ಅನ್ವೇಷಣೆಯ ಅಭಿಯಾನ ....
ಒಳಗಿನದೇನೊ ಚಮತ್ಕಾರದ ಶಕ್ತಿ ತೇಜ - ಮನಸೊ, ಚಿತ್ತವೊ, ಅಂತರಾತ್ಮವೊ ಅಥವಾ ಸ್ವೇಚ್ಛೆಯಲಿರಬಯಸುವ ನಮ್ಮೊಳಗವಿತ ನಮ್ಮದೆ ಪ್ರತಿಬಿಂಬವೊ - ಅದರ ವಿವಿಧಾವತಾರದ ಅಗಣಿತ ಪ್ರಜ್ಞೆ ಪ್ರಪುಲ್ಲಗೊಳಿಸಿದಷ್ಟೆ ಸಹಜವಾಗಿ ಪ್ರಕ್ಷುಬ್ದಗೊಳಿಸುವ ಬಗೆ ಉಪಮಾತೀತ. ಅದು ಪ್ರಶ್ನೆ ಕೇಳುವುದೊ, ಕೇಳಿಸುವುದೊ, ಉತ್ತರಕಾಗಿ ಹುಡುಕುವುದೊ, ಹುಡುಕಿಸುವುದೊ ಎಲ್ಲವು ಮನೊ ಭ್ರಾಂತಿಯ ಪಿತ್ತ ವಿಕಾರವಾದಷ್ಟೆ ಸಹಜವಾಗಿ ಅರಿವಿನ ಸೀಮೋಲ್ಲಂಘನದ ಮನ ದಿಗ್ಭ್ರಾಂತಿಯೂ ಹೌದು. ಅದರೆಲ್ಲ ಅಯೋಮಯದ ಸಂಕಲನವನ್ನು ಚಿತ್ತ ಭ್ರಮೆಯೆನ್ನುವುದೊ, ಚಿತ್ತ ವಿಕಾರವೆನ್ನುವುದೊ, ಚಿತ್ತ ಲಾಸ್ಯದ ವಿಕಾಸವೆನ್ನುವುದೊ - ಎಲ್ಲಾ ಅವರವರ ಭಾವದ ಹೂರಣ ಲಟ್ಟಿಸಿದ ಹೋಳಿಗೆಯಂತೆ. ಆದರೆ ಆ ಪ್ರಜ್ಞೆಗೆ ಇದರ ಗಣನೆಯಿದೆಯೆ ಹೇಳಬರದು. ನಮ್ಮ ಬುದ್ಧಿಮತ್ತೆಯ ಸ್ತರದಲಿ ಗ್ರಹಿಸಲ್ಪಟ್ಟ ಒಳಿತು ಕೆಡಕು, ಸರಿ ತಪ್ಪುಗಳಾವುದನ್ನು ಲೆಕ್ಕಿಸದೆ ತನ್ನ ಪಾಡಿಗೆ ತನ್ನ ಪತಾಕೆ ಹಾರಿಸುತ್ತ ವಿಹರಿಸುವ ಈ ಅಂತರ್ಪ್ರಜ್ಞೆ ನಮಗರಿಯದಂತೆ ಆ ವಿಶ್ವಪ್ರಜ್ಞೆಯ ಜತೆಗೆ ಅನಿರ್ಬಂಧಿತ ಸಂಬಂಧವಿಟ್ಟಿದೆಯೊ ಏನೊ? ಅದರಿಂದಾಗೆ ಯಾವಾಗಲೆಂದರೆ ಅವಾಗ, ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಇದ್ದಕ್ಕಿದ್ದಂತೆ ಹಾರಿ ಸಂಚರಿಸಿ, ಏನೊ ಅವಸರದ ಕಾರ್ಯ ಮುಗಿಸುವ ಹುನ್ನಾರದಲಿರುವಂತೆ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಜಿಗಿದು ಕ್ಷಣಾರ್ಧದಲಿ ಸಹಸ್ರ ಯೋಜನ ಕ್ರಮಿಸಿ, ಅದರ ದುಪ್ಪಟ್ಟು ವೇಗದಲಿ ಮತ್ತೆ ಮೂಲ ಸ್ಥಾನ ಸೇರಿಕೊಂಡು, ಮತ್ತೆ ಇನ್ನೆಲ್ಲೊ ನೆಗೆದು ಸುತ್ತು ಹೊಡೆದು ಕೇಕೆ ಹಾಕಿ ಕುಣಿದು ಮತ್ತೆ ತವರಿಗೆ ಲಗ್ಗೆಯಿಕ್ಕುತಲೆ ಮತ್ತೊಂದರ ವಾಸನೆಯನ್ನು ಆಘ್ರಾಣಿಸಿ ಮತ್ತೊಂದು ಯಾನಕೆ ಸಿದ್ದವಾಗುತ್ತದೆ. ಸದಾ ನಮ್ಮಲ್ಲೆ ಇದ್ದೂ, ಇಲ್ಲದಂತಿರುವ ಇದು ಸುಪರಿಚಿತವೊ, ಅಪರಿಚಿತವೊ ಎಂದು ನಮಗೆ ಅನುಮಾನ ಹುಟ್ಟಿಸಿಬಿಡುವುದು ಇದರ ಮತ್ತೊಂದು ಚಳಕ. ಹಿಡಿಯಲಾದರೆ ಜಿತೆಂದ್ರರಾದೆವೆಂದುಕೊಳ್ಳುವರು, ಹಿಡಿಯಲಾಗದಿರೆ ಮಾಯೆಯ ಮುಸುಕೆನ್ನುವರು. ಹಿಡಿಯಲೂ ಆಗದ ಬಿಡಲೂ ಆಗದ ಒದ್ದಾಟದಲ್ಲಿ ಬಿದ್ದರೆ ಸಂಸಾರ ಚಕ್ರವೆನ್ನುವರು. ಯಾರೇನೆಂದುಕೊಂಡರೂ ಎಲ್ಲರನ್ನು ಏಮಾರಿಸಿ ಎಲ್ಲೆಲ್ಲೊ ಸುತ್ತಿ ಸುಳಿದು ಆಯಾಸ , ಬಳಲಿಕೆಯಿಲ್ಲದೆ ಹರ್ಷೋಲ್ಲಾಸದ ದಿರುಸುಟ್ಟಂತೆ ಸುತ್ತಾಟ ಮುಗಿಸಿ ವಿಶ್ರಾಮ ತಾಣಕ್ಕೆ ಬರುವ ಈ ಅಭಿವ್ಯಕ್ತಿಯ ವಿಶ್ರಾಂತಿ ಬಹುಶಃ ಈ ತರಹದ ಸ್ವೇಚ್ಛಾಯಾನದಲೆ ಹುದುಗಿದೆಯೊ ಏನೊ - ಅನಂತ ವಿಶ್ವ, ಬ್ರಹ್ಮಾಂಡದ ರಹಸ್ಯಗಳನೆಲ್ಲ ಭೇದಿಸಿ ಅರಿಯುವ ಸತತ, ನಿರಂತರ ಅನ್ವೇಷಣೆಯಲ್ಲಿ.
ಪದಗಳಲಿ ಹಿಡಿದಿಡಲಾಗದ ಆ ಅನ್ವೇಷಣೆಯ ತುಣುಕೊಂದೆರಡರ ಅಭಿಯಾನ - ಈ ಪದ್ಯ.
ಪರಿಭ್ರಮಣ (ಕವಿತೆ)
_____________________
ಜಾರಿ ಬಿದ್ದ ತಮದಲೆಲ್ಲೊ
ಬೆಳಕಿನ ಬಲವಡಗಿದ ಕುರುಹು
ಕಪ್ಪು ಬಿಲವನ್ಹೊಕ್ಕ ಮೇಲೆ
ಹೊರದಾರಿ ಬಿಳಿ ಬಿಲದ ಹರಹು ||
ಅಗಣಿತ ಯೋಜನ ಉದ್ದಗಲ
ಅಳೆಯಲಾಗದ ವಿಸ್ತಾರವೆ ಬಹಳ
ಯುಗಯುಗಾಂತರದ ಜೋಗುಳ
ಹಾಡಿರುವವಳಾರೊ ತಿಳಿಯದಾಳ ||
ತೊಟ್ಟಿಕ್ಕಿತೆ ಕಂಬನಿ ಮಳೆ ಹನಿ
ಕರಗಿ ಕತ್ತಲಲಿ ಕಾಣದ ಗೃಹಿಣಿ,
ಹಾಡಿನದೆ ನಿರಂತರ ಮಾರ್ದನಿ
ನೀರವತೆ ಬೋರಲು ಬಿದ್ದಾ ತರುಣಿ ||
ಬಿಕ್ಕಿದೆಯೊ ನಕ್ಕಿದೆಯೊ ಮನ
ಅರಿವಾಗಬಿಡ ನಿರ್ವಾತ ಅನುಮಾನ
ಮಾತಿಲ್ಲದ ಮೌನದೆ ಸಂವಹನ
ಕೇಳದವಳ ದೆಸೆ ನಂಬುವುದಾರನ್ನ ||
ಗಡಿಯಿಂದಾಚೆಗೆ ಪರಿಭ್ರಮಣ
ಎಲ್ಲೆ ಕಟ್ಟು ಮೀರಿ ಹಾರಿದದೆ ಮನ
ನೋಡುತೆಲ್ಲ ಮನೋವೇಗ ಕ್ಷಣ
ಮತ್ತೆ ಗೂಡ ಸೇರೊ ಕ್ಷಣ ವಿಲಕ್ಷಣ ||
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
Comments
ಉ: ಅನ್ವೇಷಣೆಯ ಅಭಿಯಾನ ....
tumba chennagide lekhana
In reply to ಉ: ಅನ್ವೇಷಣೆಯ ಅಭಿಯಾನ .... by baktavarbaba
ಉ: ಅನ್ವೇಷಣೆಯ ಅಭಿಯಾನ ....
ಶ್ರೀಯುತ ಬಾಬಾರವರಿಗೆ ನಮಸ್ಕಾರ..ತಮ್ಮ ಮೆಚ್ಚುಗೆಯ ಸುಂದರ ಪ್ರತಿಕ್ರಿಯೆಗೆ ಹೃತ್ಪೂರ್ವಕ ಧನ್ಯವಾದಗಳು :-)
ಉ: ಅನ್ವೇಷಣೆಯ ಅಭಿಯಾನ ....
naagesh mysooru ravarige vandanegalu
tamma anveshaneya abhiyaana nammannoo namma jeevanada ola hokku nodikolluvante maaditu. gadiyindaachege paribhramana..................matte gooda seroo kshana vilakshana, idondu arthapooorna abhivyakfhi, Dhanyavaadagalu.
In reply to ಉ: ಅನ್ವೇಷಣೆಯ ಅಭಿಯಾನ .... by H A Patil Patil
ಉ: ಅನ್ವೇಷಣೆಯ ಅಭಿಯಾನ ....
ಪಾಟೀಲರಿಗೆ ನಮಸ್ಕಾರಗಳು. ತಮ್ಮ ಸುಂದರ ಪ್ರತಿಕ್ರಿಯೆ ಈ ಅಭಿವ್ಯಕ್ತಿಯ ಆಂತರಿಕ ಸೌಂದರ್ಯಕ್ಕೆ ಮತ್ತಷ್ಟು ಮೆರುಗಿತ್ತಿದೆ. ಮನದ ವಿಲಕ್ಷಣತೆಯ ಪರಿಯನ್ನು ಪದಗಳಲ್ಲಿ ಹಿಡಿದಿಡಲು ಹೆಣಗಿದರು ಆ ಅಭಿವ್ಯಕ್ತಿಯನ್ನು ಗ್ರಹಿಸಬಲ್ಲ ಸೂಕ್ಷ್ಮ ಕವಿ ಮನಕ್ಕೆ ಅದು ಸ್ವಯಂವೇದ್ಯವಾಗುತ್ತದೆ. ಪ್ರತಿಕ್ರಿಯೆಗೆ ಧನ್ಯವಾದಗಳು.
ಉ: ಅನ್ವೇಷಣೆಯ ಅಭಿಯಾನ ....
ಮನದ ವಿಮಾನ ಏರಿ ಪಯಣ ಹೊರಟಿದ್ದೇವೆ ನಾವು,,,,,ಎಲ್ಲಿಗೆ?? ಕೇಳುವುದು ಯಾರನ್ನ ?
ಅದರ ಆಳ ಅಗಲ ಬಲ್ಲವರಾರು?
ನಮಗೆ ತಿಳಿದಿದ್ದು ಬರಿಯ ಅದರ ಛಾಯೆ ಎಂದೆನಿಸುತ್ತದೆ ಕೆಲವೊಮ್ಮೆ,,,,,
ಅದು ಹೊದಲ್ಲಿಯೆ ಜೀವನ, ಅದು ನಿಂತಾಗಲೆ ಮರಣ,,,,
ವಿಶ್ವಾತ್ಮನೊಂದಿಗೆ ಸೇರಿ,,, ಇನ್ನುಳಿದ ಬದುಕಿದ ಮನದಲ್ಲಿ ಬದುಕುವ ಕಿಚ್ಚು ಹಚ್ಚಿಸುವ ಮನವೇ ಎಂದೆಂದು ಚಿರ ಯವ್ವನ,,,
ನಾಗೆಶರೆ,, ಬರಹ ಮೈಮರೆಸುವಂತಿದೆ,,,,
ನವೀನ್ ಜೀ ಕೇ
In reply to ಉ: ಅನ್ವೇಷಣೆಯ ಅಭಿಯಾನ .... by naveengkn
ಉ: ಅನ್ವೇಷಣೆಯ ಅಭಿಯಾನ ....
ನಮಸ್ಕಾರ ನವೀನರೆ...ಆ ವಿಶ್ವಾತ್ಮದ ಅಳ ಅಗಲ ವಿಸ್ತಾರ ಅರಿಯಲಾಗದ ವಿಸ್ಮಯ. ಅದು ನನ್ನನ್ನು, ನಿಮ್ಮನ್ನೇ ಏನು , ಯಾರನ್ನೂ ಕಾಡದೆ ಬಿಟ್ಟಿಲ್ಲ; ಯಾರಿಗೂ ಗೆಲ್ಲಲು ಬಿಟ್ಟಿಲ್ಲ. ಅದಕ್ಕೆ ಪ್ರತಿಮಾತ್ಮಕ ರೂಪದಲ್ಲಿ ಬಿಳಿ ಬಿಲ ಕಪ್ಪು ಬಿಲಕ್ಕೆ ಹೋಲಿಸಿದೆ ಕವನದಲ್ಲಿ (ವೈಟ್ ಹೋಲ್, ಬ್ಲಾಕ್ ಹೋಲ್). ಮತ್ತೆ ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು :-)
ಉ: ಅನ್ವೇಷಣೆಯ ಅಭಿಯಾನ ....
ಮನಸ್ಸು ಅತ್ಯಂತ ವೇಗಿ ಮಾತ್ರವಲ್ಲ, ಚಂಚಲೆಯೂ ಕೂಡ! 'ಚಪಳೆ ಸೊಡರ ಕುಡಿಯಂ ಪೋಲ್ವಳ್' ಎಂಬ ಕವಿವಾಣಿ ನಿಜ.
In reply to ಉ: ಅನ್ವೇಷಣೆಯ ಅಭಿಯಾನ .... by kavinagaraj
ಉ: ಅನ್ವೇಷಣೆಯ ಅಭಿಯಾನ ....
'ಚಪಳೆ ಸೊಡರ ಕುಡಿಯಂ ಪೋಲ್ವಳ್' ಎಂತಹ ಸುಂದರ ಹೋಲಿಕೆ ಕವಿಗಳೆ! - ಚಪಲ ಚಿತ್ತ ಚನ್ನಿಗರಾಯ, ಮನ ಮರ್ಕಟ ಎಂತೆಲ್ಲ ಹೋಲಿಸುವುದು ಈ ಕಾರಣದಿಂದಲೆ ಇರಬೇಕು (ನಾನೊಂದು ಕವಿತೆಗೆ 'ಕವಿ ಪಿತ್ತ, ಕಪಿ ಚಿತ್ತ' ಅಂತಲೆ ಹೆಸರಿಸಿ ಕೆಲ ಕವಿ ಮನ ವಿಲಕ್ಷಣತೆಯ ಲಕ್ಷಣಗಳನ್ನು ಆ ಚಂಚಲ ಗುಂಪಿಗೆ ಸೇರಿಸಿಬಿಟ್ಟಿದ್ದೇನೆ) - ಧನ್ಯವಾದಗಳು ಕವಿಗಳೆ :-)