ಸಣ್ಣಕತೆ : ಮನೆಗೆ ಬಂದ ಮೋಹಿನಿ
ಅದೇನೊ ಈ ಟೀವಿಗಳ ಹಾವಳಿ ಜಾಸ್ತಿಯಾದನಂತರ ಎಲ್ಲರ ಮನೆಗಳಲ್ಲಿ ರಾತ್ರಿ ಮಲಗುವ ಸಮಯವೆ ಹೆಚ್ಚು ಕಡಿಮೆ ಆಗಿಹೋಗಿದೆ. ಮೊದಲೆಲ್ಲ ರಾತ್ರಿ ಹತ್ತು ದಾಟಿತು ಅಂದರೆ ಸಾಕು ಎಲ್ಲರ ಮನೆಯ ದೀಪಗಳು ಆರುತ್ತಿದ್ದವು. ಈಗಲಾದರೆ ಅರ್ಧರಾತ್ರಿ ದಾಟಿದರು ಯಾವುದೊ ಚಾನಲ್ ನೋಡುತ್ತ ತೂಕಡಿಸುತ್ತ ಕುಳಿತಿರುವವರೆ ಜಾಸ್ತಿ.
ಕಳೆದ ವಾರ ಹೀಗೆ ಆಯಿತು. ಮನೆಯಲ್ಲಿ ಹೆಂಡತಿ ಹಾಗು ಮಗಳು ರಾತ್ರಿ ಹತ್ತೂವರೆ ಆಯಿತೆಂದು ಹೋಗಿ ಮಲಗಿಬಿಟ್ಟರು, ನಾನು ವಿದೇಶಿ ಚಾನಲ್ ನ ಹಾರರ್ ಸಿನಿಮಾ ನೋಡುತ್ತ ಕುಳಿತಿದ್ದವನು, ಟೀವಿ ಆರಿಸಿ ಏಳುವಾಗ ಹನ್ನೆರಡು ರಾತ್ರಿ ದಾಟಿಯಾಗಿತ್ತು.
ಟೀವಿ ಆರಿಸಿದೊಡನೆ ಇದ್ದಕ್ಕಿದಂತೆ ಕವಿದ ಮೌನವನ್ನು ಅರಗಿಸಿಕೊಳ್ಳುವುದು ಸ್ವಲ್ಪ ಕಷ್ಟವೇ ಸರಿ.
ಏಕೋ ನಿದ್ದೆ ಬರುತ್ತಿಲ್ಲವೆಂದು ಒಮ್ಮೆ ಬಾಗಿಲು ತೆರೆದು ಹೊರಬಂದು ನಿಂತು, ಮನೆಯ ಮುಂದಿನ ಗ್ರಿಲ್ ಒಳಗಿನಿಂದಲೇ ರಸ್ತೆ ದಿಟ್ಟಿಸಿದೆ, ಅತ್ತ ಇತ್ತ ನೋಡಿದರೆ ಎಲ್ಲರ ಮನೆಯ ದೀಪಗಳು ಆರಿದಂತಿತ್ತು. ಒಂದೆರಡು ನಿಮಿಶ ಕಳೆದು, ಒಳಗೆ ಹೋಗಿ ಬಾಗಿಲು ಭದ್ರಪಡಿಸಿ, ಹಾಲಿನ ಲೈಟ್ ಆರಿಸಿ , ರೂಮಿಗೆ ಹೋಗಿ, ರಸ್ತೆಯ ದೀಪದ ಬೆಳಕಲ್ಲೆ ದಾರಳ ಕಾಣುತ್ತಿದ್ದ ಮಂಚದ ಹತ್ತಿರ ನಿಂತು ಸೊಳ್ಳೆಪರದೆ ಸರಿಸಿ, ನನ್ನ ಜೊತೆ ಸೊಳ್ಳೆಗಳು ಒಳ ನುಸುಳದಂತೆ ಎಚ್ಚರವಹಿಸಿ,ಒಳ ಸೇರಿದೆ. ದಿಂಬಿನ ಮೇಲೆ ತಲೆಯಿಟ್ಟು , ಕಣ್ಣು ಬಿಟ್ಟೆ ಮಲಗಿದ್ದೆ. ಆಗಲೇ ನನ್ನ ಕಿವಿಗೆ ಆ ಶಬ್ದ ಕೇಳಿಸಿದ್ದು.
ಮಲಗಿ ಐದು ನಿಮಿಶವಾಗಿರಬಹುದು, ನಿದ್ದೆ ಇನ್ನೇನು ಕವಿಯಿತು ಅನ್ನುವ ಜೊಂಪು. ಎಚ್ಚರವು ನಿದ್ದೆಯೂ ಅಲ್ಲದ ಸ್ಥಿತಿ, ಕಿವಿಯಲ್ಲಿ ಯಾವುದೋ ಶಬ್ದ.
'ಘಲ್ ..ಘಲ್ ಘಲ್…. '
ತಕ್ಷಣ ಎದ್ದು ಕುಳಿತೆ. ಎಲ್ಲಿಂದ ಈ ಹೆಜ್ಜೆಯ ಶಬ್ದ. ನಿಶ್ಯಬ್ದದಲ್ಲಿ ಕಿವಿತುಂಬುತ್ತಿರುವ ಈ ಶಬ್ದ.
ಆಲಿಸಿದೆ. ಎಂತ ಶಬ್ದವೂ ಇಲ್ಲ. ಸರಿ ಏನು ಇಲ್ಲ ಎಂದು ಮಲಗುವ ಎಂದುಕೊಂಡು ಪುನಃ ದಿಂಬಿಗೆ ತಲೆಕೊಟ್ಟೆ. ಪುನಃ ಅದೇ ಶಬ್ದ
'ಘಲ್ ಘಲ್ ಘಲ್ ….ಕಿಣ ಕಿಣ…" .
" ಓ ಶಬ್ಧ ಬರುತ್ತಿರುವುದು ನಿಜ ನನ್ನ ಭ್ರಮೆಯಲ್ಲ " ಎನ್ನುತ್ತ ಎದ್ದು ಕುಳಿತೆ. ಹಾಲಿನಲ್ಲಿರುವ ಕಿಟಕಿಯಲ್ಲಿ ಸ್ವಷ್ಟ ಶಬ್ದ. ಹೊರಗೆ ಕಾಪೋಂಡಿನಲ್ಲಿ ಯಾರು ಓಡಿಯಾಡಿದಂತೆ.
ಹಾಸಿಗೆಯಿಂದ ಎದ್ದು, ಸೊಳ್ಳೆಪರದೆ ಸರಿಸಿ , ಹಾಲಿಗೆ ಬಂದು ಕಿಟಕಿಯತ್ತ ನಿಂತು ಕಣ್ಣು ಹಾಯಿಸಿದೆ. ಯಾರು ಕಾಣಿಸುತ್ತಿಲ್ಲ. ಆದರೆ ಶಬ್ಧ ಮಾತ್ರ ಸಣ್ಣಗೆ ಪುನಃ ಕೇಳಿಸಿತು.
ನನ್ನಲ್ಲಿ ಉದ್ವೇಘ ಕಾಡಿತು. ಕಾಪೋಂಡಿನಲ್ಲಿ ಈ ಸಮಯದಲ್ಲಿ ಯಾರು ಓಡಾಡುತ್ತಿರುವರು. ಸಮಯ ಆಗಲೆ ಅರ್ಧರಾತ್ರಿ ದಾಟಿಯಾಗಿದೆ.
ನಮ್ಮ ಮನೆಯ ಹೊರಗೆ ಕಾಪೋಂಡಿನಲ್ಲಿ ಬಲಬಾಗದಲ್ಲಿ ಸುಮಾರು ಏಳು ಅಡಿ ಅಗಲ, ಇಪ್ಪತ್ತು ಅಡಿ ಉದ್ದದ ಜಾಗವಿದೆ, ಮೊದಲು ಅಲ್ಲಿ ಸ್ವಲ್ಪ ಗಿಡಗಳನ್ನು ಹಾಕಿದ್ದೆ, ನಂತರ ಅದೇನೋ ಬೇಸರದಿಂದ ಎಲ್ಲವನ್ನು ಕಿತ್ತು ಹಾಕಿ ಕಾಂಕ್ರೀಟ್ ಹಾಕಲಾಗಿತ್ತು. ಈಗ ಅಲ್ಲಿ ಒಗೆದ ಬಟ್ಟೆಗಳನ್ನು ಒಣಗಿ ಹಾಕಲು ಮಾತ್ರ ಹೋಗುತ್ತೇವೆ. ಆದರೆ ಅಲ್ಲಿಗೆ ಹೊರಗಿನಿಂದ ಬರಲು ಕಾಪೋಂಡ್ ಹತ್ತಿ ಮಾತ್ರ ಬರಲು ಸಾದ್ಯ. ಗೆಜ್ಜೆಯ ಶಬ್ದ ಅಂದರೆ ಯಾರೋ ಹೆಂಗಸು ಅಲ್ಲಿ ಓಡಾಡುತ್ತಿದ್ದಾಳೆ. ಯಾಕಿರಬಹುದು ಎನ್ನುವ ಆತಂಕದಲ್ಲಿ ಕಿಟಕಿಯಲ್ಲಿ ಮುಖವಿಟ್ಟು ಕೂಗಿದೆ
"ಯಾರದು, ಯಾರು ಓಡಾಡುತ್ತಿರುವುದು?"
ಯಾವ ಉತ್ತರವೂ ಇಲ್ಲ. ಸ್ವಲ್ಪ ಕಾಲದಲ್ಲಿ,
'ಘಲ್ ಘಲ್ " ಅನ್ನುವ ದ್ವನಿ ಕ್ಷೀಣವಾಗಿ , ದೂರದಿಂದ ರಸ್ತೆಯಲ್ಲಿ ಅನ್ನುವಂತೆ ಕೇಳಿಸಿತು. ತಕ್ಷಣ ನಡೆಯುತ್ತ ಹಾಲಿನ ಬಾಗಿಲು ತೆರೆದು ಹೊರಬಂದೆ, ಹೊರಗೆ ತಣ್ಣನೆಯ ಗಾಳಿ,
ಆ ಸಮಯದಲ್ಲಿ ಗ್ರಿಲ್ ಗೇಟಿನ ಬೀಗ ತೆಗೆಯಲು ಸ್ವಲ್ಪ ಆತಂಕ ಅನ್ನಿಸಿದ್ದರಿಮ್ದ, ಗ್ರಿಲ್ ನಲ್ಲಿ ಮುಖವಿಟ್ಟು ರಸ್ತೆಯತ್ತ, ಕಣ್ಣು ಹಾಯಿಸಿದೆ,
'ಯಾರು ಕಾಣಿಸಲಿಲ್ಲ"
ದೀರ್ಘ ಮೌನ. ನೀರವ ನಿಶ್ಯಬ್ಧ. ಹಾಗೆ ಸ್ವಲ್ಪ ಕಾಲ ನಿಂತು, ಆಕಾಶದತ್ತ ಕಣ್ಣು ನೆಟ್ಟೆ. ಪೂರ್ಣ ಚಂದ್ರ ಎಲ್ಲ ಕಡೆಯು ಬೆಳಕು ಬೀರುತ್ತಿದ್ದ.
"ಈ ದಿನ ಹುಣ್ಣಿಮೆ ಅನ್ನಿಸುತ್ತೆ" ಎಂದುಕೊಂಡೆ.
ಈ ದಿನ ಹುಣ್ಣೆಮೆ , ಅಂದರೆ ಈಗ ಓಡಿಯಾಡುತ್ತಿದ್ದ ಹೆಂಗಸು ಎಂದು ನಾನು ಭಾವಿಸಿದ್ದು, ಯಾವುದಾದರು ಮೋಹಿನಿ ಇರಬಹುದೆ ಅನ್ನಿಸಿ ನಗು ಬಂದಿತು.
ನಿಧಾನಕ್ಕೆ ಒಳಬಂದು ಮತ್ತೆ ಲೈಟಗಳನ್ನೆಲ್ಲ ಆರಿಸಿ, ಹೊರಗಿನ ಬಾಗಿಲು ಭದ್ರಪಡಿಸಿ, ರೂಮು ಸೇರಿ ಮಲಗಿದೆ.
ಅರ್ಧಘಂಟೆ ಕಳೆದಿರಲಾರದು. ಮತ್ತೆ ಕಿಟಕಿಯಲ್ಲಿ ಅದೇ ಶಬ್ಧ. ಅನುಮಾನವೆ ಇಲ್ಲ ಅದು ಸಣ್ಣ ಸಣ್ಣ ಗೆಜ್ಜೆಯ ದ್ವನಿ.
ನನ್ನಲ್ಲಿ ಏನೇನೊ ಭಾವನೆಗಳು ಹರಿದಾಡಿದವು. ಹೇಗೆ ಹೀಗೆ ಆಗುತ್ತಿದೆ. ನಾನು ಹಲವಾರು ದೆವ್ವದ ಕತೆಗಳನ್ನು ಬರೆದಿರುವೆ ಆದರೆ ನಿಜವಾದ ದೆವ್ವವಗಳನ್ನು ದರ್ಶಿಸುವ , ಮಾತನಾಡುವ ಅವಕಾಶ ಎಂದೂ ಬಂದಿಲ್ಲ.
ನಾನು ದೆವ್ವದ ಕತೆಗಳನ್ನು ಬರೆದಿರುವ ಕಾರಣಕ್ಕೆ, ಯಾವುದಾದರು ಮೋಹಿನಿ ಈ ರೀತಿ ಇಲ್ಲಿ ಸುತ್ತುತ್ತ ಇದೆಯ. ನನ್ನನ್ನು ಮಾತನಾಡಿಸಿ, ನನ್ನ ಹತ್ತಿರ ತನ್ನ ಕತೆಯನ್ನೆಲ್ಲ ಹೇಳಿ, ನನ್ನಿಂದ ತನ್ನ ಕತೆ ಬರೆಸಲು ಪ್ರಯತ್ನಪಡುತ್ತ ಇರಬಹುದೇ ಅನ್ನಿಸಿತು. ಆ ಯೋಚನೆ ಬಂದ ನಂತರ ಹೆದರಿಕೆ ಅನ್ನಿಸಿತು. ಏನೆ ಆಗಲಿ ದೆವ್ವ ಅಂದರೆ ಕೊಂಚ ಭಯದ ವಿಷಯವೆ. ನಮಗೆ ಅರಿಯದ ನಾವು ನೋಡದ, ತಿಳಿಯದ ಪ್ರಪಂಚವದು. ನಮಗೆ ಏನಾದರು ಅಪಾಯವಾಗುವ ಸಾಧ್ಯತೆ ಇರಬಹುದು.
ಪಕ್ಕದಲ್ಲಿ ಮಲಗಿದ್ದ ಹೆಂಡತಿಯನ್ನು ಎಬ್ಬಿಸೋಣವೇ ಅಂದುಕೊಂಡೆ. ಅವಳಿಗೆ ಎಚ್ಚರವೇ ಇಲ್ಲ, ಒಮ್ಮೆ ಮಲಗಿದರೆ ಆಯಿತು, ಬೆಳಗ್ಗೆ ಆಗುವವರೆಗೂ ಅವಳಿಗೆ ಎಚ್ಚರವಿರಲ್ಲ. ಏಕೋ ಬೇಡ ಅನ್ನಿಸಿತು,
ಏನೆಂದು ಪೂರ್ಣ ವಿಷಯ ತಿಳಿಯದೇ ಅವಳನ್ನು ಎಬ್ಬಿಸಿ ಅವಳಲ್ಲಿ ಸಹ ಭಯ ಮೂಡಿಸಿ, ಆತಂಕ ಸೃಷ್ಟಿಸುವುದು ಏಕೆ. ರೂಮಿನಲ್ಲಿರುವ ಮಗಳು ಸಹ ನಂತರ ಹೆದರಬಹುದು. ಅದೆಲ್ಲ ಸರಿಯಲ್ಲ ಅನ್ನಿಸಿತು.
ಪುನಃ ಕಿಟಕಿಬಳಿ ಬಂದೆ ಅದೇ ಅನುಭವ, ಶಬ್ದ ದೂರವಾಗಿ ರಸ್ತೆಯತ್ತ ಸಾಗಿತು. ಎಷ್ಟೋ ಹೊತ್ತು ಅಲಿಯೇ ನಿಂತಿದ್ದೆ, ಯಾವ ಶಬ್ದವೂ ಕೇಳಿಬರಲಿಲ್ಲ.
ಸರಿ ಎಂದು ಬಂದು ಮಲಗಿದೆ. ಯಾವಾಗಲೋ ನಿದ್ರೆ ಹತ್ತಿತ್ತು. ಬೆಳಗಿನ ಜಾವವಿರಬಹುದು ಪುನಃ ಎಚ್ಚರವಾಯಿತು. ನೆನಪಿಗೆ ಬಂದು ಪುನಃ ಗಮನಿಸಿದೆ, ಕಿಟಕಿಯ ಕಡೇಯಿಂದ ಅದೇ ಶಬ್ಧ.
ಅದೇಕೊ ಯಾರೋ ರಾತ್ರೆಯೆಲ್ಲ , ಮನೆಯ ಹೊರಗೆ ಕಿಟಕಿಬಳಿ ಓಡಾಡುತ್ತಿರುವುದು ಸತ್ಯವಂತು ಹೌದು. ಅದೇಕೆ ಹೀಗೆ ಮನೆಯ ಸುತ್ತ ಸುತ್ತುತ್ತ ಇದ್ದಾರೆ ಎಂದು ತಿಳಿಯುತ್ತಿಲ್ಲ. ಅದೇ ಆತಂಕದಲ್ಲಿಯೆ ಮಲಗಿದ್ದೆ.
ಬೆಳಗ್ಗೆ ಎಚ್ಚರವಾದಾಗ ಸ್ವಲ್ಪ ತಡವಾಗಿತ್ತು. ಕಾಫಿಕುಡಿದವನಿಗೆ ರಾತ್ರಿಯ ನೆನಪು. ಎದ್ದು ಸೀದಾ ಹಿಂದಿನ ಬಾಗಿಲು ತೆರೆದು, ಹೊರಗೆ ಹೋದೆ. ಮನೆಯ ಬಲಬಾಗದ ಖಾಲಿ ಇದ್ದ ಜಾಗದತ್ತ ಬಂದು ಸುತ್ತಲೆಲ್ಲ ಓಡಿಯಾಡಿದೆ. ಏನು ತಿಳಿಯುವಂತಹ ಸುಳಿವಿಲ್ಲ. ಅಲ್ಲಿ ಏನಾದರು ಶಬ್ಧವಾಗುವಂತಹ ವಸ್ತುಗಳಿವೆಯ ಎಂದು ಹುಡುಕಿದೆ. ಏನು ಇಲ್ಲ. ಬಟ್ಟೆ ಒಣಗಿಸಿಲು ಕಟ್ಟಿರುವ ನಾಲಕ್ಕು ಪ್ಲಾಸ್ಟಿಕ್ ಹಗ್ಗಗಳನ್ನು ಹೊರತುಪಡಿಸಿ ಏನು ಇಲ್ಲ!.
ಒಳಗೆ ಬಂದರೆ ಪತ್ನಿ ಕೇಳಿದಳು, " ಅದೇನು ಬೆಳಗ್ಗೆ ಎದ್ದವರೆ ಹೊರಗೆ ಹೋಗಿದ್ದಿರಿ " ಎಂದು. ಏನು ಹೇಳಲಿಲ್ಲ ಸುಮ್ಮನಾದೆ.
ಸರಿ ಸ್ನಾನ ಮುಗಿಸಿ ಆಫೀಸಿಗೆ ಹೊರಟಂತೆ ತಲೆಯಿಂದ ಎಲ್ಲ ವಿಷಯವೂ ಮಾಯ. ಸಂಜೆಯವರೆಗೂ ಆಫೀಸಿನ ಕೆಲಸಗಳು ಸ್ನೇಹಿತರು, ದಿನವೆಲ್ಲ ಕಳೆದುಹೋಯಿತು. ರಾತ್ರಿ ಊಟಮುಗಿಸಿ, ಟೀವಿ ನೋಡಿ ಹೆಂಡತಿ, ಮಗಳು ಮಲಗಲು ಹೊರಟರು. ನಾನು ಟೀವಿ ಆರಿಸಿ ಮಲಗಲು ಹೊರಟೆ.
ಸುಮಾರು ಒಂದು ಘಂಟೆ ಕಾಲ ಒಳ್ಳೆಯ ನಿದ್ರೆ ಬಂದಿತು. ರಾತ್ರಿ ಸುಮಾರು ಹನ್ನೆರಡು ಇರಬಹುದೇನೊ. ಇದ್ದಕ್ಕಿದಂತೆ ಎಚ್ಚರವಾಯಿತು. ಕಣ್ಣುಮುಚ್ಚಿಯೆ ಮಲಗಿದ್ದೆ.
ರಾತ್ರಿಯ ನಿಶ್ಯಬ್ಧ.
ಕಿವಿಯಲ್ಲಿ ಪುನಃ ಅದೇ ಶಬ್ದ
'ಘಲ್ ಘಲ್ ಘಲ್…….."
ನಿದ್ದೆಯಲ್ಲ ಓಡಿ ಹೋಯಿತು. ಶಬ್ಧ ಮಾಡದೆ ಎದ್ದು, ಕತ್ತಲಿನಲ್ಲಿಯೆ ಬಂದು ಕಿಟಕಿ ಬಳಿ ನಿಂತೆ.
'ರಸ್ತೆಯ ಕಡೆಯಿಂದ ಅದೇ ಕ್ಷೀಣ ಶಬ್ಧ ಗೆಜ್ಜೆಯದು !!
ಎಂತದೋ ಸಮಸ್ಯೆ ಇರುವದಂತು ನಿಜ. ಯಾರೋ ನನ್ನನ್ನು ಹೆದರಿಸಿಲು ಪ್ರಯತ್ನಪಡುತ್ತಿರುವರು. ಅಥವ ನನಗೆ ಏನನ್ನೋ ಹೇಳಲು ಪ್ರಯತ್ನ ಪಡುತ್ತಿರುವರು ಅನ್ನುವುದೂ ನಿಜ.
ಕಿಟಕಿಯ ಬಳಿ ಅಲುಗಾಡದೇ ನಿಂತೆ. ಅದೇನು ಶಬ್ಧ ಯಾರು ಅನ್ನುವದನ್ನು ಈ ದಿನ ನೋಡಲೇ ಬೇಕು ಅನ್ನುವ ನಿರ್ಧಾರದೊಡನೆ.
ಎಷ್ಟೋ ಸಮಯವಾಗಿತ್ತು.
"ಇದೇನ್ರಿ, ಇಷ್ಟು ಹೊತ್ತಿನಲ್ಲಿ ಏನು ಮಾಡುತ್ತಿರುವಿರಿ, ಅದೂ ಕಿಟಕಿ ಬಳಿ ನಿಂತು. ಏಕೆ ನಿದ್ರೆ ಬರುತ್ತಿಲ್ಲವೆ?"
ಹಿಂದಿನಿಂದ ನನ್ನ ಪತ್ನಿಯ ಆತಂಕದ ದ್ವನಿ ಕೇಳಿಸಿತು.
ನಾನು ಇಲ್ಲದ್ದು ಕಂಡು ಅವಳೂ ಎದ್ದು ಬಂದ ಹಾಗಿತ್ತು.
ಸರಿ ಮುಚ್ಚಿಡುವುದು ಏತಕೆ ಎಂದು ಕೊಂಡು, ಅವಳಿಗೆ ಎಲ್ಲ ವಿಷಯ ತಿಳಿಸಿದೆ. ಆಗಾಗ್ಯೆ ಕೇಳಿಸುತ್ತಿರುವ ಗೆಜ್ಜೆಯ ಶಬ್ಧ, ನಾನು ಎದ್ದು ಬಂದೊಡನೆ ಅದು ದೂರವಾಗುತ್ತಿರುವ ಸಂಗತಿ ತಿಳಿಸಿದೆ.
ಆವಳಲ್ಲೂ ಆತಂಕ ಕಾಣಿಸಿತು.
ನಾನು ಕರೆದೆ
"ನೋಡು ಈಗಲು ಸ್ವಲ್ಪ ಕಾಲ ಕಿಟಿಕಿ ಹತ್ತಿರ ನಿಲ್ಲು , ನೀನು ಶಬ್ಧ ಮಾಡಬೇಡ ಕೇಳಿಸಿಕೋ ಯಾರು ಓಡಾಡುತ್ತಿರುವರು"
ಸ್ವಲ್ಪ ಕಾಲ, ಹೌದು ಪುನಃ ಅದೇ ಶಬ್ಧ, ಅವಳ ಕಣ್ಣಲ್ಲಿ ಕುತೂಹಲ, ಏನೊ ಯೋಚಿಸುತ್ತ ಇದ್ದವಳು , ಜೋರಾಗಿ ನಗಲು ಪ್ರಾರಂಭಿಸಿದಳು.
ಇದೇನು ಏಕೆ ಹೀಗೆ ನಗುತ್ತಿರುವಳು !
ನಗುತ್ತ ನುಡಿದಳು
"ಅಯ್ಯೋ ಮೋಹಿನಿಯು ಅಲ್ಲ, ಗೆಜ್ಜೆ ಶಬ್ಧವೂ ಅಲ್ಲ, ನೀವು ನನ್ನನ್ನು ಒಳ್ಳೆ ಹೆದರಿಸಿದಿರಿ. ಪಕ್ಕದ ಪದ್ಮ ಮನೆಯವರು ಸಿಂಗಪುರಕ್ಕೆ ಹೋಗಿದ್ದರಲ್ಲ, ಅಲ್ಲಿಂದ ಒಂದು ಅಲಂಕಾರದ ಘಂಟೆ ತಂದಿದ್ದಾರೆ, ಅದನ್ನು ಮನೆಯ ಹೊರಗೆ ಬಾಗಿಲ ಹತ್ತಿರ ನೇತು ಹಾಕಿದ್ದರೆ ಶುಭವಂತೆ. ಮನೆಗೆ ಒಳ್ಳೆಯದು ಆಗುತ್ತೆ ಅಂತ ಯಾರೋ ಹೇಳಿದ್ದಾರಂತೆ. ಆ ಕಿರುಗಂಟೆಗಳು, ಸಣ್ಣ ಗಾಳಿ ಬೀಸಿದರು, ಸಹ ಕಿಣಿ ಕಿಣಿ ಅಂತ ಶಬ್ಧ ಮಾಡುತ್ತವೆ,. ಹಗಲಿನಲ್ಲಿ ಅಷ್ಟು ಗೊತ್ತಾಗಲ್ಲ. ರಾತ್ರಿಯಲ್ಲಿ ಸ್ವಷ್ಟವಾಗಿ ಕೇಳಿಸುತ್ತದೆ ಅಷ್ಟೆ. ನಾನು ಏನೊ ಅಂತ ಹೆದರಿದ್ದೆ, ನಿಮ್ಮದೊಳ್ಳೆ ಕತೆಯಾಯಿತು. ಬನ್ನಿ ಮಲಗಿ ನಿದ್ದೆ ಮಾಡಿ"
ಎಂದು ಒಳ ಹೋದಳು.
ನಾನು ಬೆಪ್ಪನಂತೆ ನಿಂತಿದ್ದೆ.
ಇದೇನು ಹೀಗಾಯಿತು. ನಿನ್ನೆಯಿಂದ , ಅದ್ಯಾವುದೋ ಮೋಹಿನಿಯನ್ನು ನಿರೀಕ್ಷೇ ಮಾಡುತ್ತ. ಅದು ಬಂದು ಯಾವುದೋ ಕತೆ ಹೇಳುವುದು ಎಂದು ಕಾದಿದ್ದರೆ ಹೀಗೆ ಆಯಿತಲ್ಲ.
ಮೊದಲೆ ನಗುವರ ಮುಂದೆ ಎಡವಿಬಿದ್ದಂತೆ ಪತ್ನಿಯ ಮುಂದೆ ಹೀಗೆ ಮಾಡಿಕೊಂಡೆನ್ನಲ್ಲ ಎನ್ನುವ ಮುಜುಗರದೊಡನೆ ರೂಮಿನತ್ತ ನಡೆದೆ.
ಮಲಗಿ ಸ್ವಲ್ಪ ಕಾಲ ಕೇಳುತ್ತಲೆ ಇತ್ತು ಶಬ್ಧ
"ಘಲ್ ಘಲ್ ಘಲ್, ಕಿಣ ಕಿಣ ಕಿಣಾ" ……..
ಈಗ ಯಾವ ಆತಂಕವೂ ಇಲ್ಲದೇ ನಿದ್ರೆ ಆವರಿಸಿತು.
Comments
ಉ: ಸಣ್ಣಕತೆ : ಮನೆಗೆ ಬಂದ ಮೋಹಿನಿ
paarthasaarathi yavarige vandanegalu
mohini kathe chennaagide, Singaapurada alankaarad gante nimmannu sakttaagi yaamaariside. yelliyoo neerasavenisada kathaa niroopaneyide, dhanyavaadagalu.
In reply to ಉ: ಸಣ್ಣಕತೆ : ಮನೆಗೆ ಬಂದ ಮೋಹಿನಿ by H A Patil Patil
ಉ: ಸಣ್ಣಕತೆ : ಮನೆಗೆ ಬಂದ ಮೋಹಿನಿ
ಪಾಟೀಲರೆ ವಂದನೆಗಳು
ಉ: ಸಣ್ಣಕತೆ : ಮನೆಗೆ ಬಂದ ಮೋಹಿನಿ
ಪಾರ್ಥರೇ,,,, ಭಯದಿಂದಾ ಪ್ರಾರಂಬವಾಗಿ,,, ನಗುವಿನಲ್ಲಿ ಮುಗಿಸಿದ್ದೀರ,,, ಚೆನ್ನಾಗಿದೆ ಕಥೆ
ನವೀನ್ ಜೀ ಕೇ
In reply to ಉ: ಸಣ್ಣಕತೆ : ಮನೆಗೆ ಬಂದ ಮೋಹಿನಿ by naveengkn
ಉ: ಸಣ್ಣಕತೆ : ಮನೆಗೆ ಬಂದ ಮೋಹಿನಿ
ಯಾವುದೇ ಭಯ ಕಾರಣ ಸರಿಯಾಗಿ ಹುಡುಕಿದರೆ ನಗುವಿನಲ್ಲಿಯೆ ಕೊನೆಯಾಗುವುದು ಅಲ್ಲವೆ ನವೀನ್ರವರೆ
ಉ: ಸಣ್ಣಕತೆ : ಮನೆಗೆ ಬಂದ ಮೋಹಿನಿ
ಪಾರ್ಥಾ ಸಾರ್, ಮೋಹಿನಿ ಕಿರು ಗಂಟಾ ಪ್ರಸಂಗ ಚೆನ್ನಾಗಿದೆ...ಆ ಗಂಟೆಗಳನ್ನು ಸಿಂಗಪುರಕೆ ಬಂದ ಹೊಸದರಲ್ಲಿ ನಾನೂ ಸಾಕಷ್ಟು ಖರೀದಿಸಿ ಊರಿಗೆ ಕೊಂಡೊಯ್ದಿದ್ದೆ - ಮನೆಯಲ್ಲಿ ನೇತು ಹಾಕಲು :-) ಗೊಂಚಲಲ್ಲಿ ಬರುವ ಇವುಗಳನ್ನು ಚೆನ್ನಾಗಿ ಗಾಳಿ ಬೀಸುವ ಕಡೆ ಹಾಕಿದರೆ ಒಳ್ಳೆಯ ಕಿಣಿಕಿಣಿನಾದ ಸದಾ ಕೇಳಿಸುತ್ತಿರುತ್ತದೆ. ಕಥೆ ಸುಪರ್ :-)
In reply to ಉ: ಸಣ್ಣಕತೆ : ಮನೆಗೆ ಬಂದ ಮೋಹಿನಿ by nageshamysore
ಉ: ಸಣ್ಣಕತೆ : ಮನೆಗೆ ಬಂದ ಮೋಹಿನಿ
ವಂದನೆಗಳು ನಾಗೇಶ್ ರವರಿಗೆ
ತಮ್ಮ ಕತೆಯನ್ನು ಬಾಗ ಬಾಗವಾಗಿ ಓದುತ್ತಿರುವೆ ಆಸಕ್ತಿಧಾಯಕವಾಗಿದೆ
In reply to ಉ: ಸಣ್ಣಕತೆ : ಮನೆಗೆ ಬಂದ ಮೋಹಿನಿ by nageshamysore
ಉ: ಸಣ್ಣಕತೆ : ಮನೆಗೆ ಬಂದ ಮೋಹಿನಿ
ಪಾರ್ಥಾ ಸಾರ್, ಕಿಣಿಕಿಣಿ ಮೋಹಿಣಿ ಕತೆ (ಪಾಟೀಲರಿಂದ ನಾಗೇಶರವರೆಗೆ.. ಪ್ರತಿಕ್ರಿಯೆಗಳನ್ನು ಮೊದಲು ಓದಿದರಿಂದ ಅಂದಾಜಾದರೂ :) ) ಓದಲು ಖುಷಿಯಾಯಿತು.
In reply to ಉ: ಸಣ್ಣಕತೆ : ಮನೆಗೆ ಬಂದ ಮೋಹಿನಿ by ಗಣೇಶ
ಉ: ಸಣ್ಣಕತೆ : ಮನೆಗೆ ಬಂದ ಮೋಹಿನಿ
ಗಣೇಶ ಸಾರ್ :)
ಓದಿದ್ದಕ್ಕೆ ವಂದನೆಗಳು
ಉ: ಸಣ್ಣಕತೆ : ಮನೆಗೆ ಬಂದ ಮೋಹಿನಿ
ಎಲ್ಲಾ ಸರಿ, ಗೆಜ್ಜೆ ಕಟ್ಟಿದ ಗಂಡು ದೆವ್ವಗಳೂ ಇರಬಹುದಲ್ಲವೇ? ಮೋಹಿನಿಯೇ ಏಕೆ ಆಗಬೇಕು? :))
In reply to ಉ: ಸಣ್ಣಕತೆ : ಮನೆಗೆ ಬಂದ ಮೋಹಿನಿ by kavinagaraj
ಉ: ಸಣ್ಣಕತೆ : ಮನೆಗೆ ಬಂದ ಮೋಹಿನಿ
ಗೊತ್ತಿದ್ದು ಕೇಳುತ್ತಿರುವಿರಿ ನಾಗರಾಜ ಸಾರ್,
ಗೆಜ್ಜೆ ಕಟ್ಟಿದ್ದು ಮೋಹಿನಿ ಎನ್ನುವಾಗ ಇರುವ ಥ್ರಿಲ್
ಯಾವುದೋ ಹಳೆಯ ಗಂಡು ದೆವ್ವ ಎಂದರೆ ಆ ಥ್ರಿಲ್ ಯಾರಿಗೂ ಇರಲ್ಲ :)