೨೧೧. ಲಲಿತಾ ಸಹಸ್ರನಾಮ ೧೦೦೦ನೇ ನಾಮದ ವಿವರಣೆ
ಲಲಿತಾಂಬಿಕೆಯ ಚಿತ್ರಕೃಪೆ: ಮ್ಯಾನ್ಬ್ಲಂಡರ್.ಕಾಮ್
ಲಲಿತಾ ಸಹಸ್ರನಾಮ ೧೦೦೦
Lalitāmbikā ललिताम्बिका (1000)
೧೦೦೦. ಲಲಿತಾಂಬಿಕಾ
ಶ್ರೀ ಮಾತಾ, ನಿನ್ನ ಹೆಸರೇ ಲಲಿತಾಂಬಿಕಾ. ದೇವಿಯ ಹೆಸರನ್ನು ವಾಕ್-ದೇವಿಗಳು ಸಹಸ್ರನಾಮದ ಕಡೆಯ ನಾಮದಲ್ಲಷ್ಟೇ ಬಹಿರಂಗಪಡಿಸುತ್ತಾರೆ. ಇದುವರೆಗೆ ಆಕೆಯು ನಮಗೆಲ್ಲಾ ಶ್ರೀ ಮಾತೆಯಾಗಿ ಪರಿಚಿತಳಾಗಿದ್ದಳು ಮತ್ತು ಅವಳ ಸ್ಥೂಲ ಹಾಗೂ ಸೂಕ್ಷ್ಮ ಗುಣಗಳ ಲಕ್ಷಣಗಳನ್ನು ಚಿತ್ರಿಸಲಾಗಿತ್ತು. ಲಲಿತಾ ಎಂದರೆ ಕ್ರೀಡಾ ಮನೋಭಾವದಿಂದ ಕೂಡಿದ, ಹುಡುಗಾಟದ, ಆಟವಾಡುವ, ಸ್ವಾರ್ಥರಹಿತ, ಕಪಟರಹಿತ, ಪ್ರೀತಿತುಂಬಿದ, ಮೃದುವಾದ, ಸೂಕ್ಷ್ಮಸ್ವಭಾವದ, ಎಲ್ಲರೂ ಬಯಸುವ, ಆಶಿಸುವ, ಪ್ರೀತಿ ಹುಟ್ಟಿಸುವ, ಚುರುಕಾದ, ಒಲುಮೆಯ, ಅಕ್ಕರೆಯ ಹೀಗೆ ಮೊದಲಾದ ಅರ್ಥಗಳಿವೆ. ಇಲ್ಲಿರುವ ಪ್ರತಿಯೊಂದು ಅರ್ಥವೂ ಲಲಿತಾಂಬಿಕೆಯ ಸ್ವಭಾವ ಮತ್ತು ರೂಪಕ್ಕೆ ಅನುಗುಣವಾಗಿದೆ. ದೇವಿಯನ್ನು ಸಗುಣ ಬ್ರಹ್ಮವೆಂದು ಮತ್ತು ನಿರ್ಗುಣ ಬ್ರಹ್ಮವೆಂದು ವಿವರಿಸಲಾಗಿತ್ತು. ಬ್ರಹ್ಮವು ಒಂದೇ ಆದರೂ, ಅದನ್ನು ಎರಡಾಗಿ ವಿಭಜಿಸಲಾಗಿದೆ; ಕೇವಲ ಅದನ್ನು ಸಾಧ್ಯವಾದಷ್ಟೂ ಹೆಚ್ಚಿನ ಮಟ್ಟದಲ್ಲಿ ಅರ್ಥಮಾಡಿಕೊಳ್ಳಬೇಕೆಂಬ ಉದ್ದೇಶದಿಂದ. ಯಾರಾದರೂ ಬ್ರಹ್ಮದ ಕುರಿತು ತನಗೆ ಸಂಪೂರ್ಣವಾಗಿ ತಿಳಿದಿದೆ ಎಂದರೆ ಅದನ್ನು ಕೂಡಲೇ ಅಲ್ಲಗಳೆಯಬಹುದು; ಏಕೆಂದರೆ ಬ್ರಹ್ಮವು ಸಾಮಾನ್ಯ ಮನುಜನ ಕಲ್ಪನೆಗೆ ನಿಲುಕಲಾರದ್ದು. ಬ್ರಹ್ಮಕ್ಕೆ ರೂಪವಿಲ್ಲವೆಂದು ಸುಲಭವಾಗಿ ಹೇಳಬಹುದು, ಆದರೆ ಅದನ್ನು ಕಲ್ಪಿಸಿಕೊಳ್ಳವುದು ಬಹಳ ಕಷ್ಟಕರವಾದುದು. ಬ್ರಹ್ಮವನ್ನು ತಿಳಿದುಕೊಳ್ಳುವ ಸಲುವಾಗಿ ಅವನ ಅಚರ ಶಕ್ತಿಗಿಂತ ಅಧಿಕವಾಗಿ ಅವನ ಚರ ಶಕ್ತಿಯ ಕುರಿತಾಗಿಯೇ ಹೆಚ್ಚಿನ ವಿಷಯಗಳನ್ನು ಹೇಳಲಾಗಿದೆ. ಈ ಸಹಸ್ರನಾಮದಲ್ಲಿ ಸಾಕ್ಷೀಭೂತವಾಗಿರುವ ಅಚರ ಬ್ರಹ್ಮದ ಕುರಿತ ವಿಷಯಕ್ಕಿಂತ, ಬ್ರಹ್ಮದ ಚರ ಶಕ್ತಿಯ ಅಂಶದ ಕುರಿತಾದ ಹೆಚ್ಚಿನ ವಿವರಗಳು ಸಿಗುತ್ತವೆ, ಆದರೆ ಎರಡೂ ಸಂಗತಿಗಳು ಏಕಕಾಲಕ್ಕೆ ನಡೆಯುತ್ತವೆ.
ಈ ಸಹಸ್ರನಾಮದ ಮೊದಲನೇ ನಾಮವು ಲಲಿತಾಂಬಿಕೆಯನ್ನು ಶ್ರೀ ಮಾತಾ ಎಂದು ಸಂಭೋದಿಸುವುದರ ಮೂಲಕ ಆರಂಭವಾಯಿತು, ಅದರ ಮುಂದಿನ ನಾಮವು ದೇವಿಯ ಪಾಲನಾಕಾರ್ಯದ ಕುರಿತು ಹೇಳಿದರೆ ಮೂರನೆಯ ನಾಮವು ಪರೋಕ್ಷವಾಗಿ ಆಕೆಯ ಲಯ ಕ್ರಿಯೆಯ ಕುರಿತಾಗಿ ಹೇಳಿತು. ವಾಕ್-ದೇವಿಗಳು ನಾಮ ೪ ಮತ್ತು ೫ರಲ್ಲಿ ಬ್ರಹ್ಮದ ಉಳಿದೆರಡು ಕ್ರಿಯೆಗಳಾದ ಪ್ರಳಯ ಮತ್ತು ಮರುಸೃಷ್ಟಿಯ ಕುರಿತಾಗಿ ಹೇಳಿದ್ದಾರೆ. ಈ ವಿಧವಾಗಿ ಮೊದಲನೇ ಐದು ನಾಮಗಳು ಪರಬ್ರಹ್ಮದ ಮೂಲಭೂತ ಗುಣಗಳನ್ನು ಪರೋಕ್ಷವಾಗಿ ವಿವರಿಸುತ್ತವೆ; ನೇರವಾಗಲ್ಲದಿದ್ದರೂ. ಈ ಮೂರು ಕ್ರಿಯೆಗಳನ್ನು ಮತ್ತೆ ನಾಮ ೨೬೪, ೨೬೬ ಮತ್ತು ೨೬೮ರಲ್ಲಿ ಪುನರುಚ್ಛರಿಸಲಾಗಿದೆ.
ಈ ಪ್ರಪಂಚದಲ್ಲಿ ಅಸ್ತಿತ್ವದಲ್ಲಿರುವ ಸಕಲ ಶಕ್ತಿಗಳೂ ದೇವಿಯಿಂದ ಉಗಮವಾಗಿವೆ ಮತ್ತು ಈ ಪ್ರಪಂಚದಲ್ಲಿ ನಡೆಯುವ ಸಕಲ ಕ್ರಿಯೆಗಳೆಲ್ಲವೂ ಕೇವಲ ಆಕೆಯಿಂದಾಗಿಯೇ ಜರುಗುತ್ತವೆ (ನಾಮ ೮೯೫). ಅತ್ಯಂತ ಪೂಜ್ಯ ಭಾವನೆಯಿಂದ ನಾವು ಗೌರವಿಸುವ ವೇದಗಳೂ ಸಹ ದೇವಿಯಿಂದಲೇ ಉಗಮವಾದವು (ನಾಮ ೩೩೮) ಮತ್ತು ವೇದಗಳೂ ಸಹ ಅವಳನ್ನು ಪೂಜಿಸುತ್ತವೆ (ನಾಮ ೯೨೯). ದೇವಿಯು ಕರುಣಾಮೂರ್ತಿಯಾಗಿದ್ದಾಳೆ (ನಾಮ ೧೯೭, ೩೨೬) ಹಾಗೆಂದು ಆಕೆಯನ್ನು ನಿರ್ಲಕ್ಷಿಸುವಂತಿಲ್ಲ. ಏಕೆಂದರೆ ಆಕೆಯು ಅನೇಕ ವೇಳೆ ಕಠಿಣಳಾಗಿರುತ್ತಾಳೆ ಮತ್ತು ತಪ್ಪಿತಸ್ಥರನ್ನು ಶಿಕ್ಷಿಸುತ್ತಾಳೆ ಕೂಡಾ (ನಾಮ ೨೮೮, ೬೦೮, ೭೫೫). ಎಲ್ಲಾ ಅಕ್ಷರಗಳು ಮತ್ತು ಶಬ್ದಗಳು (ನಾಮ ೬೪೦) ದೇವಿಯಿಂದಲೇ ಉಗಮವಾಗುತ್ತದೆ (ನಾಮ ೫೭೭). ಆದ್ದರಿಂದ ದೇವಿಯನ್ನು ಮಂತ್ರರೂಪಿಣೀ ಅಥವಾ ಮಂತ್ರಗಳ ಸ್ವರೂಪವೆಂದು ನಾಮ ೮೮, ೨೦೪, ೨೨೭, ೮೪೬ರಲ್ಲಿ ಕರೆಯಲಾಗಿದೆ. ಸಕಲ ದೇವಾನು-ದೇವತೆಗಳು ಆಕೆಯನ್ನು ಪೂಜಿಸುತ್ತಾರೆ (ನಾಮ ೮೩, ೬೨೯). ದೇವಿಯನ್ನು ಕೇವಲ ಪರಿಶುದ್ಧವಾದ ಮತ್ತು ನಿಷ್ಕಲ್ಮಶ ಮನಸ್ಸಿನಿಂದ ಮಾತ್ರವೇ ಹೊಂದಬಹುದು (ನಾಮ ೧೧೮, ೧೧೯ ಮತ್ತು ೧೨೦). ಯಾರಿಗೆ ಆಕೆಯಲ್ಲಿ ಭಕ್ತಿಯಿಲ್ಲವೋ ಅವರು ಆಕೆಯ ಸಮೀಪಕ್ಕೂ ಹೋಗಲಾರರು (ನಾಮ ೧೮೮ ಮತ್ತು ೧೮೯). ಕೇವಲ ಆಕೆಯ ಸ್ಮರಣೆ ಮಾತ್ರದಿಂದಲೇ ಮಂಗಳವಾಗುತ್ತದೆ (ನಾಮ ೬೮೨). ದೇವಿಯನ್ನು ಶುದ್ಧವಾದ ಮನಸ್ಸಿನಿಂದ ನಿಷ್ಠೆಯಿಂದ ಪೂಜಿಸಿದಾಗ ಆಕೆಯು ಮುಕ್ತಿಯನ್ನು ಕರುಣಿಸುತ್ತಾಳೆ (ನಾಮ ೮೩೮, ೮೩೯).
ದೇವಿಯನ್ನು ಏಕಾಂತವಾಗಿ ಪೂಜಿಸಬೇಕು, ಆಕೆಯ ಸಾಕ್ಷಾತ್ಕಾರವನ್ನು ನಿಜವಾಗಿಯೂ ಪಡೆಯಬೇಕೆಂದರೆ ಅದಕ್ಕಾಗಿ ವಿಧಿಸಲಾಗಿರುವ ಶಾಸ್ತ್ರಬದ್ಧ ಪೂಜೆಗಳನ್ನು ಕೈಗೊಳ್ಳುವುದರ ಮೂಲಕ ಆರಂಭಿಸಬೇಕು. ಆಮೇಲೆ ದೇವಿಯ ಮಂತ್ರಗಳಾದ ಪಂಚದಶೀ ಮತ್ತು ಷೋಡಶೀ ಮಂತ್ರಗಳನ್ನು ಜಪಿಸಲು ಅನುವಾಗಬೇಕು. ಅಂತಿಮವಾಗಿ ಒಬ್ಬನು ದೇವಿಯನ್ನು ಈ ಒಂದು ಸಹಸ್ರನಾಮಗಳ ಮೂಲಕ ಗ್ರಹಿಸಬೇಕು. ಒಂದು ವಿಧವಾದ ಪೂಜಾಕ್ರಮವನ್ನು ಪಾಲಿಸುವಾಗ ಸಹಜವಾಗಿಯೇ ಅದು ನಮ್ಮನ್ನು ಮುಂದಿನದರೆಡೆಗೆ ತನ್ನಷ್ಟಕ್ಕೆ ತಾನೇ ಕರೆದೊಯ್ಯುತ್ತದೆ. ಬಾಹ್ಯವಾಗಿರುವ ಅಂಶಗಳಿಗಿಂತ ಹೆಚ್ಚಾಗಿ ಸಾಧಕನ ಮನೋಭಾವವು ಹೆಚ್ಚು ಪ್ರಮುಖವಾದದ್ದು. ದೇವಿಯು ಅತಿಸೂಕ್ಷ್ಮಳು (ನಾಮ ೩೨೨) ಮತ್ತು ಅತ್ಯಂತ ಸೂಕ್ಷ್ಮಳು ಅಥವಾ ಸೂಕ್ಷ್ಮಾತಿಸೂಕ್ಷ್ಮಳು (ನಾಮ ೧೧೦). ಒಬ್ಬನ ಮನಸ್ಸಿನ ಮೇಲೆ, ದೇವಿಯ ಸೂಕ್ಷ್ಮವಾದ ರೂಪಗಳು ಶ್ರಮದಾಯಕವಾದ ಬಾಹ್ಯಾಚರಣೆಗಳಿಗಿಂತ ಅಧಿಕವಾದ ಪರಿಣಾಮಗಳನ್ನುಂಟು ಮಾಡಬಲ್ಲವು. ದೇವಿಯು ಒಬ್ಬನು ಏನು ಮಾಡುತ್ತಾನೆ ಎಂದು ನೋಡುವುದಿಲ್ಲ, ಆದರೆ ಆಕೆಯು ಒಬ್ಬನು ಏನು ಆಲೋಚಿಸುತ್ತಾನೆ ಎನ್ನುವುದನ್ನು ನೋಡುತ್ತಾಳೆ. ಪರಿಶುದ್ಧವಾದ ಜ್ಞಾನವನ್ನು (ನಾಮ ೪೧೬) ಪಡೆಯುವುದೇ ದೇವಿಯನ್ನು ತಿಳಿಯಲು ಇರುವ ಏಕೈಕ ಮಾರ್ಗ. ಎಲ್ಲಾ ಉಪನಿಷತ್ತುಗಳು, ಬ್ರಹ್ಮಸಾಕ್ಷಾತ್ಕಾರವನ್ನು ಹೊಂದಲು ಅವಶ್ಯಕವಾಗಿ ಬೇಕಿರುವ ಜ್ಞಾನದ ಪ್ರಾಮುಖ್ಯತೆಯನ್ನು ಒತ್ತು ಕೊಟ್ಟು ಪದೇ ಪದೇ ಹೇಳುತ್ತವೆ, ಏಕೆಂದರೆ ಮನಸ್ಸಿನಿಂದ ಮಾತ್ರವೇ ಬ್ರಹ್ಮವನ್ನು ಅರಿಯಲು ಸಾಧ್ಯ. ಸೌಂದರ್ಯ ಲಹರಿಯಲ್ಲಿ (ಸ್ತೋತ್ರ ೯೦) ಶ್ರೀ ಶಂಕರರು ಹೀಗೆ ಪ್ರಾರ್ಥಿಸುತ್ತಾರೆ, "ಓಹ್ಞ್, ಮಾತೆ! ಜ್ಞಾನಾರ್ಥಿಯಾಗಿರುವ ನಾನು ನಿನ್ನ ಪವಿತ್ರವಾದ ಪಾದೋದಕವನ್ನು ಎಂದಿಗೆ ಸೇವಿಸಿಯೇನು ಎನ್ನುವುದನ್ನು ತಿಳಿಸು". ಜಗನ್ಮಾತೆಯ ಅದ್ವಿತೀಯ ಲಕ್ಷಣವೆಂದರೆ ಆಕೆಯ ಪವಿತ್ರವಾದ ಪಾದಗಳು. ದೇವಿಯು ತನ್ನ ಭಕ್ತರ ದುಃಖ ಮತ್ತು ಯಾತನೆಗಳನ್ನು ತನ್ನ ಪಾದಗಳಿಂದ ನಾಶಗೊಳಿಸುತ್ತಾಳೆ. ದೇವಿಯನ್ನು ಮನಸ್ಸು ಹಾಗು ಹೃದಯದ ಮೂಲಕ ಭಜಿಸುವವನು ತನ್ನ ಅವಿದ್ಯಾಸಂಭಂದವನ್ನು ನಾಶಮಾಡಿಕೊಂಡು, ಚಿರಂಜೀವಿಯಾಗಿ (ದೀರ್ಘಾಯುಷ್ಯವನ್ನು ಪಡೆಯುತ್ತಾನೆ), ಪರಮಾನಂದದ ಮಧುರವಾದ ರುಚಿಯನ್ನು ಅನುಭವಿಸುತ್ತಾನೆ (ಸೌಂದರ್ಯ ಲಹರೀ, ಸ್ತೋತ್ರ ೯೯).
ದೇವಿಯನ್ನು ಅಂತರಂಗದ ಮೌನದಲ್ಲಿ ಪ್ರೀತಿಸುವುದೊಂದೇ ಆಕೆಯಲ್ಲಿ ಶರಣಾಗತಿ ಹೊಂದಲು ಇರುವ ಏಕೈಕ ಮಾರ್ಗ. ಅತಿಯಾದ ಮಾತು, ಅತಿಯಾದ ಆಲೋಚನೆ ಮತ್ತು ಅತಿಯಾದ ಕೆಲಸಗಳಿಂದಾಗಿ ಮನಸ್ಸನ್ನು ಶಾಂತಗೊಳಿಸಲಾಗದು. ಎಲ್ಲಿಯವರೆಗೆ ಮನಸ್ಸು ಶಾಂತವಾಗಿರುವುದಿಲ್ಲವೋ ಅಲ್ಲಿಯವರೆಗೆ ಇಂದ್ರಿಯಗಳನ್ನು ನಿಯಂತ್ರಣದಲ್ಲಿಡಲಾಗದು. ಖಂಡಿತವಾಗಿಯೂ ಇಂದ್ರಿಯಗಳನ್ನು ನಮ್ಮ ಸಹಜ ಇರುವಿಕೆಗಾಗಿ ಉಪಯೋಗಿಸಬೇಕು, ಆದರೆ ಇಂದ್ರಿಯ ಸುಖಗಳಲ್ಲೇ ಮುಳುಗಿದ್ದರೆ ಒಬ್ಬನು ಅವಕ್ಕೆ ದಾಸನಾಗುತ್ತಾನೆ. ಒಬ್ಬನು ಈ ವಿಶ್ವದ ದಟ್ಟಣೆಯಲ್ಲಿ ಇರಬೇಕು, ಆದರೂ ಸಹ ಅವನು ಮನಸ್ಸಿನ ಸಂಪೂರ್ಣ ಪ್ರಶಾಂತತೆಯನ್ನು ಉಳಿಸಿಕೊಳ್ಳಬೇಕು. ನಿಷ್ಕಾಮ ಕರ್ಮ ಅಂದರೆ ಯಾವುದೇ ಫಲಗಳನ್ನು ಆಶಿಸದೇ ಕೈಗೊಂಡ ಕರ್ಮವು ಮಾನೋವೇದನೆಯನ್ನು ಉಂಟು ಮಾಡುವುದಿಲ್ಲ. ಕಾಮಪೀಡಿತ ಆಲೋಚನೆಗಳು ಪ್ರಶಾಂತವಾದ ವಾತಾವರಣವನ್ನುಂಟು ಮಾಡಲು ಅಸಫಲವಾಗುವುದರಿಂದ, ದೇವಿಯನ್ನು ಅರಿಯಲು ಅತ್ಯಾವಶ್ಯವಾಗಿರುವ ಸಹಜವಾದ ಪ್ರಜ್ಞೆಯನ್ನು ಪರಿಶುದ್ಧವಾದ ಪ್ರಜ್ಞೆಯಾಗಿ ಅವು ಮಾರ್ಪಡಿಸಲಾರವು. ಪರಿಪೂರ್ಣ ಚೈತನ್ಯವು ಸ್ವಯಂಪ್ರಜ್ಞೆಯಾಗಿದ್ದು ಅದು ಅಹಂಕಾರವನ್ನು ನಾಶಗೊಳಿಸಿ ಮುಕ್ತಿಯನ್ನು ಉಂಟುಮಾಡುತ್ತದೆ. ಯಾವಾಗ ’ಅಹಂ’ ಸ್ಥಿತಿಯು ನಾಶವಾಗುತ್ತದೆಯೋ ಆಗ ಸೃಷ್ಟಿಕರ್ತಳಾದ ಶ್ರೀ ಮಾತೆಯ ನೇರವಾದ ದರ್ಶನವಾಗುತ್ತದೆ, ಅದು ಶಾಂತಿ ಮತ್ತು ಸಮಾಧಾನಗಳನ್ನುಂಟು ಮಾಡಿ ಒಬ್ಬನನ್ನು ಎಣೆಯಿಲ್ಲದೆ ಆನಂದದೆಡೆಗೆ ಕೊಂಡೊಯ್ಯುತ್ತದೆ.
ಇಲ್ಲಿಗೆ ದೇವಿಯ ಒಂದು ಸಹಸ್ರ ಪವಿತ್ರ ನಾಮಗಳ ವ್ಯಾಖ್ಯಾನವು ಪೂರ್ತಿಗೊಳ್ಳುತ್ತದೆ ಅದನ್ನೀಗ ಆಕೆಯ ಪರಮಪಾವನವಾದ ಪಾದಪದ್ಮಗಳಲ್ಲಿರಿಸಿ ಸಕಲ ಸಂತೋಷ, ಸಂಪದ ಮತ್ತು ಶಾಂತಿಯುತವಾದ ಸಹಜೀವನಕ್ಕಾಗಿ ಪ್ರಾರ್ಥಿಸಲಾಗುತ್ತಿದೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 1000 http://www.manblunder.com/2010/07/lalitha-sahasranamam-1000.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ಉ: ೨೧೧. ಲಲಿತಾ ಸಹಸ್ರನಾಮ ೧೦೦೦ನೇ ನಾಮದ ವಿವರಣೆ
ಶ್ರೀಧರರೆ, ಮೊದಲಿಗೆ ಈ ಅದ್ಭುತ ಸಾಧನೆಗೆ ಅಭಿನಂದನೆಗಳು ! ಲಲಿತಾ ನಾಮಾವಳಿಯನ್ನು ಸುಲಲಿತವಾಗಿ ಸಾವಿರ ಮೆಟ್ಟಿಲು ತಲುಪಿಸಿದಿರಿ ಜತೆಗೆ ಆಸಕ್ತ ಸಂಪದಿಗರನ್ನು ಸಹ. ಇಂದು ಸಂಜೆಯೊಳಗೆ ನಾನು ಕಾವ್ಯರೂಪ ಸೇರಿಸುತ್ತೇನೆ. ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ನಮ್ಮೆಲ್ಲರ ಆಧ್ಯಾತ್ಮ ರಸದ ಸ್ತರವನ್ನು ಮತ್ತು ಜ್ಞಾನ ಖಜಾನೆಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಏರಿಸಿದ್ದಕ್ಕೆ ಧನ್ಯವಾದಗಳು ಹಾಗೂ ಕೃತಜ್ಞತೆಗಳು.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ೨೧೧. ಲಲಿತಾ ಸಹಸ್ರನಾಮ ೧೦೦೦ನೇ ನಾಮದ ವಿವರಣೆ by nageshamysore
ಉ: ೨೧೧. ಲಲಿತಾ ಸಹಸ್ರನಾಮ ೧೦೦೦ನೇ ನಾಮದ ವಿವರಣೆ
ನಾಗೇಶರೆ,
ನಾನು ಎಷ್ಟೋ ಸಾರಿ ಈ ಸಹಸ್ರನಾಮದ ಅನುವಾದವನ್ನು ಪ್ರಕಟಿಸುವಾಗ ಆಲಸ್ಯತನದಿಂದ ಹಾಗು ಕೆಲವೊಮ್ಮೆ ಕಾರ್ಯಬಾಹುಳ್ಯದಿಂದ ಅಶ್ರದ್ಧೆಯನ್ನು ತೋರಿದ್ದಿದೆ, ಆದರೆ ನೀವು ಸ್ವಲ್ಪವೂ ಬೇಸರಿಸಿಕೊಳ್ಳದೆ ನಿರಂತರವಾಗಿ ಕಾವ್ಯ ರಚನೆಯಲ್ಲಿ ನಿರತರಾಗಿದ್ದೀರ; ನಿಜಕ್ಕೂ ಇಂತಹ ನಿಷ್ಠೆ ನನಗೆ ಸುಲಭಸಾಧ್ಯವಲ್ಲ. ನಿಮ್ಮ ನಿರಂತರ ಸಾಥ್ನಿಂದಾಗಿ ಸಹಸ್ರನಾಮದ ರಚನೆ ಎಡಬಿಡದೆ ಸಾಗಿತು ಅದಕ್ಕಾಗಿ ನಿಮಗೆ ಮೊದಲ ಕೃತಜ್ಞತೆಗಳು ಸಲ್ಲುತ್ತವೆ. ಜಗನ್ಮಾತೆಯ ಪ್ರೇರಣೆಯಿಂದಲೇ ನೀವು ಇದನ್ನು ಕೈಗೊಂಡಂತೆ ಕಾಣುತ್ತದೆ ಖಂಡಿತ ಆಕೆಯ ಕೃಪೆ ನಿಮ್ಮ ಮೇಲಿದೆ. ಈಗ ನಿಧಾನವಾಗಿ ಒಂದೊಂದಾಗಿ ಬಿಟ್ಟು ಹೋದ ಕವನಗಳ ಪರಿಷ್ಕರಣೆಯನ್ನು ಮಾಡಬಹುದೆನಿಸುತ್ತದೆ.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ
In reply to ಉ: ೨೧೧. ಲಲಿತಾ ಸಹಸ್ರನಾಮ ೧೦೦೦ನೇ ನಾಮದ ವಿವರಣೆ by makara
ಉ: ೨೧೧. ಲಲಿತಾ ಸಹಸ್ರನಾಮ ೧೦೦೦ನೇ ನಾಮದ ವಿವರಣೆ
ಶ್ರೀಧರರೆ,
.
ನಿಮ್ಮ ಮಾತೆ ನಿಮ್ಮಯ ದೊಡ್ಡ ಗುಣವನ್ನು ತೋರಿಸುತ್ತದೆ. ನನ್ನ ಕವನವೇನಿದ್ದರೂ ನೇಪಥ್ಯವಷ್ಟೆ - ಈ ಪ್ರಯಾಣದಲ್ಲಿ ಎಷ್ಟೊಂದು ಹೊಸ ವಿಷಯಗಳು ಕಲಿತೆನೆಂದು ಹೇಳಲೆ ಸಾಧ್ಯವಾಗದು. ಅದನ್ನೆಲ್ಲ ಜೀರ್ಣಿಸಿಕೊಳ್ಳಲೆ ಮತ್ತೆ ಅದೆಷ್ಟು ಬಾರಿ ಓದಿಕೊಳ್ಳಬೇಕೊ?
.
ಪಾರ್ಥಾ ಸಾರ್, ಗಣೇಶ್ ಜಿ, ರಮೇಶ ಕಾಮತರೂ ಸೇರಿದಂತೆ ಹಲವಾರು ಸಂಪದಿಗರೂ ಈ ಕವನದ ಸಾಥ್ ಗೆ ಮೆಚ್ಚುಗೆ, ಅಭಿನಂದನೆ ಸಲ್ಲಿಸಿದ್ದೀರ. ಸಂಪದದಲ್ಲಿ ಇದನ್ನೆಲ್ಲ ಮೆಚ್ಚಿ ಆಸ್ವಾದಿಸುವ, ಪ್ರೋತ್ಸಾಹಿಸುವ ಸಹೃದಯಿ ಓದುಗ ಬಳಗವಿದೆಯಲ್ಲಾ (ಸಂಪದ ಆಡಳಿತವರ್ಗವೂ ಸೇರಿದಂತೆ) - ಅದು ಇದಕ್ಕಿಂತಲೂ ಹೆಚ್ಚು ಅಭಿನಂದಾರ್ಹ ವಿಚಾರ. ಆದರೂ ನಿಮ್ಮ ಅಭಿನಂದನೆಗೆ ವಿನಮ್ರ ಕೃತಜ್ಞತೆಗಳು, ಮತ್ತು ಅದರ ನಿಜವಾದ ಶ್ರೇಯಸ್ಸು ನಿಜಕ್ಕೂ ಸೇರಬೇಕಾದು ಶ್ರೀಧರರಿಗೆ ಮತ್ತು ಶ್ರೀಯುತ ರವಿಯವರಿಗೆ. ಅವರ ನೆಪದಲ್ಲಿ ನನಗೂ ಒಂದು ಪುಟ್ಟ ಸಾಧನೆಯ ಸಮಾಧಾನ ಸಿಕ್ಕಂತಾಯ್ತು :-)
.
ಶ್ರೀಧರರೆ, ಬಿಟ್ಟು ಹೋದ ನಾಮಾವಳಿಯನ್ನು ಮೊದಲನೆಯ ನಾಮದಿಂದಲೆ ಆರಂಭಿಸೋಣವೆ? ಒಂಭತ್ತನೆ ಕಂತಿನಲ್ಲಿ ಮೊದಲ ಮತ್ತು ಎರಡನೆ ನಾಮಾವಳಿಗೆ ಸೇರಿಸಿದ ಕಾವ್ಯ ನೀವಿನ್ನೂ ನೋಡಿಲ್ಲವೆಂದು ಕಾಣುತ್ತದೆ, ಅಲ್ಲಿಂದಲೆ ಆರಂಭಿಸೋಣವೆ?
.http://sampada.net/comment/182168#comment-182168
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
In reply to ಉ: ೨೧೧. ಲಲಿತಾ ಸಹಸ್ರನಾಮ ೧೦೦೦ನೇ ನಾಮದ ವಿವರಣೆ by nageshamysore
ಉ: ೨೧೧. ಲಲಿತಾ ಸಹಸ್ರನಾಮ ೧೦೦೦ನೇ ನಾಮದ ವಿವರಣೆ
ನಾಗೇಶರೆ,
ನೀವು ಏನೇ ಹೇಳಿದರೂ ಸಹ ಈ ಮಹತ್ಕಾರ್ಯದಲ್ಲಿ ನಿಮ್ಮ ಪಾಲಂತೂ ಮಹತ್ತರವಾದುದು. ಇರಲಿ ಬಿಡಿ, ಮೊದಲನೇ ಕಂತಿನಿಂದಲೇ ಇದರ ಪರಿಷ್ಕರಣೆಯನ್ನು ಆರಂಭಿಸೋಣ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
In reply to ಉ: ೨೧೧. ಲಲಿತಾ ಸಹಸ್ರನಾಮ ೧೦೦೦ನೇ ನಾಮದ ವಿವರಣೆ by nageshamysore
ಉ: ೨೧೧. ಲಲಿತಾ ಸಹಸ್ರನಾಮ ೧೦೦೦ನೇ ನಾಮದ ವಿವರಣೆ
ನಾಗೇಶರೆ,
ನೀವು ಏನೇ ಹೇಳಿದರೂ ಸಹ ಈ ಮಹತ್ಕಾರ್ಯದಲ್ಲಿ ನಿಮ್ಮ ಪಾಲಂತೂ ಮಹತ್ತರವಾದುದು. ಇರಲಿ ಬಿಡಿ, ಮೊದಲನೇ ಕಂತಿನಿಂದಲೇ ಇದರ ಪರಿಷ್ಕರಣೆಯನ್ನು ಆರಂಭಿಸೋಣ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ಉ: ೨೧೧. ಲಲಿತಾ ಸಹಸ್ರನಾಮ ೧೦೦೦ನೇ ನಾಮದ ವಿವರಣೆ
ಶ್ರೀಧರರವರೆ ಮನಸು ಮಾಡಿದರೆ ಏನನ್ನಾದರು ಸಾಧಿಸಬಹುದು ಎಂದು ತೋರಿಸಿದಿರಿ!
ದೇವಿಯ ಸಹಸ್ರನಾಮವನ್ನು ಅರ್ಥಸಹಿತ ವಿವರಿಸುತ್ತ, ಅಷ್ಟೇ ಸಮಾದಾನದಿಂದ ಎಲ್ಲರ ಅನುಮಾನಿಗಳಿಗೂ ಉತ್ತರಿಸುತ್ತಾ ಪೂರ್ಣಗೊಳಿಸಿದ್ದೀರಿ. ಇದನ್ನು ಮೊದಲಿಗೆ ಮೂಲರೂಪದಲ್ಲಿ ಬರೆದ ಶ್ರೀ ರವಿಯವರಿಗೂ ಕನ್ನಡಕ್ಕೆ ಭಾವಾನುವಾದ ಮಾಡಿ ನಮ್ಮೆಲ್ಲರಿಗು ತಲುಪಿಸಿದ ನಿಮ್ಮ ತಾಳ್ಮೆಗೂ ಹಾಗು ಅಪಾರ ಶ್ರದ್ಧೆ ಹಾಗು ತಿಳುವಳಿಕೆಗಾಗ ಮೊದಲಿಗೆ ನನ್ನ ನಮನ ಹಾಗು ಅಭಿನಂದನೆ ಸ್ವೀಕರಿಸಿ.
ನಿಮ್ಮ ಜೊತೆ ಜೊತೆಗೆ ತಮ್ಮ ಕವನದ ಮೂಲಕ ಭಾವಾರ್ಥವನ್ನು ಗ್ರಹಿಸಿ ಪ್ರಸ್ತುತಿಪಡಿಸುತ್ತಿರುವ ನಾಗೇಶಮೈಸೂರು ರವರಿಗೂ ಸಹ ಅಭಿನಂದನೆಗಳು.
ಶ್ರದ್ದೆ ಗುರುಹಿರಿಯರ ಆಶೀರ್ವಾದ ದೈವದ ಅನುಗ್ರಹ ಎಲ್ಲವೂ ನಿಮ್ಮಲ್ಲಿರುವ ಕಾರಣ ಇಂತಹ ಕಾರ್ಯ ಸುಸೂತ್ರವಾಗಿ ಮುಗಿಯಿತು ಎಂದು ನಾನು ಭಾವಿಸುವೆ. ಅಭಿನಂದನೆಗಳೊಡನೆ
ಪಾರ್ಥಸಾರಥಿ
In reply to ಉ: ೨೧೧. ಲಲಿತಾ ಸಹಸ್ರನಾಮ ೧೦೦೦ನೇ ನಾಮದ ವಿವರಣೆ by partha1059
ಉ: ೨೧೧. ಲಲಿತಾ ಸಹಸ್ರನಾಮ ೧೦೦೦ನೇ ನಾಮದ ವಿವರಣೆ
ನಿಮ್ಮ ಮಾತು ನಿಜ ಪಾರ್ಥರೆ,
ಇದನ್ನು ಆರಂಭಿಸಿದಾಗ ಆದಷ್ಟು ಬೇಗ ಅನುವಾದದ ಕಾರ್ಯ ಮಾಡಿ ಮುಗಿಸಬೇಕೆಂದುಕೊಂಡೆ. ಆದರೆ ಇದನ್ನು ಆರಂಭಿಸಿದ ಮೇಲೆ ತಿಳಿಯಿತು ಇದು ನಾನೆಂದುಕೊಂಡಷ್ಟು ಸುಲಭವಲ್ಲ ಎಂದು. ಆದರೂ ಸಹ ನೀವೆಂದಂತೆ ಲಲಿತಾಂಬಿಕೆಯ ಕೃಪೆ ಮತ್ತು ಗುರುಹಿರಿಯರ ಆಶೀರ್ವಾದ ಮತ್ತು ನಿಮ್ಮಂಥಹ ಸಹೃದಯೀ ಓದುಗರಿಂದ ಇದೆಲ್ಲಾ ಸಾಧ್ಯವಾಯಿತು. ಆಧ್ಯಾತ್ಮದ ಬಗೆಗೆ ನನ್ನ ತಿಳುವಳಿಕೆಯೂ ಬಹಳ ಪರಿಮಿತವಾದುದು, ಆದರೆ ನನ್ನ ಸಹಾಯಕ್ಕೆ ಬಂದದ್ದು ಶ್ರೀರಾಮಕೃಷ್ಣ ಮಠದ ಸ್ವಾಮಿಗಳಾದ ಸ್ವಾಮಿ ಹರ್ಷಾನಂದರು ರಚಿಸಿರುವ ಅನೇಕ ಗ್ರಂಥಗಳೂ ಅದರಲ್ಲೂ ವಿಶೇಷವಾಗಿ ಪತಂಜಲಿಯ ಯೋಗಸೂತ್ರಗಳಿಗೆ ಅವರ ಭಾವಾನುವಾದ ಮತ್ತು ವ್ಯಾಖ್ಯಾನಗಳು. ಅದೇ ವಿಧವಾಗಿ ಸ್ವಾಮಿ ಆದಿದೇವಾನಂದ ಅವರು ಕನ್ನಡೀಕರಿಸಿಕರಿಸಿರುವ ಹತ್ತು ಪ್ರಧಾನ ಉಪನಿಷತ್ತುಗಳು, ಭಗವದ್ಗೀತೆ ಮತ್ತು ಸ್ವಾಮಿ ವಿಜಯವಿದ್ಯಾರಣ್ಯರು ಸಂಸ್ಕೃತದಲ್ಲಿ ರಚಿಸಿದ ಪಂಚದಶೀ ಎನ್ನುವ ವ್ಯಾಖ್ಯಾನ ಗ್ರಂಥ. ಮತ್ತು ಸ್ವಾಮಿ ಸೋಮಾನಾಥಾನಂದರು ಆದಿ ಶಂಕರರ ಸೌಂದರ್ಯ ಲಹರಿ ಮತ್ತು ಶಿವಾನಂದ ಲಹರಿಗಳಿಗೆ ಕೊಟ್ಟಿರುವ ಸಂಕ್ಷಿಪ್ತರೂಪದ ಅರ್ಥ ಮತ್ತು ವ್ಯಾಖ್ಯಾನಗಳು. ಬಹುತೇಕ ಕಡೆ ಈ ಸ್ವಾಮಿಗಳು ಕೊಟ್ಟಿರುವ ಅರ್ಥ ವಿವರಣೆಗಳನ್ನೇ ನಾನು ನೇರವಾಗಿ ಸೇರಿಸಿದ್ದೇನೆ; ಹಾಗಾಗಿ ಅನುವಾದದಲ್ಲಿ ನನ್ನದೇನೂ ವಿಶೇಷ ಪಾಂಡಿತ್ಯವಿಲ್ಲ. ಇಂತಹ ಕ್ಲಿಷ್ಟ ಸಂಗತಿಗಳನ್ನು ಕನ್ನಡದಲ್ಲಿ ರಚಿಸಿರುವ ಆ ಮೂರು ಸ್ವಾಮಿಗಳಿಗೆ ಇದರ ಗರಿಮೆ ಸಲ್ಲುತ್ತದೆ. ಹಾಗೆಯೇ ಮಿಂಚುನೋಟಕೆ ಹಿಂದೂ ಧರ್ಮ ಎನ್ನುವ ಸ್ವಾಮಿ ನಿರ್ವೇದಾನಂದರು ರಚಿಸಿದ ಪುಸ್ತಕದ ಕನ್ನಡ ಅವತರಣಿಕೆ ಸಹ ಎಷ್ಟೋ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗಿತ್ತು. (ಬಹುಶಃ ಇಂಗ್ಲೀಷಿನ Hinduism at a glance ಕೃತಿಯನ್ನು ಸ್ವಾಮಿ ಸೋಮನಾಥಾನಂದರೆ ಕನ್ನಡಕ್ಕೆ ಅನುವಾದಿಸಿದ್ದಾರೆಂದುಕೊಳ್ಳುತ್ತೇನೆ). ಇನ್ನು ಕ್ಲಿಷ್ಟ ಇಂಗ್ಲೀಷ್ ಪದಗಳಿಗೆ ನನಗೆ ಸೂಕ್ತವಾದ ಕನ್ನಡ ಪದಗಳು ದೊರೆತದ್ದು ಬರಹ ಆನ್-ಲೈನ್ ನಿಘಂಟಿನಲ್ಲಿ. ಇದರಲ್ಲಿ ಪ್ರೊ. ಜಿ.ವೆಂಕಟಸುಬ್ಬಯ್ಯನವರ ಪ್ರಿಸಮ್ ಇಂಗ್ಲೀಷ್ ಕನ್ನಡ ಡಿಕ್ಷನರಿ ಹಾಗೂ ದಾಸ ಸಾಹಿತ್ಯಕೋಶದಿಂದ ಆಯ್ದ ಪದಗಳು ದೊರೆತವು. ಹಾಗೆಯೇ ಮೊನಿಯರ್-ವಿಲಿಯಮ್ಸ್ನ ಸಂಸ್ಕೃತ ನಿಘಂಟು ಹಾಗೂ ಡಿಕ್ಷನರಿ ಆಫ್ ಸ್ಪೋಕನ್ ಸಾನ್ಸ್ಕ್ರಿಟ್ ಇವು ಸಹಾಯಕವಾಗಿದ್ದವು. ಇವುಗಳೊಂದಿಗೆ Longman Dictionary of Contemporary English ಸಹ ಅನೇಕ ಕ್ಲಿಷ್ಟ ಇಂಗ್ಲೀಷ್ ಪದಗಳಿಗೆ ಸರಳ ಅರ್ಥಗಳನ್ನು ತಿಳಿಸಲು ಸಹಾಯಕವಾಗಿತ್ತು. ಅನೇಕ ಬಾರಿ ನೀವು ಎತ್ತಿದ ಪ್ರಶ್ನೆಗಳಿಂದ ಇನ್ನಷ್ಟು ಪುಸ್ತಕಗಳನ್ನು ಓದುವ ಅವಕಾಶ ಮತ್ತು ಶ್ರೀಯುತ ರವಿಯವರಿಂದ ಸೂಕ್ತ ವಿವರಣೆ ಪಡೆಯಲು ಅನುಕೂಲವಾಯಿತು. ನಿಮ್ಮ ಪ್ರೋತ್ಸಾಹಕ್ಕೆ ಮತ್ತು ಆಸಕ್ತಿಗೆ ಧನ್ಯವಾದಗಳು.
ವಂದನಗೆಳೊಂದಿಗೆ,
ಶ್ರೀಧರ್ ಬಂಡ್ರಿ
ಉ: ೨೧೧. ಲಲಿತಾ ಸಹಸ್ರನಾಮ ೧೦೦೦ನೇ ನಾಮದ ವಿವರಣೆ
ಶ್ರೀಯುತ ಬಂಡ್ರಿ ಅವರೆ, ಹತ್ತು ಜನರಿಗೆ ಉಪಯೋಗವಾಗಲಿ ಎಂದು ತಾವು ಕೈಗೊಂಡ ಈ ಕ್ಲಿಷ್ಟಕರವಾದ ಕಾರ್ಯ ಸುಲಲಿತವಾಗಿ ಮುಗಿಸಿದ್ದೀರಿ.ತುಂಬಾ ಹರ್ಷವಾಯಿತು.
ನಾವೆಲ್ಲಾ' ಶ್ರೀ ಲಲಿತಾ ಸಹಸ್ರನಾಮದ ವಿವರಣೆ ' ಓದುವಂತಾಯಿತು.ತಮಗೆ ಅನೇಕಾನೆಕ ವಂದನೆಗಳು.
ನಿಮ್ಮಕಾರ್ಯದಲ್ಲಿ ಉತ್ತೇಜನ ನೀಡುತ್ತಾ ಕವನರೂಪದಲ್ಲಿ ನಾಮವಳಿಯ ಬರೆದಿರುವ ಶ್ರೀ ನಾಗೇಶರಿಗೂ ನನ್ನ ನಮಸ್ಕಾರಗಳು
In reply to ಉ: ೨೧೧. ಲಲಿತಾ ಸಹಸ್ರನಾಮ ೧೦೦೦ನೇ ನಾಮದ ವಿವರಣೆ by swara kamath
ಉ: ೨೧೧. ಲಲಿತಾ ಸಹಸ್ರನಾಮ ೧೦೦೦ನೇ ನಾಮದ ವಿವರಣೆ
ಕಾಮತ್ ಸರ್,
ಕೇವಲ ನಾನು ಓದಿಕೊಂಡರೆ ಅದರಿಂದೇನೂ ಪ್ರಯೋಜನವಿಲ್ಲ. ಮೊದಲನೆಯದಾಗಿ ನಾನು ಅರ್ಥಮಾಡಿಕೊಂಡದ್ದು ತಪ್ಪೋ ಸರಿಯೋ ತಿಳಿಯದು, ಎರಡನೆಯದಾಗಿ ಇನ್ನೊಬ್ಬರಿಗೆ ವಿವರಿಸುವಾಗ ನಾನು ಅದನ್ನು ಸರಿಯಾಗಿ ಅಭ್ಯಸಿಸ ಬೇಕಾಗುತ್ತದೆ ಹಾಗಾಗಿ ಹೀಗೆ ಹಂಚಿಕೊಳ್ಳುವುದರಿಂದ ಹೆಚ್ಚಿನ ಪ್ರಯೋಜನವೇ ಆಗಿದೆ ಎನ್ನಬಹುದು. ನಿಮ್ಮಂತಹ ಹಿರಿಯರ ಪ್ರೋತ್ಸಾಹವೂ ಈ ಕೃತಿಯ ಅನುವಾದದಲ್ಲಿ ಮಹತ್ತರ ಪಾತ್ರ ವಹಿಸಿದೆ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ಉ: ೨೧೧. ಲಲಿತಾ ಸಹಸ್ರನಾಮ ೧೦೦೦ನೇ ನಾಮದ ವಿವರಣೆ
ಶ್ರೀಧರರೆ, "೨೧೧. ಶ್ರೀ ಲಲಿತಾ ಸಹಸ್ರನಾಮ"ದ ವಿವರಣೆಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ :-)
.
ಲಲಿತಾಂಬಿಕಾ ಸಹಸ್ರನಾಮ (೧೦೦೦)
__________________________________________
.
೧೦೦೦. ಲಲಿತಾಂಬಿಕಾ
ಲಲಿತಾ ಸಹಸ್ರನಾಮದೆ, ಮೊದಲಾಗಿ ಸೃಷ್ಟಿ ಲಲಿತಾಂಬಿಕೆ ಶ್ರೀ ಮಾತಾ
ಸ್ಥಿತಿ-ಲಯ-ಆಪೋಶನ-ಮರುಸೃಷ್ಟಿ, ಐದರಲೆ ಪ್ರಮುಖ ಗುಣ ಸ್ತುತಿಸುತ
ನಿಜ ನಾಮ ಲಲಿತೆ ಪ್ರಸ್ತುತ ಕಡೆಗೆ, ಹೆಸರಲೇನೆಲ್ಲ ಅಡಗಿ ಅರ್ಥದ ಗಡಿಗೆ
ಸಹಸ್ರನಾಮಾವಳಿ ವಿಶ್ಲೇಷಣೆ ಕಾವ್ಯದಡಿಗೆ, ವಿನಮ್ರದಿ ದೇವಿ ಪಾದದಡಿಗೆ ||
.
ಸ್ಥೂಲ ಸೂಕ್ಷ್ಮ ಗುಣದೆ ಮಾತೃಸ್ವರೂಪಿಣಿ ಜಗನ್ಮಾತೆಯೆ ಲಲಿತಾಂಬಿಕಾ
ಅರಿವಾಗಿಸೆ ತನ್ನಿರುವಿನ ಅದ್ವೈತ, ಸಗುಣ-ನಿರ್ಗುಣ ಬ್ರಹ್ಮವಾಗಿ ಪ್ರಕಟ
ಬ್ರಹ್ಮವನರಿತವರಾರಿಲ್ಲಿ, ಮಾನವ ಮನ ಗ್ರಹಿಸಲಾಗದ ಅವ್ಯಕ್ತ ರೂಪ
ಸುಲಭದರಿವಿಗೆ ಬ್ರಹ್ಮದ ಚರರೂಪ ಪ್ರಸ್ತುತ, ನೇಪಥ್ಯದಲಿ ಸ್ಥಿರ ರೂಪ ||
.
ದೇವಿ ನಾಮ ಸ್ಮರಣೆಯೆ ಪವಿತ್ರ, ಶ್ರದ್ದೆ ಭಕ್ತಿಗೆ ದೊರಕೆ ಮುಕ್ತಿ
ದೇವ ದೇವಿ ಪೂಜಿತೆ, ಶುದ್ಧ ಭಕ್ತಿಗೊಲಿವ ಅಕ್ಷರ ಮಂತ್ರ ಶಕ್ತಿ
ಭಕ್ತಗೆ ಕರುಣೆ, ದುಷ್ಟಗೆ ಕಾಠಿಣ್ಯ, ವೇದ ಜನನಿ-ವೇದ ಪೂಜಿತೆ
ಬ್ರಹ್ಮಾಂಡದೆಲ್ಲ ಶಕ್ತಿ ಮೂಲ, ಜಗದೆಲ್ಲ ಪ್ರಕ್ರಿಯೆ ಕಾರಣ ಕರ್ತೆ ||
.
ಬಾಹ್ಯ ಪೂಜೆಯಿಂದಾರಂಭಿಸಿ, ಪಂಚದಶೀ ಷೋಡಶೀ ಮಂತ್ರ ಪೂಜೆ
ತದನಂತರ ಚಿತ್ತ-ಚಿತ್ರ ಸಹಸ್ರನಾಮ ಮುಖೇನ, ಹಂತ ಹಂತ ಹೆಜ್ಜೆ
ಮನೋಭಾವ ಪ್ರಮುಖ ಬಾಹ್ಯಕಿಂತ ಅಂತರಂಗಪೂಜೆ ದೇವಿಗೆ ಪ್ರಿಯ
ದೇವಿ ಸೂಕ್ಷ್ಮ ರೂಪದೆ ಮನ ಸಕ್ರೀಯಾ, ಭಕ್ತನಲು ಬಯಸೊ ಪ್ರಕ್ರಿಯ ||
.
ದೇವಿಯನರಿಯಲೊಂದೆ ದಾರಿ, ಗಳಿಸಿರೆ ಪರಿಶುದ್ಧ ಜ್ಞಾನ ರಹದಾರಿ
ಜ್ಞಾನದಿಂ ಪಕ್ವಮನ, ಅರಿಯೆ ಸುಲಭ ಬ್ರಹ್ಮಲಕ್ಷಣ ಅರಿಯುವ ಪರಿ
ಪವಿತ್ರ ಲಲಿತಾ ಪಾದೋದಕ ಜ್ಞಾನ, ದುಃಖ,ಯಾತನೆನಾಶ ಪಾದದೆ
ಮನಃಪೂರ್ವಕ ಭಕ್ತಿ ತೊಳೆವ ಅಜ್ಞಾನ, ದೀರ್ಘಾಯು ಪರಮಾನಂದದೆ ||
.
ಮೌನದಿ ಧ್ಯಾನಿಸುತ ಆಂತರ್ಯದೆ, ಲಲಿತೆಗೆ ಶರಣಾಗುವ ದಾರಿ ಉಚಿತ
ಮಾತು-ಚಿಂತನೆ-ಕೃತಿ ನಿಗ್ರಹಿಸದು ಮನಸು, ಇಂದ್ರಿಯದ ಧಾಳಿ ಖಚಿತ
ಅಂಟದ ನೀರಂತಿರೆ ಫಲಾಫಲಕೆ ಮನ ಸ್ವಸ್ಥ, ಪ್ರಜ್ಞೆಯಾಗಿ ಪರಿಶುದ್ಧ ಪ್ರಜ್ಞೆ
ಅಹಂ ವಿನಾಶದೆ ಮುಕ್ತಿ, 'ನಾನು' ನಶಿಸೆ ಶ್ರೀ ಮಾತ ನೇರ ದರ್ಶನಕನುಜ್ಞೆ ||
.
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
ಉ: ೨೧೧. ಲಲಿತಾ ಸಹಸ್ರನಾಮ ೧೦೦೦ನೇ ನಾಮದ ವಿವರಣೆ
ಶ್ರೀದರ್ ರವರೇ ಇದು ನೀವು " ಸಾಧನೆ " ಯಲ್ಲಿ ಏರಿರುವ ಮತ್ತೊಂದು ಮೆಟ್ಟಿಲು. ಎಷ್ಟೋ ತಿಳಿಯದಿದ್ದ ವಿಷಯಗಳು, ದೇವಿಯ ನಾಮದ ಅರ್ಥಗಳು ಈ ನಿಮ್ಮ ಸರಣಿಯಲ್ಲಿ ತಿಳಿದಂತಾಯಿತು ಮೂಲ ಲೇಖಕರಾದ ರವಿಯವರಿಗೂ , ಕನ್ನಡಕ್ಕೆ ಅನುವಾದಿಸಿ ದೇವಿಯ ನಾಮಾಮೃತ ಕುಡಿಸಿದ ನಿಮಗೂ ಹೃದಯ ಪೂರ್ವಕ ವಂದನೆಗಳು ಇದೇ ರೀತಿ ವಿಷ್ಣು ಸಹಸ್ರ ನಾಮದ ಸರಣಿಯೂ ನಿಮ್ಮಿಂದ ಮೂಡಿ ಬರಲೆಂದು ಆಶಿಸುತ್ತೇನೆ ......ಸತೀಶ್
In reply to ಉ: ೨೧೧. ಲಲಿತಾ ಸಹಸ್ರನಾಮ ೧೦೦೦ನೇ ನಾಮದ ವಿವರಣೆ by sathishnasa
ಉ: ೨೧೧. ಲಲಿತಾ ಸಹಸ್ರನಾಮ ೧೦೦೦ನೇ ನಾಮದ ವಿವರಣೆ
ಸತೀಶ್ ಅವರೆ, ನಿಮ್ಮ ಹೃದಯಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಜವಾಗಿ ಹೇಳಬೇಕೆಂದರೆ ಒಂದು ಲೇಖನವನ್ನು ಅನುವಾದ ಮಾಡುವುದು ಅಂತಹ ದೊಡ್ಡ ವಿಷಯವೇನಲ್ಲ, ಆದರೆ ಅದನ್ನು ಅಳವಡಿಸಿಕೊಂಡಾಗ ಅದು ನಿಜವಾಗಿ ಸಾಧನೆಯಾದೀತು. ಆದರೆ ಖಂಡಿತ ಆ ನಿಟ್ಟಿನಲ್ಲಿ ಇದೊಂದು ಹೆಜ್ಜೆಯಾಗಿದೆ ಎಂದರೆ ತಪ್ಪಲ್ಲ.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ
ಉ: ೨೧೧. ಲಲಿತಾ ಸಹಸ್ರನಾಮ ೧೦೦೦ನೇ ನಾಮದ ವಿವರಣೆ
ಶ್ರೀಧರ್ಜಿ,http://sampada.net/blog/%E0%B3%A7-%E0%B2%B2%E0%B2%B2%E0%B2%BF%E0%B2%A4%E...
ಎಪ್ರಿಲ್ ೧೬ ೨೦೧೩ರಿಂದ ಜನವರಿ ೨೧ ೨೦೧೪ ರವರೆಗೆ ಪೂರ್ತಿ ಒಂಬತ್ತು ತಿಂಗಳು...
ತಮಗೆ, ಹಾಗೇ ಬೆನ್ನು ಬಿಡದೇ ಕವನದ ಸಾಥ್ ನೀಡಿದ ನಾಗೇಶರಿಗೂ, ಮೂಲ ಲೇಖಕರಿಗೂ ಧನ್ಯವಾದಗಳು.
In reply to ಉ: ೨೧೧. ಲಲಿತಾ ಸಹಸ್ರನಾಮ ೧೦೦೦ನೇ ನಾಮದ ವಿವರಣೆ by ಗಣೇಶ
ಉ: ೨೧೧. ಲಲಿತಾ ಸಹಸ್ರನಾಮ ೧೦೦೦ನೇ ನಾಮದ ವಿವರಣೆ
ಗಣೇಶ್ಜಿ,
ವಾಸ್ತವವಾಗಿ ಇದು ಕೇವಲ ೨೧೨ ಕಂತುಗಳನ್ನು ಒಳಗೊಂಡಿದೆ ಹಾಗೆ ನೋಡಿದರೆ ಇದು ಸ್ವಲ್ಪ ಹೆಚ್ಚೂ ಕಡಿಮೆ ದಸರೆ-ದೀಪಾವಳಿಯ ಹೊತ್ತಿಗೇ ಮುಗಿಯಬೇಕಿತ್ತು. ಹೇಗೆ ಲೆಕ್ಕ ಹಾಕಿದರೂ ಒಂದೆರಡು ತಿಂಗಳಂತೂ ಮುಂದೆ ಹೋಯಿತು. ಒಂದು ವಿಧವಾಗಿ ಏಳು ತಿಂಗಳಿನ ಆತುರದ ಕೂಸಿಗಿಂತ ಇದು ಪೂರ್ಣಪ್ರಮಾಣದ ನವಮಾಸದ ಕೂಸಾಯ್ತು :) ಮಧ್ಯದಲ್ಲಿ ಅನೇಕ ಬಾರಿ ಅಂತರಾಯವಾದರೂ ಸಹ ಇದನ್ನು ಎಡಬಿಡದೆ ಓದಿ ಪ್ರೋತ್ಸಾಹಿಸುವುದರ ಜೊತೆಗೆ ಅನೇಕ ಉಪಯುಕ್ತ ಕೊಂಡಿಗಳನ್ನು ಕೊಟ್ಟಿದ್ದೀರ. ಅದಕ್ಕಾಗಿ ನಿಮಗೆ ಧನ್ಯವಾದಗಳು.
ವಂದನೆಗಳೊಂದಿಗೆ,
ಶ್ರೀಧರ್ ಬಂಡ್ರಿ
ಉ: ೨೧೧. ಲಲಿತಾ ಸಹಸ್ರನಾಮ ೧೦೦೦ನೇ ನಾಮದ ವಿವರಣೆ
ಸಾಧಕರಿಗೆ ನಮಸ್ಕಾರ, ಅಭಿನಂದನೆಗಳು ಸಹಾ!
ಉ: ೨೧೧. ಲಲಿತಾ ಸಹಸ್ರನಾಮ ೧೦೦೦ನೇ ನಾಮದ ವಿವರಣೆ
ತುಂಬಾ ಸರಳವಾಗಿ, ಎಲ್ಲರಿಗೂ ಅರ್ಥವಾಗುವಂತೆ ಲಲಿತಾಂಬಿಕೆಯ ಸಹಸ್ರ ನಾಮಾವಳಿಗಳನ್ನು ತಿಳಿಸಿ ಕೊಟ್ಟಿದ್ದೀರಿ, ಆ ನಿಮ್ಮ ಅದ್ಭುತ ಪ್ರತಿಬೆಗೆ, ಹಾಗು ಸ್ತಿತ ಮನಸ್ಕರಾಗಿ ಬರೆದುದಕ್ಕೆ ಅಪಾರ ಧನ್ಯವಾದಗಳು, ಹೀಗೆ ವಿಶೇಷ ಬರಹಗಳನ್ನು ಓದುವ ಭಾಗ್ಯ ನಮ್ಮದಾಗಲಿ,
-- ನವೀನ ಜೀ ಕೇ