ಶಿವನಿಲ್ಲದ ಶಿವರಾತ್ರಿ..

ಶಿವನಿಲ್ಲದ ಶಿವರಾತ್ರಿ..

ಈ ಬಾರಿಯ ಶಿವರಾತ್ರಿಯ ಹಬ್ಬದ ಬೆಳಿಗ್ಗೆ, ಶಿವನ ಸತಿ ಪಾರ್ವತಿ ಬೇಗನೆ ಎದ್ದು ಪತಿಗೆ ಹಬ್ಬದ ಶುಭಾಶಯ ಹೇಳಿ ಅಚ್ಚರಿ ಪಡಿಸಬೇಕೆಂದುಕೊಂಡು ನೋಡಿದರೆ ಪಕ್ಕದಲ್ಲಿ ಶಿವನೆ ಕಾಣಲಿಲ್ಲ. ಇನ್ನು ನಸುಕಿನ ಜಾವದ ಹೊತ್ತು, ಇಷ್ಟು ಬೇಗನೆ ಎದ್ದು ಹೋದದ್ದಾದರೂ ಎಲ್ಲಿಗೆ ಎಂದು ಯೋಚಿಸುತ್ತಲೆ ಬಹುಶಃ ಇಲ್ಲೆ ಅಕ್ಕ ಪಕ್ಕ ಎದ್ದು ಹೋಗಿರಬೇಕೆಂದುಕೊಂಡು, ತಾನು ಬೇಗನೆ ಎದ್ದು ಸ್ನಾನಾದಿಗಳನ್ನು ಮುಗಿಸಿ ಮಡಿಯುಟ್ಟು ಸಿದ್ದವಾಗಿ ನಿಂತಳು, ಪತಿ ಮಹಾದೇವನ ಆಗಮನವನ್ನೆ ಕಾಯುತ್ತ. ಅಂದೇಕೊ ಏನೊ ಎಷ್ಟು ಹೊತ್ತಾದರೂ ಶಿವಪ್ಪನ ಪತ್ತೆಯೆ ಇಲ್ಲ. ಕಾತರ ಆತಂಕ ತಡೆಯಲಾಗದೆ ಅಲ್ಲೆ ಸುತ್ತ ಮುತ್ತ ಎಲ್ಲಾದರೂ ಇರಬಹುದೆ ಎಂದು ಹುಡುಕತೊಡಗಿದಳು. ಬಹುಶಃ ಇಲ್ಲೆ ಎಲ್ಲೊ ಹತ್ತಿರದಲ್ಲೆ ಅಡಗಿಕೊಂಡು ಆಟವಾಡಿಸುತ್ತಿರಬಹುದೆಂಬ ಸಂಶಯವೂ ಬಂತಾದರೂ, ಎಂದೂ ಇಷ್ಟು ಹೊತ್ತಿನ ತನಕ ಮರೆಯಾಗಿ ಕಾಡದ ಪತಿದೇವರ ಸ್ವಭಾವದ ನೆನಪಾಗಿ ಆ ಸಂಭವನೀಯತೆ ಕಡಿಮೆಯೆನಿಸಿತು. ಆದರೂ ಅನುಮಾನವೇಕೆಂದು ಒಂದು ಬಾರಿ ಸುತ್ತಲೂ ಹುಡುಕಿ ಬಂದರೂ ಈಶ್ವರನ ಪತ್ತೆಯೆ ಕಾಣದು. ಈಗಂತೂ ಜಗನ್ಮಾತೆಗೆ ಏನೂ ಮಾಡಲೂ ತೋಚದೆ ಕಣ್ಣೀರೆ ಬರುವಂತಾಯ್ತು. ಪರಶಿವನಿಗೆ ಅಚ್ಚರಿ ಪಡಿಸಲು ಹೋಗಿ, ತಾನೆ ಸಂಕಟಕ್ಕೆ ಸಿಲುಕಿದಂತಾಯ್ತೆ ಎಂದು. ಹೀಗೆ ಕಾದು ಕಾದೂ ಸೂರ್ಯ ಮೇಲೇರಿ ನಡು ಹಗಲಾದರೂ ಮಹಂತೇಶನ ಸುಳಿವೆ ಇಲ್ಲ. ಇನ್ನು ಸುಮ್ಮನಿದ್ದರೆ ಆಗದು ಎಂದು ತೀರ್ಮಾನಿಸಿದ ಜಗದಾಂಬೆಯು ಶಿವನನ್ನರಸುತ್ತ ಎಲ್ಲೆಡೆಯೂ ಹುಡುಕಿಕೊಂಡು ಹೊರಟಳು. ಶ್ರೀ ಮಾತೆ ಎಲ್ಲೆಲ್ಲಿ ಹುಡುಕಿದಳು? ಹೇಗೆ ಹುಡುಕಿದಳು? ಕೊನೆಗೆ ಶಿವ ಸಿಕ್ಕಿದನೆ? ಸಿಕ್ಕಿದ್ದರೆ ಎಲ್ಲಿ? ಇತ್ಯಾದಿಗಳೆಲ್ಲ ತಿಳಿಯುವ ಕುತೂಹಲವಿದ್ದರೆ 'ಓಂ ನಮಃ ಶಿವಾಯ' ಎಂದು ಜಪಿಸುತ್ತ ಈ ಕೆಳಗಿನ ಕಾವ್ಯ ಓದಿ...!

ಶಿವರಾತ್ರಿ / ಜಾಗರಣೆಯ ಶುಭಾಶಯಗಳು :-)

ಶಿವನಿಲ್ಲದ ಶಿವರಾತ್ರಿ
____________________

ಸತಿ ಶಿವನ ಶಕ್ತಿ, ಅರ್ಧನಾರಿ ಸ್ತುತಿ
ಶಿವರಾತ್ರಿಯ ಬೆಳಗೆ ಕಾಣದಿರೆ ಪತಿ
ಹುಡುಕುಡುಕುತ್ತ ಕೈಲಾಸ ಹಿಮಗಿರಿ
ಎಲ್ಲಿ ನೋಡಿದರು ಕಾಣದೆ ಗಾಬರಿ ||

ಮತ್ತೆಲ್ಲಿ ಹೊರಟಾನು ಬಾರದಿಹನೆ
ತನ್ನದೇ ಹಬ್ಬವ ಮರೆಯುವವನೆ ?
ಅನಿಸಿದರು ಚಿತ್ತ, ಚಂಚಲಾ ಚಪಲ
ಕಾಣದವನರಸಿ ಪಾರ್ವತಿ ಕಂಗಾಲ ||

ಯಾಕೊ ನಿಲಲಾಗದೆ, ನಿಂತ ಕಡೆ
ಚಡಪಡಿಕೆ ಅರ್ಧನಾರೀಶ್ವರ ಕಾಡೆ
ಮನ ತಡೆಯದೆ ಹೊರಟಳಾ ಶಕ್ತಿ
ಬ್ರಹ್ಮ ವಿಷ್ಣು ಜತೆಗಿರಬಹುದೆ ಪತಿ? ||

ವೈಕುಂಠದಲಿ ಜೋಡಿ ಬ್ರಹ್ಮ ವಿಷ್ಣು
ಯಾಕೊ ಕಾಣಿಸಲಿಲ್ಲದಾ ಮುಕ್ಕಣ್ಣು
ಬಾ ತಂಗಿಯೆಂದರು ಹರಿಗು ಬೆರಗು
ಮಾತಾಡಲಿಲ್ಲ ಬಿಗುಮಾನ ಬೆಡಗು ||

ತ್ರಿಮೂರ್ತಿಗಳ ಜತೆಯಿಲ್ಲದ ಮೇಲೆ
ಎಲ್ಲಿರುವನೆಂದು ಹೇಗೇ ಹುಡುಕಲೆ ?
ಉದ್ಗರಿಸಿ ಕಳವಳಿಸಿ ಹಲುಬಿ ಅಲ್ಲೆ
ನೋಡದಾ ಎಡೆಯಿಲ್ಲ ಶಿವ ಕಾಣನಲ್ಲೆ ||

ಅನುಮಾನವೇಕೆಂದು ಸ್ಮಶಾನಕೆ ಲಗ್ಗೆ
ಬೂದಿ ಕೆದಕಿ ಕೊಡವಿದ್ದೆ ನಿರಾಶೆ ಬುಗ್ಗೆ
ಭೂತ ಪ್ರೇತ ಪಿಶಾಚ ಗಣಕು ಅರಿವಿಲ್ಲ
ಗಣನಿಗು ಸುಬ್ರಮಣ್ಯನಿಗು ತಿಳಿದಂತಿಲ್ಲ ||

ತಡೆಯದೆ ಆತಂಕ ಸಂಕಟದಲಿ ಮಾತೆ
ಕಾಣದ ಶಿವನಿಗೆ ಬಿಡದೆ ಹಂಬಲಿಸುತೆ
ಹೋಗಿದ್ದೆಲ್ಲೊ ಹೇಳದೆ ನ್ಯಾಯವೆ ನಾಥ
ಹಬ್ವದ ದಿನ ನೀನಿರದೆ ಮನಸೆ ಅನಾಥ ||

ಕವಿಯುತ ಕತ್ತಲು ಶಿವರಾತ್ರಿ ಮುತ್ತಲು
ತಟ್ಟನೆ ಅನಿಸಿತು ನೋಡಲೆ ಇಳೆಯೊಳು
ಭಕ್ತ ಪರಾಧೀನನೆ ಬಿಲ್ವಪತ್ರೆಯ ಪೂಜೆಗೆ
ಲಿಂಗದೊಳಗೈಕ್ಯವಾಗಿ ಮೈಮರೆತ ಗಳಿಗೆ ||

ಅಹೋರಾತ್ರಿ ಜಾಗರಣೆ ಪೂಜೆ ವಿಜೃಂಭಣೆ
ಸಂಭ್ರಮೋಲ್ಲಾಸದಲಿ ಭೂಲೋಕ ಸ್ಮರಣೆ
ವಿರಾಜಮಾನ ಶಿವನನಲ್ಲಿ ಕಂಡಾಗ ಸರಳ
ನಕ್ಕು ಪರಶಿವನ ಪಕ್ಕದೆ ಕೂತಾಗ ನಿರಾಳ ||

ಉದ್ಘೋಷ ಮೊರೆತ ಓಂ ನಮಃ ಶಿವಾಯ
ಪಿಸು ನುಡಿ ಮೆಲ್ಲಗೆ ಬಿಟ್ಟು ಬಂದೆ ಸರಿಯಾ?
ಅರ್ಧನಾರೀಶ್ವರಿ ನಾನೆಲ್ಲಿರೆ ನೀನಲ್ಲೆ ಇರುವೆ
ಅರ್ಧಾಂಗಿನಿ ಬರುವೆ ನೀ, ಬಿಟ್ಟು ಹೇಗಿರುವೆ ? ||

ಅಂದ ಹಾಗೆ ಶಿವನೇನೊ ಸಿಕ್ಕಿದ ಸರಿ. ಆದರೆ ಯಾರ ಮನೆಯಲ್ಲಿ ಹೋಗಿ ಕೂತಿದ್ದ ಎಂದು ತಿಳಿಯಲಿಲ್ಲ ಅಲ್ಲವೆ? ಒಂದಂತೂ ಗ್ಯಾರಂಟಿ - ಅವನು ಸಂಪದಿಗ ಭಕ್ತರೊಬ್ಬರ ಮನೆಯಲ್ಲೆ ಠಿಕಾಣ ಹೂಡಿದ್ದು ಎಂದು ಖಚಿತ ಮಾಹಿತಿ.. ಆದರೆ ಯಾರ ಮನೆಯಲ್ಲಿ ಎಂದು ಗೊತ್ತಿಲ್ಲ ಅಷ್ಟೆ! (ಅದನ್ನು ಪತ್ತೆ ಮಾಡಲು ಡಿಟೆಕ್ಟಿವ್ ಸಪ್ತಗಿರಿಯವರು ಹೊರಟಿದ್ದಾರೆಂದು ಸುದ್ದಿ ; ಮೊದಲು ಗಣೇಶರ ಸುಳಿವು ಹಿಡಿದು ಪತ್ತೆ ಮಾಡಿದರೆ, ಗಣೇಶನ ಅಪ್ಪ ಅಮ್ಮಂದಿರನ್ನು ಹಿಡಿಯುವುದು ಕಷ್ಟೆವೆ? ಅನ್ನುವ ಶರ್ಲಾಕ್ ಹೋಮ್ ತರ್ಕ ಬಳಸಿ - ಅದೂ ಜಾಗರಣೆಯ ರಾತ್ರಿಯಲ್ಲೆ.......ಸಪ್ತಗಿರಿಯವರಿಗೂ ಬೆಸ್ಟ್ ಆಪ್ ಲಕ್ ಹೇಳಿ ಬಿಡೋಣ )

ತಪ್ಪೊಪ್ಪಿಗೆ: ಶಿವರಾತ್ರಿಯ ಸ್ಮರಣೆಯನ್ನು ಲಘು ಲಹರಿಯಲ್ಲಿ ಹರಿಯಬಿಟ್ಟಿದ್ದಕ್ಕೆ ಬೇಸರವಾದರೆ ಕ್ಷಮೆಯಿರಲಿ (ಶಿವ ಪಾರ್ವತಿಯರೂ ಸೇರಿದಂತೆ ಕ್ಷಮಿಸಿಬಿಡಿ). ಹೀಗಾದರೂ ಸ್ಮರಣೆಯಾದೀತು ಎನ್ನುವ ದೂರದಾಸೆ?

ಶುಭ ಶಿವರಾತ್ರಿ :-)

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
 
Comments

Submitted by ಗಣೇಶ Fri, 02/28/2014 - 00:22

:) :)
ನಾಗೇಶರೆ, ನಿಮ್ಮ ಲೇಖನ, ಕವನ ಓದುತ್ತಾ ಹೋದ ಹಾಗೇ
"ಭಕ್ತ ಪರಾಧೀನನೆ ಬಿಲ್ವಪತ್ರೆಯ ಪೂಜೆಗೆ
ಲಿಂಗದೊಳಗೈಕ್ಯವಾಗಿ ಮೈಮರೆತ ಗಳಿಗೆ ||" ಓದಿದವ, "ನನ್ನ ಮನೆಯಲ್ಲೇ ಶಿವನಿದ್ದ" ಎಂದು ನಿಮಗೆ ಪ್ರತಿಕ್ರಿಯೆ ನೀಡಬೇಕೆಂದಿದ್ದೆ. ನೋಡಿದರೆ ಮುಂದೆ ನೀವೇ ಆ ವಾಕ್ಯ ಸೇರಿಸಿದ್ದೀರಿ!-"ಅವನು ಸಂಪದಿಗ ಭಕ್ತರೊಬ್ಬರ ಮನೆಯಲ್ಲೆ ಠಿಕಾಣ ಹೂಡಿದ್ದು ಎಂದು ಖಚಿತ ಮಾಹಿತಿ.." ಈಗ ಯಾಕೆ ಶಿವ ನನ್ನೊಂದಿಗಿರುವನು ಎಂಬುದಕ್ಕೆ ಕಾರಣ ಹೇಳಬೇಕಲ್ಲಾ-
ಇದು ಕೆಲ ವರ್ಷಗಳ ಹಿಂದಿನ ಘಟನೆ. ನನ್ನ ತಾಯಿಗೆ ಜ್ಯೋತಿಷ್ಯದಲ್ಲಿ ಸ್ವಲ್ಪ ಅತಿ ಎನ್ನುವಷ್ಟು ನಂಬಿಕೆ. ನನ್ನ ಜಾತಕ ನೋಡಿದ ಜ್ಯೋತಿಷಿ ದಶಾ ಸಂಧಿನೋ ಏನೋ, ಕಾರಣ ಹೇಳಿ ಕೆಲವು ಹೋಮ ಪೂಜೆ ಮಾಡಿಸಲು ಹೇಳಿದರು.
ನನ್ನ ಪ್ರಕಾರ-ಜ್ಯೋತಿಷಿ ಬಳಿ ಹೋಗುವುದೇ ತಪ್ಪು. ಶನಿ, ರಾಹು, ಕೇತು, ಸರ್ಪದೋಷ ಎಂದೆಲ್ಲ ಹೆದರಿಸುವರು. ತನ್ನ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾ, ಯಾರಿಗೂ ಮೋಸ ಮಾಡದೇ, ಎಲ್ಲರಿಗೂ ಒಳಿತನ್ನೇ ಬಯಸುವ, ಗುರುಹಿರಿಯರನ್ನು ಗೌರವಿಸುವವನಿಗೆ, ತಂದೆತಾಯಿಯ ಆಶೀರ್ವಾದದ ಬಲವಿದ್ದರೆ, ಆತ ದೇವರ ಪೂಜೆ ಮಾಡುವ ಅಗತ್ಯವೇ ಇಲ್ಲ. ನಾನು ರಾಮನಿಗಿಂತಲೂ ಒಂದು ಹೆಜ್ಜೆ ಮುಂದೆ-ರಾಮ ತಂದೆಯ ಮಾತು ಮೀರಲಿಲ್ಲ. ನಾನು ತಂದೆ, ತಾಯಿ, ಗುರು, ಹಿರಿಯರ ಮಾತು ಮೀರಲಿಲ್ಲ . ಶಿವನಿಗಾದರೂ ಕೋಪ ಬರುತ್ತದೆ-ನನಗೆ ಬರುವುದಿಲ್ಲ. ನಾನು ಯಾಕೆ ಆ ದೇವರ ಪೂಜೆ ಮಾಡಬೇಕು?..." ಇದನ್ನೇ ತಾಯಿಯ ಬಳಿ ಹೇಳಿದೆ. ತಾಯಿಗೆ ನನ್ನ ವಾದ ಇಷ್ಟವಾಗಲಿಲ್ಲ.
ಬೇಸರದಿಂದಿದ್ದ ಅಮ್ಮನನ್ನು ಸಮಾಧಾನಿಸಲು, " ಆಯ್ತಮ್ಮ. ಭಟ್ರನ್ನು ಕರೆಸಿ ಪೂಜೆ ಹೋಮ ಮಾಡಿಸುವುದೆಲ್ಲಾ ಬೇಡ. ನಾನೇ ಮಾಡುವಂತಹ ಏನಾದರೂ ಪೂಜಾಕ್ರಮಗಳಿದ್ದರೆ ಮಾಡುವೆ" ಅಂದೆನು. ಜ್ಯೋತಿಷಿ ಬಳಿ ಹೋಗಿ ಬಂದ ನನ್ನ ತಂದೆ ತಾಯಿ, ಅವರ ಸೂಚನೆ ಪ್ರಕಾರ ನನಗೆ ಬೆಳಗ್ಗೆ ಮೃತ್ಯುಂಜಯ ಜಪ ಸಂಜೆ ಶಿವ ಕವಚ ಸ್ತೋತ್ರ ಮಾಡಲು ಹೇಳಿದರು.
"ಓಂ ತ್ರ್ಯಂಬಕಂ ಯಜಾಮಹೆ ಸುಗಂಧಿಮ್ ಪುಷ್ಟಿ ವರ್ಧನಮ್
ಊರ್ವಾರುಕಮಿವ ಬಂಧನಾತ್ ಮೃತ್ಯೋರ್ಮುಕ್ಷೀಯ ಮಾಂಮೃತಾತ್
ತೊಟ್ಟಿನಿಂದ ಕಳಚಿದ ಸೌತೆ ಕಾಯಿಯ ತರಹ ಮೃತ್ಯುವಿನಿಂದ ಪಾರು ಮಾಡು - ಹೆಚ್ಚುಕಮ್ಮಿ ಇದೇ ಅರ್ಥ ಬರುವ ಈ ಮಂತ್ರದಲ್ಲಿ ಅಂಥದ್ದೇನಿದೆ ? ಈ ಜಪ ಪೂಜೆ ಮಾಡುವ ಸಮಯ ವ್ಯರ್ಥವಲ್ಲವೇ ?" ಅಂದೆನು . ( ಸೌತೆಕಾಯಿ ಸ್ತೋತ್ರದ ಬಗ್ಗೆ ಶ್ರೀವತ್ಸ ಜೋಶಿಯವರ ಲೇಖನ - http://kannada.oneindia.in/column/vichitranna/2003/02120360.html )
"ನೋಡೋ ಅದೆಲ್ಲಾ ನನಗೆ ಬೇಡ. ಜ್ಯೋತಿಷ್ಯ ಸುಳ್ಳೋ ಸತ್ಯವೋ ನನಗೆ ಬೇಡ . ನನಗೆ ನೀನು ಮುಖ್ಯ . ನೀನು ಸೀನಿದರೂ ನನಗೆ ನಿದ್ರೆ ಬರುವುದಿಲ್ಲ. ಹೋಮ ಪೂಜೆ ಮಾಡಿಸಲಿಲ್ಲ.. ಕಡೇ ಪಕ್ಷ ಜ್ಯೋತಿಷಿಗಳು ಹೇಳಿದಂತೆ ಒಂದು ಅರ್ಧ ಘಂಟೆ ಪೂಜೆ ಮಾಡೋ", ಕಣ್ಣೀರು ತುಂಬಿ ತಾಯಿ ಕೇಳಿದಾಗ ಇನ್ನು ಹಠ ಮಾಡೋದು ಸರಿಯಲ್ಲ ಎಂದು," ಅಷ್ಟೇತಾನೆ ಅಮ್ಮಾ , ಈ ದಿನದಿಂದಲೇ ಮಾಡುವೆ ಎಂದೆ ". ಹಾಗೇ ಪ್ರತೀ ದಿನ ನಾನು ಮಂತ್ರ ಹೇಳುವುದನ್ನು ನೋಡಿ ಸಮಾಧಾನಪಟ್ಟುಕೊಂಡರು .
ಕೆಲ ತಿಂಗಳಲ್ಲಿ ನನ್ನ ತಾಯಿ ಆರೋಗ್ಯ ಕೆಟ್ಟಿತು . ಹೈಟೆಕ್ ಆಸ್ಪತ್ರೆಯಲ್ಲಿ ಸೇರಿಸಿದರೂ ಅವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಾ ಸಾಗಿತು .ವೈದ್ಯರು , ವಿಜ್ಞಾನ, ನಾನೇ ಮೇಲು ಎಂಬ ಅಹಂಕಾರದಲ್ಲಿದ್ದ ನಾನು , ಈಗ ಯಾರು ಏನು ಹೇಳಿದರೂ ಮಾಡಲು ಸಿದ್ಧನಿದ್ದೆ. ನನ್ನ ಸಂಬಂಧಿಯ ಬಳಿ ಜ್ಯೋತಿಷಿ, "ತಾಯಿಯ ಜಾತಕದಲ್ಲಿ ೧೬ನೇ ತಾರೀಕಿಗೆ ಮಹಾ ಕಂಟಕವಿದೆ.ಅದು ಪಾರಾದರೆ ಮುಂದೆ ೮೫ ವರ್ಷದವರೆಗೆ ಏನೂ ತೊಂದರೆ ಇಲ್ಲ." ಎಂದರು. ರಾತ್ರಿ ಆಸ್ಪತ್ರೆಯಲ್ಲಿದ್ದು, ಬೆಳಗ್ಗೆ ನಾಲ್ಕು ಗಂಟೆಗೆ ಬಂದು ಸ್ನಾನ ಮಾಡಿ ಅವರು ಸೂಚಿಸಿದಂತೆ ಲಲಿತಾ ಸಹಸ್ರನಾಮ ಹಾಗೂ ವಿಷ್ಣು ಸಹಸ್ರನಾಮ ಹೇಳುತ್ತಿದ್ದೆ. ಸಿನೆಮಾದಲ್ಲಾದರೆ ಹೀರೋ ಪೋಲಿಯಾಗಿದ್ದರೂ, ಕೊನೇ ಗಳಿಗೆಯಲ್ಲಿ ಭಕ್ತಿಯಲ್ಲಿ ಹಾಡಿದ ಕೂಡಲೇ ದೇವರು ಒಲಿಯುತ್ತಿದ್ದರು. ಇಲ್ಲಿ ಹಾಗಾಗಲಿಲ್ಲ :( ಜನನಿ ಜಗಜ್ಜನನಿ ಬಳಿ ಹೋದರು.

ಈ ಶಿವ ಕವಚ ಸ್ತೋತ್ರ - ತಲೆಯಿಂದ ಕಾಲಿನವರೆಗೆ ಪ್ರತೀ ಅಂಗವನ್ನು , ದಿನಾದಿಯಿಂದ ರಾತ್ರಿ ಪೂರ್ತಿ , ಕಾಡು , ಪರ್ವತ , ಸಮುದ್ರ , ಹೀಗೆ ಎಲ್ಲಾ ಕಡೆ ಶಿವ ನನ್ನನ್ನು ಕವಚದಂತೆ ರಕ್ಷಿಸಲು ಬೇಡುವ ಮಂತ್ರ .
೨೦೧೨ರ ಜೂನ್ ತಿಂಗಳಲ್ಲಿ ಪುತ್ತೂರಿನಿಂದ ( ಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನವಿದೆ ) ಸುಳ್ಯ ( ಪ್ರಸಿದ್ಧ ಮಲ್ಲಿಕಾರ್ಜುನ ದೇವಸ್ಥಾನವಿದೆ)ದ ನಡುವೆ ಆನೆಗುಂಡಿ ಎಂಬಲ್ಲಿ ಬಸ್ಸಿಗೆ ನನ್ನ ಕಾರು ಡಿಕ್ಕಿ ಹೊಡೆಯಿತು. ( ಇದರ ಬಗ್ಗೆ ಹಿಂದೆ ಬರೆದಿದ್ದೆ ) ಆಶ್ಚರ್ಯವೆಂದರೆ ತಲೆಯಿಂದ ಹಿಡಿದು ಪಾದದವರೆಗೆ ಒಂದು ಸಣ್ಣ ಗಾಯವೂ ಆಗಿರಲಿಲ್ಲ . ನನ್ನ ಹೆಂಡತಿಗೂ ಸಹಾ ಒಂದು ಸಣ್ಣ ಗಾಯವೂ ಆಗಲಿಲ್ಲ . ಆಕೆಯೂ ಸಹಾ ಮೃತ್ಯುಂಜಯ ಜಪ ಮಾಡುತ್ತಿದ್ದಳು(ನನ್ನ ಒಳಿತಿಗಾಗಿ). ಕಾರಲ್ಲಿ ಜೊತೆಯಲ್ಲಿದ್ದ ಮಗಳು ಮತ್ತು ಹಿಂದಿನ ಸೀಟಲ್ಲಿದ್ದ ಎರಡು ಸಂಬಂಧಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತು. ದಿನಾ ಪತ್ರಿಕೆಗಳಲ್ಲಿ ಆಕ್ಸಿಡೆಂಟ್ ಆಗಿ ನಿಧನರಾದವರ ಸುದ್ದಿ ನೋಡುವಾಗ, ಕೈಕಾಲು ಮುರಿದುಕೊಂಡವರನ್ನು ನೋಡುವಾಗ ನನ್ನನ್ನು ರಕ್ಷಿಸಿದ ತಂದೆ-ತಾಯಿಯ ಒತ್ತಾಯ, ಶಿವ ಕವಚ ನೆನಪಾಗುವುದು.
ಈಗ ನನ್ನ ತಂದೆ-ತಾಯಿ ಇಬ್ಬರೂ ಇಲ್ಲದಿದ್ದರೂ ಆವಾಗ ಅಭ್ಯಾಸವಾದ ಶಿವ ಜಪ ಇಂದಿಗೂ ಮುಂದುವರೆದಿದೆ.
ನಾಗೇಶರೆ, ಈಗ ಹೇಳಿ, ಶಿವ ನನ್ನ ಬಿಟ್ಟಿರುವನೆ?:)
(ಪೋಲಿಯೋ ಇತ್ಯಾದಿ ಕಾಯಿಲೆ ಬರದಂತೆ ಮುಂಜಾಗ್ರತೆಯಾಗಿ ಹೇಗೆ ವ್ಯಾಕ್ಸೀನಗಳನ್ನು ಹಾಕಿಸುವೆವೋ ಅದೇ ರೀತಿ ಜೀವನದಲ್ಲಿ ಮುಂದಾಗುವ ಅನಾಹುತಗಳನ್ನು ಸಾಧ್ಯವಾದಷ್ಟು ತಪ್ಪಿಸಲು, ಅಥವಾ ತೊಂದರೆಯನ್ನು ಕಮ್ಮಿಯಾಗಿಸಲು, ದೇವರ ಜಪ ಪೂಜೆ ಇತ್ಯಾದಿ ಮಾಡಿದರೆ ಒಳಿತಲ್ವೆ? ಇರುವುದೊಂದೇ ಜೀವನ.. ..ಹಿಂದೆ ಹೋಗಿ ಸರಿಪಡಿಸಲು ಸಾಧ್ಯವಿಲ್ಲ.)
ನಾಗೇಶರೆ, ನಿಮ್ಮ‌ ಕವನ‌ ಲೇಖನ‌ ಹಾಸ್ಯಮಯವಾಗಿ ಚೆನ್ನಾಗಿತ್ತು. ನನ್ನ‌ ಪ್ರತಿಕ್ರಿಯೆ ಸ್ವಲ್ಪ ಉದ್ದವಾಯಿತು. ಜಾಗರಣೆ ಮಾಡುವವರಿಗೆ ಓದಲು...:)

Submitted by ಗಣೇಶ Fri, 02/28/2014 - 00:29

In reply to by ಗಣೇಶ

"ನೋಡೋ ಅದೆಲ್ಲಾ ನನಗೆ ಬೇಡ. ಜ್ಯೋತಿಷ್ಯ ಸುಳ್ಳೋ ಸತ್ಯವೋ ನನಗೆ ಬೇಡ . ನನಗೆ ನೀನು ಮುಖ್ಯ . ನೀನು ಸೀನಿದರೂ ನನಗೆ ನಿದ್ರೆ ಬರುವುದಿಲ್ಲ. ಹೋಮ ಪೂಜೆ ಮಾಡಿಸಲಿಲ್ಲ.. ಕಡೇ ಪಕ್ಷ ಜ್ಯೋತಿಷಿಗಳು ಹೇಳಿದಂತೆ ಒಂದು ಅರ್ಧ ಘಂಟೆ ಪೂಜೆ ಮಾಡೋ", ಕಣ್ಣೀರು ತುಂಬಿ ತಾಯಿ ಕೇಳಿದಾಗ ಇನ್ನು ಹಠ ಮಾಡೋದು ಸರಿಯಲ್ಲ ಎಂದು," ಅಷ್ಟೇತಾನೆ ಅಮ್ಮಾ , ಈ ದಿನದಿಂದಲೇ ಮಾಡುವೆ ಎಂದೆ ". ಹಾಗೇ ಪ್ರತೀ ದಿನ ನಾನು ಮಂತ್ರ ಹೇಳುವುದನ್ನು ನೋಡಿ ಸಮಾಧಾನಪಟ್ಟುಕೊಂಡರು .
ಕೆಲ ತಿಂಗಳಲ್ಲಿ ನನ್ನ ತಾಯಿ ಆರೋಗ್ಯ ಕೆಟ್ಟಿತು . ಹೈಟೆಕ್ ಆಸ್ಪತ್ರೆಯಲ್ಲಿ ಸೇರಿಸಿದರೂ ಅವರ ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಾ ಸಾಗಿತು .ವೈದ್ಯರು , ವಿಜ್ಞಾನ, ನಾನೇ ಮೇಲು ಎಂಬ ಅಹಂಕಾರದಲ್ಲಿದ್ದ ನಾನು , ಈಗ ಯಾರು ಏನು ಹೇಳಿದರೂ ಮಾಡಲು ಸಿದ್ಧನಿದ್ದೆ. ನನ್ನ ಸಂಬಂಧಿಯ ಬಳಿ ಜ್ಯೋತಿಷಿ, "ತಾಯಿಯ ಜಾತಕದಲ್ಲಿ ೧೬ನೇ ತಾರೀಕಿಗೆ ಮಹಾ ಕಂಟಕವಿದೆ.ಅದು ಪಾರಾದರೆ ಮುಂದೆ ೮೫ ವರ್ಷದವರೆಗೆ ಏನೂ ತೊಂದರೆ ಇಲ್ಲ." ಎಂದರು. ರಾತ್ರಿ ಆಸ್ಪತ್ರೆಯಲ್ಲಿದ್ದು, ಬೆಳಗ್ಗೆ ನಾಲ್ಕು ಗಂಟೆಗೆ ಬಂದು ಸ್ನಾನ ಮಾಡಿ ಅವರು ಸೂಚಿಸಿದಂತೆ ಲಲಿತಾ ಸಹಸ್ರನಾಮ ಹಾಗೂ ವಿಷ್ಣು ಸಹಸ್ರನಾಮ ಹೇಳುತ್ತಿದ್ದೆ. ಸಿನೆಮಾದಲ್ಲಾದರೆ ಹೀರೋ ಪೋಲಿಯಾಗಿದ್ದರೂ, ಕೊನೇ ಗಳಿಗೆಯಲ್ಲಿ ಭಕ್ತಿಯಲ್ಲಿ ಹಾಡಿದ ಕೂಡಲೇ ದೇವರು ಒಲಿಯುತ್ತಿದ್ದರು. ಇಲ್ಲಿ ಹಾಗಾಗಲಿಲ್ಲ :( ಜನನಿ ಜಗಜ್ಜನನಿ ಬಳಿ ಹೋದರು.
ಈ ಶಿವ ಕವಚ ಸ್ತೋತ್ರ - ತಲೆಯಿಂದ ಕಾಲಿನವರೆಗೆ ಪ್ರತೀ ಅಂಗವನ್ನು , ದಿನಾದಿಯಿಂದ ರಾತ್ರಿ ಪೂರ್ತಿ , ಕಾಡು , ಪರ್ವತ , ಸಮುದ್ರ , ಹೀಗೆ ಎಲ್ಲಾ ಕಡೆ ಶಿವ ನನ್ನನ್ನು ಕವಚದಂತೆ ರಕ್ಷಿಸಲು ಬೇಡುವ ಮಂತ್ರ .
೨೦೧೨ರ ಜೂನ್ ತಿಂಗಳಲ್ಲಿ ಪುತ್ತೂರಿನಿಂದ ( ಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನವಿದೆ ) ಸುಳ್ಯ ( ಪ್ರಸಿದ್ಧ ಮಲ್ಲಿಕಾರ್ಜುನ ದೇವಸ್ಥಾನವಿದೆ)ದ ನಡುವೆ ಆನೆಗುಂಡಿ ಎಂಬಲ್ಲಿ ಬಸ್ಸಿಗೆ ನನ್ನ ಕಾರು ಡಿಕ್ಕಿ ಹೊಡೆಯಿತು. ( ಇದರ ಬಗ್ಗೆ ಹಿಂದೆ ಬರೆದಿದ್ದೆ ) ಆಶ್ಚರ್ಯವೆಂದರೆ ತಲೆಯಿಂದ ಹಿಡಿದು ಪಾದದವರೆಗೆ ಒಂದು ಸಣ್ಣ ಗಾಯವೂ ಆಗಿರಲಿಲ್ಲ . ನನ್ನ ಹೆಂಡತಿಗೂ ಸಹಾ ಒಂದು ಸಣ್ಣ ಗಾಯವೂ ಆಗಲಿಲ್ಲ . ಆಕೆಯೂ ಸಹಾ ಮೃತ್ಯುಂಜಯ ಜಪ ಮಾಡುತ್ತಿದ್ದಳು(ನನ್ನ ಒಳಿತಿಗಾಗಿ). ಕಾರಲ್ಲಿ ಜೊತೆಯಲ್ಲಿದ್ದ ಮಗಳು ಮತ್ತು ಹಿಂದಿನ ಸೀಟಲ್ಲಿದ್ದ ಎರಡು ಸಂಬಂಧಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತು. ದಿನಾ ಪತ್ರಿಕೆಗಳಲ್ಲಿ ಆಕ್ಸಿಡೆಂಟ್ ಆಗಿ ನಿಧನರಾದವರ ಸುದ್ದಿ ನೋಡುವಾಗ, ಕೈಕಾಲು ಮುರಿದುಕೊಂಡವರನ್ನು ನೋಡುವಾಗ ನನ್ನನ್ನು ರಕ್ಷಿಸಿದ ತಂದೆ-ತಾಯಿಯ ಒತ್ತಾಯ, ಶಿವ ಕವಚ ನೆನಪಾಗುವುದು.
ಈಗ ನನ್ನ ತಂದೆ-ತಾಯಿ ಇಬ್ಬರೂ ಇಲ್ಲದಿದ್ದರೂ ಆವಾಗ ಅಭ್ಯಾಸವಾದ ಶಿವ ಜಪ ಇಂದಿಗೂ ಮುಂದುವರೆದಿದೆ.
ನಾಗೇಶರೆ, ಈಗ ಹೇಳಿ, ಶಿವ ನನ್ನ ಬಿಟ್ಟಿರುವನೆ?
(ಪೋಲಿಯೋ ಇತ್ಯಾದಿ ಕಾಯಿಲೆ ಬರದಂತೆ ಮುಂಜಾಗ್ರತೆಯಾಗಿ ಹೇಗೆ ವ್ಯಾಕ್ಸೀನಗಳನ್ನು ಹಾಕಿಸುವೆವೋ ಅದೇ ರೀತಿ ಜೀವನದಲ್ಲಿ ಮುಂದಾಗುವ ಅನಾಹುತಗಳನ್ನು ಸಾಧ್ಯವಾದಷ್ಟು ತಪ್ಪಿಸಲು, ಅಥವಾ ತೊಂದರೆಯನ್ನು ಕಮ್ಮಿಯಾಗಿಸಲು, ದೇವರ ಜಪ ಪೂಜೆ ಇತ್ಯಾದಿ ಮಾಡಿದರೆ ಒಳಿತಲ್ವೆ? ಇರುವುದೊಂದೇ ಜೀವನ.. ..ಹಿಂದೆ ಹೋಗಿ ಸರಿಪಡಿಸಲು ಸಾಧ್ಯವಿಲ್ಲ.)
ನಾಗೇಶರೆ, ನಿಮ್ಮ ಕವನ‌ ಲೇಖನ‌ ಹಾಸ್ಯಮಯವಾಗಿ ಚೆನ್ನಾಗಿತ್ತು. ನನ್ನ‌ಪ್ರತಿಕ್ರಿಯೆ ಸ್ವಲ್ಪ ಉದ್ದವಾಯಿತು. ಜಾಗರಣೆ ಮಾಡುವವರಿಗೆ ಓದಲು...:)
(ಅರ್ಧ‌ ಪ್ರತಿಕ್ರಿಯೆ ಮಾತ್ರ‌ ಪ್ರಕಟವಾಯಿತು. ಎರಡನ್ನೂ ಸೇರಿಸಿ ಓದಿ)

Submitted by nageshamysore Fri, 02/28/2014 - 03:45

In reply to by ಗಣೇಶ

ನಿಮ್ಮ  ಎರಡನೆ ಪ್ರತಿಕ್ರಿಯೆಯಲ್ಲೂ ಯಾಕೊ ಕೊನೆಯ ಪ್ಯಾರ ಬಿಟ್ಟುಹೋಗಿದೆ (ಬಹುಶಃ ಟೆಕ್ಸ್ಟಿನ ಪುಟ ಮಿತಿ ಇರಬಹುದು). ಆದರೆ ಮಿಂಚಂಚೆಯಲ್ಲಿ ಆ ಭಾಗ ಪೂರ್ತಿಯಾಗಿ ಬಂದಿದೆ. ಆ ಭಾಗವನ್ನು ಇಲ್ಲಿ ಕೆಳಗೆ ಸೇರಿಸಿದ್ದೇನೆ...
--------------------------
"ನಾಗೇಶರೆ, ಈಗ ಹೇಳಿ, ಶಿವ ನನ್ನ ಬಿಟ್ಟಿರುವನೆ?
(ಪೋಲಿಯೋ ಇತ್ಯಾದಿ ಕಾಯಿಲೆ ಬರದಂತೆ ಮುಂಜಾಗ್ರತೆಯಾಗಿ ಹೇಗೆ ವ್ಯಾಕ್ಸೀನಗಳನ್ನು ಹಾಕಿಸುವೆವೋ ಅದೇ ರೀತಿ ಜೀವನದಲ್ಲಿ ಮುಂದಾಗುವ ಅನಾಹುತಗಳನ್ನು ಸಾಧ್ಯವಾದಷ್ಟು ತಪ್ಪಿಸಲು, ಅಥವಾ ತೊಂದರೆಯನ್ನು ಕಮ್ಮಿಯಾಗಿಸಲು, ದೇವರ ಜಪ ಪೂಜೆ ಇತ್ಯಾದಿ ಮಾಡಿದರೆ ಒಳಿತಲ್ವೆ? ಇರುವುದೊಂದೇ ಜೀವನ.. ..ಹಿಂದೆ ಹೋಗಿ ಸರಿಪಡಿಸಲು ಸಾಧ್ಯವಿಲ್ಲ.)
ನಾಗೇಶರೆ, ನಿಮ್ಮ ಕವನ‌ ಲೇಖನ‌ ಹಾಸ್ಯಮಯವಾಗಿ ಚೆನ್ನಾಗಿತ್ತು. ನನ್ನ‌ಪ್ರತಿಕ್ರಿಯೆ ಸ್ವಲ್ಪ ಉದ್ದವಾಯಿತು. ಜಾಗರಣೆ ಮಾಡುವವರಿಗೆ ಓದಲು...:)
(ಅರ್ಧ‌ ಪ್ರತಿಕ್ರಿಯೆ ಮಾತ್ರ‌ ಪ್ರಕಟವಾಯಿತು. ಎರಡನ್ನೂ ಸೇರಿಸಿ ಓದಿ)"
------------------------
.
ಗಣೇಶ್ ಜಿ ಶಿವ ಎಲ್ಲಿದ್ದಾನೆಂದು ಬಿಲ್ಕುಲ್ ಅನುಮಾನ ಪಡುವಂತೆಯೆ ಇಲ್ಲ..ಮೃತ್ಯುಂಜಯ ಮಂತ್ರ, ಶಿವ ಕವಚದ ಮುಖೇನ ಬರಿ ಶಿವರಾತ್ರಿಯೇನು - ಪ್ರತಿ ಹಗಲೂ ರಾತ್ರಿ ಜತೆಗಿರುವಂತೆ ಮಾಡಿಕೊಂಡುಬಿಟ್ಟಿದ್ದೀರಾ! ನೀವು ಮೇಲೆ ಬರೆದ ಯಾವ ಹಿನ್ನಲೆಯೂ ಗೊತ್ತಿರದ ನನ್ನನ್ನು ಹಾಗೆ ಊಹಿಸಿ ಬರೆಸಲು ಪ್ರೇರೇಪಿಸುವಷ್ಟು ಸುಭದ್ರವಾಗಿದೆ ಕವಚ!
.
ಶ್ರೀ ವತ್ಸ ಜೋಶಿಯವರ ಲೇಖನ ಜತೆಯಲ್ಲಿ ನಿಮ್ಮ ಬರಹ (ಪ್ರತಿಕ್ರಿಯೆಯೆ ಇನ್ನೊಂದು ಲೇಖನದ ಬರಹವಾಗುವಷ್ಟು ಚೆನ್ನಾಗಿದೆ) ಎರಡು ಬರಿ ಜಾಗರಣೆಗೆ ಮಾತ್ರವಲ್ಲ, ಯಾವಾಗ ಬೇಕಾದರೂ ಓದಲು ರಸವತ್ತಾದ ಮಾಹಿತಿಯುಳ್ಳದ್ದಾಗಿವೆ. ಈಗ ನಾನೂ ಮೃತ್ಯುಂಜಯ ಮಂತ್ರ ಉರು ಹೊಡೆಯಲು ಆರಂಭಿಸಬೇಕಷ್ಟೆ (ಈಗಾಗಲೆ ಶುರು ಹಚ್ಚಿಕೊಂಡಿದ್ದೇನೆ). ಹಾಗೆಯೆ ಶಿವ ಕವಚವನ್ನು ಹುಡುಕಬೇಕು...
.
ಅಲ್ಲಿಗೆ ಶಿವನ ಲೋಕಲ್ ಅಡ್ರೆಸ್ ಕನ್ಫರ್ಮ್ ಆದಂತಾಯ್ತು. ನೀವು ಯಾಕೆ ಯಾರ ಕೈಗೂ ಸಿಗದೆ ತಪ್ಪಿಸಿಕೊಂಡು ಓಡಾಡುತ್ತೀರಿ ಅನ್ನುವುದಕ್ಕೆ ಮತ್ತೊಂದು ಕಾರಣವೂ ಸಿಕ್ಕಿತು :-)

Submitted by ಗಣೇಶ Sat, 03/01/2014 - 00:09

In reply to by nageshamysore

ನಾಗೇಶರೆ, ಎರಡನೇ ಬಾರಿಯೂ ಒಂದು ಪ್ಯಾರಾ ಬಾಕಿ ಇದ್ದಾಗ, ಪುನಃ ಸೇರಿಸಲು ಮನಸ್ಸಾಗದೆ ಸುಮ್ಮನಾದೆ. ಈವಾಗ ನೀವು ಸೇರಿಸಿದ್ದು ನೋಡಿ ಆಶ್ಚರ್ಯವಾಯಿತು. "ಆದರೆ ಮಿಂಚಂಚೆಯಲ್ಲಿ ಆ ಭಾಗ ಪೂರ್ತಿಯಾಗಿ ಬಂದಿದೆ. .." ಇದು ಯಾವರೀತಿ ಎಂದು ಸ್ವಲ್ಪ ವಿವರಿಸಿ.
ಆ ಪ್ಯಾರಾವನ್ನು ಸೇರಿಸಿದ್ದಕ್ಕೆ ಧನ್ಯವಾದಗಳು.
ನಾನೊಬ್ಬ ಸಾಮಾನ್ಯ. ನನ್ನ ಸಂಗತಿ ಹಾಗಿರಲಿ. ಮತಾಂಧ ಎಂದು ಕರೆಸಿಕೊಂಡ ಟಿಪ್ಪುನ ಸವಾಲ್ ಗೆದ್ದು ಟಿಪ್ಪುವಿನಿಂದಲೇ "ಹಕೀಂ ನಂಜುಂಡ" ಎಂದು ಹೊಗಳಿಸಿಕೊಂಡ ಶಿವನ ಬಗ್ಗೆ ಇಲ್ಲಿ ನೋಡಿ- http://www.youtube.com/watch?v=Pj6VPi3Vsds

Submitted by nageshamysore Sat, 03/01/2014 - 03:25

In reply to by ಗಣೇಶ

ಗಣೇಶ್ ಜಿ, ಇದಕ್ಕೆ ನಾನೇನು ವಿಶೇಷವಾದದ್ದೇನು ಮಾಡಲಿಲ್ಲ. ಪ್ರತಿ ಬಾರಿ ಪ್ರತಿಕ್ರಿಯೆ ಹಾಕಿದಾಗ ಅದು ಜತೆಯಲ್ಲೆ ಒಂದು ಇ-ಮೇಯ್ಲ್ ಕೂಡ ಜತೆಯಲ್ಲೆ ಕಳಿಸುತ್ತದೆ (ನನ್ನ ಪ್ರೊಫೈಲಿನಲ್ಲಿರುವ ವಿಳಾಸಕ್ಕೆ). ಹೀಗಾಗಿ ಸಂಪದ ತೆರೆಯದಿದ್ದರೂ ಪ್ರತಿಕ್ರಿಯೆಯ ಭಾಗ ಮಿಂಚಂಚೆಯಲ್ಲಿ ಓದಬಹುದು. ಆದರೆ ಕಲಿಸಿದವರು ಯಾರೆಂದು ಗೊತ್ತಾಗುವುದಿಲ್ಲ (ಕಳಿಸಿದವರು ಹೆಸರು ಹಾಕಿದ್ದರೆ ಮಾತ್ರ ತಿಳಿಯುತ್ತದೆ - ಇಲ್ಲದಿದ್ದರೆ ನೇರ ಸಂಪದದಲ್ಲೆ ನೋಡಬೇಕು). ಅಲ್ಲದೆ ಪ್ರತಿಕ್ರಿಯೆಯ ನೇರ ಲಿಂಕು ಕೂಡ ಮೈಯ್ಲಿನಲ್ಲೆ ಇರುತ್ತದೆ. ನಾನು ಅಕಸ್ಮಾತಾಗಿ ಮೈಯ್ಲಿನಲ್ಲಿ ಬಂದ ಟೆಕ್ಸ್ಟಿನಲ್ಲಿ ಒಂದು ಪ್ಯಾರ ಹೆಚ್ಚಿರುವುದನ್ನು ಗಮನಿಸಿ ಸೇರಿಸಿದೆ ಅಷ್ಟೆ.

ಬಹುಶಃ ಪ್ರೊಫೈಲ್ ಕ್ರಿಯೇಟ್ ಮಾಡುವಾಗ ಇದರ ಕುರಿತು ಡೀಫಾಲ್ಟ್ ಸೆಟ್ಟಿಂಗ್ ಏನಾದರು ಇತ್ತೊ ನೆನಪಿಲ್ಲ. ಆದರೆ ಎಲ್ಲಾ ಪ್ರತಿಕ್ರಿಯೆ ಅಂಚೆ ಪೆಟ್ಟಿಗೆಗೆ ಬಂದು ಬೀಳುತ್ತದೆ.

Submitted by partha1059 Fri, 02/28/2014 - 08:21

ನಾಗೇಶರೆ ಕವನದ‌ ಕಲ್ಪನೆ ಚೆನ್ನಾಗಿದೆ !
ಹಾಗೆ
ಗಣೇಶರು ಆಗಾಗ್ಯೆ ಅಂಡಾಂಡಬ್ರಹ್ಮರ‌ ಅವತಾರ‌ ಏಕೆ ತಾಳುತ್ತಿದ್ದರು ಅಂತ‌ ಈಗ‌ ಸ್ವಲ್ಪ‌ ಅರ್ಥವಾದಂತೆ ಅನ್ನಿಸುತ್ತಿದೆ.

Submitted by nageshamysore Fri, 02/28/2014 - 17:34

In reply to by partha1059

ಪಾರ್ಥಾ ಸಾರ್, ಧನ್ಯವಾದಗಳು. ಅಂತು ಶಿವರಾತ್ರಿಯ ನೆಪದಲ್ಲಾದರು ಕೆಲವು ಗುಟ್ಟುಗಳ ಮೂಲ ಗೊತ್ತಾಗುತ್ತಿದೆಯಲ್ಲ.. ಎಲ್ಲಾ ಆ ಶಿವ ಲೀಲೆ ಎನ್ನಬಹುದೆ? :-)