ಕಾಣದ ಮನ ವ್ಯಾಪಾರ
ಮನದ ಅಪಾರ ಶಕ್ತಿಯ ವಿಸ್ಮಯ ಮಾತಲ್ಹಿಡಿಯಲಾಗದ ಮಹಾಕಾಯ. ಬರೆದು ಕಟ್ಟಿಡಲಾಗದ ಅನಂತ ವಿಸ್ತಾರದ ದಾಯ. ಅದರ ಯಾನದ ಪರಿಯನ್ನು ಸ್ವೇಚ್ಛೆಯೆನ್ನಬೇಕೊ, ಸ್ವಾತ್ಯಂತ್ರವೆನ್ನಬೇಕೊ ಎನ್ನುವ ಗೊಂದಲ ಒಂದೆಡೆಯಾದರೆ, ಅದನ್ನು ನಿಯಂತ್ರಿಸ ಬಯಸಿ ಕಡಿವಾಣ ಹಾಕಿ ಜಿತೇಂದ್ರಿಯರಾಗ ಹೊರಟವರ ಆಟವಾಡಿಸಿ ಕಾಡುವ ಪರಿ ಅದರ ಅದ್ಭುತ ಶಕ್ತಿಯ ಪ್ರದರ್ಶನವೆನ್ನಬೇಕೊ ಅಥವ ನಿಷ್ಠೆಯ ಪರೀಕ್ಷಿಸುವ ಪರಿಕರವೆನ್ನಬೇಕೊ ಅನ್ನುವ ಅನುಮಾನ ಇನ್ನೊಂದೆಡೆ. ಅರಿತೆವೆಂದವರ ಅರಿವೆ ನಗೆಪಾಟಲಾಗಿಸುವ ತರ ಒಂದು ಕಡೆಯಾದರೆ, ಅರಿಯದವರ ಪರದಾಟ, ತಾಕಲಾಟಗಳಿಗೆಲ್ಲ ಮೂಕಸಾಕ್ಷಿಯಾಗಿ ವೀಕ್ಷಕನಂತೆ ನಿಂತು ನೋಡುವ ಪರಿ ಇನ್ನೊಂದೆಡೆ. ಇದೆಲ್ಲದರ ನಡುವೆಯೂ ಎದ್ದು ಕಾಣುವ ಅಂಶ ಅದರ ಕಡಿವಾಣವಿರದ ಯಾನ. ಹೇಗೆಂದರೆ ಹಾಗೆ ಎಲ್ಲೆಂದರೆ ಅಲ್ಲಿ ಸುತ್ತಾಡುವ ಅದನ್ನು ನಿರ್ಬಂಧಿಸುವುದೊ, ಅನುಕರಿಸುವುದೊ, ಕರ್ಮದ ಬಟ್ಟೆ ಕಟ್ಟಿ ಹೋದಲ್ಲಿಗೆ ಬಿಟ್ಟುಬಿಡುವುದೊ ಅನ್ನುವ ಜಿಜ್ಞಾಸೆಗೆ ಕೊನೆ ಮೊದಲಿರುವುದಿಲ್ಲ.
ಆ ಮನ ಯಾನದ ಎರಡು ತುಣುಕುಗಳು ಕವನ ರೂಪದಲ್ಲಿ ಈ ಕೆಳಗೆ :-)
01. ಕಾಣದ ಮನ ಯಾನ
_____________________
ಕಾಣದ ತೀರದಲೆಲ್ಲೊ ಹುಡುಕಿದೆ
ಕಳುವಾಗಿ ಹೋಗಿದೆ ಗಮನ
ಯಾವ ತೆರೆಗಳಡಿ ಕೊಚ್ಚಿ ಹೋಗಿದೆಯೊ
ಕಾಣದಾಗಿದೆಯಲ್ಲ ಮನದ ಮನ ||
ಭ್ರಮೆಗಳಾವುದನೊ ಬೆನ್ನಟ್ಟುತಲಿ
ಕುದುರೆಯೇರಿತ್ತಲ್ಲ ನಿರ್ಗಮನ
ಭ್ರಮೆಯೊಡಲನೆಲ್ಲ ದಿಗ್ಭ್ರಮೆ ನುಂಗಿತೇನು
ಕಾಣದಿಂದು ಕಾಣೆ ಪುನರಾಗಮನ ||
ಹೇಳಿ ಹೋಗೆಂದರು ಹೇಳದೆ ಹೊರಟು
ಸುತ್ತುವುದದರ ಜಾಯಮಾನ
ತಾರೆ ನಿಹಾರಿಕೆ ಉಲ್ಕೆ ಗ್ರಹ ಧೂಮಕೇತು
ಎಲ್ಹೂಡಿದೆ ಕಾಣದೆದೆ ಠಿಕಾಣ ||
ಎಲ್ಲೆ ಕಟ್ಟಲೆಂದೆ ಲಲ್ಲೆಗರೆದು ಘನ ಬೇಲಿ
ಬಂಧ ಕಟ್ಟಿ ಮಮ ಮೋಹ ಪಾಶ
ಜಾಡಿಸಿ ಧೂಳೆಬ್ಬಿಸಿ ಹಾರಾಡೊ ಹುಮ್ಮಸಲಿ
ಕತ್ತರಿಸಿ ಪದೆ ಪದೆ ಅನಿವಾಸ ||
ಕಣ್ಗಾಣದಪರಿಮಿತ ಶಕ್ತಿಯನಾವರಣ
ಬಾಗಿಲ ತೆರೆದು ಮುಚ್ಚುವವರವರಾರೊ?
ಬಾಗಿಲಿರದ ಗೋಡೆ ಸಂಚರಿಸುವ ಕರಣ
ಹೋಗಿ ಬರುವ ಅಪಾರ ಮನ ತೇರೊ! ||
02. ಮನದ ಬೆನ್ನೇರಿದ ಯಾನ
____________________________
ಹೃದ್ಗದ್ಯ ಭಾವ ಪ್ರೇರೆಪಿಸಿತೆ ಯಾನ
ನಿರಂತರ ಅಲೆದಾಟದ ಕುಹಕ
ನಿಂತಲ್ಲಿ ನಿಲದೆ ಕುಂತಲ್ಲಿ ಕೂರದೆ
ಚಡಪಡಿಸೊ ಮನಸರಸಿ ಸಿರಿ ಬೆಳಕ ||
ಕೆಳೆಯನರಸಿ ದೂರದ ಹುಟ್ಟೂರಿಗೆಲ್ಲೊ
ಹುಡುಕುತ್ತ ಹೋದೆಯಾ ಮನವೆ ?
ಹಿಡಿದಿಟ್ಟರು ಬಂಧನ ಧಿಕ್ಕರಿಸೊ ಧೈರ್ಯ
ಯಾರ ಗಣಿಸದ ರೀತಿ ನಿರ್ಭಯವೆ? ||
ಯಾರಿಲ್ಲ ಇಲ್ಲಿ ಕಾವಲಾಧಿಕಾರಿ ಜನ
ನಿನ್ನೊಳಗೆ ಹೊರಗೆ ಬಿಡುವ ಲೆಕ್ಕ
ಇಡುವರಾರಿಹರು ನೀ ತಾನೆ ಕಾವಲು
ನೀ ಬರೆದ ನಿಯಮವೆ ನಿಯಾಮಕ ||
ಛಲ ಬಿಡದ ದೇಹ ಹುಡುಕುವೆನೆಂದು
ಕುದುರೆಯೇರಿತಲ್ಲ ಹಿಂಬಾಲಿಸುತ
ಕೊನೆ ಪಯಣದವರೆಗೆ ತಿಳಿಯಲಿಲ್ಲ
ನಿನ್ನೇರಿದ್ದರಿಯದೆ ಓಡಿ ದೌಡಾಯಿಸುತ ||
ಅರಿವ ಹೊತ್ತಿಗೆ ತಡವಾಗಿ ಹೋಗಿ
ಮರೆಯಾಗಿ ಹೋಗಿತ್ತ ಮನದಮನ
ಅಲೆದಂತೆ ಅಲೆದು ಪ್ರಶ್ನೆಗಳ ತೊರೆದು
ಹೆಜ್ಜೆಯಿಕ್ಕಿ ಉಳಿದುದು ಬರಿ ನಮನ ||
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
Comments
ಉ: ಕಾಣದ ಮನ ವ್ಯಾಪಾರ
ನಾಗೇಶ ಮೈಸೂರು ರವರಿಗೆ ವಂದನೆಗಳು
ಕಾಣದ ಮನದ ವ್ಯಾಪಾರ ಮನೋ ಲಹರಿಯ ಒಂದು ಅರ್ಥಪೂರ್ಣ ನಿರೂಪಣೆ. ಮನೋ ವ್ಯಾಪಾರದ ವಿಸ್ತಾರ ಅಪಾರ ಅದಕ್ಕೆ ಮಿತಿಯಿಲ್ಲ, ಅದು ಸ್ವಾತಂತ್ರ ಮತ್ತು ಸ್ವೇಚ್ಛೆ ಎರಡನ್ನು ಬೇಡುವಂತಹುದು ಅದಕ್ಕೆ ಕಡಿವಾಣ ಹಾಕಲು ಹೊರಟೆವೋ ಅದು ನಮ್ಮ ಚಿತ್ತವನ್ನೆ ಅಲ್ಲದೆ ದೈನಂದಿನ ಬದುಕನ್ನೆ ಕಲಕಿ ಬಿಡುವಂತಹುದು. ಕಾಣದ ಮನ ಮತ್ತು ಮನದ ಬೆನ್ನೇರಿದ ಯಾನಗಳು ಮನೋ ವ್ಯಾಪಾರದ ಸುಂದರ ನಿರೂಪಣೆಗಳು ಧನ್ಯವಾಧಗಳು.
In reply to ಉ: ಕಾಣದ ಮನ ವ್ಯಾಪಾರ by H A Patil Patil
ಉ: ಕಾಣದ ಮನ ವ್ಯಾಪಾರ
ಪಾಟೀಲರೆ ನಮಸ್ಕಾರ. ಮನಸಿನ ವ್ಯಾಪಾರದ ಮೆಚ್ಚುಗೆಯ ಮಾತುಗಳನ್ನು ಪ್ರತಿಕ್ರಿಯೆಯ ಸಾರಾಂಶದಲ್ಲಿ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಾ. ಧನ್ಯವಾದಗಳು :-)
ಉ: ಕಾಣದ ಮನ ವ್ಯಾಪಾರ
ಮತ್ತೆ ಮತ್ತೆ ಚಂಚಲಿಸಿ,,,ಇಲ್ಲೇ ಇದ್ದಂತೆ ಇದ್ದು, ಕ್ಷಣಾರ್ಧದಲ್ಲಿ ಇನ್ನೆಲ್ಲೋ ಓಡುವ, ಪ್ರತಿ ಮನದ ಕನ್ನಡಿಯಾಗಿ, ಮನದ ಜಾಡು ಹಿಡಿದು ಸಾಗಿ ಅದನು ಪದಗಳಲ್ಲಿ ಎಳೆದು ತಂದು ಸೆರೆ ಹಿಡಿದ ರೀತಿ ಮನ-ಮೋಹಕ,,,
ಸುಂದರವಾಗಿದೆ ಬರಹ
-ನವೀನ್ ಜೀ ಕೇ
In reply to ಉ: ಕಾಣದ ಮನ ವ್ಯಾಪಾರ by naveengkn
ಉ: ಕಾಣದ ಮನ ವ್ಯಾಪಾರ
ನವೀನ್ ರವರೆ ನಮಸ್ಕಾರ. ಮನದ ಚೆಲ್ಲಾಟದ ಪರಿಯನ್ನು ನಿಮ್ಮ ಪ್ರತಿಕ್ರಿಯೆಯಲ್ಲಿ ಸಾರವತ್ತಾಗಿ ಹಿಡಿದ ರೀತಿಯೂ ಮನಮೋಹಕವಾಗಿದೆ. ನಿಮ್ಮ ತುಂಬು ಮೆಚ್ಚಿಗೆಗೆ ಧನ್ಯವಾದಗಳು :-)
In reply to ಉ: ಕಾಣದ ಮನ ವ್ಯಾಪಾರ by nageshamysore
ಉ: ಕಾಣದ ಮನ ವ್ಯಾಪಾರ
ನಾಗೇಶರೆ, ..... ವ್ಯಾಪಾರ ಚೆನ್ನಾಗಿದೆ.:)
ನವೀನರ ಪ್ರತಿಕ್ರಿಯೆ ಸಹ.
In reply to ಉ: ಕಾಣದ ಮನ ವ್ಯಾಪಾರ by ಗಣೇಶ
ಉ: ಕಾಣದ ಮನ ವ್ಯಾಪಾರ
ಗಣೇಶ್ ಜಿ, ಹಾಕಿದ ಬಂಡವಾಳಕ್ಕಂತೂ ಮೋಸವಿಲ್ಲ ಅನ್ನಬಹುದಲ್ಲವೆ :-)
ಉ: ಕಾಣದ ಮನ ವ್ಯಾಪಾರ
ಮನಸ್ಸಿನ ಬಗ್ಗೆ ಜಿಜ್ಞಾಸೆಯ ಕವನ ಚೆನ್ನಾಗಿದೆ ನಾಗೇಶ್ ರವರೇ, ಆದರೆ ಒಂದು ಮನಸ್ಸಿನಂತೆ ನಡೆದರೆ ತೊಂದರೆಗೊಳಗಾಗುವುದು ಖಂಡಿತ ಮನಸ್ಸು ಬುದ್ದಿಯ ಹಿಡಿತದಲ್ಲಿದ್ದರೆ ಒಳ್ಳೆಯದು ಅಲ್ಲವೇ ? ಧನ್ಯವಾದಗಳೊಂದಿಗೆ.....ಸತೀಶ್
In reply to ಉ: ಕಾಣದ ಮನ ವ್ಯಾಪಾರ by sathishnasa
ಉ: ಕಾಣದ ಮನ ವ್ಯಾಪಾರ
ನಿಜ ಸತೀಶರೆ..ಮನಸನ್ನು ಬುದ್ಧಿಯ ಹಿಡಿತದಲ್ಲಿಡಲು ಸಾಧ್ಯವಾದರೆ ಅದಕ್ಕಿಂತ ಸಾಧನೆ ಬೇರಿಲ್ಲ. ಬಹುಶಃ ಅದೆ ಯೋಗತ್ವಕ್ಕೇರಿಸುವ ಮಜಲು. ಧನ್ಯವಾದಗಳು :-)
ಉ: ಕಾಣದ ಮನ ವ್ಯಾಪಾರ
'ಎಲ್ಲೋ ಹುಡುಕಿದೆ' ಎಂಬ ಭಾವಗೀತೆಯ ನೆನಪಾಯಿತು. ಆ ಗೀತೆಗೂ ಇದಕ್ಕೂ ಸಂಬಂಧವಿಲ್ಲ. ಕಾಲಪುರುಷನ ಮಹಿಮೆ ಚೆನ್ನಾಗಿ ಬಿಂಬಿಸಿರುವಿರಿ.
In reply to ಉ: ಕಾಣದ ಮನ ವ್ಯಾಪಾರ by kavinagaraj
ಉ: ಕಾಣದ ಮನ ವ್ಯಾಪಾರ
ನಾನೂ ಆ ಭಾವಗೀತೆ ಕೇಳಿದ ನೆನಪು. ಪೂರ್ತಿ ಸಾಲುಗಳ ನೆನಪಿರದಿದ್ದರೂ ಮೊದಲ ಒಂದೆರಡು ಸಾಲು ತುಣುಕಾಗಿ ನೆನಪಿದೆ. ಹೌದು ಇದು ಪೂರ್ತಿ ಮನಸಿನ ಕಾಲಾಯಾಪನೆ - ಧನ್ಯವಾದಗಳು ಕವಿಗಳೆ :-)