೨೦. ಶ್ರೀ ಲಲಿತಾ ಸಹಸ್ರನಾಮ ೪೧ರಿಂದ ೪೬ನೇ ನಾಮದ ವಿವರಣೆ

೨೦. ಶ್ರೀ ಲಲಿತಾ ಸಹಸ್ರನಾಮ ೪೧ರಿಂದ ೪೬ನೇ ನಾಮದ ವಿವರಣೆ

ಲಲಿತಾ ಸಹಸ್ರನಾಮ ೪೧ರಿಂದ ೪೬

Indragopa-parikṣipta-smaratūṇābha-jaṅghikā इन्द्रगोप-परिक्षिप्त-स्मरतूणाभ-जङ्घिका (41)

೪೧. ಇಂದ್ರಗೋಪ-ಪರಿಕ್ಷಿಪ್ತ-ಸ್ಮರತೂಣಾಭ-ಜಂಘಿಕಾ

         ಅವಳ ಮೀನ ಖಂಡಗಳು ಪ್ರೇಮದ ಅಧಿದೇವತೆಯಾದ ಮನ್ಮಥನ ಬತ್ತಳಿಕೆಯಂತೆ ಕಾಣುತ್ತವೆ. ಸೌಂದರ್ಯ ಲಹರಿಯ ೮೩ನೇ ಶ್ಲೋಕವು ಹೀಗೆ ವರ್ಣಿಸುತ್ತದೆ; ನಿನ್ನ ಒಡೆಯನಾದ ಶಿವನ ಹೃದಯವನ್ನು ಗೆಲ್ಲಲು ಆ ಪಂಚ ಬಾಣಗಳ ಪ್ರೇಮದ ಅಧಿದೇವತೆಯಾದ ಕಾಮನು ನಿನ್ನ ಕಾಲುಗಳನ್ನು ಹತ್ತು ಬಾಣಗಳುಳ್ಳ (ಕಾಲಿನ ಉಗುರುಗಳು) ಕೂಡಿದ ಬತ್ತಳಿಕೆಯನ್ನಾಗಿ ಮಾಡಿದ್ದಾನೆ.

Gūḍha-gulphā गूढ-गुल्फा (42)

೪೨. ಗೂಢ ಗುಲ್ಫಾ

         ದೇವಿಯು ದುಂಡಗಿರುವ ಮತ್ತು ಸುಂದರ ಆಕಾರವನ್ನು ಹೊಂದಿರುವ ಹಿಮ್ಮಡಿಗಳನ್ನು ಹೊಂದಿದ್ದಾಳೆ ಮತ್ತವು ಮರೆಮಾಚಲ್ಪಟ್ಟಿವೆ.

Kūrma-pṛṣṭha-jayiṣṇu-prapadānvitā कूर्म-पृष्ठ-जयिष्णु-प्रपदान्विता (43)

೪೩. ಕೂರ್ಮ-ಪೃಷ್ಠ-ಜಯಿಷ್ಣು-ಪ್ರಪದಾನ್ವಿತಾ

         ಕಮಾನಿನಂತಿರುವ ಅವಳ ಪಾದಗಳ ವಕ್ರತೆಯು ಆಮೆಯ ಕವಚಕ್ಕಿಂತ ಹೆಚ್ಚು ಅಂದ ಮತ್ತು ಡೊಂಕುಳ್ಳದ್ದಾಗಿದೆ. ಆದರೆ ಶಂಕರರು ಅವಳ ಪಾದಗಳನ್ನು ಗಟ್ಟಿಯಾದ ಆಮೆಯ ಚಿಪ್ಪಿಗೆ ಹೋಲಿಸಿದ್ದಕ್ಕೆ ತಮ್ಮ ಕೋಪವನ್ನು ತೋರಿಸಿದ್ದಾರೆ. ಸೌಂದರ್ಯ ಲಹರಿಯ ೮೮ನೇ ಶ್ಲೋಕವು, ನಿನ್ನ ಕಾಲ್ಬೆರಳುಗಳು ಈ ಜಗತ್ತನ್ನು ನಿಯಂತ್ರಿಸುವವಾಗಿವೆ (ಅವರು ಪೂರ್ತಿ ಪಾದವನ್ನೂ ಸಹ ವರ್ಣಿಸುತ್ತಿಲ್ಲ ಆದರೆ ಕೇವಲ ಬೆರಳುಗಳ ಬಗ್ಗೆಯಷ್ಟೇ ಹೇಳುತ್ತಿದ್ದಾರೆ). ಸ್ವಾಮಿ ಶಿವನಿಗೆ ಮಾತ್ರ ನಿನ್ನ ಪಾದಗಳ ಮೃದುತ್ವವು ಗೊತ್ತು ಆದ್ದರಿಂದ ಅವನು ನಿನ್ನ ಕಾಲುಗಳನ್ನು ಬಹಳ ಜಾಗ್ರತೆಯಿಂದ ನಿಮ್ಮ ಮದುವೆಯ ಸಮಯದಲ್ಲಿ ಎತ್ತಿ ಹಿಡಿದಿದ್ದಾನೆ. ಅವರಿಗೆ (ವಾಗ್ದೇವಿಗಳಿಗೆ) ಇಂತಹ ಮೃದುವಾದ ಪಾದಗಳನ್ನು ಆಮೆಯ ಚಿಪ್ಪಿಗೆ ಹೋಲಿಸಲು ಅದೆಷ್ಟು ಧೈರ್ಯವಿರಬೇಕು?" ಎನ್ನುತ್ತದೆ. ಇದರಿಂದ ಸಹಸ್ರನಾಮವು ಸೌಂದರ್ಯಲಹರಿಗಿಂತ ಬಹಳ ಪುರಾತನವಾದದ್ದು ಎಂದು ತಿಳಿದು ಬರುತ್ತದೆ.

        ೪೧,೪೨ ಮತ್ತು ೪೩ನೇ ನಾಮಗಳು 'ಸಾಮುದ್ರಿಕ ಲಕ್ಷಣಾ' (ದೇಹದ ಅಂಗಗಳನ್ನು ಅಧ್ಯಯನ ಮಾಡುವ ಶಾಸ್ತ್ರ)ದಲ್ಲಿ ವಿವರಿಸಿರುವ ಲಕ್ಷಣಗಳಂತೆಯೇ ಇವೆ. 

Nakhadīdhiti-saṃchanna-namajjana-tamoguṇā नखदीधिति-संछन्न-नमज्जन-तमोगुणा (44)

೪೪. ನಖದೀಧಿತಿ-ಸಂಛನ್ನ-ನಮಜ್ಜನ-ತಮೋಗುಣಾ

        ಅವಳ ಉಗುರಿನ ಕಿರಣಗಳು ಯಾರು ಅವಳಿಗೆ ಶಿರಬಾಗುತ್ತಾರೋ ಅವರ ಅಜ್ಞಾನವನ್ನು ಹೋಗಲಾಡಿಸುತ್ತವೆ. ಯಾವಾಗ ದೇವತೆಗಳು ಮತ್ತು ಅಸುರರು ಅವಳಿಗೆ ಕೃತಜ್ಞತಾಪೂರ್ವಕವಾಗಿ ಅವಳ ಕಾಲಿಗೆ ಶಿರಬಾಗಿ ನಮಸ್ಕರಿಸುತ್ತಾರೋ, ಆಗ ಅವರ ಕಿರೀಟದಲ್ಲಿ ಹುದುಗಿರುವ ರತ್ನಗಳಿಂದ ಹೊರಹೊಮ್ಮುವ ಕಿರಣಗಳು ಇವಳ ಪಾದದ ಉಗುರಿನಿಂದ ಹೊರಹೊಮ್ಮುವ ಕಿರಣಗಳಿಗೆ ಯಾವುದೇ ವಿಧವಾಗಿ ಸಾಟಿಯಾಗುವುದಿಲ್ಲ. ಯಾರು ಅವಳನ್ನು ಪೂಜಿಸುತ್ತಾರೋ ಅವರ ತಮೋಗುಣ (ಜಡತ್ವವನ್ನು) ಮತ್ತು ಅಜ್ಞಾನವನ್ನು ಅವಳ ಉಗುರಿನಿಂದ ಹೊರಹೊಮ್ಮುವ ಕಿರಣಗಳು ಹೋಗಲಾಡಿಸುತ್ತವೆ.

       ದೇವಿಯು ಯಾರನ್ನೂ ತನ್ನ ಕೈಯ್ಯಿಂದ ಆಶೀರ್ವದಿಸುವುದಿಲ್ಲವಂತೆ ಬದಲಾಗಿ ತನ್ನ ಪಾದಗಳಿಂದ ಮಾಡುತ್ತಾಳೆ. ಅವಳಿಗೆ ಅಭಯ ಮತ್ತು ವರದ ಹಸ್ತಗಳಿಲ್ಲ. ಸಾಮಾನ್ಯವಾಗಿ ನಾವು ನೋಡುವಂತೆ ಬಹಳಷ್ಟು ದೇವರುಗಳಿಗೆ ನಾಲ್ಕು ಕೈಗಳಿರುತ್ತವೆ, ಅವುಗಳಲ್ಲಿ ಒಂದು ಆಶೀರ್ವಾದಕ್ಕಾಗಿ ಮೀಸಲಿದ್ದರೆ ಮತ್ತೊಂದು ವರವನ್ನು ಕೊಡಲಿಕ್ಕೆ ಮೀಸಲಾಗಿರುತ್ತದೆ. ಲಲಿತಾಂಬಿಕೆಗೆ ಈ ಎರಡು ರೀತಿಯ ಕೈಗಳಿಲ್ಲ ಏಕೆಂದರೆ ಅವಳ ನಾಲ್ಕು ಕೈಗಳಲ್ಲಿ ಅವಳಿಗೆ ನಾಲ್ಕು ಶಕ್ತಿಯುತವಾದ ದೇವಿಯರಿದ್ದಾರೆ (ನಾಮಾವಳಿ ೮,೯,೧೦ ಮತ್ತು ೧೧). ಈ ಎರಡು ಕ್ರಿಯೆಗಳಾದ ಆಶೀರ್ವಾದ ಮತ್ತು ವರಕೊಡುವಿಕೆಯನ್ನು ಅವಳು ತನ್ನ ಪಾದಕಮಲಗಳಿಂದ ಕೈಗೊಳ್ಳುತ್ತಾಳೆ.

Pada-dvaya-prabhā-jāla-parākṛta-saroruhā पद-द्वय-प्रभा-जाल-पराकृत-सरोरुहा (45)

೪೫. ಪದ-ದ್ವಯ-ಪ್ರಭಾ-ಜಾಲ-ಪರಾಕೃತ-ಸರೋರುಹಾ

       ಅವಳ ಪಾದದ ಸೌಂದರ್ಯವು ಕಮಲದ ಹೂವಿಗಿಂತ ಅಧಿಕವಾಗಿದೆ. ಸಾಮಾನ್ಯವಾಗಿ ಕಮಲವನ್ನು ದೇವ-ದೇವಿಯರ ಕಣ್ಣು ಮತ್ತು ಪಾದಗಳಿಗೆ ಹೋಲಿಸುತ್ತಾರೆ. ಆದರೆ ಸೌಂದರ್ಯಲಹರಿಯ ೨ನೇ ಶ್ಲೋಕವು ಹೀಗೆ ಅಭಿವರ್ಣಿಸುತ್ತದೆ; "ನಿನ್ನ ಪಾದಗಳಿಂದ ಬಹು ಸಣ್ಣದಾದ ಧೂಳಿನ ಕಣಗಳನ್ನು ಹೆಕ್ಕಿಕೊಂಡು ಬ್ರಹ್ಮನು ಈ ಪ್ರಪಂಚಗಳನ್ನು ಸೃಷ್ಟಿಸುತ್ತಾನೆ, ವಿಷ್ಣುವು ಅವುಗಳನ್ನು ಪರಿಪಾಲಿಸುತ್ತಾನೆ ಮತ್ತು ಶಿವನು ಅವುಗಳನ್ನು ಪುಡಿಪುಡಿಯಾಗಿಸಿ ಸುಟ್ಟು ಬೂದಿಮಾಡಿ ತನ್ನ ದೇಹಕ್ಕೆ ಅದನ್ನು ಬಳಿದುಕೊಳ್ಳುತ್ತಾನೆ". 

      ಕೆಲವೊಬ್ಬರ ಅಭಿಪ್ರಾಯದಂತೆ ಆಕೆಗೆ ನಾಲ್ಕು ಕಾಲುಗಳಿವೆ. ಅವೆಂದರೆ ಶುಕ್ಲ, ರಕ್ತ, ಮಿಶ್ರ ಮತ್ತು ನಿರ್ವಾಣ. ಮೊದಲೆರಡು ಆಜ್ಞಾ ಚಕ್ರದಲ್ಲಿ ವಿರಮಿಸಿದರೆ, ಮೂರನೆಯದು ಅನಾಹತ (ಹೃದಯ) ಚಕ್ರದಲ್ಲಿರುತ್ತದೆ ಮತ್ತು ನಾಲ್ಕನೆಯದು ಸಹಸ್ರಾರದಲ್ಲಿರುತ್ತದೆ. ಈ ನಾಲ್ಕೂ ಪಾದಗಳನ್ನು ಕ್ರಮವಾಗಿ ಬ್ರಹ್ಮ, ವಿಷ್ಣು, ರುದ್ರ ಮತ್ತು ಸದಾಶಿವ ಇವರುಗಳು ಪಾಲಿಸುತ್ತಾರೆ. ಇವುಗಳು ಸೃಷ್ಟಿ, ಸ್ಥಿತಿ, ಲಯ ಮತ್ತು ಕಡೆಯದು ಮುಕ್ತಿ ಅಥವಾ ಪುನಸ್ಸೃಷ್ಟಿಯನ್ನು ಸಂಕೇತಿಸುತ್ತವೆ.

      ಹಿಂದೂ ಪುರಾಣಗಳ ಪ್ರಕಾರ ಪ್ರಕೃತಿಯ ಪ್ರತಿಯೊಂದು ಕ್ರಿಯೆಯನ್ನು ಒಬ್ಬೊಬ್ಬ ದೇವರು/ದೇವಿಯರು ಪ್ರತಿನಿಧಿಸುತ್ತಾರೆ. ಉದಾಹರಣೆಗೆ ನೀರನ್ನು ವರುಣ ದೇವನು ಪ್ರತಿನಿಧಿಸಿದರೆ, ಬೆಂಕಿಯನ್ನು ಅಗ್ನಿ ದೇವನು ಪ್ರತಿನಿಧಿಸುತ್ತಾನೆ, ಇದೇ ರೀತಿ ಐಶ್ವರ್ಯವನ್ನು ಕುಬೇರ ಮತ್ತು ಮರಣವನ್ನು ಯಮನು ಸಂಕೇತಿಸುತ್ತಾರೆ. ಇದು ಪ್ರಕೃತಿಯನ್ನು ಮತ್ತು ಬ್ರಹ್ಮಾಂಡವನ್ನು ಪೂಜಿಸುವುದಲ್ಲದೆ ಮತ್ತೇನೂ ಅಲ್ಲ. ಪ್ರಕೃತಿಯಲ್ಲಿ ಅದೆಷ್ಟೋ ಶಕ್ತಿ ಮತ್ತು ಬಲಗಳಿರುವುದರಿಂದ ಪ್ರತಿಯೊಂದನ್ನೂ ಒಂದೊಂದು ದೇವತೆಯು ಪ್ರತಿನಿಧಿಸುತ್ತದೆ.

      ಸೌಂದರ್ಯಲಹರಿಯ ಮೂರನೇ ಶ್ಲೋಕವು ಹೇಳುತ್ತದೆ, "ನಿನ್ನ ಪಾದದ ಬಳಿಯಿರುವ ಧೂಳಿನ ಕಣಗಳು ಅಜ್ಞಾನಿಗಳು ಒಳ ಅಂಧಕಾರವನ್ನು ನಿವಾರಿಸಲು ಸಹಾಯ ಮಾಡುತ್ತವೆ".

Siñjāna-maṇi-mañjīra-maṇḍita-srīpadāmbujā सिञ्जान-मणि-मञ्जीर-मण्डित-स्रीपदाम्बुजा (46)

೪೬. ಸಿಂಜಾನ-ಮಣಿ-ಮಂಜೀರ-ಮಂಡಿತ-ಸ್ರೀಪದಾಂಬುಜಾ

      ಅವಳು ಹೊಳೆಯುವ ಅನರ್ಘ್ಯ ರತ್ನಗಳಿಂದ ಮಾಡಲ್ಪಟ್ಟ ಗೆಜ್ಜೆಗಳನ್ನು ಧರಿಸಿದ್ದಾಳೆ.

     ೪೨ರಿಂದ ೪೬ನೇ ನಾಮಗಳು ಕೇವಲ ಅವಳ ಪಾದಗಳನ್ನಷ್ಟೇ ವರ್ಣಿಸುತ್ತವೆ ಎನ್ನುವುದನ್ನು ಗಮನಿಸಿ. ಅವಳ ಪಾದಗಳನ್ನೇ ಅಷ್ಟು ವಿವರವಾಗಿ ವರ್ಣಿಸಿರಬೇಕಾದರೆ, ಅವಳ ಶಕ್ತಿಯುತವಾದ ರೂಪವನ್ನು ಕಲ್ಪಿಸಿಕೊಳ್ಳುವುದು ಮನುಷ್ಯನ ಬುದ್ಧಿಮತ್ತೆಗೆ ಮೀರಿದ ವಿಷಯವಾಗಿದೆ. ಇದನ್ನು ಹೀಗೆ ವಾಗ್ದೇವಿಗಳು ದೇವಿಯ 'ಪ್ರಕಾಶ ವಿಮರ್ಶ ಮಹಾ ಮಾಯಾ ಸ್ವರೂಪಿಣಿ' ರೂಪವನ್ನು ಮೆಚ್ಚಿಸುವುದಕ್ಕಾಗಿ ರೂಪಿಸಿದ್ದಾರೆ.  

*******

      ವಿ.ಸೂ.: ಈ ಲೇಖನವು ಶ್ರೀಯುತ ವಿ. ರವಿಯವರಿಂದ ರಚಿಸಲ್ಪಟ್ಟ LALITHA SAHASRANAMAM 41-46 http://www.manblunder.com/2009/07/lalitha-sahasranamam-41-46.html ಎನ್ನುವ ಆಂಗ್ಲ ಲೇಖನದ ಅನುವಾದದ ಭಾಗವಾಗಿದೆ. ಈ ಮಾಲಿಕೆಯನ್ನು ಅವರ ಒಪ್ಪಿಗೆಯನ್ನು ಪಡೆದು ಪ್ರಕಟಿಸಲಾಗುತ್ತಿದೆ. 

 
Rating
Average: 5 (1 vote)

Comments

Submitted by makara Thu, 05/09/2013 - 17:48

ಆತ್ಮೀಯ ಸಂಪದಿಗರೆ,
ನಿನ್ನೆಯ ದಿವಸ ಊರಿನಲ್ಲಿರಲಿಲ್ಲ ಮತ್ತು ನಾಳೆಯೂ ಊರಿನಲ್ಲಿ ಇರವುದಿಲ್ಲ ಹಾಗಾಗಿ ಎರಡು ದಿನದ ಕ್ಲಾಸುಗಳ ನೋಟ್ಸನ್ನು ಒಂದೇ ದಿನ ಮಿನ್ನೇರಿಸಿದ್ದೇನೆ. ಅದಕ್ಕಾಗಿ ಕ್ಷಮೆ ಇರಲಿ. ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by nageshamysore Sun, 02/09/2014 - 04:07

ಶ್ರೀಧರರೆ, "೨೦. ಶ್ರೀ ಲಲಿತಾ ಸಹಸ್ರನಾಮದ ವಿವರಣೆ"ಯ ಕಾವ್ಯರೂಪ ತಮ್ಮ ಪರಿಷ್ಕರಣೆಗೆ :-)
.
ಲಲಿತಾ ಸಹಸ್ರನಾಮ ೪೧ರಿಂದ ೪೬
________________________________________
.
೪೧. ಇಂದ್ರಗೋಪ-ಪರಿಕ್ಷಿಪ್ತ-ಸ್ಮರತೂಣಾಭ-ಜಂಘಿಕಾ
ಸ್ವಯಂಪ್ರಭೆಯ ಮಿಂಚುಹುಳು ತನ್ನಂತಾನೆ ಪಸರಿಸೊ ಹಾಗೆ
ಅಕ್ಷೋಹಿಣಿ ಸೌಂದರ್ಯಧಗೆ ನಿನ್ನೊಡೆಯ ಶಿವನ ಗೆಲುವ ಬಗೆ
ಪ್ರೇಮಾಧಿಪತಿ ಮನ್ಮಥ ಬತ್ತಳಿಕೆ, ಹೋಲುವ ಮೀನಖಂಡಗಳೆ
ದಶನಖಬಾಣ ಬತ್ತಳಿಕೆಯ್ಹಿಡಿದೆ ಕಾಮನಮದನೋತ್ಸವ ಮಳೆ ||
.
೪೨. ಗೂಢ ಗುಲ್ಫಾ 
ವರ್ಣನಾತೀತ ರೂಪ ಲಹರಿ ದೇವಿ ಸೌಂದರ್ಯ ಭೌತಿಕ
ಹೊರೆಯೊತ್ತೆ ಜಗಭಾರಕೆ ಸುಖಿ ಭಾರಿ ಕಾಲೇರಿ ಚಾಲಕ
ದುಂಡಾದವೃತ್ತ ಪುಟ್ಟಹಿಮ್ಮಡಿ ನಿಮಿತ್ತ ಭಕ್ತಿಭಾವ ಪುಳಕ
ಮರೆಮಾಚಿ ಗೂಢ ಕಾರಣ ನಿಗೂಢ ಸೃಷ್ಟಿರಹಸ್ಯಾ ಜಳಕ ||
.
೪೩. ಕೂರ್ಮ-ಪೃಷ್ಠ-ಜಯಿಷ್ಣು-ಪ್ರಪದಾನ್ವಿತಾ
ಜಗತ್ನಿಯಂತ್ರಣ ಜಗಭಾರ ಹೊರೆ, ಅಸೀಮ ಬಲ ಪಾದ ನೆಲೆ
ಕಮಾನುಪಾದ ಅಂಕುಡೊಂಕಿನ ಕಲೆ ಉಬ್ಬಿದ ಕೂರ್ಮ ಸಕಲೆ
ಕಠೋರ ಕವಚ ಕೂರ್ಮಾಸನ ಹಿತ ವಿಶ್ವ ಭಾರ ಹರಡೆ ಕರಾಳ
ಮೃದು ಕಾಲ್ಬೆರಳು ಕಾಪಿಡೆ ಹಗಲಿರುಳು ಚಿಪ್ಪೊಳಸೇರೆ ಸರಳ ||
.
೪೪. ನಖದೀಧಿತಿ-ಸಂಛನ್ನ-ನಮಜ್ಜನ-ತಮೋಗುಣಾ 
ಸುರಾಸುರ ಶಿರಸಾಷ್ಟಾಂಗ ವಂದಿತೆ ಲಲಿತೆ ನಖೋ ಕಿರಣ ಸನ್ಮತಿ
ಪಾದಕಮಲ ನಮಿಸುತೆ ಪ್ರಣತಿ ಕಿರೀಟ ರತ್ನ ಮಂಕಾಗುತ ಸದ್ಗತಿ
ತಮೋಗುಣ, ತೊಳೆ ಅಜ್ಞಾನ ಪೂರ್ಣ, ಪಾದನಖ ಕಿರಣ ಪೂಜಿಸೆ
ಪಾದಕಮಲವೆ ಆಶೀರ್ವದಿಸೆ, ಅಭಯಾವರದ ಚತುರ್ದೇವಿವಾಸೆ ||
.
೪೫. ಪದ-ದ್ವಯ-ಪ್ರಭಾ-ಜಾಲ-ಪರಾಕೃತ-ಸರೋರುಹಾ
ಅದ್ವಿತೀಯ ಪಾದಜೋಡಿ, ಪ್ರಭಾವಳಿ ಮೇರು ಕಮಲದ ಮೋಡಿ
ಕಮಲ ಧೂಳಿ ಹೆಕ್ಕಿದ ಬಳಿ ಸೃಷ್ಟಿ ಸ್ಥಿತಿ ಲಯ ತ್ರಿಮೂರ್ತಿ ಗರಡಿ
ಕಣಧೂಳ ದ್ಯುತಿ ಅಂಧಕಾರ ನಿವೃತ್ತಿ, ಶುಕ್ಲ ರಕ್ತ ಆಜ್ಞಾಚಕ್ರ ವಾಸಿ
ಮಿಶ್ರ ವಿರಮಿತ ಅನಾಹತ, ನಿರ್ವಾಣ ಕುರಿತು ಸಹಸ್ರಾರ ವಾಸಿ ||
.
೪೬. ಸಿಂಜಾನ-ಮಣಿ-ಮಂಜೀರ-ಮಂಡಿತ-ಸ್ರೀಪದಾಂಬುಜ 
ದೇವಿ ಲಲಿತೆ ಪಾದ ಸೂಕ್ತೆ, ಅನರ್ಘ್ಯರತ್ನಾ ಕಾಲ್ಗೆಜ್ಜೆ ಸುಶೋಭಿತೆ
ಫಳಫಳ ಹೊಳೆವ ಕಾಂತಿಯಲೆ, ಭಕುತ ಜನ ಮಾನಸ ಪೂಜಿತೆ
ಪಾದಪದ್ಮಾಂಬುಜ ಸೂಕ್ಷ್ಮಾತಿಸೂಕ್ಷ್ಮವಿವರ, ನಿಲುಕ ಮನುಜಪ್ರಜ್ಞೆ
ಪ್ರೀತ್ಯರ್ಥ ವಾಗ್ದೇವಿ ವಿಮರ್ಶೆ, ಮಾಯಾಸ್ವರೂಪಿಣಿ ಮೆಚ್ಚಿಸೆ ಯಜ್ಞ ||
.
.
ಧನ್ಯವಾದಗಳೊಂದಿಗೆ  
ನಾಗೇಶ ಮೈಸೂರು