ಪಂಚ ಶಂಕರನಾರಾಯಣ ದರ್ಶನ
“ಶಿವರಾತ್ರಿಯ ದಿನ ಬೆಳಿಗ್ಗೆ ಬೇಗನೆ ಹೊರಟು, ಗೋಳಿಕಟ್ಟೆಯಿಂದ, ಅಂದರೆ ಈಗಿನ ಕ್ರೋಡ ಶಂಕರನಾರಾಯಣದಿಂದ ಆರಂಭಿಸಿ, ಐದು ಶಂಕರನಾರಾಯಣ ದೇವಸ್ಥಾನಗಳನ್ನು ನೋಡಿಕೊಂಡು, ರಾತ್ರಿ ಪುನ: ಹೊರಟಲ್ಲಿಗೇ ಬಂದು ಸೇರುವುದು ಪಂಚ ಶಂಕರನಾರಾಯಣ ದರ್ಶನ. ಬೆಳಿಗ್ಗೆ ಹೊರಟವರು ರಾತ್ರಿ ಎಷ್ಟೇ ಹೊತ್ತು ಆದರೂ, ಅವರು ಬರುವ ತನಕ, ಶಂಕರನಾರಾಯಣ ದೇವಾಸ್ಥಾನದವರು ಕಡೆಯ ಮಂಗಳಾರತಿಗಾಗಿ ಕಾಯುತ್ತಿರುತ್ತಾರೆ. . .” ಪ್ರತಿ ವರ್ಷ ಶಿವರಾತ್ರಿಯ ದಿನ ನಮ್ಮ ಹಳ್ಳಿಮನೆಯಲ್ಲಿ ಸರಳ ಉಪವಾಸ ಮಾಡುತ್ತಿರುವಾಗ ಅಮ್ಮಮ್ಮ ನೆನಪಿಸಿಕೊಳ್ಳುತ್ತಿದ್ದ ಸಂಪ್ರದಾಯವಿದು. ಹಗಲಿಡೀ ನಡೆದು, ನಾಲ್ಕಾರು ಹರದಾರಿ ದೂರ ಕ್ರಮಿಸಿ ನಡೆಯುವ ಈ ಯಾತ್ರೆಯು ನನ್ನ ದೃಷ್ಟಿಯಲ್ಲಿ ಒಂದು ಅಭೂತಪೂರ್ವ ಚಾರಣ. ಕಾಲೇಜು ಮುಗಿಸಿದ ದಿನಗಳಲ್ಲಿ, ಈ ಜೀವನದ ಉದ್ದೇಶವೇ ಚಾರಣವೇನೊ ಎಂಬ ತಿಳುವಳಿಕೆಯಿಂದ ಚಾರಣಕ್ಕೆ ಹೋಗುವ ಪದ್ದತಿ ಬೆಳೆಸಿಕೊಂಡಿದ್ದ ನನಗೆ ಈ ಯಾತ್ರಾ ರೂಪದ ಚಾರಣ ನಡೆಸಬೇಕೆಂಬ ಆಸೆ ಇದ್ದರೂ, ನಡೆದು ಪಂಚ ಶಂಕರನಾರಾಯಣ ದರ್ಶನ ಮಾಡಿಕೊಳ್ಳಲು ಅವಕಾಶವಾಗಲಿಲ್ಲ. 1987ರ ತನಕ ಪ್ರತಿವರ್ಷ ನಡಿಗೆಯ ಮೂಲಕವೇ ಕಾಡಿನನಡುವೆ ಇದ್ದ ಆ ಐದು ದೇಗುಲಗಳನ್ನು ಶಿವರಾತ್ರಿಯ ದಿನಕೆಲವರು ಸಂದರ್ಶಿಸುತ್ತಿದ್ದರು. ನಂತರದ ವರ್ಷಗಳಲ್ಲಿ, ಅದೇ ಸ್ಥ:ಳಗಳಿಗೆ ವಾಹನಗಳಲ್ಲಿ ಹೋಗುವ ಪರಿಪಾಠ ಬೆಳೆದು, ಈ ಯಾತ್ರೆಯು ಈಗ ಬೇರೊಂದೇ ಆಯಾಮ ಪಡೆದುಕೊಂಡಿದೆ. ಈ ಶಿವರಾತ್ರಿಯಂದು ಅಂತಹ ಪಂಚಶಂಕರನಾರಾಯಣ ದರ್ಶನ ಮಾಡಿದ ಅನುಭವ ಹಂಚಿಕೊಳ್ಳಲು ಬಯಸುವೆ.
“ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ಶಂಕರನಾರಾಯಣ ಬಸ್ ನಿಲ್ದಾಣದಲ್ಲಿ ನಿಂತಿರಿ, ನಾವು ಅಲ್ಲಿಗೆ ಮಿನಿ ಬಸ್ ಮೂಲಕ ಬರುತ್ತೇವೆ” ಎಂದಿದ್ದರು ಕಲ್ಕೂರರು. ಸಮಯಕ್ಕೆ ಸರಿಯಾಗಿ 23 ಜನರ ತಂಡದೊಂದಿದಿಗೆ ಬಂದ ಕಲ್ಕೂರರು ಮೊದಲಿಗೆ ನಮ್ಮನ್ನು ಕರೆದುಕೊಂಡು ಹೋಗಿದ್ದು ಅಗ್ರಹಾರದ ಸನಿಹ ವಾರಾಹಿ ನದಿಸ್ನಾನಕ್ಕೆ. ಬಿರುಬೇಸಗೆಯು ಆರಂಭವಾಗುತ್ತಿದ್ದರೂ, ವಾರಾಹಿ ವಿದ್ಯುತ್ ಆಗಾರದಿಂದ ಹೊರಬಿಡುತ್ತಿರುವ ನೀರಿನಿಂದಾಗಿ, ಪರಿಶುದ್ದನೀರಿನ ಆಗರವಾಗಿತ್ತು ನಮ್ಮ ಸ್ನಾನಘಟ್ಟ.
ನಮ್ಮ ವಾಹನದಲ್ಲಿರುವವರೆಲ್ಲರೂ, ಸ್ನಾನಕ್ಕೆ ತಯಾರಾಗಿ ಬಂದಿದ್ದು, ಟವಲ್ ಹಿಡಿದು ನೀರಿಗಿಳಿದು ಸ್ನಾನಮಾಡಿ, ಒದ್ದೆಬಟ್ಟೆಯಲ್ಲೇ, ಹತ್ತಿರದ ಗಣಪತಿಯ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರು. ಪಂಚಶಂಕರನಾರಾಯಣ ದರ್ಶನವು ಸುಗಮವಾಗಿ ಆಗಲಿ ಎಂದು ಮೊದಲಿಗೆ ಗಣೇಶನಿಗೆ ನಮನ – ಆಗಲೋ ಈಗಲೋ ಬಿದ್ದುಹೋಗುವಂತಿದ್ದ ಆ ಪುಟ್ಟ ದೇಗುಲದಲ್ಲಿದ್ದ ವಿಗ್ರಹ ಮಾತ್ರ ಗಟ್ಟಿಯಾಗಿತ್ತು. ಮಿನಿಬಸ್ ಏರಿ, ಶಂಕರನಾರಾಯಣಕ್ಕೆ ಬಂದೆವು. ಮಧ್ಯಯುಗೀನ ಕಾಲದಲ್ಲಿ ಸಾಂಸ್ಕøತಿಕ ಮತ್ತು ಆಗಮ ಪದ್ದತಿಗಳ ನಡುವೆ ನಡೆದ ಸಂಘರ್ಷವನ್ನು ಶಮನಗೊಳಿಸಲು ನಡೆದ ಪ್ರಯತ್ನದ ಫಲವಾಗಿ ಈ ಪ್ರದೇಶದ ಹಲವು ಸ್ಥಳಗಳಲ್ಲಿ ಶಂಕರ ಮತ್ತು ನಾರಾಯಣರನ್ನು ಒಟ್ಟಿಗೇ ಪ್ರತಿಷ್ಠಾಪಿಸಿರುವ ಐತಿಹಾಸಿಕ ಸಂದರ್ಭದ ಕುರುಹಾಗಿ ಈ ಶಂಕರನಾರಾಯಣ ದೇಗುಲಗಳು ಇಂದು ಗಮನ ಸೆಳೆಯುತ್ತವೆ.
ಕುಂದಾಪುರ ತಾಲೂಕಿನಲ್ಲಿರುವ ಕ್ರೋಡ ಶಂಕರನಾರಾಯಣ ದೇವಾಲಯದಲ್ಲಿ ಹಲವು ವೈಶಿಷ್ಟ್ಯಗಳಿವೆ. ಈ ದೇವಾಲಯವನ್ನು ಕೆರೆಯ ಮೇಲೆ ದೇವತೆಗಳು ಕಟ್ಟಿದರೆಂಬುದು ಒಂದು ಐತಿಹ್ಯ. ಪಕ್ಕದ ಬೆಟ್ಟದ ಮೇಲಿರುವ ಮೂಲ ದೇವರು, ತನ್ನ ಮೇಲೆ ವಿಶ್ವಾಸವಿಟ್ಟಿರುವ ಪೂಜಾರಿಯ ಮನವಿಯ ಮೇರೆಗೆ ಬೆಟ್ಟದಿಂದ ಕೆಳಗೆ ನೆಗೆದು, ಈಗಿನ ದೇವಾಲಯದಲ್ಲಿ ನೆಲೆ ನಿಂತನಂತೆ. ಅದಕ್ಕೆ ಪುರಾವೆಯಾಗಿ ಅಲ್ಲಿರುವ ಬಂಡೆಹಾಸಿನಮೇಲೆ ಮೂಡಿರುವ ಎರಡು ಕಾಲಿನ ಹಿಮ್ಮಡಿಯ ಗುರುತುಗಳನ್ನು ತೋರಿಸುತ್ತಾರೆ. ಆದರೆ, ಈಗ ಪುನ: ಕಟ್ಟುತ್ತಿರುವ ದೇವಾಲಯದ ಗೋಪುರದ ಕಾವiಗಾರಿಯಿಂದಾಗಿ, ಬಂಡೆಯ ಮೇಲೆ ಮೂಡಿರುವ ಆ ಪುರಾತನ ಹಿಮ್ಮಡಿಗುರುತುಗಳು ಸಿಮೆಂಟಿನ ನೀರಿನಲ್ಲಿ ಮುಚ್ಚಿಹೋಗುವ ಅಪಾಯದಲ್ಲಿದೆ. ವೈಜ್ಞಾನಿಕ ಕಾಲಮಾನದ ದೃಷ್ಟಿಯಲ್ಲಿ ಕೌತುಕವೆನಿಸುವ, ಕಲ್ಲಿನಮೇಲೆ ಮೂಡಿರುವ ಈ ಹೆಜ್ಜೆಗುರುತುಗಳು ಕುತೂಹಲಕಾರಿ. ಇಲ್ಲಿರುವ ವಿಶಾಲವಾದ ಕಲ್ಯಾಣಿಯಲ್ಲಿ ಸ್ನಾನ ಮಾಡಿ, ಪೂಜೆ ಮುಗಿಸಿ ನಾವು ಹೊರಟಿದ್ದು ಹೊಳೆ ಶಂಕರನಾರಾಯಣ ಎಂಬ ಸ್ಥಳಕ್ಕೆ.
ಸಿದ್ದಾಪುರದಿಂದ ಐದು ಕಿ.ಮೀ. ದೂರದಲ್ಲಿ, ಕಾಡಿನ ಮಧ್ಯೆ ಇರುವ ಹೊಳೆ ಶಂಕರನಾರಾಯಣ ದೇಗುಲವು ವಾರಾಹಿ ನದಿತಟದಲ್ಲಿದೆ, ಸನಿಹದಲ್ಲೇ ಪುಟ್ಟ ಅಣೆಕಟ್ಟು ಕಟ್ಟಿದ ಕಂಟ್ರಾಕ್ಟರ್ ಅವರು ದೇವಾಲಯವನ್ನು ನವೀನ ಮಾದರಿಯಲ್ಲಿ ಕಟ್ಟಿಸಿದ್ದು ಕಂಡುಬರುತ್ತಿದೆ. ಇಲ್ಲಿನ ನದಿಯಲ್ಲಿ ನೀರಿನ ಮಧ್ಯೆ ಶಿವಲಿಂಗದ ಆಕಾರದಲ್ಲಿರುವ ಕಲ್ಲಿನ ರಚನೆಯನ್ನು ಕಂಡು ಇಲ್ಲಿ ಪೂಜೆ ಸಲ್ಲಿಸುವ ಸಂಪ್ರದಾಯ ಆರಂಭವಾಗಿತ್ತು. ಆದರೆ, ಆ ಪುರಾತನ ಪ್ರಕೃತಿ ನಿರ್ಮಿತ ಲಿಂಗವು ಈಚಿನ ವರ್ಷಗಳಲ್ಲಿ ಮರಳು, ಕಲ್ಲುಗಳಲ್ಲಿ ನಾಲ್ಕಾರು ಅಡಿ ಶಾಶ್ವತವಾಗಿ ಮುಳುಗಿಹೋಗಿದೆ. “ಓ ಅಲ್ಲಿ ಮರವೊಂದು ವಕ್ರವಾಗಿ ನದಿಯ ಮೇಲೆ ಚಾಚಿಕೊಂಡಿದೆಯಲ್ಲಾ, ಅದೇ ಗುರುತು, ಅಲ್ಲೇ ಮೂಲ ವಿಗ್ರಹವಿದೆ” ಎಂದು ಹಿಂದೆ ನೋಡಿದ್ದವರು ಕೈತೋರಿ ನದಿಯ ಆಚೆ ದಡದ ಜಾಗವೊಂದನ್ನು ತೋರಿಸಿದರು. ಕಾಡಿನ ನಡುವೆ ಚಂದವಾಗಿ ಕಾಣುತ್ತಿದ್ದ ಆ ಸ್ಥಳವು ಸುಂದರವಾಗಿದ್ದರೂ, ನೀರಿನಿಂದ ತುಂಬಿಹೋಗಿದ್ದರಿಂದಾಗಿ, ನದಿ ಈಚೆ ದಡದಲ್ಲಿರುವ ನವೀನ ದೇಗುಲದಲ್ಲಿ ಪೂಜೆ ಸಲ್ಲಿಸಿ ಹೊರಟೆವು.
ಪಂಚಶಂಕರನಾರಾಯಣ ದರ್ಶನವು ಈಗಿನ ವಾಹನ ಸಂಸ್ಕøತಿಯ ಪ್ರಭಾವದಿಂದಾಗಿ, ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಪಡೆಯುತ್ತಿದೆ. ನಮ್ಮ ಜೊತೆಗೇ, ಹಿಂದೆ ಮುಂದೆ ಕಾರುಗಳು, ಬೈಕುಗಳು ಬರುತ್ತಿದ್ದವು. ಮುಂದಿನ ತಾಣವಾದ ಮಾಂಡೋವಿ ಶಂಕರನಾರಾಯಣದ ದಾರಿಯು ದುರ್ಗಮವಾಗಿದ್ದು, ಶ್ರಮದಾಯಕ. ಜೊತೆಗೆ ಹಳ್ಳಿಗಾಡಿನ ದಾರಿ. ಆದ್ದರಿಂದ, ಹತ್ತಾರು ವಾಹನಗಳು ಗುಂಪುಗುಂಪಾಗಿ ಚಲಿಸುತ್ತಿದ್ದವು. ಸಿದ್ದಾಪುರದಿಂದ ಕಾಡಿನ ನಡುವೆಯೇ ಸಾಗುವ ಅಮಾಸೆಬೈಲು ದಾರಿಯಲ್ಲಿ ಕ್ರಮಿಸಿ, ಅಮಾಸೆಬೈಲಿನಿಂದ ಪೂರ್ವದಲ್ಲಿ ದಟ್ಟಕಾಡಿನ ನಡುವೆ ಇರುವ ಆ ಸ್ಥಳವನ್ನು ತಲುಪಲು ಕೊನೆಯಲ್ಲಿ ಸ್ವಲ್ಪದೂರ ಅಗಲಕಿರಿದಾದ ಮಣ್ಣುರಸ್ತೆಯಲ್ಲಿ , ಗಿಡಗಳ ಕೊಂಬೆಗಳನ್ನು ಸವರಿಕೊಂಡು ವಾಹನ ಚಲಿಸಬೇಕು. ದಟ್ಟವಾದ ನಿತ್ಯಹರಿದ್ವರ್ಣ ಕಾಡಿನ ಮಧ್ಯೆ ಕಿರಿದಾಗಿ ಚೊಕ್ಕಟಗೊಳಿಸಿದ ಜಾಗದಲ್ಲಿ ವಾಹನ ನಿಲ್ಲಿಸಿ ನೋಡಿದರೆ, ಶಾಮಿಯಾನಾ ಹಾಕಿದ ದೇಗುಲದ ಪ್ರಾಕಾರ. ಹಂಚಿನ ಮಾಡಿನ ಚಿಕ್ಕ ಕಟ್ಟಡವೇ ದೇವಾಲಯ. ಎರಡು ಶಿವಲಿಂಗದ ಆಕಾರದಲ್ಲಿ ಪ್ರಾಕೃತಿಕವಾಗಿ ಮೂಡಿರುವ ಕಲ್ಲುಗಳೇ ಇಲ್ಲಿ ಶಂಕರ-ನಾರಾಯಣ ದೇವರುಗಳಾಗಿ ಪೂಜಿಸಿಕೊಳ್ಳುತ್ತಿವೆ. ಬೃಹತ್ ಮರಗಳ ನಡುವೆ ಇರುವ ಆ ಪುಟ್ಟ ದೇವಾಲಯದ ಪೂರ್ವದಿಕ್ಕಿನ ಇಳಿಜಾರನ್ನು ಕ್ರಮಿಸಿದರೆ, ಒಂದು ಪುಟ್ಟ ನದಿ. ಅದಾಗಲೇ ಹತ್ತಿಪ್ಪತ್ತು ಭಕ್ತರು ಅಲ್ಲಿ ಸ್ನಾನ ಮಾಡುತ್ತಿದ್ದರು. ಕಾಡಿನ ಹಿನ್ನೆಲೆಯಲ್ಲಿ ಸುಂದರವಾಗಿ ಕಾಣುತ್ತಿತ್ತು ಅಲ್ಲಿನ ನದಿ ಮತ್ತು ಕಲ್ಲುಗಳ ವಿನ್ಯಾಸ.
“ಆ ನೀರಿನ ಮಧ್ಯೆ ಇರುವ ಕಲ್ಲೇ ಗೋಗರ್ಭ. ಅದರ ಮಧ್ಯೆ ನೀರಿನಲ್ಲಿ ಮುಳುಗಿ, ಕಿಂಡಿಯಲ್ಲಿ ನುಸುಳಿ ಈಚೆ ಬಂದರೆ, ಹೆಚ್ಚಿನ ಪುಣ್ಯ” ಎಂದರು ಭಕ್ತರೊಬ್ಬರು. ಆ ವಿಚಿತ್ರ ರೂಪದ ಕಲ್ಲಿನಡಿ ನುಸುಳಿದರೆ ಪುಣ್ಯದ ಜೊತೆಯಲ್ಲಿ ಒಂದು ಅಪೂರ್ವ ಅನುಭವವವಂತೂ ನಿಜಕ್ಕೂ ದೊರೆಯುತ್ತದೆ. ನೀರಿನನಡುವೆ ಇದ್ದ ಹಲವಾರು ಕಲ್ಲುಗಳೆಲ್ಲಾ ಚಿತ್ರವಿಚಿತ್ರ ಆಕಾರ ಪಡೆದಿದ್ದವು. ಪುರಾತನ ಕಾಲದಲ್ಲಿ ಮಾನವನು ಕಲ್ಲುಗಳನ್ನು ಕೊರೆದು ಪ್ರಕೃತಿ ಪೂಜೆ ನಡೆಸಿದ್ದರ ಕುರುಹಾಗಿ ಆ ರೂಪದ ಕಲ್ಲುಗಳು ರೂಪುಗೊಂಡಿರಬಹುದೆ? ಸೀತಾನದಿಯ ಹತ್ತಿರದ ಜೋಮ್ಲುತೀರ್ಥದಲ್ಲೂ ಈ ರೀತಿ ಚಿತ್ರ ವಿಚಿತ್ರ ವಿನ್ಯಾಸದ ಕಲ್ಲುಗಳಿವೆ. ನೀರಿನ ನಡುವ ಗೋವಿನ ಪಾದದ ಆಕಾರದ ಒಂದುಕಲ್ಲು. ಅದರ ಮಧ್ಯೆ ಮನುಷ್ಯ ನುಸುಳುವಂತಹ ಒಂದು ಕಿಂಡಿ. ನೀರಿನ ನಡುವೆಯೇ ಮುಳುಗಿ, ಆ ಕಿಂಡಿಯಲ್ಲಿ ನುಸುಳಿ ಈಚೆಗೆ ಬರುವ ಸಂಪ್ರದಾಯ ಕುತೂಹಲಕಾರಿ.
ಪ್ರಕೃತಿಯೇ ಒಡಮೂಡಿಸಿದ ಅಲ್ಲಿನ ಲಿಂಗಗಳಿಗೆ ಪೂಜೆ ಸಲ್ಲಿಸಿ, ದೇವಾಲಯದವರು ನೀಡಿದ ಲಘು ಉಪಾಹಾರ ಸೇವಿಸಿ, ಪುನ: ಆ ದುರ್ಗಮ ದಾರಿಯಲ್ಲಿ ವಾಪಸಾದೆವು. ಅಲ್ಲಿಂದ ಮುಂದಿನ ಶಂಕರನಾರಾಯಣ ದೇವಾಲಯಕ್ಕೆ ಸ್ವಲ್ಪ ದೂರದ ದಾರಿ – ಉದ್ದಕ್ಕೂ ಕಾಡು, ನಡುನಡುವೆ ಬಯಲು, ಊರುಗಳು. ಬಿಸಿಲು ಏರಿತ್ತು. ಹೆಂಗವಳ್ಳಿ, ಎಳಂತೂರು ಮತ್ತು ಗೋಳಿಅಂಗಡಿ ದಾಟಿ, ಮುಖ್ಯ ರÀಸ್ತೆ ತಲುಪಿ, ಸ್ವಲ್ಪ ಬಲಕ್ಕೆ ತಿರುಗಿ, ಬೆಳ್ವೆ ಗ್ರಾಮದಲ್ಲಿರುವ ಶಂಕರನಾರಾಯಣ ದೇವಾಲಯ ತಲುಪಿದೆವು. ಇಲ್ಲಿ ಬಾವಿನೀರಿಗೆ ಪಂಪು ಜೋಡಿಸಿ ಹಾರಿಸಿದ ನೀರಿನ ಸ್ನಾನ. ಬೆಳ್ವೆಯ ಪೂರ್ತಿ ದೇಗುಲ ಸಂಕೀರ್ಣವನ್ನು ಪುನ: ನಿರ್ಮಿಸಿದ್ದು ಕಾಣುತ್ತಿತ್ತು. ಕೆಲವು ವರ್ಷಗಳ ಹಿಂದೆ ದೇವಾಲಯದ ಸುತ್ತಲೂ ಬೆಳೆದಿದ್ದ ಭಾರೀ ಮರಗಳ ನೆರಳು ಪೂರ್ತಿ ಮಾಯವಾಗಿ, ಬಿರು ಬಿಸಿಲು ಬೀಳುವ ಬಯಲಾಗಿತ್ತು ಆ ಸುತ್ತಲಿನ ಸ್ಥಳ. ಹೆಬ್ಬಾಗಿಲಿನ ಕೆಲಸ ಇನ್ನೂ ಬಾಕಿ ಇದ್ದುದರಿಂದ, ಕಾಮಗಾರಿಯ ಸಾಮಗ್ರಿಗಳು ಅಲ್ಲಲ್ಲಿ ಹರಡಿದ್ದವು. ನಾಲ್ಕೆಂಟು ವಾಹನಗಳಲ್ಲಿ ಬಂದಿದ್ದ ಜನರಿಂದ ದೇಗುಲ ತುಂಬಿ ಹೋಗಿತ್ತು. ಅವರು ಹಾಡುತ್ತಿದ್ದ ಭಜನೆಗಳು ಅನುರಣನಿಸುತ್ತಿದ್ದವು. ಸನಿಹದ ಐತಾಳರ ಮನೆಯಲ್ಲಿ ಪುನ: ಫಲಹಾರ, ತಿನಿಸು ಮುಗಿಸಿಕೊಂಡು, ಮತ್ತೊಂದು ಶಂಕರನಾರಾಯಣ ದೇವಾಲಯದತ್ತ ಹೊರಟಾಗ ಮೂರು ಗಂಟೆಯ ಬಿರು ಬಿಸಿಲು.
ಪಶ್ಚಿಮ ಘಟ್ಟಗಳಲ್ಲಿ ಜನಿಸಿ, ಪಶ್ಚಿಮದತ್ತ ಸಾಗುವ ಜೀವನದಿಗಳಲ್ಲಿ ಸೀತಾನದಿ ಪ್ರಮುಖವಾದದ್ದು. ಬಾರಕೂರಿನತ್ತ ಸಾಗುವ ಹೆದ್ದಾರಿಯ ಪಕ್ಕದಲ್ಲೇ ಸಾಗುವ ಸೀತಾನದಿಯ ತಟದಲ್ಲಿ ವಾಹನ ನಿಲ್ಲಿಸಿದ ಕಲ್ಕೂರರು “ಇಲ್ಲಿ ಮೂವತ್ತುನಿಮಿಷ ಕಾಲಾವಕಾಶ. ಎಷ್ಟು ಬೇಕಾದರೂ, ಜಲ ಕ್ರೀಡೆ ಮಾಡಬಹುದು” ಎಂಬ ಅನುಮತಿ ನೀಡಿದರು. ಎಲ್ಲರೂ ಅದಕ್ಕೇ ಕಾಯುತ್ತಿದ್ದವರಂತೆ, ಸೀತಾನದಿಯಲ್ಲಿದ್ದ ಒಂದು ಮಡುವಿನಲ್ಲಿ ಮುಳುಗಿದೆವು. ಸೊಂಟ ಮುಳುಗುವಷ್ಟು ನೀರಿದ್ದ ಆ ಮಡುವಿನಲ್ಲಿ ಕೆಲವು ಸ್ಥಳಗಲ್ಲಿ ಕುತ್ತಿಯಷ್ಟು ನೀರಿದ್ದರೂ, ಸೆಳವು ಇಲ್ಲದೇ ಇದ್ದುದರಿಂದ ಸುರಕ್ಷಿತ ಎನಿಸುತ್ತಿತ್ತು. ಮಾರ್ಚ್ ತಿಂಗಳ ಬಿರು ಬಿಸಿಲಿಗೆ ಅಲ್ಲಿನ ನೀರುಬಿಸಿಯಾಗಿತ್ತು. ತಳದಲ್ಲಿದ್ದ ನೀರು ತಣ್ಣಗಿತ್ತು. ಮನಸೋ ಇಚ್ಚೆ ಸ್ನಾನ ಮಾಡಿ, ವಾಹನವೇರಿದಾಗ, ಮತ್ತೊಂದು ಹಳ್ಳಿಗಾಡಿನ ರಸ್ತೆಯಲ್ಲಿ ಚಲಿಸಿದ ವಾಹನವು ಮುಂದೆ ರಸ್ತೆ ಇಲ್ಲ ಎನ್ನುವಂತಹ ಜಾಗದಲ್ಲಿ ಬಂದು ನಿಂತಿತು. ಸುತ್ತಲೂ ಭಾರೀ ಮರಗಳು, ಅಡಿಕೆ ತೋಟ, ಮಧ್ಯೆ ಹಂಚಿನ ಮಾಡಿನ ಒಂದು ದೇವಾಲಯ. ಇದು ಅವರ್ಸೆ ಶಂಕರನಾರಾಯಣ. ಉಡುಪಿ ಮತ್ತು ಕುಂದಾಪುರ ತಾಲೂಕಿನ ಗಡಿ ಪ್ರದೇಶ. ದೇವಾಲಯದ ಎದುರು ಗದ್ದೆಗಳು, ತೋಟ, ಬಂಡೆಕಲ್ಲು. ಪಕ್ಕದಲ್ಲಿದ್ದ ಪುರಾತನ ಕಲ್ಯಾಣಿಯ ಕಲ್ಲುಗಳೆಲ್ಲ ಜರಿದುಬಿದ್ದು, ಪಾಚಿ ಹಾವಸೆಗಳೇ ತುಂಬಿದ್ದವು. ಪೂಜೆ ಮಾಡಿದ ಅರ್ಚಕರು ಈ ದೇವಾಲಯದ ಜೀರ್ಣೋದ್ಧಾರದ ವಿಚಾರ ಪ್ರಸ್ತಾಪಿಸಿದರು. ಪೌಳಿಯ ಗೋಡೆಗಳ ಮೇಲೆಲ್ಲಾ ಉದ್ದೇಶಿತ ಜೀರ್ಣೋದ್ದಾರದ ನಕ್ಷೆಗಳು.
ಸಂಜೆಬಿಸಿಲಿನಲ್ಲಿ ಹೊರಟ ವಾಹನ ವಂಡಾರು ಹತ್ತಿರದಿಂದ, ಮುದೂರಿ ದಾರಿಯಾಗಿ ಹಾಲಾಡಿ ದಾಟಿ, ಕಟ್ಟೆಮಕ್ಕಿ ಉಬ್ಬಿನ ಹತ್ತಿರ ಎಡಕ್ಕೆ ಮಣ್ಣಿನ ರಸ್ತೆಯಲ್ಲಿ ತಿರುಗಿ ಅಗ್ರಹಾರವೆಂಬ ಕುಗ್ರಾಮಕ್ಕೆ ಬಂದಿಳಿಯಿತು. ಇಲ್ಲಿ ಸಾಂಬಶಿವನ ದೇವಾಲಯದ ಪುನರ್ ನಿರ್ಮಾಣ ನಡೆಯುತ್ತಿತ್ತು. ರಥಬೀದಿಯಲ್ಲಿ ಕಲ್ಲು ಕಂಬಗಳ ಕೆತ್ತನೆ ನಡೆದಿತ್ತು. ದೇಗುಲದ ಪಕ್ಕದಲ್ಲೇ ಹರಿಯುತ್ತಿದ್ದ ವಾರಾಹಿ ನದಿಗೆ ಕಲ್ಲಿನ ಪಾವಟಿಗೆಗಳು. ಎಲ್ಲರಿಗೂ ಮತ್ತೊಮ್ಮೆ ಮನಸೋಇಚ್ಚೆ ನದಿ ಸ್ನಾನ. ಈಜು ಬಲ್ಲವರಿಗಂತೂ ಇಲ್ಲಿನ ನೀರು ಸ್ವರ್ಗ ಸಮಾನ. ಈ ನದಿಯಲ್ಲಿ ಹಿಂದೊಮ್ಮೆ ಭಾರೀ ನೆರೆ ಬಂದಾಗ, ಅಗ್ರಹಾರದಲ್ಲಿದ್ದವರಿಗೆಲ್ಲಾ ತೊಂದರೆ ಉಂಟಾಗಿ, ಹೆಚ್ಚಿನವರು ಸನಿಹದ ಶಂಕರನಾರಾಯಣಕ್ಕೆ ವಲಸೆ ಹೋದರಂತೆ. ಆದ್ದರಿಂದ, 23 ಮನೆಗಳಿದ್ದ ಆ ಗ್ರಾಮದಲ್ಲಿ ಈಗ ಇರುವುದು ಕೇವಲ ಏಳು ಮನೆಗಳು ಮಾತ್ರ. ಅಗ್ರಹಾರದಿಂದ ಹೊರಟ ನಾವು, ತಲುಪಿದ್ದು ಶಂಕರನಾರಾಯಣ ದೇವಸ್ಥಾನಕ್ಕೆ - ಬೆಳಿಗ್ಗೆ ಎಲ್ಲಿಂದ ಈ ಯಾತ್ರ ಆರಂಭಿಸಿದ್ದೆವೋ ಅಲ್ಲಿಗೇ ಬಂದು ಸೇರಿದ್ದೆವು. ನಾವು ನೋಡಿದ ಐದು ಶಂಕರನಾರಾಯಣ ದೇವಾಲಯಗಳೆಂದರೆ, 1. ಶಂಕರನಾರಾಯಣ (ಕುಂದಾಪುರ ತಾ), 2.ಹೊಳೆ ಶಂಕರನಾರಾಯಣ (ಸಿದ್ದಾಪುರ ಹತ್ತಿರ), 3.ಮಾಂಡೋವಿ ಶಂಕರನಾರಾಯಣ (ಅಮಾಸೆಬೈಲು ಹತ್ತಿರ), 4. ಬೆಳ್ವೆ 5. ಅವರ್ಸೆ. ಕೊನೆಯ ಪೂಜೆ ಮುಗಿಸಿಕೊಂಡು ಮನೆಯತ್ತ ಹೊರಟಾಗ ಸಂಜೆ ರಂಗಿನ ಅಮೂರ್ತ ಗಾನ ನಿಸರ್ಗದ ತುಂಬೆಲ್ಲಾ. ಈ ಒಂದು ದಿನದ ಯಾತ್ರಾ ರೂಪದ ಪೂಜೆಯನ್ನು ಕೇವಲ ಕ್ರಮಬದ್ದ ಪೂಜೆ ಎನ್ನುವುದಕ್ಕಿಂತ, ಗ್ರಾಮೀಣ ಪ್ರದೇಶದ ಕಾಡಿನ ನಡುವೆ ಅಡಗಿದ್ದ ನಾಲ್ಕಾರು ದೇಗುಲಗಳನ್ನು ಸಂರ್ಶಿಸುವ ನೆಪದಲ್ಲಿ ಮಾಡಿದ ಪ್ರಕೃತಿಯ ಆರಾಧನೆಯೇ ಎನ್ನುವುದು ಹೆಚ್ಚು ಸೂಕ್ತ. (ಚಿತ್ರ : ಶಶಿಧರ ಹೆಬ್ಬಾರ ಹಾಲಾಡಿ)
Comments
ಕೂತಹಲಕರ ಮಾಹಿತಿಗೆ ಧನ್ಯವಾದಗಳು,
In reply to ಕೂತಹಲಕರ ಮಾಹಿತಿಗೆ ಧನ್ಯವಾದಗಳು, by sathishnasa
ನೀವಂದಂತೆ ಐದು ಚಿತ್ರಗಳನ್ನು
In reply to ನೀವಂದಂತೆ ಐದು ಚಿತ್ರಗಳನ್ನು by sasi.hebbar
ನೀವು ಕ್ಲಿಕ್ಕಿಸಿದ ಈ 'ಡೈವಿ0ಗ್'
In reply to ನೀವು ಕ್ಲಿಕ್ಕಿಸಿದ ಈ 'ಡೈವಿ0ಗ್' by CanTHeeRava
! ಒಳ್ಳೆಯ ವಿಚಾರ ಹೇಳಿದ್ಫ್ದೀರಿ
ನನಗೆ ಇಷ್ಟವಾದ ನಿಮ್ಮ ಕೊನೆಯ
In reply to ನನಗೆ ಇಷ್ಟವಾದ ನಿಮ್ಮ ಕೊನೆಯ by kavinagaraj
ನೀವಂದಂತೆ, ಕಾಡಿನ ನಡುವೆ
ಎಷ್ಟೋ ಬಾರಿ ಊರಿಗೆ ಹೋಗಿದ್ದೇನೆ.
In reply to ಎಷ್ಟೋ ಬಾರಿ ಊರಿಗೆ ಹೋಗಿದ್ದೇನೆ. by Shobha Kaduvalli
ಶಂಕರ ನಾರಾಯಣ ಎಂದು ಆಗಬೇಕಿತ್ತು.
In reply to ಶಂಕರ ನಾರಾಯಣ ಎಂದು ಆಗಬೇಕಿತ್ತು. by Shobha Kaduvalli
ಐದು ದೇವಾಲಯಗಳನ್ನು ಹಿಂದೆ
! ಒಳ್ಳೆಯ ವಿಚಾರ ಹೇಳಿದ್ಫ್ದೀರಿ
ನಾನೂ ಸಹ ಪಂಚ ಶಂಕರನಾರಾಯಣ
In reply to ನಾನೂ ಸಹ ಪಂಚ ಶಂಕರನಾರಾಯಣ by Manjunatha D G
ಈಗ ಕಾಮಗಾರಿ ಮುಗಿದಿದೆ; ಹೊಸ
ಉ: ಪಂಚ ಶಂಕರನಾರಾಯಣ ದರ್ಶನ
ನಿಮ್ಮ ಪಂಚ ಶಂಕರ ನಾರಾಯಣ ದೇಗುಲಗಳ ದರ್ಶನದ ಅನುಭವದ ಲೇಖನ ಉತ್ತಮವಾಗಿದೆ. ಬೆಳ್ವೆ ಶಂಕರ ನಾರಾಯಣ ದೇವಾಲಯವು ನವೀಕರಣಗೊಂಡಿದ್ದು, ಈ ಬಾರಿ ಏಪ್ರಿಲ್ 15ರಂದು ಶ್ರೀ ಕ್ಷೇತ್ರದ ರಥೋತ್ಸವ ಜಾತ್ರಮಹೋತ್ಸವಕ್ಕೆ ದಯವಿಟ್ಟು ಆಗಮಿಸಿ.