ದಿನ ದಿನ ಮಹಿಳಾ ದಿನ..

ದಿನ ದಿನ ಮಹಿಳಾ ದಿನ..

( Picture courtesy : http://www.internationalwomensday.com/linkto.asp#.UxqNxGthiK0 )

ಇಂದು ವನಿತೆಯರ ದಿನವೆಂದು ನೆನಪಾಗಿ ಹಿಂದೊಮ್ಮೆ ಬರೆದ ಕವನವೊಂದರ ನೆನಪಾಗಿ ಹುಡುಕುತಿದ್ದೆ. ಹೆಚ್ಚು ಹುಡುಕಾಡಿಸದೆ ಕೈಗೆ ಸಿಕ್ಕ ಕವನ ಹಿಂದೆಯೇನಾದರೂ ಪ್ರಕಟಿಸಿ ಮರೆತುಬಿಟ್ಟಿದ್ದರೆ? ಎಂಬ ಆಲೋಚನೆಯಲ್ಲಿ ಸಂಪದಕ್ಕೆ ಸೇರಿಸಿದ ಲೇಖನಗಳನ್ನು ಪರಿಶೀಲಿಸುತ್ತಿದ್ದಾಗ ಇಂದಿನಿಂದ ಸಂಪದದಲ್ಲಿ ನನ್ನ ಎರಡನೆ ವರ್ಷ ಆರಂಭವಾಗುತ್ತದೆಯೆಂದು ಗಮನಕ್ಕೆ ಬಂತು (ನಾನು 11ನೆ ಮಾರ್ಚಿ ಎಂದು ತಪ್ಪಾಗಿ ನೆನಪಿಟ್ಟುಕೊಂಡಿದ್ದೆ - ನನ್ನ ಮೊದಲ ಕವನ "ಮಾತಿಗೊಬ್ಬರ.." ಸೇರಿಸಿದ ದಿನಾಂಕ 07ನೆ ಮಾರ್ಚಿ 2013 ಎಂದು ತೋರಿಸಿತು ಸಂಪದದ ದಿನಾಂಕ). ಇನ್ನು ಮುಂದೆ ವಾರ್ಷಿಕೋತ್ಸವದ ಆರಂಭದ ದಿನವನ್ನು ನೆನಪಿಟ್ಟುಕೊಳ್ಳಲು ಸುಲಭ - ವಿಶ್ವವನಿತೆಯರ ದಿನದ ಸಾಂಗತ್ಯದಿಂದಾಗಿ :-)

ವನಿತೆಯರ ದಿನದ ಹೆಸರಿನಲ್ಲಿ ವನಿತೆಯರಿಗೊಂದು ನಮನ ಹೇಳುವುದು ಸಾಂಕೇತಿಕವಾದರು ಅನುದಿನವೂ ಹಿನ್ನಲೆ, ಮುನ್ನಲೆಯಲಿ ನಾನಾ ತರಹದ ನೈಜ್ಯ ಪಾತ್ರ ವಹಿಸಿ ಹಲವು ಭೂಮಿಕೆ ನಿಭಾಯಿಸುವ ಮಹಿಳೆಯರ ಕುರಿತು ಬರೆದು ಮುಗಿಸಲೆ ಅಸಾಧ್ಯ. ಅದರಲ್ಲೂ ಈಗಿನ ದಿನಗಳಲ್ಲಿ ಎಲ್ಲಾ ರಂಗಗಳಲ್ಲೂ ಸರಿಸಮಾನವಾಗಿ ದುಡಿಯುವ ಅವರ ಪಾತ್ರ, ಕಾಣಿಕೆಗಳನ್ನು ಎಲ್ಲ ಕಡೆಯೂ ಕಾಣಬಹುದು. ಅದರ ಕೆಲವು ತುಣುಕುಗಳನ್ನು ನೆನಪಿಸಲು ಈ ಸಾಲುಗಳ ನಮನ.

ದಿನ ದಿನ ಮಹಿಳಾ ದಿನ!
----------------------------------

ದಿನಾ
ದೈನಂದಿನ ಕ್ಷಣ
ಪ್ರತಿ ಮಹಿಳಾ ದಿನ
ಅವತಾರದ ಸ್ಮರಣ
ನಡೆಸುತೆ ಸದನ
ಏಗಲೆ ಜೀವನ
ಘನ ||

ಗೃಹಿಣಿ
ಮನದ ಗಿರಣಿ
ಮನೆ ಮನಸಾ ರಾಣಿ
ಭವಿತದೆಡೆ ನೂಲೇಣಿ
ಪ್ರಾತಃ ಸ್ಮರಣಿ
ಕಲ್ಯಾಣಿ ||

ಸರಿ ಸಮ
ಹೊರ ಜಗ ತಮ
ಹೆಜ್ಜೆಗ್ಹೆಜ್ಜೆಯ ಸರಿಗಮ
ಪಸರಿಸಿದ ಗಮ ಗಮ
ಸಮಪಾಲ ಶ್ರಮ
ಅವಿಶ್ರಾಮ ||

ದಶಾವತಾರ
ಸತಿ ಗೆಳತಿ ಕರ
ಮಾತೇ ಸೋದರಿ ಸದರ
ಅತ್ತೆಸೊಸೆನಾದಿನಿ ಸಾರ 
ಹೆಣ್ಣುಗಳವತಾರ
ದೇವರ ವರ ||

ಸೃಷ್ಟಿಗೇ ಪ್ರಳಯ
ಮನುಕುಲ ಬೆಳೆಯಾ
ಹೆಣ್ಣಿರದಾ ಜೀವನ ಲಯ
ಗಂಡಿಗ್ಹೆಣ್ಣು ಜತೆ ಹೃದಯ
ಪಾತ್ರಗಳೆ ಮಹಿಳೆಯ
ಬದುಕಿನ ಮಾಯ ||

ದಿನಾಚರಣೆ ನೆಪ
ಸಾಂಕೇತಿಕ ಸ್ವರೂಪ
ಹಚ್ಚಿ ಗೌರವಾದರ ಧೂಪ
ಗುರುತಿಸಿ ಪ್ರತಿನಿತ್ಯ ತಪ
ಅಳಿಸೆ ಮನ ಕುರೂಪ
ಸಮಾನತೆ ಸುರೂಪ ||

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

Comments