ಲೋಕದ ಡೊಂಕ ನೀವೇಕೆ ತಿದ್ದುವಿರಿ?

ಲೋಕದ ಡೊಂಕ ನೀವೇಕೆ ತಿದ್ದುವಿರಿ?

            ಬದುಕು ಅನಿವಾರ್ಯ 
            ಎಲ್ಲರಿಗೂ 
            ದೂರುತ್ತಲೇ ಸಾಗುವ 

             ಭೋಗಿಗೂ, 
             ಬದುಕಿಂದ ದೂರ 
             ಸರಿದ ಯೋಗಿಗೂ... 
              ಬದುಕ ಗತಿಯ 
              ಬದಲಿಸಿ ಹಸನಾಗಿಸಿ 
               ತನ್ನ ಪಥವಾಗಿಸಿಕೊಂಡವ 
               ನಿಜಯೋಗಿ.... 

          ಹೀಗೊಂದು ಕಥೆ ಎಲ್ಲೋ ಕೇಳಿದ್ದು.  ಒಂದೂರಲ್ಲಿ ಒಬ್ಬ ರಾಜನಿದ್ದ.  ಅವನ ರಾಜ್ಯ ಸಂಪದ್ಭರಿತವಾಗಿತ್ತು. ನೆಮಾದಿಯ ತಾಣವಾಗಿತ್ತು. ಹೀಗಿರಲು ಒಮ್ಮೆ ರಾಜನಿಗೆ ರಾಜ್ಯಾದ್ಯಂತ ತಿರುಗಾಡುವ ಆಸೆಯಾಯ್ತು. ತಿರುಗಾಡಲು ಹೊರಟನು. ರಸ್ತೆಗಳು ಕಲ್ಲುಮುಳ್ಳುಗಳಿಂದ ಕೂಡಿದ ರಸ್ತೆಯಲ್ಲಿ ಬರಿ ಕಾಲಿನಲ್ಲಿ ನಡೆದದ್ದರಿಂದ ರಾಜನ ಕಾಲಿಗೆ ಗಾಯಗಳಾದವು. ಬೇಸರಗೊಂಡ ರಾಜನು ಇಡೀ ರಾಜ್ಯದ ಎಲ್ಲ ರಸ್ತೆಗಳಿಗೆ ಚರ್ಮವನ್ನು ಹೊದಿಸುವಂತೆ ಆಜ್ಞೆ ಮಾಡಿದನು. ಅದಕ್ಕಾಗಿ ನೂರಾರು ದನಗಳ ವಧೆ ಮಾಡಬೇಕಿತ್ತು. ರಾಜನ ಆಪ್ತ ಸಹಾಯಕನೊಬ್ಬ ಒಂದು ಸಲಹೆ ನೀಡಿದನು. ರಾಜ್ಯದ ರಸ್ತೆಗಳಿಗೆ ಚರ್ಮ ಹೊದಿಸುವ ಬದಲಾಗಿ ಒಂದು ತುಂಡು ಚರ್ಮದಿಂದ ರಾಜನು ತನ್ನ ಪಾದವನ್ನು ಮುಚ್ಚಿಕೊಳ್ಳಬೇಕೆಂದೂ, ಅದರಿಂದಾಗಿ ದನಗಳ ವಧೆಯಾಗುವುದನ್ನು ತಪ್ಪಿಸಬಹುದಾಗಿದೆ ಎಂದೂ, ಅಲ್ಲದೆ ಅನಗತ್ಯ ಖರ್ಚು ಮಾಡುವುದನ್ನೂ  ತಪ್ಪಿಸಬಹುದಾಗಿದೆ ಎಂಬುದಾಗಿ.  ರಾಜನಿಗೆ ಈ ಸಲಹೆ ಪ್ರಿಯವಾಗಿ ಅಂದಿನಿಂದಲೇ ಪಾದರಕ್ಷೆ ಧರಿಸುವ ಅಭ್ಯಾಸ ಮಾಡಿಕೊಂಡನು. ' ಪ್ರಪಂಚವನ್ನು ಬದಲಿಸುವ ಬದಲು ನಿನ್ನನ್ನು ಬದಲಿಸಿಕೋ'. ಇಲ್ಲಿನ ನೀತಿ. 
           ಬದಲಾವಣೆ ಜಗದ ನಿಯಮ. ಬದಲಾವಣೆಯ ಬಗ್ಗೆ ಚಿಂತಿಸುವ ಪ್ರತಿಯೊಬ್ಬರೂ ಆ ಬದಲಾವಣೆಯ ರೂವಾರಿ ತಾವೇ ಆಗಬೇಕೆಂದು ಬಯಸುತ್ತಾರೆ. ಆ ಬದಲಾವಣೆ ತಮ್ಮಿಂದಲೇ ಆದರೆ ಪ್ರಪಂಚದ ಬದಲಾವಣೆ ತಾನಾಗಿಯೇ ಆಗುತ್ತದೆ. 'ತೆರೆದ ಕಿಟಿಕಿಯಿಂದಲೇ ಬೆಳಕು ಬರಲು ಸಾಧ್ಯ'. ಮಹಾತ್ಮ ಗಾಂಧಿಯವರು ಪಾಲಿಸಿದ್ದು ಈ ಸಿದ್ಧಾಂತವನ್ನೆ. ತಮ್ಮನ್ನು ಬದಲಾಯಿಸಿ ಕೊಳ್ಳುತ್ತಲೇ ಜನಮನವನ್ನೇ ಬದಲಿಸಿದರು. ಹಿಂಸೆಯಿಂದ ಆಗದ್ದನ್ನು ಅಹಿಂಸೆಯಿಂದ  ಸಾಧಿಸಿದರು. 'ಗುರಿ ಸಾಧನೆಯೊಂದೇ ಮುಖ್ಯವಲ್ಲ ಸರಿಯಾದ ಮಾರ್ಗದ ಆಯ್ಕೆ ಕೂಡಾ ಅಷ್ಟೇ  ಮುಖ್ಯವಾಗುವುದು'.   ಎಂದು ಸಾರಿದರು.  
        ಲೋಕದಲ್ಲಿ ಡೊಂಕು  ಇದೆಯೆಂದು ಭಾವಿಸುವ ಬದಲು ಅದು ನಮ್ಮಲ್ಲಿಯೇ ಇದೆ ಎಂದುಕೊಂಡು ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಿದರೆ ಲೋಕದಲ್ಲಿ ಡೊಂಕೆ ಇರುವುದಿಲ್ಲಾ.! ವಚನಕಾರರ ಮಾತಿನಲ್ಲಿ ಎಷ್ಟೊಂದು ಸತ್ಯವಿದೆ ಅಲ್ಲವೇ? ಸಮಾಜದ ಬಗ್ಗೆ, ಸರ್ಕಾರದ ಬಗ್ಗೆ  ದೂಷಿಸುತ್ತಾ ಉಡಾಫೆಯಾಗಿ ಮಾತಾಡುತ್ತ ಕಾಲ ಕಳೆಯುವವರಿಂದ  ಸಮಾಜದ ಬದಲಾವಣೆ ಖಂಡಿತ ಸಾಧ್ಯವಿಲ್ಲ.  
 

Rating
Average: 5 (1 vote)

Comments

Submitted by ಕೀರ್ತಿರಾಜ್ ಮಧ್ವ Sat, 01/18/2014 - 19:09

ನಿಮ್ಮ ಅಭಿಪ್ರಾಯ ಸರಿ ಕಮಲಾರವರೇ, ಎಲ್ಲ ಸರಿಯಿದ್ದರೂ ತಪ್ಪುಗಳನ್ನೇ ಹುಡುಕುವ ಪ್ರಪಂಚ. ದನಗಳೇ ವಧೆಯಾದರೂ, ಜನಗಳೇ ವಧೆಯಾದರೂ.. ತಮ್ಮ ಮೂಗಿನ ನೇರಕ್ಕೆ ಯೋಚಿಸುತ್ತಾರೆ. ನಿಮ್ಮ ಬರಹ ನಿಜಕ್ಕೂ ಪ್ರಸ್ತುತ.,

Submitted by swara kamath Mon, 01/20/2014 - 14:24

ಒಳ್ಳೆಯ ಸಂದೇಶವನ್ನ ನೀತಿಕಥೆಯ ಮೂಲಕ ತಿಳಿಸಿರುವಿರಿ.ಈ ಲೇಖನ ಓದುವಾಗ ನನಗೆ ಮಾನ್ಯ ಡಿ.ವಿ.ಜಿ ಯವರ ಕಗ್ಗದ ನೆನಪಾಯಿತು.
ತಿದ್ದಿಕೋಳೊ ನಿನ್ನ ನೀಂ ; ಜಗವ ತಿದ್ದುವುದಿರಲಿ
ತಿದ್ದಿಕೆಗಮೊಂದು ಮಿತಿಯುಂಟು ಮರೆಯದಿರು
ಉದ್ದ ನೀಂ ಬೆರಳನಿತು ಬೇಳದೀಯೆ ಸಾಮಿಂದೆ
ಸ್ಪರ್ಧಿಯೆ ತ್ರಿವಿಕ್ರಮಗೆ ಮಂಕುತಿಮ್ಮ
ಎಷ್ಟೊಂದು ಅರ್ಥಭರಿತ ಅಲ್ಲವೆ? ..........................ವಂದನೆಗಳು, ಕಮಲ ಬೆಳಗೂರ್ ಅವರೆ.