ದೇವರಾಯನ ದುರ್ಗದ ಚಾರಣ - 2014

ದೇವರಾಯನ ದುರ್ಗದ ಚಾರಣ - 2014

ಚಿತ್ರ

ಪ್ರತಿವರ್ಷ ದಿಸೆಂಬರ್ , ಜನವರಿಯಲ್ಲಿ ಒಂದು ದಿನ ಎಲ್ಲರೂ ಸೇರಿ ತುಮಕೂರಿನಿಂದ ದೇವರಾಯನದುರ್ಗಕ್ಕೆ ನಡೆಯುವುದು ಕೆಲವು ವರ್ಷಗಳಿಂದ ಬಂದ ಅಭ್ಯಾಸ.  ಕಳೆದ ವರ್ಷ ಹೀಗೆ ಅದೇನೊ ಎಲ್ಲರೂ ಸೇರಲು ಆಗಲೇ ಇಲ್ಲ.ಈ ವರ್ಷ ಜನವರಿ ೧೨ ನೇ ದಿನಾಂಕ ಎಲ್ಲರೂ ಸೇರಿ ಹೋಗಿ ಬರುವದೆಂದು ಒಮ್ಮತದಿಂದ (?) ತೀರ್ಮಾನವಾಯಿತು. ಹಿಂದಿನ ದಿನವೆ ಸಂಜೆ ತುಮಕೂರಿಗೆ ನಾನು ಹೋಗಿದ್ದೆ. 

ಬೆಳಗ್ಗೆ ಬೇಗ ಬೇಗ ಎಂದು ಹೊರಟರು ಆರುಘಂಟೆ ದಾಟಿಬಿಡುತ್ತದೆ. ಅಲ್ಲದೆ ಮಾರ್ಗಮಧ್ಯ ತಿನ್ನಲು ಉಪಹಾರ ಬೇರೆ ಸಿದ್ದಪಡಿಸಿದ್ದರು , ಅ ಬ್ಯಾಗನ್ನು ಹೊರಲು ಗುಂಪಿನಲ್ಲಿ ಅತಿ ಚಿಕ್ಕವರು ಎಂದು ಆರಿಸಿ ಇಬ್ಬರಿಗೆ ವಹಿಸಲಾಯಿತು. ಮನೆಯಿಂದ ಹೊರಟು , ಕ್ಯಾತ್ಸಂದ್ರ ಸಮೀಪದ ಶ್ರೀರಾಜ್ ಟಾಕೀಸ ಸಮೀಪ ಬಿ ಹೆಚ್ ರಸ್ತೆ ದಾಟುವದರಲ್ಲಿ ಎಲ್ಲರಿಗು ಚಳಿ ಕಳೆದು, ದೂರಮಾರ್ಗ ಕ್ರಮಿಸುವ ಹುಮ್ಮಸ್ಸು ತುಂಬಿಕೊಂಡಿತ್ತು. 

ಸಿದ್ದಗಂಗೆ ಮಠಕ್ಕೆ ಸೇರಿದ ಶಾಲೆ, ಹಾಸ್ಟೆಲ್ ಗಳನ್ನು ದಾಟುತ್ತಿರುವಾಗಲೆ ಪಕ್ಕದಲ್ಲಿ ದೊಡ್ಡ ಮರ ಬಂಡೆಗಳು ಕಾಣಿಸಿದವು. ಹಾಗೆ ನಡೆಯುತ್ತಿರುವಂತೆ ರಸ್ತೆಯ ಎಡಬಾಗಕ್ಕೆ ದೊಡ್ಡ ಕೆರೆ ಆಚೆಗೆ ಇದ್ದ ಬೃಹುತ್ ಬಂಡೆಗಳ ಬೆಟ್ಟ , ಹೌದು ಕಳೆದ ಬಾರಿ ಬಂದಾಗ ಬೆಟ್ಟ ಕರಗಿಸುವ ಕ್ರಿಯೆ ಪ್ರಾರಂಭವಾಗಿತ್ತು, ಈಗ ನೋಡಿದೆವು ಅಷ್ಟು ದೊಡ್ಡ ಬೆಟ್ಟ ಅರ್ಧಭಾಗ ಕರಗಿ ಹೋಗಿತ್ತು, ನಾನು ನಡೆಯುವಾಗಲು ಅಷ್ಟು ದೂರಕ್ಕೂ ಕ್ರಷರ್ ಗಳ ಕಲ್ಲು ಒಡೆಯುವ ಶಬ್ಧಕೇಳಿಸುತ್ತಿತ್ತು. 

ಇಲ್ಲೆ ಎಲ್ಲೋ ಎಡಬಾಗದಲ್ಲಿ , ಹೊಲದ ಮಧ್ಯ, ಕಲ್ಲಿನ ಬಸವ ಒಂದಿರಬೇಕಲ್ಲ ಎಂದು ಹುಡುಕಲು ಹೊರಟರೆ, ಯಾರೊ ಅದರ ಸುತ್ತಲೂ ಗ್ರಿಲ್ ನಿರ್ಮಿಸಿ, ಒಂದು ಘಂಟೆ ಸಹ ಕಟ್ಟಿ ಹೋಗಿದ್ದರು. ಎಷ್ಟೋ ವರ್ಷಗಳಿಂದ ಸ್ವತಂತ್ರವಾಗಿ ಪ್ರಕೃತಿಯ ನಡುವೆ ಇದ್ದ ಕಲ್ಲಿನ ಬಸವನಿಗೂ ಮನುಷ್ಯ ಕಬ್ಬಿಣದ ಬಂದನ ಹಾಕಿಬಿಟ್ಟಿದ್ದ. 

ನಡೆಯುತ್ತ , ದೇವರಾಯನ ದುರ್ಗದ ರಸ್ತೆಗೆ ಬಂದೆವು. ಬಲಕ್ಕೆ ತಿರುವಾಗಲೆ, ಯಾವಾಗಲೊ ನಿರ್ಮಿಸಿದ ನಿಲ್ದಾಣವೊಂದು ಕಾಣಿಸಿತು. ಪ್ರತಿ ವರ್ಷ ಅಲ್ಲಿಯೇ ಅಲ್ಲವೇ ನಾವು ತಿಂಡಿ ತಿನ್ನುವುದು,. ಒಳಗೆಲ್ಲ ಎಲೆಗಳು ಬಿದ್ದು ಗಲೀಜು ಆದರೆ ಸ್ವಚ್ಚ ಮಾಡಲು ಅಲ್ಲಿ ಸುತ್ತಮುತ್ತಲು ಯಾರು ಇಲ್ಲ. ಅಲ್ಲಿಯೆ ಕುಳಿತು ತಿಂಡಿ ತಿಂದು ನೀರು ಕುಡಿದೆವು, ಈಗ ತಿಂಡಿಯ ಬ್ಯಾಗ್ ಹೊರುವವರಿಗೆ ಆರಾಮ ಅದರಲ್ಲಿದ್ದ ಬಾರವೆಲ್ಲ ಎಲ್ಲರ ದೇಹವನ್ನು ಸೇರಿತ್ತು. 

ಮುಂದೆ ಹೊರಟಂತೆ  ರಸ್ತೆಯಲ್ಲಿ ಚಿಕ್ಕದೊಂದು ಗಣಪತಿ  ಅಂಜನೇಯ ಗುಡಿ ಇದೆ. ಸುತ್ತಲೂ ಹರಡಿರುವ ಹಸಿರು, ತಂಪಾದ ಗಾಳಿ ಜನರಹಿತ ಪ್ರದೇಶ ನಡೆಯಲೇ ಒಂದು ಮುದ ನೀಡುತ್ತದೆ. ಅಲ್ಲಿ ಏನಿದ್ದರೂ ನಮ್ಮದೇ ಗಲಾಟೆ ಅದನ್ನು ಹೊರತು ಪಡಿಸಿದರೆ ಪಕ್ಷಿಗಳ ಕಲರವ. ನಾವು ನಡೆಯುತ್ತಿರುವ ರಸ್ತೆ ನೇರ ಹೋದರೆ ಉರುಡುಗೆರೆಗೆ ಹೋಗಿ ತಲುಪುತ್ತದೆ. ಆದರೆ ಎಂಟನೇ ಮೈಲಿ ಕಲ್ಲಿನ ಹತ್ತಿರ ಎಡಕ್ಕೆ ಸಾಗುವ ರಸ್ತೆಯಲ್ಲಿ ನಡೆಯಬೇಕು, 

ಈಗ ನಾವು ನಾಮದ ಚಿಲುಮೆ ರಸ್ತೆಯಲ್ಲಿ ಹೊರಟಿದ್ದೆವು. ಮರಗಿಡಗಳು ದಟ್ಟವಾಗುತ್ತ ಹೋಗುತ್ತಿತ್ತು, ಆಗೊಮ್ಮೆ ಈಗೊಮ್ಮೆ  ರಸ್ತೆಯಲ್ಲಿ ಕಾಣಿಸಿ ನಮ್ಮನ್ನು ಕಂಡು ಮರೆಯಾಗುತ್ತಿದ್ದ ಕಪ್ಪು ಮುಸುಡಿಯ ಕೋತಿಗಳು. 

ಸ್ವಲ್ಪ ದೂರ ಎರಡು ಬದಿಯಲ್ಲಿ ಹುಣಸೆ ಗಿಡಗಳೆ ಕಾಣುತ್ತದೆ, ಕೆಲವು ಕಾಲದಲ್ಲಿ ಇಲ್ಲಿ ಬಂದರೆ ಎಳೇ ಹುಣಸಿನ ಚಿಗುರು, ಹಾಗು ಕಾಯಿ ಸಿಗುತ್ತದೆ.  ಮಧ್ಯ ಮಧ್ಯೆ ನಿಲ್ಲುವುದು, ಮರಹತ್ತಲು ಪ್ರಯತ್ನಿಸುವುದು ಇಂತವೆಲ್ಲ ಮನೋರಂಜನೆಯ ನಡುವೆಯೆ ನಾಮದಚಿಲುಮೆ ಸಿಕ್ಕಿತ್ತು. ಅಲ್ಲಿ ಒಳಹೋಗಲಿಲ್ಲ. ಬೆಳಗ್ಗೆ ಆರಕ್ಕೆ ಮನೆ ಬಿಟ್ಟವರು ಆಗಲೇ ಸಮಯ ಹತ್ತುಗಂಟೆಯಾಗಿತ್ತು. ಹನ್ನೊಂದುವರೆ ಒಳಗೆ ಬೆಟ್ಟದ ಮೇಲ್ಭಾಗ ತಲುಪಬೇಕು ಎಂಬುದು ನಮ್ಮ ಯೋಚನೆ. 

ಮತ್ತೆ ಮೂರು ಕಿ.ಮಿ. ದೂರ ನಡೆಯುವದರಲ್ಲಿ ಮೂರು ರಸ್ತೆ ಸೇರುವ ಮಾರ್ಗಕ್ಕೆ ಬಂದು ಸೇರಿದೆವು. ಇಲ್ಲಿ ಬಲಕ್ಕೆ ತಿರುಗಿದರೆ ದೇವರಾಯನ ದುರ್ಗದತ್ತ ದಾರಿ. 

ಮುಂದೆ ನಡೆಯುವ ದಾರಿ ಪೂರ್ಣ ಏರು ಹಾದಿ. ತುಮಕೂರಿನಿಂದ ಅಲ್ಲಿಯವರೆಗೂ ಹೆಚ್ಚುಕಡಿಮೆ ಸಮನಾದ ಹಾದಿ. ಈಗ ಬಿಸಿಲು ಬೇರೆ ಜಾಸ್ತಿಯಾಗಿತ್ತು. ಬೀಸುವ ಗಾಳಿಯಲ್ಲು ಬಿಸಿ ಅನುಭವಾಗುತ್ತಿತ್ತು ಅದಕ್ಕೆ ಕಾರಣ ಕಾಯುತ್ತಿದ್ದ ಬಂಡೆಗಳು. ಆದರೆ ವಾತವರಣದಲ್ಲಿರುವ ಆಮ್ಲಜನಕದ ಲಭ್ಯತೆ ನಮ್ಮಲ್ಲಿ ಅಹ್ಲಾದತೆಯನ್ನು ಕಾಯುತ್ತದೆ. ಬಂಡೆ, ಕಾಡು ಬೆಟ್ಟ ತುಂಬಿರುವ  ಪ್ರದೇಶ ಎತ್ತರಕ್ಕೆ ಎತ್ತರಕ್ಕೆ ಹೋಗುತ್ತ ನಮ್ಮ ವೇಗವೂ ಸ್ವಲ್ಪ ಕಡೆಮೆಯಾಗುತ್ತ ಸಾಗುತ್ತದೆ.  

ಬೆಟ್ಟದ ಮೇಲ್ಭಾದಗಲ್ಲಿ ಜಯಮಂಗಲೀ ಎನ್ನುವ ಸಣ್ಣ ನದಿಯೊಂದು ಹುಟ್ಟುತ್ತದೆ ಅದು ಕೊರಟಗೆರೆ ಕಡೆಗೆ ಹರಿಯುತ್ತದೆ. ನಾವು ಜಯಮಂಗಲಿ ನದಿಯ ಉಗಮ ಪ್ರದೇಶವನ್ನು ದಾಟಿ ಮುನ್ನಡೆದೆವು. 

ಪೂರ್ಣ ಮೇಲ್ಭಾಗ ತಲುಪುತ್ತಿರುವಂತೆ ಕೆಲವೊಮ್ಮೆ ಕಿವಿ ಮುಚ್ಚಿಕೊಳ್ಳುತ್ತದೆ ಹಾಗಾಗಿ ಪಕ್ಕದವರು ಮಾತನಾಡುವಾಗ ಎಲ್ಲಿಯೋ ದೂರದಿಂದ ಮಾತನಾಡುವಂತೆ ಕೇಳಿಸುತ್ತದೆ ಅದಕ್ಕೆ ಕಾರಣ ವಾತವರಣದಲ್ಲಿನ ಒತ್ತಡದ ವ್ಯತ್ಯಾಸ. ಆಗ ಕೆಲವೊಮ್ಮೆ ಜೋರಾಗಿ ಆಕಳಿಸಿದರೆ ಸರಿ ಹೋಗುತ್ತದೆ ಅದು ನನ್ನ ಅನುಭವ :-) 

ಕಡೇಗೊಮ್ಮೆ ದೇವರಾಯನ ದುರ್ಗದ ಸ್ವಾಗತದ ಕಮಾನು ಕಾಣಿಸಿದಾಗ ಎಲ್ಲರಲ್ಲೂ ಹರ್ಷ ಏನನ್ನೋ ಸಾಧಿಸಿದ ತೃಪ್ತಿ. 

ರಸ್ತೆಯ ಪಕ್ಕದಲ್ಲಿ ಕಾಣಿಸಿದ ಬೋರೆವೆಲ್ ನಲ್ಲಿ ಎಲ್ಲರೂ ಮುಖ ತೊಳೆದು ಸ್ವಲ್ಪ ಕಾಲು ಕುಳಿತು ದೇವರಾಯನ ದುರ್ಗದ ಊರಿನೊಳಗೆ ಪ್ರವೇಸಿಸಿದೆವು. 

Rating
No votes yet

Comments

Submitted by ಗಣೇಶ Tue, 02/25/2014 - 23:20

ಪಾರ್ಥರೆ, ಒಂದು ದಿನ ಬೆಂಗಳೂರಿನ ಆಸುಪಾಸಿನ ಯಾವುದಾದರೂ ಗುಡ್ಡದ ಮೇಲೆ ನಮ್ಮಿಬ್ಬರ ಭೇಟಿಯಾಗಲಿದೆ :)
>>ಇಲ್ಲೆ ಎಲ್ಲೋ ಎಡಬಾಗದಲ್ಲಿ , ಹೊಲದ ಮಧ್ಯ, ಕಲ್ಲಿನ ಬಸವ ಒಂದಿರಬೇಕಲ್ಲ ಎಂದು ಹುಡುಕಲು ಹೊರಟರೆ, ಯಾರೊ ಅದರ ಸುತ್ತಲೂ ಗ್ರಿಲ್ ನಿರ್ಮಿಸಿ, ಒಂದು ಘಂಟೆ ಸಹ ಕಟ್ಟಿ ಹೋಗಿದ್ದರು. ಎಷ್ಟೋ ವರ್ಷಗಳಿಂದ ಸ್ವತಂತ್ರವಾಗಿ ಪ್ರಕೃತಿಯ ನಡುವೆ ಇದ್ದ ಕಲ್ಲಿನ ಬಸವನಿಗೂ ಮನುಷ್ಯ ಕಬ್ಬಿಣದ ಬಂದನ ಹಾಕಿಬಿಟ್ಟಿದ್ದ.
ಸ್ವತಂತ್ರವಾಗಿದ್ದ ನಂದಿ ಫೋಟೋ ಹಾಗೂ ಕಳೆದ ಬಾರಿ ದೇವರಾಯನದುರ್ಗಚಾರಣ ಸಮಯದಲ್ಲಿ ಪಾರ್ಥರು ತೆಗೆದ ಸುಂದರ ಫೋಟೋಗಳಿಗಾಗಿ - http://sampada.net/blog/%E0%B2%A4%E0%B3%81%E0%B2%AE%E0%B2%95%E0%B3%82%E0...
ಈ ಬಾರಿಯ ಚಾರಣ ವಿವರ+ ಫೋಟೋಗಳು ಚೆನ್ನಾಗಿದೆ.

Submitted by partha1059 Wed, 02/26/2014 - 19:24

In reply to by ಗಣೇಶ

ಗಣೇಶರೆ ನಮಸ್ಕಾರ‌, ಎಲ್ಲಿ ಬೇಟಿಯಾದರು ನಿಮ್ಮನ್ನು ಗುರುತು ಹಿಡಿಯುವುದು ಕಷ್ಟವೆ . ಇರಲಿ,
ಕಳೆದ‌ ಸಾರಿಯ‌ ಚಾರಣಾದ‌ ಪೋಟೋ ಹಾಕಿ ಪುನಹ್ ನೆನಪಿಸಿದಿರಿ. ಕಳೆದ‌ ಬಾರಿ ಇದ್ದ ಜನಕ್ಕು ಈ ಸಾರಿಗೂ ವ್ಯತ್ಯಾಸವಿದ್ದವು, ಹೆಂಗಸರು ಹಾಗು ಮಕ್ಕಳು ಇರಲಿಲ್ಲ‌. ಹಾಗಾಗಿ ಸೀದಾ ನಡೆದಿದ್ದೆ ನಡೆದಿದ್ದು :‍)

Submitted by nageshamysore Wed, 02/26/2014 - 18:47

ಪಾರ್ಥಾ ಸಾರ್, ದೇವರಾಯನ ದುರ್ಗದ ಹೆಸರು ಕೇಳುತ್ತಿದ್ದಂತೆ ಟಿ.ಕೆ. ರಾಮರಾಯರ ಚೆನ್ನಪಟ್ಟಣದ ಜಗದೇವರಾಯನ ಕುರಿತ ಕಾದಂಬರಿ ನೆನಪಾಯ್ತು. ಈ ದೇವರಾಯ ಅದೇ ದೇವರಾಯನೆ ಅಥವಾ ಬೇರೆಯೆ ಎಂದು ಮರೆತುಹೋಗಿದೆ. ನಾನು ತುಮಕೂರಿನ ಬಂಧುಗಳ ಮನೆಗೆ ಬಾಲ್ಯದಲ್ಲಿ ಹೋಗಿದ್ದಾಗ ಕೆಲವು ಸ್ಥಳಗಳಿಗೆ ಹೋಗಿದ್ದ ನೆನಪು. ಅದರಲ್ಲಿ ಇನ್ನು ಚೆನ್ನಾಗಿ ನೆನಪಿರುವುದು - ಶಿವಗಂಗೆ - ಅದರಲ್ಲೂ ಆ ಕಡಿದಾದ ಶಿಖರದ ತುದಿಗೆ ಕಟ್ಟಿದ ಗಂಟೆಯ ಕುರಿತಾದ ವಿಸ್ಮಯ ಇನ್ನು ಹಸಿರು. ಜತೆಯಲ್ಲಿಯೆ ಶಾಂತಲೆಯ ಆತ್ಮಹತ್ಯೆಯ ಕಥಾನಕದ ನೆನಪು...
ಬಹುಶಃ ನಿಮ್ಮ ಮುಂದಿನ ಚಾರಣದಲ್ಲಿ ಶಿವಗಂಗೆಯೂ ಸೇರಿದೆಯೊ ಏನೊ? (ಅಥವಾ ಹಿಂದೆಯೆ ಮಾಡಿದ್ದರೂ ಮಾಡಿರಬಹುದು...:-)

Submitted by partha1059 Wed, 02/26/2014 - 19:21

In reply to by nageshamysore

ನಾಗೇಶರೆ ನಾನು ಆ ಕಾದಂಬರಿ ಓದಿಲ್ಲ‌ , ಟಿ,ಕೆ ರಾಮರಾವ್ ಎಂದರೆ ಪತ್ತೆದಾರಿ ಹಾಗು ಕೆಲವು ಕಾದಂಬರಿ ವರ್ಣಚಕ್ರ‌, ಬಂಗಾರದ‌ ಮನುಷ್ಯ‌ ಮುಂತಾದವು ಓದಿರುವೆ ಅವರ‌ ಐತಿಹಾಸಿಕ‌ ಯಾವುದೂ ಓದಿಲ್ಲ‌. ಶಿವಗಂತೆ ಇಪ್ಪತ್ತು ವರ್ಷದ‌ ಕೆಳಗೆ ಹೋಗಿದ್ದೆ, ಈಗ‌ ಸದ್ಯಕ್ಕಿಲ್ಲ :‍)