ಹೀಗೊಂದು ಟಿವಿ ಸಂದರ್ಶನ .... ಸತ್ಯ ದರ್ಶನ !

ಹೀಗೊಂದು ಟಿವಿ ಸಂದರ್ಶನ .... ಸತ್ಯ ದರ್ಶನ !

 

"ನಮಸ್ಕಾರ ಪರಮೇಶಿ’ಯವರೇ. ನೀವು ನಮ್ಮೊಂದಿಗೆ ಇರುವುದು ಬಹಳಾ ಸಂತೋಷಕರವಾದ ವಿಚಾರ."

"ನಮಸ್ಕಾರ, ನಿಮ್ ಜೊತೆ ಇರೋದು ನಮ್ಗೂ ಎಮ್ಮೆಯ ಇಚಾರ"

"ಸಂತೋಷ ! ಈಗ ನಿಮ್ಮನ್ನು ಕೆಲವು ಪ್ರಶ್ನೆಗಳನ್ನ ಕೇಳ್ತೀನಿ. ನೇರವಾದ ಉತ್ತರ ಕೊಡಿ ಸಾಕು."

"ಆಗ್ಬೋದು. ಆದ್ರೆ ನನ್ ಸ್ವಂತ ಇಸ್ಯ ಕೆದಕಬೇಡಿ ಅಷ್ಟೇಯಾ"

"ಇಲ್ಲ ಇಲ್ಲ. ಈಗ ಮೊದಲ ಪ್ರಶ್ನೆ. ಭಾರತೀಯರೊಬ್ಬರು ಅಮೇರಿಕದ ಮೈಕ್ರೋಸಾಫ್ಟ್’ನಂತಹ ಕಂಪನಿ ದೊಡ್ಡ ಪದವಿಗೆ ’ಏರಿದ್ರಾ? ಇಳಿದ್ರಾ?’"

"ಇದೊಳ್ಳೇ ಪ್ರಶ್ನೆ ಆಯ್ತಲ್ಲ?  ದೊಡ್ಡ ಪದವಿ ಅಂದ ಮೇಲೆ ಏರೋದೇ ತಾನೆ?"

"ಮುಂದಿನ ಪ್ರಶ್ನೆ ... ನೀವು ಮನೆಯಿಂದ ಹೊರಗೆ ಹೊರಟಾಗ, ಕೈಯಲ್ಲಿದ್ದ ನಿಮ್ಮ ಮೊಬೈಲು ಅಕಸ್ಮಾತ್ ಪಕ್ಕದ ಚರಂಡಿಯಲ್ಲಿ ಬಿತ್ತು ಅಂದುಕೊಳ್ಳಿ. ನಿಮ್ಮ ಮನೆ ನೌಕರನ್ನ ಕರೆದು ಚರಂಡಿಯಲ್ಲಿ ಇಳಿಯೋಕ್ಕೆ ಹೇಳ್ತೀರಾ? ಏರೋಕ್ಕೆ ಹೇಳ್ತೀರಾ?"

"ಚರಂಡಿಗೆ ಯಾರು ಏರ್ತಾರೆ? ಅದು ಇಳಿಯೋದೆಯಾ. ಇಳಿಯೋಕ್ಕೆ ಹೇಳ್ತೀನಿ. ಅದರೆ ನಮ್ ಮನೆ ಹೊರಗೆ ಚರಂಡಿ ಇಲ್ಲ."

"ಹ ಹ ಹ. ಹೊರಗೆ ಇಲ್ಲ,  ಹೋಗ್ಲಿ ಬಿಡಿ. ಈಗ ಚರಂಡಿಯಲ್ಲಿ ಇಳಿದು ನಿಮ್ಮ ಮೊಬೈಲನ್ನು ತೊಗೊಂಡ್ ಹೊರಗೆ ಬಂದವನು ಸೀದ ಹೋಗಿ ಸೋಫಾದ ಮೇಲೆ ಕೂರುತ್ತಾನ?"

"ಅಂಗ್ ಮಾಡಿದ್ರೆ, ತದುಕ್ಬಿಡ್ತೀನಿ ಆ ಮಗಂಗೆ. ಹೊಲಸಿನಾಗೆ ಇಳಿದೋನು ಸೋಫಾದ ಮೇಲೆ ಕುಂತ್ರೆ ಗಲೀಜಾಗಲ್ವಾ?"

"ಸರಿ ಸರಿ. ಈಗ ಬಿಗ್ ಶಾಟ್’ಗಳು ಅಂದ್ರೆ ದೊಡ್ಡವ್ಯಕ್ತಿಗಳು ಭಿಕ್ಷಾಟನೆ ಮಾಡಿದರೆ ಅದಕ್ಕೆ ಏನಂತೀರ?"

"ಏ! ಎಲ್ಲಾದ್ರೂ ಉಂಟೇ? ದೊಡ್ಡ ಮನುಷ್ಯರು ದೊಡ್ಡತನದಲ್ಲಿ ಇರಬೇಕು. ಭಿಕ್ಷಾಟನೆಗೆ ಇಳೀಬಾರದು"

"ಸರಿ ಸರಿ. ಮತ್ತೆ ಈಗ ... "

"ಒಂದು ನಿಮಿಷ ಇರಿ. ನೀವು ಕೇಳ್ತಿರೋ ಈ ಪ್ರಶ್ನೆಗೋಳು ಎಂಗೆ ಯಾರ್ಗೆ ಉಪಯೋಗ ಆಯ್ತದೆ ಅಂತ ನಂಗೆ ಅರ್ಥ ಆಗ್ತಿಲ್ಲ. ಈ ಮಾಧ್ಯಮದೋರು ಸಂದರ್ಶನ ಮಾಡೋದನ್ನ ಮೊದಲು ಕಲೀಬೇಕು."

"ಬೇಸರ ಮಾಡ್ಕೋಬೇಡಿ. ನೀವು ಹೇಳಿದ ಇಷ್ಟು ವಿಷಯ ನಿಜಕ್ಕೂ ಮಹತ್ವಪೂರ್ಣ. ದೊಡ್ಡ ಹುದ್ದೆಗೆ ಏರುತ್ತಾರೆ, ಚರಂಡಿಗೆ ಇಳಿಯುತ್ತಾರೆ, ದೊಡ್ಡ ಮನುಷ್ಯರು ಭಿಕ್ಷಾಟನೆ ಮಾಡೋದು ತಪ್ಪು, ಚರಂಡಿಯಲ್ಲಿ ಇಳಿದವನು ಸೋಫಾ ಏರಬಾರದು ಅನ್ನೋ ಮಾತುಗಳು ನಿಜಕ್ಕೂ ಆಳವಾದ ಚಿಂತನೆಯಿಂದ ಬಂದಿದೆ ಅನ್ನಿಸುತ್ತದೆ"

"ಒಂದು ಮಾತು ಹೇಳ್ತೀನಿ ಸಿವಾ. ನೀವೇನೋ ಆಟ ಕಟ್ತಿದ್ದೀರ. ಅಲ್ಲಾ, ನೀವು ಕೇಳಿದ ಈ ಪ್ರಶ್ನೆಗಳನ್ನ ಇಸ್ಕೂಲ್ ಹೋಗೋ ಹುಡುಗನ್ ತಾವ ಕೇಳಿದ್ರೂ ನಾ ಹೇಳಿದ್ ಉತ್ತಾರಾನೇ ಕೊಡ್ತಿದ್ದ. ಇದ್ಕೆ ನಾನು ಬೇಕಿತ್ತಾ ನಿಮಗೆ?"

"ಮತ್ತೊಮ್ಮೆ ಒಳ್ಳೇ ಮಾತು ಆಡಿದ್ರಿ. ಒಬ್ಬ ಸ್ಕೂಲ್’ಗೆ ಹೋಗೋ ವಿದ್ಯಾರ್ಥಿಗೆ ಅರ್ಥವಾಗಿರೋ ವಿಷಯ ದೊಡ್ಡ ಮನುಷ್ಯರಿಗೆ ಯಾಕೆ ಅರ್ಥವಾಗಿಲ್ಲ? ರಾಜನೀತಿ ಅನ್ನೋ ಘನವಾದ ಮತ್ತು ಅತ್ಯಂತ ಜವಾಬ್ದಾರಿಯುತ ರಂಗದಲ್ಲಿ ಇಂತಹ ಅಚಾತುರ್ಯ ತಪ್ಪಲ್ಲವೇ?"

"ನೀವು ಈಟೊತ್ತು ಕೇಳಿದ್ದು ರಾಜಕೀಯದ ಬಗ್ಗೆ ಸಂಬಂಧಪಟ್ಟಂಗೆ ಇರ್ಲಿಲ್ವಲ್ಲಾ !"

"ನೇರವಾಗೇ ಹೇಳ್ತೀನಿ ಕೇಳಿ. ನೀವು ಹೇಳಿದ ಮಾತುಗಳನ್ನೇ ಅವಲೋಕಿಸಿ ನೊಡಿದಾಗ, ಜನ ಯಾಕೆ ರಾಜಕೀಯಕ್ಕೆ ’ಇಳೀತಾರೆ’? ದೊಡ್ಡಮನುಷ್ಯರು ’ಇಳಿದು’ ನಂತರ ತಮ್ಮನ್ನು ಗೆಲ್ಲಿಸಿ ಯಾಕೆ ’ಯಾಚಿಸುತ್ತಾರೆ’? ’ಇಳಿದು’, ’ಯಾಚಿಸಿ’ ಗೆದ್ದು ಬಂದವರು ಹಾಗೇ ಗದ್ದುಗೆಗೆ ಯಾಕೆ ’ಏರ್ತಾರೆ’? ಹಾಗೇ ಏರಿದ್ದಕ್ಕೇ ತಾನೇ ಇವತ್ತು ಆ ಗದ್ದುಗೆ ಹೊಲಸಾಗಿರೋದು? ಇಳಿದಿದ್ದಕ್ಕೆ ಹೊಲಸಾಗಿದೆ ಎಂದಿದ್ದರಿಂದಲೇನಾ ಅದನ್ನು ’ಹೊಲಸು ರಾಜಕೀಯ’ ಅನ್ನೋದು? ರಾಜಕೀಯ ಶುಚಿತ್ವ ಮೊದಲ ಪದಬಳಕೆಯಿಂದಲೇ ಶುರು ಮಾಡಬೇಕು. ಮುಂದಿನ ಪೀಳಿಗೆ ರಾಜಕೀಯಕ್ಕೆ ಏರುವ ಹಾಗಾಗಬೇಕು, ಮತವನ್ನು ಗಳಿಸೋ ಹಾಗೆ ಆಗಬೇಕು, ತೊಡುವ ಬಿಳೀಬಟ್ಟೆಯಂತೆ ಚಾರಿತ್ರ್ಯವೂ ಸ್ವಚ್ಚವಿರಬೇಕು, ಹಾಗಿದ್ದಲ್ಲಿ ಆ ಗದ್ದುಗೆಯೂ ಸ್ವಚ್ಚವಿರುತ್ತೆ. ಏನಂತೀರಾ ಪರಮೇಶಿಯವರೇ?"

ಪರಮೇಶಿ ಬಿಡಿ ... ನೀವೇನಂತೀರಾ? 

Comments

Submitted by bhalle Tue, 03/18/2014 - 16:50

In reply to by basho aras

ಧನ್ಯವಾದಗಳು ಶೋಭಾ ಅವರೇ ... ರಾಜಕೀಯವನ್ನು ಶುದ್ದ ಮಾಡುವ ಮುನ್ನ ಅರಿವು ನಮ್ಮಲ್ಲಿ ಮೂಡಬೇಕು. ಅರ್ಥಾತ್, ಅನ್ಯಾಯ ಮಾಡಿದವರ ಬಗ್ಗೆ ಅರಿತೂ ಅವರಿಗೇ ಬೆಂಬಲಿಸುವುದನ್ನು ಮೊದಲು ನಿಲ್ಲಿಸಬೇಕು. ಹೇಳುವುದು ಸುಲಭ ಮಾಡುವುದು ಕಷ್ಟ ಎಂಬುದನ್ನು ನಾನೂ ಬಲ್ಲೆ. ಎಂದೋ ಒಂದು ದಿನ ಈ ಆಂದೋಳನ ಶುರುವಾಗಲೇಬೇಕು. ಅದು ನಮ್ಮಿಂದಲೇ ಆಗಬೇಕು.

Submitted by bhalle Tue, 03/18/2014 - 16:51

In reply to by Anil Kumar1392980523

ಧನ್ಯವಾದಗಳು ಅನಿಲ್ ... ಇದೆ ಸರ್ .. ಸುಮ್ಮನಿರಬಾರದು ... ಮಾತನಾಡುತ್ತಿರಬೇಕು. ಎಂದೋ ಒಂದು ದಿನ ದನಿಗಳು ಒಗ್ಗೂಡುತ್ತದೆ ಅನ್ನೋ ಆಶಯ ನನಗೆ ಇದೆ.