ಒಂದು ಕೊಬ್ಬಿನ ಕಥೆ !

ಒಂದು ಕೊಬ್ಬಿನ ಕಥೆ !

 

ನಿಮಗೆ ಬಲೇ ಕೊಬ್ಬು ಅಂತ ಎರಡು ತಿಂಗಳ ಹಿಂದೆ ಡಾಕ್ಟರ್ ಉವಾಚ ! ಮೊದ ಮೊದಲು ತುಂಬಾ ಯೋಚನೆ ಮಾಡಿದೆ. ಹೇಗೆ ಕರಗಿಸಲಿ ಅಂತ. ಬಜ್ಜಿ, ಬೋಂಡ ತಿನ್ನೋವಾಗ, ಮೊಸರನ್ನಕ್ಕೆ ಉಪ್ಪಿನಕಾಯಿ ಸುರಿದುಕೊಂಡಾಗ, ಉಪ್ಪಿಟ್ಟಿಗೆ ಕೊಬ್ಬರಿ ತುಂಬಿಕೊಂಡು ತಿನ್ನುವಾಗ ಹೀಗೆ ಯಾವಾಗಲೂ ಯೋಚನೆ !! ಮನೆ ಹಾಳಾಗ ಪರಿಹಾರ ಹೊಳೀವಲ್ದು !

ಕೊಬ್ಬು ಅಂದರೇನು? ಸಲೀಸಾಗಿ ಕರಗದ ಖಾದ್ಯ ಹೊಟ್ಟೆ ಸೇರಿ ಅಲ್ಲೇ ಬಿಡಾರ ಹೂಡಿ, ಹೊಟ್ಟೆಯ ಸುತ್ತ ವರ್ತುಲಾಕಾರವಾಗಿ ಕೋಟೆ ಕಟ್ಟಿ, ಎಲ್ಲ ಕೋಶಗಳನ್ನು ಸಂರಕ್ಷಿಸುತ್ತ ಮನುಜ ಶೋಕವನ್ನು ಹೆಚ್ಚಿಸುತ್ತದೆ ! ಈ ಕೊಬ್ಬಿದ ಬೊಜ್ಜನ್ನು ಕರಗಿಸಲು ಒಂದು ಅದ್ಬುತ ಆಲೋಚನೆ ಮೂಡಿ ಬಂತೊಂದು ದಿನ. ಶವರ್’ನಿಂದ ಧುಮ್ಮಿಕ್ಕಿ ಹರಿವ ಬಿಸಿ ಬಿಸಿ ನೀರನ್ನು ನೇರವಾಗಿ ಹೊಟ್ಟೆಯ ಮೇಲೆ ಬೀಳುವಂತೆ ಮಾಡಿದೆ. ನೀರು "ಸಾರ್ವತ್ರಿಕ ದ್ರಾವಕ" ತಾನೇ. ಎಂತೆಂತಹ ಕಲ್ಲು ಹೃದಯವನ್ನೂ ಕರಗಿಸೋ ಈ ದ್ರಾವಕ ನನ್ ಕೊಬ್ಬನ್ನ ಕರಗಿಸೋದಿಲ್ವೇ? ದಿನವೂ ೨೦ ನಿಮಿಷ ಬಚ್ಚಲ ವ್ಯಾಯಾಮ. ಒಂದು ತಿಂಗಳು ಮಾಡಿದೆ. improvement ಇದೆ ಅನ್ನಿಸಿತು. ಕೊಬ್ಬು ಇದ್ದಂತೇ ಇದ್ದರೂ ’ವಾಟರ್ ಬಿಲ್’ ಮಾತ್ರ ಏರಿತ್ತು. ಒಂದೆಡೆ ಬಿಲ್ಲು. ಮತ್ತೊಂದೆಡೆ ಕೆಂಪು ಕೆಂಪು ಹೊಟ್ಟೆ. ಬಹುಶ: ಕೊಳೆ ಕಿತ್ತಿಕಿತ್ತಿ ಬಂದಿತ್ತು ಅನ್ನಿಸುತ್ತೆ. ಇವೆರಡೂ ಎದ್ದು ಕಂಡ improvement’ಗಳು !

ನೀರು ’ಸಾರ್ವತ್ರಿಕ ದ್ರಾವಕ’ ಅಲ್ಲ ಬದಲಿಗೆ ’ಸಾರ್ವತ್ರಿಕ ದ್ರಾವಕ’ ಮೈನಸ್ ಒಂದು ಎಂಬ ಅದ್ಬುತ ಸಂಶೋಧನೆಗೆ ರಾಸಾಯನಿಕ ಶಾಸ್ತ್ರದ ವಿಭಾಗದ ನೋಬಲ್ ಬಹುಮಾನ ಸಿಗಬಹುದು ಎಂಬ ಆಶಯದಿಂದ ಕರೆಯನ್ನು ಸ್ವೀಕರಿಸಲು ಫೋನ್ ಬಳಿಯೇ ಕೆಲವು ದಿನ ಕೂತಿದ್ದೆ. ಎದ್ದು ಓಡಾಡುವುದು ಕಡಿಮೆ ಆಗಿದ್ರಿಂದ ಕೊಬ್ಬು ಕೊಂಚ ಹೆಚ್ಚಿತು. ಹಾಗಾಗಿ ಈಗ ಡಯಟ್ಟು.

ಕೆಟ್ ಮೇಲ್ ಬುದ್ದಿ ಬಂತು ಅಂತ ಈ ನಡುವೆ ಭಯಂಕರ ಡಯಟ್ಟು. ನಾವು ತಿನ್ನೋದು ಹೊಟ್ಟೆ ಸೇರೋ ಮುನ್ನ ಬಾಯಿಗೆ ತಾನೇ ಶುರುವಾಗೋದು. ಹಾಗಾಗಿ ವ್ಯಾಯಾಮ ಬಾಯಿಂದ ಶುರು. ಖಾರದ ಅವಲಕ್ಕಿ, ಬೀದಿ ಬೋಂಡ ಇತ್ಯಾದಿಗಳನ್ನು ಸ್ವಲ್ಪ ದಿನಕ್ಕೆ ಪಕ್ಕಕಿಟ್ಟು ನೋಡೋಣ ಎನ್ನಿಸಿತು.

ಹೀಗೆ ಯಾರೋ ಘನ ಸ್ನೇಹಿತರು ಆರೊಗ್ಯಕ್ಕೆ ಒಳ್ಳೆಯದು ಅಂತ ಬಿಟ್ಟಿ ಸಲಹೆ ನೀಡಿದರು ಅಂತ ಗೋಡಂಬಿ, ದ್ರಾಕ್ಷಿ, ಪಿಟ್ಯಾಶೂ, ಇತ್ಯಾದಿ ಇತ್ಯಾದಿಗಳನ್ನೆಲ್ಲ ಪ್ಯಾಕ್ ಮಾಡಿರೋ ಒಂದು ರೀತಿಯ mixture ಮಾಲ್’ನಲ್ಲಿ ನೋಡಿದ್ದೆ.  ಮುಳುಗುತ್ತಿರುವವನಿಗೆ ಹುಲುಕಡ್ಡಿ ಆಸರೆಯೂ ದೊಡ್ಡದಂತೆ. ಮೊದಮೊದಲಿಗೆ ಈ ಮಾತು ನನಗೆ ಅರ್ಥವಾಗಿರಲಿಲ್ಲ. ನಾನು ಅಂದುಕೊಂಡಿದ್ದೆ ಮುಳುಗುತ್ತಿರೋವಾಗ ಹ್ಯಾಗಿದ್ರೂ ಹೋಗಿಬಿಡ್ತಾನಲ್ಲ, ಹಾಗೆ ಹೋಗೋ ಮುನ್ನ ಹುಲುಕಡ್ಡಿ ಸಿಕ್ರೆ ತಿನ್ಕೊಂಡ್ ಹೋಗಬಹುದು ಅಂತ. ಆಮೇಲಾಮೇಲೆ ಅರ್ಥವಾಯ್ತು ಬಿಡಿ.

ಒಂದು ದಿನ ಹೀಗೇ ಮಿಕ್ಸ್ ತಿನ್ನುತ್ತ ಅಂತರ್ಜಾಲದಲ್ಲಿ ವಿದೇಶೀಯ ಸ್ವಾರಸ್ಯಕರ ಸುದ್ದಿಗಳನ್ನು ಓದುತ್ತಿದ್ದೆ. ಒಬ್ಬಾತ ವೈನ್ ಗ್ಲಾಸಿನಲ್ಲಿ ಉಂಗುರನ್ನು ಹಾಕಿ ತನ್ನ ಪ್ರಿಯತಮೆಗೆ ನೀಡಿ ಆಕೆಯ ಬಾಯಿಗೆ ಅದು ಸಿಕ್ಕಾಗ ಪ್ರಪೋಸ್ ಮಾಡಿದನಂತೆ! ಅಬ್ಬಬ್ಬಾ! ಅಲ್ಲಾ, ಅಪ್ಪಿ-ತಪ್ಪಿ ಗಂಟಲಿಗೆ ಸಿಕ್ಕಿಕೊಂಡಿದ್ದರೆ ಗತಿ ಏನು? ಅಥವಾ ಹೊಟ್ಟೆಗೇ ಸೇರಿದ್ದರೆ? ಏನೋ ಹುಚ್ಚಾಟ. ಇನ್ನೊಂದು ಸುದ್ದಿ ಓದಿದೆ. ಉಪಯೋಗಿಸಿದ ಬಟ್ಟೆಗಳನ್ನು ದಾನ ಮಾಡುವ ಭರದಲ್ಲಿ ಯಾರೋ ಪ್ಯಾಂಟ್ ಜೇಬಿನಲ್ಲಿದ್ದ ಸಾವಿರ ಡಾಲರ್ ಗೊತ್ತಿಲ್ಲದೆ ಕೊಟ್ಟುಬಿಟ್ಟರಂತೆ. ಇನ್ನೊಬ್ಬರು ಯಾರೋ ಇದಕ್ಕಿಂತ್ಲೂ ಸರಿ. ಮನೆಯಲ್ಲಿದ್ದ ಹಳೇ ಬೀರುವನ್ನು ವಿಲೇವರಿ ಮಾಡಿದರಂತೆ. ಅದನ್ನು ತೆಗೆದುಕೊಂಡ ಹೋದ ಭೂಪತಿಗೆ ಆ ಬೀರುವಿನಲ್ಲಿ ತೊಂಬತ್ತು ಸಾವಿರಾರು ಡಾಲರ್ ಸಿಕ್ಕಿತಂತೆ !

ಆಗ ಒಂದು ಕರೆ ಬಂತು. ಮಾತನಾಡುತ್ತ ಮಿಕ್ಸ್ ತಿನ್ನುತ್ತಲೇ ಇದ್ದೆ. ಸುದ್ದಿಗಳನ್ನು ಓದುತ್ತಲೇ ಇದ್ದೆ. ತ್ರೀ-ಇನ್-ಒನ್ ಕೆಲಸ. ಫೋನ್ ಕೆಳಗಿಟ್ಟೆ, ಬಾಯಿಂದ ಖಟುಮ್ ಎಂಬ ಜೋರು ಸದ್ದು. ತಿನ್ನುತ್ತಾ ಇದ್ದದ್ದೇ ನಟ್ಟು-ಬೋಲ್ಟ್’ನಂತೆ ಗಟ್ಟಿಯಾಗಿದ್ದ Nuts. ಆಗ್ಲಿಂದ ಕಟುಮ್ ಕುಟುಮ್ ಎಂಬ ಶಬ್ದ ಬರುತ್ತಲೇ ಇತ್ತು, ಆದರೆ ಈ ಸದ್ದು ಸ್ವಲ್ಪ ಹೆಚ್ಚಾಗೇ ಅಂದರೆ ಕಟುಮ್ ಬದಲಿಗೆ ಖಟುಮ್ ಅಂತ ಇತ್ತು. ನಟ್ಸ್’ಗಳ ಮಧ್ಯೆ ಕಬ್ಬಿಣದ ತುಂಡೇನಾದರೂ ಇತ್ತೇ? ಹೊಟ್ಟೆ ಸೇರಿಬಿಟ್ರೆ ಆಪರೇಷನ್ ಮಾಡಿಬಿಟ್ಟಾರು ಅಂತ, ಮೆಲ್ಲಗೆ ಬಾಯಿ ತೆರೆದು ಬೆರಳಲ್ಲಿ ಕಡಿದಿದ್ದನ್ನ ಹೊರ ತೆಗೆದೆ. 

ಥಳ, ಥಳ ಅಂಡ್ ಥಳ ಕಣ್ರೀ ! ಬಂಗಾರದ ಬಣ್ಣದ ಕಲ್ಲು !!

ಮೊದಲು ಅದನ್ನು ತೊಳೆದು, ಒರೆಸಿ ನೋಡ್ತೀನಿ ... ಬಂಗಾರ ಕಣ್ರೀ ಬಂಗಾರ !!

ನಾನ್ಯಾವುದೋ ನರಿ ಮುಖ ನೋಡಿರಬೇಕು. ಅದೃಷ್ಟ ಒಕ್ಕರಿಸಿಕೊಂಡು ಬಂದಿದೆ. ನರಿ ಮುಖ ನಾನೇ ನೋಡಿರಬೇಕು. ನರಿ ನನ್ನ ಮುಖ ನೋಡಿದ್ರೆ, ಅದಕ್ಕೆ ಅದೃಷ್ತ ವಕ್ಕರಿಸಿರೋದು, ನಾನು ಹರ ಹರ ಅಗಿರ್ತಿದ್ದೆ !!

ನಂಬೋಕ್ಕೆ ಆಗ್ತಿಲ್ಲ, ನಾ ತಿನ್ನುತ್ತಿದ್ದ ಪ್ಯಕೆಟ್’ನಲ್ಲಿ ಬಂಗಾರದ ತುಂಡು ಸಿಕ್ತು ಅಂತ. ಏನೇನೋ ಸ್ವಾರಸ್ಯ ಓದುತ್ತಿದ್ದ ನನಗೆ ಲಕುಮಿ ಒದ್ಗೊಂಡ್ ಬಂದಿದ್ಲು ವಾಹ್! ವಾಹ್!! ಇನ್ನೂ ಬಾಯಲ್ಲಿ ಇದ್ದುದನೆಲ್ಲ ಒಂದು ಪೇಪರ್ ಮೇಲೆ ವಯಕ್ ಎಂದು ಹೊರ ಚೆಲ್ಲಿ, ಹುಡುಕಿದೆ. ಮತ್ತೇನೂ ಇರಲಿಲ್ಲ. ಹುಷಾರಾಗಿ ಒಂದು ಪುಟ್ಟ ಡಬ್ಬಿಯಲ್ಲಿ ಹಾಕಿಟ್ಟು ಖುಷಿಯಿಂದ ನೋಡುತ್ತಿದ್ದೆ. ಪುಟ್ಟ ತುಂಡು ! ಮಾಟವಾಗಿ ಚೆನ್ನಾಗಿದೆ ! ಸೀದ ಹೊಟ್ಟೆ ಒಳಗೆ ಹೋಗಿದ್ರೆ ಗೊತ್ತೇ ಆಗ್ತಿರ್ಲಿಲ್ಲ. ಎಲ್ಲಕ್ಕೂ ಅದೃಷ್ಟ ಇರಬೇಕು ಅನ್ನೋದು ಇದಕ್ಕೇ.

ನನ್ನ ಫೋನಿನ ಕ್ಯಾಮೆರಾದಲ್ಲಿ ಒಂದು ಚಿತ್ರ ತೆಗೆದು ನನ್ನ ಸಂತೋಷವನ್ನು ಫೇಸ್ಬುಕ್’ನಲ್ಲಿ ಚಿತ್ರದ ಸಮೇತ ಹಂಚಿಕೊಂಡೆ. ಹಲವಾರು ಜನ ’ಲೈಕ್’ ಒತ್ತಿದರು. ಸಂತೋಷಕ್ಕೋ, ಹೊಟ್ಟೇಕಿಚ್ಚಿಗೋ ಗೊತ್ತಿಲ್ಲ. ಒಟ್ಟಾರೆ ಲೈಕ್ ಅಷ್ಟೇ ಮುಖ್ಯ. ಕೆಲವರು ಶುಕ್ರವಾರದ ಲಕ್ಷ್ಮಿ ಮನೆಗೆ ಬಂದಿದ್ದಾಳೆ ಅಂತಂದರು. ಮಾರಿದರೆ ಇಷ್ಟು ಬರುತ್ತೆ ಅಂತ ಒಬ್ಬರೆಂದರೆ, ಇನ್ನೊಬ್ಬರು ಶುಕ್ರವಾರ ಮನೆಗೆ ಬಂದ ಲಕ್ಷ್ಮಿಯನ್ನು ಹೊರಗೆ ಕಳಿಸಬೇಡಿ ಅಂದರು. ಒಬ್ಬರು ಲಕ್ಷ್ಮಿ ಅಷ್ಟೊತ್ತರದ ವಿಡಿಯೋ ಲಿಂಕ್’ಅನ್ನು ಯೂಟ್ಯೂಬಿನಿಂದ ತೆಗೆದು ಹಾಕಿದರೆ ಮತ್ತೊಬ್ಬರು ಭೀಮಸೇನ್ ಜೋಷಿಯವರ ಲಕ್ಷ್ಮಿ ಹಾಡಿನ ಲಿಂಕ್ ಹಾಕಿದರು. ಒಟ್ಟಿನಲ್ಲಿ ಫುಲ್ ಬಿಜಿ.

ಕೊಬ್ಬು ಬೆಳೆದದ್ದು ಒಂದು ರೀತ್ಯಾ ಒಳ್ಳೆಯದೇ ಆಯ್ತು. "ಆದದ್ದೆಲ್ಲ ಒಳಿತೇ ಆಯಿತು, ನಮ್ಮ ಶ್ರೀಧರನ ಪತ್ನಿ ಮನೆಗೆ ಬಂದಳು" ಅಂತ ನನ್ನದೇ ಸ್ಟೈಲಿನಲ್ಲಿ ಹಾಡಿಕೊಂಡು ದಿನ ಮುಗಿಸಿದೆ. ಮಾರನೇ ದಿನ, ನನಗೆ ಕರೆ ಮಾಡಿದ್ದ ಡಾಕ್ಟರ್ ಬಳಿ ಹೋದೆ. ಚೇರಿನ ಮೇಲೆ ಕೂಡಿಸಿ, ಮೊದಲು ಅವರ ಮೂಗು ಮುಚ್ಚಿಕೊಂಡು ನಂತರ ನನ್ನನ್ನು ಬಾಯಿ ತೆರೆಯಲು ಹೇಳಿದರು. ಮುಂಭಾಗ ಹಲ್ಲಿನಿಂದ ಆರಂಭ ಮಾಡಿ, ಕ್ಲೀನ್ ಮಾಡುತ್ತ ಹಿಂಬದಿ ಹಲ್ಲುಗಳತ್ತ ಹೋದವರು, ತಮ್ಮ ಕೆಲಸ ನಿಲ್ಲಿಸಿ, ನನ್ನನ್ನು ಕೇಳಿದರು "ಕಿರೀಟ ಎಲ್ಲಿ?" 

ಡಾಕ್ಟರ್ ಬಹಳ ಹಾಸ್ಯಪ್ರಜ್ಞೆ ಇರುವವರು. ಹಾಗಾಗಿ ನಾನೂ ಅವರಿಗೆ "ರಾಜಾಧಿರಾಜರೆಲ್ಲ ತೀರಿಕೊಂಡ ಮೇಲೆ ಕಿರೀಟ ಎಲ್ಲಿಂದ ಬಂತು" ಅಂದೆ. ಸಣ್ಣಗೆ ನಕ್ಕು ಮತ್ತೆ ಕೇಳಿದರು "ನಾನು ಕೇಳಿದ್ದು ಆ ಕಿರೀಟ ಅಲ್ಲಾ ! ದವಡೆ ಹಲ್ಲಿಗೆ ಬಂಗಾರದ ಕ್ರೌನ್ ಹಾಕಿದ್ನಲ್ಲಾ, ಏನು ಮಾಡಿಕೊಂಡ್ರಿ? ಕಾಣ್ತಾನೇ ಇಲ್ಲ?"

ಹಾ? ಅಂದ್ರೆ? ನೆನ್ನೆ ಸಿಕ್ಕ ಬಂಗಾರದ ತುಂಡು ನಟ್ಸ್ ಪ್ಯಾಕೆಟ್’ನಲ್ಲಿ ಇದ್ದಿದ್ದಲ್ಲ. ಬದಲಿಗೆ ನನ್ನದೇ ಹಲ್ಲಿನ ಕ್ರೌನು ! ಹಾಗಿದ್ರೆ ಆ ಲಕ್ಷ್ಮಿ ನಿಜಕ್ಕೂ "ಲಕ್ಷ್ಮೀಬಾಯಿ" ಅರ್ಥಾತ್ "ಲಕ್ಷ್ಮಿ" from my "ಬಾಯಿ" !! 

ನೆನ್ನೆ ಲಕ್ಷ್ಮಿ ಬಂದಲೂ ಅಂತ ಕುಣಿದೆ. ಈಗ ಆ ಲಕ್ಷ್ಮಿ ಡಾಕ್ಟರ್ ಜೊತೆ ಹೋಗ್ತಿದ್ದಾಳೇ. ತಾಯೇ ನೀ ಬಹಳಾ ಚಂಚಲೇ !

 

Comments

Submitted by nageshamysore Wed, 03/05/2014 - 02:04

ಭಲ್ಲೆ ಜಿ, ನಿಮ್ಮ 'ಕೊಬ್ಬಿಳಿಸೊ' ವಿಧಾನ / ಪ್ರಯತ್ನ ಚೆನ್ನಾಗಿದೆ. ಟೈರು ಭೂಗೋಳಗಳನ್ನು ಕೇಳದೆಯೂ ದಯಪಾಲಿಸುವ ಈ ಬೊಜ್ಜಿನ ಮಹಾತ್ಮೆ ವರ್ಣನಾತೀತ. ಮೊನ್ನೆ ಮೊನ್ನೆ ಟ್ರೈನಿನಲ್ಲಿ ಯಾರೊ ಕೂತಿದ್ದವರೊಬ್ಬರು ಒಬ್ಬಾಕೆಯನ್ನು ನೋಡಿ ಎದ್ದು ಸೀಟು ಬಿಟ್ಟುಕೊಟ್ಟಾಗ ಆಕೆಯ ಮುಖ ಇಷ್ಟಗಲ ಆಗಿಹೋಗಿತ್ತು...ಕಾರಣವೇನೆಂದರೆ, ಆತ ಸೀಟು ಬಿಟ್ಟೆದ್ದಿದ್ದು ಆಕೆ ಗರ್ಭಿಣಿಯೇನೊ ಅನ್ನುವ ಅನಿಸಿಕೆಯಲ್ಲಿ. ಆದರೆ ಆಕೆಯ ಸ್ಥೂಲಕಾಯ ಪಾಪಿ ಬೊಜ್ಜಿನ ಪಿಶಾಚಿ ಕರುಣಿಸಿದ್ದು !

Submitted by bhalle Wed, 03/05/2014 - 03:10

In reply to by nageshamysore

ನಾಗೇಶರೇ, ಪಾಪ ಆಕೆಗೆ ಹೀಗಾಗಬಾರದಿತ್ತು ... ನಮ್ಮಲ್ಲಿ ಒಂದು ಘಟನೆ ನೆಡೆದಿತ್ತು. ಒಬ್ಬಾತ ಒಮ್ಮೆ ತನ್ನ ಪ್ಯಾಂಟ್'ನ ಜಿಪ್ ಹಾಕಿಕೊಳ್ಳುವುದು ಮರೆತಿದ್ದ. ಅದನ್ನು ಯಾರೋ ಆತನಿಗೆ ಕಿವಿಯಲ್ಲಿ ಹೇಳಿದ್ದರು. ಜಿಪ್ಪನ್ನು ಎಳೆದುಕೊಂಡವಣೆ ತನ್ನ ಬೊಜ್ಜಿನ ಹೊಟ್ಟೆಯನ್ನು (ಮತ್ತೊಮ್ಮೆ) ಶಪಿಸಿದ್ದ !

ಧನ್ಯವಾದಗಳು

Submitted by kavinagaraj Wed, 03/05/2014 - 08:54

ಪಾಪ ಕೊಬ್ಬು!
ತುರ್ತು ಪರಿಸ್ಥಿತಿಯ ಸಮಯದಲ್ಲಿ ಬಂದಿತನಾಗಿದ್ದಾಗ ಇನ್ನೂ 23 ವರ್ಷದ ಸಣಕಲು ಶರೀರದವನಾಗಿದ್ದ ನನಗೆ, ಸಬ್ ಇನ್ಸ್ ಪೆಕ್ಟರ್ 'ಕೊಬ್ಬು ಜಾಸ್ತಿ ಮಗನಿಗೆ, ನಾನು ಕೊಬ್ಬು ಇಳಿಸುತ್ತೇನೆ' ಅಂದಿದ್ದ!