ಸಾಗರ ಪ್ರವಾಸ : ಕೆಳದಿಯ ದೇವಾಲಯದಲ್ಲಿ

Submitted by partha1059 on Thu, 01/30/2014 - 22:17
ಚಿತ್ರ

ಸಾಗರ ಪ್ರವಾಸ : ಕೆಳದಿಯ ದೇವಾಲಯದಲ್ಲಿ

 

 ಎರಡನೇ ದಿನ ಜನವರಿ ಹದಿನೇಳರ ಬೆಳಗ್ಗೆ ಎಚ್ಚರವಾದಾಗ ಇನ್ನೂ ನಸುಕತ್ತಲು. ಕಾಫಿ ಕುಡಿಯೋಣವೆಂದರೆ ಅಷ್ಟು ಬೇಗ ಎಲ್ಲಿ ಸಿಗಬೇಕು. ಇನ್ನೂ ಎಲ್ಲರೂ ಮಲಗಿದ್ದರು. ನನ್ನ ಪತ್ನಿಯೂ ಸಿದ್ದಳಾದಳು.  ಬೆಂಗಳೂರಿನಲ್ಲಿ ವಾಕಿಂಗ್ ಹೋಗುವ ಅಭ್ಯಾಸ ಇಲ್ಲಿಯೂ ಏಕೆ ಹೋಗಬಾರದು ಅನ್ನಿಸಿತು. ಸರಿ ಇಬ್ಬರು ಹೊರಟೆವು.  

ಹೊರಗೆ ಬೀಳುತ್ತಿರುವ ಮಂಜು. ತಣ್ಣಗಿನ ವಾತವರಣ, ಕೆರೆಯಪಕ್ಕದಲ್ಲಿ ನಡೆದಂತೆ ತಣ್ಣಗೆ ಬೀಸುವ ಗಾಳಿ. ಎಲ್ಲವನ್ನೂ ಆಸ್ವಾದಿಸುತ್ತ   ಸಾಗರದ ಊರಿನ ಒಳಗೆ ನಡೆದೆವು. ಅರ್ಧಗಂಟೆ ನಡೆದು ಮತ್ತೆ ಹಿಂದಿನ ದಿನ ಬಸ್ ಇಳಿದಿದ್ದ ಸ್ಥಳದ ಸಮೀಪಕ್ಕೆ ಬಂದೆವು. ಹಿಂದಿನ ದಿನ ಕಾಫಿ ಕುಡಿದಿದ್ದ ಚಿಕ್ಕ ಹೋಟೆಲ್ ಕಾಣಿಸಿತು. ನಾವು ಒಳಹೋದರೆ ಅವನಿಗೂ ಆಶ್ಚರ್ಯ ಮತ್ತೆ ತನ್ನ ಹೋಟೆಲ್ ಹುಡುಕಿ ಬಂದರಲ್ಲ ಎಂದು.  ಬೆಂಗಳೂರಿನ ರೀತಿಯ ಗಲಾಟೆ ಇರದೆ ಬೆಳಗ್ಗೆ ಬೆಳಗ್ಗೆಯೆ ಅವನು ಟೇಪ್ ರೆಕಾರ್ಡಿನಲ್ಲಿ ಅವನು ಜಾನಪದ ಗೀತೆಗಳನ್ನು ಹಾಕಿದ್ದ ಕೇಳುತ್ತ ಕಾಫಿ ಕುಡಿದು ಅಲ್ಲಿಂದ ಹೊರಟೆವು. 

೧೭-ಜನವರಿ ಶುಕ್ರವಾರ ಎಲ್ಲರೂ ಬೆಳಗಿನ ಎಂಟಕ್ಕೆ ಸಿದ್ದರಾಗಿ ಕುಳಿತಿದ್ದೆವು. ಅದೇನೊ ಡ್ರೈವರನ ಸುಳಿವೇ ಇಲ್ಲ. ಸರಿ ಎಂದು ಫೋನ್ ಮಾಡಿದೆ, 
"ಸಾರ್ ಹೋಟೆಲ್ ಅತ್ತಿರ ಕ್ಸೈಲೋ ಬಂದಿರಬೇಕಲ್ಲ, ನಾನು ಕಳಿಸಿದ್ದೆ" ಎಂದ
"ಏಕೆ ನೀವು ಬರುವದಿಲ್ಲವೇ" ಎಂದರೆ
"ಸಾರಿ ಸಾರ್, ಅದೇನೊ ನನ್ನ ಗಾಡಿ  ಪ್ರಾಬ್ಲಂ ಆಗಿದೆ. ಮತ್ತೊಂದು ಗಾಡಿ ಬರುತ್ತಿದೆ ಇನ್ನು ಐದು ನಿಮಿಶದಲ್ಲಿ ಅಲ್ಲಿರುತ್ತದೆ, ಗಾಡಿ 2124 ' ಎಂದ.

ಸರಿ ಇವರ ಹಣೇಬರಹವೇ ಇಷ್ಟು. ಎಂದು ಬೈದುಕೊಳ್ಳುವದರಲ್ಲಿ ಅವನು ಹೇಳಿದ ಗಾಡಿ ಹೋಟೆಲ್ ಪ್ರವೇಶ ಮಾಡಿತು. 
ಇಂದು ಬೇರೆ ಡ್ರೈವರ್ ಸ್ವಲ್ಪ ವಯಸಾದವರು. ನನಗೆ ಅನುಮಾನ, 

ಈದಿನ ಬಂದಿದ್ದವರ ಹೆಸರು ಕುಮಾರಸ್ವಾಮಿ ಅಂತೆ.
"ನಿನ್ನೆ ಬಂದಿದ್ದವರು ಯಾವುದೋ ಹೋಟೆಲ್ ಗೆ ಬೆಳಗಿನ ಉಪಹಾರಕ್ಕೆ ಕರೆದ್ಯೊಯ್ಯುವದಾಗಿ ತಿಳಿಸಿದ್ದರು, ಅಲ್ಲದೆ ಈ ದಿನದ ಕಾರ್ಯಕ್ರಮ ಪೂರ್ತಿ ನಿಗದಿಯಾಗಿರಲಿಲ್ಲ, ನಿನ್ನೆಯೆ ಅಡ್ವಾನ್ಸ್ ಎಂದು ಹಣ ಕೊಟ್ಟಿದ್ದೆ" 
ಎಂದು ತಿಳಿಸಿದೆ.
ಅದಕ್ಕವರು 
"ಸಾರ್ ಎಲ್ಲವನ್ನು ಹೇಳಿದ್ದಾನೆ, ಬನ್ನಿ ಮೊದಲು ತಿಂಡಿ ಮುಗಿಸೋಣ, ನಂತರ  ಪ್ರಯಾಣ, ಈ ದಿನ ಕೆಳದಿ, ಬನವಾಸಿ, ಸಿರ್ಸಿ, ಸೊಂದೆ ಸಾದ್ಯವಾದರೆ ಸಹಸ್ರಲಿಂಗ ಎಲ್ಲ ಮುಗಿಸಿಬಿಡೋಣ" ಎಂದವರು 
"ನೀವು ಹಣದ ಬಗ್ಗೆ ಏನನ್ನೂ ಯೋಚಿಸಬೇಡಿ ಸಾರ್ , ಹಣ ಏನು ದೊಡ್ಡದಲ್ಲ, ನಮಗೆ ಗಿರಾಕಿಗಳು ಮುಖ್ಯ" ಎಂದು ಬಾಷಣ ಬೇರೆ ಬಿಗಿದರು. 
ಸರಿ ಎನ್ನುತ್ತ ಎಲ್ಲರೂ ಹೊರಟಂತೆ,  ಪಕ್ಕದ ಕೆರೆಗೆ ವಾಹನದಲ್ಲಿಯೆ ಸುತ್ತುಬಂದು,  ಸಮೀಪದಲ್ಲಿಯೆ ಇರುವ ಹೋಟೆಲ್  ಮೈಸೂರು ಕೆಫೆಗೆ  ಕರೆದೋಯ್ದು ನಿಲ್ಲಿಸಿದರು. 
ಮೈಸೂರು ಕೆಫೆಯ ಉಪಹಾರ ಅತ್ಯುತ್ತಮ ಎನಿಸಿತು. ಎಲ್ಲರೂ ಅವರ ಅವರ ಬಯಕೆಗಳಂತೆ, ದೋಸೆ, ಪೂರಿ, ಇಡ್ಲಿ, ಉಪ್ಪಿಟ್ಟು ಎಂದು ಹೇಳಿ ತರಿಸಿ ತಿಂದದ್ದಾಯ್ತು, ಅಲ್ಲಿಂದ ಹೊರಡುವಾಗ ಕೇಳಿದೆ 
"ಈಗ ಯಾವ ಕಡೆ" 
"ಮೊದಲು ಕೆಳದಿಗೆ ಹೋಗೋಣ ಸಾರ್" ಎನ್ನುತ್ತ ಹೊರಟರು ಕುಮಾರಸ್ವಾಮಿ . ಮಾರ್ಗಮಧ್ಯೆ ಮಾತಿನ ನಡುವೆ ತಿಳಿಯಿತು, ನೆನ್ನೆ ಬಂದಿದ್ದ ಡ್ರೈವರ್ ಮತ್ಯಾವುದೋ ಗಿರಾಕಿ ಸಿಕ್ಕರೆಂದು ಶಿವಮೊಗ್ಗದ ಕಡೆ ಹೋಗಿದ್ದರು, 
ಈವತ್ತು ಬಂದಿರುವನು ಕುಮಾರಸ್ವಾಮಿ ಎಂದು, ಇವರು ನಿನ್ನೆ ಬಂದಿದ್ದವರ ತಂದೆ!! 
ಕೆಳದಿ ತುಂಬಾ ದೂರವೇನು ಇಲ್ಲ, ಅರ್ದ ಗಂಟೆಯೂ ಇಲ್ಲ , ಕೆಳದಿಯ ದೇವಾಲಯದ ಮುಂದೆ ಗಾಡಿ ನಿಂತಿತ್ತು, ಎಲ್ಲರೂ ಇಳಿದು ಹೊರಟೆವು

ಕೆಳದಿ :
ಕೆಳದಿ ಸಂಸ್ಥಾನದ ವಿವರ  ನಾನು ಒಳಗೆ ಪ್ರವೇಶಿಸುವಾಗಲೆ ಬೋರ್ಡಿನಲ್ಲಿ ಹಾಕಿದ್ದನು ಓದಿದೆವು. ಅಲ್ಲದೆ ವಿಕಿಪೀಡಿಯಾದಲ್ಲಿ ವಿವರವಿದೆ. 

ಕೆಳದಿಯೂ ಕೃಷ್ಣದೇವರಾಯನ ಕಾಲದಲ್ಲಿ ೧೬ ನೇ ಶತಮಾನದಲ್ಲಿ ಚೌಡಗೌಡನೆಂಬ ಪಾಳೆಯಗಾರನ ಆಡಳಿತದಲ್ಲಿದ್ದ ಪಟ್ಟಣ, ನಂತರ ರಾಜದಾನಿಯನ್ನು ಇಲ್ಲಿಂದ ಇಕ್ಕೇರಿಗೆ ಬದಲಾಯಿಸಲಾಯಿತು ಅನ್ನುತ್ತ ದೆ ಇತಿಹಾಸ. ಇಲ್ಲಿನ ಶಿವಲಿಂಗವೂ , ನಂತರ ನಾಗಮುರಿ ಎನ್ನುವ ಕತ್ತಿಯು ನೆಲದಲ್ಲಿ ಸಿಕ್ಕಿತು. ನಂತರ ಚೌಡಗೌಡನ ಭೂಮಿಯಲ್ಲಿ ಸಾಕಷ್ಟು ನಿದಿ ಸಿಕ್ಕಿತ್ತು ಎನ್ನುವ ಕತೆಯಿದೆ. ನಂತರ ಕೃಷ್ಣದೇವರಾಯನ ಆಳ್ವಿಕೆಯಲ್ಲಿ ಪಾಳೇಯಗಾರನಾಗಿದ್ದು , ಇಲ್ಲಿ ಅರಮನೆ , ಹಾಗು ಹೋಯ್ಸಳದ್ರಾವಿಡ ಶೈಲಿಯ ರಾಮೇಶ್ವರ ದೇವಾಲಯ ಕಟ್ಟಿಸಿದನು. ನಂತರ ಅವನ ರಾಜದಾನಿ ಇಕ್ಕೇರಿಗು, ಬಿದನೂರು, ಕವಲೇದುರ್ಗಕ್ಕೂ ಬದಲಾಯಿತು. ಕೆಳದಿ ಸಂಸ್ಥಾನದ ನಾಣ್ಯಗಳು ಇತಿಹಾಸದ ಬಾಗ. ಅವರು ಟಂಕಸಾಲೆಗಳನ್ನು ಸ್ಥಾಪಿಸಿದ್ದರು. ಪ್ರಸಿದ್ದ ರಾಜರುಗಳೆಂದರೆ ಚೌಡಗೌಡ, ಸದಾಶಿವನಾಯಕ, ಶಿವಪ್ಪನಾಯಕ, ಹಾಗು ಚೆನ್ನಮ್ಮ ಮುಂತಾದವರು. ಚೆನ್ನಮ್ಮನೆಂದರೆ ಕಿತ್ತೂರು ಚೆನ್ನಮ್ಮನಲ್ಲ ! 

ದೇವಾಲಯದ ಇತಿಹಾಸವನ್ನು ಹೇಳಲು ಅಲ್ಲಿ ಗೈಡ್ ಗಳು ಯಾರು ಸಿಗಲಿಲ್ಲ ನಾವು ತೀರ ಮುಂಚೆ ಅಂದರೆ ಬೆಳಗಿನ ಒಂಬತ್ತಕ್ಕೆ ಹೋಗಿದ್ದೇವು ಅನ್ನಿಸುತ್ತೆ. ದೇವಾಲಯದಲ್ಲಿ  ಸುಮಾರು ಒಂದು ಘಂಟೆ ಕಳೆದು ಹೊರಟೆವು. 
ಶಿವದೇವಾಲಯ ಬಾಗಿಲು ಹಾಕಿದ್ದರು ಸಹ ಶಿವನ ದರ್ಶನವಾಯಿತು. ಸುತ್ತಲೂ ಗೋಡೆಯ ಗೂಡುಗಳಲ್ಲಿರುವ ವಿಗ್ರಹಗಳಿಗೆ ಗ್ರಿಲ್ ಬಾಗಿಲ ಬಂದನವಿದೆ, ದೇವಾಲಯದ ಪ್ರವೇಶ ದ್ವಾರ ಗಮನಸೆಳೆಯುತ್ತದೆ.  ನಾನು ಒಂದೊಂದನ್ನು  ಬಾಗಿಲು ತೆಗೆದು ಕ್ಯಾಮರದಲ್ಲಿ ಸೆರೆಹಿಡಿದೆ. ಒಂದುಕಡೆ ನಾಗರಕಲ್ಲುಗಳನ್ನೆಲ್ಲ ಸೇರಿಸಿ ಮ್ಯೂಸಿಯಂನಂತೆ ಇಟ್ಟಿದ್ದಾರೆ . ಅಲ್ಲಿಯ ಮರದ ಕಂಬದ ರಚನೆಗಳು, ದೇವಾಲಯ, ಜೈಲಿನಂತಹ ಜಾಗ ., ಬಾವಿ ಎಲ್ಲವೂ ಆಕರ್ಷಣೆಯೆ. ಹಿಂಬಾಗಿಲ ಮೂಲಕ ಹೋದರೆ ವಿಶಾಲ ಬಯಲಿದೆ. ಬಹುಶಃ ಅರಮನೆಯೆಲ್ಲ ನೆಲಸಮವಾಗಿದೆ.   ದಕ್ಷಬ್ರಹ್ಮ, ಹಾಗು ಸರ್ಪಬಂದದ ಕೆತ್ತನೆ ಪ್ರಸಿದ್ದ.

ಒಳಹೋಗುವಾಗ ಕಲ್ಲಿನ ಮೇಲಿನ ಹಳದಿ ಕಂಬಳಿಹುಳ ಮನವನ್ನು ಸೆಳೆಯಿತು. 

ಕೆಳದಿ ಪ್ರವೇಶಿಸಿ ವಾಹನ ಅರಮನೆಯ ಮುಂದೆ ನಿಲ್ಲುವಾಗಲೆ ಕವಿನಾಗರಾಜರ ನೆನಪು ಮನ ತುಂಬಿತು. ಅವರು ಜೊತೆಗೆ ಇದ್ದಿದ್ದರೆ ಚೆನ್ನಾಗಿತ್ತು ಎನ್ನುವ ಭಾವ ಮನಸಿನಲ್ಲಿ. ಕೆಳದಿಗು ಕವಿನಾಗರಾಜರಿಗು ಇರುವ ಸಂಬಂಧ ಮನ ನೆನೆಯಿತು. 

ಅಲ್ಲಿಂದ ನಮ್ಮ ಪ್ರಯಾಣ ಬನವಾಸಿಯತ್ತ . 

Rating
No votes yet

Comments

kavinagaraj

Fri, 01/31/2014 - 14:28

ಕೆಳದಿಯ ಮ್ಯೂಸಿಯಮ್ಮಿಗೆ ಭೇಟಿ ನೀಡಿದ್ದರೆ ಅಮೂಲ್ಯ ಸಂಗತಿಗಳನ್ನು ನೋಡಬಹುದಿತ್ತು. ಅಲ್ಲಿನ ಕ್ಯೂರೇಟರ್ ಡಾ. ವೆಂಕಟೇಶಜೋಯಿಸರನ್ನು ಕಂಡಿದ್ದರೆ ಅವರು ನೀವು ಬಯಸಿದ ಮಾಹಿತಿ ಕೊಡುತ್ತಿದ್ದರು. ನೀವು ನನಗೆ ದೂರವಾಣಿ ಕರೆ ಮಾಡಿದ್ದರೂ ಸ಻ಕಿತ್ತು. ಇರಲಿ ಬಿಡಿ, ಇನ್ನೊಮ್ಮೆ ಅಲ್ಲಿಗೆ ಪ್ರವಾಸಕ್ಕೆ ಬನ್ನಿ, ಸಾಧ್ಯವಾದರೆ ನಾನೂ ಜೊತೆಗೂಡುವೆ.

swara kamath

Fri, 01/31/2014 - 17:34

ಪಾರ್ಥ ಅವರೆ ನಮಸ್ಕಾರ,
ತಮ್ಮ ಸಾಗರದ ಪ್ರವಾಸದ ಸುಳಿವು ಕೊಂಚ ತಿಳಿದಿದ್ದರೆ ನಾನು ಹಾಗು ಪಾಟೀಲರು ಸಹಗೂಡಿ ತಮ್ಮನ್ನು ಮುಖತಃ ಪರಿಚಯ ಮಾಡಿಕೊಳ್ಳುವ ಅವಕಾಶ ಸಿಗುತ್ತಿತ್ತು. ನಾವಿಬ್ಬರೂ ವಾಸವಾಗಿರುದು ಸಾಗರದಿಂದ ಕೇವಲ 35 ಕಿ.ಮಿ. ದೂರದ ರಿಪ್ಪನ್ ಪೇಟೆಯಲ್ಲಿ.
ನಮ್ಮ ಜಿಲ್ಲೆಯಲ್ಲಿ ಇನ್ನೂ ಅನೇಕ ಪ್ರವಾಸಿ ತಾಣಗಳಿವೆ.ಇನ್ನೊಮ್ಮೆ ಬಂದಾಗ ತಿಳಿಸಿ . ಕವಿನಾಗರಾಜರು ಬಂದರೆ ಇನ್ನೂ ಸಂತೋಷ. ಮಲೆನಾಡಿನ ಸ್ಥಳ ಪರಿಚಯಿಸಿ ಸತ್ಕರಿಸುವ ಭಾಗ್ಯ ನಮ್ಮದಾಗಲಿ....... ರಮೇಶ ಕಾಮತ್

ರಮೇಶ ಕಾಮತ ಮತ್ತು ಪಾರ್ಥಸಾರಥಿಯವರಿಗೆ ವಂದನೆಗಳು
ಪಾರ್ಥಸಾರಥಿಯವರ ಪ್ರವಾಸ ಕಥನ ಅದ್ಭುತವಾಗಿ ಪಡಿ ಮೂಡುತ್ತಿದೆ, ನಿಮ್ಮ ಅನಿಸಿಕೆಗೆ ನನ್ನ ಸಹಮತವಿದೆ, ಎಲ್ಲ ಚಿತ್ರಗಳೂ ಸುಂದರವಾಗಿ ಮೂಡಿ ಬಂದಿವೆ, ಕಂಬಳಿ ಹುಳುವಿನ ಚಿತ್ರದ ವೈಖರಿಯೆ ಬೇರೆ, ಎಕ್ಸಲಂಟ್ ಚಿತ್ರ, ಇಬ್ಬರಿಗೂ ಧನ್ಯವಾದಗಳು.

ಕವಿ ನಾಗರಾಜರೆ, ರಮೇಶಕಾಮತ್ ಹಾಗು ಪಾಟೀಲರಿಗೆ ನಮಸ್ಕಾರಗಳು
ಮೆಚ್ಚುಗೆಗೆ ಧನ್ಯವಾದಗಳು
ಮನೆಯಲ್ಲಿ ಮಗಳಿಗೆ ರಜಾ ಎಂದು ಹೊರಟಿದ್ದಾಯಿತು, ರಜಾ ಎರಡು ಸಾರಿ ಕ್ಯಾನ್ಸಲ್ ಆಗಿ ಮೂರನೆ ಸಾರಿ ಹೊರಟೆ, ಹಾಗಾಗಿ,
ಮೊದಲೇ ಯಾರಿಗೂ ತಿಳಿಸಲಾಗಲಿಲ್ಲ.
ಮತ್ತೊಮ್ಮೆ ವಿರಾಮವಾಗಿ ಬರಲು ಪ್ರಯತ್ನಿಸುವೆ. ಆಗ ಎಲ್ಲರನ್ನೂ ಬೇಟಿಮಾಡಬಹುದು
ಅಲ್ಲದೆ, ನನಗೆ ರಿಪ್ಪನ್ ಪೇಟ್ ಸಾಗರದ ಹತ್ತಿರ ಅನ್ನುವ ಕಲ್ಪನೆಯೆ ಇಲ್ಲ,
ಅದೆಲ್ಲೊ ಕೆ ಜಿ ಎಫ್ ಹತ್ತಿರವಿರಬಹುದೇನೊ ಅಂದುಕೊಂಡಿದ್ದೆ .. :‍) :‍)
ವಂದನೆಗಳೊಡನೆ
ಪಾರ್ಥಸಾರಥಿ

ಗಣೇಶ

Fri, 01/31/2014 - 23:44

>>ಕೆಳದಿ ಪ್ರವೇಶಿಸಿ ವಾಹನ ಅರಮನೆಯ ಮುಂದೆ ನಿಲ್ಲುವಾಗಲೆ ಕವಿನಾಗರಾಜರ ನೆನಪು ಮನ ತುಂಬಿತು.
‍‍‍ಪಾರ್ಥರೆ, ಕೈಯಲ್ಲಿ ಮೊಬೈಲ್ ಇರಲಿಲ್ಲವಾ? ಒಮ್ಮೆ ಕವಿನಾಗರಾಜರಿಗೆ ಫೋನ್ ಮಾಡಬಹುದಿತ್ತಲ್ವಾ?">> ದೇವಾಲಯದ ಇತಿಹಾಸವನ್ನು ಹೇಳಲು ಅಲ್ಲಿ ಗೈಡ್ ಗಳು ಯಾರು ಸಿಗಲಿಲ್ಲ.." ಅಂತ ಚಿಂತಿಸುವ ಪ್ರಮೇಯವೇ ಬರುತ್ತಿರಲಿಲ್ಲ. ಕೆಳದಿಯ ಬಗ್ಗೆ ಕವಿನಾಗರಾಜರಿಗಿಂತ ಉತ್ತಮ ಗೈಡ್ ಯಾರಿದ್ದಾರೆ? ಬರಲಾಗದಿದ್ದರೆ ಕೆಲ ಸೂಚನೆಯಾದರೂ ಕೊಟ್ಟಿರುತ್ತಿದ್ದರು.
ಸಾಗರ/ಕೆಳದಿ ಕಡೆಹೋದರೆ ಕವಿನಾಗರಾಜರು/ಕಾಮತ್‌ರಿಗೆ, ಹಾಸನ ಕಡೆ ಹೋದರೆ ಹ.ಶ್ರೀಧರ್‌ರಿಗೆ, ಹೈದರಾಬಾದ್ ಕಡೆ ಹೋಗುವುದಿದ್ದರೆ ಶ್ರೀಧರ್‌ಜಿ, ಸಿಂಗಾಪುರ ಕಡೆಗಾದರೆ ನಾಗೇಶರು, ಅಮೇರಿಕಾಗೆ ಹೋಗುವುದಿದ್ದರೆ ಹಂಸಾನಂದಿಯವರಿಗೆ..ಹೀಗೇ ಫೋನ್ ಮಾಡಿಯೇ ಹೋಗುವುದು ಅಂತ ತೀರ್ಮಾನಿಸಿದ್ದೇನೆ. ಸದ್ಯಕ್ಕೆ ಬೆಂಗಳೂರೇ ಸುತ್ತುವುದು. :)
ಮುರ್ಡೇಶ್ವರ, ಇಡಗುಂಜಿ, ಅಪ್ಸರಕೊಂಡ, ಕೆಳದಿ ಪ್ರವಾಸ ಚೆನ್ನಾಗಿತ್ತು. ಸಾಗರಕ್ಕೆ ಹೋದರೆ ಮೈಸೂರು ಕೆಫೆಯ ಉಪಹಾರ‍...ನೋಟ್ ಮಾಡಿಕೊಂಡಿರುವೆ:)

ಗಣೇಶರೆ ನಮಸ್ಕಾರ, ನೀವು ಹೇಳಿದ್ದು ಸರಿ, ಆದರೆ ಅದೇನೊ ನಾಗರಾಜರಿಗೆ ಅಲ್ಲಿಂದ ಕಾಲ್ ಮಾಡಬಹುದು ಎಂದು ತೋಚಲೇ ಇಲ್ಲ, ಅಲ್ಲದೆ ನಾಗರಾಜರೆಂದರೆ ಹಾಸನ ಎಂದು ಮನದಲ್ಲಿ ಅಚ್ಚೊತ್ತಿದೆ ಅನ್ನಿಸುತ್ತೆ. ನೀವು ಈ ರೀತಿ ಲಿಸ್ಟ್ ಹಾಕಿದರೆ ಕಷ್ಟ ಇನ್ನು ನಾನು/ನೀವು ಟೂರ್ ಹಾಕಿಕೊಂಡು ಹೊರಟರೆ, ಅವರೆಲ್ಲ ಕಾಲ್ ಮಾಡುವರು, ನಾವು ಈವಾರ ಬೆಂಗಳೂರಿಗೆ ಬರುತ್ತಿರುವೆವು ಆದ್ದರಿಂದ ಮುಂದಿನಸಾರಿ ಸಿಗುವೆವು ಎಂದು. ನೀವು ಬರುತ್ತಿರುವುದು ತಿಳಿದರೆ, ಮೈಸೂರ್ ಕೆಫೆ ತನ್ನ ಹೆಸರು ಬದಲಾಯಿಸಿಕೊಂಡರೂ ಆಶ್ಚರ್ಯವಿಲ್ಲ :‍) :‍) :)