ಎಂದೋ ಮಾಡೋ ಕೆಲಸ ಇಂದೇ ಮಾಡೋಣ !
ನಾಳೆ ಮಾಡೊ ಅಡುಗೆಗೆ ಅಂತ ಇಂದೇ ತರಕಾರಿ ಹೆಚ್ಚಿಟ್ಟ ಹಾಗೆ
ನಾಳೆ ತೊಡೋ ಉಡುಗೆಯನ್ನು ಇಂದೇ ಇಸ್ತ್ರಿ ಮಾಡಿಟ್ಟುಕೊಂಡ ಹಾಗೆ
ನಾಳೆ ಹೋಗೋ ಸಿನಿಮಾಕ್ಕಂತ ಇಂದೇ ಟಿಕೆಟ್ ಕೊಂಡಿಟ್ಟ ಹಾಗೆ
ನಾಳೆ ಹುಟ್ಟೋ ಕೂಸಿಗಂತ ಇಂದೇ ಕುಲಾವಿ ಹೊಲೆದಿಟ್ಟ ಹಾಗೆ
ನಾಳೆ ತಿನ್ನೋ ದೋಸೆಗಾಗಿ ಇಂದೇ ಅಕ್ಕಿ-ಬೇಳೆ ನೆನೆಸಿಟ್ಟ ಹಾಗೆ
ಎಂದೋ ಹೋಗಬಹುದಾದ ವಿದ್ಯುತ್’ಗೆಂದು ಇಂದೇ ಟಾರ್ಚ್ ಸಿದ್ದ ಮಾಡಿಟ್ಟ ಹಾಗೆ
ಎಂದೋ ತಾಳಿಕಟ್ಟೋ ಗಂಡನ್ನು ನೆನೆಸಿಕೊಂಡು ಇಂದೇ ನಾಚಿ ಕೆಂಪಾದ ಹಾಗೆ
ಎಂದೋ ಕಾಡಬಹುದಾದ ಸಂಕಟಕ್ಕೆ ಇಂದೇ ಜೋಲುಮೋರೆ ಹಾಕಿಕೊಂಡ ಹಾಗೆ
ಎಂದೋ ರೈಲಿನಲ್ಲಿ ಮಾಡೋ ಪಯಣಕ್ಕಂತ ಇಂದೇ ರಿಸರ್ವೇಷನ್ ಮಾಡಿಸಿಟ್ಟ ಹಾಗೆ
ಎಂದೋ ಕೆಲಸದಿಂದ ನಿವೃತ್ತನಾಗೋದಕ್ಕೆ ಇಂದಿನಿಂದಲೇ ಹಣ ಉಳಿಸಿಟ್ಟ ಹಾಗೆ
ರೋಗದಿಂದ ಬಿದ್ದೊದ್ದಾಡದಂತೆ ಮುನ್ನವೇ ತಪಾಸಣೆ ಮಾಡಿಸೋ ಹಾಗೆ
ಕುಡಿಯಲು ನೀರು ಬೇಕಾದಲೇ ಬಾವಿ ಅಗೆಯಲಾಗದೆಂದು ಅರಿತಿರೋ ಹಾಗೆ
ಫಲವೀವ ಮರಕ್ಕಾಗಿ ಇಂದು ಸಸಿಯ ನೆಟ್ಟು ಪೋಷಿಸಿ ಬೆಳೆಸಿದ ಹಾಗೆ
ಅರಿಗಳಿಂದ ದೇಶ ರಕ್ಷಿಸಿಕೊಳ್ಳಲು ಸೇನೆಯನ್ನು ಸಿದ್ದವಿಟ್ಟುಕೊಂಡ ಹಾಗೆ
ರಂಗದ ಮೇಲೆ ಆಟವಾಡಿ ಜನರ ರಂಜಿಸಲು ರಂಗತಾಲೀಮು ನೆಡೆಸೋ ಹಾಗೆ
ನಾವು ಇಂದು ಬದುಕುತ್ತಿರುವುದೇ ಮುಂದೊಂದು ದಿನಕ್ಕೆ ಎಂದಾದ ಮೇಲೆ
ಮೇಲೆ ಹೋಗೋಕ್ಕಂತ ಹುಟ್ಟೋವಾಗ್ಲೇ ರಿಟರ್ನ್ ಟಿಕೆಟ್ ಹಿಡಿದು ಬಂದಿರೋ ನಾವು
ನಾಳೆ ನಮ್ಮನ್ನ ಕಾಯಲಿ ಅಂತ ಇಂದೇ ಒಳ್ಳೇ ಕೆಲಸ ಮಾಡೋದಕ್ಕೆ ಹಿಂದೆ-ಮುಂದೆ ನೋಡೋದ್ಯಾಕ?
ನಮ್ ಪಾಪದ ಗುಡ್ಡೆ ಕರಗಿಸೋಕ್ಕಂತ ಅಡಕಸುಬಿ ಸ್ವಾಮಿ, ಸ್ವಾಮಿಣಿಗಳ ಪಾದಕ್ಕೆ ಬೀಳೋದ್ಯಾಕ?
ಬಾಹ್ಯ ಜಗತ್ತಿಗೆ ಬೈರಾಗಿತನ ತೋರಿಕೊಂಡು ಐಹಿಕ ಸುಖ ಉಣ್ಣೋ ಕಾವಿಗೆ ಕೈ ಮುಗಿಯೋದ್ ಯಾಕ?
ಮನದಾಗೆ ಕಲ್ಮಶ ತುಂಬ್ಕೊಂಡು, ಡೋಂಗಿತನದಿ ಪೂಜೆ ಮಾಡಿ, ನಾಕದ ಕನಸು ಕಾಣೋದ್ಯಾಕ?
ನಾ ಆಡಿದ್ದು ತಪ್ಪಾಗಿದ್ರೆ, ತಪ್ಪೊಪ್ಪುಗೆಯಾಗಿ ’ತುಳಸೀದಳ’ವನ್ನರ್ಪಿಸುವೆನೈ ಅಚ್ಚುತ !
Comments
ಉ: ಎಂದೋ ಮಾಡೋ ಕೆಲಸ ಇಂದೇ ಮಾಡೋಣ !
ಚೆನ್ನಾಗಿದೆ ಭಲ್ಲೆಯವರೇ. ಸ್ವಾಮಿಗಳು ಅಡ್ಡಕಸುಬಿ ಅಂತ ಗೊತ್ತಿದ್ದರೆ, ಕಪಟಿಗಳು ಅಂತ ಗೊತ್ತಿದ್ದರೆ ಯಾರೂ ಕೈಮುಗಿಯುವುದಿಲ್ಲ, ಕಾಲಿಗೆ ಬೀಳುವುದಿಲ್ಲ. ಆದರೆ 'ಮಾಡಿದ್ದುಣ್ಣೋ ಮಹರಾಯ' ಅನ್ನುವ ಭಾವ ಹೊರಡಿಸಿರುವಿರಿ, ಸೊಗಸಾಗಿದೆ.
In reply to ಉ: ಎಂದೋ ಮಾಡೋ ಕೆಲಸ ಇಂದೇ ಮಾಡೋಣ ! by kavinagaraj
ಉ: ಎಂದೋ ಮಾಡೋ ಕೆಲಸ ಇಂದೇ ಮಾಡೋಣ !
ಧನ್ಯವಾದಗಳು ಕವಿಗಳೇ ! ಕೋರ್ಟ್'ನಲ್ಲಿ ಕೇಸ್ ಹಾಕಿಸಿಕೊಂಡು ಇದ್ದಕ್ಕಿದ್ದಂತೆ ಕಣ್ಮರೆ ಆಗಿ ವಾಪಸ್ ಬಂದ ಕೂಡಲೇ ಕಾಲಿಗೆ ಬೀಳ್ತಾರಲ್ಲ ಕವಿಗಳೇ! ಇವರನ್ನು ಏನನ್ನೋಣ?
ಮೊನ್ನೆ, ಸ್ವಾಮೀಜಿ ಒಬ್ಬ ನಿಮ್ಮ ಮಗಳನ್ನು ಮಠಕ್ಕೆ ನೀಡಿ ಎಂದು ದಂಬಾಲು ಬಿದ್ರಂತೆ, ಇವರು ಕೊಟ್ರಂತೆ. ಆ ಸ್ವಾಮೀಜಿ ಆ ಹೆಣ್ಣು ಮಗಳನ್ನು ಸಜೀವ ದಹನ ಮಾಡಿ, ಶಿವರಾತ್ರಿಗೆ ಆಕೆ ಸಜೀವವಾಗಿ ಬರುತ್ತಾಳೆ ಎಂದು ನಿರೂಪಿಸುತ್ತೇನೆ ಎಂದರಂತೆ. ಇವೆಲ್ಲ ಏನು? ಮೌಢ್ಯವೇ? ಒಂದೂ ಅರ್ಥವಾಗೋಲ್ಲ !
ಇನ್ನೊಬ್ಬ ಸ್ವಾಮಿಣಿ. ದಿನದಿನಕ್ಕೂ ಆಕೆಯಲ್ಲಿ ಐಶ್ವರ್ಯ ಬೆಳೆಯುತ್ತಾ ಹೋದರೂ ಅದನ್ನು ನೋಡಿಕೊಂಡು ಜನ ಇನ್ನೂ ಆಕೆಗೆ ಮುಗಿಬಿದ್ರಂತೆ. ಸ್ವಯಂ ಘೋಷಿತ ಸ್ವಾಮಿ/ಸ್ವಾಮಿಣಿಯರು ಕಣ್ಣಿಗೆ ಮಣ್ಣೆರಚುತ್ತಲೇ ಇರ್ತಾರೆ :-(
ಉ: ಎಂದೋ ಮಾಡೋ ಕೆಲಸ ಇಂದೇ ಮಾಡೋಣ !
ಭಲ್ಲೆಯವರೆ, ಸೂಪರ್ ಕವನ ಎಂದೇ ಬರೆಯಬೇಕೆಂದಿದ್ದೆ..
ಬಹಳ ಚೆನ್ನಾಗಿತ್ತು. ಆದರೆ..
ಕೊನೆಯ ನಾಲ್ಕು ಲೈನ್...ಛೇ..
ಐಹಿಕ ಸುಖ ಉಣ್ಣೋ ಅಡಕಸಬಿ ಸಾಮಿಗಳ ಪಾದಕ್ಕೆ ಬೀಳೋದೂ ಬೇಡ, ಕೈ ಮುಗಿಯೋದೂ ಬೇಡ..ಪಾದ ಕಾಣಿಕೆ ಒಪ್ಪಿಸುವುದಕ್ಕೆ ಅಡ್ಡಬರಬೇಡಿ. ನೀವಾಡಿದ್ದು ತಪ್ಪಾಗಿದೆ. ತುಳಸೀದಳ ಅಚ್ಯುತನಿಗೆ ಅರ್ಪಿಸಿ, ನಮಗೆ ಕಾಣಿಕೆ ಕಳುಹಿಸಿ.:)
ಅಂ.ಭಂ.ಸ್ವಾಮಿ.
In reply to ಉ: ಎಂದೋ ಮಾಡೋ ಕೆಲಸ ಇಂದೇ ಮಾಡೋಣ ! by ಗಣೇಶ
ಉ: ಎಂದೋ ಮಾಡೋ ಕೆಲಸ ಇಂದೇ ಮಾಡೋಣ !
ಗಣೇಶರೇ
ಖಂಡಿತ ತಪ್ಪಾಗಿದೆ :-) ಅಚ್ಯುತನಿಗೆ ತುಳಸೀದಳ ಅರ್ಪಿಸಿದಂತೆ, ನಿಮಗೆ ಒಂದು ತೆಂಗಿನಕಾಯಿ ಇದೋ ಒಡೆದೆ. ತಪ್ಪು ಕಾಣಿಕೆ ಮುಖತಃ ಭೇಟಿಯಲ್ಲಿ!