೧೭. ಲಲಿತಾ ಸಹಸ್ರನಾಮ - ಪಂಚದಶೀ ಮಂತ್ರದ ವಿವರಣೆ
ಪಂಚದಶೀ ಮಂತ್ರ
ಲಲಿತಾಂಬಿಕೆಯ ಮುಖ್ಯ ಮಂತ್ರವು ಪಂಚದಶೀ ಮಂತ್ರವಾಗಿದ್ದು ಅದು ಹದಿನೈದು ಬೀಜಾಕ್ಷರಗಳನ್ನು ಹೊಂದಿದೆ. ಒಂದು ಬೀಜವೆಂದರೆ ಅದು ಕೇವಲ ಸಂಸ್ಕೃತದ ಒಂದು ಅಕ್ಷರವಾಗಿರದೇ ಇರಬಹುದು. ಅದು ಎರಡು ಅಕ್ಷರಗಳ ಸಂಯೋಜನೆಯಿಂದ ಉಂಟಾದ ಸಂಯುಕ್ತಾಕ್ಷರವಾಗಿರಬಹುದು. ಉದಾಹರಣೆಗೆ, ಸ ಎನ್ನುವುದು ಒಂದು ಬೀಜಾಕ್ಷರವಾಗಿದ್ದು ಅದು ಒಂಟಿ ಅಕ್ಷರವಾಗಿದೆ; ಆದರೆ ’ಹ್ರೀಂ’ ಸಹ ಬೀಜಾಕ್ಷರವಾಗಿದ್ದು ಅದು ಅನೇಕ ಅಕ್ಷರಗಳನ್ನೊಳಗೊಂಡಿದೆ. ಸಂಸ್ಕೃತದಲ್ಲಿ ಪ್ರತಿಯೊಂದು ಅಕ್ಷರಕ್ಕೂ ಒಂದು ಅರ್ಥವಿದೆ. ಉದಾಹರಣೆಗೆ ಸಂಸ್ಕೃತದ ಮೊದಲ ಅಕ್ಷರವಾದ ’ಅ’ ಎನ್ನುವುದನ್ನು ತೆಗೆದುಕೊಂಡರೆ ಅದು ಅನೇಕ ಸಂಗತಿಗಳನ್ನು ಹೊರ ಹೊಮ್ಮಿಸುತ್ತದೆ (ತಿಳಿಸುತ್ತದೆ). ಅದು ‘ಓಂ’ನ ಮೂಲವಾಗಿದೆ, ಅದು ಏಕೆತೆಯನ್ನು ಸೂಚಿಸುತ್ತದೆ ಮತ್ತು ವಿನಾಶವಾಗದಿರುವಿಕೆ ಮೊದಲಾದವುಗಳನ್ನು ಸಂಕೇತಿಸುತ್ತದೆ. ಆದ್ದರಿಂದ ಬೀಜಗಳ ಅರ್ಥವನ್ನು ವಿಶ್ಲೇಷಿಸುವಾಗ ಅದನ್ನು ಬಳಸಿರುವ ಸಂದರ್ಭದ ಮೇಲೆ ಅದರ ಅರ್ಥವು ಅವಲಂಭಿಸಿರುತ್ತದೆ. ಪಂಚದಶ ಎಂದರೆ ಹದಿನೈದು. ಈ ಮಂತ್ರದಲ್ಲಿ ಹದಿನೈದು ಬೀಜಾಕ್ಷರಗಳಿರುವುದರಿಂದ ಅದನ್ನು ಪಂಚದಶೀ ಎಂದು ಕರೆಯಲಾಗಿದೆ. ಪಂಚದಶೀ ಮಂತ್ರವು ಬೀಜಾಕ್ಷರಗಳನ್ನು ಹೊಂದಿರುವ ಮೂರು ಸಾಲುಗಳನ್ನು ಒಳಗೊಂಡಿದೆ ಮತ್ತು ಪ್ರತಿಯೊಂದು ಸಾಲನ್ನು ಕೂಟ ಅಥವಾ ಗುಂಪು ಎಂದು ಕರೆಯಲಾಗಿದೆ. ಈ ಮೂರು ಕೂಟಗಳೆಂದರೆ, ವಾಗ್ಭವ ಕೂಟ, ಕಾಮರಾಜ ಕೂಟ ಅಥವಾ ಮಧ್ಯ ಕೂಟ ಮತ್ತು ಶಕ್ತಿ ಕೂಟ. ವಾಗ್ಭವ ಕೂಟವು ಲಲಿತಾಂಬಿಕೆಯ ಮುಖವನ್ನು ಪ್ರತಿನಿಧಿಸಿದರೆ, ಕಾಮರಾಜ ಕೂಟವು ದೇವಿಯ ಕುತ್ತಿಗೆ ಮತ್ತು ಸೊಂಟದವರೆಗಿನ ಭಾಗವನ್ನು ಪ್ರತಿನಿಧಿಸುತ್ತದೆ ಮತ್ತು ಕಡೆಯದಾದ ಶಕ್ತಿ ಕೂಟವು ಸೊಂಟದ ಕೆಳಗಿನ ಭಾಗವನ್ನು ಪ್ರತಿನಿಧಿಸುತ್ತದೆ. ಲಲಿತಾಂಬಿಕೆಯ ಸಂಪೂರ್ಣ ಸ್ವರೂಪವು ಈ ಮೂರು ಕೂಟಗಳಿಂದ ರಚಿಸಲ್ಪಟ್ಟಿದೆ. ಆದ್ದರಿಂದ ಪಂಚದಶೀ ಮಂತ್ರವನ್ನು ಅತ್ಯಂತ ಶಕ್ತಿಯುತವಾದುದೆಂದು ಪರಿಗಣಿಸಲು ಇದೂ ಕೂಡ ಒಂದು ಕಾರಣವಾಗಿದೆ. ಈ ಮೂರು ಕೂಟಗಳನ್ನು ಯಾವ ವಿಧವಾಗಿ ಜೋಡಿಸಲಾಗುತ್ತದೆ ಎಂದರೆ ಅದು ತಲೆಕೆಳಗಾದ ತ್ರಿಕೋಣವನ್ನು ರೂಪಿಸುತ್ತದೆ ಮತ್ತದು ಪ್ರಪಂಚದ ಮೂಲವಾಗಿರುವ ದೇವಿಯ ಯೋನಿ ಭಾಗವನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಈ ಮಂತ್ರವನ್ನು ಅತ್ಯಂತ ರಹಸ್ಯಾತ್ಮಕವಾದುದೆಂದು ಪರಿಗಣಿಸಲಾಗಿದೆ. ವಾಗ್ಭವ ಕೂಟವು ಈ ತ್ರಿಕೋಣದ ಬಲ ಪಾರ್ಶ್ವವಾಗಿದ್ದರೆ, ಕಾಮರಾಜ ಕೂಟವು ಮೇಲಿನ ಪಾರ್ಶ್ವವಾಗಿದೆ ಮತ್ತು ಶಕ್ತಿ ಕೂಟವು ಈ ತ್ರಿಕೋಣದ ಎಡ ಪಾರ್ಶ್ವವಾಗಿದೆ.
ವಾಗ್ಭವ ಕೂಟವು ಐದು ಬೀಜಾಕ್ಷರಗಳನ್ನು ಹೊಂದಿದೆ ಅವುಗಳೆಂದರೆ - ಕ-ಎ-ಈ-ಲ-ಹ್ರೀಂ ( क-ऎ-ई-ल-ह्रीं )
ಮಧ್ಯ ಕೂಟವು ಆರು ಬೀಜಾಕ್ಷರಗಳನ್ನು ಹೊಂದಿದೆ ಅವುಗಳೆಂದರೆ - ಹ-ಸ-ಕ-ಹ-ಲ-ಹ್ರೀಂ (ह्-स- क- ह्-ल- ह्रीं)
ಶಕ್ತಿ ಕೂಟವು ನಾಲ್ಕು ಬೀಜಾಕ್ಷರಗಳನ್ನು ಹೊಂದಿದೆ ಅವುಗಳೆಂದರೆ - ಸ-ಕ-ಲ-ಹ್ರೀಂ ( स-क-ल-ह्रीं )
ಹೀಗೆ ನಮಗೆ ಪಂಚದಶೀ ಮಂತ್ರದ ಹದಿನೈದು ಬೀಜಾಕ್ಷರಗಳು ದೊರೆಯುತ್ತವೆ. ಈ ಮಂತ್ರವು ಈ ಬೀಜಗಳ ಮೂಲಕ ನೇರವಾಗಿ ವ್ಯಕ್ತವಾಗುವುದಿಲ್ಲ; ಆದರೆ ಸಂಸ್ಕೃತದ ಈ ಶ್ಲೋಕದ ಮೂಲಕ ಪರೋಕ್ಷವಾಗಿ ವ್ಯಕ್ತವಾಗುತ್ತದೆ.
ಕಾಮೋ ಯೋನಿ: ಕಮಲಾ ವಜ್ರಪಾಣಿರ್ಗುಹಾಹಸಾ ಮತರಿಶ್ವಾಭ್ರಾಮಿಂದ್ರಃ |
ಪುನರ್ಗುಹಾಸಕಲ ಮಾಯಯಾ ಚ ಪುರುಚ್ಯೇಷಾ ವಿಶ್ವಮಾತಾದಿವಿದ್ಯಾ||
कामो योनि: कमला वज्रपाणिर्गुहाहसा मतरिश्वाभ्रामिन्द्रः।
पुनर्गुहासकल मायया च पुरुच्येषा विश्वमातादिविद्या॥
ಈ ಶ್ಲೋಕದಲ್ಲಿ ಪಂಚದಶೀ ಮಂತ್ರದ ಹದಿನೈದು ಬೀಜಾಕ್ಷರಗಳು ಹುದುಗಿವೆ. ಇದು ಈ ಮಂತ್ರವು ಅತ್ಯಂತ ನಿಗೂಢವಾದುದು ಎನ್ನುವುದರ ಸ್ಪಷ್ಟ ಸಂಕೇತವಾಗಿದೆ. ಈ ಮಂತ್ರದಿಂದ ಪಂಚದಶೀ ಮಂತ್ರದ ಹದಿನೈದು ಬೀಜಾಕ್ಷರಗಳನ್ನು ಹೀಗೆ ಪಡೆಯಲಾಗಿದೆ. ಕಾಮಾನ್ (ಕ), ಯೋನಿಃ (ಎ), ಕಮಲಾ (ಈ), ವಜ್ರಪಾಣಿರ್ (ಲ), ಗುಹಾ (ಹ್ರೀಂ), ಹ (ಹ), ಸಾ (ಸ), ಮತರಿಶ್ವಾ (ಕ), ಅಬ್ರಮ್ (ಹ), ಇಂದ್ರಃ (ಲ) l ಪುನರ್ (ಪುನರ್ ಎಂದರೆ ಮತ್ತೆ) ಗುಹಾ (ಹ್ರೀಂ), ಸಕಲ (ಸ, ಕ, ಲ) ಮಾಯಯಾ (ಹ್ರೀಂ) ಚ ಪುರುಚ್ಯೇಷಾ ವಿಶ್ವಮಾತಾದಿವಿದ್ಯಾ ll
ಮೊದಲನೇ ಕೂಟವು ಐದು ಬೀಜಾಕ್ಷರಗಳಾದ ಕ-ಎ-ಈ-ಲ-ಹ್ರೀಂ ಅನ್ನು ಒಳಗೊಂಡಿದೆ. ಎಲ್ಲಾ ಮೂರು ಕೂಟಗಳು ಹ್ರೀಂ ಬೀಜದಿಂದ ಕೊನೆಗೊಳ್ಳುತ್ತವೆ ಮತ್ತು ಹ್ರೀಂ ಅನ್ನು ಹೃಲ್ಲೇಖಾ ಎಂದು ಕರೆಯುತ್ತಾರೆ. ಈ ಹೃಲ್ಲೇಖಕ್ಕೆ ಬಹಳ ಮಹತ್ವವನ್ನು ಕೊಡಲಾಗಿದೆ ಮತ್ತು ಇದನ್ನು ಮಾಯಾ ಬೀಜವೆಂದೂ ಕರೆಯುತ್ತಾರೆ. ವಾಗ್ಭವ ಕೂಟವನ್ನು ಅಗ್ನಿ ಖಂಡ ಎಂದೂ ಕರೆಯಲಾಗುತ್ತದೆ ಏಕೆಂದರೆ ಇದು ಲಲಿತಾಂಬಿಕೆಯ ಜ್ಞಾನ ಶಕ್ತಿಯನ್ನು ಸೂಚಿಸುತ್ತದೆ. ಕ ಎಂದರೆ, ಸೃಷ್ಟಿಕರ್ತನಾದ ಬ್ರಹ್ಮ, ಎ ಎಂದರೆ ಜ್ಞಾನದ ಅಧಿದೇವತೆಯಾದ ಸರಸ್ವತೀ. ಈ ಎಂದರೆ ಲಕ್ಷ್ಮೀ, ಲ ಎಂದರೆ ಇಂದ್ರ ಮತ್ತು ಹ್ರೀಂ ಎಂದರೆ ಶಿವ ಮತ್ತು ಶಕ್ತಿಯರ ಐಕ್ಯವಾಗುವಿಕೆ. ಕ ಬೀಜವು ಕಾಮ ಕಲಾ ಬೀಜವಾದ ಕ್ಲೀಂ (क्लीं) ಎನ್ನುವುದರ ಮೂಲವಾಗಿದೆ. ಕ ಎನ್ನುವುದು ಶಾಂತಿ ಮತ್ತು ಅಭಿವೃದ್ಧಿಯನ್ನು ಸಾಧಕನಿಗೆ ಕೊಡಮಾಡುತ್ತದೆ. ಮುಂದಿನ ಬೀಜವಾದ ಎ ಎನ್ನುವುದು ಸಾಧಕನ ದುರಾದೃಷ್ಟವನ್ನು ನಿರ್ಭಂದಿಸುತ್ತದೆ. ಈ ಎನ್ನುವುದು ಐಶ್ವರ್ಯ ಮತ್ತು ಎಲ್ಲಾ ವಿಧವಾದ ಒಳಿತನ್ನು ಸಾಧಕನಿಗೆ ಕೊಡಮಾಡುತ್ತದೆ. ಲ ಬೀಜಾಕ್ಷರವು ಸಾಧಕನಿಗೆ ಜಯವನ್ನು ತಂದು ಕೊಡುತ್ತದೆ. ಆದ್ದರಿಂದ ಮೊದಲ ನಾಲ್ಕು ಬೀಜಾಕ್ಷರಗಳು ಶಾಂತಿ, ಅಭಿವೃದ್ಧಿ, ದುರದೃಷ್ಟವನ್ನು ನಿವಾರಿಸುವುದು, ಮಂಗಳವನ್ನುಂಟು ಮಾಡುವುದು ಮತ್ತು ಇಂದ್ರನಿಗಿರುವಂತಹ ಒಂದು ಪದವಿಯನ್ನು ಕೊಡಮಾಡುತ್ತವೆ. ಇದರ ಅರ್ಥವೇನೆಂದರೆ ಸಾಧಕನು ಕೈಗೊಳ್ಳುವ ಎಲ್ಲಾ ಕಾರ್ಯಗಳಲ್ಲಿ ಅವನಿಗೆ ಜಯವು ದೊರೆಯುತ್ತದೆ. (ಇಂದ್ರನು ದೇವತೆಗಳ ಮುಖ್ಯಸ್ಥನಾಗಿದ್ದು ಅವನು ದಾನವರೊಂದಿಗೆ ಕೈಗೊಳ್ಳುವ ಎಲ್ಲಾ ಯುದ್ಧಗಳಲ್ಲಿ ವಿಜಯವನ್ನು ಸಾಧಿಸುತ್ತಾನೆ).
ಹ್ರೀಂ ಎನ್ನುವುದು ಹನ್ನೆರಡು ಅಕ್ಷರಗಳಿಂದ ಮಾಡಲ್ಪಟ್ಟಿದೆ. ಹ+ರ+ಈ+ಮ ಮತ್ತು ಒಂದು ಬಿಂದು. ಬಿಂದು ಎನ್ನುವುದು ಮ ಅಕ್ಷರದ ಮೇಲಿನ ಒಂದು ಚುಕ್ಕೆಯಾಗಿದೆ. ಆದರೆ ಇದು ಕೇವಲ ಚುಕ್ಕೆಯಾಗಿಲ್ಲ. ಈ ಚುಕ್ಕೆಯು ಅರ್ಧಚಂದ್ರ, ರೋಧಿನೀ, ನಾದ, ನಾದಾಂತ, ಶಕ್ತಿ, ವ್ಯಾಪಿಕಾ, ಸಮನಾ ಮತ್ತು ಉನ್ಮನೀ ಇವುಗಳನ್ನು ಒಳಗೊಂಡಿದೆ. ಬಿಂದುವಿನಿಂದ ಪ್ರಾರಂಭಿಸಿ ಈ ಎಂಟನ್ನು ಸೇರಿಸಿದರೆ ಅದು ಒಟ್ಟು ಒಂಭತ್ತು ವಸ್ತುಗಳುಳ್ಳ ನಾದವಾಗುತ್ತದೆ. ಈ ನಾದವು ಒಂದರ ಮೇಲೆ ಒಂದಿರುವ V ಆಕಾರದ ಎರಡು ಸಂಕೇತಗಳನ್ನು ಹೊಂದಿದೆ. (ಒಂದೊಂದು V ಸಂಕೇತಕ್ಕೆ ಎರಡು ಗೆರೆಗಳಿವೆ ಮತ್ತು ಎರಡು Vಗಳು ಒಟ್ಟು ನಾಲ್ಕು ಗೆರೆಗಳನ್ನು ಒಳಗೊಂಡಿವೆ) ಮತ್ತು ಈ ಎರಡು V ಸಂಕೇತಗಳ ತೆರೆದ ಭಾಗದ ಮೇಲೆ ಒಂದೊಂದು ಚುಕ್ಕೆಯಿದ್ದು; ಎರಡು Vಗಳಿಂದ ನಾಲ್ಕು ಚುಕ್ಕೆಗಳಿರುತ್ತವೆ ಮತ್ತು ಆ ನಾಲ್ಕು ಚುಕ್ಕೆಗಳ ಮೇಲುಗಡೆ ಮತ್ತೊಂದು ಚುಕ್ಕೆಯನ್ನು ಇರಿಸಲಾಗಿರುತ್ತದೆ. ಇದು ಹ್ರೀಂ ಬೀಜಾಕ್ಷರದ ಸಂಯೋಜನೆಯಾಗಿದೆ. ಈ Vಗಳು ಮತ್ತು ಚುಕ್ಕೆಗಳಿಗಿಂತ ಹೆಚ್ಚಾಗಿ ಉಚ್ಛಾರಣೆಯು ಮಹತ್ವದ್ದಾಗಿದೆ. ಪ್ರತಿಯೊಂದು ಬೀಜಾಕ್ಷರವನ್ನು ಉಚ್ಛಾರಣೆ ಮಾಡುವುದಕ್ಕೆ ಒಂದು ನಿಗದಿತ ಪ್ರಮಾಣದ ಸಮಯವನ್ನು (ಕಾಲಮಾನವನ್ನು) ವಿಧಿಸಲಾಗಿದೆ. ಈ ಒಟ್ಟು ಕೂಟವನ್ನು ಹನ್ನೊಂದು ಮಾತ್ರಾ ಸಮಯದೊಳಗೆ ಉಚ್ಛರಿಸಬೇಕು (ಒಂದು ಮಾತ್ರಾ ಸಮಯವು ಒಂದು ಬಾರಿ ಕಣ್ಣೆವೆಯಿಕ್ಕುವ ಸಮಯಕ್ಕೆ ಸಮಾನವಾದುದು ಮತ್ತು ಇದು ಒಂದು ಸೆಕೆಂಡಿಗಿಂತಲೂ ಕಡಿಮೆ ಅವಧಿಯದ್ದಾಗಿದೆ). ಪ್ರತಿಯೊಂದು ಬೀಜಾಕ್ಷರಗಳನ್ನು ಉಚ್ಛರಿಸಲೂ ಸಹ ನಿರ್ಧಿಷ್ಠ ಮಾರ್ಗಸೂಚಿಗಳಿವೆ. ವಾಗ್ಭವ ಕೂಟವನ್ನು ಸಂಪೂರ್ಣವಾಗಿ ಅಗ್ನಿ ಎಂದು ಧ್ಯಾನಿಸುತ್ತಾ ಅದನ್ನು ಮೂಲಾಧಾರ ಚಕ್ರದಿಂದ ಪ್ರಾರಂಭಿಸಿ ಅನಾಹತ ಚಕ್ರದಲ್ಲಿ ಅಂತ್ಯಗೊಳಿಸಬೇಕು.
ಎರಡನೆಯ ಕೂಟವು ಕಾಮರಾಜ ಕೂಟ ಅಥವಾ ಮಧ್ಯ ಕೂಟವೆಂದು ಕರೆಯಲಾಗಿದ್ದು ಇದನ್ನು ಲಲಿತಾಂಬಿಕೆಯ ಕುತ್ತಿಗೆಯಿಂದ ಸೊಂಟದ ಭಾಗದವರೆಗೆ ಧ್ಯಾನಿಸಬೇಕು. ಈ ಕೂಟಕ್ಕೆ ಅತ್ಯಧಿಕ ಸಂಖ್ಯೆಯ ಬೀಜಾಕ್ಷರಗಳು - ಆರು ಇವೆ. ಅವುಗಳೆಂದರೆ ಹ-ಸ-ಕ-ಹ-ಲ-ಹ್ರೀಂ (ह्-स- क- ह्-ल- ह्रीं). ಇವುಗಳಲ್ಲಿ ಕ, ಲ ಮತ್ತು ಹ್ರೀಂಗಳ ಕುರಿತಾಗಿ ಮೊದಲನೇ ಕೂಟದಲ್ಲಿ ಚರ್ಚಿಸಲಾಗಿದೆ ಇದರಲ್ಲಿ ಕೇವಲ ಎರಡು ಹೊಸ ಬೀಜಾಕ್ಷರಗಳಿವೆ. ಈ ಎರಡು ಹೊಸ ಬೀಜಾಕ್ಷರಗಳಲ್ಲಿ ಹ ಎನ್ನುವುದು ಎರಡು ಬಾರಿ ಪುನರಾವೃತವಾಗಿದೆ. ಮೊದಲನೇ ಹ ಅಕ್ಷರವು ಶಿವನಾದರೆ ಎರಡನೆಯದು ಆಕಾಶ ತತ್ವವನ್ನು ಸೂಚಿಸುತ್ತದೆ (ಸೌಂದರ್ಯ ಲಹರಿಯ ೩೨ನೇ ಸ್ತೋತ್ರವು ಈ ಎರಡನೇ ಹ ಬೀಜಾಕ್ಷರವನ್ನು ಸೂರ್ಯನೆಂದು ಉಲ್ಲೇಖಿಸುತ್ತದೆ) ಮತ್ತು ಈ ಕೂಟದಲ್ಲಿರುವ ಸ ಅಕ್ಷರವು ವಿಷ್ಣುವನ್ನು ಸೂಚಿಸುತ್ತದೆ. ಆದರೆ ಪಂಚಭೂತಗಳ ಸಂಕೇತಾಕ್ಷರಗಳಲ್ಲಿ ಸ ಎನ್ನುವುದು ವಾಯು ತತ್ವವನ್ನು ಸೂಚಿಸುತ್ತದೆ. ಹ ಬೀಜವನ್ನು ನಪುಂಸಕ ಬೀಜವೆಂದೂ ಕರೆಯಲಾಗಿದೆ; ಬಹುಶಃ ಈ ಕಾರಣದಿಂದಾಗಿಯೇ ಹ್ರೀಂ ಬೀಜವು ಶಿವ-ಶಕ್ತಿಯರ ಐಕ್ಯತೆಯನ್ನು ಸೂಚಿಸುತ್ತದೆ. ಮೊದಲನೇ ಕೂಟದಲ್ಲಿ ಬ್ರಹ್ಮನನ್ನು ಹೆಸರಿಸಲಾಗಿದೆ, ಏಕೆಂದರೆ ಮೊದಲನೇ ಕೂಟವು ಸೃಷ್ಟಿಯನ್ನು ಸೂಚಿಸುತ್ತದೆ. ಸ್ಥಿತಿಪಾಲನೆಯ ಈ ಕೂಟದಲ್ಲಿ ವಿಷ್ಣುವನ್ನು ಹೆಸರಿಸಲಾಗಿದೆ, ಏಕೆಂದರೆ ಅವನು ಸ್ಥಿತಿಕರ್ತನಾಗಿದ್ದಾನೆ.
ಈ ಕೂಟವನ್ನು ಹನ್ನೊಂದೂವರೆ (ಹನ್ನೊಂದು ಮತ್ತು ಅರ್ಧ) ಮಾತ್ರಾ ಸಮಯದೊಳಗೆ ಉಚ್ಛರಿಸಬೇಕು. ಈ ಕೂಟದ ಧ್ಯಾನವನ್ನು ಅನಾಹತ ಚಕ್ರದಿಂದ ಪ್ರಾರಂಭಿಸಿ ಆಜ್ಞಾ ಚಕ್ರದಲ್ಲಿ ಅಂತ್ಯಗೊಳಿಸಬೇಕು; ಮತ್ತು ಧ್ಯಾನಿಸುವಾಗ ಲಕ್ಷ್ಯಾಂತರ ಸೂರ್ಯರ ಪ್ರಭೆಗೆ ಸಮಾನವಾದ ಬೆಳಕನ್ನು ಕಲ್ಪಿಸಿಕೊಳ್ಳಬೇಕು. ಈ ಕೂಟವನ್ನು ಸೂರ್ಯ ಖಂಡವೆಂದೂ ಸಹ ಕರೆಯಲಾಗಿದ್ದು ಈ ಕೂಟವು ಪರಬ್ರಹ್ಮದ ಎರಡನೇ ಕ್ರಿಯೆಯಾದ ಸ್ಥಿತಿಪಾಲನೆಯನ್ನು ಒಳಗೊಂಡಿದೆ. ಸ್ಥಿತಿಪಾಲನೆಯೊಂದಿಗೆ ಈ ಕೂಟವು ಸಂಭಂದ ಹೊಂದಿರುವುದರಿಂದ ಆಸೆಯು ಈ ಕೂಟದೊಂದಿಗೆ ತಳುಕು ಹಾಕಿಕೊಂಡಿದೆ.
ಮೂರನೆಯ ಮತ್ತು ಕಡೆಯದಾದ ಶಕ್ತಿ ಕೂಟವು ಕೇವಲ ನಾಲ್ಕು ಬೀಜಾಕ್ಷರಗಳನ್ನು ಒಳಗೊಂಡಿದೆ. ಈ ಕೂಟವನ್ನು ಲಲಿತಾಂಬಿಕೆಯ ಸೊಂಟ ಮತ್ತು ಪಾದಗಳ ಮಧ್ಯಭಾಗದ ಮೇಲೆ ಧ್ಯಾನವನ್ನು ಕೇಂದ್ರೀಕರಿಸುತ್ತಾ ಕೈಗೊಳ್ಳಬೇಕು. ನಾಲ್ಕು ಬೀಜಾಕ್ಷರಗಳೆಂದರೆ ಸ-ಕ-ಲ-ಹ್ರೀಂ ( स-क-ल-ह्रीं ). ಮೊದಲನೇ ಕೂಟದಲ್ಲಿ ಐದು ಬೀಜಾಕ್ಷರಗಳಿದ್ದರೆ, ಎರಡನೇ ಕೂಟದಲ್ಲಿ ಆರು ಮತ್ತು ಮೂರನೇ ಕೂಟದಲ್ಲಿ ನಾಲ್ಕು ಬೀಜಾಕ್ಷರಗಳಿವೆ. ಬಹುಶಃ ಇದು ಸ್ಥಿತಿಪಾಲನೆಯು ಅತ್ಯಂತ ಕಷ್ಟದಾಯಕವಾದುದು ಮತ್ತು ವಿನಾಶವು ಅತ್ಯಂತ ಸುಲಭವಾದದ್ದು ಎನ್ನುವುದನ್ನು ಸೂಚಿಸುತ್ತದೆ. ವಾಗ್ಭವ ಕೂಟವು ಸೂಕ್ಷ್ಮರೂಪದ ಬುದ್ಧಿಯನ್ನು ಸೂಚಿಸಿದರೆ, ಮಧ್ಯದ ಕಾಮರಾಜ ಕೂಟವು ಶೌರ್ಯ, ಐಶ್ವರ್ಯ, ಕೀರ್ತಿ, ಮೊದಲಾದವುಗಳ ಆಧಿಕ್ಯತೆಯನ್ನು ಸೂಚಿಸುತ್ತದೆ ಮತ್ತು ಮೂರನೆಯ ಕೂಟವಾದ ಶಕ್ತಿ ಕೂಟವು ಹಿಂದಿನೆರೆಡು ಕೂಟಗಳ ಅರ್ಥವನ್ನು ವಿಸ್ತಾರಗೊಳಿಸುತ್ತದೆ.
ಈ ಶಕ್ತಿ ಕೂಟದಲ್ಲಿ ಮಧ್ಯ ಕೂಟದಲ್ಲಿರುವ ಎರಡು ಹ ಬೀಜಾಕ್ಷರಗಳನ್ನು ತೆಗೆದು ಹಾಕಲಾಗಿದೆ ಎನ್ನುವುದನ್ನು ಗಮನಿಸಬಹುದು. ಈ ಕೂಟವನ್ನು ಎಂಟೂವರೆ ಮಾತ್ರಾ ಕಾಲದ ಅವಧಿಯಲ್ಲಿ ಉಚ್ಛರಿಸಬೇಕು. ಸಂಪೂರ್ಣ ಪಂಚದಶೀ ಮಂತ್ರವನ್ನು ಮೂವತ್ತೊಂದು ಮಾತ್ರಾ ಸಮಯದಲ್ಲಿ ಉಚ್ಛರಿಸಬೇಕು. ಒಂದು ವೇಳೆ ಪಂಚದಶೀ ಮಂತ್ರವನ್ನು ಕೂಟಗಳ ಮಧ್ಯದಲ್ಲಿ ಸಮಯವನ್ನು ಬಿಡದೆ ನಿರಂತರವಾಗಿ ಜಪಿಸಿದರೆ ಇದನ್ನು ಕೇವಲ ಇಪ್ಪತ್ತೊಂಬತ್ತು ಮಾತ್ರಾ ಕಾಲದಲ್ಲಿ ಉಚ್ಛರಿಸಬೇಕು. ಆದರೆ ಮಂತ್ರವನ್ನು ಮಾನಸಿಕವಾಗಿ ಉಚ್ಛರಿಸುವಾಗ ಮಾತ್ರಾ ಪ್ರಮಾಣವು ಅನ್ವಯಿಸುವುದಿಲ್ಲ. ಈ ಮಂತ್ರವನ್ನು ಲಕ್ಷ್ಯಾಂತರ ಚಂದ್ರರ ಪ್ರಭೆಯನ್ನು ಕಲ್ಪಿಸಿಕೊಂಡು; ಅನಾಹತ ಚಕ್ರದಿಂದ ಧ್ಯಾನವನ್ನು ಪ್ರಾರಂಭಿಸಿ ಹಣೆಯ ಮಧ್ಯದಲ್ಲಿ ಅಂತ್ಯಗೊಳಿಸಬೇಕು. ಅನಾಹತ ಚಕ್ರದಿಂದ ಪ್ರಾರಂಭಿಸಿ ಹಣೆಯ ಮಧ್ಯ ಭಾಗದವರೆಗೆ ಸಾಗುವಲ್ಲಿ ಒಂಭತ್ತು ಹಂತಗಳಿವೆ. ಈ ಒಂಭತ್ತು ಹಂತಗಳು ಇದುವರೆಗೆ ಹ್ರೀಂನ ಬಿಂದುವನ್ನು ಕುರಿತಾದ ಚರ್ಚೆಯಲ್ಲಿ ಹೆಸರಿಸಿದ ನಾದದ ಒಂಭತ್ತು ಅಂಶಗಳು. ಈ ಕೂಟವನ್ನು ಚಂದ್ರ ಖಂಡವೆಂದು ಕರೆಯಲಾಗಿದ್ದು ಇದು ಪರಬ್ರಹ್ಮದ ಮೂರನೆಯ ಕ್ರಿಯೆಯಾದ ಲಯವನ್ನು ಪ್ರತಿನಿಧಿಸುತ್ತದೆ. ಲಯ ಅಥವಾ ವಿನಾಶವು ಲ ಬೀಜಾಕ್ಷರದಿಂದ ಸೂಚಿಸಲ್ಪಟ್ಟಿದೆ ಇದು ವಿನಾಶಕಾರಕ ಆಯುಧಗಳಾದ ವಜ್ರಾಯುಧ, ಚಕ್ರ (ಬಹುಶಃ ವಿಷ್ಣುವಿನ ಸುದರ್ಶನ ಚಕ್ರ), ಶಿವನ ತ್ರಿಶೂಲ ಮತ್ತು ವಿಷ್ಣುವಿನ ಗದೆ ಇವುಗಳನ್ನು ಸೂಚಿಸುತ್ತದೆ. ಪಂಚದಶೀ ಮಂತ್ರದಲ್ಲಿ ಮೂರು ಹ್ರೀಂಗಳಿದ್ದು ಅವುಗಳು ಪ್ರತ್ಯೇಕವಾಗಿ ಸೃಷ್ಟಿ, ಸ್ಥಿತಿ ಮತ್ತು ಲಯವನ್ನು ಪ್ರತಿನಿಧಿಸುತ್ತವೆ.
ಶಂಕರಾಚಾರ್ಯರು ಸಹ ಪಂಚದಶೀ ಮಂತ್ರದ ಈ ಬೀಜಾಕ್ಷರಗಳ ಕುರಿತಾಗಿ ನಿಗೂಢವಾದ ರೀತಿಯಲ್ಲಿ ಸೌಂದರ್ಯ ಲಹರಿಯ ೩೨ನೇ ಸ್ತೋತ್ರದಲ್ಲಿ ವಿವರಿಸುತ್ತಾರೆ. ಎರಡನೇ ಕೂಟದಲ್ಲಿರುವ ಎರಡು ಹ ಬೀಜಗಳಲ್ಲಿ ಒಂದನ್ನು ಶಂಕರರು ಆಕಾಶದ ಬದಲಿಗೆ ಅದು ಸೂರ್ಯನನ್ನು ಸೂಚಿಸುತ್ತದೆ ಎಂದು ಹೇಳುತ್ತಾರೆ; ಆದ್ದರಿಂದ ವಿಶ್ಲೇಷಣೆಗಳು ಒಬ್ಬ ಪಂಡಿತರಿಗೆ ಹೋಲಿಸಿದರೆ ಮತ್ತೊಬ್ಬರಿಗೆ ಭಿನ್ನವಾಗಿರುತ್ತವೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೂ ಇದೆ, ಅದೇನೆಂದರೆ ಒಂದು ಬಾರಿ ಪಂಚದಶೀ ಮಂತ್ರವನ್ನು ಉಚ್ಛರಿಸುವುದು ಮೂರು ಪೂರ್ಣಗಾಯತ್ರೀ ಮಂತ್ರವನ್ನು ಉಚ್ಛರಿಸುವುದಕ್ಕೆ ಸಮಾನವಾದುದು. ಪೂರ್ಣ ಗಾಯತ್ರೀ ಮಂತ್ರವೆಂದರೆ ’ಪರೋ ರಜಸೇ ಸಾವದೋಂ’ ಎನ್ನುವ ಕೊನೆಯ ಸಾಲನ್ನು ಈಗಿರುವ ಮೂರು ಸಾಲುಗಳಿಗೆ ಸೇರಿಸುವುದಾಗಿದೆ.
******
ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ PAÑCADAŚĪ MANTRA - पञ्चदशी मन्त्र http://www.manblunder.com/2012/04/pancadasi-mantra-panchadashi-mantra.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ.
Comments
ವಿವರಗಳು ಚೆನ್ನಾಗಿದೆ, ಹಾಗೆ
ವಿವರಗಳು ಚೆನ್ನಾಗಿದೆ, ಹಾಗೆ ಬಾಷಾ0ತರವು ಚೆನ್ನಾಗಿದೆ
In reply to ವಿವರಗಳು ಚೆನ್ನಾಗಿದೆ, ಹಾಗೆ by partha1059
ಧನ್ಯವಾದಗಳು, ಪಾರ್ಥರೆ.
ಧನ್ಯವಾದಗಳು, ಪಾರ್ಥರೆ.
ಉ: ೧೭. ಲಲಿತಾ ಸಹಸ್ರನಾಮ - ಪಂಚದಶೀ ಮಂತ್ರದ ವಿವರಣೆ
ಶ್ರೀಧರರೆ ನಮಸ್ಕಾರ. ತಾವಿನ್ನು ಬಿಜಿಯೆಂದು ಕಾಣುತ್ತದೆ - ಸೇರಿಸಿದವುಗಳ ಪರಿಷ್ಕರಣೆಗೆ ಕಾಯದೆ ಬಿಟ್ಟುಹೋದದ್ದನ್ನೆಲ್ಲ ಸೇರಿಸಿಬಿಡುತ್ತಿದ್ದೇನೆ, ಸಮಯವಾದಾಗಲೆಲ್ಲ. ಈ ಕೆಳಗಿನ ಪಂಚದಶಿ ಮಂತ್ರದ ಕಂತು ತಮ್ಮ ಅವಗಾಹನೆಗೆ :-)
.
೧೭. ಲಲಿತಾ ಸಹಸ್ರನಾಮದ ವಿವರಣೆ
.
೧೭. ಲಲಿತಾ ಸಹಸ್ರನಾಮ - ಪಂಚದಶೀ ಮಂತ್ರದ ವಿವರಣೆ
_____________________________________
.
ಪಂಚದಶೀ ಮಂತ್ರ
.
ಹದಿನೈದು ಬೀಜಾಕ್ಷರ ಸಾರ, ಹೆಸರು ಪಂಚದಶೀ ಮಂತ್ರ
ಲಲಿತಾಂಬಿಕೆ ಓಲೈಕೆಗೆ, ಪ್ರಮುಖ ಆರಾಧನೆಯದಿ ತಂತ್ರ
ಸಂಸ್ಕೃತ ಬೀಜಾಕ್ಷರ ಏಕಾನೇಕ ಅಕ್ಷರ ಕೂಟ ಅನೇಕಾರ್ಥ
ಸಂಧರ್ಭಾನುಸಾರ ವಿಶ್ಲೇಷಣೆ, ಗೂಢಾರ್ಥ ಕಟ್ಟಿದ ಸಂಕ್ಷಿಪ್ತ ||
.
'ಸ' ಒಂಟಿ ಏಕಾಕ್ಷರವಿದ್ದಂತೆ, 'ಹ್ರೀಂ' ಜಂಟಿಯ ಬೀಜಾಕ್ಷರ
'ಓಂ' ಮೂಲವಿದ್ದಂತೆ 'ಅ', ಏಕತೆ ಅವಿನಾಶಿ ಸಂಕೇತ ಸ್ವರ
ಮೂರು ಸಾಲಲಿಟ್ಟ ಬೀಜಾಕ್ಷರ, ಪ್ರತಿಸಾಲಿನ ಗುಂಪು ಕೂಟ
ವಾಗ್ಭವ, ಮಧ್ಯ / ಕಾಮರಾಜ, ಶಕ್ತಿ ಕೂಟ ಹೆಸರಲಿ ಮೂರ್ತ ||
.
ವಾಗ್ಭವ ಲಲಿತಾಂಬಿಕೆ ಮುಖ, ಕಾಮರಾಜ ಕೊರಳಿಂದ ನಡು
ಶಕ್ತಿ ಕೂಟ ನಡು ಕೆಳಗೆ, ತನು ಬಚ್ಚಿಟ್ಟವೆ ಬ್ರಹ್ಮಾಂಡದ ಜಾಡು
ತ್ರಿಕೂಟದೆ ದೇವಿ ಸಂಪೂರ್ಣ ಸ್ವರೂಪ, ಶೃಂಗ ತಳದ ತ್ರಿಭುಜ
ವಾಗ್ಭವ ಬಲ, ಶಕ್ತಿ ಎಡ, ಕಾಮರಾಜ ಮೇಲ್ಪಾರ್ಶ್ವ ಯೋನಿಜ ||
.
ಪ್ರಪಂಚಮೂಲ ದೇವಿ ಯೋನಿ ಸಂಕೇತ, ರಹಸ್ಯಾತ್ಮಕ ಮಂತ್ರ
ಪಂಚಬೀಜಾಕ್ಷರಿ ವಾಗ್ಭವಕೂಟ 'ಕ-ಎ-ಈ-ಲ-ಹ್ರೀಂ'ಗಳ ಸೂತ್ರ
ಷಡಕ್ಷರಿ ಮಧ್ಯಕೂಟ 'ಹ-ಸ-ಕ-ಹ-ಲ-ಹ್ರೀಂ' ಬೀಜಾಕ್ಷರ ದೀಕ್ಷಾ
ಚತುರ್ಬೀಜಾಕ್ಷರ ಶಕ್ತಿಕೂಟ 'ಸ-ಕ-ಲ-ಹ್ರೀಂ' ಶ್ಲೋಕದೆ ಪರೋಕ್ಷ ||
.
ಶ್ಲೋಕದಲಿ ಹುದುಗಿಟ್ಟ ನಿಗೂಢ ಪಂಚದಶೀ ಬೀಜಾಕ್ಷರ ಅನಾವರಣ ಪೂರ್ಣಂ
ಕಾಮಾನ್ 'ಕ' ಯೋನಿಃ 'ಎ' ಕಮಲಾ 'ಈ' ವಜ್ರಪಾರ್ಣಿ 'ಲ' ಗುಹಾ 'ಹ್ರೀಂ'
ಹ 'ಹ' ಸಾ 'ಸ' ಮತರಿಶ್ವಾ 'ಕ' ಅಬ್ರಮ್ 'ಹ' ಇಂದ್ರಃ 'ಲ' ಪುನರ್ಗುಹಾ 'ಹ್ರೀಂ'
ವಿಶ್ವಮಾತಾದಿ ವಿದ್ಯಾ ಕೊನೆ ಸಾಲಲಿ ಸಕಲ 'ಸ' 'ಕ' 'ಲ' ಮಾಯಯಾ 'ಹ್ರೀಂ' ||
.
ಪಂಚದಶೀ ಪ್ರಥಮ ವಾಗ್ಭವಕೂಟ ಕ-ಎ-ಈ-ಲ-ಹ್ರೀಂ ಅಂತ್ಯ ಹ್ರೀಂ
ಹೃಲ್ಲೇಖಾ 'ಹ್ರೀಂ' ಮಾಯಾಬೀಜ ಮಹತ್ತರ, ವಾಗ್ಭವ ಅಗ್ನಿ ಖಂಡಂ
ಜ್ಞಾನಶಕ್ತಿ ಲಲಿತಾಂಬಿಕ ಸಂಕೇತ, 'ಕ' ಬ್ರಹ್ಮ 'ಎ' ಜ್ಞಾನಿನಿ ಸರಸ್ವತೀ
'ಈ' ಲಕ್ಷ್ಮೀ 'ಲ' ಇಂದ್ರ 'ಹ್ರೀಂ' ಶಿವಶಕ್ತಿ ಸಂಗಮ ಸೂಚಿಸುವ ಸರತಿ ||
.
ಕಾಮಕಲಾ 'ಕ್ಲೀಂ' ಮೂಲ 'ಕ', ಸಾಧಕನಿಗೀವ ಶಾಂತಿ, ಅಭಿವೃದ್ಧಿ
ದುರಾದೃಷ್ಟ ನಿರ್ಬಂಧಕೆ 'ಎ' ಐಶ್ವರ್ಯಾದಿ ಸುಫಲ 'ಈ' ಸಮೃದ್ಧಿ
ಸಾಧಕ ಜಯ ಬೀಜಾಕ್ಷರ 'ಲ', ಸಂಕಲನ ಇಂದ್ರ ಸಮಾನ ಪದವಿ
ವಾಗ್ಭವಕೂಟ ಜ್ಞಾನಶಕ್ತಿಯಿಂ ಸಾಧಕಸಕಲಕಾರ್ಯ ಜಯಿಸೆ ದೇವಿ ||
.
ದ್ವಾದಶಾಕ್ಷರ 'ಹ್ರೀಂ' 'ಹ' 'ರ' 'ಈ' 'ಮ' ಮೇಲ್ಚುಕ್ಕೆ ಅಷ್ಟಕೆ ನವನಾದ ದನಿ
ಅರ್ಧಚಂದ್ರ ರೋಧಿನೀ ನಾದ ನಾದಾಂತ ಶಕ್ತಿ ವ್ಯಾಪಿಕಾ ಸಮನಾ ಉನ್ಮನೀ
ನಾದ ಸಂಕೇತ ಶೃಂಗದಿ ನಿಂತೆರಡು ದ್ವಿಬಾಹು ತ್ರಿಭುಜಕೆ, ಮೇಲ್ಚತುರ್ಬಿಂದು
ಮೇಲ್ಮತ್ತೊಂದು ಚುಕ್ಕೆ 'ಹ್ರೀಂ' ರಚನೆ, ಏಕದಶ ಮಾತ್ರಾಕಾಲ ಉಚ್ಛಾರಶುದ್ಧ ||
.
ಪ್ರತಿ ಬೀಜಾಕ್ಷರ ಉಚ್ಛಾರಣೆ ತದ್ಭಾವ, ನಿರ್ದಿಷ್ಠವಿಹ ಮಾರ್ಗದ ಸೂಚ್ಯ
ವಾಗ್ಭವಕೂಟಾಗ್ನಿ ಧ್ಯಾನ, ಮೂಲಾಧಾರದಿಂ ಅನಾಹತ ಚಕ್ರದಿ ಅಂತ್ಯ
ಅಂತ್ಯದೆ ಆರಂಭ ಮಧ್ಯಕೂಟ, ಕೊರಳಿಂ-ನಡುವಿನಲಿಹ ಷಟ್ಬೀಜಾಕ್ಷರ
ಕಾಮರಾಜಕೂಟ ನಾಮಾಂಕಿತ 'ಹ-ಸ-ಕ-ಹ-ಲ-ಹ್ರೀಂ' ಅತ್ಯಧಿಕಾಕ್ಷರ ||
.
'ಕ ಲ ಹ್ರೀಂ' ಪುನರಪಿ ವಾಗ್ಭವ ಕೂಟ, 'ಸ' ಸಹಿತ 'ಹ' ಪುನರಾವೃತ್ತ
ಶಿವಸೂಚಿತ ಪ್ರಥಮ 'ಹ', ಆಕಾಶತತ್ವ ದ್ವಿತೀಯ 'ಹ', ರವಿಗೆ ಸಮತ
'ಸ' ಸ್ಥಿತಿಕರ್ತ ವಿಷ್ಣು-ವಾಯುತತ್ವ ಸ್ಥಿತಿಪಾಲನಾ ಕೂಟ, ವಾಗ್ಭವ-ಸೃಷ್ಟಿ
ನಪುಂಸಕ 'ಹ' ಬೀಜ ಗುಣ, 'ಹ್ರೀಂ' ಐಕ್ಯತೆ ಶಿವ-ಶಕ್ತಿ ಫಲವತ್ತತೆ ದೃಷ್ಟಿ ||
.
ಮಧ್ಯಕೂಟ ಉಚ್ಛಾರಕೆ ಏಕದಶಾರ್ಧಮಾತ್ರಾ ಕಾಲದ ಮಿತಿ
ಅನಾಹತದಿಂದ ಆರಂಭ ಧ್ಯಾನ ಆಜ್ಞಾಚಕ್ರದಲಂತಿಮ ಸ್ಥಿತಿ
ಲಕ್ಷ ಲಕ್ಷ ಸೂರ್ಯಪ್ರಭೆ ಸಾಕಾರ, ಸೂರ್ಯ ಖಂಡವೀ ಕೂಟ
ಸ್ಥಿತಿಪರಿಪಾಲನೆ ಬ್ರಹ್ಮದಕ್ರಿಯೆ ಮೊತ್ತ, ಆಸೆಯೆ ಅಂತರ್ಗತ ||
.
ತೃತೀಯಾ ಶಕ್ತಿ ಕೂಟ ಚತುರ್ಬೀಜಾಕ್ಷರ , ಸೊಂಟದಿಂ ಪಾದದವರೆಗಿನ ಧ್ಯಾನ
ಸೃಷ್ಟಿ-ಪಂಚಾಕ್ಷರಿ ಮಧ್ಯಮ, ಸ್ಥಿತಿ-ಷಡಕ್ಷರಿ ಕಠಿಣತಮ, ಲಯಾ ಸುಲಭ ಗಾನ
ಚತುರ್ಬೀಜಾಕ್ಷರಿ ವಿನಾಶ ಸರಾಗ, ವಿಸ್ತರಿಸುತ ವಾಗ್ಭವ ಕಾಮರಾಜ ಕೂಟಾರ್ಥ
ಸೂಕ್ಷ್ಮರೂಪಿಬುದ್ಧಿ, ಶೌರ್ಯ-ಐಶ್ವರ್ಯ-ಕೀರ್ತಿಗಳಾಧಿಕ್ಯತೆ ನಶ್ವರ ಲಯವಾಗುತ ||
.
ಶಕ್ತಿಕೂಟ ಬೀಜಾಕ್ಷರ ಸ-ಕ-ಲ-ಹ್ರೀಂ, ಮಧ್ಯಕೂಟದೆರಡು ಅಕ್ಷರ'ಹ' ವರ್ಜಿಸುತ
ಅಷ್ಟಾರ್ಧ ಮಾತ್ರಾಕಾಲ ಮಿತಿ ಉಚ್ಛಾರಣಾ, ಲಕ್ಷಾಂತರ ಚಂದ್ರ ಪ್ರಭೆ ಕಲ್ಪಿಸುತ
ಅನಾಹತದಿಂದಾರಂಭಿಸಿ ನವನಾದಾಂಶ 'ಹ್ರೀಂ' ಕ್ರಮಿಸಿ ಲಲಾಟ ಮಧ್ಯ ಅಂತ್ಯ
ಶಕ್ತಿಕೂಟ-ಚಂದ್ರಖಂಡ, ವಜ್ರಾಯುಧ-ಗದೆ-ತ್ರಿಶೂಲ-ಚಕ್ರ-ವಿನಾಶಾಯುಧಲಯ ||
.
ಪೂರ್ಣ ಪಂಚದಶೀ ಕೂಟೋಚ್ಛಾರಕೆ ತ್ರೈದಶೇಕ ಮಾತ್ರಾಸಮಯ
ದ್ವಾದಶನವ ಮಾತ್ರಾ ಸಮಯ, ಬಿಡದವಿರತ ಕಾಲ ಕೂಟ ಮಧ್ಯ
ಮಾಡಬೇಕಿರೆ ಮಾನಸಿಕ ಉಚ್ಛಾರಣೆ, ಮಾತ್ರಾ ಪ್ರಮಾಣ ಅನವಶ್ಯ
ಪ್ರತಿಕೂಟದ 'ಹ್ರೀಂ' ಪ್ರತ್ಯೇಕದಿ ಪ್ರತಿನಿಧಿಸುತ ಸೃಷ್ಟಿ, ಸ್ಥಿತಿ, ಲಯ ||
.
ಸೌಂದರ್ಯಲಹರಿ ಸ್ತೋತ್ರ, ನಿಗೂಢದೆ ವರ್ಣಿಸಿ ಪಂಚದಶೀ ಮಂತ್ರ
'ಹ' ಬೀಜಾಕ್ಷರಾಕಾಶ, ಸೂರ್ಯನಿಗ್ಹೋಲಿಸುತ ವರ್ಣಿಸೊ ಶಂಕರರ
ಪಂಡಿತ ವಿಶ್ಲೇಷಣೆ ಭಿನ್ನ ಘನ, ಮೂರು ಪೂರ್ಣ ಗಾಯತ್ರೀ ಸಮಾನ
ಪಂಚದಶೀ ಕೊನೆ ಸಾಲಲಿ 'ಪರೋ ರಾಜಸೇ ಸಾವದೋಂ' ಆಗಮನ ||
.
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು