ಬಡ್ಜೆಟ್ಟೆಂಬ ಬಕಾಸುರ..

ಬಡ್ಜೆಟ್ಟೆಂಬ ಬಕಾಸುರ..

 (ವಾರ್ಷಿಕ ಬಡ್ಜೆಟ್ಟೆಂಬ ಲೆಕ್ಕಿಗರ ಗ್ಯಾಡ್ಜೆಟ್ಟು)
__________________________

ಈಗ ನಾನು ಹೇಳ ಹೊರಟಿರುವುದು ವಾರ್ಷಿಕ ಬಡ್ಜೆಟ್ಟಿನ (ಆಯವ್ಯಯ ಲೆಕ್ಕಾಚಾರ) ಕುರಿತು. ಪ್ರತಿ ವರ್ಷದ ಫೆಬ್ರವರಿ ಕೊನೆಗೆ ಸಂಸತ್ತಿನಲ್ಲಿ ಹಣಕಾಸು ಮಂತ್ರಿಗಳು ಮಂಡಿಸುವ ದೇಶದ ಬಡ್ಜೆಟ್ಟಲ್ಲ ಬಿಡಿ. ಸ್ವಲ್ಪ ಪುಟ್ಟ ಮಟ್ಟದಲ್ಲಿ ಕಂಪನಿಗಳಲ್ಲಿ ನಡೆಯುವ ವಾರ್ಷಿಕ ಬಡ್ಜೆಟ್ಟಿನ ಕುರಿತು. ಕಂಪನಿ ಚಿಕ್ಕದೊ, ಮಧ್ಯಮ ಗಾತ್ರದ್ದೊ, ದೊಡ್ಡದೊ ಒಟ್ಟಾರೆ ಒಂದಲ್ಲ ಒಂದು ರೀತಿ ಆಯವ್ಯಯದ ಲೆಕ್ಕಾಚಾರ ನಡೆದೆ ನಡೆಯುತ್ತದೆ ಆಯಾ ಸಂಸ್ಥೆಯ ವಾತಾವರಣಕ್ಕೆ ಸರಿ-ಸೂಕ್ತ ಮಟ್ಟದಲ್ಲಿ. 

ತುಂಬ ಸರಳವಾಗಿ ಹೇಳುವುದಾದರೆ ಈ ಇಡಿ ವಾರ್ಷಿಕ ವ್ಯಾಯಾಮ ಎರಡು ಮುಖ್ಯ ಅಂಶಗಳ ಸುತ್ತ ಗಿರಕಿ ಹೊಡೆಯುವ ಪುನರಾವರ್ತನ ಚಕ್ರ. ಮೊದಲಿಗೆ ಸಂಸ್ಥೆಗೆ ಆ ವರ್ಷದಲ್ಲಿ ಏನೆಲ್ಲ ಮೂಲೆಗಳಿಂದ ಬರಬಹುದಾದ ಆದಾಯದ ಅಂದಾಜು ಮಾಡಿಟ್ಟುಕೊಳ್ಳುವುದು. ಮತ್ತೊಂದು ಕಡೆಯಿಂದ ಆ ಆದಾಯ ಮೂಲಕ್ಕೆ ಸಂವಾದಿಯಾಗಿ ಏನೆಲ್ಲ ಖರ್ಚು ವೆಚ್ಚಗಳನ್ನು ನಿಭಾಯಿಸಬೇಕಾಗಿ ಬರುವುದೊ ಎಂದು ಅಂದಾಜು ಲೆಕ್ಕಾಚಾರ ಹಾಕುವುದು. ಇವೆರಡು ಅಂದಾಜುಗಳನ್ನು ಕ್ರೋಢಿಕರಿಸಿದರೆ ಒಟ್ಟಾರೆ ನಿವ್ವಳ ಲಾಭ, ನಷ್ಟಗಳ ಅಂದಾಜು ಸಿಗುತ್ತದೆ. ಜತೆಗೆ ಅದನ್ನು ನಿಭಾಯಿಸಲು ಬೇಕಾದ ಹಣ ಬಲ, ಜನ ಬಲ, ಯಂತ್ರ ಬಲ ಇತ್ಯಾದಿಗಳ ಸ್ಥೂಲ ಅಂದಾಜು ಸಿಗುತ್ತದೆ. ಇದನ್ನು ಗುರಿಯತ್ತ ನಡೆಸುವ ಆಧಾರವಾಗಿಟ್ಟುಕೊಂಡು ತಮ್ಮಲ್ಲಿನ ಹಣಕಾಸು ಮತ್ತಿತರ ಸಂಪನ್ಮೂಲಗಳನ್ನು ಸಮರ್ಥವಾಗಿ ಸರಿಯಾದ ಕಡೆ ವಿನಿಯೋಗಿಸಲು ಪ್ರಯತ್ನಿಸುವುದು ಇದರ ಮೂಲೋದ್ದೇಶ. ಹಣ ತುಟ್ಟಿಯಾದ ಕಾರಣ ಮತ್ತು ಹೇರಳವಾಗಿ ದೊರಕದ ಸಂಪನ್ಮೂಲವಾದ ಕಾರಣ ಇರುವಷ್ಟು ಹಣದ ಸೂಕ್ತ ಸದ್ವಿನಿಯೋಗ ಮಾಡಿಕೊಳ್ಳುವುದು ಅತಿ ಮುಖ್ಯವಾದ ಅಂಶ. ಆಯ ವ್ಯಯದ ಲೆಕ್ಕಾಚಾರ ಈ ದಿಸೆಯಲ್ಲಿ ನಡೆಯಲು ಸಹಕಾರಿಯಾಗುವ ಹೆಜ್ಜೆ ಮತ್ತು ನಿಭಾಯಿಸಿ ಸಂಭಾಳಿಸುವ ಆಯುಧ.

ಸಿದ್ದಾಂತ ಸರಳವಾದರೂ, ಇದಕ್ಕಾಗಿ ವ್ಯಯವಾಗುವ ಶ್ರಮ, ಸಮಯ, ಸಂಪನ್ಮೂಲಗಳನ್ನು ನೋಡಿದರೆ ಕೆಲವೊಮ್ಮೆ ಅಚ್ಚರಿಯಾಗುತ್ತದೆ. ಇಡಿ ಪ್ರಕ್ರಿಯೆಯೆ ಒಂದು ಮಟ್ಟದ ಅಂದಾಜಿನ ಮೇಲೆ ನಡೆಯುವ ಕಸರತ್ತಾದರೂ 'ನಿಜಕ್ಕೂ ಹೀಗೆಯೆ' ನಡೆಯಲಿದೆಯೆಂಬ ಅನಿಸಿಕೆಯೊಡನೆ ನಡೆಯುವ ಸಿದ್ದತೆ, ವಾದ-ವಿವಾದ, ವಾಗ್ವಾದಗಳನ್ನು ಗಮನಿಸಿದರೆ ಈ ನಂಬಿಕೆಗೆ ಇನ್ನಷ್ಟು ಪುಷ್ಟಿ ದೊರಕುತ್ತದೆ. ಆದರೆ ಹಿನ್ನಲೆಯಲ್ಲಿ ಸ್ವಲ್ಪ ಆಳಕ್ಕೆ ಹೊಕ್ಕು ನೋಡಿದರೆ ಗಮನಕ್ಕೆ ಬರುವ ಅಂಶವೆಂದರೆ ತಲೆಯಿಂದ ಬಾಲದ ತನಕ ಸರಪಳಿಯ ಕೊಂಡಿಯ ಹಾಗೆ ಒಂದರ ಆಧಾರದ ಮೇಲೆ ಇನ್ನೊಂದನ್ನು ಹೆಣೆಯುತ್ತ, ಪ್ರತಿ ಹಂತದಲ್ಲೂ ಸುರಕ್ಷತೆಯ ಮೆತ್ತೆಯನ್ನು ಸೇರಿಸುತ್ತ ಇಟ್ಟಿಗೆ ಮೇಲಿಟ್ಟಿಗೆ, ಗಾರೆ, ಸೀಮೆಂಟು ಹಾಕಿ ಗೋಡೆ ಕಟ್ಟಿದ ಹಾಗೆ ಈ ಆಯವ್ಯಯದ ಕಾಲ ಪುರುಷನ ಸೃಷ್ಟಿಯಾಗುತ್ತ ಹೋಗುತ್ತದೆ. ಎಲ್ಲಾ ವ್ಯಾಯಮ ಮುಗಿದು ನೌಕರನಿಂದ ಹಿಡಿದು ಅಗ್ರೇಸರರ ತನಕ ಹತ್ತಾರು ಬಾರಿ ಓಡಾಡಿ, ತಿದ್ದುಪಡಿಯಾಗಿ ಕೊನೆಗೊಮ್ಮೆ ಒಪ್ಪಿಗೆಯ ಮುದ್ರೆ ಬಿದ್ದರೆ ಆ ವರ್ಷದ ಮಟ್ಟಿಗೆ ನಿರಾಳ; ಮುಂದಿನದೇನಿದ್ದರೂ ಅದರಂತೆ ಹೆಜ್ಜೆಯಿಕ್ಕುತ್ತಾ ಹೋಗುವುದು, ತುಸು ಸಮಯದ ನಂತರ ನೈಜ್ಯತೆಗೂ ಯೋಜನೆಗೂ ಇರುವ ಅಂತರ ಪರಿಗಣಿಸಿ ಮರು ತಿದ್ದುಪಡಿಗೆ ಪ್ರಯತ್ನಿಸುವುದು. ಹೀಗೆ ಇದೊಂದು ಸರಿ ತಪ್ಪಿನ ಬಗಲಲ್ಲಿ ಅಂದಾಜಿಸುತ್ತಲೆ ಸಾಗುವ ಯೋಜನಾ ರೂಪ.

ತಮಾಷೆಯೆಂದರೆ ಇದರಲ್ಲಿ ಅಂದಾಜು ಮಾಡುವವರಿಗೆ ತಾವು ಮಾಡುವ ಅಂದಾಜೆಷ್ಟು ನಿಖರ ಎಂಬ ಗ್ಯಾರಂಟಿಯಿರುವುದಿಲ್ಲ. ಯಾವುದೊ ಗಟ್ಟಿ , ನಂಬಿಕಾರ್ಹ ಮೂಲದ ಮಾಹಿತಿ ಆಧರಿಸಿ ಕೆಲವು ಪ್ರಜ್ಞಾಪೂರ್ವಕ ತೀರ್ಮಾನಗಳನ್ನು ಮಾಡಿ ಅದಕ್ಕೊಂದಷ್ಟು ಬಲವಾದ 'ಅನಿಸಿಕೆ'ಗಳ ಹೂರಣ ಸೇರಿಸಿ ಸಾಧ್ಯತೆಗಳ ಅಂದಾಜು ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ (ಉದಾಹರಣೆಗೆ ಆ ವರ್ಷ ಮತ್ತು ಮುಂದಿನ ಕೆಲ ವರ್ಷಗಳಲ್ಲಿ ಸಾಧ್ಯವಿರುವ ಮಾರಾಟ ವಹಿವಾಟು). ಇದರಲ್ಲಿ ಸಾಧಾರಣ ಆ ಸಂಸ್ಥೆಯ ಆ ವರ್ಷಗಳ ಅಪೇಕ್ಷೆ, ಅಭೀಷ್ಟೆಗಳು ಸೇರಿಕೊಂಡಿರುತ್ತವೆ (ಉದಾಹರಣೆಗೆ ವಾಣಿಜ್ಯ ವಹಿವಾಟು, ಕಳೆದ ವರ್ಷಕ್ಕಿಂತ ಶೇಕಡ ಐದರಷ್ಟು ಬೆಳೆಯಬೇಕು, ಲಾಭದ ಪ್ರಮಾಣ ಶೇಕಡ ಆರರಷ್ಟಾಗಬೇಕು ಇತ್ಯಾದಿ). ಮೇಲಿನವರಿಂದ ಬರುವ ಈ ಮೂಲಸರಕಿನ ಆದಾರದ ಮೇಲೆ ಪ್ರತಿ ವಿಭಾಗಗಳು ತಂತಮ್ಮ ಯಾದಿ ಪಟ್ಟಿ ತಯಾರಿಸುತ್ತವೆ - ಆ ಗುರಿ ಸಾಧನೆಗೆ ತಮಗೇನೇನು ಬೇಕು, ಏನಿದೆ, ಏನಿಲ್ಲ, ಇತ್ಯಾದಿ. ಹಾಗೆ ತಯಾರಿಸುವಾಗಲೆ ಯಥೇಚ್ಛವಾಗಿ ಪರಿಗಣಿತವಾಗುವ ಅಂಶವೆಂದರೆ 'ಸುರಕ್ಷಾ ಮೆತ್ತೆ'; ಏನಾದರೂ ತಪ್ಪಾಗಿ ಎಡವಿದರೆ ಇಡೀ ಯೋಜನೆಯೆ ಬುಡಮೇಲಾಗಬಾರದಲ್ಲ? ಅದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಶಕ್ತಿ, ಸಮಾಧಾನಾನುಸಾರ ಸುರಕ್ಷ ಮೆತ್ತೆ ಸೇರಿಸುತ್ತಾ ಮುಂದಿನ ಹಂತಕ್ಕೆ ರವಾನಿಸುತ್ತಾರೆ. 

ಹೀಗೆ ಎಲ್ಲಾ ಹಂತ ದಾಟಿ ಮುಕ್ತಾಯ ಹಂತಕ್ಕೆ ಬಂದ ಅಂದಾಜು ಆಯ ವ್ಯಯ ಲೆಕ್ಕ ತನ್ನ ಮೂಲ ಆಶಯಕ್ಕಿಂತ ಎಷ್ಟೊ ಪಟ್ಟು ಮೇಲ್ಹೊದಿಕೆಯ ಉಪಚಾರದೊಂದಿಗೆ ಅಂತಿಮ ಒಪ್ಪಿಗೆಯ ಮುದ್ರೆಗಾಗಿ ಉನ್ನತಾಧಿಕಾರಿಗಳತ್ತ ಬರುತ್ತದೆ. ಅದನ್ನು ನೋಡಿದಾಗ ಅವರಿಗೆ 'ಶಾಕ್' ಆಗುತ್ತದೆ ಅನ್ನುವುದಕ್ಕಿಂತ ಹೆಚ್ಚಾಗಿ, ನಿರೀಕ್ಷೆಗಿಂತ ಎಷ್ಟು ಪಟ್ಟು ಉಬ್ಬಿಸಲಾಗಿದೆ ಎಂಬ ಜಿಜ್ಞಾಸೆ. ಆದರೂ ಸಮಯದ ಒತ್ತಡ, ವಿವರಗಳಿಗಿಳಿದು ಪರಿಶೋಧಿಸಲಾಗದ ಅಸಹಾಯಕತೆಗಳೆಲ್ಲ ಸೇರಿ, ಯಾವುದೊ ಒಂದು ಆಧಾರದ ಮೇಲೆ ಆಯಾ ಮೊತ್ತವನ್ನು ಶೇಕಡಾವಾರು ರೀತಿಯಲ್ಲಿ ಕಡಿತಗೊಳಿಸಿಯೊ, ಕತ್ತರಿಸಿಯೊ ಮರು ರವಾನಿಸಿ ಪ್ರತಿಯೊಬ್ಬರ ಅಂದಾಜನ್ನು ಅದಕ್ಕೆ ಸೂಕ್ತವಾಗಿ ಹೊಂದಿಸಿಕೊಳ್ಳಲು ಆದೇಶ ಬರುತ್ತದೆ. ಈಗ ಅದಕ್ಕನುಸಾರ ತಂತಮ್ಮ ಗುಣಾಕಾರ, ಭಾಗಾಕಾರ ಹೊಂದಿಸುವ ಸರದಿ! ಅಂತೂ ಒಟ್ಟಾರೆ ಆಯವ್ಯಯದ ಅಂದಾಜು ಪ್ರಕ್ರಿಯೆ ಮುಗಿದಾಗ ಎಲ್ಲಾ ನಿಟ್ಟುಸಿರು ಬಿಡುತ್ತಾರೆ - ಮುಂದಿನೆಲ್ಲಾ ಕೆಲಸಗಳಿಗೂ ಆ ಆಧಾರದ ಮೇಲೆ ಚಾಲನೆ ಸಿಗುವ ಕಾರಣದಿಂದ. ಅಲ್ಲಿಯವರೆಗೂ ತಡೆದಿಟ್ಟಿದ್ದ ಹೊಸ ನೇಮಕಾತಿ, ಉದ್ಯೋಗ ಭರ್ತಿ, ಯಂತ್ರೋಪಕರಣದ ಬಂಡವಾಳ, ಖರ್ಚು-ವೆಚ್ಚಗಳೆಲ್ಲ ಒಂದೊಂದಾಗಿ ಒಪ್ಪಿಗೆ ಪಡೆದು ಕಾರ್ಯಗತಗೊಳ್ಳುತ್ತಾ ಬರುವುದು ಆಮೇಲಿಂದಲೆ. 

ಇಷ್ಟೆಲ್ಲಾ ಅಂದಾಜಿನ ಕಸರತ್ತೆ ಆದರೂ ಸಾಮಾನ್ಯರಾಗಿ ಇದರಿಂದ ನಮಗೇನು ಪರಿಣಾಮವಿರದು ಎಂದು ಕಡೆಗಣಿಸುವಂತಿಲ್ಲ. ನಮಗರಿವಿಲ್ಲದಂತೆಯೆ ಇದು ಅನೇಕ ರೀತಿಯಲ್ಲಿ ಚುರುಕು ಮುಟ್ಟಿಸುವ ಕೆಲಸ ಮಾಡಿಸುತ್ತದೆ. ಉದಾಹರಣೆಗೆ, ತಾವಂದುಕೊಂಡ ಲಾಭದ ಮಟ್ಟ ಮುಟ್ಟಬೇಕೆಂದರೆ ಎಷ್ಟು ಬೆಲೆಯೇರಿಸಿದರೆ ಸಾಧ್ಯ ಎಂಬ ಅಂದಾಜು ಕೊಡುವುದು ಈ ಆಧಾರದ ಮೇಲೆ. ಆಧಾರವೆ ತಪ್ಪಿದ್ದರೆ ಲೆಕ್ಕಾಚಾರವೂ ತಪ್ಪಾಗಿರುವುದು ಸಹಜವಾದರೂ ಅದು ಗೊತ್ತಾಗುವ ಹಾಗಿದ್ದರೆ ತಾನೆ ತೊಡಕು? ಅದೇ ರೀತಿ ಸಂಬಳ ಏರಿಕೆ, ಇಳಿಕೆ, ಉದ್ಯೋಗ ಸೃಷ್ಟಿ-ಸ್ಥಿತಿ-ಲಯ, ಖರ್ಚು-ವೆಚ್ಚಗಳ ಮೇಲಿನ ಉದಾರ ನೀತಿ ಯಾ ಕಡಿವಾಣದ ಕೆಂಗಣ್ಣು - ಎಲ್ಲದರ ಹಿಂದೆಯೂ ಅಂತರಗಂಗೆಯಾಗಿ ಪ್ರಭಾವ ಬೀರುತ್ತದೆ ಈ ಬಡ್ಜೆಟ್ಟಿನ ಬ್ರಹ್ಮ ರಾಕ್ಷಸ. ಎಲ್ಲ ಬಡ್ಜೆಟ್ಟಿನನುಸಾರ ಹೋಗುತ್ತಿದೆಯೆಂದರೆ ಎಲ್ಲವೂ ಸುಸೂತ್ರ. ಅದು ತಪ್ಪಿ ಅಡ್ಡ ದಾರಿ ಹಿಡಿಯಿತೆಂದರೆ ವರ್ಷವಿಡಿ ಅದರ ಹೊಂದಾಣಿಕೆ, ತಿದ್ದುಪಡಿಯ ಸರ್ಕಸ್ಸಿನಲ್ಲಿ ಸಮಯ ಕಳೆಯಬೇಕಾದ ಅನಿವಾರ್ಯ. ಆ ಪ್ರಕ್ರಿಯೆಯಲ್ಲೆ ಗುರಿ ತಲುಪುವುದೊ ಇಲ್ಲವೊ ಎಂಬ ಆತಂಕ , ಒತ್ತಡ ಕೂಡ. 

ಆ ಬಡ್ಜೆಟ್ಟಿನ ವಿಸ್ತಾರ ವ್ಯಾಪ್ತಿಗಳ ವಿಶ್ವರೂಪದ ಕೆಲವು ತುಣುಕುಗಳನ್ನು ಹಿಡಿದಿಡುವ ಯತ್ನ ಈ ಜೋಡಿ ಕವನಗಳದ್ದು :-)

01. ಬಡ್ಜೆಟ್ಟಿನ ರಾಜನೀತಿ - ಸಿದ್ದತೆ
________________________

ಪ್ರತಿ ವರ್ಷದ ವಿಸ್ಮಯ ಗೀತೆ
ಆಯವ್ಯಯ ಅಂದಾಜಿನಕಥೆ 
ಎಷ್ಟೊಂದುಶ್ರಮ ಲೆಕ್ಕಾಚಾರ
ಮುಂದಿನ ಸಾಲಿಗೆ ವ್ಯಾಪಾರ ||

ಹಳೆ ಚರಿತ್ರೆ ಜಾಲಾಡಿ ಪೂರ್ತಿ
ಭವಿಷ್ಯದ ಭವಿಷ್ಯಕೆ ಬಸಿರಾರ್ಥಿ 
ಅನಿಸಿಕೆ ಆಕಾಂಕ್ಷೆಗಳ ಸಾರಥಿ
ಬೆರೆಸಿದ ಪ್ರಗತಿ ಪಥದ ಸರತಿ ||

ಎಷ್ಟೊಂದು ಲೆಕ್ಕಾಚಾರ ಬವಣೆ
ಮಾರಬಹುದೆಷ್ಟು ಹೇಗೊ ಕಾಣೆ
ಅನಿಸಿಕೆಗನಿಸಿಕೆ ಮೇಲಿಟ್ಟ ತೆನೆ
ಕಟ್ಟುತ ಅಂಕಿ ಅಂಶಗಳ ಗೊನೆ ||

ಸರಿಯೊ ತಪ್ಪೊ ಯಾರಿಗ್ಗೊತ್ತು
ಒಪ್ಪಿದರೆ ಸರಿ ಮೇಲಿನ ಸುತ್ತು
ಪಕ್ವ ಅಪಕ್ವ ಆ ವರ್ಷದ ತೀಟೆ
ದೊಡ್ಡದೊಂದಂಕಿಗೆ ಸದ್ಯ ಬೇಟೆ ||

ಎಲ್ಲರ ಕಸರತ್ತು ಕೊಡುತ ಒತ್ತು
ಸಾಕಷ್ಟು ಮೆತ್ತೆ ನಡು ತುಂಬಿತ್ತು
ಕ್ಷೇಮಕರ ಗುಣಾಕಾರ ಒಬ್ಬಟ್ಟು
ಹೂರ್ಣಕಿಂತ ಹೊದಿಕೆಗೆ ಜುಟ್ಟು ||

-----------------------------------
ನಾಗೇಶ ಮೈಸೂರು
------------------------------------

02. ಬಡ್ಜೆಟ್ಟಿನ ರಾಜನೀತಿ - ತದನಂತರ
_____________________________

ಅಂತು ಅಂಕಗಣಿತದೆ ಜೂಟಾಟ
ಸಂಕಲನ ವ್ಯವಕಲನ ಆಟೋಟ
ಬಲಾಬಲಗಳ ಎಳೆದಾಡಿಸಿ ಗುಟ್ಟ
ಸೋತವರ ಸಂಕಟ ಗೆದ್ದ ಬಾಡೂಟ ||

ಮೇಲಿನವರದದೆ ನೀತಿ ಆಡಿಸುತ 
ಕೊಟ್ಟಂಕೆ-ಶಂಕೆಗಳನೆತ್ತಿ ಜಾಡಿಸುತ
ವಿವರಣೆ ಉದ್ದೇಶಾ ಕೆಣಕಾಡಿಸುತ
ಕತ್ತರಿಸಿ ತಲೆಜುಟ್ಟು ತಡಕಾಡಿಸುತ ||

ಕೊನೆಗೊಂದು ಒಪ್ಪಿಗೆ ಮುದ್ರೆ ಬಿದ್ದರೆ
ಬಂದಂತೆ ಕೊನೆಗೆ ಸುಖದಾ ನಿದಿರೆ
ಹೆಚ್ಚು ಕಡಿಮೆ ಅನಾವರಣ ಸುಧಾರೆ
ಬರುವ ವರ್ಷದವರೆಗೆ ಸರಿಸಿ ಹೊರೆ ||

ತಲುಪಿದಂತೆ ವರ್ಷದ ಕೊನೆಗಾಲ
ಅಳಿದುಳಿದ ಹಣವ್ಯಯ ಹುರಿಗಾಳ
ಬೇಕಿರಲಿ ಬಿಡಲಿ ವ್ಯಯಿಸಿಬಿಟ್ಟ ತಳ
ಬಿಡೆ ಮತ್ತೆ ಸಿಗದಿರದಪಾಯ ಕಾಲ ||

ಅಪೂರ್ಣವೊ ಪರಿಪೂರ್ಣವೊ ಸರಿ
ಎಲ್ಲ ಆಧುನಿಕ ಜಗ ಜನದ ಸವಾರಿ
ವ್ಯವಹಾರವವಲಂಬಿಸಿದರ ಕುಸುರಿ
ನಂಬಲಿ ಬಿಡಲಿ ಓಡಿಸಬೇಕು ಸೇರಿ ||

-----------------------------------
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು
-----------------------------------

 

Comments

Submitted by kavinagaraj Wed, 03/19/2014 - 09:37

ಆಯ-ವ್ಯಯ ಪುರಾಣ ಚೆನ್ನಾಗಿ ಮೂಡಿಸಿರುವಿರಿ. ಕಾಕತಾಳೀಯವೆಂಬಂತೆ ನನಗಿಂದು ಒಂದು ಸಂದೇಶ ಬಂದಿದೆ: 'Dear Tax payer, you do not appear to have filed your IT Returns. Please login to . . . .'

Submitted by nageshamysore Thu, 03/20/2014 - 01:12

In reply to by kavinagaraj

ಸರಕಾರಿ ಬಡ್ಜೆಟ್ಟಿನ ಬಂಡವಾಳದ (ಆದಾಯದ) ಮೂಲಧನ ಹೆಚ್ಚಾಗಿ ಬರುವುದೆ ಟ್ಯಾಕ್ಸುಗಳ ಮುಖಾಂತರ. ಅದಕ್ಕೆ ಸಂಬಂಧ ಪಟ್ಟಿದ್ದೆಲ್ಲ ಶಿಸ್ತಾಗಿ, ನಿಯಮಬದ್ಧವಾಗಿ ನಡೆಯುತ್ತದೆ! ಸಿಂಗಪುರದಲ್ಲೂ ಅಷ್ಟೆ 'ಮೊದಲು ಕಾಸು ಮಡಗು, ಆಮೇಲ್ ಮಾತಾಡು' ಅನ್ನುವ ವಿಧಾನವೆ ಪ್ರಚಲಿತ. ಅದರಲ್ಲೂ ಸರಕಾರಿ ಸೇವೆಗಳಲ್ಲಂತೂ ಇದು  ಇನ್ನು ಹೆಚ್ಚು ಪ್ರಚುರ. ಆದರಿಲ್ಲಿ ಟ್ಯಾಕ್ಸ್ ರಿಟನ್ಸ್ ಫೈಲ್ ಮಾಡುವುದು ತುಂಬಾ ಸರಳ. ಪ್ರತಿ ವರ್ಷ ಮಾಡುವ ಅಗತ್ಯವಿಲ್ಲ - ಕಂಪನಿಯಿಂದ ನೇರ ಮಾಹಿತಿ ರವಾನೆಯಾಗುತ್ತದೆ. ಕಂಪನಿ ಹೊರಗಿನ ಅಧಿಕ ಆದಯವಿದ್ದರೆ ಮಾತ್ರ ಡಿಕ್ಲೇರು ಮಾಡಲು ಪ್ರತಿ ವರ್ಷ ರಿಟರ್ನ್ಸ್ ಫೈಲು ಮಾಡಬೇಕು :-)

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು

Submitted by naveengkn Thu, 03/20/2014 - 17:07

ಬದುಕಿನ‌ ಬಡ್‍ಜೆಟ್ಟು,,,,, ಅಬ್ಬಾ ಏನಿದರ‌ ಕರಾಮತ್ತು,,,,
ನಾಗೇಶರೆ ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ.

Submitted by nageshamysore Fri, 03/21/2014 - 03:23

In reply to by naveengkn

ನವೀನರೆ ನಮಸ್ಕಾರ. ಇಡಿ ಆಯ ವ್ಯಯ ಪ್ರಕ್ರಿಯೆ ತುಂಬ ವಿಸ್ತಾರ, ವ್ಯಾಪ್ತಿಯುಳ್ಳ ವಿಷಯ. ನಾನು ಸಮಗ್ರ ರೂಪ ಕಟ್ಟಿಕೊಡುವ ಬರಿ ಮೇಲ್ನೋಟದ ತುಣುಕನ್ನಷ್ಟೆ ಬಳಸಿಕೊಂಡಿದ್ದೇನೆ - ವಿಭಿನ್ನ ವಸ್ತುವಾದ ಕಾರಣ ಹಿಡಿಸೀತೆಂಬ ಆಶಯದಲ್ಲಿ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು.

Submitted by lpitnal Thu, 03/20/2014 - 23:23

ಆತ್ಮೀಯ ನಾಗೇಶ ಜಿ, ಮುನ್ನುಡಿಯೊಂದಿಗೆ ಎರಡು ಕವನಗಳು ಬಡ್ಜೆಟ್ ಕುರಿತು. ದೀರ್ಘ ಅಧ್ಯಯನ ಎದ್ದು ಕಾಣುವುದು. ಅಂತಹ ಸಬ್ಜೆಕ್ಟ್ ಕೂಡ ಸಾಹಿತ್ಯದಲ್ಲಿ ಹೆಣೆದಿದ್ದು ನಿಜಕ್ಕೂ ಸಾಹಸಮಯ.ಧನ್ಯವಾದಗಳು.

Submitted by nageshamysore Fri, 03/21/2014 - 03:31

In reply to by lpitnal

ಇಟ್ನಾಳ್ ಜಿ ನಮಸ್ಕಾರ. ಮೊದಲಿಗೆ ಆಯವ್ಯಯ ವ್ಯವಹಾರದಲ್ಲಿ ನನ್ನ ಹಿನ್ನಲೆ ತುಂಬ ಸೀಮಿತ ಮಟ್ಟದ್ದು. ಕಂಪನಿಗಳಲ್ಲಿ ದೂರದಿಂದ ನೋಡಿಯಷ್ಟೆ ಗೊತ್ತು. ಆರ್ಥಿಕ ವಿಭಾಗಗಳಲ್ಲಿ ಅದರೊಳಗಿಳಿದು ಈಜಾಡಿದ ಅನುಭವ, ಹಿನ್ನಲೆ - ಎರಡೂ ಇಲ್ಲ. ಆದರೆ ಹೊರಗಿಂದ ಕಂಡ ಸಮಗ್ರ ನೋಟವನ್ನು ನಾನು ಅರಿತಂತೆ ಚಿತ್ರಿಸುವ ಯತ್ನವಷ್ಟೆ. ತುಸು ಸಾಹಸವೆಂದೆ ಗೊತ್ತಿದ್ದರೂ, ಈ ತರದ ಸಾಮಾಗ್ರಿಯನ್ನು ನಮ್ಮ ಸಾಹಿತ್ಯ ಸಾಗರದಲ್ಲಿ ಸೇರಿಸುವ ಯತ್ನ - ಅದರ ಕುರಿತರಿಯದವರಿಗೊಂದು ಪಕ್ಷಿನೋಟ ಸಿಕ್ಕರೆ, ಈಗಾಗಲೆ ಅರಿತವರಿಗೆ ಕನ್ನಡದಲ್ಲಿ ಓದಿ ಆಸ್ವಾದಿಸುವ / ತಿದ್ದುವ ಅವಕಾಶ :-)

Submitted by Vasant Kulkarni Fri, 03/21/2014 - 11:10

ನಾಗೇಶ್ ಅವರೆ, ನಿಮ್ಮ ಲೆಕ್ಕಾಚಾರದ ಲೇಖನ ಚೆನ್ನಾಗಿದೆ. ಕೊನೆಗಿರುವ ಕವನಗಳು ಮನಸೆಳೆಯುತ್ತವೆ. ಈ ತರಹದ ಬಡ್ಜೆಟ್ exerciseಗಳಲ್ಲಿ ಭಾಗವಹಿಸುವದರಿಂದ ನಾನು ನಿಮ್ಮ ಲೇಖನದ ಮೂಲ ಪ್ರೇರಣೆಯೊಂದಿಗೆ ಸರಳವಾಗಿ connect ಆಗುತ್ತೇನೆ.

Submitted by nageshamysore Sat, 03/22/2014 - 03:31

In reply to by Vasant Kulkarni

ನಮಸ್ಕಾರ ವಸಂತ್. ಮ್ಯಾನೇಜ್ಮೆಂಟಿನಲ್ಲಿದ್ದು ಈ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವರಿಗೆ ಈ ವಸ್ತು ಸುಲಭವಾಗಿ ಅರಿವಾಗಿಬಿಡುತ್ತದೆ. ಅದರಲ್ಲೂ ಕೆಲವಾರು ಬಾರಿ ತಿದ್ದಿ , ಮಾರ್ಪಡಿಸಿದ ಅನುಭವಿಗಳಿಗೆ ಪ್ರತಿ ವರ್ಷದ ಒದಾಟ ಇದು. ಆದರೆ ಲೆಕ್ಕಾಚಾರ ವಿಭಾಗದಲ್ಲಿರುವವರ ಪ್ರಮುಖ ಕೆಲಸದಲ್ಲಿ ಇದು ಒಂದಾದ ಕಾರಣ ಅವರಿಗೆ ಈ ಪ್ರಕ್ರಿಯೆಯೆ ಹೆಚ್ಚು ಪ್ರಿಯವೇನೊ? ಸಿದ್ದಾಂತ ಸರಳವಾದರೂ ಅಳವಡಿಕೆಯಲ್ಲಿರುವ ಕ್ಲಿಷ್ಟತೆಯಿಂದಾಗಿ ನನಗಂತೂ ಇದು ಸದಾ ಸೋಜಿಗ ಹುಟ್ಟಿಸುವ ವಿಷಯ :-)

Submitted by ravindra n angadi Fri, 03/21/2014 - 15:17

ನಮಸ್ಕಾರಗಳು ಸರ್,
ನಿಮ್ಮ ವಾರ್ಷಿಕ ಬಡ್ಜೆಟ್ ಕವನ ಚೆನ್ನಾಗಿ ಮೂಡಿಬಂದಿದೆ. ಓದುಗರಿಗೆ ನಿಮ್ಮ ಕವನಗಳಿಂದ ಹೊಸ ವಿಚಾರಗಳನ್ನು ಮೂಡಿಸುವ ನಿಮ್ಮ ಈ ಪ್ರಯತ್ನಕ್ಕೆ ಧನ್ನವಾದಗಳು.
ಈ ಬಡ್ಜೆಟ್ ನ ಕ್ರೆಡಿಟ್ಟು ನಿಮಗೇ ಸಲ್ಲಬೇಕು.
ಧನ್ಯವಾದಗಳು.

Submitted by nageshamysore Sat, 03/22/2014 - 03:41

In reply to by ravindra n angadi

ರವೀಂದ್ರರೆ ನಮಸ್ಕಾರ. ಕಂಪನಿಗಳ ಜಗದಲ್ಲಿ ನಡೆಯುವ ಎಲ್ಲಾ ಪ್ರಕ್ರಿಯೆಗಳು ಜನ ಸಾಮಾನ್ಯರಿಗೆ ಗೊತ್ತಿರುವುದಿಲ್ಲ. ಕೆಲವು ಸಂಕೀರ್ಣವಾದದ್ದನ್ನು ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ - ಅದಕ್ಕಿರಬೇಕಾದ ಹಿನ್ನಲೆಯಿಂದಾಗಿ. ಆ ವಿಷಯ-ವಸ್ತುಗಳನ್ನು ತುಸು ಸರಳೀಕರಿಸಿ ಸಮಗ್ರ ರೂಪದಲ್ಲಿ ಹೇಳುವ ಪ್ರಯತ್ನ. ಮನೆಗಳಲ್ಲಿ 'ಬಡ್ಜೆಟ್' ಮ್ಯಾನೇಜ್ ಮಾಡುವವರಿಗೆ ತಾವು ಸಂಭಾಳಿಸುವ ಬಡ್ಜೆಟ್ಟಿಗೂ ಕಂಪನಿ ಬಡ್ಜೆಟ್ಟಿಗೂ ಮೂಲತಃ ಹೆಚ್ಚು ವ್ಯತ್ಯಾಸವೇನೂ ಇಲ್ಲವೆಂದು ಅರಿವಾಗಿಸುವ ಯತ್ನ - ಅದನ್ನು ಗ್ರಹಿಸಿ ಕಂಡುಹಿಡಿದ ಕ್ರೆಡಿಟ್ಟು ನಿಮಗೆ! ಧನ್ಯವಾದಗಳು :-)