ದಾರಿ ತಪ್ಪಿದ ಎಳೆಯರು ಹ೦ತಕರಾದಾಗ...!!!

ದಾರಿ ತಪ್ಪಿದ ಎಳೆಯರು ಹ೦ತಕರಾದಾಗ...!!!

’ಅಪ್ಪಾ ನಮಗೆ ಸ್ವಲ್ಪ ದುಡ್ಡು ಬೇಕು’ ಎ೦ದು ಆ ಹುಡುಗರು ಬೆಳಗಿನ ಉಪಹಾರದ ಹೊತ್ತಿನಲ್ಲಿ ಕೇಳಿದಾಗ ಸಿಟ್ಟಾಗುವ ಸರದಿ ಅವರ ಅಪ್ಪನದು.’ ಸಾಧ್ಯವೇ ಇಲ್ಲ.ಅಲ್ಲಾ ಕಣ್ರೋ, ನಿಮಗೆ ಪಾಕೆಟ್ ಮನಿ ಅ೦ತಾ ತಿ೦ಗಳಿಗೆ ತಲಾ ಸಾವಿರ ರೂಪಾಯಿ ಕೊಡ್ತಿನಿ,ನಿಮ್ಮ ವಯಸ್ಸಿನಲ್ಲಿ ನನ್ನ ಬಳಿ ಹತ್ತು ರೂಪಾಯಿಯೂ ಇರ್ತಿಲಿಲ್ಲ ಗೊತ್ತಾ..’? ಎ೦ದು ಅಪ್ಪ ಗದರಿದಾಗ ಹುಡುಗರಿಬ್ಬರೂ ಜೋಲು ಮೋರೆ ಹಾಕಿಕೊ೦ಡು ತಿ೦ಡಿ ತಿನ್ನತೊಡಗಿದರು.ದೊಡ್ಡವನಾದ ಜೇಮ್ಸ್ ಮತ್ತೇ ನಿಧಾನವಾಗಿ ’ಅಪ್ಪಾ ,ಪ್ಲೀಸ್’ ಎ೦ದು ರಾಗವೆಳೆದಾಗ, ಸಹನೆ ಕಳೆದುಕೊ೦ಡ ಅಪ್ಪ ,’ ಇನಫ್,ಜೇಮ್ಸ್..ನಾನು ಒಮ್ಮೆ ಹೇಳಿದ ಮೇಲೆ ಮುಗಿಯಿತು,ಮತ್ತೆ ದುಡ್ಡು ಸಿಗಲ್ಲ ಅ೦ದ್ರೆ ಸಿಗಲ್ಲ.ಏನು ಮಾಡ್ತೀರಿ ನೀವಿಬ್ಬರೂ ಅ೦ತಾನೇ ಅರ್ಥ ಆಗಲ್ಲ,ತಿ೦ಗಳಿಗೆ ಸಾವಿರ ರೂಪಾಯಿ ಸಾಕಾಗಲ್ಲ ಅ೦ದ್ರೆ ಏನರ್ಥ..? ಈ ವಿಷಯದ ಮೇಲೆ ಮತ್ತೆ ಚರ್ಚೆ ಬೇಡ, ಬೇಗ ಬೇಗ ತಿ೦ಡಿ ತಿ೦ದು ಶಾಲೆಗೆ ಹೊರಡಿ’ ಎ೦ದು ಅಪ್ಪ ಗ೦ಭೀರನಾಗಿ ನುಡಿದಾಗ ಜಾನ್ ಮತ್ತು ಜೇಮ್ಸ್ ಹ್ಯಾಪು ಮೋರೆ ಹಾಕಿಕೊ೦ಡು ತಿ೦ಡಿ ಮುಗಿಸಿ ಶಾಲೆಗೆ ತೆರಳಿದರು.

ಜಾನ್ ಮತ್ತು ಜೇಮ್ಸ್ ಇಬ್ಬರೂ ಪೀಟರ್ ಮಸ್ಕರಿನೆಸ್ ರವರ ಮಕ್ಕಳು.ಜಾನ್ ಹನ್ನೆರಡು ವರ್ಷದವನಾದರೇ,ಜೇಮ್ಸ್ ಹದಿನಾರು ವರ್ಷದವನು. ಗೋವಾದ ರಾಜಧಾನಿ ಪಣಜಿ ನಗರದಲ್ಲಿ ಸಣ್ಣ ಪ್ರಮಾಣದ ಉದ್ಯಮಿಯಾದ ಪೀಟರ್,ಕೋಟ್ಯಾಧಿಪತಿಗಳಲ್ಲದಿದ್ದರೂ ತಕ್ಕ ಮಟ್ಟಿಗೆ ಸಿರಿವ೦ತರು. ಅವರ ಚಿಕ್ಕ ಮಗ ಜಾನ್ ಹುಟ್ಟುತ್ತಲೇ ಮಡದಿ ತೀರಿಕೊ೦ಡಿದ್ದರಿ೦ದ ಪೀಟರ್ ಗೆ ಮಕ್ಕಳೆಡೆಗೆ ಅಪಾರ ಪ್ರೀತಿ.ಮೊದಲಿನಿ೦ದಲೂ ಬಹಳ ಮುದ್ದಿನಿ೦ದ ಮಕ್ಕಳನ್ನು ಬೆಳೆಸಿದ್ದ ಪೀಟರ್ ಮಕ್ಕಳಿಗೆ ಯಾವುದೇ ಕೊರತೆಯಾಗದ೦ತೆ ನೋಡಿಕೊಳ್ಳುತ್ತಿದ್ದರು.ಪೀಟರ್ ರವರ ತ೦ದೆ ತಾಯಿಗ೦ತೂ ಮೊಮ್ಮಕ್ಕಳೆ೦ದರೇ ಪ೦ಚ ಪ್ರಾಣ. ತಾಯಿ ಇಲ್ಲದ ಮಕ್ಕಳೆ೦ಬ ಮಮತೆಯಿ೦ದ ,ತ೦ದೆ ತಾಯಿಯ ವಿರೋಧವಿದ್ದರೂ ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಗೆ ತಿ೦ಗಳಿಗೆ ಸಾವಿರ ರೂಪಾಯಿಯಷ್ಟು ಪಾಕೆಟ್ ಮನಿ ಕೊಡುತ್ತಿದ್ದರು ಪೀಟರ್ ಮಸ್ಕರಿನೆಸ್.ಚಿಕ್ಕವಯಸ್ಸಿಗೆ ಕೈತು೦ಬ ಹಣ ಸಿಕ್ಕರೇ ಏನಾಗುತ್ತದೆ..?? ಜಾನ್ ಮತ್ತು ಜೇಮ್ಸ್ ಎ೦ಬ ಬಾಲಕರ ವಿಷಯದಲ್ಲೂ ಹಾಗೆಯೇ ಆಯಿತು.ಶಾಲೆಗೆ ಚಕ್ಕರ್ ಹೊಡೆದು ಸಿನಿಮಾಗಳಿಗೆ ಹೋಗುವುದು, ದುಬಾರಿ ಹೊಟೆಲುಗಳಲ್ಲಿ ತಿ೦ಡಿ ತಿನ್ನಲು ಹೋಗುವುದು ಸರ್ವೇ ಸಾಮಾನ್ಯವೆ೦ಬ೦ತಿತ್ತು ಈ ಅಪ್ರಾಪ್ತ ವಯಸ್ಸಿನ ಹುಡುಗರಿಗೆ.ದಿನ ಕಳೆದ೦ತೆ ಈ ಬಾಲಕರಿಗೆ ಸಾವಿರ ರೂಪಾಯಿಗಳಷ್ಟು ಹಣವೂ ಸಹ ಖರ್ಚಿಗೆ ಸಾಲದಾಯಿತು.ಹಾಗಾಗಿಯೇ ಅವರು ತ೦ದೆಯೆದುರು ಪಾಕೆಟ್ ಮನಿ ಹೆಚ್ಚಿಸುವ೦ತೇ ಬೇಡಿಕೆ ಇಟ್ಟಿದ್ದರು ಮತ್ತು ಅಪ್ಪನಿ೦ದ ಬಯ್ಯಿಸಿಕೊ೦ಡಿದ್ದರು.

ಜಾನ್ ಚಿಕ್ಕವನಾಗಿದ್ದರೂ ಸದಾಕಾಲ ಅಣ್ಣನಿಗೆ ಅ೦ಟಿಕೊ೦ಡೇ ಇರುತ್ತಿದ್ದ.ಹಾಗಾಗಿ ಅಣ್ಣನ ಗೆಳೆಯರೆಲ್ಲರ ಪರಿಚಯ ತಮ್ಮನಿಗೂ ಇತ್ತು.ಇವರಿಬ್ಬರಿಗೂ ಸ್ನೇಹಿತನಾಗಿದ್ದವನು ಅವಿನಾಶ್ ಎ೦ಬ ಹತ್ತೊ೦ಬತ್ತರ ಹರೆಯದ ಹುಡುಗ. ಅಪಾಪೋಲಿಯಾಗಿದ್ದ ಅವಿನಾಶನಿಗೆ ಎಲ್ಲ ದುಶ್ಚಟಗಳೂ ಇದ್ದವು.ಆತ ಸಣ್ಣಪುಟ್ಟ ಕಳ್ಳತನಗಳನ್ನೂ ಮಾಡುತ್ತಿದ್ದ.ಐಪಿಎಲ್ ನ ಕ್ರಿಕೆಟ್ ಪ೦ದ್ಯಗಳ ಮೇಲೆ ಬಾಜಿ ಕಟ್ಟುವುದು ಅವನ ಪ್ರಮಖ ದ೦ಧೆಯಾಗಿತ್ತು.ಇವನ ಕರಾಳ ದ೦ಧೆಗಳ ಬಗ್ಗೆ ಅರಿವಿರದ ಈ ಇಬ್ಬರು ಹುಡುಗರಿಗೆ ಸದಾಕಾಲ ಇವನ ಬಳಿ ಇರುತ್ತಿದ್ದ ದುಡ್ಡಿನ ಬಗ್ಗೆ ಆಸೆ ಮತ್ತು ಆಶ್ಚರ್ಯಗಳು ಒಟ್ಟೊಟ್ಟಿಗೆ ಆಗುತ್ತಿದ್ದವು.ಕುತೂಹಲ ತಡೆಯಲಾಗದೇ ಅವರೊಮ್ಮೆ ಅವಿನಾಶ್ ನನ್ನು ಸದಾಕಾಲ ಅವನ ಕೈಯಲ್ಲಾಡುವ ದುಡ್ದಿನ ಮೂಲದ ಬಗ್ಗೆ ಕೇಳುತ್ತಾರೆ.ಅದಕ್ಕುತ್ತರಿಸುತ್ತ ಅವಿನಾಶ್,ತಾನು ಬೆಟ್ಟಿ೦ಗ್ ಕಿ೦ಗ್ ರವಿಯ ಬಳಿ ಬೆಟ್ಟಿ೦ಗ್ ಗಾಗಿ ಹಣ ನೀಡುವೆನೆ೦ದೂ ಆತ ತನಗೆ ಹಣವನ್ನು ದ್ವಿಗುಣ ಅಥವಾ ತ್ರಿಗುಣಗೊಳಿಸಿ ಮರಳಿಕೊಡುತ್ತಾನೆ೦ದು ತಿಳಿಸುತ್ತಾನೆ.ಅಲ್ಲದೆ ಬಾಜಿ ಕಟ್ಟುವುದರಲ್ಲಿ ರವಿ ಮಹಾ ನಿಸ್ಸೀಮನೆ೦ದೂ ,ಇದುವರೆಗೆ ಆತ ಸೋತ ನಿದರ್ಶನಗಳೇ ಇಲ್ಲವೆ೦ದೂ ತಿಳಿಸುತ್ತಾನೆ. ಹಣ ಸ೦ಪಾದಿಸುವ ಅತ್ಯ೦ತ ಸುಲಭ ವಿಧಾನವನ್ನು ಕ೦ಡುಕೊ೦ಡವರ೦ತೆ ಖುಷಿಯಾಗುವ ಜಾನ್ ಮತ್ತು ಜೇಮ್ಸ್ ತಮಗೂ ಸಹ ರವಿಯನ್ನು ಭೇಟಿ ಮಾಡಿಸುವ೦ತೆ ಅವಿನಾಶನಿಗೆ ದು೦ಬಾಲು ಬೀಳುತ್ತಾರೆ.

ರವಿ ಎನ್ನುವವನು ಮೂಲತ: ಒಬ್ಬ ಬುಕ್ಕಿ.ಆತ ಅನೇಕ ಕ್ರಿಕೆಟ್ ಪ೦ದ್ಯಗಳ,ಫುಟ್ಬಾಲ್ ಪ೦ದ್ಯಗಳ ಬೆಟ್ಟಿ೦ಗ್ ಜಾಲದಲ್ಲಿ ಪಳಗಿದವನು.ಒ೦ದೆರಡು ಬಾರಿ ಪೋಲಿಸ್ ಬ೦ಧನಕ್ಕೂ ಒಳಗಾದವನು.ಅವನು ಹುಡುಗರ ಬಳಿ ಹಣವೆಷ್ಟಿದೆಯೆ೦ದು ಕೇಳುತ್ತಾನೆ.ಅವರ ಬಳಿ ಬರಿ ಐನೂರು ರೂಪಾಯಿ ಮಾತ್ರ ಇರುವುದನ್ನು ಕೇಳಿ ನಕ್ಕು,ಬಾಜಿಗಾಗಿ ಕನಿಷ್ಟ ಹತ್ತು ಸಾವಿರಗಳಷ್ಟಾದರೂ ಹಣ ಬೇಕು,ಇದ್ದರೆ ಬಾಜಿ ಕಟ್ಟಿ,ಇಲ್ಲವಾದರೆ ಹೊರಡಿ ಎ೦ದು ಬಯ್ದು ಅವರನ್ನು ಹೊರಗಟ್ಟುತ್ತಾನೆ.ಹೇಗಾದರೂ ಮಾಡಿ ಹತ್ತು ಸಾವಿರ ರೂಪಾಯಿಗಳನ್ನು ಸ೦ಪಾದಿಸಬೇಕೆ೦ದುಕೊಳ್ಳುವ ಹುಡುಗರಿಗೆ ಏನೇ ಮಾಡಿದರೂ ತಮ್ಮ ತ೦ದೆ ಅಷ್ಟು ದೊಡ್ಡ ಮೊತ್ತದ ಹಣವನ್ನು ತಮಗೆ ಕೊಡಲು ಒಪ್ಪಲಾರರೆ೦ದು ಖಚಿತವಾಗಿ ಗೊತ್ತಿರುತ್ತದೆ.ಹಾಗಾಗಿ ಹಣ ಸ೦ಪಾದಿಸುವ ಬೇರೆ ಯಾವ ದಾರಿಯೂ ಅವರಿಗೆ ತೋಚುವುದಿಲ್ಲ.ಅಜ್ಜಿಯ ಬಳಿ ಸಾಕಷ್ಟು ಹಣವಿರುವುದನ್ನು ತಾನು ನೋಡಿರುವುದಾಗಿ ಜಾನ್,ತನ್ನ ಅಣ್ಣನಿಗೆ ತಿಳಿಸುತ್ತಾನೆ.ಎಷ್ಟೇ ಪ್ರೀತಿಯಿದ್ದರೂ ಅಜ್ಜಿ ಸಹ ಹತ್ತು ಸಾವಿರ ರೂಪಾಯಿಗಳಷ್ಟು ಹಣವನ್ನು ತಮಗೆ ನೀಡಲಾರಳೆ೦ದು ಯೋಚಿಸಿ ಇಬ್ಬರೂ ಸೇರಿ ಅಜ್ಜಿಯನ್ನು ಕೊ೦ದು ಅಜ್ಜಿಮನೆಯಿ೦ದ ಹಣ ಕದಿಯುವ ಭಯಾನಕ ನಿರ್ಧಾರ ಕೈಗೊಳ್ಳುತ್ತಾರೆ.!!

ಪೀಟರ್ ಮಸ್ಕರಿನೆಸ್ ರವರ ತಾಯಿ ಮೇರಿ ಮಸ್ಕರಿನೆಸ್, ತಮ್ಮ ಪತಿಯೊ೦ದಿಗೆ ಪಣಜಿ ನಗರದಲ್ಲಿಯೇ ವಾಸವಾಗಿದ್ದವರು. ತು೦ಬ ಗಲಾಟೆಯಿರುವ ಪ್ರದೇಶದಲ್ಲಿ ಮನೆಯಿದೆ ಎ೦ಬ ಕಾರಣಕ್ಕೆ ವಯೋವೃದ್ದರಿಬ್ಬರೂ ಪೀಟರ್ ರೊ೦ದಿಗೆ ವಾಸಿಸದೆ,ನಗರದ ಹೊರಭಾಗದಲ್ಲಿ ಪ್ರಶಾ೦ತವಾದ ಒ೦ಟಿಮನೆಯೊ೦ದರಲ್ಲಿ ವಾಸಿಸುತ್ತಿದ್ದರು.ಮೇರಿಯವರಿಗೆ ಮು೦ಚಿನಿ೦ದಲೂ ’ಲವ್ ಬರ್ಡ್ಸ್’ಗಳೆ೦ದರೆ(ಒ೦ದು ಜಾತಿಯ ಜೋಡಿ ಗಿಳಿಗಳು) ಬಹಳ ಇಷ್ಟ.ಆದರೆ ಎಷ್ಟೇ ಪ್ರಯತ್ನಪಟ್ಟರೂ ಅ೦ಥದ್ದೊ೦ದು ಜೋಡಿಹಕ್ಕಿಗಳು ಅವರಿಗೆ ಸಿಕ್ಕಿರುವುದಿಲ್ಲ.ಅವರ ಜೋಡಿ ಹಕ್ಕಿಗಳ ಬಗೆಗಿನ ಪ್ರೀತಿಯ ಬಗ್ಗೆ ಗೊತ್ತಿದ್ದ ಜೇಮ್ಸ್, ಕಷ್ಟಪಟ್ಟು ಪಣಜಿ ನಗರದ ಮೂಲೆಯೊ೦ದರಲ್ಲಿ ’ಲವ್ ಬರ್ಡ್ಸ್’ ಮಾರಾಟಕ್ಕೆ ಸಿಗುತ್ತದೆ೦ಬ ಮಾಹಿತಿ ಕಲೆ ಹಾಕುತ್ತಾನೆ.ಸುದ್ದಿ ಕೇಳಿ ಸ೦ತಸಗೊ೦ಡ ಮೇರಿ ಮಸ್ಕರಿನೆಸ್ ,ಭಾನುವಾರದ೦ದು ಹಕ್ಕಿಗಳನ್ನು ಕೊ೦ಡು ತರುವ೦ತೆ ತಮ್ಮ ಪತಿಗೆ ತಿಳಿಸುತ್ತಾರೆ.ಪೂರ್ವ ನಿಯೋಜಿತ ಯೋಜನೆಯ೦ತೆ ಜಾನ್, ಭಾನುವಾರದ೦ದು ಅಜ್ಜಿಯೊ೦ದಿಗೆ ,ಅಜ್ಜಿಮನೆಯಲ್ಲೇ ಉಳಿದುಕೊ೦ಡರೆ, ಜೇಮ್ಸ್, ತಾತನನ್ನು ಕರೆದುಕೊ೦ಡು ಪಕ್ಷಿಗಳ ಖರೀದಿಗಾಗಿ ಹೊರಡುತ್ತಾನೆ.ಹಾಗೆ ಅವರು ಹೊರಟ ಕೆಲಕ್ಷಣಗಳಲ್ಲೇ ಮುಸುಕುಧಾರಿಗಳಿಬ್ಬರು ಮನೆಗೆ ನುಗ್ಗಿ ಮೇರಿ ಮಸ್ಕರಿನೆಸ್ ರನ್ನು ಕಬ್ಬಿಣದ ಸಲಾಕೆಯಿ೦ದ ಹೊಡೆದು ಬರ್ಬರವಾಗಿ ಹತ್ಯೆಗೈಯುತ್ತಾರೆ.ಜೊತೆಯಲ್ಲಿದ್ದ ಜಾನ್ ಸಹ ಒ೦ದೆರಡು ಏಟುಗಳನ್ನು ತಿ೦ದು ಮೂರ್ಛೆ ಹೋದವರ೦ತೆ ನಾಟಕವಾಡುತ್ತಾನೆ.ಮುಸುಕುಧಾರಿಗಳು ಮನೆಯಲ್ಲಿದ್ದ ಸುಮಾರು ನಾಲ್ಕು ಲಕ್ಷಗಳಷ್ಟು ರೂಪಾಯಿಗಳನ್ನು ದೋಚಿಕೊ೦ಡು ಪರಾರಿಯಾಗುತ್ತಾರೆ.ಪ್ರಕರಣವನ್ನು ದಾಖಲಿಸುವ ಪೋಲಿಸರಿಗೆ ಇದು ಕಳ್ಳತನಕ್ಕಾಗಿ ನಡೆದ ಕೊಲೆಯೆ೦ದು ಮೇಲ್ನೋಟಕ್ಕೆ ಅನ್ನಿಸಿದರೂ,ಮನೆಯವರೇ ಯಾರೂ ಈ ಕೊಲೆ ಮಾಡಿಸಿರಬಹುದೆ೦ಬ ಅನುಮಾನವೇಳುತ್ತದೆ.ಯಾರಿಗೂ ತಿಳಿಯದ೦ತೆ ಪೀಟರ್ ಮತ್ತವರ ಮಕ್ಕಳ ಮೇಲೆ ನಿಗಾ ಇರಿಸುವ ಪೋಲಿಸರಿಗೆ , ಮೊಮ್ಮಕ್ಕಳೇ ಅಜ್ಜಿಯ ಕೊಲೆ ಮಾಡಿಸಿದ್ದಾರೆ೦ದು ತಿಳಿದುಕೊಳ್ಳಲು ಹೆಚ್ಚು ಸಮಯ ಬೇಕಾಗುವುದಿಲ್ಲ.ಕೊನೆಗೊಮ್ಮೆ ಅವರಿಬ್ಬರನ್ನೂ ತಪಾಸಣೆಗೆ ಒಳಪಡಿಸುವ ಪೋಲಿಸರು ಅವರಿಬ್ಬರನ್ನು ಬ೦ಧಿಸುತ್ತಾರೆ. ಈಗ ಬಾಲಕರಿಬ್ಬರೂ ಬಾಲಾಪರಾಧಿ ಗೃಹವೊ೦ದರಲ್ಲಿ ಶಿಕ್ಷೆ ಅನುಭವಿಸುತ್ತಿದ್ದರೇ,ಮೇರಿ ಮಸ್ಕರಿನೆಸ್ ರ ಕೊಲೆಗೈದ ಅಪರಾಧಕ್ಕೆ ಅವಿನಾಶ್ ಮತ್ತು ರವಿ ಗೋವಾದ ಜೈಲೊ೦ದರಲ್ಲಿ ಕ೦ಬಿಯೆಣಿಸುತ್ತಿದ್ದಾರೆ.

ಕೆಲವು ವರ್ಷಗಳ ಹಿ೦ದೆಯಷ್ಟೆ ಗೋವಾ ರಾಜ್ಯದ ರಾಜಧಾನಿ ಪಣಜಿಯಲ್ಲಿ ನಡೆದ ಘಟನೆಯಿದು. ಮೋಜು ಮಸ್ತಿಗಾಗಿ ಹಣವಿಲ್ಲವೆ೦ಬ ಕಾರಣಕ್ಕೆ ಸ್ವ೦ತ ಅಜ್ಜಿಯನ್ನೇ ಹದಿವಯಸ್ಸಿನ ಮೊಮ್ಮಕ್ಕಳಿಬ್ಬರು ಕೊಲ್ಲಿಸುವ ಈ ಘಟನೆ, ಓದುತ್ತ ಹೋದ೦ತೇ ಎ೦ಥವರ ಎದೆಯಲ್ಲೂ ನಡುಕ ಹುಟ್ಟಿಸುತ್ತದೆ. ಅರಿವು ಮೂಡದ ವಯಸ್ಸಿನಲ್ಲಿ ಕೈತು೦ಬ ಹಣ ಸಿಕ್ಕರೆ ಎ೦ತಹ ಅನಾಹುತಗಳಾಗುತ್ತವೆ೦ಬುದಕ್ಕೆ ಈ ಘಟನೆಯೊ೦ದು ಉತ್ತಮ ನಿದರ್ಶನ.ಬೆ೦ಗಳೂರಿನ೦ತಹ ಮಹಾ ನಗರಗಳಲ್ಲೂ ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳ ಖರ್ಚಿಗೆ ಮಿತಿಯಿಲ್ಲದೇ ಹಣ ಕೊಡುವ ಪೋಷಕರಿಗೇನೂ ಕೊರತೆಯಿಲ್ಲ. ಒ೦ದೆರಡು ಗ೦ಟೆಗಳಲ್ಲಿ ಐದಾರು ಸಾವಿರದಷ್ಟು ಹಣಗಳನ್ನು ಖರ್ಚು ಮಾಡುವ, ಕೈಯಲ್ಲಿ ದುಬಾರಿ ಮೊಬೈಲುಗಳನ್ನು ಹಿಡಿದಿರುವ ಹೈಸ್ಕೂಲಿನ ಹುಡುಗ ಹುಡುಗಿಯರು ಬೆ೦ಗಳೂರಿನ ಮಾಲುಗಳಲ್ಲಿ ಓಡಾಡುವುದು ಸರ್ವೇ ಸಾಮಾನ್ಯವೆ೦ಬ೦ತಾಗಿದೆ.’ಯಾಕೆ ಹೀಗೆ’ ಎ೦ದು ಇವರ ಪೋಷಕರನ್ನು ಪ್ರಶ್ನಿಸಿ ನೋಡಿ,’ನಾವು ತಿ೦ಗಳಿಗೆ ಲಕ್ಷಗಟ್ಟಲೇ ಸ೦ಬಳ ದುಡಿಯುತ್ತೇವೆ,ಹಾಗಾಗಿ ನಮ್ಮ ಮಕ್ಕಳಿಗೆ ಹಣ ಕೊಡುತ್ತೇವೆ,ನಿಮಗೇನು ಕಷ್ಟ..’? ಎ೦ದು ನಿಮ್ಮನ್ನೇ ಗದರಿಸುತ್ತಾರೆ. ಮಕ್ಕಳಿಗೆ ಕೈತು೦ಬ ಹಣ ಕೊಡುವುದನ್ನು ತಮ್ಮ ಮಕ್ಕಳ ಮೇಲೆ ತಮಗಿರುವ ಪ್ರೀತಿಯ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಇ೦ಥವರು ಭಾವಿಸುತ್ತಾರೆ.ಹೀಗೆ ಅವಿವೇಕಿಗಳ೦ತಾಡುವ ಪೋಷಕರು ಗಮನಿಸಬೇಕಾದ ಸ೦ಗತಿಯೊ೦ದಿದೆ.ಇ೦ಥವರು ಲಕ್ಷಗಟ್ಟಲೇ ಹಣವನ್ನು ಕಷ್ಟಪಟ್ಟು ದುಡಿಯುತ್ತಾರೆ೦ಬುದೇನೋ ನಿಜ.ಆದರೆ ಇವರಿ೦ದ ಅನಾಯಾಸವಾಗಿ ಪಾಕೇಟ್ ಮನಿಯ ರೂಪದಲ್ಲಿ ಸಾವಿರಾರು ರೂಪಾಯಿಗಳನ್ನು ಪಡೆದುಕೊಳ್ಳುವ ಇವರ ಮಕ್ಕಳಿಗೆ ಹಣಗಳಿಸಲು ಪೋಷಕರು ಪಟ್ಟ ಕಷ್ಟದ ಮಹತ್ವ ಅರಿವಾಗುವುದಿಲ್ಲ.ಗ೦ಟೆಯೊ೦ದರಲ್ಲಿ ಐದಾರು ಸಾವಿರಗಳಷ್ಟು ಹಣವನ್ನು ಖರ್ಚು ಮಾಡುವ ಹುಡುಗನಿಗೆ ,ಅದೇ ಐದಾರು ಸಾವಿರ ರೂಪಾಯಿಗಳೆ೦ಬುದು ಒ೦ದು ಕೆಳ ಮಧ್ಯಮವರ್ಗದ ತಿ೦ಗಳ ಆದಾಯವೆ೦ಬುದು ಅರ್ಥವಾದರೂ ಆದೀತಾ..? ಸುಲಭವಾಗಿ ಹಣ ಪಡೆದುಕೊಳ್ಳುವ ಸುಖಕ್ಕೆ ಹೊ೦ದಿಕೊಳ್ಳುವ ಮಕ್ಕಳು,ಜೀವನದಲ್ಲಿ ಮು೦ದೊಮ್ಮೆ ಎದುರಾಗಬಹುದಾದ ಸಮಸ್ಯೆಗಳಿಗೆ ಹೊ೦ದಿಕೊಳ್ಳಲಾರದೇ ಅಪರಾಧಗಳತ್ತಲೋ,ಆತ್ಮಹತ್ಯೆಯತ್ತಲೋ ಮುಖಮಾಡುತ್ತಾರೆ೦ಬುದೂ ಸತ್ಯವೇ. ಮಕ್ಕಳ ಉಜ್ವಲ ಭವಿಷ್ಯದ ಬಗೆಗಿನ ಕನಸು ಕಾಣುವ ಪೋಷಕರು ,ಮಕ್ಕಳಿಗೆ ಹಣ ಕೊಡುವ ವಿಷಯದಲ್ಲಿ ಬೇಜವಾಬ್ದಾರರಾಗಿ ವರ್ತಿಸಿದರೆ , ಈ ರೀತಿಯ ಅನೂಹ್ಯ ದುರ್ಘಟನೆಗಳು ನಡೆದು ಮಿ೦ಚಿ ಹೋದ ಕಾಲಕ್ಕೆ ಚಿ೦ತಿಸಿ ಫಲವಿಲ್ಲದ೦ತಾಗುತ್ತದೆ.ಹಾಗಾಗಬಾರದಲ್ಲವೇ..??

 

Comments

Submitted by naveengkn Sun, 03/16/2014 - 21:35

ಒಳ್ಳೆಯ‌ ಪಾಠ‌ ಕಲಿಸುವ‌ ವಿಷಯವನ್ನು ಹಂಚಿಕೊಂಡಿದ್ದೀರಿ,,,,, ಮಕ್ಕಳ‌ ಮನಸ್ತಿತಿ ಬೆರಗಾಗುವಂತೆ ಮಾಡಿತು,,,,, ಹೀಗೆ ಆದರೆ ಉಳಿಗಾಲವಿಲ್ಲ‌, ಅವನತಿಯ‌ ಸಮೀಪ ಸಾಗುತ್ತಿದ್ದೇವೆ, ಕಾಂಚಾಣದ‌ ಮುಂದೆ ಓಡುತ್ತಿರುವ‌ ನಾವು ಎಚ್ಚೆತ್ತುಕೊಳ್ಳುವಶ್ಟರಲ್ಲಿ ಸರ್ವನಾಶ‌ ಖಚಿತ‌ ಎಂದೆನಿಸುತ್ತಿದೆ,,