್ನವ್ವ.
ನಿಸರ್ಗವೂ ಕೂಡ ಈ ಚೇತನ ಪೂರ್ಣ ಸ್ಥಳವನ್ನು ಆನಂದದಾಯಕ ವಾತಾವರಣ, ಸಮೃದ್ಧ ಹಸಿರು ಹೊದಿಕೆ ನೀಡಿ ಪೊರೆದಿದೆ. ನೈಸರ್ಗಿಕವಾಗಿಯೂ,
ಭೌಗೋಳಿಕವಾಗಿಯೂ ಈ ವಿಶ್ವವಿದ್ಯಾಲಯದ ಮುಖ್ಯ ಪ್ರಾಣ ಕಟ್ಟಡದ ಸ್ಥಳದ ಭೌಗೋಳಿಕ ಮಹತ್ವ ಕೂಡ ಅಷ್ಟೇ ರೋಚಕ ವಿಷಯಗಳಲ್ಲೊಂದು.
ವಿಶ್ವವಿದ್ಯಾನಿಲಯದ ಕಟ್ಟಡವು ನೆಲೆನಿಂತ ಪುಣ್ಯಭುವಿಯ ‘ನನ್ನವ್ವ’ ನಿಗೆ ಕವಿನಮನ.
ವಿಶ್ವವಿದ್ಯಾಲಯದ ಗೋಪುರದ ಮೇಲೆ ಸುರಿವ ಆ ಗಂಗೆ, ಗೋಪುರ ತೊಳೆದು ಧನ್ಯಳಾಗಿ ಇಳೆಗೆ ಇಳಿದು ಗೋಪುರದ ಪಡುವಣ ಬದಿ ಹರಿಯಲು,
ಮೂರು ನೂರು ಕಿ.ಮೀ ಹರಿದು, ಶಾಲ್ಮಲೆಯಾಗಿ, ಬೇಡ್ತಿಯಾಗಿ, ಗಂಗಾವಳಿಯಾಗಿ ಅರಬ್ಬಿ ಸಮುದ್ರ ಸೇರುವಳಲ್ಲವೇ! ಅದೇ ಗೋಪುರದಿಂದ ಇಳೆಗೆ
ಇಳಿಯುತ್ತ ಮೂಡಣದ ಧರೆ ಸೇರಿದರೆ ಬಯಲುಸೀಮೆಯ ತೂಗು ತೆನೆಗಳ ಸಾಲಿನಲ್ಲಿ ಹರಿಯುತ್ತ ತುಪರಿ, ಬೆಣ್ಣೆ ಹಳ್ಳಗಳಿಂದೊಡಮೂಡಿ ಮಲಪ್ರಭೆಯಾಗಿ,
ಕೃಷ್ಣೆಯಾಗಿ ಮೂರು ಸಾವಿರ ಕಿ.ಮೀಗಳಷ್ಟು ಹರಿದು ಅನ್ನವನಿಕ್ಕುತ್ತ ಬಂಗಾಲ ಉಪಸಾಗರವನ್ನು ಸೇರುವ ಆ ಗಂಗೆಯ ರೂಪದ ಸರಸ್ವತಿಗೆ, ಜ್ಞಾನದಾಸೋಹದ
ವಿದ್ಯಾ ಗೋಪುರದ ಈ ‘ನನ್ನವ್ವ’ ನಿಗೆ ನುಡಿನಮನ.
ನನ್ನವ್ವ - ಈ ಜ್ಞಾನ ಗಂಗೆಯ ಗೋಪುರ
ಧನ್ಯತೆಯ ಗಂಗೆಯವತಾರದಿಂದೆ
ಮುಂಗಾರು ಮುತ್ತಿನಭ್ಯಂಗಮಿಂದೆ
ಜ್ಞಾನ ಗೋಪುರ ಶೃಂಗ ಧವಳ
ಅರಿವೇ ಗುರು ದೀಕ್ಷೋಹಂ ಮೇಳ
ಪಡುವಣದ ಒಳಯಿಳಿವ ಗುಪ್ತಗಾಮಿನಿ ಗಂಗೆ
ಕಾಡು ನಾಡು, ಮಿಡಿತಕೆ ಮೊಲೆವಾಲು
ಸೋಮನಾಥನ ಶಾಲ್ಮಲೆ ಸಸ್ಯ ಶಾಮಲೆ
ಸುತರ ಸೌಖ್ಯದೊರೆತ, ಜ್ಞಾನಾಮೃತದುಣಿತ
ಬೇಡಿದೊರವೀವ ಬೇಡತಿ, ಕಲಿ ಹುಲಿ ಪೊರೆವ
ವನ್ಯಸಂಕುಲಧಾತ್ರಿ, ಹಸಿರುಸಿರ ಸಹ್ಯಾದ್ರಿ
ತಿರುಮುರುಗುತ, ತಿರುಗೋಡುತ ಜರೆವ
ಜಿಗಿ ಜಿಗಿತ ತಕಧಿಮಿತ ಭೋರ್ಗರೆವ
ಹಸಿರುಣಿಪ ಹೊಸರೂಪ ದೀಪ್ತೆ
ಮಲೆನಾಡ ಮಾಗೋಡ ಪಾತೆ
ಗಂಗಾ, ಶರಾ, ಕಾಳಿಗಣಿವೆ ಯಕ್ಷಿಣಿ
ಧೀಂ ಕಿಟತ, ಧೀಂ ಕಿಟತ ಶೃಂಗಿಣಿ
ಉಕ್ಕುತುಕ್ಕುತ ನಲಿವ, ಜಲಶ್ವೇತವೇಣಿ
ಪಡುವಡಗಡಲೀನೆ ಶಾರದೆವಾಣಿ
ಅದೇ ಗೋಪುರ, ಅದೇ ಗಂಗೆ, ಮಾತುಂಗೆ
ಮಲಾಪ ಘಟ್ಟ ಕೃಷ್ಣೆ ವರದೆ
ಭೀಮೆ ಭದ್ರೆ ದೋಣಿ ಯಾಣ
ತೋಂ ತತಜನ ತೀಂ ತತಜನ ಬಯಲ ಗಾನ
ಮೂಡಣ ಕಡಲೆಡೆ ಜ್ಞಾನಕ್ಷೀರ ಪಾನ
ತೆನೆಬೀಡಿನ ಎದೆಯಲಿ ಜೀವದಡುಗೆ ಜೇನ
ಮೂಡಣ ರವಿ ನಿತ್ಯ ನವೋದಿತ
ವಿಶ್ವದುಸಿರಿಗೆ ಅರಿವ ಪಸರುತ
ಅಕ್ಷರವೀಜ ಎದೆಬಿರಿತು ಬಲಿತ
ಅರಿವು ಅರಳಿದ ಕೊರಡು ಮಿಡಿತ
ಅನ್ನ ಪ್ರಾಣ ದೊರೆತ ಫಲಿತ
ರೆಕ್ಕೆಬಲಿದು ಹಾರುಗಲಿತ ಬದುಕದು ಗುಣಿತ
ಜ್ಞಾನಗಂಗೋತ್ರಿಯೊಳು ಮೀನಾಗಿ ಮಿಂದು
ಜೇನಾಗಿ ಹೂವಾಗಿ ಹೊನ್ನಕಿರೀಟಗಳಾಗಿ
ಕಂಬಳಿ ಚಿಟ್ಟೆಯಾಗಿಹುದು ಹಾರಿ
ಧನ್ಯತೆಯ ಕುಸುಮಗಳ ಅವ್ವನಿಗೆ ತೂರಿ
ಸಾಗರಾಗಸ ವಿಶಾಲಗಣಿತ
ಋಣಿ ಗುಣಿ ಹೃದಯ ಧನ್ಯತ
ಅರಿವಿನಾಲಯ ಆಲದ ಮರಕೆ
ಜ್ಞಾನಗಂಗೆಯ ಗೋಪುರವದಕೆ
ಜ್ಞಾನದಾಸೋಹದ ಈ ‘ನನ್ನವ್ವ’ನ ಮಡಿಲಿಗೆ
ಇದೋ ನಮನ ಇದೋ ನಮನ
Comments
ಉ: ನನ್ನವ್ವ - ಈ ಜ್ಞಾನ ಗಂಗೆಯ ಗೋಪುರ - ಲಕ್ಷ್ಮೀಕಾಂತ ಇಟ್ನಾಳ
ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂದನೆಗಳು
ನನ್ನವ್ವ ಈ ಜ್ಞಾನ ಗಂಗೆಯ ಗೋಪುರ ಒಂದು ಅದ್ಭುತ ಲೇಖನ ಕವನವೂ ಸಹ ಸುಂದರವಾಗಿ ಮೂಡಿ ಬಂದಿದೆ. ನನಗೂ ಸಹ ಈಗಲೂ ಧಾರವಾಡ ಎಂದರೆ ಏನೋ ಒಂದು ತರಹದ ಸಂತಸ ಆಗಾಗ ಒಬ್ಬನೆ ಅಲ್ಲಿಗೆ ಹೋಗಿ ಮನ ಬಂದಂತೆ ಕರ್ನಾಟಕ ಕಾಲೇಜ್, ವಿ.ವಿ. ಬೇಂದ್ರೆ ಸ್ಮಾರಕಗಳ ಕಡೆಗೆ ಹೊರಟು ಮನದುಂಬಿಕೊಂಡು ಬರುತ್ತೇನೆ. ನಾನು ಮೊದಲು ಬೇಂದ್ರೆಯವರನ್ನು ಭೇಟಿಯಾದದ್ದು
ಅಕಾಶವಾಣಿ ಕೇಂದ್ರದಲ್ಲಿ1965 ರಲ್ಲಿ ಧಾರವಾಡಕ್ಕೆ ಸೈನ್ಸ್ ಕ್ಲಬ್ ಪರವಾಗಿ ಹೈಸ್ಕೂಲಿನಿಂದ ಪ್ರವಾಸ ಬಂದಾಗ. ಈಗಲೂ ಬೇಂದ್ರೆ, ಗೋಕಾಕ, ಶಂಬಾ, ಕಣವಿ,ಮಾಳವಾಡ, ಹಿರೆಮಠ, ಎಂ.ಎಂ.ಕಲಬುರ್ಗಿ ಎಂತೆಂತಹ ಸಾಹಿತಿಗಳು ಕಲಾವಿದರು ನೆಲೆಸರುವ ಊರು, ಅದು ಹುಬ್ಬಲ್ಳಿಯ ಹಾಗಲ್ಲ ಇನ್ನೂ ತನ್ನ ಹಳೆಯ ಸೊಗಡನ್ನು ಉಳಿಸಿ ಕೊಂಡಿರುವ ಊರು. ಈಗ ನಡೆಯುತ್ತಲಿರುವ ಸಾಹಿತ್ಯ ಸಮಾರಂಬಕ್ಕೆ ಬರಬೇಕೆಂದಿದ್ದೆ ಆದರೆ ಆಹ್ವಾನತರಲ್ಲದವರಿಗೆ ಪ್ರವೇಸವಿದೆಯೋ ಇಲ್ಲವೋ ಎಂದು ಬರುವ ಪ್ರಯತ್ನ ಕೈಬಿಟ್ಟೆ, ಧನ್ಯವಾದಗಳು ಸಾರ್.
ಉ: ನನ್ನವ್ವ - ಈ ಜ್ಞಾನ ಗಂಗೆಯ ಗೋಪುರ - ಲಕ್ಷ್ಮೀಕಾಂತ ಇಟ್ನಾಳ
ಇಟ್ನಾಳರೆ ನಮಸ್ಕಾರ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವನ್ನು ಲೇಖನದ ಮೂಲಕ ಸೊಗಸಾಗಿ ಬಿತ್ತರಿಸಿದ್ದೀರಿ - ಅದೂ ಚಿತ್ರ ಸಮೇತ. ನನ್ನವ ಎನ್ನುವಾಗಿನ ಭಾವನಾತ್ಮಕ ಅತ್ಮೀಯತೆ, ಆಪ್ಯಾಯತೆ ಕವನದ ಸಾಲುಗಳಲ್ಲೂ ಅನುರಣಿತಗೊಂಡಿವೆ. ಕೆಲ ತಿಂಗಳ ಹಿಂದೆ ಪಾಟೀಲರು ಶಾಲ್ಮಲೆ ಕುರಿತ ಕವನ ಬರೆದಿದ್ದರು - ಆ ಹೆಸರಿನ ಕುರಿತ ಕಿರು ಚರ್ಚೆಯೂ ಆಗಿತ್ತು. ಈಗ ನಿಮ್ಮ ಕವನದಲ್ಲಿ ಆ ಹೆಸರು ನೋಡಿದಾಗ ಅದೆಲ್ಲ ಮತ್ತೆ ನೆನಪಾಯ್ತು. ವಿದ್ಯಾದಾಯಿ ಮಾತೆಯ ಮೇಲಿನ ನಿಮ್ಮ ಭಕ್ತಿಗೆ ನನ್ನ ನಮನವೂ ಸಹ :-)
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು