ಕುರಿಗಳು ಸಾರ್ ಕುರಿಗಳು..

ಕುರಿಗಳು ಸಾರ್ ಕುರಿಗಳು..

ಹೈಸ್ಕೂಲು ದಾಟಿ ಕಾಲೇಜು ಹೊಸ್ತಿಲು ಮೆಟ್ಟುವ ಹೊತ್ತಿನ ಆ ದಿನಗಳು - ಆಗೆಲ್ಲ ಟೇಪ್ರೆಕಾರ್ಡರು / ಕ್ಯಾಸೆಟ್ಟುಗಳೆ ಹೊಸತು. ರೇಡಿಯೋಗಳನ್ನು ನಿಧಾನಕ್ಕೆ ಹಿಮ್ಮೆಟ್ಟಿಸುತ್ತ ಮಾನೋ / ಸ್ಟೀರಿಯೊ ಕ್ಯಾಸೆಟ್ ಪ್ಲೇಯರುಗಳು ಆಕ್ರಮಿಸುತಿದ್ದ ಕಾಲ. ನಮ್ಮ ಎದುರು ಮನೆಯ ಆನಂದನ ಹತ್ತಿರವಿದ್ದ ಮಾನೋ ಸ್ಲೀಪಿಂಗ್ ಟೇಪ್ ರೆಕಾರ್ಡರಿನಲ್ಲಿ ಕ್ಯಾಸೆಟ್ ಹಾಡು ಹಾಕಿ ಮೊದಲಬಾರಿಗೆ ಕೇಳಿಸಿದಾಗ, ಅದ್ಭುತವೊಂದು ದೇವಲೋಕದಿಂದ ಭೂಲೋಕಕ್ಕೆ ಇಳಿದು ಬಂದ ಅನುಭವ. ರೇಡಿಯೊ ಹಾಡಿಗೆ ಹೊತ್ತು ಕಾದು ಕೇಳುತಿದ್ದವರಿಗೆ, ಬೇಕೆಂದಾಗ, ಬೇಕಾದ ಹಾಡು ಕೇಳಬಹುದಾದ ಈ ಉಪಕರಣವಿಲ್ಲದವನ ಜೀವನ ವ್ಯರ್ಥವೆನಿಸುವಷ್ಟರ ಮಟ್ಟಿಗೆ ಪ್ರಭಾವ ಬೀರಿಬಿಟ್ಟಿತು ಆ ಮೊದಲ ನೋಟ. ಮಿಕ್ಕುದ್ದೆಲ್ಲಾ ಇತಿಹಾಸ - ಮನೆಯಲ್ಲಿ ಬಂದು ಹಠ ಹಿಡಿದು, ಅತ್ತು ಕರೆದು ಹೊರಳಾಡಿ ಕೊನೆಗೊಂದು ಸ್ಟೀರಿಯೋ ಮನೆಗೆ ಕಾಲಿಡುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದೆ. ಅಲ್ಲಿಂದ ಆರಂಭವಾಯ್ತು ಕ್ಯಾಸೆಟ್ಟುಗಳ ಹಬ್ಬ - ಸಿನೆಮಾ ಹಾಡುಗಳು, ಭಕ್ತಿ ಗೀತೆಗಳು, ಹರಿಕಥೆಗಳು - ಹೀಗೆ ಸಾಲು ಸಾಲಾಗಿ ಸಂಗ್ರಹಕ್ಕೆ ಸೇರಿದ್ದವು. 

ಒಂದು ದಿನ ಪರಿಚಯದ ಕ್ಯಾಸೆಟ್ಟಂಗಡಿಯಲ್ಲಿ ಖರೀದಿಗೆ ಹೋಗಿದ್ದಾಗ, ಹೊಸತಾಗಿ ಬಿಡುಗಡೆಯಾದ ಭಾವ ಗೀತೆಗಳ ಕ್ಯಾಸೆಟ್ಟೊಂದು ಅಕಸ್ಮಾತಾಗಿ ಕಣ್ಣಿಗೆ ಬಿತ್ತು. ಬರಿ ಸಿನೆಮಾ ಹಾಡೆ ಕೇಳುತಿದ್ದ ನನಗೆ ಕುತೂಹಲವಾಗಿ ಎತ್ತಿಕೊಂಡು ನೋಡುತ್ತಿದ್ದಾಗ, ಅಂಗಡಿಯ ಹುಡುಗ " 'ನಿತ್ಯೋತ್ಸವ' ಅಂತ ಭಾವ ಗೀತೆಗಳು. ತುಂಬಾ ಚೆನ್ನಾಗಿವೆ ತೊಗೊಳ್ಳಿ ಸಾರ್" ಅಂದ. ಅವನ ಶಿಫಾರಸಿನ ಮೇಲೆ ಸರಿ ಎಂದು ಕೊಂಡು ತಂದು ತುಸು ಅನಾಸಕ್ತಿಯಿಂದಲೆ ಹಾಡಲು ಹಾಕಿದೆ. ಅಷ್ಟೆ! ಅಲ್ಲಿಂದ ಆರಂಭವಾದ ಭಾವಗೀತೆಗಳ ಮೇಲಿನ ಪ್ರೇಮ ಇಂದಿಗೂ ಅವಿರತ ಮುಂದುವರೆಯಲು ಕಾರಣ ಆ ಮೊದಲ ಕ್ಯಾಸೆಟ್ಟು ಉಂಟುಮಾಡಿದ ಆಳವಾದ ಮೊಹರು ಎಂದರೆ ತಪ್ಪಾಗಲಾರದು. 'ಜೋಗದ ಸಿರಿ ಬೆಳಕಿನಲ್ಲಿ', 'ಕುರಿಗಳು ಸಾರ್ ಕುರಿಗಳು' ' ಎಲ್ಲ ಮರೆತಿರುವಾಗ'........ ಒಂದೆ, ಎರಡೆ? ಒಂದೊಂದು ಅಚ್ಚಳಿಯದೆ ಮನದಾಳದಲ್ಲಿ ಬೇರೂರಿಬಿಡಲು ಅನಂತಸ್ವಾಮಿಯವರ ಗಾಯನವೆಷ್ಟು ಕಾರಣವೊ, ಆ ಹಾಡುಗಳ ಸಾಹಿತ್ಯವೂ ಅಷ್ಟೆ ಕಾರಣವಾಗಿತ್ತು. ಅದರಲ್ಲೂ 'ಬೆಣ್ಣೆ ಕದ್ದಾ....'  ತರದ ಪಕ್ಕಾ ಪಕ್ಕದ ಮನೆಯ ಹಾಡಂತೂ ನಿಂತಲ್ಲಿ ಕುಂತಲ್ಲಿ ಗುನುಗುವಂತಾಗಿಬಿಟ್ಟಿತ್ತು. ಯಾರಿರಬಹುದು ಈ ಸೊಗಸಾದ ಹಾಡುಗಳ ಕವಿ ಎಂದು ನೋಡಿದರೆ - ಶ್ರೀಯುತ ನಿಸಾರ ಅಹಮದ್... ಮುಸ್ಲಿಂ ಕವಿಯೊಬ್ಬರು ಇಷ್ಟು ಸೊಗಸಾಗಿ ಕನ್ನಡ ಹಾಡು ಬರೆದಿದ್ದರಲ್ಲ ಎಂದು ಅಚ್ಚರಿಯೂ ಆಯ್ತು !

ಅದಾದ ಮೇಲೆ ಅವರ ಕೆಲವು ಕವಿತೆಗಳನ್ನು ಓದುವ ಭಾಗ್ಯವೂ ಸಿಕ್ಕಿತು ಗೆಳೆಯನೊಬ್ಬನ ಕೃಪೆಯಿಂದ. ಅದರಲ್ಲಿನ ಕವಿತೆಯೊಂದರ ಮಸುಕು ನೆನಪಿಗೆ ಈಗಲೂ ನಗೆಯುಕ್ಕಿ ಬರುತ್ರದೆ - ಆತ ಪತ್ನಿಯೊಡನೊ ಎಲ್ಲೊ ಹೊರಟ ಹೊತ್ತಲ್ಲಿ, ಆಕೆ ಕನ್ನಡಿ ಮುಂದೆ ಅಂದ ಚೆಂದವಾಗಿ ಅಲಂಕರಿಸಿಕೊಳ್ಳುವುದನ್ನೆ ನೋಡುತ್ತ, ಮನದಲ್ಲಿ ಮಂಡಿಗೆ ತಿನ್ನುತ್ತ ಜತೆಯಲ್ಲಿ ಹೋಗುವಾಗ ಹೊರಗೆಲ್ಲ ಹೇಗೆ ಎದೆಯುಬ್ಬಿಸಿ ಗರ್ವದಲ್ಲಿ ನಡೆಯಬಹುದೆಂದು ಕನಸು ಕಾಣುತಿರುತ್ತಾನೆ; ಆಕೆ ಸಿದ್ದವಾಗಿ ಹೊರಡುತ್ತ, ಹೊರಗೆ ಹೋಗುವ ಮುನ್ನ ಪದ್ದತಿಯಂತೆ ಬುರುಖಾ ಹಾಕಿಕೊಂಡುಬಿಡುತ್ತಾಳೆ - ಮುಖಕ್ಕೆ ಮಾಡಿಕೊಂಡಿದ್ದ ಶೃಂಗಾರವೆಲ್ಲವನ್ನು ಅದರೊಳಗೆ ಅಡಗಿಸುತ್ತ! ಅದನ್ನು ಬರೆದ ರಸಮಯ ರೀತಿಯನ್ನು ಆಸ್ವಾದಿಸಿ ನಾವೆಲ್ಲ ಆ ಕ್ಲೈಮ್ಯಾಕ್ಸಿನ ಪತಿರಾಯನ ಪೆಚ್ಚು ಮುಖ ನೆನೆದು ನಕ್ಕಿದ್ದೆ ನಕ್ಕಿದ್ದು..

ನನಗೀಗ ಮಸುಕಾಗಿ ನೆನಪಿರುವಂತೆ ನಿತ್ಯೋತ್ಸವದ ಆ ಹಾಡುಗಳಿಗೆ ಪೂರ್ವ ವ್ಯಾಖ್ಯಾನವನ್ನು ಕೊಟ್ಟಿದ್ದವರು ಸ್ವಯಂ ಕವಿ ನಿಸಾರ ಅಹಮದರೆ ಆಗಿದ್ದರು. ಆ ಕ್ಯಾಸೆಟ್ಟಿನಿಂದ ಆರಂಭವಾದ ಕನ್ನಡ ಭಾವಗೀತೆಗಳ ಪ್ರೇಮ ಮುಂದೆ ಹೆಮ್ಮರವಾಗಿ ಬೆಳೆಯಲು ನೀರೆರೆದು ಪೋಷಿಸಿದ್ದೆ ಅದರ ಮುಖಾಂತರ. ಅದಕ್ಕೆ ಈಗಲೂ ಅದು ಅಚ್ಚಳಿಯದ ನೆನಪು. ಈ ನೆನಪು ಈಗ ಮರುಕಳಿಸಲು ಕಾರಣವಾದದ್ದು ನಾಡೋಜ ನಿಸಾರ ಅಹಮದರ ಹುಟ್ಟುಹಬ್ಬವನ್ನು ನೆನಪಿಸಿದ ಮಿಂಚಂಚೆ. ನಾಳೆ ಅಂದರೆ ಐದನೆ ತಾರೀಖು ಫೆಬ್ರವರಿ, ಅವರ ಹುಟ್ಟು ಹಬ್ಬ. ಆ ಸಂಧರ್ಭಕ್ಕೆ ಹೊಂದುವಂತೆ ಹುಟ್ಟುಹಬ್ಬದ ಶುಭಾಶಯಗಳೊಡನೆ ಕಿರುಕಾಣಿಕೆಯಾಗಿ ಈ ಕೆಳಗಿನ ಕವನ ಮತ್ತು ಈ ಬರಹ ಅರ್ಪಿತ - ಅವರು ಉಣಬಡಿಸಿದ ಕಾವ್ಯ ಲಹರಿಯ ರುಚಿಯೂಟಕ್ಕೆ, ಕಿರು ಕೃತಜ್ಞತೆಯ ಕುರುಹಾಗಿ :-)

ಸಾರ ತುಂಬಿದ ನಿಸಾರ
______________________

'ನಿಮ್ಮೊಡನಿದ್ದು ನಿಮ್ಮಂತಾಗದೆ'
ಎಂದೇಕೆ ಕೊರಗಬೇಕು ಮನದೆ ?
ನಿಸ್ಸಾರದಲೆ ಕಾವ್ಯಸಾರ ಕಟ್ಟಿದ
ನಿಮ್ಮಂತಾದರೆ ಸಾಕು ನಮ್ಮೆದೆ ! ||

ನಾಡೋಜರಾಗಿ ಗೌರವವಿಂದು
ಗರ್ವದಲಿ ನಾಡ ಧ್ವಜ ಹಿಡಿದು
ಜೋಗದ ಸಿರಿ ಬೆಳಕಲಿ ಮಿಂದು
ತರಲಿಲ್ಲವೆ ಸಹ್ಯಾದ್ರಿಗು ಮೆರುಗು ? ||

ಪ್ರಕೃತಿ ನಿತ್ಯೋತ್ಸವಕೆ ಋತುಮಾನ
ನಿಮ್ಮ ಕವಿತೆಗಿದೆಯೆ ಕಾಲಮಾನ ?
ನಿತ್ಯ ಹರಿದ್ವರ್ಣವೆ ಬರೆದಿಟ್ಟ ಶಾಯಿ
ತಂತಾನೆ ಹರಿದಳಲ್ಲಿ ಕನ್ನಡ ತಾಯಿ ||

ಬೆಣ್ಣೆ ಕದಿಯುತ ಬಾಲಕೃಷ್ಣನ ಮುದ
ತಂದಿರಲ್ಲ ಮನೆ ಮನಕೆಲ್ಲ ಯಶೋಧ
ಇಮಾಂಸಾಬಿ ಗೋಕುಲಾಷ್ಟಮಿ ಗಾದೆ
ಮೋರೆ ಮರೆಮಾಚಿಸಿದ ಕೀರ್ತಿ ನಿಮ್ಮದೆ ||

ಎಲ್ಲ ಮರೆತಿರುವಾಗ ಕಾಡದಿರೆಂದಿರಿ
ಹಾಡ ನೆನಪನು ನಮಗಂಟಿಸಿಬಿಟ್ಟಿರಿ
ಇಲ್ಲ ಸಲ್ಲದ ನೆಪವ ನಮ್ಮತ್ತ ದೂಡಿ
ತುಟಿಯಂಚಲ್ಲಿ ನಕ್ಕಿದ್ದು ನಿಮ್ಮ ಮೋಡಿ ||

ಭಾರಿ ಕೀಟಲೆ ನಿಮದು ನಮ್ಮನು ಜತೆಗೆ
ಸೇರಿಸಿಕೊಂಡೆ ಹಾಡಿದಿರಿ ಸರಸವಾಗೆ
ಸಾರುಗಳನೆಲ್ಲ ಕುರಿಯಾಗಿಸಿದ ಮುನಿಸು
ತಣಿಸಿಬಿಟ್ಟಿತಲ್ಲ ಕುರಿಗವನದಾ ಸೊಗಸು ||

'ಮನಸು ಗಾಂಧಿ ಬಜಾರು' ಹಾಡಿದವರು 
'ಭಾರತವು ನಮ್ಮ ದೇಶ' ಎಂದಾ ಜೋರು
'ಬರಿ ಮರ್ಯಾದಸ್ತರೆ' ಎಂದು ಕಾಡಿಸುತೆ
ನೀವಿತ್ತ ಕಾವ್ಯ ಸಿರಿ ನುಡಿಗಿತ್ತ ಭಾವ ಗೀತೆ ||

ಧನ್ಯವಾದಗಳೊಂದಿಗೆ /  ನಾಗೇಶ ಮೈಸೂರು

Comments

Submitted by nageshamysore Wed, 02/05/2014 - 03:19

In reply to by ಗಣೇಶ

ಗಣೇಶ್ ಜಿ, ಮತ್ತೆ ನಿಮ್ಮ ಲಿಂಕು ಚಳಕ ತೋರಿಸಿದಿರಿ - ಎಂತಹ ಒಳ್ಳೆಯ ಸಂದರ್ಶನದ ಕೊಂಡಿ! ನಿಸಾರರ ಜತೆ ಕೂತೆ ಮಾತಾಡಿದಂತೆ ಅನಿಸುವ ಸಂದರ್ಶನ. ಕೊಂಡಿಗೆ ಧನ್ಯವಾದಗಳು :-)
.
ಅಂದ ಹಾಗೆ ನಿಸಾರರ ಕವಿತೆ ಓದಿಸಿದ್ದ ನನ್ನ ಗೆಳೆಯ ದೀಪಕ್ ಬುರುಖಾ ಪದ್ಯದ ಹೆಸರು ತಿಳಿಸಿದರು (ಲೇಖನ ಬರೆದಾಗ ಹೆಸರು ನೆನಪಿರಲಿಲ್ಲ) - "ಅಮ್ಮ, ನಾನು ಮತ್ತು ಆಚಾರ" (ನಿಸಾರರ ಆಯ್ದ ಕವಿತೆಗಳು - ಎಂಬ ಕವನ ಸಂಗ್ರಹ ಪುಸ್ತಕದಲ್ಲಿ).
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by ravindra n angadi Wed, 02/05/2014 - 15:06

ನಮಸ್ಕಾರಗಳು ಸರ್,
ಹೇಗಿದ್ದೀರಿ?
ಶ್ರೀಯುತ ನಿಸಾರ ಅಹಮದ್ ಅವರಿಗೆ ನಮ್ಮ ಪರವಾಗಿಯೂ ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು, ಶ್ರೀಯುತ ನಿಸಾರ ಅಹಮದ್ ಅವರ ಗೀತೆಗಳನ್ನು ಸಂಗ್ರಹಿಸಿ ರಚಿಸಿದ ಕವನ ತುಂಬಾ ಚಿನ್ನಾಗಿ ಮೂಡಿಬಂದಿದೆ ಸರ್. ಅವರ " ಜೋಗದ ಸಿರಿ ಬೆಳಕಿನಲ್ಲಿ " ಗೀತೆಯಂತೂ ಎಷ್ಟು ಬಾರಿ ಕೇಳಿದರೂ ಬೇಸರವಾಗುವ ಪ್ರಶ್ನೆಯೇ ಎಲ್ಲ. ನಿಮ್ಮ ಕವನದ ಮೂಲಕ ಮತ್ತೊಮ್ಮೆ ಆ ಗೀತೆಯನ್ನು ಗುನುಗುವಂತೆ ಮಾಡಿದ್ದಕ್ಕೆ ಧನ್ಯವಾದಗಳು.

Submitted by nageshamysore Thu, 02/06/2014 - 03:48

In reply to by ravindra n angadi

ಪ್ರಮುಖವಾಗಿ ನಿತ್ಯೋತ್ಸವ ಕ್ಯಾಸೆಟ್ಟಿನ ಕೆಲವು ಹಾಡುಗಳನ್ನು ಬಳಸಿ ಸಿದ್ದಪಡಿಸಿದ ಲೇಖನ; ಅವು ಸಾಕಷ್ಟು ಜನರಿಗೆ ಗೊತ್ತಿರುವುದರಿಂದ ಬಹುತೇಕ ಅಷ್ಟಕ್ಕೆ ಸೀಮಿತಗೊಳಿಸಿದೆ. ತಮ್ಮ ಕಳಕಳಿಯ ಪ್ರತಿಕ್ರಿಯೆ, ಹಾರೈಕೆಗೆ ಧನ್ಯವಾದಗಳು ರವೀಂದ್ರರೆ  :-)

Submitted by H A Patil Thu, 02/06/2014 - 10:17

ನಾಗೇಶ ಮೈಸೂರು ರವರಿಗೆ ವಂದನೆಗಳು
ಕುರಿಗಳು ಸಾರ್ ಕುರಿಗಳು ಲೇಖನ ನಿತ್ಯೋತ್ಸವದ ಕವಿ ನಿಸಾರ ಅಹಮದ್ ರವರ ಕವನಗಳ ಕ್ಯಾಸೆಟ್ ಬಂದ ಕಾಲದ ವಸ್ತು ಸ್ಥಿತಿಯನ್ನು ಇಂದು ಚೆನ್ನಾಗಿ ಬಿಡಿಸಿಟ್ಟಿದ್ದೀರಿ. ಕವಿಗಳ ಕನವಗಳ ಜೊತೆಗೆ ಅವರುಗಳ ಜನಪ್ರಿಯತಗೆ ಆ ಕ್ಯಾಸೆಟ್ ಯುಗ ಒಂದು ಪ್ರಮುಖ ಕಾರಣವಾಯಿತು ಎಂಬುದನ್ನು ಮರೆಯುವಂತಿಲ್ಲ. ಸೊಗಸಾದ ಲೇಖನ ಮತ್ತಗು ಕವನ ನೀಡಿದ್ದೀರಿ ಧನ್ಯವಾದಗಳು.

Submitted by nageshamysore Sat, 02/08/2014 - 03:28

In reply to by H A Patil

ಪಾಟೀಲರೆ ನಮಸ್ಕಾರ. ಈಗ ನೋಡಿದರೆ ಹೆಚ್ಚುಕಡಿಮೆ ಕ್ಯಾಸೆಟ್ಟು ಪ್ಲೇಯರುಗಳ ಜತೆಗೆ ಆ ಕ್ಯಾಸೆಟ್ಟುಗಳೆ ಮಾಯ! ಸೀಡಿ ಡಿವೀಡಿ ಐಪಾಡ್ ಇತ್ಯಾದಿಗಳ ಕಾಲ. ಆದರೆ ಆ ಗಾನಸುಧೆ ಒಂದಲ್ಲ ಮತ್ತೊಂದು ರೂಪದಲ್ಲಿ ಹರಿಯುತ್ತಲೆ ಇರುತ್ತದೆ. ಕವಿ ಫಸಲನ್ನು ಜನರ ಹತ್ತಿರ ತಲುಪಿಸುವಲ್ಲಿ ಇವುಗಳ ಪಾತ್ರ ಗಣನೀಯ ಎನ್ನುವುದು ಸುಳ್ಳಲ್ಲ :-)