ಕಥೆ: ಪರಿಭ್ರಮಣ..(06)

ಕಥೆ: ಪರಿಭ್ರಮಣ..(06)

(ಪರಿಭ್ರಮಣ..(05)ರ ಕೊಂಡಿ: http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...)

ಪ್ರಾಜೆಕ್ಟಿಗೆಂದೊ ಅಥವಾ ಮತ್ತಾವುದೊ ನಿಗದಿತ ಅವಧಿಯ ಕೆಲಸದ ನಿಮಿತ್ತ ವಿದೇಶಗಳ ವಿಮಾನ ಹತ್ತಿದವರು ಮೊದಲು ಗಮನಿಸಬೇಕಾದ ಅಂಶವೆಂದರೆ ಹೆಲ್ತ್ ಇನ್ಶೂರೆನ್ಸ್. ಅದಿರದಿದ್ದರೆ ಆ ದೇಶಗಳಲ್ಲಿ ಸಣ್ಣ ಪುಟ್ಟ ಕಾಯಿಲೆ ಬಿದ್ದರೂ ತೆರಬೇಕಾದ ಮೊತ್ತ ಕಣ್ಣು ಕಣ್ಣು ಬಿಡುವಂತೆ ಮಾಡುವುದರಿಂದ ಪ್ರತಿಯೊಬ್ಬರು ಮೊದಲು ಮಾಡಿಸಿಕೊಂಡಿರಬೇಕಾದ ವ್ಯವಸ್ಥೆ ಇದು..ಶ್ರೀನಾಥನ ಟೀಮಿನಲ್ಲಿದ್ದವರು ಏಳೆಂಟು ಜನ ಒಟ್ಟಿಗೆ ಬಂದಿದ್ದವರು, ಪ್ರಾಜೆಕ್ಟಿನ ಕಾರಣದಿಂದ. ಬಂದವರಿಗೆ ಮತ್ತು ಕುಟುಂಬಕ್ಕೆಲ್ಲ ಕಂಪನಿಯಿಂದಲೆ ಇನ್ಶೂರೆನ್ಸ್ ಇದ್ದುದರಿಂದ ಆ ತೊಂದರೆಯಂತೂ ಇರಲಿಲ್ಲ..ಆದರೆ ಬ್ಯಾಂಕಾಕಿನಲ್ಲಿ ನಿಜವಾದ ತೊಂದರೆಯಿದ್ದುದು ತುಟ್ಟಿ ವೈದ್ಯಕೀಯ ಚಿಕಿತ್ಸೆಯದಲ್ಲ..ಇಂಗ್ಲೀಷು ಮಾತನಾಡುವ ವೈದ್ಯರದು..! ಇಲ್ಲಿರುವ ಕಲಿಕೆಯ ವಿಧಾನದಲ್ಲಿ ಡಿಗ್ರೀ, ಮಾಸ್ಟರ ಡಿಗ್ರಿಗಳೂ ಥಾಯ್ ಭಾಷೆಯಲ್ಲೆ ಕಲಿಯುವುದು - ವೈದ್ಯಕೀಯವೂ ಸೇರಿದಂತೆ...ಕೆಲವು ವೈದ್ಯರು ತುಸು ಸಾಮಾನ್ಯ ಮಟ್ಟದಲ್ಲಿ ಇಂಗ್ಲೀಷ್ ಆಡಬಲ್ಲವರಾದರೂ, ಹೆಚ್ಚು ಕಡಿಮೆ ಉಳಿದವರೆಲ್ಲ ಮಾತೃಭಾಷೆಯಲ್ಲೆ ವ್ಯವಹರಿಸುವವರು...ನಮ್ಮ ಊರುಗಳಲ್ಲಿರುವ ಹಾಗೆ ಬೀದಿಗೊಂದೊಂದು ಕ್ಲಿನಿಕ್ಕು, ಶಾಪುಗಳಲ್ಲಿ ಹೋಗಿ ಜ್ವರ, ನೆಗಡಿ, ತಲೆ ನೋವೆಂದು ಔಷದಿ ತೆಗೆದುಕೊಳ್ಳುವಷ್ಟು ಸುಲಭವಲ್ಲ. ಮೊದಲಿಗೆ ತೊಂದರೆ ಏನೆಂದು ಡಾಕ್ಟರಿಗೆ ವಿವರಿಸಿ ಹೇಳುವುದಾದರೂ ಹೇಗೆ - ಅವರಿಗರ್ಥವಾಗುವ ಹಾಗೆ? ಅವರ ಸಲಹೆ, ಸೂಚನೆ ಪಾಲಿಸುವುದು ಹೇಗೆ? ಶ್ರೀನಾಥನಂತೂ ಊರಿಂದ ಬರುವ ಮೊದಲೆ ಮನೆ ಹತ್ತಿರದ ಪರಿಚಿತ ಡಾಕ್ಟರರಿಂದ ಲಿಸ್ಟು ಬರೆಸಿಕೊಂಡು ಸಾಮಾನ್ಯವಾಗಿ ಕಾಡುವ ಜ್ವರ, ನೆಗಡಿಯಾದಿಯಾಗಿ ಹತ್ತಾರು ತರದ ಔಷದಿಗಳನ್ನು ಜತೆಯಲ್ಲೆ ತಂದಿಟ್ಟುಕೊಂಡುಬಿಟ್ಟಿದ್ದ..ತೀರಾ ಅನಿವಾರ್ಯವಾದರೆ ಮಾತ್ರ ಡಾಕ್ಟರರ ಬಳಿ ಹೋಗುವ ಹಾಗೆ.

ಆದರಿದು ಕೇವಲ ಒಬ್ಬನ ಪ್ರಶ್ನೆಯಾಗಿಲ್ಲದ ಕಾರಣ ಇಂಗ್ಲೀಷ್ ಚೆನ್ನಾಗಿ ಮಾತನಾಡುವ ಸಹೋದ್ಯೋಗಿ ಮತ್ತು ಎಚ್.ಆರ್. ವಿಭಾಗದವರ ಸಹಾಯದಿಂದ ಇಂಗ್ಲೀಷಿನಲ್ಲಿ ವ್ಯವಹರಿಸಬಹುದಾದ ಜಾಗಕ್ಕಾಗಿ ಹುಡುಕಿದ ಪರಿಣಾಮ ಗೊತ್ತು ಮಾಡಿದ ಸ್ಥಳ 'ಬ್ಯಾಂಕಾಕ್ ಹಾಸ್ಪಿಟಲ್'ನ ಔಟ್ ಪೇಷೆಂಟಿನ ವಿಭಾಗ. ದೊಡ್ಡ ಕಾಯಿಲೆ, ಶಸ್ತ್ರ ಚಿಕಿತ್ಸೆಯಂತಹ ಕಾರಣಗಳಿಗಷ್ಟೆ ಆಸ್ಪತ್ರೆಗೆ ಕಾಲಿಟ್ಟು ಅಭ್ಯಾಸವಿದ್ದ ಶ್ರೀನಾಥನಿಗೆ ಮಾಮೂಲಿ ಜ್ವರ ನೆಗಡಿಗೆ ಅಲ್ಲಿ ಹೋಗಿ ಕ್ಯೂ ನಂಬರು ಪಡೆದು ಸರತಿ ಸಾಲಿನಲ್ಲಿ ನಿಲ್ಲುವುದೆ ಮುಜುಗರವೆನಿಸುತಿತ್ತು... ಅದೂ ಇಂಗ್ಲೀಷು ಮಾತಾಡಬಲ್ಲ ವೈದ್ಯರನ್ನೆ ಕಾಯಬೇಕು ಬೇರೆ. ಒಮ್ಮೆ ಆ ವೈದ್ಯರನ್ನು ಭೇಟಿಯಾದಾಗ ಅವರು ಮಾತನಾಡಿದ ಇಂಗ್ಲೀಷಿನ ಮಟ್ಟ ಗಮನಿಸಿ ಸ್ವಲ್ಪ ನಿರಾಳವೆನಿಸಿತ್ತು. ಇದಕ್ಕು ಮೀರಿದ ಮತ್ತೊಂದು ಅನುಕೂಲವೂ ಇತ್ತು - ಈ ಆಸ್ಪತ್ರೆಯಿದ್ದು ಸಿಲೋಮ್ ರಸ್ತೆಯಲ್ಲೆ...ಆಫೀಸಿನ ಕಟ್ಟಡದ ಎದುರು ಸಾಲಿನಲ್ಲೆ ಬರಿ ಹತ್ತಾರು ಹೆಜ್ಜೆಗಳಾಚೆಯೆ ಇದ್ದುದರಿಂದ ಆಫೀಸಿನ ಹೊತ್ತಿನಲೆ ಬೇಕಾದರೂ ಹೋಗಿ ಬರಬಹುದಿತ್ತು. ಭಾಷೆ ಮತ್ತು ಸ್ಥಳದ ಅನುಕೂಲದ ಮುಂದೆ ಆಸ್ಪತ್ರೆ ಮತ್ತು ಸರತಿಯ ಸಾಲಿನ ತೊಡಕುಗಳು ನಗಣ್ಯವೆನಿಸಿಬಿಟ್ಟಿತ್ತು.

ಆದರೆ ಬಂದ ಕೆಲವು ಕುಟುಂಬಗಳ ಜತೆ ಪುಟ್ಟ ಮಕ್ಕಳಿರುವ ಕುಟುಂಬಗಳು ಸೇರಿದ್ದ ಕಾರಣ ಮಕ್ಕಳಾಸ್ಪತ್ರೆಯ ಅಗತ್ಯವೂ ತಲೆದೋರಿತ್ತು. ಅದೃಷ್ಟವಶಾತ್ ಸಿಲೋಮ್ ರಸ್ತೆಯಿಂದ ತುಸು ಎಡ ಬದಿಗೆ ತಿರುಗಿದರೆ ಸಿಗುವ ಕಾನ್ವೆಂಟ್ ರಸ್ತೆಯಲ್ಲಿ ಮತ್ತೊಂದು ದೊಡ್ಡ ಮಕ್ಕಳ ಆಸ್ಪತ್ರೆಯೂ ಇತ್ತು.  ರಸ್ತೆಯ ತುದಿಯಲಿದ್ದ ಆ ಮಕ್ಕಳ ಆಸ್ಪತ್ರೆಯಿಂದ ಸಮಸ್ಯೆಯ ಪರಿಹಾರವಾಯ್ತು..ಬರಿಯ ಹುಷಾರು ತಪ್ಪಿದ ಮಕ್ಕಳು ಮಾತ್ರವಲ್ಲದೆ ನಿಯಮಿತವಾಗಿ ಕೊಡಿಸಬೇಕಾದ ಇಂಜೆಕ್ಷನ್ ಡ್ರಾಪುಗಳಿಗು ಒಂದು ಸೂಕ್ತ ಜಾಗ ದೊರಕಿದಂತಾಯ್ತು. ಪುಟ್ಟ ಮಕ್ಕಳ ಜತೆ ಬಂದಿರುವ ಒಂದೆರಡು ಕುಟುಂಬಗಳಿಗೆ ಅದೇ ಒನ್ ಸ್ಟಾಪ್ ಶಾಪ್ ಇದ್ದಹಾಗೆ; ಸದ್ಯ ಅಲ್ಲೂ ಇಂಗ್ಲೀಷ್ ಭಾಷೆ ಮಾತಾಡುವವರ ತೊಂದರೆ ಇರದಿದ್ದ ಕಾರಣ ನಿರಾಳ ಉಸಿರಾಡುವಂತಾಗಿತ್ತು.

ರಾಮಾನುಜಂ ಜತೆ ಮಾತಾಡಲು ಪೋನು ತೆಗೆದಾಗ ಇದೆಲ್ಲ ಶ್ರೀನಾಥನ ಮನಃಪಲ್ಲಟದಲ್ಲಿ ತೇಲಿ ಬರಲು ಕಾರಣ, ಅವನು ಹೇಳಿದ ವಿಷಯ. ರಾಮಾನುಜಂ ವಾಸವಾಗಿ ಇದ್ದ ಮನೆ ಅಲ್ಲಿಗೆ ಹತ್ತಿರದಲ್ಲಿ ಇರಲಿಲ್ಲ, ಮಗುವಿಗಾಗಿ ಗದ್ದಲ ದೊಂಬಿಯಿರದ ಜಾಗ ಬೇಕೆಂದು ಸ್ವಲ್ಪ ದೂರದಲ್ಲಿ ಮನೆ ನೋಡಿದ್ದರು...ಅಂದು ಬೆಳಿಗ್ಗೆ ಇದ್ದಕ್ಕಿದ್ದಂತೆ ಮಗುವಿಗೆ ನಿಲ್ಲದ ಭೇದಿ ಆರಂಭವಾಗಿ ಮಾಮೂಲಿ ಮನೆಯೌಷಧಿಗೆ ನಿಲ್ಲದೆ ಹೋದಾಗ ಗಾಬರಿ ಬಿದ್ದು ಆಸ್ಪತ್ರೆಗೆ ಓಡಿ ಬಂದಿದ್ದರು. ರಾಮಾನುಜಂ ಈಗ ಬಂದಿದ್ದುದು ಅದೆ ಆಸ್ಪತ್ರೆಗೆ. ಅವನಿದ್ದ ಮನೆಯಿಂದ ದೂರವಿದ್ದರೂ ಇಂಗ್ಲೀಷಿನ ದೆಸೆಯಿಂದ  ಅಲ್ಲಿಗೆ ಬರದೆ ಬೇರೆ ದಾರಿಯೂ ಇರಲಿಲ್ಲ... ವೈದ್ಯರಿಗೆ ತೋರಿಸಿ ಬರುವ ಹೊತ್ತಲ್ಲೆ ಆ ಗಾಬರಿ ಗಡಿಬಿಡಿಯಲ್ಲಿ ಮತ್ತೊಮ್ಮೆ ಭೇದಿಯಾಗಿ ಮಗು ಹಾಕಿದ್ದ ಬಟ್ಟೆಯೆಲ್ಲ ಮಲಿನವಾಗಿ ಹೋಗಿತ್ತು..ತಂದಿದ್ದ ಬಟ್ಟೆಯನ್ನು ಈಗಾಗಲೆ ಬಳಸಿ ಆಗಿದ್ದ ಕಾರಣ ಬೇರೆ ಬಟ್ಟೆಯಿರದೆ ಪಜೀತಿಯಾಗಿ, ಜತೆಯಲಿ ತಂದಿದ್ದ ಟವಲ್ಲೊಂದರಲ್ಲಿ ಸುತ್ತಿಕೊಂಡು ಹೊರಡುವಾಗ ತಟ್ಟನೆ ಹತ್ತಿರದಲ್ಲಿದ್ದ ಶ್ರೀನಾಥನ ಮನೆ ನೆನಪಾಗಿ ಓಡಿ ಬಂದಿದ್ದರು - ಬಾತ್ರೂಮಿನಲ್ಲಿ ತುಸು ಸ್ವಚ್ಛವಾಗಿ, ಬಟ್ಟೆ ಬದಲಿಸಿಕೊಂಡು ಹೋಗಲೆಂದು. ಆ ಅವಸರದಲ್ಲಿ ಪೋನ್ ಮಾಡಲೂ ತೋಚದೆ ಮೊದಲು ಬಂದು ಕಾಲಿಂಗ್ ಬೆಲ್ ಒತ್ತಿದ್ದರು. ತಾನಿದ್ದ ಪರಿಸ್ಥಿತಿಯಲ್ಲಿ ಅವರು ಒಳಗೆ ಬರುವುದು ಕ್ಷೇಮಕರವಲ್ಲವೆಂದು ಅನಿಸಿದರೂ, ಅವರಿರುವ ಪರಿಸ್ಥಿತಿ ಇನ್ನೂ ದಾರುಣವಾಗಿತ್ತು. ಅಲ್ಲದೆ ಪುಟ್ಟ ಮಗುವಿನ ವಿಷಯವಾದ ಕಾರಣ ಬೇರೇನೂ ಯೋಚಿಸದೆ ಪೋನು ಹಿಡಿದಿದ್ದಂತೆ ಮೊದಲೆದ್ದು ಬಾಗಿಲಿನತ್ತ ಓಡಿ ಅವರನ್ನು ಒಳ ಬರಮಾಡಿಕೊಂಡ. ರಾಮಾನುಜಂನನ್ನು ಸೋಫಾದತ್ತ ಆಹ್ವಾನಿಸುತ್ತಲೆ, ಮಗುವನ್ನು ಹಿಡಿದಿದ್ದ ಅವನ ಹೆಂಡತಿ ಲಕ್ಷ್ಮಿಗೆ ಹಾಲಿನ ಹತ್ತಿರದಲಿದ್ದ ಬಾತ್ರೂಮನ್ನು ತೋರಿಸಿ ಕೈಗೊಂದು ಹೊಸ ಟವಲನ್ನಿತ್ತು ಮತ್ತೆ ಸೋಫಾದಲ್ಲಿ ಬಂದು ಕುಳಿತ.

ಫ್ರಿಡ್ಜಿನಿಂದ ಮೂರು ಗ್ಲಾಸಿಗೆ ಆರೆಂಜು ಜ್ಯೂಸು ಬಗ್ಗಿಸಿಕೊಂಡ ಶ್ರೀನಾಥ ಟೀಪಾಯಿಯ ಮೇಲಿರಿಸುತ ಎದುರಿನ ಸೋಫ ಮೇಲೆ ಕುಳಿತ. ..ಬೆನ್ನ ಹಿಂದಿನ ಬಾತ್ ರೂಮಿನಿಂದ ನೀರು ಹರಿಯುತ್ತಿರುವ ಸದ್ದು ಕೇಳಿಸುತ್ತಾ ಇತ್ತು...ರಾಮಾನುಜಂನ ಹೆಂಡತಿ ಮಗುವಿಗೆ ಮೈ ತೊಳೆಯುತ್ತಿರಬೇಕು..ಅರೆರೆ...ಈ ಹೆಣ್ಣು ಇದೀಗ ತಾನೆ ಅಲ್ಲೆ ಸ್ನಾನ ಮಾಡಿದ್ದಲ್ಲವೆ? ಬಹುಶಃ ಅದರ ಕುರುಹಾಗಿ ಅವಳ ಕೂದಲ ಎಳೆಗಳು ಅಲ್ಲೆ ಬಿದ್ದಿವೆಯೊ ಏನೊ? ಇಂತಹ ವಿಷಯ ವಾಸನೆ ಗ್ರಹಿಕೆಯಲ್ಲಿ ಹೆಂಗಸರ ಕಣ್ಣು ಬಲು ಸೂಕ್ಷ್ಮ ಮತ್ತು ಚುರುಕು..ಸಣ್ಣ ಕುರುಹು ಕಣ್ಣಿಗೆ ಬಿದ್ದರೆ ಸಾಕು ಏನೊ ಇರಬಹುದೆಂದು ಊಹಿಸಿಬಿಡುತ್ತದೆ ಅವರ ಹೆಣ್ಮನಸತ್ವದ ಅಂತಃಪ್ರಜ್ಞೆ...ಹಾಗೇನಾದರೂ ಉದ್ದವಾಗಿರುವ ಕೂದಲೆಳೆ ಆಕೆಯ ಕಣ್ಣಿಗೆ ಬಿದ್ದರೇನಪ್ಪಾ ಗತಿ ? ಎನಿಸಿ ಹೃದಯದ ಬಡಿತದ ವೇಗ ಹೆಚ್ಚಿದಂತಾಯ್ತು..ಹಿಂದೆಯೆ, ಮಗುವಿನ ಗಾಬರಿಯಲ್ಲಿ ಅಷ್ಟೊಂದು ಗಮನವಿಟ್ಟು ನೋಡುವ ನಿರಾಳತೆ ಇರಲಾರದೆಂದು ತಂತಾನೆ ಸಮಾಧಾನಿಸಿಕೊಂಡ..ಅಲ್ಲದೆ, ಅಲ್ಲಿರುವ ದೀಪದ ಪ್ರಖರತೆ ತುಸು ಕಡಿಮೆಯೆ. ಹೀಗಾಗಿ, ತೀರಾ ಗಮನಿಸಿ ನೋಡಿದಲ್ಲದೆ ಕಣ್ಣಿಗೆ ಬೀಳುವ ಸಾಧ್ಯತೆ ಕಡಿಮೆಯೆ...ಹಾಗೂ ಮಿತಿ ಮೀರಿ ಬಿದ್ದರೂ ಏನೀಗ? ಕೆಲಸದವರು ಕ್ಲೀನ್ ಮಾಡಲು ಬಂದು ಹೋಗುವುದಿಲ್ಲವೆ? ಅವರದು ಎಂದೂ ತಿಳಿದುಕೊಳ್ಳಬಹುದಲ್ಲಾ? ಎಂತೆಲ್ಲಾ ಚಿಂತಿಸುತ್ತಲೆ ಆಗ್ಗಾಗೆ ಮುಚ್ಚಿದ ಮಾಸ್ಟರ ಬೆಡ್ರೂಮಿನತ್ತ ನೋಡುತ್ತಿದ್ದ ಶ್ರೀನಾಥ, ಒಳಗಿರುವ ಸುಂದರಿಯ ಕಥೆಯೇನಾಗಿದೆಯೊ ಎಂದು ಆತಂಕಿಸುತ್ತ. ಅವಳು ಒಳಗೇನು ಮಾಡುತ್ತಿದ್ದಾಳೊ ಏನೊ? ಸುಮ್ಮನೆ ಏನೂ ಮಾಡದೆ ಎಷ್ಟು ಹೊತ್ತು ಕೂತಿರಲು ಸಾಧ್ಯ? ಸದ್ಯ..ಸದ್ದಿಲ್ಲದೆ ಕೂತಿದ್ದಾಳೆ ..ಅಥವಾ ಹಾಗೆ ಒರಗಿ ಕಣ್ಣು ಮುಚ್ಚಿರಬೇಕು...ಒಳಗಿನ ಟೀವಿ ಹಾಕಿಲ್ಲ ಸದ್ಯ.. ಇಲ್ಲದಿದ್ದರೆ ಅದೊಂದು ರಾದ್ಧಾಂತವೆಬ್ಬಿಸಿಬಿಡುತದೆ..

ಒಳಗೆಲ್ಲ ಏನೆಲ್ಲಾ ಆಲೋಚನೆಯ ಚಕ್ರ ರಾಟೆಯಿಂದೆಳೆದ ಹಗ್ಗದಂತೆ ಕ್ಷಣದರ್ಧದಲಿ ಪುಂಖಾನುಪುಂಖವಾಗಿ ಬರುತ್ತಿದ್ದರೂ  ತೋರಗೊಡದ ತುಟಿಯ ಮೇಲಿನ ಮುಗುಳ್ನಗೆಯೊಂದಿಗೆ ಅದೂ ಇದೂ ಆಫೀಸಿನ ಮಾತಿಗಿಳಿದಿದ್ದ ರಾಮಾನುಜಂ ಜತೆಗೆ...ಹಿನ್ನಲೆ ಇಷ್ಟೆಲ್ಲಾ ಇದ್ದರು ಏನು ಆಗದವರಂತೆ ಮುಖವಾಡ ತೊಟ್ಟು ನಟಿಸುತ್ತಿರುವ ಮನಸಿನ ವಿಚಿತ್ರ ವ್ಯಾಪಾರದ ಕುರಿತು ಸೋಜಿಗವೂ ಆಗುತ್ತಿತ್ತು...ಆದರು ತುಟಿ ಮಾತ್ರ ಯಾಂತ್ರಿಕವಾಗಿ ಏನನ್ನೊ ಮಾತಾಡುತ್ತಲೆ ಇತ್ತು ಒಳಗಣ ಕೋಲಾಹಲಕ್ಕೂ ಹೊರಗಿಗೂ ಸಂಬಂಧವೆ ಇಲ್ಲದಂತೆ...ಇಬ್ಬರು ಹೆಂಗಸರು ಸೇರಿದಾಗ ಹೇಗೆ ಮಾತಾಡಲು ತಾನಾಗೆ ಗೃಹವಾರ್ತೆ, ಗಾಸಿಪ್ಪುಗಳ ವಸ್ತು ಸಿಗುವುದೊ, ಹಾಗೆಯೆ ಜತೆಯಲ್ಲಿ ಕೆಲಸ ಮಾಡುವ ಗಂಡಸರ ವಿಷಯ ಆಫೀಸಿಗೆ ಸಂಬಂಧಿಸಿದ್ದಾಗಿರುತ್ತದೆ. ಯಾಕೆಂದರೆ ಆ ಮಾತಾಡಲು ಯಾವ ಸಿದ್ದತೆಯ ಅಗತ್ಯವಿರದು ..ತಾನಾಗೆ ಯೋಚನೆ ಮಾಡುವ ಅಗತ್ಯವಿಲ್ಲದೆ ಹೊರಬರುತ್ತದೆ.ಈಗಲೂ ಅದೆ ಆಗುತ್ತಿದ್ದುದು......

ರಾಮಾನುಜಂ ಒಳ್ಳೆಯ ಕೆಲಸಗಾರ. ಪ್ರಾಜೆಕ್ಟಿನಲ್ಲೂ ತಾನಾಯ್ತು ತನ್ನ ಕೆಲಸವಾಯ್ತು ಎಂದು ತನ್ನ ಪಾಡಿಗೆ ಇರುವವ..ಮಾತು ಕಡಿಮೆಯೆ ಆದರೂ ಕೆಲಸ ಮಾತ್ರ ಅಚ್ಚುಕಟ್ಟು... ಪ್ರೋಗ್ರಾಮಿಂಗ್ ಹಿನ್ನಲೆಯಲ್ಲಿ ಡೆವಲಪರ್ ಆಗಿ ಕೆಲಸ ಮಾಡುತ್ತಾನೆ...ಟೆಕ್ನಿಕಲ್ ಜ್ಞಾನದ ಆಳ ಹೆಚ್ಚು..ಆ ಕುರಿತು ಮಾತಾಡಿದರೆ ಸ್ವಲ್ಪ ಬಾಯಿ ಬಿಚ್ಚಿ ಮಾತಾಡುತ್ತಾನೆ. ಆದರೆ ಶ್ರೀನಾಥನಿಗೆ ತಾಂತ್ರಿಕ ಹಿನ್ನಲೆಯಿಲ್ಲ. ಏನಿದ್ದರೂ ಬಿಜಿನೆಸ್, ಪ್ರೋಸಸ್, ಸ್ಟ್ರಾಟೆಜಿ ಕುರಿತು ಮಾತಾಡಬಲ್ಲನೆ ಹೊರತು ಪ್ರೊಗ್ರಾಮಿಂಗಿನ ಕುರಿತು ಸೊನ್ನೆಯೆಂದೆ ಹೇಳಬೇಕು...ಹೀಗಾಗಿ ಅಲ್ಲಿಂದ ಆರಂಭವಾದ ಮಾತು ಬಲು ಬೇಗನೆ ಇತರೆ ವಿಷಯದತ್ತ ಹರಿಯತೊಡಗಿತಾದರೂ ಶ್ರೀನಾಥನ ಮನವೆಲ್ಲ ಬೇರೆಲ್ಲೊ ಇತ್ತು; 'ಇನ್ನು ಮುಗಿದಿಲ್ಲವೆ, ಇನ್ನು ಮುಗಿದಿಲ್ಲವೆ?' ಎಂದು ಮರುಕಳಿಸುತ್ತಿದ್ದ ಪ್ರಶ್ನೆಯನ್ನು ಬಲು ಕಷ್ಟದಿಂದ ಅಕಸ್ಮಾತಾಗಿ ತುಟಿಯಾಚೆ ಹೊರಡದಂತೆ ತಡೆ ಹಿಡಿದು ಮಾತಾಡುತ್ತಿದ್ದ...ಆ ಹೊತ್ತಿನ ಮನಸ್ಥಿತಿಯಲ್ಲಿ ಪ್ರತಿ ಕ್ಷಣವೂ, ಗಳಿಗೆಯೂ ಒಂದೊಂದು ಯುಗವಾದಂತೆ ಭಾಸವಾಗುತ್ತಿತ್ತು. ಕೊನೆಗೂ ಒಳಗೆ ಹರಿಯುವ ನೀರಿನ ಸದ್ದು ನಿಂತಾಗ, 'ಸದ್ಯ, ಮುಗಿಯಿತೆಂದು ಕಾಣುತ್ತದೆ' ಎಂದು ನಿರಾಳವಾಗಿ, ಮುಖದ ಮೇಲಿನ ಬಣ್ಣ ತುಸು ಬದಲಾಯ್ತು.

ಅಂತೂ ಅದಾದ ಮೇಲೆ ಅವರು ಜ್ಯೂಸು ಕುಡಿದು, ಅಷ್ಟಿಷ್ಟು ಮಾತಾಡಿ ಹೊರಡುವ ಹೊತ್ತಿಗೆ ಮತ್ತೆ ಹತ್ತು ನಿಮಿಷಗಳು ಉರುಳಿಹೋಗಿತ್ತು...ಅವರು ಹೊರಡಲು ಮೇಲೆದ್ದಾಗ ಒಳಗಿನ ನಿರಾಳವೆಲ್ಲ ಉತ್ಸಾಹದ ಬುಗ್ಗೆಯ ರೂಪದಲ್ಲಿ ಪ್ರಸರಿಸಿ, ತಾನೆ ನೇರ ಹೆಬ್ಬಾಗಿಲತ್ತ ಬಂದ ಬೀಳ್ಕೊಡಲೆಂದು. ಅವರು 'ಬೈ ಬೈ' ಹೇಳಿ ಹೊರಡುತ್ತಿದ್ದಂತೆ ಕೈಯಾಡಿಸುತ್ತಲೆ ನಿಧಾನದಲ್ಲಿ ಬಾಗಿಲು ಮುಚ್ಚುವವನಂತೆ ನಟಿಸುತ್ತಲೆ ಶೀಘ್ರವಾಗಿ ಮುಚ್ಚಿ ಚಿಲುಕ ಹಾಕಿದ. ಹೆಚ್ಚು ಕಡಿಮೆ ಬೀರಿನ ಅಮಲೆಲ್ಲ ಇಳಿದು ಹೋದಂತಾಗಿದ್ದ ಮನಸ್ಥಿತಿಯಲ್ಲೆ ಬಾಗಿಲು ಹಾಕಿ ಹಿಂದೆ ತಿರುಗುತ್ತಲೆ ಅಲ್ಲಿ ಕಂಡ ದೃಶ್ಯಕ್ಕೆ ಮತ್ತೆ ಎದೆ ಧಸಕ್ಕೆಂದಿತು.....ಅಲ್ಲೆ ಪಕ್ಕದಲ್ಲೆ ಗೋಡೆಗೊರಗಿಕೊಂಡೆ ಫಳ ಫಳ ಹೊಳೆಯುತ್ತ ಬಿದ್ದಿದ್ದವು - ಹೈ ಹೀಲ್ಡಿನ ಬಣ್ಣಬಣ್ಣದ ಮಿರುಗುವ ಬೆಲೆವೆಣ್ಣಿನ ಪಾದರಕ್ಷೆಯ ಜೋಡಿ..!

ಅವರು ಬಂದ ಅವಸರದಲ್ಲಿ ಅದನ್ನು ಅವಿತಿಡಲೆ ಮರೆತುಬಿಟ್ಟಿದ್ದ...ಅದು ಇದ್ದ ಜಾಗ ನೋಡಿದರೆ, ಒಳಗೆ ಬರುವಾಗಲೊ, ಇಲ್ಲ ಹೊರಗೆ ಹೋಗುವಾಗಲೊ - ಖಂಡಿತ ಅವರ ಕಣ್ಣಿಗೆ ಬಿದ್ದಿರುತ್ತದೆ ಎನಿಸಿ ಕಸಿವಿಸಿಯಾಯ್ತು...ಆದರೀಗ ಏನು ಮಾಡುವಂತಿರಲಿಲ್ಲ..ನೋಡಿದ್ದರೆ ನೋಡಿರಲಿ ಎಂಬ ಭಂಡತನದಿಂದ ಮಾಸ್ಟರ ಬೆಡ್ರೂಮಿನ ಬಳಿ ಬಂದವನೆ ಬಾಗಿಲು ತೆರೆದ. ಅಲ್ಲೆ ಹಾಸಿಗೆಯ ತುದಿಯಲ್ಲಿ ಹಾಗೆ ಮಲಗಿ ನಿದ್ದೆಗೊಳಗಾದವಳನ್ನು ಮೆಲುವಾಗಿ ಅಲುಗಾಡಿಸಿ ಎಚ್ಚರಿಸಿ ಹೊರಬಂದ...ಕಸುಬಿನ ದಣಿವಿನಿಂದಾಗುವ ಸಹಜ ಬಳಲಿಕೆಯೊ, ಸ್ನಾನದ ನಂತರದ ಮಂಪರಿನ ಕಾರಣವೊ ಆಳವಾದ ನಿದಿರೆಯತ್ತ ತನ್ನಂತಾನೆ ಜಾರುತಿದ್ದವಳು ಅವನ ಅಲುಗಾಡಿಸುವಿಕೆಯಿಂದ ಎಚ್ಚರಗೊಂಡು, ಮೆಲುವಾಗಿ ಆಕಳಿಸಿ ಮೈಮುರಿಯುತ್ತ ಸೋಫಾದ ಅಂಚಿನಲ್ಲಿ ಬಂದು ಕುಳಿತು ಗಡಿಯಾರದತ್ತ ನೋಡಿದಳು...

ಈ ಜಗತ್ತಿನ ವ್ಯಾಪಾರವೆಲ್ಲ ಹೀಗೆಯೆ - ಕಟ್ಟುನಿಟ್ಟಿನ ಲೆಕ್ಕಾಚಾರ. ಯಾವ ಕಂಪನಿಗಳಲ್ಲೂ ಇರದ ನಿಜವಾದ ಶಿಸ್ತು, ಸಮಯ ಪರಿಪಾಲನೆಯ ಪ್ರಜ್ಞೆ ಇದರ ಮೂಲ ಮಂತ್ರ. ಬಹುಶಃ 'ಟೈಮ್ ಇಸ್ ಮನೀ' ಎನ್ನುವುದನ್ನು ಇಲ್ಲಿ ಪರಿಪಾಲಿಸುವ ಮಟ್ಟಿಗೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಅದರಲ್ಲೂ ಯಾವುದೆ ತರಹದ ಸೂತ್ರ ಸಲಕರಣೆಗಳ ನೆರವಿಲ್ಲದೆ ಬರಿಯ ಮಾಮೂಲಿ ಜನಗಳ ಸಾಮಾನ್ಯ ರೀತಿ ನೀತಿಗಳಲ್ಲೆ ನಿಭಾಯಿಸಿಕೊಳ್ಳುವ ಸಾಮರ್ಥ್ಯ ಮುಂಬೈಯಿನ ಡಬ್ಬಾವಾಲಗಳ ಹಾಗೆ ಕಂಪನಿಗಳಿಗೆ ಒಂದು ಆಸಕ್ತಿದಾಯಕ ಕೇಸ್ ಸ್ಟಡಿಯೆ ಆದೀತು..ಗಿರಾಕಿ ಕರೆದಾಗ ಹೇಗೆ ಎಷ್ಟು ಶೀಘ್ರದಲಿ ಸಾಧ್ಯವೊ ಅಷ್ಟು ಶೀಘ್ರವಾಗಿ ಬಂದು ಸೇರುತ್ತಾರೊ, ಖರೀದಿಸಿದ ಸಮಯವನ್ನು ಸಹ ನಿಗದಿಸಿದಷ್ಟರ ಮಿತಿಯಲ್ಲೆ ಇರುವಂತೆ ನೋಡಿಕೊಳ್ಳುತ್ತಾರೆ...ಇಲ್ಲೆಲ್ಲ ಓಡುವುದು ಗಂಟೆಗಳ ಲೆಕ್ಕಾಚಾರ..ಪ್ರತಿ ಹೆಚ್ಚಿನ ಗಂಟೆಗೆ ಮತ್ತೊಂದು ಗಂಟೆಯ ದರ ಕೊಟ್ಟೆ ಕೊಳ್ಳಬೇಕು. ಅದಕ್ಕೂ ಮೀರಿ ಬೇಕೆಂದರೆ ದಿನಗಳ ಲೆಕ್ಕಕ್ಕೂ ಸೈ... ಹಣವಷ್ಟೆ ಇಲ್ಲಿನ ಮೂಲಮಂತ್ರ. ಕಳೆವ ಸಮಯವನ್ನು ಹಣವಾಗಿ ಬದಲಿಸುವ ಕಲೆಯಷ್ಟೆ ಈ ಜಗತ್ತಿನಲ್ಲಿ ವ್ಯವಹರಿಸುವವರಿಗೆ ಸಂಗತ...ಅದನ್ನು ಕೊಡುವ ಯಾರಾದರೂ ಸರಿ, ಯಾವ ಹಿನ್ನಲೆಯಾದರೂ ಸರಿ - ಅದು ಲೆಕ್ಕಕ್ಕಿಲ್ಲ. ಅವಳು ಗಡಿಯಾರದತ್ತ ನೋಡಿದ್ದು ಆ ಕಾರಣದಿಂದಲೆ...ಒಂದು ಗಂಟೆ ಎಂದು ಬುಕ್ ಮಾಡಿದ್ದು..ಈಗಾಗಲೆ ಮುಕ್ಕಾಲು ಗಂಟೆ ಕಳೆದು ಬರಿ ಹದಿನೈದು ನಿಮಿಷ ಮಾತ್ರವೆ ಉಳಿದಿದೆ..ಬೇಗನೆ ಕೆಲಸ ಮುಗಿಸಿ ಹೊರಡಬೇಕು..ಸರಿಯಾಗಿ ಒಂದು ಗಂಟೆಯ ನಂತರ ಹೊರ ಬಂದು 'ಮೇಡಮ್ಮಿಗೆ' ಟೆಕ್ಸ್ಟ್ ಮೆಸೇಜ್ ಕಳಿಸಬೇಕು, ಕಾರ್ಯ ಮುಗಿದ ಕುರುಹಾಗಿ...ಅಲ್ಲೆ ಮುಂದಿನ ಗಿರಾಕಿಯ ವಿವರವೊ ಅಥವ ಹಿಂದಿರುಗುವುದೊ ಮತ್ತಿನ್ನಾವುದೊ ಸೂಚನೆ ಬರುತ್ತದೆ - ಅದರನುಸಾರ ಮುಂದಿನ ಹೆಜ್ಜೆ.

ಆದರೆ ಆ ಹುಡುಗಿಯರೇನು ಅದರ ಕಾರಣ ಅರಿಯಲಾಗದಷ್ಟು ಪೆದ್ದರಲ್ಲ...ಒಂದು ಗಂಟೆಯೆಂದು ಹೋದವರು ಗಿರಾಕಿಯ ಜತೆ ನೇರ ವ್ಯವಹಾರಕ್ಕಿಳಿದು ಮತ್ತೊಂದು ಗಂಟೆ ಕಳೆದು ಅವರ ಕಮೀಷನ್ ಪಾಲು ತಪ್ಪಿಸಬಾರದಲ್ಲಾ? ಅದಕ್ಕೆ ಈ ರೀತಿಯ ಹದ್ದಿನ ಕಣ್ಣಿನ ನಿಗಾ. ಕೊಂಚ ಕಡಿಮೆ ರೇಟೆಂದು ಗಿರಾಕಿಯೂ ಖುಷಿಯಿಂದ ಒಪ್ಪಿಕೊಳ್ಳುತ್ತಾನೆ; ಮೇಡಮ್ ಪಾಲು ಕೊಡದ ಕಾರಣ, ಅವರಿಗೆ ಮೇಡಮ್ ಕೊಡುವುದಕ್ಕಿಂತ ಹೆಚ್ಚು ಸಿಗುತ್ತದೆ..ಅದೆ ಗಿರಾಕಿಗೆ ಇಷ್ಟವಾಗಿಬಿಟ್ಟರೆ, ನೇರ ಪೋನ್ ನಂಬರ ಕೊಟ್ಟುಬಿಡಲೂಬಹುದು. ಬೇಕೆಂದಾಗ ನೇರ ವ್ಯವಹಾರ ನಡೆಸಬಹುದಲ್ಲಾ? ಇದಕ್ಕೆಲ್ಲಾ ಕಡಿವಾಣ ಹಾಕಲೆಂದೆ ಯಾವುದೆ ಕಾರಣಕ್ಕೂ ನೇರ ವ್ಯವಹಾರಕ್ಕಿಳಿಯಲು ಬಿಡದೆ ಕಾಯುತ್ತಾರೆ. ಆ ಹುಡುಗಿಯರ ಕೈಲಿರುವ ಪೋನ್ ಸಿಮ್ ಕಾರ್ಡ್ ಕೂಡ ಪ್ರತಿದಿನ ಬದಲಾಗುತ್ತದೆ. ಅಕಸ್ಮಾತ್ ಯಾವುದೊ ಗಿರಾಕಿ ನಿನ್ನೆ ಬಂದವಳನ್ನು ಮತ್ತೆ ಕರೆಯಲೆಂದು ಹೊರಟರೆ, ಆ ನಂಬರ್ ಇನ್ಯಾರ ಬಳಿಯೊ ಇರುತ್ತದೆ..ಆ ಹುಡುಗಿಗೆ ಕರೆ ಬಂತೆಂದರೆ ನಂಬರು ನೇರ ಗಿರಾಕಿಗೆ ಕೊಟ್ಟಿದ್ದೂ ಬಯಲಾದಂತೆ ಲೆಕ್ಕ. ಅವಳು ಆ ಸುದ್ಧಿ ಮೇಡಮ್ಮಿಗೆ ತಲುಪಿಸಿದರೆ - ಅಷ್ಟೆ; ಆ ನಂಬರು ಕೊಟ್ಟವಳ ಪಾಡು ದೇವರಿಗೇ ಪ್ರೀತಿ...ಅದಕ್ಕೆಲ್ಲ ಹೆದರಿಯೆ, ಯಾರೂ ಗಿರಾಕಿಗೆ ನಂಬರು ಕೊಡುವ ಗೋಜಿಗೆ ಹೋಗುವುದಿಲ್ಲ - ಸ್ವಂತವಾಗಿ ನೆರ ಬಿಜಿನೆಸ್ ಮಾಡುವವರನ್ನು ಬಿಟ್ಟರೆ. ಅಷ್ಟು ಮಾತ್ರವೆ ಅಲ್ಲ - ಅನುಮಾನವಿದ್ದ ಅಥವಾ ವೃತ್ತಿಗೆ ಹೊಸದಾದ ಹೆಣ್ಣುಗಳನ್ನು ಕಳಿಸಿದಾಗ ಅವರಿಗರಿವಿಲ್ಲದಂತೆ ಕೆಲವು ಗೂಢಾಚಾರರನ್ನು ಬಿಟ್ಟಿರುತ್ತಾರೆ...ಅವರದು ಬೇರೇನೂ ಕೆಲಸವಿರುವುದಿಲ್ಲ - ಕಳಿಸಿದ ಹೆಣ್ಣು ಒಳಹೊಕ್ಕ ಮತ್ತು ಹೊರಬಂದ ಸಮಯ ಗಮನಿಸಿ ಹೆಡ್ ಆಫೀಸಿಗೆ ರಿಪೋರ್ಟ್ ಕಳಿಸುವುದೆಷ್ಟೊ ಅಷ್ಟೆ. ಮಿಕ್ಕಿದ್ದೆಲ್ಲ ನಿಭಾವಣೆ ಮೇಡಮ್ಮಿಗೆ ಬಿಟ್ಟಿದ್ದು !

ಇದೆಲ್ಲದರ ಅರಿವಿರುವುದರಿಂದಲೆ ಅವಳು ಗಡಿಯಾರದತ್ತ ನೋಡಿದ್ದು. ನೋಡುತ್ತಲೆ'ಓಮೈ ಗಾಡ್ದ್..ಓನ್ಲಿ ಫಿಫ್ಟೀನ್ ಮಿನಿಟ್ ಲೆಫ್ಟ್..' ಎಂದವಳೆ ಎದ್ದು ಅವನ ಪಕ್ಕದಲ್ಲಿ ಬಂದು ಕೂತವಳೆ ಮತ್ತೆ ಕಾಲಹರಣ ಮಾಡಲಿಚ್ಚಿಸದೆ ಹೆಗಲ ಮೇಲೆ ಕೈಯಿಟ್ಟಳು...ಆದರೆ ಶ್ರೀನಾಥನಿಗೇಕೊ ಇದುವರೆಗೆ ನಡೆದಿದ್ದು, ನಡೆಯುತ್ತಿರುವುದೆಲ್ಲ ಒಂದು ಕನಸಿನ ಹಾಗೆ ತೋರುತ್ತಿತ್ತು...ರಾಮಾನುಜಂ ಬಂದು ಹೋದ ಮೇಲೆ ತಲೆಗೇರಿದ್ದ ಮತ್ತೆಲ್ಲ ಪೂರ್ತಿ ಇಳಿದಂತಾಗಿ, ಪಕ್ಕದಲ್ಲಿ ಕೂತವಳನ್ನು ತಾನೆ ಕರೆಸಿದೆನೆ? ಎಂದು ಗಾಬರಿಯಾಗುವಂತಾಯ್ತು.. ಇದೆಲ್ಲಿತ್ತು ತನಗಿಂತಹ ಧೈರ್ಯ ಎಂದು ಒಂದೆಡೆ ಚಿಂತಿಸುತ್ತಲೆ, ಮತ್ತೊಂದೆಡೆ ಇಷ್ಟು ಸುಂದರಿ ಹತ್ತಿರವಿದ್ದರು ಯಾಕೆ ಒಂದು ರೀತಿಯ ಅನಾಸಕ್ತ ಭಾವವೆ ಮೈದುಂಬಿಕೊಂಡಂತಿದೆಯಲ್ಲ ಅನಿಸತೊಡಗಿತು...ಸಾಲದ್ದಕ್ಕೆ ಅನಿರೀಕ್ಷಿತವಾಗಿ ಬಂದವರ ಕಣ್ಣಿಗೆ ಇವಳು ಬಿದ್ದಿದ್ದರೆ ಏನಪ್ಪಾ ಗತಿ? ಎನಿಸಿ ಮೈ ಅದುರಿಹೋಯ್ತು...ಭಾವೋನ್ಮೇಷದಲ್ಲಿ ಪುಳಕಗೊಂಡು ಉದ್ವೇಗೊದ್ದೇಪನಗೊಳ್ಳುವ ಬದಲು, ಯಾವುದೊ ಅಗೋಚರ ಹೇಸಿಗೆಯ ಭಾವ ಒಡಮೂಡಿ ಎಷ್ಟು ಬೇಗ ಸಾದ್ಯವೊ ಅಷ್ಟು ಬೇಗ ಇದರಿಂದ ಪಾರಾಗಿ ಹೊರಬಿದ್ದರೆ ಸಾಕು ಎನಿಸಿಬಿಟ್ಟಿತು... ದುಡ್ಡು ಕೊಟ್ಟಿದ್ದರೂ, ಅದರ ಪರಿವೆಗಿಂತ ಹೆಚ್ಚು - ಈ ವಿಮುಖತೆಯ ಸಂಕಟದಿಂದ ಹೊರ ಬರುವುದಾಗಿತ್ತು...ಏನೂ ಮಾಡದೆ ಸುಮ್ಮನೆ ಟೀವಿ ನೋಡುತ್ತಾ ಕೂರುವ ಘೋರ ಯಾತನೆ ಇದಕ್ಕಿಂತ ವಾಸಿಯೆನಿಸಲ್ಹತ್ತಿತು..ಬಹುಶಃ ಇದಕ್ಕೆಲ್ಲ ಮೂಲಕಾರಣ ತಾನಿರುವ ಏಕಾಂತ ಸ್ಥಿತಿಯೆ ಆಗಿರಬೇಕು...ಆ ಸ್ಥಿತಿಯ ಅಯೋಮಯತೆಯ ಮಬ್ಬು ಬುದ್ದಿಗೆ ಮಂಕು ಕವಿಸಿ ಹೀಗೆಲ್ಲಾ ಹುಚ್ಛಾಟವಾಡಿಸುತ್ತಿದೆಯೊ ಏನೊ? 

ಹೀಗೆಲ್ಲ ಚಿಂತೆಯ ಚಿಂತನಾ ಮಥನದಲ್ಲಿ ತಲ್ಲೀನನಾಗಿ ಕಳುವಾದವನಿಗೆ ಹೆಗಲ ಮೇಲೆ ಬಿದ್ದವಳ ಕೈಯ ಸ್ಪರ್ಶ ವಾಸ್ತವಕ್ಕೆಳೆದು ತಂದಿತು..ಅವಳು ಗಡಿಯಾರದತ್ತ ನೋಡುತ್ತ ಮತ್ತಷ್ಟು ಹತ್ತಿರ ಸರಿದಾಗ ಪಾಳಿಯ ಅವಧಿ ಮುಗಿಯುತ್ತಾ ಬಂದಿದೆಯೆಂಬುದರ ಅರಿವಾಗಿ ಅವಳು ಆತುರಪಡಿಸುತ್ತಿದ್ದಾಳೆಂದು ಗೊತ್ತಾಗುತ್ತಿತ್ತು..ಇವನ ಮೌನವನ್ನೆ ಸಮ್ಮತಿಯ ಸಹಕಾರವೆಂದು ಭಾವಿಸಿ ಸುಮಾರು ಹೊತ್ತೂ ಮುಂದುವರೆದ ಮೇಲೂ ಅವಳ ಸ್ಪರ್ಶ, ತಾಡನಗಳೆಲ್ಲ ಕೆಲಸ ಮಾಡುತ್ತಿರುವಂತೆ ಕಾಣದೆ ಕೊಂಚ ಅಸಹನೆಯಿಂದಲೆ, ' ಆರ್ ಯೂ ಆಲ್ ರೈಟ್..?' ಎಂದು ಕೆಣಕಿದಾಗ, ಅದರ ಹಿಂದಿನ ಗೂಢಾರ್ಥದ ಮುಳ್ಳು ಚುಚ್ಚಿದರೂ ಯಾಕೊ ಸಹಕರಿಸಲು ನಿರಾಕರಿಸುತ್ತಿದ್ದ ಅವಯವಗಳನ್ನು ಏನು ಮಾಡಿದರೂ ಮತ್ತೆ ಪ್ರೇರೇಪಿಸಲೂ ಆಗಲೆ ಇಲ್ಲ. 

ಹೀಗೆ ಸುಮಾರು ಹೊತ್ತು ಕಳೆದರೂ ಕಾಣದ ಫಲಿತಾಂಶದಿಂದ ಬೇಸತ್ತವಳೆ ತನ್ನ ಯತ್ನ ನಿಲ್ಲಿಸಿ ಸುಮ್ಮನೆ ಕುಳಿತುಬಿಟ್ಟಳು. ಆ ಪ್ರಯತ್ನದ ನಡುವೆ ಅವಳ ದಂತದಂತ್ತಿದ್ದ ಮೈ ಕಣ್ಮುಂದೆ ನಿಂತ ಶಿಲಾಬಾಲಿಕೆಯೊ ಎಂಬ ಹಾಗೆ ಕಾಣುತ್ತಿತ್ತು. ದಂತದ ಬಣ್ಣವಾಗಲಿ, ತೆಳು ನಡುವಾಗಲಿ, ಎಲ್ಲವು ಎಷ್ಟೆಷ್ಟಿರಬೇಕೊ ಅಷ್ಟಷ್ಟೆ ಪ್ರಮಾಣದಲ್ಲಿ ಕೆತ್ತಿದಂತಿದ್ದ ಅಪರೂಪದ ಅವಯವಗಳೆಲ್ಲ ಸೌಂದರ್ಯಾತಿಶಯದ ಸಾಕಾರ ರೂಪವಾಗಿ ಕಾಣುತ್ತಿದ್ದವಾದರೂ, ಯಾಕೊ ಅವನಲ್ಲಿ ಹುಟ್ಟಿಸಬೇಕಿದ್ದ ಕಾಮೋದ್ರೇಕದ ಸುಳಿವು ಮಾತ್ರ ಕಾಣಲೆ ಇಲ್ಲ. ಮರಗಟ್ಟಿದಂತೆ ಕೂತವನನ್ನಪ್ಪಿ ಮುದ್ದಿಸಿದರೂ ಏನೂ ಪ್ರಯೋಜನ ಕಾಣಿಸದೆ ಎದ್ದು ಕೂತವಳನ್ನೆ ತುದಿಗಣ್ಣಲ್ಲೆ ನೋಡುತ್ತ , 'ಸಾರಿ...ತುಂಬಾ ಬೀರು ಕುಡಿದುಬಿಟ್ಟಿರಬೇಕು..ಇಂದು ಆಗುವುದಿಲ್ಲವೆಂದು ಕಾಣುತ್ತದೆ, ಇನ್ನೊಂದು ದಿನ ನೋಡೋಣ' ಎಂದುಬಿಟ್ಟ !

ಅವಳೋ ಒಂದು ಗಳಿಗೆ ನಿರಾಶಳಾದಂತೆ ಕಂಡಳು - ಕೈಗೆ ಸಿಕ್ಕಿದ ತುತ್ತು, ಬಾಯಿಗಿಡುವಂತಿಲ್ಲವಲ್ಲಾ ಎನ್ನುವಂತೆ. ಕಸುಬೆ ಆದರೂ ವೃತ್ತಿ ಧರ್ಮ ಮೀರುವಂತಿಲ್ಲವಾಗಿ ಹಣವೆಲ್ಲ ವಾಪಸ್ಸು ಕೊಡಬೇಕಲ್ಲ ಎಂಬ ನಿರಾಶೆ ಕಣ್ಣಲ್ಲಿ ಮಡುಗಟ್ಟುತ್ತಿತ್ತು. ಹಣಕ್ಕಾಗಿ ಈ ಕಸುಬು ಮಾಡಬೇಕಾದವಳ ಅನಿವಾರ್ಯಗಳೇನೇನಿದೆಯೊ? ಆ ನಡುವೆಯೆ ಶ್ರೀನಾಥ ಅವಳ ಮನಸನ್ನೆ ಓದಿದವನಂತೆ,'ಯು ಕೀಪ್ ದ ಮನಿ..ವೀ ಮೀಟ್ ನೆಕ್ಸ್ಟ್ ಟೈಮ್ ...' ಎಂದಾಗ ಮಾಯವಾಗುತ್ತಿದ್ದ ಅವಳ ಕಣ್ಣಿನ ಹೊಳಪು ಮತ್ತೆ ಕಾಣಿಸಿಕೊಳ್ಳತೊಡಗಿತು. ಸಮಯ ಮೀರಿದ ನಂತರ ಗಿರಾಕಿಯ ದೌರ್ಬಲ್ಯಕ್ಕೆ ಅವರೇನು ಮಾಡುವಂತಿಲ್ಲವಾದರೂ, ಕೆಲವು ಗಿರಾಕಿಗಳ ಕಹಿ ಅನುಭವ ತುಸು ಆತಂಕಗೊಳ್ಳುವಂತೆ ಮಾಡಿತ್ತು. ಅಲ್ಲದೆ ಈ ವಿಷಯದಲ್ಲಿ ಜಗಳವಾದರೆ ಹಣಕ್ಕಿಂತ ಹೆಚ್ಚು ಅಪಪ್ರಚಾರವಾಗುತ್ತದೆ, 'ಗಿರಾಕಿಯನ್ನು ಖುಷಿಪಡಿಸಲಿಲ್ಲವಂತೆ' ಎಂದು. ಆ ಸೋಲಿನ ಲೆಕ್ಕಾಚಾರ ಮುಂದಿನ ಗಿರಾಕಿಗಳ ಹತ್ತಿರ ಕಳಿಸುವ ಮೊದಲು ಗಣನೆಗೆ ಬರುತ್ತದೆ. ಗಂಟೆ ಕಳೆದ ಮೇಲೆ ಮೇಡಮ್ಮಿಗಂತೂ ದುಡ್ಡು ಕೊಡಲೆ ಬೇಕು...ಅದನ್ನೆಲ್ಲಾ ಚಿಂತಿಸಿ ಆತಂಕಿಸುತ್ತಿದ್ದವಳು ಅವನು ಹಣ ಹಿಂದಿರುಗಿಸುವುದು ಬೇಡ ಎನ್ನುತ್ತಿದ್ದಂತೆ ಪೂರ್ಣ ನಿರಾಳವಾಗಿ, ಅವನ ಕಡೆಗೆ ಒಂದು ರೀತಿಯ ಆತ್ಮೀಯ ಭಾವವುಂಟಾಯ್ತು. ಆ ಹುರುಪಿನ ಹರ್ಷದಲ್ಲೆ ತಟ್ಟನೆ ಹೊರಡದೆ ಸೋಫಾಗೆ ಮೈಯೊರಗಿಸಿ ಆರಾಮವಾಗಿ ಕುಳಿತಳು ಉಳಿದ ಹತ್ತು ನಿಮಿಷಗಳನ್ನು ಕಳೆದೆ ಹೋಗುವವಳಂತೆ..

ನಂತರ ಅದೂ ಇದೂ ಮಾತಾಡುತ್ತ ಗ್ಲಾಸಿನಲ್ಲಿಷ್ಟು ಕೂಲ್ಡ್ರಿಂಕ್ಸ್ ಕುಡಿಯುತ್ತ, ತನ್ನ ಹಿನ್ನಲೆ, ಕುಟುಂಬದ ಪ್ರವರವನ್ನೆಲ್ಲಾ ಹಂಚಿಕೊಂಡಳು. ಯಾಕೊ ಇದ್ದಕ್ಕಿದ್ದ ಹಾಗೆ ಆತ್ಮೀಯನಂತೆ ಕಾಣಿಸಿಕೊಂಡವನೊಡನೆ ಹಾಗೆ ಬಿಚ್ಚಿಕೊಳ್ಳುತ್ತಿದ್ದುದ್ದು ಅಚ್ಚರಿಯೇನೂ ಆಗಿರಲಿಲ್ಲ. ಅವಳ ವ್ಯವಹಾರದಲ್ಲಿ ಮಾತಾಡುವವರಿಗಿಂತ ಕ್ರಿಯಾ-ಚರ್ಯೆಯತ್ತ ಗಮನಿಸುವವರೆ ಹೆಚ್ಚು. ಅವಳಿಗದೆಷ್ಟು ಖುಷಿಯಾಗಿಬಿಟ್ಟಿತೆಂದರೆ, ತನ್ನ ಖಾಸಾಗಿ ಮೊಬೈಲ್ ನಂಬರನ್ನು ಬರೆದುಕೊಟ್ಟು ನೇರವಾಗಿ ಕಾಲ್ ಮಾಡುವಂತೆ ಹೇಳಿದಳು. ಮತ್ತೆ ಮೇಡಂಗೆ ಫೋನ್ ಮಾಡಿದರೆ ಹೊಸ ಲೆಕ್ಕ ಬರುವುದಲ್ಲದೆ, ಬೇರೆ ಯಾರಾದರು ಬರುವುದರಿಂದ ತನ್ನನ್ನೆ ನೇರ ಕರೆಯಲು ಹೇಳಿದಳಲ್ಲದೆ, ಮಂಗಳವಾರ ಅವಳ ರಜೆ ದಿನವಾದ ಕಾರಣ ಆ ದಿನವಾದರೆ ಬೇಕಿದ್ದರೆ ಅವನೊಡನೆ ಪೂರ್ತಿ ದಿನವೂ ಇರುವುದಾಗಿ ಮಾತು ಕೊಟ್ಟಳು...

ಶ್ರೀನಾಥನಿಗೆ ಮಾತ್ರ ಇವಳಿನ್ನು ಯಾಕೆ ಮಾತಿಗೆ ಕೂತಳು? ಬೇಗನೆ ಎದ್ದು ಹೋಗಬಾರದೆ, ದುಡ್ಡು ಕೊಟ್ಟಾಯಿತಲ್ಲಾ ಎನ್ನುವ ವಿಚಿತ್ರ ಭಾವ. ಬೇಕು ಬೇಕೆಂದು ಹಪಹಪಿಸಿ ಕಣ್ಮುಂದೆ ತಂದಿರಿಸಿಕೊಂಡ ಮೇಲೆ, ಎದುರಿಗಿದ್ದರೂ ಮೊದಲು ಆಚೆಗ್ಹಾಕಬೇಕೆಂಬ ತಪನೆಯ ಭಾವವೆ ವಿಚಿತ್ರವಾಗಿ ಕಂಡಿತು. ಇದೇನು ತನ್ನಲಿರುವ ವಿಲಕ್ಷಣತೆಯೆ ಅಥವಾ ಏನು ಮಾಡಲಾಗದ ಅಸಾಮರ್ಥ್ಯದ ಕುರುಹೆ ಅರಿವಾಗದೆ ಮತ್ತಷ್ಟು ಗೊಂದಲದಲ್ಲಿ ಕೆಡವಿತು...ಯಾವುದರಿಂದ ತನ್ನ ಕೀಳರಿಮೆಯನ್ನು ಜಯಿಸಿ ಮುನ್ನುಗ್ಗಬಹುದೆಂದು ಹೊರಟನೊ, ಆ ಅವಕಾಶ ಎದುರಿಗೆ ಕೂತಿದ್ದರೂ 'ಸದ್ಯ, ತೊಲಗಿದರೆ ಸಾಕು' ಎಂಬ ವಿಚಿತ್ರ ಭಾವ ಅವನಿಗೆ ವಿಚಿತ್ರವಾಗಿ ಕಂಡಿತು. ಈ ಆಲೋಚನೆಗಳ ಪರಿಭ್ರಮಣದಲ್ಲಿ ಅವಳಾಡುತಿದ್ದ ಮಾತಿನತ್ತಲೂ ಗಮನವಿರಲಿಲ್ಲ. ಬರಿ ತೋರಿಕೆಗೆಂಬಂತೆ ತಲೆಯಾಡಿಸುತ್ತ, 'ಹೂಂ' ಗುಡುತ್ತ ಕುಳಿತಿದ್ದನಷ್ಟೆ..

ಕೊನೆಗವಳು ಬಟ್ಟೆ ತೊಟ್ಟು ಹೊರಟಾಗ ಅವನನ್ನು ಗಟ್ಟಿಯಾಗಿ ಅಪ್ಪಿಕೊಂಡು, ತುಟಿಗೆ ಗಾಢ ಮುತ್ತೊಂದನ್ನಿತ್ತು, ' ಕಾಲ್ ಮೀ ಸೂನ್...'  ಎಂದು ಮುಂದೆ ಹೋದವಳೆ ಬಾಗಿಲಿನತ್ತ ತಲುಪಿದಾಗ , 'ಮೈ ನೇಮ್ ಇಸ್ ಯೂಪಾ, ಕುನ್ ಯೂಪ - ಮೈ ರಿಯಲ್ ನೇಮ್' ಎಂದು ನಗುತ್ತಾ ಹೊರಟುಹೋಗಿದ್ದಳು. ಅವಳನ್ನು ಕಳಿಸಿ ಬಾಗಿಲು ಹಾಕಿಕೊಂಡು ಬಂದು ಯಾವುದೊ ಖಾಲಿಯಾದ ಭಾವದಲ್ಲಿ ಸೋಫಾದ ಮೇಲೆ ಒರಗಿ , ಕೈ ಹಿಂದೆ ಮಡಿಸಿ ತಲೆಯಾನಿಸಿದರೆ ಯಾಕೊ ಮೈಯೆಲ್ಲಾ ಏನೊ ಬಿಸಿಯಾಗಿ ಗಡುಸಾದ ರೀತಿಯ ಅನುಭೂತಿ. ಜ್ವರವೇನಾದರೂ ಇರಬಹುದೆ ಎನ್ನುವ ಅನುಮಾನ ಹುಟ್ಟಿ ಆರುವ ಮೊದಲೆ, ನಖಶಿಖಾಂತವಾಗಿ ಭರಭರನೇರಿದ ಬೆಂಕಿ ಇಡೀ ದೇಹವನ್ನೆ ಆವರಿಸಿದಂತಾದಾಗ ಅದು ಇಷ್ಟು ಹೊತ್ತಿನವರೆಗೂ ಬಾರದೆ ಕಾಡಿಸಿ, ತಡಕಾಡಿಸಿದ ಕಾಮಾಗ್ನಿ ಎಂದು ಅರಿವಾಯ್ತು..! ಸಿಡಿದು ಹೋಗುವ ಪ್ರಳಯದ ರೂಪದಲ್ಲಿ ತುಂಬಿಕೊಂಡು ನಿಂತ ಅದರ ವಿಶ್ವರೂಪಕ್ಕೆ ಬೆರಗಾಗಿ, ಬೇಕಿದ್ದಾಗ ಬಾರದೆ ಕಾಡಿಸಿ ಆಟವಾಡಿಸಿದ ಈ ಬೇಗೆ, ಅವಳು ಹೊರಟು ಹೋದ ಹೊತ್ತಿನಲ್ಲಿ ಬೇಟೆಯ ಮೇಲೆರಗುವ ಮೃಗದಂತೆ ಕೌಚಿ ಬಿದ್ದು ಆವರಿಸುವ ವಿಸ್ಮಯಕ್ಕೆ ಬೆರಗಾಗುತ್ತ, ಹೀಗೆ ಹಿಂದೆ ಬಿದ್ದು ಕಾಡುವುದರ ಅರ್ಥವೇನಿರಬಹುದೆಂದು ತಿಳಿಯದೆ ಚಡಪಡಿಸತೊಡಗಿದ. ಅದೆ ಕ್ಷಣದಲ್ಲಿ, ಹೇಗಿದ್ದರೂ ಈಗ ತಾನೆ ಹೊರಟಿರುವುದರಿಂದ ಇಲ್ಲೆ ಹತ್ತಿರದಲ್ಲೆ ಇರಬಹುದು ಎಂದೆಣಿಸಿ ಮತ್ತೆ ಕರೆಯಲೆ ಎಂದುಕೊಂಡವನನ್ನು, ' ಈಗಾದದ್ದೆ ಮತ್ತೆ ಪುನರಾವರ್ತಿಸಿದರೆ?' ಎಂಬ ಭೀತಿ ಮರುಕಳಿಸಿ ಆ ಆಲೋಚನೆಯನ್ನು ಹಾಗೆ ಕೈಬಿಟ್ಟ. ಅದೇ ಬಿರುಸಿನಲ್ಲಿ ಸೆಡವಿನಿಂದ ಬಿರಿಯುತ್ತಿದ್ದ ದೇಹಕ್ಕೆ ದಂಡಿಸಿ ಮಣಿಸುವ ಏಕೋಪಾಯವೆಂಬಂತೆ ಬಾತ್ ರೂಮಿಗೆ ನುಗ್ಗಿ, ಟಬ್ಬಿನಲಿ ನೀರು ತುಂಬಲು ಬಿಟ್ಟವನೆ ಶವರಿನಡಿ ತಲೆಯೊಡ್ಡಿ ಕಣ್ಮುಚ್ಚಿಕೊಂಡೆ ನಿಂತುಬಿಟ್ಟಿದ್ದ......ಅದೆಷ್ಟೊ ಹೊತ್ತು.

(ಇನ್ನೂ ಇದೆ)
__________
 

Comments