ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯ ಕಾವ್ಯ (ಅಂತಿಮ ಭಾಗ)
ರೋಸ್ ಮತ್ತು ಜಾಕ್ ರ ಸುತ್ತಾಟವನ್ನು ಗಮನಿಸಿದ ಹಾಕ್ಲಿಯ ಬಂಟ ಆ ವಿಷಯವನ್ನು ಹಾಕ್ಲಿಯ ಗಮನಕ್ಕೆ ತರುತ್ತಾನೆ. ಸುಂದರಿ ರೋಸ್ ತನ್ನ ಕೈ ತಪ್ಪುತ್ತಿರುವುದನ್ನು ಊಹಿಸಿದ ಹಾಕ್ಲಿ ತನ್ನ ಮನಸಿನ ಸ್ಥಿಮಿತವನ್ನು ಕಳೆದು ಕೊಳ್ಳುತ್ತಾನೆ ಎಲ್ಲರ ಮೇಲೆ ಹರಿ ಹಾಯುತ್ತಾನೆ. ಅದಾಗಲೆ ರೋಸ್ ಹಾಕ್ಲಿಯ ವಲಯದಿಂದ ತಪ್ಪಿಸಿಕೊಂಡು ಜಾಕ್ ಹೃದಯವನ್ನು ಸೇರಿಯಾಗಿರುತ್ತದೆ. ತನ್ನ ಬಂಟನಿಗೆ ರೋಸ್ ಚಲನ ವಲನದ ಬಗ್ಗೆ ಗಮನಿಸಲು ತಿಳಿಸುತ್ತಾನೆ. ಆ ರಾತ್ರಿ ರೋಸ್ ಜಾಕ್ ನನ್ನು ತನ್ನ ಖಾಸಗಿ ರೂಮಿಗೆ ಆಹ್ವಾನಿಸುತ್ತಾ|ಳೆ. ಅವರಿಬ್ಬರ ಮಾತು ಕತೆಗಳನ್ನು ಆಲಿಸಿದ ಹಾಕ್ಲಿಯ ಬಂಟ ಅವರ ಜಾಡನ್ನು ಅರಸಿ ಬರುತ್ತಿರುವುದನ್ನು ನೋಡಿದ ರೋಸ್ ಜಾಕ್ ನೊಂದಿಗೆ ತನ್ನ ರೂಮಿನಿಂದ ಪಲಾಯನ ಮಾಡುತ್ತಾಳೆ. ಹಾಕ್ಲಿಯ ಹದ್ದಿನ ಕಣ್ಣಿಂದ ತಪ್ಪಿಸಿ ಕೊಳ್ಳಲು ರೋಸ್ ಜಾಕ್ ಕೈ ಹಿಡಿದುಕೊಂಡು ಮುಕ್ತವಾಗಿ ನಗುತ್ತ ತಪ್ಪಿಸಿ ಕೊಳ್ಳುತ್ತ ಹಡಗಿನ ಎಲ್ಲ ಭಾಗಗಳನ್ನು ಸುತ್ತುತ್ತ ಹಡಗಿನ ಎಂಜಿನ್ ಇರುವ ಭಾಗವನ್ನು ದಾಟಿ ನಿರ್ಜನವಾಗಿದ್ದ ಸರಕು ಸಂಗ್ರಹಣೆಯ ಜಾಗಕ್ಕೆ ಬರುತ್ತಾರೆ ಅಲ್ಲಿದ್ದ ಕಾರೊಂದರಲ್ಲಿ ಇಬ್ಬರೂ ಸೇರುತ್ತಾರೆ ಅವರಿಬ್ಬರ ಆತ್ಮಗಳು ಧನ್ಯತೆಯನ್ನು ಪಡೆಯುತ್ತವೆ. ಅವರನ್ನು ಅರಸುತ್ತ ಬಂದ ಹಾಕ್ಲಿಯ ಬಂಟ ಮತ್ತು ಹಡಗಿನ ರಕ್ಷಣಾ ಸಿಬ್ಬಂದಿ ಹಡಗಿನ ಯಂತ್ರಾಲಯದಲ್ಲಿ ನಾವಿಕ ವರ್ಗದವರನ್ನು ಕೇಳುತ್ತಾರೆ. ಅವರು ಸರಕು ಸಂಗ್ರಹಣೆಯ ಕೋಣೆಯಡೆಗೆ ಕೈಮಾಡಿ ತೋರಿಸುತ್ತಾರೆ. ಎಲ್ಲರೂ ಅಲ್ಲಿಗೆ ಬರುತ್ತಾರೆ. ಕಾರಿನ ಬಾಗಿಲು ತೆಗೆದು ನೋಡುತ್ತಾರೆ. ಆದರೆ ಹಕ್ಕಿಗಳು ಹಾರಿ ಹೋಗಿರುತ್ತವೆ ವಿಷಯ ತಿಳಿದ ಹಾಕ್ಲಿ ವ್ಯಗ್ರನಾಗುತ್ತಾನೆ. ಅಷ್ಟರಲ್ಲಾಗಲೆ ಕನಸಿನ ಹಡಗು ಟೈಟಾನಿಕ್ ಒಂದು ಬೃಹತ್ತಾದ ನೀರ್ಗಲ್ಲಿಗೆ ಅಪ್ಪಳಿಸಿ ದುರಂತ ಸಂಭವಿಸಿ ಯಾಗಿರುತ್ತೆ. ಹಾಕ್ಲಿಯ ಬಂಟ ಮತ್ತು ಹಡಗಿನ ಸಿಬ್ಬಂದಿ ರೋಸ್ ಮತ್ತು ಜಾಕ್ ರನ್ನು ರೋಸ್ ಳ ಖಾಸಗಿ ಕೊಠಡಿಗೆ ಕರೆ ತರುತ್ತಾರೆ. ಜಾಕ್ ಮೇಲೆ ವಜ್ರದ ನೆಕ್ಲೆಸ್ ಹಾರದ ಕಳುವಿನ ಅಪವಾದವನ್ನು ಹೊರಿಸಲಾಗುತ್ತದೆ. ರೋಸ್ ಜಾಕ್ ಏನೂ ಕದ್ದಿಲ್ಲವಂದು ತಾನು ಆತನ ಜೊತೆಗೆ ಇದ್ದೆನೆಂದು ಹೇಳುತ್ತಾಳೆ ಆಕೆಯ ಮಾತಿಗೆ ಯಾರೂ ಗಮನ ಕೊಡುವುದಿಲ್ಲ. ಬೇಕಾದರೆ ತನ್ನನ್ನ್ನು ತಲಾಶ ಮಾಡಿರಿ ತಾನು ನಿರಪರಾಧಿ ಎಂದು ಹೇಳುತ್ತಾನೆ. ಅಷ್ಟರಲ್ಲಾಗಲೆ ಹಾಕ್ಲಿಯ ಬಂಟ, ಜಾಕ್ ನ ಕೋಟಿನ ಜೋಬಿಗೆ ರೋಸ್ ಳ ನೀಲಿ ವರ್ಣಧ ವಜ್ರದ ಹರಳಿನ ನೆಕ್ಲೆಸ್ ನ್ನು ಹಾಕಿಯಾಗಿರುತ್ತದೆ. ಇದು ಹಾಕ್ಲಿ ಮತ್ತು ಆತನ ಬಂಟನನ್ನು ಬಿಟ್ಟು ಇನ್ನಾರ ಗಮನಕ್ಕೂ ಬರುವುದಿಲ್ಲ, ಹಡಗಿನ ರಕ್ಷಣಾ ಸಿಬ್ಬಂದಿ ಜಾಕ್ ನನ್ನು ಆರೋಪಿಗಳ ಸಲ್ ಗೆ ಒಯ್ದು ಒಂದು ಪೈಪ್ ಗೆ ಹ್ಯಾಂಡ್ ಕಫ್ ಹಾಕಿ ಕೂಡಿ ಹಾಕುತ್ತಾರೆ.
ಆಗಲೆ ಕನಸಿನ ಹಡಗು ಟೈಟಾನಿಕ್ಕಿನ ಕಪ್ತಾನ್ ಸಹಾಯಕ್ಕಾಗಿ ವೈರ್ ಲೆಸ್ ಮೂಲಕ ಸಂದೇಶ ಕಳಿಸಿರುತ್ತಾನೆ, ಮತ್ತು ಸಹಾಯ ಒದಗಿ ಬರಲು ಕನಿಷ್ಟ ನಾಲ್ಕು ಗಂಟೆಗಳ ಸಮಯ ಬೇಕಿರುತ್ತದೆ. ಒಂದು ಗಂಟೆಯ ಅವಧಿಯಲ್ಲಿ ಹಡಗು ಮುಳುಗಲಿದೆ ಎಂಬ ಸಂಗತಿ ತಿಳಿದು ಬರುತ್ತದೆ. ಎಲ್ಲ ಜೀವ ರಕ್ಷಕ ಬೋಟುಗಳನ್ನು ನೀರಿಗೆ ಬಿಡುವ ಮತ್ತು ಪ್ರಯಾಣಿಕರಿಗೆ ತೇಲುಗವಚ ತೊಡಿಸುವ ಕ್ರಿಯೆ ಪ್ರಾರಂಭವಾಗುತ್ತದೆ. ಕಾಲ್ ಹಾಕ್ಲಿ, ರೋಸ್ ಮತ್ತು ಆಕೆಯ ತಾಯಿ ಅಲ್ಲಿ ನೆರೆದ ಎಲ್ಲರೊಂದಿಗೆ ಜೀವ ರಕ್ಷಕ ಬೋಟ್ ಹತ್ತಲು ಅಣಿಯಾಗಿ ಕಾತುರದಿಂದ ಕಾಯುತ್ತಿರುತ್ತಾರೆ. ರೋಸ್ ಳಿಗೆ ಬಂದಿಯಾಗಿ ಆ ಹಡಗಿನ ಕೆಳಗಿನ ಕೋಣೆಯಲ್ಲಿ ಇರಿಸಲ್ಪಟ್ಟ ಜಾಕ್ ನೆನಪಿಗೆ ಬರುತ್ತಾನೆ. ಆತನನ್ನು ಬಿಟ್ಟು ಹೋಗಲು ಆಕೆಯ ಮನ ಒಪ್ಪುವುದಿಲ್ಲ. ಆಕೆಯು ಕುಳಿತಿದ್ದ ಬೋಟು ನೀರಿಗಿಳಿಯಲು ಪ್ರಾರಂಭಿಸುತ್ತಿದ್ದಂತೆ ರೋಸ್ ಮರಳಿ ಹಡಗಿಗೆ ನೆಗೆದು ಜಾಕ್ ನನ್ನು ಕರೆತರಲು ಓಡುತ್ತಾಳೆ. ಟೈಟಾನಿಕ್ಕಿನ ವಾಟರ್ ಟೈಟ್ ಚೇಂಬರ್ ಗಳಿಗೆ ತೀವ್ರ ಪೆಟ್ಟು ಬಿದ್ದ ಕಾರಣ ಜಾಕ್ ನನ್ನು ಕೂಡಿ ಹಾಕಿದ್ದ ಸೆಲ್ ಗೆ ನೀರು ನುಗ್ಗಲು ಪ್ರಾರಂಭಿಸಿರುತ್ತದೆ. ನೀರು ನುಗ್ಗಿ ಮೇಲೇರುತ್ತ ನಡೆದಂತೆ ತನ್ನನ್ನು ಬಂಧಿಸಿದ ಆಧಿ ಕಾರಿಯನ್ನು ಕೈ ಕೋಳ ಬಿಚ್ಚುವಂತೆ ಕೇಳುತ್ತಾನೆ ಆದರೆ ಆತ ಕೈ ಕೋಳ ಬಿಚ್ಚಲು ಒಪ್ಪುವುದಿಲ್ಲ. ಜಾಕ್ ನನ್ನು ಅಲ್ಲಿಯೆ ಅದೇ ಸ್ಥಿತಿಯಲ್ಲಿ ಬಿಟ್ಟು ಬೇರೆಡೆಗೆ ತೆರಳುತ್ತಾನೆ. ಆತಂಕಗೊಂಡ ರೋಸ್ ಜಾಕ್ ನನ್ನು ಕೂಗುತ್ತ ಬಂದು ಆತನ ಕೈ ಕೋಳ ಬಿಚ್ಚಲು ಏನೆಲ್ಲ ಪ್ರಯತ್ನ ಮಾಡಿದರೂ ಬಿಚ್ಚಲಾಗುವುದಿಲ್ಲ. ಕೊನೆಗೆ ಅಲ್ಲಿದ್ದ ಅಗ್ನಿಶಾಮಕ ಸಿಲೆಂಡರ ಹತ್ತಿರವಿಟ್ಟಿದ್ದ ಒಂದು ಸಣ್ಣ ಕೈ ಗೊಡಲಿಯನ್ನು ತಂದು ಕೈಕೋಳವನ್ನು ತುಂಡರಿಸಿ ಇಬ್ಬರೂ ಹಡಗಿನಲ್ಲಿ ತುಂಬುತ್ತಿದ್ದ ನೀರಿನಿಂದ ತಪ್ಪಿಸ ಕೊಳ್ಳುತ್ತ ತೊಂದರೆಯಲ್ಲಿ ಸಿಕ್ಕಿ ಹಾಕಿ ಕೊಂಡವರಿಗೆ ಸಹಾಯ ಮಾಡುತ್ತ ಜೀವ ರಕ್ಷಕ ಬೋಟುಗಳನ್ನು ಸಮುದ್ರಕ್ಕೆ ಇಳಿಸುತ್ತಿದ್ದ ಜಾಗಕ್ಕೆ ಬರುತ್ತಾರೆ. ಹಡಗಿನಲ್ಲಿ ನಿಧಾನವಾಗಿ ನೀರು ತುಂಬುತ್ತ ಅಟ್ಲಾಂಟಿಕ್ ಸಾಗರದ ತಳಕ್ಕೆ ಟೈಟಾನಿಕ್ ಹಡಗು ಇಳಿಯುತ್ತ ಜನರ ಆತಂಕಗಳನ್ನು ಕ್ಯಾಮರೂನ ಹೃದಯ ಮಿಡಯುವಂತೆ ಚಿತ್ರೀಕರಿಸಿದ್ದಾನೆ. ಹಡಗಿನ ಕೊನೆಯ ತುದಿ ಸಾಗರದ ತಳದಲ್ಲಿ ಮುಳುಗುವ ವರೆಗೂ ಜಾಕ್ ಮತ್ತು ರೋಸ್ ಹಡಗಿನ ಸುತ್ತ ಹಾಕಿದ ಕಬ್ಬಿಣದ ಕಟಾಂಜನದ ಆಸರೆಯನ್ನು ಗಟ್ಟಿಯಾಗಿ ಹಿಡಿದು ಕೊಂಡಿದ್ದರೂ ನೀರಿನಲ್ಲಿ ಮುಳುಗಿ ಆಸರೆಗಾಗಿ ತೇಲುತ್ತಿದ್ದ ಹಡಗಿನ ಮರದ ಒಂದು ಹಲಗೆಯ ಆಸರೆಯನ್ನು ಪಡೆಯುತ್ತಾರೆ ಅಲ್ಲಿ. ಆದರೆ ಇಬ್ಬರ ಭಾರವನ್ನು ಅದು ತಡೆಯುವ ಸ್ಥಿತಿಯಲ್ಲಿ ಅದು ಇರುವುದಿಲ್ಲ. ಜಾಕ್ ರೋಸ್ ಳನ್ನು ಆ ಹಲಗೆಯ ಮೇಲೆ ಹತ್ತಿಸಿ ಆ ಹಲಗೆಯ ಒಂದು ಬದಿಗೆ ತನ್ನ ಎರಡು ತೋಳುಗಳ ಆಸರೆಯನ್ನು ಕೊಟ್ಟು ರೋಸ್ ಮುಳುಗದಂತೆ ತೆಡೆಯುತ್ತಾನೆ. ತೇಲುವ ಹಲಗೆಯ ಆಸರೆಯನ್ನು ರೋಸ್ ಮತ್ತು ಜಾಕ್ ಜೀವ ಉಳಿಸಿ ಕೊಳ್ಳುವ ಪ್ರಯತ್ನದಲ್ಲಿರುತ್ತಾರೆ. ಮೃತ್ಯುವಿನ ದವಡೆಯಲ್ಲಿದ್ದ ಇಬ್ಬರೂ ಪರಸ್ಪರ ಕೈ ಹಿಡಿದುಕೊಂಡು ಸಹಾಯದ ನಿರೀಕ್ಷೆಯಲ್ಲಿರುತ್ತಾರೆ. ಅದೊಂದು ನೀರವ ಭಯಂಕರ ರಾತ್ರಿಯ ಸನ್ನಿವೇಶ ಅಸಹನೀಯ ಮೌನಅಲ್ಲಿ ವ್ಯಾಪಿಸಿರತ್ತೆ, ಬಹುಶಃ ಜಾಕ್ ಗೆ ಪರಿಸ್ಥಿತಿಯ ಅರಿವಾಗಿರುತ್ತೋ |ಏನೊ ಆತ ರೋಸ್ ಳಿಗೆ' ಜೀವನದಲ್ಲಿ ಎಂದೂ ಆಶೆಯನ್ನು ಕಳೆದುಕೊಳ್ಳಬೇಡ ರೋಸ್' ಎನ್ನುತ್ತಾನೆ ಜೊತೆಗೆ ಆಕೆಯಿಂದ ಮಾತುಕೂಡ ಪಡೆಯುತ್ತಾನೆ. ಸಾಗರದ ಸುತ್ತೆಲ್ಲ ಕರಾಳ ಕತ್ತಲೆ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿರುತ್ತೆ ನಿಸ್ಸಹಾಯಕ 1500 ಜನ ಪ್ರಯಾಣಿಕರು ಸಾಗರದಲ್ಲಿ ತೇಲುತ್ತಿರುತ್ತಾರೆ, ಅವರಲ್ಲೆಲ್ಲ ಬದುಕುಳಿದಿದ್ದವರು ಕೆಲವೆ ಕೆಲವರಿದ್ದಿರ ಬಹುದು. ಉಳಿದವರೆಲ್ಲ ಹೆಣವಾದವರೆ. ಸುಮಾರು ವೇಳೆಯ ನಂತರ ಬದುಕುಳಿದವರನ್ನು ರಕ್ಷಿಸಲು ಒಂದು ದೋಣಿ ಆ ಸ್ಥಳಕ್ಕೆ ಬರುತ್ತದೆ. ಆ ದೋಣಿಯಲ್ಲಿದ್ದ ರಕ್ಷಣಾ ಸಿಬ್ಬಂದಿ ನೀರಿನಲ್ಲಿ ತೇಲುತ್ತಿದ್ದ ಹೆಣಗಳ ರಾಶಿಯಲ್ಲಿ ಬದುಕುಳಿದವರಿಗಾಗಿ ಹುಡುಕುತ್ತ ನಿರಾಶರಾಗಿ ಹಿಂದಿರುಗುತ್ತಿರುವ ವೇಳೆ ಆ ಭೀಭತ್ಸ ರಾತ್ರಿಯಲ್ಲಿ ಒಂದು ಹಲಗೆಯ ಮೇಲೆ ಸುಸ್ತಾಗಿ ಬಿದ್ದಿದ್ದ ರೋಸ್ ಜಾಕ್ ನನ್ನು ಕೂಗುತ್ತಾಳೆ. ಅವನಿಂದ ಪ್ರತಿಕ್ರಿಯೆ ಬಾರದಿದ್ದುದನ್ನು ಕಂಡು ಮತ್ತೆ ಕೂಗುತ್ತಾಳೆ ಪುನಃ ಕೂಗುತ್ತಾಳೆ, ಆಕೆಯ ಕೂಗಿಗೆ ಓಗೊಡಲು ಆತ ಬದುಕಿರುವುದಿಲ್ಲ ಅಷ್ಟೆ ಮೈಕೊರೆವ ಚಳಿಗೆ ಆತ ಅಸುನೀಗಿರುತ್ತಾನೆ. ಹಲಗೆಗೆ ಅಡ್ಡಲಾಗಿ ಹಿಡಿದ ಜಾಕ್ ನ ಕೈಗಳನ್ನು ರೋಸ್ ಬಿಡಿಸುತ್ತಾಳೆ. ಜಾಕ್ ನಿಧಾನಕ್ಕೆ ಸಾಗರದ ತಳಕ್ಕೆ ಇಳಿದು ಹೋಗುತ್ತಾನೆ. ರೋಸ್ ಆಕ್ರಂದನ ಮೇರೆ ಮೀರುತ್ತದೆ. ಸುತ್ತ ಮುತ್ತಲಲೆಲ್ಲ ಹರಡಿ ಕೊಂಡಿದ್ದ ಹೆಣಗಳ ರಾಶಿಯಲ್ಲಿ ಸತ್ತ ರಕ್ಷಣಾ ಸಿಬ್ಬಂದಿಯೊಬ್ಬನ ಬಾಯಿಯಲ್ಲಿದ್ದ ಶೀಟಿಯನ್ನು ತೆಗೆದುಕೊಂಡು ಸಹಾಯಕ್ಕಾಗಿ ಅದನ್ನು ಊದುತ್ತಾಳೆ. ಕೇಳಿಸಿಕೊಂಡ ಮರಳಿ ತರಳುವ ಸನ್ನಾಹದಲ್ಲಿದ್ದರ ಕಡಲ ರಕ್ಷಣಾ ಪಡೆಯವರು ಮರಳಿ ಬಂದು ರೋಸ್ ಳನ್ನು ರಕ್ಷಿಸುತ್ತಾರೆ. ಸಾಯುವ ಗಳಿಗೆಯಲ್ಲಿ ಜಾಕ್ ಗೆ ಮಾತು ಕೊಟ್ಟಂತೆ ರೋಸ್ ಬದುಕುವ ಧೃಡ ಸಂಕಲ್ಪ ಮಾಡುತ್ತಾಳೆ.
ನಿರಾಶ್ರಿತರ ಕ್ಯಾಂಪಿನಲ್ಲಿ ಬದುಕುಳಿದಿರುವ ಕೆಲವು ಜನಗಳಲ್ಲಿ ರೋಸ್ ಸಹ ಇರಬಹುದೆ ಎಂದು ಹುಡುಕುತ್ತ ಕಾಲ್ ಹಾಕ್ಲಿ ಬರುತ್ತಾನೆ. ಕುಳಿತಿದ್ದ ರೋಸ್ ಬೆನ್ನ ಹಿಂದಿನಿಂದಲೆ ಹಾದು ಹೋಗುತ್ತಾನೆ, ರೋಸ್ ಅವನನ್ನು ಕಣ್ಣಂಚಿನಲ್ಲಿ ಗಮನಿಸು ತ್ತಾಳೆ. ಅವಳ ಉಸಿರ ಕಣ ಕಣದಲ್ಲೂ ಜಾಕ್ ತುಂಬಿ ಹೋಗಿರುತ್ತಾನೆ. ಬದುಕುಳಿದವರ ಪಟ್ಟಿ ಮಾಡುತ್ತ ಬಂದ ಅಧಿಕಾರಿಗೆ ತನ್ನ ಹೆಸರು ರೋಸ್ ಡಾಸನ್ ಎಂದು ಹೇಳುತ್ತಾಳೆ. 103 ವರ್ಷ ಪ್ರಾಯದ ವೃದ್ಧೆ ರೋಸ್ ಡೇವಿಸ ಬುಕೆಟರ್ ತನ್ನ ಮುಂದೆ ಕುಳಿತಿದ್ದ ಬ್ರ್ಯಾಕ್ ಲೋವೆಟ್ ತಂಡದವರಿಗೆ ತನ್ನ ಗತ ಜೀವನದ ಕುರಿತು ಕೆಲವು ಮಾತು ಹೇಳುತ್ತಾಳೆ. ಟೈಟಾನಿಕ್ ದುರಂತದಲ್ಲಿ ಬದುಕುಳಿದ ನಂತರ ತನ್ನ ಮತ್ತು ಜಾಕ್ ಡಾಸನ್ನನ ಪ್ರೇಮದ ಕುರಿತು ಯಾರಲ್ಲಿಯೂ ಹೇಳಲಿಲ್ಲ ವೆಂದು, ತನ್ನ ಜೊತೆಗಿದ್ದ ಮೊಮ್ಮಗಳನ್ನು ಉದ್ದೇಶಿಸಿ ನಿನ್ನ ಅಜ್ಜನಿಗೂ ಸಹ ಈ ವಿಷಯವನ್ನು ಹೇಳಿರಲಿಲ್ಲ ವೆನ್ನುತ್ತಾಳೆ. ಹೆಣ್ಣಿನ ಮನಸು ಒಂದು ಸಾಗರವಿದ್ದ ಹಾಗೆ ಎಲ್ಲ ನೋವು ನಿರಾಶೆಗಳನ್ನು ತನ್ನ ಒಡಲಲ್ಲಿ ಅಡಗಿಸಿ ಕೊಂಡಿರುತ್ತಾಳೆ. ಮೇಲ್ನೋಟಕ್ಕೆ ಶಾಂತವಾಗಿ ಕಂಡರೂ ಒಳಗಿನ ಪ್ರಕ್ಷುಬ್ಧತೆ ಅದರ ಒಳಹೊಕ್ಕು ನೋಡಿದಾಗಲೆ ಗೊತ್ತು ಎಂದು. ಅವಶೇಷ ಗಳೆಡಿಯಲ್ಲಿ ನೀಲಿ ವಜ್ರದ ನೆಕ್ಲೆಸ್ ಇಲ್ಲವೆನ್ನುವುದನ್ನು ವೃದ್ಧೆ ರೋಸ್ ಳಿಂದ ತಿಳಿದ ಬ್ರ್ಯಾ ಖ್ ಲೋವೆಟ್ ತನ್ನ ಮೂರು ವರ್ಷದ ಶ್ರಮ ವ್ಯರ್ಥವಾಯಿತೆಂದು ಹಳ ಹಳಿಸುತ್ತಾನೆ. ವೃದ್ಧೆ ರೋಸ್ ನಿಧಾನವಾಗಿ ಹೆಜ್ಜೆಗಳನ್ನಿಡುತ್ತ ನಿಧಿ ಶೋಧಕ ಹಡಗಿನ ಅಂಚಿಗೆ ಬಂದು ನಿಲ್ಲುತ್ತಾಳೆ. ಅವಳನ್ನು ಒಂದು ರೀತಿಯ ವಿಷಾದ ಭಾವ ಆವರಿಸುತ್ತದೆ. ತನ್ನ ಪ್ರಿಯಕರ ಜಾಕ್ ಮತ್ತು ಇತರ 1500 ಜನರನ್ನು ಬಲಿ ತೆಗೆದುಕೊಂಡ ವಿಶಾಲ ಸಾಗರದೆಡೆಗೆ ತನ್ನದೃಷ್ಟಿಯನ್ನು ಹಾಯಿಸುತ್ತಾಳೆ. ನಿಧಾನವಾಗಿ ತನ್ನ ಬಲಗೈ ಮುಷ್ಟಿಯನ್ನು ಬಿಡಿಸುತ್ತಾಳೆ. ಬ್ರ್ಯಾಕ್ ಲೋವೆಟ್ ಹುಡುಕುತ್ತಿದ್ದ ನೀಲಿ ಬಣ್ಣದ ವಜ್ರದ ನೆಕ್ಲೆಸ್ ವೃದ್ಧೆ ರೋಸ್ ಕೈಯಲ್ಲಿಯೆ ಇರುತ್ತದೆ. ಜಾಕ್ ಆಕೆಯ ನೆನಪಿಗೆ ಬರುತ್ತಾನೆ, ದುಃಖ ಉಮ್ಮಳಿಸಿ ಬರುತ್ತದೆ. ತನ್ನ ಕೈಯನ್ನು ಬಿಡಿಸಿ ನೆಕ್ಲೆಸ್ ನ್ನು ಎತ್ತಿ ಹಿಡಿದು ಅವಲೋಕಿಸುತ್ತಿರುವಾಗ ಅದು ಕೈಜಾರಿ ನೀರಿಗೆ ಬಿದ್ದು ಸಾಗರದ ತಳ ಸೇರುತ್ತದೆ. ರೋಸ್ ಅದಕ್ಕಾಗಿ ಪರಿ ತಪಿಸುವುದಿಲ್ಲ. ತನ್ನ ಪ್ರಿಯಕರ ಜಾಕ್ ನನ್ನು ಕಳೆದುಕೊಂಡು ಆತನ ನೆನಪಿನಲ್ಲಯೆ ಬಾಳು ಸವೆಸಿದ ರೋಸ್ ಳಿಗೆ ಆ ವಜ್ರದ ನೆಕ್ಲೆಸ್ ಕಳೆದದ್ದು ಒಂದು ನಷ್ಟವೆನಿಸುವುದಿಲ್ಲ.
ಅಲ್ಲಿಗೆ ಟೈಟಾನಿಕ್ ಹಡಗಿನ ದುರಂತದ ಹಿನ್ನೆಲೆಯಲ್ಲಿ ಜಾಮ್ಸ್ ಹಾರ್ನರ್ ನ ಮಧುರ ಮನ ಕಲಕುವ ಸಂಗೀತದ ಹಿನ್ನೆಲೆಯಲ್ಲಿ ಕೇಳಿ ಬರುವ ಸಿಲಿಯನ್ ಡಯಾನಾ ಹಾಡಿದ
ಹತ್ತಿರ ದೂರ .. .....ನೀನು ಎಲ್ಲಿಯೆ ಇರು
ಎನ್ನ ಹೃದಯ ನಿನಗಾಗಿ ಅಲೆಯುತ್ತಿರುತ್ತೆ
ಮತ್ತೊಮ್ಮೆ ಎನ್ನೆದೆಯ ಬಾಗಿಲು ತೆಗೆದು ನೊಡು
ನೀನೆನ್ನ ಹೃದಯದಲಿ ನೆಲೆಸಿರುವೆ .......
ಪ್ರತಿ ರಾತ್ರಿ ಎನ್ನ ಕನಸುಗಳಲ್ಲಿ ನಾ ನಿನ್ನ
ಕಾಣುತ್ತೇನೆ ಅನುಭವಿಸುತ್ತೇನೆ
ಎಂಬ ಅರ್ಥಪೂರ್ಣ ಹಾಡಿನ ಸಾಲಿಗಳೊಂದಿಗೆ ಜಾಕ್ ಮತ್ತೂ ರೋಸ್ ರ ದುರಂತ ಪ್ರೇಮ ಕಾವ್ಯ ಕೊನೆಗೊಳ್ಳುತ್ತದೆ. ಎಂತಹ ದುರಂತಮಯ ದೃಶ್ಯ ಕಾವ್ಯ ! ವಾಸ್ತವದ ಸಣ್ಣ ಎಳೆಯೊಂದನ್ನಾಧರಿಸಿ ಬೆಸೆದ ಕಾಲ್ಪನಿಕ ದುರಂತ ಪ್ರೇಮ ಕಾವ್ಯ ಸೃಷ್ಟಿಸಿ ಯೌವನ, ಮುಪ್ಪು, ಸಾವು ಮತ್ತು ಜೀವನದ ಹೋರಾಟದ ಬದುಕನ್ನು ಅದೆಷ್ಟು ಅದ್ಭುತವಾಗಿ ಜೇಮ್ಸ್ ಕ್ಯಾಮರೂನ್ ಸೆಲ್ಯುಲಾಯ್ಡ್ ಪರದೆಯ ಮೇಲೆ ತಂದಿದ್ದಾನೆ ! ಥಿಯೆಟರಿನಿಂದ ಹೊರ ಬರುವ ಪ್ರತಿಯೊಬ್ಬ ಪ್ರೇಕ್ಷಕನ ಮನದ ತುಂಬ ಜಾಕ್, ರೋಸ್ ಮತ್ತು ಕ್ಯಾಮರೂನ್ ತುಂಬಿರುತ್ತಿದ್ದರು. ನಿಜಕ್ಕೂ ಟೈಟಾನಿಕ್ ಒಂದು ಅಸದೃಶ ಪ್ರೇಮ ದುರಂತದ ದೃಶ್ಯಕಾವ್ಯ ವಾಗಿತ್ತು ! ಕಾಸಾಬ್ಲಾಂಕಾ ಬಿಟ್ಟರೆ ಪ್ರೇಕ್ಷಕರನ್ನು ಸಮೂಹ ಸನ್ನಿಗೊಳ ಪಡಿಸುವ ಮತ್ತೊಂಧು ಪ್ರೇಮ ಕಾವ್ಯ ತೆರೆಯ ಮೇಲೆ ಬಂದಿಲ್ಲ. ಹೀಗಾಗಿ ಟೈಟಾನಿಕ್ ಸಾರ್ವಕಾಲಿಕವಾದ ಒಂದು ದುರಂತ ಪ್ರೇಮದ ದೃಶ್ಯಕಾವ್ಯ ಎರಡು ಮಾತಿಲ್ಲ.
ಚಿತ್ರಕೃಪೆ : ಗೂಗಲ್ ಇಮೇಜಸ್
*******
Comments
ಉ: ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯ ಕಾವ್ಯ (ಅಂತಿಮ ಭಾಗ)
ಪಾಟೀಲರೆ ನಮಸ್ಕಾರ, ಚಿತ್ರದ ಪ್ರತಿ ವಿವರವನ್ನು ಇದೀಗ ತಾನೆ ನೋಡುತ್ತ, ನೋಡುತ್ತ ಬರೆದ ಹಾಗೆ ದಾಖಲಿಸಿದ್ದೀರ. ಅದ್ಭುತವಾಗಿ ಕಟ್ಟಿಕೊಟ್ಟ ಬುತ್ತಿ ತುಂಬಾ ಮುದ ನೀಡಿತು. ಬರಹದುದ್ದಕ್ಕೂ ನಿಮ್ಮ ಪರಿಶ್ರಮ, ಕಾಳಜಿ ಮತ್ತು 'ಪ್ಯಾಶನ್' ಪ್ರತಿಬಿಂಬಿತವಾಗಿದೆ. ಧನ್ಯವಾದಗಳು.
ನಾಗೇಶ ಮೈಸೂರು
In reply to ಉ: ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯ ಕಾವ್ಯ (ಅಂತಿಮ ಭಾಗ) by nageshamysore
ಉ: ಸಾರ್ವಕಾಲಿಕ ದುರಂತ ಪ್ರೇಮದ ದೃಶ್ಯ ಕಾವ್ಯ (ಅಂತಿಮ ಭಾಗ)
ನಾಗೇಶ ಮೈಸೂರು ರವರಿಗೆ ವಂದನೆಗಳು.
ನಿನ್ನೆ ಕಂಪ್ಯೂಟರ್ ಮುನಿಸಿನಿಂದಾಗಿ ತಮಗೆ ಪ್ರತಿಕ್ರಿಯಿಸಲಾಗಲಿಲ್ಲ. ಈ ದಿನ ಈಗ ಅದರ ಮುನಿಸು ಕೊನೆಗೊಂಡಿದೆ. ತಮ್ಮ ಪ್ರತಿಕ್ರಿಯೆ ಓದಿದೆ, ತಮ್ಮ ಹೃತ್ಪೂರ್ವಕ ವಿಮರ್ಶೆ ಲೇಖನ ಬರೆದದ್ದಕ್ಕೆ ಸಾರ್ಥಕ ಎನ್ನುವ ನಿರಾಳಭಾವ ಮೂಡಿ ಬಂತು, ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು.