ಹೊಳೆ ದಾಟಿದ ಮೇಲೆ . . .
ಹೊಳೆ ದಾಟಿದ ಮೇಲೆ ಅಂಬಿಗನನ್ನು, ವಿದ್ಯಾಭ್ಯಾಸದ ನಂತರ ಶಿಷ್ಯ ಗುರುವನ್ನು, ಸಂಸಾರಿಯಾದ ಮಕ್ಕಳು ಪೋಷಕರನ್ನು, ಕಾಮವಾಂಛೆ ತೀರಿದ ನಂತರ ಪುರುಷ ಸ್ತ್ರೀಯನ್ನು, ಕೈಕೊಂಡ ಕೆಲಸ ಪೂರ್ಣವಾದ ನಂತರ ಕೆಲಸಕ್ಕೆ ನೆರವಾದವರನ್ನು ಮತ್ತು ರೋಗ ಗುಣವಾದ ನಂತರ ವೈದ್ಯನನ್ನು ಅವಗಣಿಸುವುದು ಸಾಮಾನ್ಯ ಎಂದು ವಿದುರನೀತಿಯಲ್ಲಿ ಉಲ್ಲೇಖವಿದೆ. ಸ್ವಾರ್ಥ ಪ್ರಧಾನವಾದಾಗ ಇಂತಹ ಅವಗಣನೆ ಕೆಲವೊಮ್ಮೆ ಕ್ರೂರ ರೂಪವನ್ನೂ ತಳೆಯಬಲ್ಲದು. ಇಂತಹ ಒಂದು ಕ್ರೂರ ಘಟನೆಯ ಕಥೆಯ ರೂಪ ಇಲ್ಲಿದೆ:
ಗಡಿಬಿಡಿಯಿಂದ ಸುಬ್ಬಣ್ಣ ಬಸ್ ನಿಲ್ದಾಣದ ಹತ್ತಿರ ಬರುವುದಕ್ಕೂ ಅವನು ಹತ್ತಬೇಕಾಗಿದ್ದ ಬಸ್ಸು ಅವನ ಕಣ್ಣ ಮುಂದೆಯೇ ಹೊರಟುಹೋಗುವುದಕ್ಕೂ ಸರಿಯಾಯಿತು. ಇನ್ನು ಮುಂದಿನ ಬಸ್ಸಿಗೆ ಏಳು ಗಂಟೆಯವರೆಗೆ ಕಾಯಬೇಕಲ್ಲಾ ಎಂದುಕೊಂಡವನು ಹೋಟೆಲಿನಲ್ಲಿ ಕಾಫಿ ಕುಡಿದು ಸಮೀಪದ ಪಾರ್ಕಿಗೆ ಹೋಗಿ ಅಲ್ಲಿನ ಬೆಂಚಿನ ಮೇಲೆ ಉಸ್ಸಪ್ಪಾ ಎಂದು ಕುಳಿತವನಿಗೆ ಹಿಂದಿನ ದಿನಗಳ ನೆನಪಾದವು. ಇಪ್ಪತ್ತು ವರ್ಷಗಳ ಕಾಲ ಕಛೇರಿ ಗುಮಾಸ್ತನಾಗಿದ್ದವನು ಬಡ್ತಿ ಹೊಂದಿ ಕಳೆದ ಹನ್ನೆರಡು ವರ್ಷಗಳಿಂದ ಸೂಪರಿಂಟೆಂಡೆಂಟ್ ಆಗಿದ್ದ. ೩೨ ವರ್ಷಗಳ ಸೇವೆಯಿಂದ ರಸ ಹೀರಿದ ಕಬ್ಬಿನಂತೆ ತೋರುತ್ತಿದ್ದ ಅವನು ಅಷ್ಟರಲ್ಲಿ ಇಪ್ಪತ್ತು ವರ್ಗಾವಣೆಗಳನ್ನು ಕಂಡಿದ್ದ. ನ್ಯಾಯ, ನೀತಿ, ನಿಯತ್ತು ಎಂದು ದುಡಿಯುವವರನ್ನು ಕಂಡರೆ ಯಾರಿಗೆ ತಾನೇ ಹೊಂದಾಣಿಕೆ ಆಗುತ್ತೆ? ಮೇಲಾಧಿಕಾರಿಗಳು, ರಾಜಕಾರಣಿಗಳ ಅವಕೃಪೆ, ಸಹೋದ್ಯೋಗಿಗಳ ಅಸಹಕಾರಗಳನ್ನು ಇಂತಹ ನಿಯತ್ತಿನ ಪ್ರಾಣಿಗಳು ಎದುರಿಸಬೇಕಾದದ್ದೇ. ಹೀಗಾಗಿ ಊರಿಂದ ಊರಿಗೆ ಅಲೆಯಬೇಕಾಗಿದ್ದ ಸುಬ್ಬಣ್ಣ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂದು ಕಳೆದ ಇಪ್ಪತ್ತು ವರ್ಷಗಳಿಂದಲೂ ಹೆಂಡತಿ ಪರಿಮಳ, ಮಕ್ಕಳು ಶ್ವೇತಾ ಮತ್ತು ಶಂಕರರನ್ನು ಹೊಸೂರಿನಲ್ಲೇ ಬಿಟ್ಟು, ಸೂಟ್ ಕೇಸ್ ಹಿಡಿದುಕೊಂಡು ತಾನೊಬ್ಬನೇ ವರ್ಗಾವಣೆ ಆದ ಸ್ಥಳಕ್ಕೆ ಸುತ್ತಾಡುತ್ತಿದ್ದ. ವಾರಕ್ಕೊಮ್ಮೆ ಊರಿಗೆ ಹೋಗಿ ಹೆಂಡತಿ ಮಕ್ಕಳೊಡನೆ ಕಳೆದು ಬರುತ್ತಿದ್ದ. ಸುತ್ತಾಟ, ಹೋಟೆಲ್ ಊಟ, ಕೆಲಸದ ಒತ್ತಡ ಎಲ್ಲವೂ ಸೇರಿ ಆರೋಗ್ಯವೂ ಅಷ್ಟಕ್ಕಷ್ಟೇ ಆಗಿದ್ದ ಸುಬ್ಬಣ್ಣ ದೈಹಿಕವಾಗಿ, ಮಾನಸಿಕವಾಗಿ ಸೋತುಹೋಗಿದ್ದ. ಕಷ್ಟಪಟ್ಟು ಸಾಲ-ಸೋಲ ಮಾಡಿ ೧೫ ವರ್ಷದ ಹಿಂದೆ ಊರಿನಲ್ಲಿ ತನ್ನದೇ ಆದ ಒಂದು ಪುಟ್ಟ ಮನೆ ಕಟ್ಟಿದ್ದ ಸುಬ್ಬಣ್ಣ, ಮನೆಯ ಖರ್ಚಿನ ಜೊತೆಗೆ ಸಾಲದ ಕಂತುಗಳು, ಬಡ್ಡಿಗೆ ಹಣ ಹೊಂದಿಸುವಲ್ಲಿ ಹೈರಾಣಾಗಿದ್ದ. ಕಳೆದ ವರ್ಷವಷ್ಟೇ ಮನೆ ಸಾಲ ತೀರಿತ್ತು. ಮಗಳ ಮದುವೆಯೂ ಆಗಿ ಆಕೆ ಗಂಡನೊಂದಿಗೆ ನರಸಾಪುರದಲ್ಲಿ ಸುಖವಾಗಿದ್ದುದು ಮನಸ್ಸಿಗೆ ಕೊಂಚ ನೆಮ್ಮದಿ ಕೊಟ್ಟಿತ್ತು. ಗ್ರಾಜುಯೇಟ್ ಮಗ ಶಂಕರನಿಗೆ ನೌಕರಿ ಸಿಕ್ಕಿರದಿದ್ದುದೇ ಒಂದು ಚಿಂತೆಯಾಗಿದ್ದು, ಅದಕ್ಕಾಗಿ ಅವರಿವರ ಕೈಕಾಲು ಹಿಡಿದರೂ ಪ್ರಯೋಜನವಾಗಿರಲಿಲ್ಲ. ಅವನಿಗೊಂದು ನೌಕರಿ ಸಿಕ್ಕಿಬಿಟ್ಟಿದ್ದರೆ, ಇಷ್ಟು ವರ್ಷ ಕಷ್ಟ ಪಟ್ಟಿದ್ದಕ್ಕೂ ಸಾರ್ಥಕವಾಗುತ್ತಿತ್ತು ಎಂದು ಅವನ ಮನ ಯೋಚಿಸುತ್ತಿತ್ತು.
ಕತ್ತಲಾಗುತ್ತಾ ಬಂದು ಪಾರ್ಕಿನಲ್ಲಿದ್ದ ಜನರು ಖಾಲಿಯಾಗುತ್ತಿದ್ದರು. ಗಡಿಯಾರ ಏಳು ಗಂಟೆಗೆ ಹತ್ತು ನಿಮಿಷವಿರುವುದನ್ನು ತೋರಿಸುತ್ತಿತ್ತು. ಸುಬ್ಬಣ್ಣ ಜೋಳಿಗೆಯಂತಿದ್ದ ಬ್ಯಾಗನ್ನು ಹೆಗಲಿಗೇರಿಸಿ ಬಸ್ ನಿಲ್ದಾಣಕ್ಕೆ ಬಂದಾಗ ಅಪರೂಪಕ್ಕೆ ಬಸ್ಸು ಸರಿಯಾದ ಸಮಯಕ್ಕೆ ಬಂತು. ಟಿಕೆಟ್ ಪಡೆದು ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತ. ಹೊಸೂರಿಗೆ ಸುಮಾರು ಎರಡೂವರೆ ಗಂಟೆಗಳ ಪ್ರಯಾಣ. ಸದ್ಯ, ಇನ್ನು ಆರು ತಿಂಗಳಿಗೆ ರಿಟೈರಾಗುತ್ತಿದ್ದು, ಈ ಪ್ರಯಾಣ, ಒದ್ದಾಟ ತಪ್ಪಿ, ಉಪ್ಪೋ, ಗಂಜಿಯೋ ಬರುವ ಪೆನ್ಶನ್ನಿನಲ್ಲಿ ಮನೆ ಊಟ ಮಾಡಿಕೊಂಡು ಮನೆಯವರೊಂದಿಗೆ ಇರಬಹುದೆಂದುಕೊಂಡಾಗ ಸಂತೋಷವಾಗುತ್ತಿತ್ತು. ಮನೆ ತಲುಪಿದಾಗ ರಾತ್ರಿ ಒಂಬತ್ತೂ ಮುಕ್ಕಾಲು ಆಗಿತ್ತು. ತರಲೆ ಭಾವಮೈದುನ ಕಿಟ್ಟನೂ ಮನೆಗೆ ಬಂದಿದ್ದ. ಎಲ್ಲರೂ ಹರಟೆ ಹೊಡೆಯುತ್ತಿದ್ದರು. ಕಿಟ್ಟ ಬಂದಾಗಲೆಲ್ಲಾ ಏನೇನೋ ಹೆಂಡತಿ, ಮಕ್ಕಳ ತಲೆಗೆ ತುಂಬಿ ಮನಸ್ಸು ಕೆಡಿಸುತ್ತಿದ್ದರಿಂದ ಸುಬ್ಬಣ್ಣನಿಗೆ ಅವನನ್ನು ಕಂಡರೆ ಅಷ್ಟಕ್ಕಷ್ಟೇ ಇದ್ದರೂ ಔಪಚಾರಿಕವಾಗಿ ಮಾತನಾಡಿಸುತ್ತಿದ್ದ.
ಊಟ ಮಾಡುತ್ತಾ ಇದ್ದಾಗ ಕಿಟ್ಟ ಹೇಳಿದ: ಆ ಮೂಲೆಮನೆ ವೆಂಕಟೇಶ, ಅದೇ ಹೆಲ್ತ್ ಇನ್ಸ್ಪೆಕ್ಟರ್ ಆಗಿದ್ದೋನು, ಆಕ್ಸಿಡೆಂಟ್ ಆಗಿ ಸತ್ತಿದ್ದನಲ್ಲಾ, ಅವನ ಮಗನಿಗೆ ಅನುಕಂಪದ ಆಧಾರದ ಮೇಲೆ ಡಿ.ಸಿ. ಆಫೀಸಿನಲ್ಲಿ ಅಸಿಸ್ಟೆಂಟ್ ಆಗಿ ಅಪಾಯಿಂಟ್ ಆಯಿತು. ನಿನ್ನೆ ನೌಕರಿಗೆ ಸೇರಿದ.
ಪರಿಮಳ: ಹಾಗಾದರೆ ವೆಂಕಟೇಶನ ಹೆಂಡತಿಗೆ ಪೆನ್ಶನ್ ಬರಲ್ಲವಾ?
ಕಿಟ್ಟ: ಎಲ್ಲಾ ಬರುತ್ತೆ. ಪೆನ್ಶನ್, ಗ್ರಾಚುಯಿಟಿ, ಬರಬೇಕಾಗಿದ್ದ ಎಲ್ಲ ಸವಲತ್ತೂ ಬಂದೇ ಬರುತ್ತೆ. ವೆಂಕಟೇಶ ಸತ್ತ ಅನ್ನೋದೊಂದೇ ಹೊರತು ಅವನ ಮನೆಯವರಿಗೆ ಇನ್ನೂ ಅನುಕೂಲವೇ ಆಯಿತು. ಮಗನಿಗೆ ಹೊಸ ನೌಕರಿ, ಒಳ್ಳೆ ಸಂಬಳ, ಜೊತೆಗೆ ವೆಂಕಟೇಶನ ಹೆಂಡತಿಗೆ ಸಾಯೋವರೆಗೂ ಪೆನ್ಶನ್ನು! ರಾಜರ ಹಂಗೆ ಇರಬಹುದು.
ಸುಬ್ಬಣ್ಣ: ಏನೋ ನೀನು ಹೇಳೋದು? ಹೆಂಡತಿ, ಮಕ್ಕಳು ಚೆನ್ನಾಗಿರಬೇಕು ಅಂದ್ರೆ ಗಂಡ ಸತ್ತರೂ ಪರವಾಗಿಲ್ಲ ಅಂತ ಹೇಳ್ತೀಯಲ್ಲೋ!
ಕಿಟ್ಟ: ಇನ್ನೇನು ಬಿಡಿ ಭಾವಾ. ಆ ಕುಡುಕ ವೆಂಕಟೇಶ ಹೆಚ್ಚು ದಿನ ಏನೂ ಬದುಕ್ತಾ ಇರಲಿಲ್ಲ. ನೂರೆಂಟು ಕಾಯಿಲೆ ಅವನಿಗೆ. ಕೆಲಸದಲ್ಲಿದ್ದಾಗಲೇ ಸತ್ತಿದ್ದರಿಂದ ಮನೆಗೆ ಉಪಕಾರ ಆಯ್ತು ಬಿಡಿ.
ಸುಬ್ಬಣ್ಣ ಮಾತು ಮುಂದುವರೆಸದೆ ಊಟ ಮಾಡಿದವನೇ ಸುಸ್ತಾಗಿದ್ದರಿಂದ ಹೋಗಿ ಮಲಗಿಬಿಟ್ಟ. ಮಲಗಿದರೂ ಮನಸ್ಸು ಮಲಗಲಿಲ್ಲ. ಮಗನಿಗೆ ಒಂದು ನೌಕರಿ ಸಿಕ್ಕಿದ್ದರೆ ಎಷ್ಟು ಚೆನ್ನಾಗಿತ್ತು, ಸುಖವಾಗಿ ಕಣ್ಣು ಮುಚ್ಚಬಹುದಿತ್ತು. ಮಿನಿಸ್ಟರು ಕೊಮಾರೇಗೌಡರು ೫ ಲಕ್ಷ ಕೊಟ್ಟರೆ ಡೈರಿಯಲ್ಲಿ ನೌಕರಿ ಕೊಡಿಸ್ತೀನಿ ಅಂದಿದ್ರು. ಸಾಲ ಸೋಲಾನಾದ್ರೂ ಮಾಡಿ ಹಣ ಹೊಂದಿಸಿ ಅವನಿಗೆ ಒಂದು ಕೆಲಸ ಅಂತ ಕೊಡಿಸಬೇಕು ಅಂತೆಲ್ಲಾ ಮನ ಯೋಚಿಸುತ್ತಿತ್ತು. ಹಾಗೆಯೇ ನಿದ್ರೆ ಆವರಿಸಿತು. ಗಾಢ ನಿದ್ದೆಯಲ್ಲಿದ್ದ ಸುಬ್ಬಣ್ಣನಿಗೆ ಮಧ್ಯರಾತ್ರಿಯಲ್ಲಿ ಏನೋ ಶಬ್ದವಾದಂತಾಗಿ ಎಚ್ಚರವಾಯಿತು. ಲೈಟು ಹಾಕಲು ಎದ್ದವನಿಗೆ ಹಿಂಬದಿಯಿಂದ ತಲೆಗೆ ದೊಣ್ಣೆಯಿಂದ ಬಲವಾದ ಪೆಟ್ಟು ಬಿದ್ದಿತ್ತು. ಕುಸಿದು ಬೀಳುತ್ತಾ 'ಅಮ್ಮಾ' ಎಂದದ್ದೇ ಅವನ ಕೊನೆಯ ಮಾತಾಯಿತು.
ಓದುಗರೇ, ಹೇಳಬೇಕಾಗಿದ್ದಷ್ಟನ್ನು ಹೇಳಿಯಾಗಿದೆ. ಶೇಷ ಭಾಗವನ್ನು ತಮ್ಮ ವಿವೇಚನೆಗೆ ತಕ್ಕಂತೆ ಮುಂದುವರೆಸಿಕೊಳ್ಳಬಹುದು.
-ಕ.ವೆಂ.ನಾಗರಾಜ್.
Comments
ಉ: ಹೊಳೆ ದಾಟಿದ ಮೇಲೆ . . .
ಕವಿನಾಗರಾಜರು ಕತೆ ಬರೆಯಲು ಪ್ರಾರಂಭಿದರು ಅಂತೀನಿ ! ಚೆನ್ನಾಗಿದೆ ನಿರೂಪಣೆ,
ಇದೇ ವಸ್ತುವಿನ ಭಿನ್ನ ರೂಪದ ಕತೆ ಒಂದಿತ್ತು, ಅದರಲ್ಲಿ ತಂದೆಯನ್ನು ಮನ ಆಸ್ಪತ್ರೆಗೆ ಸೇರಿಸಿದ್ದಾನೆ ಸೀರಿಯಸ್ ಅಂತ, ಡಾಕ್ಟರ್ ಹೇಳಿದ್ದಾರೆ ನಿನ್ನ ತಂದೆ ಜಾಸ್ತಿ ಅಂದರೆ 48 ಗಂಟೆ ಇರಬಹುದು ಎಲ್ಲರಿಗೂ ಹೇಳಿಬಿಡಿ ಎಂದು, ಆಗ ಮಗ ಡಾಕ್ಟರನ್ನು ಕೇಳುತ್ತಾನೆ, ಡಾಕ್ಟರ್ ಹಾಗಿದ್ದರೆ ಇಂದೆ ಉಸಿರಾಟಕ್ಕೆ ಹಾಕಿರುವ ಪೈಪ್ ತೆಗೆದರೆ ಆಗಲ್ವ ಎಂದು.
ಮರುದಿನ ತಂದೆ ನಿವೃತ್ತಿಯ ದಿನ ಸರ್ವೀಸಿನ ಕಡೆಯ ದಿನ, ಸರ್ವೀಸಿಅಲ್ಲಿರುವಾಗಲೆ ಸತ್ತರೆ ಮಗನಿಗೆ ಕೆಲಸ ಎಂದು ಕಾನೂನು !
In reply to ಉ: ಹೊಳೆ ದಾಟಿದ ಮೇಲೆ . . . by partha1059
ಉ: ಹೊಳೆ ದಾಟಿದ ಮೇಲೆ . . .
ಅನುಕಂಪದ ಆಧಾರದ ನೌಕರಿಗಾಗಿ ತಂದೆಯನ್ನು ಕೊಂದ ಹಲವು ನೈಜ ಘಟನೆಗಳು ನನ್ನ ಸೇವಾವಧಿಯಲ್ಲಿ ಗಮನಿಸಿದ್ದೇನೆ. ಇದೂ ಒಂದು ನೈಜ ಘಟನೆಗೆ ಕಥಾಲೇಪ ಕೊಟ್ಟಿರುವುದಷ್ಟೆ. ಧನ್ಯವಾದ, ಪಾರ್ಥರೇ.
ಉ: ಹೊಳೆ ದಾಟಿದ ಮೇಲೆ . . .
ಕವಿಗಳೆ ನಮಸ್ಕಾರ. ವಾಸ್ತವಗಳ ತಣ್ಣಗಿನ ಕ್ರೌರ್ಯ ಕೆಲವೊಮ್ಮೆ ದಿಗ್ಬ್ರಮೆ ಹುಟ್ಟಿಸುವುದು ಸತ್ಯ. ಅದರಲ್ಲೂ ವಿಪರ್ಯಾಸವೆಂದರೆ ಯಾರು ಒಳಿತು ಮಾಡಲು ನಿಷ್ಟೆಯಿಂದ ಜೀವ ತೇದಿರುತ್ತಾರೊ ಅವರಿಗೆ ಹೆಚ್ಚು ಕೆಡುಕುಂಟಾಗುವ ಸಾಧ್ಯತೆ ಹೆಚ್ಚು. ಮೇಲೆರುವತನಕ ಏಣಿ ಬಳಸಿ ನಂತರ ಅದನ್ನು ಒದೆಯುವ ಮನಸತ್ವ ಸಂಬಂಧಗಳ ಸೂಕ್ಷ್ಮ ಸ್ತರವನ್ನು ದಾಟಿ ತ್ರಿವಿಕ್ರಮ ರೂಪ ತಾಳುವುದನ್ನು ಕಂಡಾಗ ಯಾಂತ್ರಿಕ ಬದುಕಿನ ಈ ಸ್ವಾರ್ಥಲಾಲಸೆ ಖೇದ ಹುಟ್ಟಿಸದೆ ಇರದು. ಬಹುಶಃ ಸೆಂಟಿಮೆಂಟಲ್ಲಿಗಿಂತ ಪ್ರಾಕ್ಟಿಕ್ಯಾಲಿಟಿ ಮುಖ್ಯ ಎಂದು ಹೊರಟವರಿಗೆ ಇದು ತಪ್ಪು ಎನ್ನುವ ಭಾವನೆಯೂ ಇರಲಾರದೇನೊ. ಕಾಲಾಯ ತಸ್ಮೈ ನಮಃ....!
In reply to ಉ: ಹೊಳೆ ದಾಟಿದ ಮೇಲೆ . . . by nageshamysore
ಉ: ಹೊಳೆ ದಾಟಿದ ಮೇಲೆ . . .
ಇದರ ಮೂಲ ನಮ್ಮ ಶಿಕ್ಷಣ ಪದ್ಧತಿಯ ರೀತಿ, ಮನೆಯಲ್ಲಿನ, ಸುತ್ತಲಿನ ಪರಿಸರದಲ್ಲಿನ ಪ್ರಭಾವ ಕಾರಣ, ನಾಗೇಶರೇ. ಇಂತಹ ಹಲವಾರು ಘಟನೆಗಳ ಬಗ್ಗೆ ಪ್ರತ್ಯಕ್ಷವಾಗಿ ಕಂಡವನು, ತಿಳಿದವನು ನಾನು! ನನ್ನ ಸೇವಾಯಾತ್ರೆಯ ಮಹಿಮೆ! ಧನ್ಯವಾದಗಳು,
ಉ: ಹೊಳೆ ದಾಟಿದ ಮೇಲೆ . . .
ಕಥೆಯ ಹಂದರದ ಸುಬ್ಬಣ್ಣನ ಮನದ ಬಗ್ಗೆ ಆಲೊಚಿಸಿ ಖೇದವೆನಿಸುತ್ತದೆ, ಒಂದು ಕಡೆ ನೋವುಂಡ ಜೀವ, ಇನ್ನೊಂದೆಡೆ ಕಿಟ್ಟನಂತವರ ಮಾತಿಗೆ ತಲೆಆಡಿಸುವ ಜನ, ಕಥೆ ಮನಮುಟ್ಟುವಂತಿದೆ.
ನವೀನ್ ಜೀ ಕೇ
In reply to ಉ: ಹೊಳೆ ದಾಟಿದ ಮೇಲೆ . . . by naveengkn
ಉ: ಹೊಳೆ ದಾಟಿದ ಮೇಲೆ . . .
ನಿಜ, ನವೀನರೇ. ಸಮಾಜವನ್ನು ಸ್ವಾರ್ಥಪರವಾಗಿಸುವ ವಾತಾವರಣವೇ ಇಂದು ಎಲ್ಲೆಲ್ಲೂ ವಿಜೃಂಭಿಸುತ್ತಿದೆ. ಪರಿಹಾರ ರೂಪಿಸಬೇಕಾಗಿರುವವರು ನಾವೇನೇ!