ಮಾಯಾಮೃಗ

ಮಾಯಾಮೃಗ

 

  ಮಾಯಾಮೃಗ

 

ಬುದ್ಧ ಹೇಳಿದರು ಆಸೆಯೇ ದುಖಃಕೆ ಮೂಲ

ಅದ ಅರ್ಥೈಸಲು ಬೇಕಾಯಿತು ಕೆಲ ಕಾಲ

 

ನನಗೂ ಬೇಡ ನಿರಾಸೆಗಳ ಹೊರುವ ಭಾರ

ಎಲ್ಲ ಆಸೆಗಳ ತ್ಯಜಿಸಿ ಮಾಡುವೆ ಮನ ಹಗುರ

 

ಎಲ್ಲ ಆಸೆಗಳ ಧುತ್ತನೆ ಬಿಟ್ಟು ಕೂತೆ ಒಮ್ಮೆಲೆ

ಎಲ್ಲವೂ ಕಳೆದಂತೆ ಮುಖ ಬಾಡಿತು ಒಮ್ಮೆಲೆ

 

ಸ್ವಲ್ಪ ದಿನಗಳು ಹಾಗೆ ಕಳೆದೆ ಕಳಾಹೀನನಾಗಿ

ವೈರಾಗ್ಯ ಮೂಡಿ ಕುಳಿತ ಸನ್ಯಾಸಿಯಂತಾಗಿ

 

ಆಸೆಗೂ ಗೊತ್ತು ಹೃದಯದಲ್ಲಿನ ಸಂವೇದನೆ

ಅದರ ವಾಸ್ತವ ಮಾಚಬಲ್ಲ ಎಲ್ಲ ಪ್ರಲೋಭನೆ

 

ಹೃದಯಕೆ ಅರ್ಥವಾಗದು ಮೆದುಳಿನ ಭಾಷೆ

ಮತ್ತೆ ಏರುತಿದೆ ಅವಾಸ್ತವಿಕ ಆಸೆಗಳ ನಶೆ

 

ಅನುಭವವಿದ್ದರೂ ಮಾಯಾಮೃಗದ ಬೆನ್ನತ್ತಿದೆ

ಅದು ಮಿಂಚಿಮಾಯವಾದಾಗ ಪರಿತಪಿಸಿದೆ

 

ತೀರದ ಆಸೆಗಳು ಭಾರವಾಗಿ ಕಾಡಿವೆ ಜೀವನವ

ಬಿಡದೆ ಮಾಯಾಮೃಗವ ಹಿಡಿಯುವ ಹಂಬಲವ

 

- ತೇಜಸ್ವಿ ಎ ಸಿ 

Rating
No votes yet

Comments

Submitted by nageshamysore Sat, 03/22/2014 - 03:22

ತೇಜಸ್ವಿಯವರೆ ನಮಸ್ಕಾರ. ಆಸೆಯೆಂಬ ಮರೀಚಿಕೆಯ ಬೆನ್ನು ಹತ್ತಿ ಹೊಡೆದಾಡುತ್ತ ಸಾಗುವುದೆ ಜೀವನವಾದಾಗ ಗೆಲುವು ಸಿಗುವುದು ಪ್ರಲೋಭನೆಗೆ ಎಂಬುದು ವಾಸ್ತವದ ಕಹಿ ಸತ್ಯ. ಅದನ್ನು ಗೆಲ್ಲ ಬಲ್ಲ ಸಾಧಕರು ಅಲ್ಲೊಬ್ಬರಿಲ್ಲೊಬ್ಬರಿರಬಹುದಾದರೂ ಒಟ್ಟಾರೆ ಮಾಯಾಪಾಶದಡಿ ಸೋತವರೆ ಹೆಚ್ಚು. ಒಂದು ಪ್ರಜ್ಞಾಹಂತದ ಅರಿವು ಮೂಡಿದ ಹೊತ್ತಿನಲ್ಲಿ ಅದನ್ನು ಗೆಲ್ಲುವ ತಪನೆಯುಂಟಾದರೂ ಅದು ಹೇಗೆ ಮತ್ತೆ ಅದೆ ಹಳ್ಳಕ್ಕೆ ಜಾರಿಸುತ್ತದೆ, ಮರೀಚಿಕೆಯಾಗಿ ಕಾಡುತ್ತದೆ ಎನ್ನುವುದನ್ನು ಚೆನ್ನಾಗಿ ಬಿಂಬಿಸುವ ಕವನ. ಧನ್ಯವಾದಗಳು :-)

Submitted by Tejaswi_ac Mon, 03/24/2014 - 20:41

In reply to by nageshamysore

ಧನ್ಯವಾದಗಳು ನಾಗೇಶ್ ರವರೇ. ಜೀವನದಲ್ಲಿ ಬರುವ ಅನೀರೀಕ್ಷಿತ ತಿರುವುಗಳು ಮುಂದಿನ ಜೀವನದ ಬಗ್ಗೆ ಭರವಸೆ ಮೂಡಿಸಿ ಮತ್ತದೇ ಆಸೆಗಳ ಬೆನ್ನತ್ತುವಂತೆಮಾಡಿ ಬಿಡುತ್ತದೆ. ಅನುಭವದಿಂದ ಮೂಡಿದ ಕವನವಿದು.

Submitted by kavinagaraj Sat, 03/22/2014 - 08:13

ವೈರಾಗ್ಯ ಅನ್ನುವುದು ಒಂದು ಸಾಧನೆ. ನಿಜ ವಿರಾಗದಲ್ಲಿ ಮನ ಪ್ರಫುಲ್ಲಿತವಾಗುತ್ತದೆ. ಅಭಾವ ವೈರಾಗ್ಯ ದುಃಖ ಕೊಡುತ್ತದೆ. ವಾಸ್ತವದಿಂದ ಕೂಡಿದ ಚಿತ್ರಣ. ಶುಭವಾಗಲಿ.