ಗುಹೆ ತೊರೆದ ಸಿಂಹ

ಗುಹೆ ತೊರೆದ ಸಿಂಹ

                              

     2014 ರ ಫಬ್ರುವರಿ 28 ರಂದು ಪ್ರಾಸ್ಟೇಟ್ ಕ್ಯಾನ್ಸರಿನಿಂದ ಬಳಲುತ್ತಿದ್ದ ಸಿ.ಆರ್.ಸಿಂಹ ಬೆಂಗಳೂರಿನ ಸೇವಾ ಕ್ಷೇತ್ರ ಆಸ್ತತ್ರೆಯಲ್ಲಿ ನಿಧನರಾಗಿದ್ದಾರೆ. ಆರು ದಿನಗಳ ಹಿಂದೆ ಕಾಯಿಲೆ ಉಲ್ಬಣಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲ್ಪಟ್ಟ ಅವರು ಗುಣಮುಖರಾಗದೆ ಅಸು ನೀಗಿದ್ದಾರೆ. ಅವರು ಒಂದು ವರ್ಷದಿಂದಲೂ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ವಿಷಯ ಜನ ಸಾಮಾನ್ಯರಿಗೆ ತಿಳಿದಿರಲಿಲ್ಲ. ಇಂದು ಅವರ ಸ್ಥಿತಿ ಬಿಗಡಾಯಿಸುತ್ತ ಸಾಗಿದಂತೆ ಇಲೆಕ್ಟ್ರಾನಿಕ್ ಪ್ರಸಿದ್ಧ! ಸುದ್ದಿ ಮಾಧ್ಯಮಗಳು ಸಿಂಹ ಅವರ ಅನಾರೋಗ್ಯದ ಕುರಿತು ಸುದ್ದಿ ತುಣುಕುಗಳನ್ನು ಪೈಪೋಟಿಯಿಂದೆಂಬಂತೆ ಬಿತ್ತರಿಸಲು ಪ್ರಾರಂಭಿಸಿದವು. ಆಗಲೆ ನೋಡುಗರಿಗೆ ಅರ್ಥವಾಗಿತ್ತು ಸಿಂಹರವರ ಸಾವಿನ ಕ್ಷಣ ಗಣನೆ ಪ್ರಾರಂಭವಾಗಿದೆ ಎಂಬುದು, ಅವರ ಸಾವನ್ನು ಖಚಿತ ಪಡಿಸುವ ಸುದ್ದಿ ಬಿತ್ತರಗೊಳ್ಳಬೇಕಿತ್ತು ಅಷ್ಟೆ. ಎಷ್ಟು ನಿಮಿಷ, ಎಷ್ಟು ಗಂಟೆ, ಮತ್ತು ಎಷ್ಟು ದಿನ ಎಂಬುದು ಗೊತ್ತಿರಲಿಲ್ಲ. ಆದರೆ ಅಭಿಮಾನಿಗಳನ್ನು ಹೆಚ್ಚು ಕಾಯಿಸದೆ ಅಭಿನಯ ಲೋಕದ ಸಿಂಹ ಗುಹೆ ತೊರೆದು ಹೋಗಿ ಬಿಟ್ಟಿದೆ. ಕ್ಯಾಕರಿಸಿದವರನ್ನೂ, ಕೆಮ್ಮಿದವ ರನ್ನೂ,ಕುಡುಕರನ್ನೂ, ಪತ್ನಿ ಪೀಡಕರ ಒಂದೊಂದು ನಡೆಯನ್ನೂ ಅಮೂಲ್ಯ ಕ್ಷಣಗಳೆಂಬಂತೆ ವೈಭವೀಕರಿಸಿ ಬಿತ್ತರಿಸುವ ನಮ್ಮ ಎಲೆಕ್ಟ್ರಾನಿಕ್ ಸುದ್ದಿ ಮಾಧ್ಯಮಗಳು ವೈಭವಿಕರಿಸ ಬಾರದವುಗಳನ್ನು ಒಂದು ಬ್ರೇಕ್ಕಿಂಗ್ ನ್ಯೂಜ್ ಆಗಿ ಪರಿಗಣಿಸುತ್ತಿವೆ, ಆದರೆ ಹೆಸರಾಂತನಾದ ಸಿಂಹರವರ  ಗಂಭೀರ ಕಾಯಿಲೆ ಮತ್ತು ಬದುಕಿನ ನಿಚ್ಚಳ ಅರಿವಿದ್ದ ಚಾನಲ್ ಗಳು ಆತ ಬದುಕಿದ್ದ ದಿನಗಳಲ್ಲಿ ಅವರ ನಟನಾ ರಂಗದಸಿದ್ಧಿ ಸಾಧನಯ ಕುರಿತು . ಒಂದು ವಿಸ್ತೃತ ಕಾರ್ಯಕ್ರಮ ರೂಪಿಸಿ ಬಿತ್ತರಿಸಲಾಗದಷ್ಟು ಸಾಂಸ್ಕೃತಿಕ ಬಡತನ ಈ ಚಾನಲ್ನವರಿಗೆ ಇದೆಯೆ ಎನ್ನುವ ಸಂಶಯ ವಿಕ್ಷಕರನ್ನು ಕಾಡಿದ್ದು ಸುಳ್ಳಲ್ಲ

     ನಮ್ಮ ಭಾರತೀಯ ಅದರಲ್ಲೂ ನಮ್ಮ ಕನ್ನಡ ಚಿತ್ರರಂಗದ ಪ್ರಮುಖ ದೋಷವೆಂದರೆ ನಾಯಕ ನಟರು ಅದರಲ್ಲಿಯೂ ವಿಶೇಷವಾಗಿ ಸ್ಟಾರ್ ಇಮೇಜಿನ ಕೇವಲ ಕೆಲವರು ಬೆರಳೆಣಿಯ  ನಾಯಕ ನಟರನ್ನು ಬಿಟ್ಟರೆ ಉಳಿದವರಿಗೆ ಮತ್ತು ಪೋಷಕ ಪಾತ್ರ ವರ್ಗದವರಿಗೆ ಆ ಗೌರವ ಸಿಗುವುದಿಲ್ಲ. ಯಾಕೆ ಈ ತಾರತಮ್ಯ? ನಾಯಕ ನಟ ವಿಜ್ರಂಭಿಸುವುದೆ ಪೂರಕ ಪಾತ್ರಧಾರಿಗಳ ಸಮಯೋಚಿತ ಸಾಂಭರ್ಭಿಕ ಪಾತ್ರ ಗಳಲ್ಲಿನ ನಟರ ಅಭಿನಯದ ಮೂಲಕ ಎನ್ನುವುದು ನಮಗೇಕೆ ತಿಳಿಯುವುದಿಲ್ಲ. ನಾಯಕ ಪಾತ್ರವನ್ನು ವೈಭವೀಕರಿಸುವ ಅತಿರಂಜಿತ ಪಾತ್ರಪೋಷಣೆಯನ್ನು ಮನದಾಳಕ್ಕೆ ಇಳಿಸಿ ಕೊಳ್ಳುತ್ತ ಆ ತೆರೆಯ ಮೇಲಿನ ಪಾತ್ರ ತಾವಾಗುತ್ತ; ನಿಜ ಜಿವನದಲ್ಲಿ ಸಾಧ್ಯ ವಾಗದ ಕನಸುಗಳನ್ನು ತೆರೆಯ ಮೇಲೆ ಹುಸಿ ಭ್ರಮೆಗಳನ್ನು ಹುಟ್ಟಿಸುವ ಅತಿ ರಂಜಿತ ಅವಾಸ್ತವಿಕ ಆ ಪಾತ್ರ ನಿರ್ವಹಿಸಿದ ನಾಯಕನನ್ನು ಮನದಾಳದಲ್ಲಿ ಸ್ಥಾಪಿಸಿಕೊಂಡು ಅವರನ್ನು ಮೆರೆಸುತ್ತ ಹೋಗುತ್ತೇವೆ. ಹೀಗಾಗಿ ನಾಯಕ ನಾಯಕಿಯರ ಅಬ್ಬರದಲ್ಲಿ ಪೋಷಕ ಪಾತ್ರಗಳ ಅಭಿನಯದ ತಾಕತ್ತು ಪ್ರೇಕ್ಷಕರ ಮನದಾಳಕ್ಕೆ ಇಳಿಯುವುದಿಲ್ಲ, ಯಾಕೆ ಈ ವರ್ತನೆಯೆಂದರೆ ನಾವು ವಾಸ್ತವಕ್ಕೆ ಬೆನ್ನಾಗಿ ಅತಿ ರಂಜಕತೆ ಮತ್ತು ಪಾತ್ರಗಳ ವೈಭವೀಕರಣದ ಮೋಡಿಗೆ ಒಳಗಾಗಿ ಬಿಟ್ಟಿರುತ್ತೇವೆ. ಬಹುತೇಕ ಕೊಳೆತ ಮನಸ್ಥಿತಿಯ ಆಂತರಿಕವಾಗಿ ಯಾವುದೆ ಮೌಲ್ಯಗಳಿಲ್ಲದ ನಾಯಕರನ್ನು ದೇವರಂತೆ ಆರಾಧಿಸಲು ಪ್ರಾರಂಭಿಸುತ್ತೇವೆ. ಜೈಲಿನಲ್ಲಿ ಮುದ್ದೆ ಮುರಿದು ಬಂದವರನ್ನೂ ಹೂಮಾಲೆ ಹಾಕಿ ಮೆರವಣಿಗೆ ತೆಗೆದು ಕುಣಿದು ಕುಪ್ಪಳಿಸಿ ಸಂಭ್ರಮಿಸುತ್ತೇವೆ. ಜನ ಸಮೂಹದ ಈ ವಿಚಿತ್ರ ವರ್ತನೆ ದಿಗಿಲು ಹುಟ್ಟಿಸುವಂತಹುದು. ಅವರ ಜೀವನದ ಒಂದು ಅಚಾತುರ್ಯದ ಗಳಿಗೆ ಆ ವ್ಯಕ್ತಿಯಲ್ಲಿ ಆತ್ಮಾವಲೋಕನಕ್ಕೆ ಕಾರಣವಾಗ ಬೇಕಾಧ ಒಂದು ಸೂಕ್ಷ್ಮ ಪ್ರಸಂಗದ ವಿಷಯವದು, ಆದರೆ ಇಲ್ಲಿ ಅದಾಗದೆ ಆತನ ತಪ್ಪನ್ನು ಬೆಂಬಲಿದಂತೆ ಆಗುತ್ತದೆ. ಹೀಗಾಗಿ ಇಂದು ಯಾವ ಮೌಲ್ಯಗಳು ಸಮಾಜದಲ್ಲಿ ಕ್ರೋಢೀಕರಣಗೊಳ್ಳುತ್ತಿವೆ, ಯಾಕಾಗಿ ಹೀಗೆಲ್ಲ ಆಗುತಿದೆ ? ಎಂಬುದು ಬಗೆ ಹರಿಯದ ಪ್ರಶ್ನೆಯಾಗಿಯೆ ಉಳಿಯುತ್ತದೆ. ಈ ಹಿಂದೆಯೂ ನಾಯಕ ನಟರ ಆರಾಧಿಕರಣವಿದ್ದರೂ ಈಗಿನಷ್ಟು ಅಸಹ್ಯದ ಮಟ್ಟ ಆಗ ತಲುಪಿರಲಿಲ್ಲ. ಯಾಕಾಗಿ ಈ ವಿವರಣೆಯೆಂದರೆ ಇಲ್ಲಿಯವರೆಗೆ ಅನೇಕ ಚಾರಿತ್ರಿಕ ನಟರು ತೀರಿ ಹೋಗಿದ್ದಾರೆ, ಅವರಿಗೆ ನಾಯಕ ನಟರಿಗೆ ಸಂದಷ್ಟು ಗೌರವ ಅವರಿಗೆ ಸಂದಿಲ್ಲವೆನ್ನುವುದು ವಿಷಾದಕರ ಸಂಗತಿ. ಸಿಂಹ ಆ ಪ್ರಚಾರ ಹೊಗಳು ಭಟ್ಟಂಗಿತನವನ್ನು ನಿರೀಕ್ಷಿಸಿದವರಲ್ಲ ಬಿಡಿ ಆ ಮಾತು ಬೇರೆ.

     ಸಿ.ಆರ್.ಸಿಂಹ ಎಂದಾಕ್ಷಣ ನಮ್ಮ ಸ್ಮೃತಿ ಪಟಲದ ಮುಂದೆ ಬರುವುದು ಅವರು ಕಮರ್ಸಿಯಲ್ ಚಿತ್ತಗಳಲ್ಲಿ ಅಭಿನಯಿಸಿದ ಖಳ, ಹಾಸ್ಯ ಮತ್ತು ಚಾರಿತ್ರಿಕ ಇಮೇಜಿನ ಪಾತ್ರಗಳು. ಸಾಮಾನ್ಯ ಪ್ರೇಕ್ಷಕರಿಗೆ ಅವರು ಈ ಪಾತ್ರಗಳ ಮೂಲಕ ಪರಿದಿತರು. ಸಿಂಹರವರ ಈ ಚಿತ್ರ ಪಾತ್ರಗಳನ್ನು ಗಮನಿಸುವುದಾದಲ್ಲಿ ಕಲೆವು ಪಾತ್ರಗಳನ್ನು ಹೊರತು ಪಡಿಸಿ ಉಳಿದವುಗಳು ಹತ್ತರೊಳಗೆ ಹನ್ನೊಂದು ಎಂಬಂತೆ ಚಿತ್ರಿಸಿದ ಪಾತ್ರಗಳು. ಅವುಗಳನ್ನು ಆಧಾರವಾಗಿಟ್ಟುಕೊಂಡು ನಾವು ಸಿಂಹರ ನಟನಾ ಬದುಕನ್ನು ಅಳೆಯ ಹೊರಡುವೆವಾದರೆ ಅವರ ನಟನಾ ಬದುಕಿಗೆ ನಾವು ನ್ಯಾಯ ಸಲ್ಲಿಸಿದಂತೆ ಆಗುವುದಿಲ್ಲ. ಅವರದು ಬಹುಮುಖ ವ್ಯಕ್ತಿತ್ವ. ಹೃದಯವಂತರೂ ಮತ್ತು ಆತ್ಮೀಯ ಮಾತುಗಾರರೂ ಆಗಿದ್ದ ಇವರು ತಮ್ಮ ಆಭಿನಯದ ಪಾತ್ರಗಳೊಳಗೆ ಇಳಿವ ಪರಿಯಲ್ಲಿ ಒಂದು ರೀತಿಯ ತಾದ್ಯಾತ್ಮತೆ ಮತ್ತು ವೃತ್ತಿನಿಷ್ಟೆ ಇರುತ್ತಿತ್ತು. ಇವರು ಮೊದಲು ರಂಗ ಕಲಾವಿದ ನಂತರ ಸಿನೆಮಾ ನಟ. ಇವರು ತಮ್ಮ ನಾಟಕ ರಂಗದ ನಟನಾ ಬದುಕನ್ನು ತಮ್ಮ ಹನ್ನೆರಡನೆ ವಯಸ್ಸಿಗೆ ಪ್ರಾರಂಭಿಸಿದರು. ಅಲ್ಲಿಂದ ತೀವ್ರ ಕಾಯಿಲೆ ಬೀಳುವ ವರೆಗೂ ಅವರ ನಟನಾ ಬದುಕು ಸಾಗಿ ಬಂದದ್ದು ಒಂದು ವಿಶೇಷ. ಅವರೊಬ್ಬ ರಂಗ ಮತ್ತು ಸಿನೆಮಾ ನಟ ಎನ್ನುವುದರ ಜೊತೆಗೆ ನಾಟಕ ಮತ್ತು ಸಿನೆಮಾಗಳ ನಿರ್ದೇಶನವನ್ನು ಮಾಡಿದ್ದಾರೆ. ಅಲ್ಲದೆ ಅವರೊಬ್ಬ ಚಿಂತಕ ವಾಗ್ಮಿ ಮತ್ತು ಬರಹಗಾರ ಸಹ ಆಗಿದ್ದರು.

     1971 ರಲ್ಲಿ ಬಿ.ಪಟ್ಟಾಭಿರಾಮ ರೆಡ್ಡಿ ನಿರ್ಮಾಣ ಮತ್ತು ನಿರ್ದೇಶನದ ಯೂ.ಆರ್.ಅನಂತಮೂರ್ತಿಯವರ ವಿವಾದಿತ ಕಾದಂಬರಿ ‘ಸಂಸ್ಕಾರ’ ಆಧಾರಿತ ಅದೇ ಹೆಸರಿನ ಕಲಾತ್ಮಕ ಚಿತ್ರದಲ್ಲಿ ಚಾರಿತ್ರಿಕ ಪಾತ್ರವೊಂದರಲ್ಲಿ ಅಭಿನಯಿಸುವ ಮೂಲಕ ಸಿನೆಮಾ ನಟನಾ ಬದುಕಿಗೆ ಕಾಲಿಟ್ಟರು. ಮುಂದೆ 1975 ರಲ್ಲಿ ಸಣ್ಣ ಕಥೆಗಳ ಜನಕ ಕನ್ನಡದ ಆಸ್ತಿ ಮಾಸ್ತಿಯವರ ಕೃತಿ ಕಾಕನ ಕೋಟೆ ಆಧಾರಿತ ಅದೇ ಹೆಸರಿನ ಚಿತ್ರ ನಿರ್ದೇಶಿಸಿದರು. ಅದು ರಾಜ್ಯ ಪ್ರಶಸ್ತಿಯನ್ನು ಪಡೆಯಿತು. ನಂತರ ಸಂಕಲ್ಪ ಚಿತ್ರದಲ್ಲಿಯೂ ಇವರದು ಗಮನಾರ್ಹ ಪಾತ್ರವಾಗಿತ್ತು. ಆದರೆ ಇವರನ್ನು ಕಮರ್ಸಿಯಲ್ ಚಿತ್ರರಂಗದಲ್ಲಿ ಬೇಡಿಕೆಯ ನಟರಾಗಲು ಕಾರಣ ಗರಂ ಹವಾ ಚಿತ್ರ ನಿರ್ದೇಶನ ಖ್ಯಾತಿಯ ಎಂ.ಎಸ್.ಸತ್ಯು ರವರ ನಿರ್ದೇಶನದ ಚಿತ್ರಗಳಾದ ಬರ ಮತ್ತು ಚಿತೆಗೂ ಚಿಂತೆ ಚಿತ್ರಗಳಲ್ಲಿಯ ಅಭಿನಯ. ಬರದಲ್ಲಿ ಇವರು ನಿರ್ವಹಿಸಿದ ಕಾರ್ಮಿಕ ನಾಯಕನ ಪಾತ್ರ ಮತ್ತು ಅದರಲ್ಲಿ ಸಂಭಾಷಣೆ ಒಪ್ಪಿಸಿದ ಪರಿ ಅಭಿನಯದ ಗತ್ತು ಅವರಿಗೆ ಕಮರ್ಸಿಯನಲ್ ಚಿತ್ರಗಳಲ್ಲಿ ಅಭಿನಯಿಸಲು ಅವಕಾಶದ ಬಾಗಿಲು ತೆರೆಯಲು ಕಾರಣವಾಯಿತು. ಆದರೆ ನಟನಾ ತಾಕತ್ತನ್ನು ಸಂಪೂರ್ಣವಾಗಿ ಬಳಸಿ ಕೊಳ್ಳಲು ಕನ್ನಡ ಚಿತ್ರರಂಗಕ್ಕೆ ಆಗಲೇ ಇಲ್ಲ ಎನ್ನುವುದು ಒಂದು ಖೇದದ ವಿಷಯ. ಆದರೂ ಅವರು ಅಭಿನಯಿಸಿದ ಖಳ, ಹಾಸ್ಯ ಮತ್ತು ಚಾರಿತ್ರಿಕ ಪಾತ್ರಗಳು ಅವುಗಳದೆ ಇತಿಮಿತಿಯಿದ್ದರೂ ಜನಮನ ರಂಜಿಸಿದವು. ತಮ್ಮ ನಟನಾ ಛಾಪಿನಿಂದ ಆ ಪಾತ್ರಗಳಿಗೆ ಆ ಮೂಲಕ ಚಿತ್ರಗಳಿಗೆ ಕಳೆಗಟ್ಟಿಸಿದ್ದರು. ಸುಮಾರು 150 ಮಿಕ್ಕು ಕನ್ನಡ ಚಿತ್ರಗಳಲ್ಲಿ ಅವರು ಅಭನಯಿ ಸಿದರು. ಚಿತ್ರರಂಗದಲ್ಲಿನ  ನಟನೆ ಅವರ ವೃತ್ತಿ ಯಾಗಿದ್ದರೆ ನಾಟಕಗಳಲ್ಲಿಯ ಅಭಿನಯ ಅವರ ಪ್ರವೃತ್ತಿಯಾಗಿತ್ತು. ಎರಡು ಕ್ಷೇತ್ರಗಳಲ್ಲಿಯೂ ಸಮಾನ ನಿಷ್ಟೆ ಅವರಿಗಿತ್ತು.

     ಎರಡು ರಂಗಗಳಲ್ಲೂ ಬೇಡಿಕೆಯಿದ್ದರೂ ಅವರ ಮೊದಲ ಆದ್ಯತೆ ನಾಟಕ ರಂಗವಾಗಿತ್ತು. ಈ ರಂಗದಲ್ಲಿ ಅವರೊಬ್ಬ ಅಭಿನಯ ದೈತ್ಯ. ಗಿರೀಶ ಕಾರ್ನಾಡ ವಿರಚಿತ ಬಿ.ವಿ.ಕಾರಂತ ನಿರ್ದೇಶನದ ತುಘಲಕ ನಾಟಕ ಇವರಿಗೆ ದೇಶದಾದ್ಯಂತ ಹೆಸರನ್ನು ತಂದು ಕೊಟ್ಟ ನಾಟಕ. ಅದೇ ಮಟ್ಟಿಗೆ ಹೆಸರು ತಂದದ್ದು ಪಿ.ಲಂಕೇಶ ವಿರಚಿತ ಸುಪ್ರಸಿದ್ಧ ನಾಟಕ ಸಂಕ್ರಾಂತಿ ನಾಟಕದ ಬಿಜ್ಜಳನ ಪಾತ್ರ. ನಮ್ಮಲ್ಲಿ ಏಕವ್ಯಕ್ತಿ ಪ್ರಧಾನ ನಾಟಕಗಳ ಪ್ರಯೋಗ ಇಲ್ಲವೆ ಇಲ್ಲವೆನ್ನುವಷ್ಟು ವಿರಳ. ಆದರೂ ಈ ಪ್ರಾಕಾರದ ನಾಟಕಗಳನ್ನು ಆಡಿ ಯಶಸ್ವಿಯಾದವರು. ಲಂಚಾವತಾರ ನಾಟಕ ಖ್ಯಾತಿಯ ಮಾಸ್ಟರ್ ಹಿರಣ್ಣಯ್ಯನವರಾದರೆ ಇನ್ನೊಬ್ಬರು ನಮ್ಮ ಈ ಸಿ.ಆರ್.ಸಿಂಹ. ಇವರು ಈ ಪ್ರಾಕಾರದಲ್ಲಿ ಆಡಿದ ನಾಟಕ ಟಿಪಿಕಲ್ ಟಿಪಿ ಕೈಲಾಸಂ ಆದರೆ ಇನ್ನೊಂದು ಕುವೆಂಪುರವರ ಬದುಕನ್ನು ಆಧರಿಸಿ ಆವರ ಭವ್ಯ ವ್ಯಕ್ತಿತ್ವವನ್ನು ಕಟ್ಟಿಕೊಡುವ ರಸಋಷಿ ನಾಟಕಗಳು. ಏಕ ವ್ಯಕ್ತಿ ಅಭಿನಯದ ನಾಟಕವಾಗಿ ಸತತ ಎರಡು ಗಂಟೆಗಳ ಕಾಲ ಪ್ರೇಕ್ಷಕ ವರ್ಗವನ್ನು ಹಿಡಿದಿಟ್ಟು ಕೊಳ್ಳುವುದು ಬಹಳ ಕಷ್ಟ, ಅದನ್ನು ಸಾಧ್ಯವಾಗಿಸಿ ದವರು ಸಿಂಹ. ಮುಂದೆ ಆ ರಸಋಷಿ ನಾಟಕ ಚಿತ್ರವಾಗಿಯೂ ತೆರೆಗೆ ಬಂತು. ಇವರು ತಮ್ಮ ಕೌಟುಂಬಿಕ ಮತ್ತು ವೃತ್ತಿ ಬದುಕಿನಲ್ಲಿ ತುಂಬ ಹುಮ್ಮಸಿನ, ಉತ್ಸಾಹ ತುಂಬಿದ ಲವಲವಿಕೆಯ ಸ್ವಭಾವದ ಹಸನ್ಮುಖಿ ವ್ಯಕ್ತಿ. ಮತ್ತೊಬ್ಬರನ್ನು ಗೌರವಿಸುವ ಇವರ ಗುಣ ವಿಶೇಷವಾದುದದಾಗಿತ್ತು. ಈತ ನಾಟಕ ರಂಗದ ಸಾಧ್ಯತೆಗಳನ್ನು ವಿಸ್ತರಿಸಿದ ಒಬ್ಬ ಅದ್ಭುತ ರಂಗ ಕಲಾವಿದ. ಆದರೆ ಇವರ ಯೋಗ್ಯತೆಗೆ ಸಿಗಬೇಕಾದ ಗೌರವ ಸಿಗಲಿಲ್ಲ ಎನ್ನುವುದು ವಿಷಾದಕರ ಸಂಗತಿ. ಇವರು ಹಿಂದಿ ನಾಟಕ ರಂಗ ಭೂಮಿಯ ನಾಸೀರುದ್ದೀನ್ ಶಹಾ, ಓಂಪುರಿ ಮತ್ತು ಸಯೀದ್ ಝಾಪ್ರಿಯವರ ಸಾಲಿನಲ್ಲಿ ನಿಲ್ಲಬಲ್ಲಂತಹ ನಟರಾಗಿದ್ದರು ಎನ್ನುವುದು ಇವರ ಬಗೆಗಿನ ಅಗ್ಗಳಿಕೆ.

     ಇವರು ಕನ್ನಡ ನಾಟಕಗಳಲ್ಲದೆ ಇಂಗ್ಲೀಷ್ ನಾಟಕಗಳಲ್ಲಿಯೂ ಅಭಿನಯಿಸಿದರು ಜೊತೆಗೆ ನಿರ್ದೇಶಿಸಿದರೂ ಕೂಡ. ತುಘಲಕ ನಾಟಕದ ಇಂಗ್ಲೀಷ ಆವೃತ್ತಿಯಲ್ಲಿಯೂ ಇವರು ಅಭಿನಯಿಸಿ ಜನ ಮನ್ನಣೆ ಪಡೆದರು. ಪಾತ್ರ ಪರಿ ಪೋಷಣೆಯಲ್ಲಿ ಎದುರಾಗುವ ಸವಾಲನ್ನು ಸ್ವೀಕರಿಸಿ ಅದನ್ನು ಮೀರ ಬರುವ ಛಾತಿ ಅವರಿಗಿತ್ತು. ಇವರಲ್ಲಿ ಹಾಸ್ಯ ಗುಣವಿದ್ದ ಕಾರಣಕ್ಕಾಗಿಯೋ ಏನೋ ಇವರು ನಿರ್ವಹಿಸಿದ ಹಾಸ್ಯ ಪಾತ್ರಗಳಲ್ಲಿ ಒಂದು ನೈಜತೆಯಿರುತ್ತಿತ್ತು. ಇವರು ಬಹದ್ದೂರ ಗಂಡು, ಮನವೆಂಬ ಮರ್ಕಟ, ಸೂರ್ಯ ಶಿಕಾರಿ, ಮ್ಯಾನ್ ಆಫ್ ಡೆಸ್ಟಿನಿ, ಓಥೆಲೋ ಮತ್ತು ಮಿಡ್ ಸಮರ್ಸ ನೈಟ್ ಡ್ರೀಮ್ ಮುಂತಾದ ಕನ್ನಡ ಮತ್ತು ಇಂಗ್ಲೀಷ್ ನಾಟಕಗಳಲ್ಲಿ ಅಭಿನಯಿಸಿದರು. ಅಲ್ಲದೆ ಶಂಕರನಾಗ ನಿರ್ದೇಶಬದ ಮಾಲ್ಗುಡಿ ಡೇಸ್ ಹಿಂದಿ ಧಾರಾವಾಹಿ ಮತ್ತು ನಾಗಾಭರಣ ನಿರ್ದೇಶನದ ಗೋರೂರು ರಾಮಸ್ವಾಮಿ ವಿರಚಿತ ಪ್ರವಾಸ ಕಥನ ಅಮೇರಿಕದಲ್ಲಿ ಗೋರೂರು ಕೃತಿಯಾಧಾರಿತ ಕನ್ನಡ ದಾರಾವಾಹಿಯಲ್ಲಿ ಅರುಂಧತಿ ನಾಗರೊಟ್ಟಿಗೆ ಅಭಿನಯಿಸಿದ್ದರು. ಇವಲ್ಲದೆ ಇನ್ನೂ ಹಲವು ಕನ್ನಡ ಮತ್ತು ಹಿಂದಿ ದಾರಾವಾಹಿಗಳಲ್ಲಿ ಅಭಿನಯಿ ಸಿದ್ದರು. ಮರಾಠಿ, ಹಿಂದಿ, ಬೆಂಗಾಲಿ ಮತ್ತು ಇಂಗ್ಲೀಷ ರಂಗಭೂಮಿಗಳ ಕುರಿತು ತಿಳಿದು ಕೊಂಡಿದ್ದು ಅಲ್ಲದೆ ಅವುಗಳ ಕುರಿತು ವಿಶದವಾಗಿ ಮಾತನಾಡ ಬಲ್ಲವರಾಗಿದ್ದರು. ಇವರಿಗೆ ಆಂಗ್ಲ ನಾಟಕಕಾರ ವಿಲಿಯಂ ಶೇಕ್ಸಪಿಯರ್ ಎಂದರೆ ಒಂದು ರೀತಿಯ ವಿಶೇಷ ಅಭಿಮಾನ. ಆತನ ಜೀವನ ಮತ್ತು  ಕೃತಿಗಳ ಕುರಿತು ಸಮರ್ಥವಾಗಿ ಮಾತನಾಡಬಲ್ಲವರಾಗಿದ್ದರು. ಇವರು ಉತ್ತಮ ಬರಹಗಾರರೂ ಆಗಿದ್ದು ವಿಜಯ ಕರ್ನಾಟಕ ಪತ್ರಿಕೆಗೆ ಆರು ವರ್ಷಗಳ ಕಾಲ ಕಲೆ, ಸಾಹಿತ್ಯ, ರಂಗಭೂಮಿಗಳ ಕುರಿತಂತೆ ಸಾಪ್ತಾಹಿಕದಲ್ಲಿ ಅಂಕಣ ಬರಹ ಬರೆದಿದ್ದರು.

     ಇವರ ಸಾಧನೆಯನ್ನು ಗಮನಿಸಿ ಕೇಂದ್ರ ಸಂಗೀತ ನಾಟಕ ಅಕಡೆಮಿ ಪ್ರಶಸ್ತಿ, ಶಂಕರೆಗೌಡ ರಂಗಭೂಮಿ ಸ್ರಶಸ್ತಿ, ಆರ್ಯಭಟ ಸ್ರಶಸ್ತಿ ಮುಂತಾದ ಪ್ರಶಸ್ತಿಗಳು ಅವರನ್ನರಸಿ ಬಂದವು. ಇವರು ತಮ್ಮ ತಮ್ಮ ಪ್ರಣಯರಾಜ ಶ್ರೀನಾಥ ಅಭಿನಯದ ಶಿಕಾರಿ ಮತ್ಗತು ನಟ ಕುಮಾರ ಬಂಗಾರಪ್ಪ ಅಭಿನಯದ ಚಿತ್ರವೊಂದನ್ನು ನಿರ್ದೇಶಿಸಿದರು. ದೈತ್ಯ ನಟನಾ ತಾಕತ್ತಿನ ರಂಗಭೂಮಿಯ ಸಿಂಹ ತನ್ನ ಗುಹೆಯಿಂದ ನಡೆದು ಹೋಗಿದೆ, ಇನ್ನು ಸಿಂಹ ಬರಿ ನೆನಪಷ್ಟೆ !

                                                                              ***

Rating
No votes yet

Comments

Submitted by partha1059 Mon, 03/03/2014 - 19:42

ಪಾಟೀಲರೆ ಸಿಂಹರ‌ ಬಗ್ಗೆ ಲೇಖನ‌ ಚೆನ್ನಾಗಿ ಮೂಡಿ ಬಂದಿದೆ,
ತಿಳಿಸಬೇಕಾದ‌ ವಿಷಯವೆಂದರೆ
ಸಿಂಹಗ‌ ಗುಹೆಯ‌ ಮುಂದೆ ನಾನು ದಿನಾ ಎರಡು ಮೂರು ಸಾರಿ ಓಡಿಯಾಡುತ್ತಿದ್ದೆ,
ಅಗಾಗ್ಯೆ ಕುತೂಹಲಕ್ಕೆ ತಿರುಗಿ ನೋಡುತ್ತಿದ್ದೆ ಸಿಂಹವೇನಾದರು ಹೊರಗೆ ಕಾಣಿಸುವುದೋ ಎಂದು,
ನಮ್ಮ‌ ಮನೆಯ‌ ಹತ್ತಿರವೇ ಅವರ‌ ಮನೆ,
ಅವರಿದ್ದ‌ ಸೇವಾಕ್ಷೇತ್ರಾ ಆಸ್ಪಿಟಲ್ ಸಹ‌ ಅಷ್ಟೆ ದಿನವೂ ನೊಡುವೆ
ಆದರೆ ಅವರ‌ ಅಂತ್ಯ‌ ಮಾತ್ರ‌ ಟೀವಿಗಳಲ್ಲೆ ನೋಡಿ ಅರಿತೆ, ನಂತರ‌ ಅವರ‌ ಮನೆ ಮುಂದೆ ಸೇರಿದ್ದ‌ ಗಂಭೀರ‌ ಜನಜಂಗುಳಿ ನೋಡಿದೆ.
ಅವರಿಗೆ ದೊಡ್ಡ‌ ದೊಡ್ಡ‌ ಆಸ್ಪತ್ರೆಗಳ‌ ಯೋಗ‌ ಅಥವ‌ 'ಸಿಂಗಪುರ‌'ಕ್ಕೆ ಚಿಕಿತ್ಸೆಗೆ ಕರೆದೊಯ್ಯುವ‌ ಯೋಗವಿರಲಿಲ್ಲ‌,
ಅಸ್ಪತ್ರೆಯ‌ ಮುಂದೆ ಅವರಿಗಾಗಿ ಯಾರು ಹೋಮವನ್ನು ಮಾಡಲಿಲ್ಲ‌,
ಮೌನವಾಗಿಯೆ ಹೊರಟುಹೋದರು.
ಸಾವು ಅನಿವಾರ್ಯ‌ ಅಂತ‌ ಅರ್ಥಮಾಡಿಕೊಂಡವರು ಅವರು ಅನ್ನಿಸುತ್ತೆ.
'ದೊಡ್ಡ‌' ದೊಡ್ಡ‌ ತಲೆಗಳು ನಮ್ಮ‌ ಮುಂದೆ ಉರುಳಿಹೋದವು. ಬಹಳಷ್ಟು ಜನರನ್ನು ಕಳೆದುಕೊಂಡೆವು. ..........
ಜಾತಸ್ಯ‌ ಮರಣಂ ದ್ಱುವಂ ಅನ್ನುವ‌ ಮಾತು ಸತ್ಯವಾಯಿತು

Submitted by H A Patil Patil Tue, 03/04/2014 - 13:28

In reply to by partha1059

ಪಾರ್ಥಸಾರಥಿ ಯವರಿಗೆ ವಂದನೆಗಳು
ಈ ಲೇಖನಕ್ಕೆ ತಾವು ಬರೆದ ಧೀರ್ಘ ಪ್ರತಿಕ್ರಿಯೆ ಸಂತಸ ತಂದಿತು. ನೀವು ದಿನಕ್ಕೆ ಎರಡು ಮೂರು ಬಾರಿ ಆ ಸಿಂಹದ ಗುಹೆಯ ಮುಂದೆ ಓಡಾಡುತ್ತಿದ್ದಿರೆಂದು, ಆದರೆ ಆ ಸಿಂಹದ ದರ್ಶನ ನಿಮಗಾಯಿತೊ ಇಲ್ಲವೊ ನನಗೆ ತಿಳಿಯಲಿಲ್ಲ. ನಮಗೆ ಸಿಂಹ ಬಿಡಿ ಗುಹೆಯ ದರ್ಶನವೂ ಇಲ್ಲ. ಏನು ಮಾಡುವುದು ಈ ಜಗದಲ್ಲಿ ಎಲ್ಲರೂ ಸಮಾನರು ಆದರೆ ಕೆಲವರು ಹೆಚ್ಚು ಸಮಾನರು ಇದು ಇಂದಿನ ಜಗದ ರೀತಿ. ತಮ್ಮ ಅನಿಸಿಕೆ ಸರಿ, ಅನೇಕ ಹಿರಿಯ ಕಲಾವಿದರು ಸಾಹಿತಿಗಳು ನಮ್ಮನ್ನಗಲಿ ಹೋಗುತ್ತಿದ್ದಾರೆ, ಒಬ್ಬೊಬ್ಬರು ಗತಿಸಿ ಹೋದಾಗಲೂ ಒಂದು ರೀತಿಯ ಶೂನ್ಯ ಆವರಿಸಿ ಅವರ ಬಗೆಗೆ ಅವರು ಅರ್ಥವಾದಷ್ಟನ್ನು ದಾಕಲಿಸ ಬೇಕೆನಿಸುತ್ತದೆ, ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

Submitted by H A Patil Patil Tue, 03/04/2014 - 13:32

In reply to by kavinagaraj

ಕವಿ ನಾಗರಾಜ ರವರಿಗೆ ವಂದನೆಗಳು
ತಮ್ಮ ಅನಿಸಿಕೆ ಸರಿ ಸಿಂಹ ಒಬ್ಬ ಅದ್ಭುತ ಕಲಾವಿದೆ ಎರಡು ಮಾತಿಲ್ಲ, ಆತ ಇನ್ನೊಮ್ಮೆ ಹುಟ್ಟಿ ಬರಲಿ. ಒಬ್ಬ ಪಾತ್ರಧಾರಿ ಮರೆಯಾಗುತ್ತಿದ್ದಂತೆ ಮತ್ತೊಬ್ಬ ಸಮರ್ಥ ಆ ಸ್ಥಾನವನ್ನು ತುಂಬಬೇಕು.ತಮ್ಮ ಅನಿಸಿಕೆಗೆ ಧನ್ಯವಾದಗಳು.