ಅಬ್ಬೇಪಾರಿಗಳು - ಲಕ್ಷ್ಮೀಕಾಂತ ಇಟ್ನಾಳ
ಅಬ್ಬೇಪಾರಿಗಳು - ಲಕ್ಷ್ಮೀಕಾಂತ ಇಟ್ನಾಳ
ಕೆಳಗೆ, ಕೆಳಗೆ ಇಳಿದವರೆಲ್ಲ,
ಮೇಲೆ, ಮೇಲೆ ಕಾಣುತಿಹರಲ್ಲ!
ನಿಲ್ಲಲೇ ಹೆಣಗುತ್ತಿರುವೆ, ನಿಂತಲ್ಲೇ ನಾನು,
ಇಳಿದಿಲ್ಲ ಕೆಳಗೆ, ಇಲ್ಲಿಂದ ನಾನು
ಆದರೂ ಹೇಳುವರು,
ಬಲು ಹಿಂದೆ ಉಳಿದಿರುವೆ, ನೀನು!
ಮರದ ಮೇಲೆ ಹಕ್ಕಿ, ಹೆಣೆದೊಂದು ಗೂಡು
ಖುಷಿ ಖುಷಿಯೇ, ಮರವೂ ನೀಡಿತ್ತು, ಹಸಿರು ಮಾಡು
ಹಸಿರು ಹೆಚ್ಚಿಸಿ, ಮರಿಗಳನ್ನು, ಹಾವು-ಹದ್ದಿನಿಂದ ರಕ್ಷಿಸಲು,
ನೀರು ಹುಡುಕಿ ಚಾಚಿತ್ತು, ಬೇರುಗಳ ಜಾಡು
ಸುತ್ತ ನೀರು ಬತ್ತಿ, ಬೇರು ಬೆಂಡಾಗಿ, ಒಣಗಿ ಬಿಟ್ಟಿತು ಮರ
ಮರಿಗಳೊಂದಿಗೆ ಜಾಗ ಖಾಲಿ ಮಾಡಿತ್ತು ಹಕ್ಕಿ!
ಮಗನ ತೊಂಡು ಬೇಡಿಕೆಗೆ, ದಾಗೀನದ
ದುಡ್ಡನ್ನೇ ನೀಡಿದ್ದಳು, ಅವ್ವ, ಕಂತೆ ಕಂತೆ,
ದಿನ ರಾತ್ರಿಗಳನ್ನು, ಗೇಣಿನಿಂದ ಎಣಿಸಿದ್ದರು ಅವರು!
ಕುಡಿಯಬಾರದೆಂದು, ಬೆವರು, ತಮ್ಮಂತೆ
ಕುವರ, ಈಗವ ದೊಡ್ಡವ, ಮನೆಯಲ್ಲಿ ಅವನದೇ ಹಿರೇತನ,
ಅಪ್ಪನ ನಿರೀಕ್ಷೆಗಳನ್ನೆಲ್ಲ ಒಣ ರೆಂಬೆಗಳಂತೆ,
ಕಡಿದುಹಾಕಿದ್ದ,
ಅವ್ವನಿಂದಲೂ ಕೆಲಸ ಕದಿಯುತ್ತಿದ್ದ,
ಕೆಲಸದವರೀಗ ಬರುತ್ತಿಲ್ಲವಂತೆ!
ಮಗನಿಗೆ ಅಂಜಿ ಮನೆಯಲ್ಲಿ,
ಅನ್ನದ ಅಗುಳೂ, ಅವಿತಿರುತ್ತದಂತೆ!
ಮುಂದೆ ಮುಂದೆ ಓಡಿರುವ ದಾರಿಯಲ್ಲಿ,
ಹೆಜ್ಜೆಗಳು ಅವನವು ಹಾರುತ್ತಿವೆ,
ಹಿಂದೆ ಬರುವ ರಸ್ತೆಯನ್ನು, ಸೋತ ಕಾಲುಗಳು
ಎಳೆಯಲಾರದೇ ಎಳೆಯುತ್ತಿವೆ
ಮಸುಕಾಗಿ ಕಂಡರೂ, ಗುರುತು ಹಿಡಿಯುವುದು,
ಚಾಳೀಸು ಬಂದಿರುವ, ಆ ಕನ್ನಡಿ ಮಾತ್ರ!
ಮನೆಯಲ್ಲಿ ಎಲ್ಲರಿಗೂ ಅಪರಿಚಿತರು ಅವರೀಗ!
ಚಿತ್ರ ಕೃತಜ್ಞತೆ: ಇಂಟರನೆಟ್
Comments
ಉ: ಅಬ್ಬೇಪಾರಿಗಳು - ಲಕ್ಷ್ಮೀಕಾಂತ ಇಟ್ನಾಳ
ಇಟ್ನಾಳ್ ಜಿ ನಮಸ್ಕಾರ. ಕಾಲಚಕ್ರ ಉರುಳಿ ಕಸುವೆಲ್ಲ ಹೀರಿ ಹಿಂಡಿ ಹಿಪ್ಪೆ ಮಾಡಿ ಉಳಿಸಿದ ವೃದ್ದ ಕಾಯಕೆ ವಿಶ್ರಾಂತಿಯ ಉಡುಗೊರೆಯ ಬದಲು, ಮತ್ತಷ್ಟು ದಣಿಸಿ ಹೈರಾಣಾಗಿಸುವ ವ್ಯವಸ್ಥೆಯ ದಾರುಣ ಕ್ರೌರ್ಯವನ್ನು ವಿಧಿಯಿಲ್ಲದೆ ಸಹಿಸುವ ಪಾಡು ಈ ಅಬ್ಬೇಪಾರಿಗಳದು. ಸಂಬಂಧಗಳ ಸೂಕ್ಷ್ಮತಂತು ಲೌಕಿಕ ಜಂಜಾಟದಲ್ಲಿ ದುರ್ಬಲವಾಗಿಬಿಡುವ ಪರಿಯೆ ಅಚ್ಚರಿಯ ವಸ್ತು. ಅದನ್ನು ಸೊಗಸಾಗಿ ಬಿಡಿಸಿಟ್ಟ ಕವನ ಚೆನ್ನಾಗಿದೆ.
In reply to ಉ: ಅಬ್ಬೇಪಾರಿಗಳು - ಲಕ್ಷ್ಮೀಕಾಂತ ಇಟ್ನಾಳ by nageshamysore
ಉ: ಅಬ್ಬೇಪಾರಿಗಳು - ಲಕ್ಷ್ಮೀಕಾಂತ ಇಟ್ನಾಳ
ಆತ್ಮೀಯ ನಾಗೇಶ ಜಿ, ತಮ್ಮ ವಾಸ್ತಮಿಕ ನೋಟದ ವಿಮರ್ಶಾತ್ಮಕ ನುಡಿಗಳಿಗೆ ಧನ್ಯವಾದಗಳು. ಕವನದ ಧ್ಯೇಯವನ್ನು ಅರ್ಥವತ್ತಾಗಿ ಗ್ರಹಿಸಿದ್ದು ಕೂಡ ಮೆಚ್ಚುಗೆಯಾಯಿತು. ಧನ್ಯವಾದಗಳು
ಉ: ಅಬ್ಬೇಪಾರಿಗಳು - ಲಕ್ಷ್ಮೀಕಾಂತ ಇಟ್ನಾಳ
ಲಕ್ಷ್ಮೀಕಾಂತ ಅವರೆ, ಎಂದಿನಂತೆ ಮತ್ತೊಂದು ಉತ್ತಮ ಕವನ. ನಿಮ್ಮ ಕವನದ ವಸ್ತು ಹಾಗೂ ನಿರೂಪಣೆಗಳೆರಡರಲ್ಲಿಯೂ ನಾವೀನ್ಯತೆಯಿದೆ. ಹೀಗೆಯೇ ಬರೆಯುತ್ತಿರಿ.
In reply to ಉ: ಅಬ್ಬೇಪಾರಿಗಳು - ಲಕ್ಷ್ಮೀಕಾಂತ ಇಟ್ನಾಳ by Vasant Kulkarni
ಉ: ಅಬ್ಬೇಪಾರಿಗಳು - ಲಕ್ಷ್ಮೀಕಾಂತ ಇಟ್ನಾಳ
ಆತ್ಮೀಯ ವಸಂತ ಜೀ, ತಮ್ಮ ಪ್ರೀತಿ ಪೂರ್ವಕ ಮೆಚ್ಚುಗೆಗೆ ವಂದನೆಗಳು. ಕವನದ ವಸ್ತು ಹಾಗೂ ನಾವೀಣ್ಯತೆಗಳನ್ನು ಗುರುತಿಸಿದ್ದಿರಿ. ಹಾಗೂ ಈ ಕವನಕ್ಕೆ ಮೆಚ್ಚುಗೆಯೊಂದಿಗೆ ಹೀಗೆಯೇ ಬರೆಯುತ್ತಿರಲು ಶುಭ ಕಾಮನೆಗಳ ಹಾರೈಕೆ ತುಂಬು ಮನದಿಂದ ನೀಡಿದ್ದು ಖುಷಿ ತಂದಿತು. ಸರ್ ಮತ್ತೊಮ್ಮೆ ಧನ್ಯವಾದಗಳು.
ಉ: ಅಬ್ಬೇಪಾರಿಗಳು - ಲಕ್ಷ್ಮೀಕಾಂತ ಇಟ್ನಾಳ
ನಮಸ್ಕಾರಗಳು ಸರ್,
ನಿಮ್ಮ "ಅಬ್ಬೇಪಾರಿಗಳು" ಕವನ ಬಹಳ ಚೆನ್ನಾಗಿದೆ ಸರ್, ಇದು ಒಂದು ಓದುಗರ ಮನ ಕರಗಿಸುವ ಕವನ ಎಂದರೆ ತಪ್ಪಾಗಲಾರದು, ಧನ್ಯವಾದಗಳು.
In reply to ಉ: ಅಬ್ಬೇಪಾರಿಗಳು - ಲಕ್ಷ್ಮೀಕಾಂತ ಇಟ್ನಾಳ by ravindra n angadi
ಉ: ಅಬ್ಬೇಪಾರಿಗಳು - ಲಕ್ಷ್ಮೀಕಾಂತ ಇಟ್ನಾಳ
ಪ್ರಿಯ ರವೀಂದ್ರರವರಿಗೆ , ತಮ್ಮ ಮೆಚ್ಚುಗೆಗೆ ಧನ್ಯವಾದಗಳು.
ಉ: ಅಬ್ಬೇಪಾರಿಗಳು - ಲಕ್ಷ್ಮೀಕಾಂತ ಇಟ್ನಾಳ
ಮನ ಕಲಕುವ ವಾಸ್ತವತೆ! ರಸ ಹೀರಿದ ಮೇಲೆ ಕಬ್ಬಿನ ಜೊಂಡಿಗೆ ಬೆಲೆಯೇನು?
In reply to ಉ: ಅಬ್ಬೇಪಾರಿಗಳು - ಲಕ್ಷ್ಮೀಕಾಂತ ಇಟ್ನಾಳ by kavinagaraj
ಉ: ಅಬ್ಬೇಪಾರಿಗಳು - ಲಕ್ಷ್ಮೀಕಾಂತ ಇಟ್ನಾಳ
ಹಿರಿಯರಾದ ಕವಿನಾ ರವರಿಗೆ ಆತ್ಮೀಯ ನಮಸ್ಕಾರಗಳು. ಗುಲ್ಜಾರರ ನಜ್ಮ ನ ಸಾಲೊಂದನ್ನು ನೋಡಿ,
' ಸಾಥ ಹೀ ಸಾಥ, ಚಲತೇ ಚಲತೇ ಕಹೀಂ,
ಹಾಥ ಛೂಟೇ ಮಗರ್, ಪತಾ ಹೀ ನ ಚಲಾ,
.........ಆಜಕಲ್ ಬಹುತ ಅಜನಬೀ ಸೀ ಲಗತೀ ಹೋ'.
ಬದುಕು, ಪ್ರಕೃತಿ, ಕಾಲ ಕೂಡ ಒಂದೇ ವ್ಯಕ್ತಿಗೆ, ಹಲವಾರು ಮುಖಗಳನ್ನು ಹೇಗೆ ನೀಡುತ್ತ, ಬದಲಾವಣೆಯ ಮುಖವಾಡವನ್ನು ಹೇಗೆ ಅನುವು ಮಾಡಿಬಿಡುತ್ತವೆ ಅಲ್ಲವೇ. ಮೌಲ್ಯಗಳ ಬದಲಾವಣೆಯೋ, ಮನಷ್ಯನ ಕೃತಘ್ನತೆಯೋ. ಅಂತೂ ಬಳಲಿದ ಜೀವಗಳಿಗೆ ತೊಂದರೆ, ಕಷ್ಟ, ನೋವು ತಪ್ಪುವುದಿಲ್ಲ ಎಂಬುದು ನಿತ್ಯ ಸತ್ಯಗಳಲ್ಲೊಂದು. ವಿಚಿತ್ರವಲ್ಲವೇ....
ಉ: ಅಬ್ಬೇಪಾರಿಗಳು - ಲಕ್ಷ್ಮೀಕಾಂತ ಇಟ್ನಾಳ
ಇಟ್ನಾಳರೆ ಕವನ ಇಷ್ಟವಾಯಿತು!
In reply to ಉ: ಅಬ್ಬೇಪಾರಿಗಳು - ಲಕ್ಷ್ಮೀಕಾಂತ ಇಟ್ನಾಳ by partha1059
ಉ: ಅಬ್ಬೇಪಾರಿಗಳು - ಲಕ್ಷ್ಮೀಕಾಂತ ಇಟ್ನಾಳ
ಧನ್ಯವಾದ ಪಾರ್ಥ ಅವರೇ, ತಮ್ಮ ಮೆಚ್ಚುಗೆಗೆ ಧನ್ಯ. ಅಂದಹಾಗೆ ತಮ್ಮ ಕಥೆಯ ಪುಸ್ತಕ ಪ್ರಕಟಿಸಿಬಿಡಿ ಸರ್., ಪ್ರಕಟಿಸಿದ್ದರೆ ತಿಳಿಸಿ,ನನ್ನ ಲೈಬ್ರರಿಗೆ ಸೇರಿಸಿಕೊಳ್ಳಬಯಸುವೆ. ತಮ್ಮ ಸಾಹಿತ್ಯ ಪ್ರೇಮವೇ ನನಂಥವರಿಗೆ ಸ್ಪೂರ್ತಿ ತುಂಬುತ್ತೆ ಸರ್.ವಂದನೆಗಳು