ಕಾವ್ಯನಮನ - ಜಿ.ಎಸ್. ಶಿವರುದ್ರಪ್ಪ ನೆನಪಲಿ

ಕಾವ್ಯನಮನ - ಜಿ.ಎಸ್. ಶಿವರುದ್ರಪ್ಪ ನೆನಪಲಿ

ಇತ್ತೀಚೆಗೆ ತಾನೆ ವಿಧಿವಶರಾಗಿ (23.ಡಿಸೆಂಬರ.2013) ನಮ್ಮನ್ನೆಲ್ಲಾ ಅಗಲಿದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ವಿದಾಯದ ನೆನಪು ಮಾಸುವ ಮುನ್ನವೆ ಅವರ ಹುಟ್ಟಿದ ದಿನ ಬರುತ್ತಿದೆ - ಮತ್ತೆ ನೆನಪಿನ ಹಣತೆಗೆ ಎಣ್ಣೆ ಬತ್ತಿಯಿಟ್ಟು ನಮನದ ಕಿರುಜ್ಯೋತಿಯನ್ನು ಬೆಳಗಿಸುವ ಸಲುವಾಗಿಯೇನೊ ಎಂಬಂತೆ. ನಾಳೆ ಅಂದರೆ ಏಳನೆ ಫೆಬ್ರವರಿಯಂದು ಈ ಎದೆ ತುಂಬಿ ಹಾಡುತ್ತಲೆ ಮನೆ ಮನಗಳಲ್ಲಿ ಹಣತೆ ಹಚ್ಚಿದ ಈ ಕವಿ ಮಹೋದಯರ ಜನ್ಮದಿನ. ಅವರು ನಮ್ಮನಗಲಿದ ಹೊತ್ತಿನಲ್ಲಿ ಅವರ ಕುರಿತ ಕೆಲವು ಲೇಖನಗಳು ಸಂಪದದಲ್ಲೂ ಪ್ರಕಟವಾಗಿದ್ದವು. ಹೆಚ್ಚುಕಡಿಮೆ ಒಂದೂವರೆ ತಿಂಗಳ ನಂತರ ಅವರ ಜನ್ಮದಿನ ಆಗಮಿಸಿರುವುದರಿಂದ ಅವರನ್ನು ಮತ್ತೆ ನೆನೆಯುವ ಪುಣ್ಯಕಾರ್ಯಕ್ಕೆ ಮತ್ತೊಂದು ಅವಕಾಶ. 

ಕವಿಗಳು ಸಾಮಾನ್ಯವಾಗಿ ಕಾವ್ಯರಸಿಕರ , ಜನಮಾನಸರ ಮನದಲ್ಲಿ ಹೆಚ್ಚಾಗಿ ಜೀವಂತವಿರುವುದು ಅವರ ಸ್ವಂತ ಹೆಸರಿನಿಂದಲ್ಲ - ಬದಲಿಗೆ ಅವರ ಸದಾ ಗುನುಗುಟ್ಟಿಸುವ ಕಾವ್ಯ ಗಾಯನಗಳಿಂದ. ಎಷ್ಟೋಬಾರಿ ಕವಿ ಯಾರೆಂದೂ ತಿಳಿಯದಿದ್ದರೂ ಹಾಡನ್ನು ಮೆಲುಕು ಹಾಕುವವರದೆಷ್ಟು ಮಂದಿಯೊ. ಹೀಗಾಗಿ ಅವರ ಮಹಾನ್ ಚೇತನಕ್ಕೆ ನಮಿಸಲು ಸಹ ಕವನ ಅಥವ ಗಾಯನ ರೂಪವೆ ಸೂಕ್ತ ಮಾರ್ಗವೆನಿಸುತ್ತದೆ. ಅವರ ಕುರಿತಾದ ವಿವರಣೆಗಳ , ಸಾಧನೆಗಳ ನೆನಪು ಈಗಾಗಲೆ ಸಾಕಷ್ಟು ಮಾಧ್ಯಮಗಳಲ್ಲಿ ಅನುರಣಿತಗೊಂಡಿದೆ. ಅದರ ಬದಲಿಗೆ ಅವರು ದಿವಂಗತರಾದ ಹೊತ್ತಿನಲ್ಲಿ ನಮನದ ಕುರುಹಾಗಿ ಹೆಣೆದಿದ್ದ ಪದ್ಯವೊಂದನ್ನು ಇಲ್ಲಿ ಅವರ ನೆನಪಿನ ಅಂಗಳಕಿಟ್ಟ ಕಿರುಹಣತೆಯಾಗಿ ಅರ್ಪಿಸುತ್ತಿದ್ದೇನೆ ಈ " ಕೆಲವರು ಹಚ್ಚಿದ ದೀಪ"ದ ಮೂಲಕ. 

ಕೆಲವರು ಹಚ್ಚಿದ ದೀಪ 
____________________

ಕೆಲವರು ಹಚ್ಚಿದ ದೀಪ
ಆರುವುದಿಲ್ಲ
ಯಾರೂ ಬತ್ತಿ ತೀಡುವುದಿಲ್ಲ
ಎಣ್ಣೆ ಬೇಡುವುದೂ ಇಲ್ಲ;
ಯಾವ ಮೂಲೆಯ ಮೂಲದ 
ಅಖಂಡ ಜ್ಯೋತಿಯ
ಉರಿಯಿರದೆ ಬೆಳಗೊ ಪ್ರಕಾಶ
ಬಳಸಿ ತೀರುವ ಸರಕಲ್ಲ !

ಹಚ್ಚಿಟ್ಟ ಹಣತೆಯ ಹಾದಿ
ಅವರಿಗಲ್ಲ, ಅವರಿಗಿಲ್ಲ
ಬೆಳಕಡಿಯ ಕತ್ತಲಲಿ ಬೆತ್ತಲಾಗಿ
ಕರುಕಲು ಬತ್ತಿಯಾಗಿ
ಮೈ ಕೊಬ್ಬಲೆ ಎಣ್ಣೆಯಾಗಿ
ದಾರಿ ದೀಪವಾದ ಕುರುಹು,
ಬಿಟ್ಟುಕೊಡುವುದೆ ಇಲ್ಲ -
ವಿಷಾದ ಮುಚ್ಚಿಟ್ಟ ಮುಗ್ದ ನಗೆ.

ಹಲವರದದೆ ಸ್ವರೂಪ ಸದಾ
ಮತ್ತಲವರದಕಂಟಿದ ಶಾಪ
ಮತ್ತದೆ ಕತ್ತಲ ಬೆಳಕ ಚೆಲ್ಲಾಟ
ಮೈಗೆ ಮಲ್ಲಿಗೆ ಚೆಲ್ಲಿದ್ದು ಉಂಟು,
ಮೈಲಿಗೆ ಗುಂಡಿಗೆ ತಳ್ಳಿದ್ದು ಉಂಟು;
ಅದೆ ಸ್ನಿಗ್ಧ ಮಂದಸ್ಮಿತ
ಕೊಡವುತ ಮೇಲೇಳೊ ಅವಿರತ
ಅನವರತ ಭಗೀರಥ .

ಮೌನದಲೆ
ಸದ್ದಿರದ ಬಾಣ ಬಿರುಸು
ಸುಟ್ಟು ಕತ್ತಲ ಬೆಳಕನ್ಹೆತ್ತ ಮಹರ್ಷಿ-
ಆ ದಾರಿ ಮರೆಯಾಗುವುದಿಲ್ಲ;
ಪಥ ಹೆಜ್ಜೆ ನೆರಳ ಮರೆ ಸೇರುವುದಿಲ್ಲ,
ತಮದಾವರಣವ ನುಂಗುತಲೆ
ಅನಾವರಣವಾಗುತಲೆ ಇರುವ
- ನಿತ್ಯ ನಿರಂತರ ಸಂಘರ್ಷ.

----------------------------------------------
ನಾಗೇಶ ಮೈಸೂರು, ೨೪. ಡಿಸೆಂಬರ. ೨೦೧೩
-----------------------------------------------
 

Comments

Submitted by H A Patil Fri, 02/07/2014 - 14:12

ನಾಗೇಶ ಮೈಸೂರು ರವರಿಗೆ ವಂದನೆಗಳು
ತಮ್ಮ ಈ ಲೇಖನ ಮತ್ತು ಕವನ ಜಿ.ಎಸ್.ಶಿವರುದ್ರಪ್ಪನವರ ಶುಭ ಜನ್ಮದಿನದಂದು ಒಳ್ಳೆಯ ಭಾವಪೂರ್ಣ ಕಾವ್ಯಾಂಜಲಿ ಮೂಲಕ ಸಲ್ಲಿಸಿದ ಶುಭ ಹಾರೈಕೆ. ಧನವ್ಯವಾದಗಳು

Submitted by nageshamysore Sat, 02/08/2014 - 03:32

In reply to by ಗಣೇಶ

ಗಣೇಶ್ ಜಿ, ಅವರೇ ಹಚ್ಚಿದ ಕಾವ್ಯದ ಹಣತೆಯ ಸಾಲಿಗೆ ಮತ್ತೊಂದು ಹಣತೆ ಸೇರಿಸುವ ಯತ್ನ - ಧನ್ಯವಾದಗಳು :-)