ತುರ್ತುಪರಿಸ್ಥಿತಿ-ಆರೆಸ್ಸೆಸ್-ಗಾಂಧೀಜಿ ಹಾಗೂ ನಾವು!

ತುರ್ತುಪರಿಸ್ಥಿತಿ-ಆರೆಸ್ಸೆಸ್-ಗಾಂಧೀಜಿ ಹಾಗೂ ನಾವು!

     ಎತ್ತಣೆತ್ತಣ ಸಂಬಂಧ! ಯಾವುದೇ ಪೀಠಿಕೆ, ಹಿನ್ನೆಲೆ ಇಲ್ಲದೆ ನೇರವಾಗಿ ವಿಷಯಕ್ಕೆ ಬಂದು ಬಿಡುತ್ತೇನೆ. ಅಂದು ದಿನಾಂಕ ೯-೧೧-೧೯೭೫. ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದ ಸಮಯ. ದೇಶದೆಲ್ಲೆಡೆ ತುರ್ತು ಪರಿಸ್ಥಿತಿಯ ಕಾವು ವ್ಯಾಪಿಸಿತ್ತು. ಪ್ರಜಾಪ್ರಭುತ್ವಕ್ಕೆ ಹಿಡಿದಿದ್ದ ಗ್ರಹಣ ಮುಕ್ತಿಗಾಗಿ ಲೋಕನಾಯಕ ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ 'ಲೋಕ ಸಂಘರ್ಷ ಸಮಿತಿ' ಜನ್ಮ ತಾಳಿತ್ತು. ೧೪-೧೧-೧೯೭೫ರಿಂದ ಸತ್ಯಾಗ್ರಹ ನಡೆಸಿ 'ಜೈಲ್ ಭರೋ' ಚಳುವಳಿ ನಡೆಸಲು ನಿರ್ಧರಿತವಾಗಿತ್ತು. ಅದೇ ರೀತಿ ಹಾಸನ ಜಿಲ್ಲೆಯಲ್ಲೂ ಸತ್ಯಾಗ್ರಹದ ರೂಪರೇಷೆ ನಿರ್ಧರಿಸಲು ನಾವು ಕೆಲವು ತರುಣರು ಒಂದು ಮನೆಯಲ್ಲಿ ಸೇರಿದ್ದೆವು. ಹೀಗೆ ಸೇರಿದ್ದ '೧೨ ಜನ ಬುದ್ಧಿವಂತ'ರಲ್ಲಿ ೧೧ ಜನರು ಯಾರೆಂದರೆ ಆಗಿನ ಜಿಲ್ಲಾ ಪ್ರಚಾರಕ್ ಪ್ರಭಾಕರ ಕೆರೆಕೈ, ನಾನು, ಇಂಜನಿಯರಿಂಗ್ ಕಾಲೇಜ್ ಡೆಮಾನ್ಸ್ಟ್ರೇಟರ್ ಚಂದ್ರಶೇಖರ್, ಬ್ಯಾಂಕ್ ಉದ್ಯೋಗಿ ಜಯಪ್ರಕಾಶ್, ಟೈಲರ್ ಜನಾರ್ಧನ ಐಯಂಗಾರ್, ಪೆಟ್ಟಿಗೆ ಅಂಗಡಿ ಕಛ್ ರಾಮಚಂದ್ರ (ಗೋವಾ ವಿಮೋಚನಾ ಚಳುವಳಿಯಲ್ಲಿ ಭಾಗವಹಿಸಿದ್ದರಿಂದ ಆತನಿಗೆ ಕಛ್ ಎಂಬ ಪೂರ್ವನಾಮ ಅಂಟಿತ್ತು), ವಿದ್ಯಾರ್ಥಿಗಳಾಗಿದ್ದ ಪಾರಸಮಲ್, ನಾಗಭೂಷಣ, ಶ್ರೀನಿವಾಸ, ಪಟ್ಟಾಭಿರಾಮ, ಸದಾಶಿವ. ೧೨ನೆಯವನ ಹೆಸರು ಹೇಳುವುದಿಲ್ಲ. ನನ್ನನ್ನು ೫ ತಿಂಗಳುಗಳ ಹಿಂದೆಯೇ ಒಮ್ಮೆ ಆರೆಸ್ಸೆಸ್ ಚಟುವಟಿಕೆ ಮಾಡುತ್ತಿದ್ದೆನೆಂಬ ಆರೋಪದ ಮೇಲೆ ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಹಾಗಾಗಿ ಹಾಸನದ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ನನ್ನನ್ನು ಸೇವೆಯಿಂದ ಅಮಾನತ್ತು ಮಾಡಿದ್ದರು. ನಾವುಗಳು ಚಂದ್ರಶೇಖರರ ಮನೆಯಲ್ಲಿ ಕುಳಿತು ಕಾಫಿ ಕುಡಿಯುತ್ತಾ ಮಾತನಾಡುತ್ತಿದ್ದಾಗ ಪೋಲಿಸರ ಸಮೂಹವೇ ಮನೆಗೆ ಮುತ್ತಿಗೆ ಹಾಕಿಬಿಟ್ಟಿತ್ತು. ಏನೆಂದು ತಿಳಿಯುವುದರೊಳಗೆ ಮನೆಯೊಳಗೆ ನುಗ್ಗಿ ನಮ್ಮನ್ನು ಸುತ್ತುವರೆದುಬಿಟ್ಟಿದ್ದರು. ಇನ್ನು ಮಾಮೂಲಾಗಿ ಮನೆ ತಲಾಷ್, ನಮ್ಮಲ್ಲಿದ್ದ ಕಾಗದ ಪತ್ರಗಳ ಜಪ್ತು, ಮಹಜರ್, ಇತ್ಯಾದಿಗಳೆಲ್ಲಾ ಮುಗಿದು ನಮ್ಮನ್ನು ಪೋಲಿಸ್ ಠಾಣೆಯಲ್ಲಿ ಕೂಡಿಟ್ಟಾಗ ರಾತ್ರಿ ಹನ್ನೊಂದು ಹೊಡೆದಿತ್ತು. ನಮ್ಮ ಜೊತೆಯಲ್ಲಿದ್ದ ೧೨ನೆಯವನನ್ನು ಬಂಧಿಸಲಿಲ್ಲ. ಆತನನ್ನು ಮಾಹಿತಿದಾರನಾಗಿ ಬಳಸಿಕೊಂಡ ಪೋಲಿಸರು ನಮ್ಮ ವಿರುದ್ಧ ಸಾಕ್ಷಿಯಾಗಿ ಹೆಸರಿಸಿದ್ದರು. ಮರುದಿನ ನಮ್ಮನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ಹಾಸನದ ಜೈಲಿಗೆ ತಳ್ಳಿದ್ದರು. ಪೋಲಿಸರ ಭಯಕ್ಕೆ ಆತ ನಮ್ಮ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿಯನ್ನೂ ಹೇಳಿದ. ಚಂದ್ರಶೇಖರರ ಮನೆಯ ಮುಂದೆ ನಿಲ್ಲಿಸಿದ್ದ ನನ್ನ ಅಟ್ಲಾಸ್ ಸೈಕಲ್ಲನ್ನು ೧೫ ದಿನಗಳ ನಂತರ ನನ್ನ ತಮ್ಮ ಮನೆಗೆ ತೆಗೆದುಕೊಂಡು ಹೋದ. ನಮ್ಮ ಎಲ್ಲರ ಮನೆಗಳಲ್ಲೂ ಗೋಳಾಟ. ಕೇಳುವವರು ಯಾರು? ನಮಗೆ ಜಾಮೀನು ಸಿಗಲಿಲ್ಲ. ಪ್ರಕರಣ ಮುಗಿಯುವವರೆಗೆ ನಾವುಗಳು ಜೈಲಿನಲ್ಲಿಯೇ ಸುಮಾರು ಮೂರು ತಿಂಗಳುಗಳ ಕಾಲ ಇರಬೇಕಾಯಿತು.

     ಇಷ್ಟಕ್ಕೂ ಇಷ್ಟೊಂದು ದೊಡ್ಡ ಸಾಹಸ ಮಾಡಿದ್ದ ಪೋಲಿಸರು ನಮ್ಮಿಂದ ಜಪ್ತು ಮಾಡಿದ ವಸ್ತುಗಳು ಏನು ಗೊತ್ತೇ? 'ಸತ್ತ ಕತ್ತೆಯ ಕಥೆ' ಎಂಬ ಕವನದ ಮೂರು ಪ್ರತಿಗಳು, ಎರಡು ಮಹಾತ್ಮ ಗಾಂಧಿಯವರ ಭಾವಚಿತ್ರಗಳು ಮತ್ತು ಎರಡು 'ಕಹಳೆ' ಪತ್ರಿಕೆಯ ಪ್ರತಿಗಳು. ನ್ಯಾಯಾಲಯದಿಂದ ಪಡೆದಿರುವ ಪ್ರಮಾಣಿತ ಪ್ರತಿಯಲ್ಲಿ ಈ ದಾಖಲಾತಿಗಳ ವಿವರವಿದೆ. (ಚಿತ್ರ ಗಮನಿಸಿ). ಸತ್ತ ಕತ್ತೆಯ ಕಥೆ ಎಂಬ ಕವನದಲ್ಲಿ ಭಾರತದ ಆಗಿನ ಪ್ರಜಾಸತ್ತೆಯನ್ನು ಒಂದು ಸತ್ತ ಕತ್ತೆಗೆ ಹೋಲಿಸಿ ವಿಡಂಬನೆ ಮಾಡಲಾಗಿತ್ತು. ನ್ಯಾಯಾಲಯ ಅದನ್ನು ರಾಷ್ಟ್ರದ್ರೋಹದ ದಾಖಲೆ ಎಂಬ ಪೋಲಿಸರ ವಾದವನ್ನು ಒಪ್ಪಲಿಲ್ಲ. ಕಹಳೆ ಪತ್ರಿಕೆಯಲ್ಲಿ ತುರ್ತು ಪರಿಸ್ಥಿತಿ ಕಾಲದಲ್ಲಿ ಪೋಲಿಸರ ದೌರ್ಜನ್ಯದ ವಿವರಗಳಿದ್ದು ಅದನ್ನೂ ನ್ಯಾಯಾಲಯವು ಪ್ರತೀಕೂಲ ದಾಖಲೆ ಎಂದು ಒಪ್ಪಲಿಲ್ಲ. ನನ್ನ ಪರವಾಗಿ ಆಗ ಹೆಸರಾಂತ ಹಿರಿಯ ವಕೀಲರಾದ ಮತ್ತು ಕಾಂಗ್ರೆಸ್ಸಿನ ಕಟ್ಟಾಧುರೀಣರಾಗಿದ್ದ ದಿ. ಶ್ರೀ ಹಾರನಹಳ್ಳಿ ರಾಮಸ್ವಾಮಿಯವರು ಮತ್ತು ಅವರ ಕಿರಿಯ ವಕೀಲರಾದ ದಿ. ಶ್ರೀ ಬಿ.ಎಸ್. ವೆಂಕಟೇಶಮೂರ್ತಿಯವರು ವಾದಿಸಿದ್ದರು. ಗಾಂಧೀಜಿಯವರ ಭಾವಚಿತ್ರ ಪ್ರತೀಕೂಲ ಸಾಕ್ಷ್ಯವೆಂಬ ಬಗ್ಗೆ ಅವರು ಸಬ್ ಇನ್ಸ್ ಪೆಕ್ಟರರ ವಿರುದ್ಧ ನಡೆಸಿದ ಪಾಟೀಸವಾಲು ಸ್ವಾರಸ್ಯಕರವಾಗಿತ್ತು. ಅದು ಹೀಗಿತ್ತು:

ವಕೀಲರು: ಸ್ವಾಮಿ ಸಬ್ಬಿನಿಸ್ಪೆಕ್ಟರೇ, ಹಾಸನದಲ್ಲಿ ಸುಮಾರು ಎಷ್ಟು ಮನೆಗಳಿವೆ? 

ಸ.ಇ.: ಗೊತ್ತಿಲ್ಲ.

ವ: ಅಂದಾಜು ಹೇಳಿ, ಪರವಾಗಿಲ್ಲ. ಸುಮಾರು ೨೦೦೦೦ ಮನೆ ಇರಬಹುದಾ?

ಸ.ಇ.: ಇರಬಹುದು.

ವ: ಎಷ್ಟು ಮನೆಗಳಲ್ಲಿ ಗಾಂಧೀಜಿ ಫೋಟೋ ಇರಬಹುದು? ಅಂದಾಜು ೨೦೦೦ ಮನೆಗಳಲ್ಲಿ ಇರಬಹುದಾ? ಬೇಡ, ೧೦೦೦ ಮನೆಗಳಲ್ಲಿ ಇರಬಹುದಾ?

ಸ.ಇ.: ಇರಬಹುದು.

ವ: ಹಾಗಾದರೆ ಅವರನ್ನೂ ಏಕೆ ಬಂಧಿಸಲಿಲ್ಲ? ಇವರನ್ನು ಏಕೆ ಬಂಧಿಸಿದಿರಿ?

ಸ.ಇ.: ಇವರ ಹತ್ತಿರ ಇರುವ ಗಾಂಧೀಜಿ ಫೋಟೋದಲ್ಲಿ ಪ್ರಚೋದನಾತ್ಮಕ ಹೇಳಿಕೆ ಇದೆ. 

ವ: ಏನು ಹೇಳಿಕೆ ಇದೆ? ಯಾರು ಆ ಹೇಳಿಕೆ ಕೊಟ್ಟಿದ್ದು?

ಸ.ಇ.: 'ಅಸತ್ಯ ಅನ್ಯಾಯಗಳ ವಿರುದ್ಧ ತಲೆ ಬಾಗುವುದು ಹೇಡಿತನ' ಎಂಬ ಹೇಳಿಕೆ ಇದೆ. ಅದನ್ನು ಗಾಂಧೀಜಿಯೇ ಹೇಳಿದ್ದು.

ವ: ಹಾಗಾದರೆ ಗಾಂಧೀಜಿಯವರು ಪ್ರಚೋದನಾತ್ಮಕ ಹೇಳಿಕೆ ಕೊಟ್ಟಿದ್ದರು. ಅವರೂ ಅಪರಾಧಿಗಳೇ ಹಾಗಾದರೆ! ಹೋಗಲಿ ಬಿಡಿ, ಈ ಹೇಳಿಕೆಯಲ್ಲಿ ಏನು ಪ್ರಚೋದನಾತ್ಮಕ ಅಂಶ ಇದೆ? 

     ಈ ಪ್ರಶ್ನೆಗೆ ಸಬ್ಬಿನಿಸ್ಪೆಕ್ಟರರಿಗೆ ಉತ್ತರಿಸಲಾಗಿರಲಿಲ್ಲ. ಈ ಹಂತದಲ್ಲಿ ನ್ಯಾಯಾಲಯದಲ್ಲಿ ಕುತೂಹಲದಿಂದ ಕಿಕ್ಕಿರಿದು ಸೇರಿದ್ದ ಜನರೊಂದಿಗೆ ನ್ಯಾಯಾಧೀಶರೂ ಗೊಳ್ಳೆಂದು ನಕ್ಕಿದ್ದರು. ಈ ಸಾಕ್ಷ್ಯವೂ ನ್ಯಾಯಾಲಯದಲ್ಲಿ ನಿಲ್ಲಲಿಲ್ಲ. ಮೂರು ತಿಂಗಳ ನಂತರದಲ್ಲಿ ನಾವುಗಳೆಲ್ಲರೂ ನಿರ್ದೋಷಿಗಳೆಂದು ಬಿಡುಗಡೆಯಾಯಿತು. ಬಿಡುಗಡೆಯಾಗಿ ಹೊರಬರುತ್ತಿದ್ದಂತೆ ಬಾಗಿಲ ಬಳಿಯೇ ನಮ್ಮ ಪೈಕಿ ಪಾರಸಮಲ್, ಪಟ್ಟಾಭಿರಾಮ ಮತ್ತು ಜಿಲ್ಲಾ ಪ್ರಚಾರಕ್ ಪ್ರಭಾಕರ ಕೆರೆಕೈರವರನ್ನು ಪುನಃ ಬಂಧಿಸಿ ಎರಡು ವರ್ಷಗಳ ಕಾಲ ವಿಚಾರಣೆಯಿಲ್ಲದೆ ಬಂಧಿಸಿಡಲು ಅವಕಾಶವಿರುವ 'ಮೀಸಾ' ಕಾಯದೆಯನ್ವಯ ಬಂಧಿಸಿದರು. ನನ್ನನ್ನೂ ಮೀಸಾ ಕಾಯದೆಯಡಿಯಲ್ಲಿ ಬಂಧಿಸಬೇಕೆಂಬ ಎಸ್.ಪಿ.ಯವರ ಶಿಫಾರಸಿಗೆ ಅಂದಿನ ಜಿಲ್ಲಾಧಿಕಾರಿಯವರು ತಮ್ಮ ಕಛೇರಿಯ ನೌಕರನೇ ಆಗಿದ್ದ ನನ್ನನ್ನು ಬಂಧಿಸಲು ಒಪ್ಪಿರದಿದ್ದ ಕಾರಣ ಮೀಸಾ ಬಲೆಯಿಂದ ನಾನು ತಪ್ಪಿಸಿಕೊಂಡಿದ್ದೆ. ವಿಷಾದದ ಸಂಗತಿಯೆಂದರೆ, ತುರ್ತು ಪರಿಸ್ಥಿತಿ ಹಿಂತೆಗೆತದ ನಂತರ ಬಿಡುಗಡೆಯಾದ ಪ್ರಭಾಕರ ಕೆರೆಕೈ ನಂತರದ ಕೆಲವು ವರ್ಷಗಳಷ್ಟೇ ಬದುಕಿದ್ದರು. ತುರ್ತು ಪರಿಸ್ಥಿತಿ ಸಮಯದಲ್ಲಿ ಅನುಭವಿಸಿದ ಹಿಂಸೆಗಳ ಕಾರಣದಿಂದ ಮತಿವಿಕಲತೆಗೆ ಒಳಗಾಗಿ ಕಿರಿಯ ವಯಸ್ಸಿನಲ್ಲೇ ಅವರು ಮೃತರಾದುದು ದುರ್ದೈವ. ಅವರ ಆತ್ಮಕ್ಕೆ ಶಾಂತಿ ಇರಲಿ. ಅವರ ಮತ್ತು ಅವರಂತಹವರ ಹೋರಾಟ ವ್ಯರ್ಥವಾಗದಿರಲಿ.

     ಆರೆಸ್ಸೆಸ್ ಮತ್ತು ಗಾಂಧೀಜಿ ವಿಚಾರದಲ್ಲಿ ಚರ್ಚೆ, ವಾದ-ವಿವಾದಗಳು ಈಗಲೂ ನಿಂತಿಲ್ಲ. ಇವುಗಳ ಸಾಲಿಗೆ ಇದೂ ಸೇರಿಬಿಡಲಿ ಎಂದು ನಿಮ್ಮೊಡನೆ ಹಂಚಿಕೊಂಡಿರುವೆ. 

Comments

Submitted by kavinagaraj Tue, 03/18/2014 - 14:39

ಚಿತ್ರವನ್ನು ಸಣ್ಣದಾಗಿಸುವ ನನ್ನ ಪ್ರಯತ್ನ ಸಫಲವಾಗಲಿಲ್ಲ. ದಯವಿಟ್ಟು ಸಂಪದ ನಿರ್ವಾಹಕರು ಮತ್ತು ಓದುಗರು ಕ್ಷಮಿಸಬೇಕು. ಸಣ್ಣದಾಗಿಸಿದಲ್ಲಿ ಉಪಕೃತನಾಗುತ್ತೇನೆ.

Submitted by nageshamysore Thu, 03/20/2014 - 00:58

ಕವಿಗಳೆ ನಮಸ್ಕಾರ. ಜಪ್ತು ಮಾಡಿದ ದಾಖಲಾತಿ ಪತ್ರ ನಿನ್ನೆ ಮೊನ್ನೆಯದರಷ್ಟು ಹೊಸದಾಗಿದೆ - ಎಷ್ಟೆ ದಿನಗಳು ಕಳೆದರೂ ಮರೆಯಾಗದ ಕಹಿ ನೆನಪಿನ ಕುರುಹಾಗಿಯೆಂಬಂತೆ. ಇದೇನು ಸಾಮಾನ್ಯವಾದ ಸಣ್ಣ ಪ್ರರಕರಣವಲ್ಲ. ಅದರಿಂದಲೆ ನೀವು ಪ್ರಯತ್ನಿಸಿದರೂ ಬಿಡದೆ ಚಿತ್ರ ದೊಡ್ಡದಾಗಿ ಬಂದಿದೆ!

ಒಂದಂತೂ ಮೆಚ್ಚಬೇಕಾದ್ದೆಂದರೆ ಆ ದಾಖಲಾತಿಯಲ್ಲಿ ಕಾಣುವ ಸಹನೆ, ಕಾರ್ಯಶ್ರದ್ದೆ - ಪ್ರತಿ ಪುಟದ ಕುರಿತು ದಾಖಲೆಯಿದೆ :-)

ಒಟ್ಟಾರೆ, ಅಂತೂ ತುರಂಗವಾಸದ ಅನುಭವವೂ ಆಗಿದೆಯೆಂದಾಯ್ತು.

ಧನ್ಯವಾದಗಳೊಂದಿಗೆ / ನಾಗೇಶ ಮೈಸೂರು

ಧನ್ಯವಾದ, ನಾಗೇಶರೇ. ತುರ್ತು ಪರಿಸ್ಥಿತಿ ಕಾಲದ ನನ್ನ ಅನುಭವಗಳ ಲೇಖನಮಾಲೆ ಸಂಪದದಲ್ಲೇ ಹಿಂದೆ ಪ್ರಕಟವಾಗಿವೆ. 29-06-2010ರಿಂದ ಪ್ರಾರಂಭವಾದ ಅಂಚೆಪುರಾಣ ಮತ್ತು ನಂತರದ ದಿನಗಳಲ್ಲಿನ ಸೇವಾಪುರಾಣ ಮಾಲಿಕೆಯಲ್ಲಿ ದಾಖಲಿಸಿರುವ ನನ್ನ ಸೇವಾಕಾಲದ ಘಟನಾವಳಿಗಳಲ್ಲಿ ಈ ಅನುಭವಗಳೂ ಸೇರಿವೆ. ಅವಕಾಶವಾದರೆ ಓದಬಹುದು. ನನ್ನ ಪುಸ್ತಕ "ಆದರ್ಶದ ಬೆನ್ನು ಹತ್ತಿ . . ."ಯಲ್ಲಿ ವಿಸ್ತೃತ ಮಾಹಿತಿಗಳಿವೆ. ಇಚ್ಛಿಸಿದರೆ ಕಳಿಸಿಕೊಡುವೆ. ಮೈಸೂರಿನಲ್ಲಿಯೇ ಇರುವುದಾದರೆ ಒಮ್ಮೆ ಹಾಸನಕ್ಕೆ ಬನ್ನಿ, ಇಲ್ಲಿನ ವೇದಭಾರತಿ ಚಟುವಟಿಕೆಗಳನ್ನೂ ಕಾಣಬಹುದು.

ಕವಿಗಳೇ, ನಿಮ್ಮ‌ ಅನುಭವಗಳನ್ನು ಓದುತ್ತಿದ್ದರೆ ಬಹಳ‌ ರೋಮಾಂಚನವಾಗುತ್ತದೆ. ನಿಮ್ಮ‌ ಒಂದೊಂದು ಅನುಭವಗಳೂ ಇಂದಿನ‌ ಯುವಕರಿಗೆ ಸ್ಪೂರ್ತಿ ತುಂಬುವಂತಿದೆ. ದಯವಿಟ್ಟು ನಿಮ್ಮ‌ ಆದರ್ಶದ‌ ಬೆನ್ನು ಹತ್ತಿ ಪುಸ್ತಕವನ್ನು ಕಳುಹಿಸಿಕೊಟ್ಟರೆ ನಿಮ್ಮೆಲ್ಲ‌ ಅನುಭವಗಳನ್ನು ಒಟ್ಟಿಗೆ ಓದುವ‌ ಸೌಭಾಗ್ಯ‌ ಸಿಕ್ಕಂತಾಗುತ್ತದೆ. ನಿಮ್ಮ‌ ಧೈರ್ಯಶಾಲಿ ಅನುಭವಗಳನ್ನು ಹೀಗೇ ನಿರಂತರವಾಗಿ ಹಂಚಿಕೊಳ್ಳಿ. ಜೈ ಭಗತ್...ಜೈ ಆರ್.ಎಸ್.ಎಸ್.

ಜಯಂತ್, ಧನ್ಯವಾದ. ನಿಮ್ಮ ವಿಳಾಸ ಮೇಲ್ ಮೂಲಕ ತಿಳಿಸಿ. ಕಳಿಸುವೆ.

ಕವಿಗಳೆ ನಮಸ್ಕಾರ. ನಿಮ್ಮ ಪುಸ್ತಕವನ್ನು ಖಂಡಿತ ಓದಬೇಕು. ನಾನು ಮುಂದಿನ ಬಾರಿ ಮೈಸೂರಿಗೆ ಬರುವ ಮುನ್ನ ತಮಗೆ ಮಾಹಿತಿ ನೀಡಿ ವಿಳಾಸ ಕಳಿಸುತ್ತೇನೆ. ಸಿಂಗಪುರದ ಬದಲು ಮೈಸೂರಿಗೆ ಕಳಿಸುವುದೆ ಉಚಿತ. ಬುಕ್ ಶಾಪ್ ಮುಖಾಂತರ ಮಾರಟಕ್ಕೆ ದೊರಕುವಂತಿದ್ದರೆ, ಅಲ್ಲಿಂದಲೆ ನೇರವಾಗಿ ಖರೀದಿಸುತ್ತೇನೆ :-)

Submitted by lpitnal Sun, 03/23/2014 - 09:24

ಹಿರಿಯರಾದ ಕವಿನಾ ರವರಿಗೆ ನಮಸ್ಕಾರಗಳು. ಈ ಜೀವನಾನುಭವ ನಿಜಕ್ಕೂ ಅದ್ಭುತ ಸಿಂಚನವೊಂದನ್ನು ನೀಡಿತು ನನಗೆ. ಎಂಥ ಅಪ್ರತಿಮ ಮಹಾನುಭಾವರನ್ನು ಒಳಗೊಂಡಿದೆ ನಮ್ಮ ಸಂಪದ. ಬಾಲ್ಯದಲ್ಲಿ ಗಾಂಧಿಜಿಯವರ ಚಳುವಳಿಯಲ್ಲಿ ಭಾಗವಹಿಸಿದ, ಸ್ವಾತಂತ್ರ್ಯ ಹೋರಾಟಗಾರರನ್ನು ಸಮೀಪದಿಂದ ನೋಡಿ, ಅವರ ಕೈಕುಲುಕಿ ಕೃತಾರ್ಥನಾಗುತ್ತಿದ್ದೆ. ಅವರ ಆ ಸ್ಪರ್ಶವೇ ನನಗೆ ಪುಳಕ ತಂದು ಕೊಡುತ್ತಿತ್ತು. ಮಹಾತ್ಮಾಜಿಯವರನ್ನು ಕಂಡವರನ್ನೇ, ಅವರ ಅನುಯಾಯಿಗಳನ್ನು ಕಂಡರೆ, ರೋಮಾಂಚನವಾಗಿ ಕೆಲ ನಿಮಿಷ ಅಂಥ ಹಿರಿಯರನ್ನು ದುಂಬಾಲು ಬಿದ್ದು ಮಾತನಾಡಿಸಿ, ಅಭಿನಂದಿಸುತ್ತಿದ್ದೆ. ಒಂದು ರೀತಿ ದೇಶಪ್ರೇಮದ ಕಾರಂಜಿಯ ಪುಳಕ ಮೈಯಲ್ಲೆಲ್ಲಾ ಹರಿದಾಡಿದ ಅನುಭಾವ ಈಗಲೂ ನೆನಪಿದೆ. ಈಗ ಆ ತರಹ ಭಾವ ಅನುಭವಕ್ಕೆ ಬಂದಿರುವುದಿಲ್ಲ, ಬಹು ವರ್ಷಗಳಿಂದ. ಇಂದು ತಮ್ಮ ಲೇಖನಾನುಭವ ಓದಿ ಮತ್ತೆ ಮನ ಬಾಲ್ಯಕ್ಕೆ ಹೋಗಿ, ತಮ್ಮನ್ನು ಸೋಕಬೇಕೆನಿಸಿದೆ. ತಮ್ಮ ಕೈಕುಲುಕಿ ಕೃತಾರ್ಥನಾಗಬಯಸಿದೆ ಮನ. ತಾವು ಸಂಪದಿಗರಾಗಿ ನಮ್ಮೊಡನೆ ಬರಹಗಳಲ್ಲಿ ಸ್ಪಂದಿಸುವ ಒಡನಾಡಿಗಳಾಗಿದ್ದುದೇ ನನಗೆ ಸೌಭಾಗ್ಯ, ಸರ್, ತಮ್ಮಲ್ಲಿ ಬೆಳೆದು ನೆಲೆಯೂರಿದ ಆ ರಸಕ್ಕೆ, ಕುಂದಣವೂ ಸರಿದೂಗದು.. ಬಲ್ಲವರೇ ಬಲ್ಲರು ಕಸ್ತೂರಿ ಪರಿಮಳ ಎನ್ನುವುದೂ ಯಾಕೋ ಮತ್ತೆ ಮತ್ತೆ ನೆನಪಿಗೆ ಬಂತು! ನೂರ್ಕಾಲ ಬಾಳಿ ಸರ್, ಈ ನೆಲ ಪುಣೀತವಾಗಿರಲಿ ತಮ್ಮಂಥವರ ನಿಸ್ಪೃಹರ ಉಸಿರಿನಿಂದ. ಯಾಕೋ ಮನದ ಮಾತು ಹೇಳಬೇಕೆನಿಸಿತು. ಹೇಳಿದೆ. ನಮಸ್ಕಾರಗಳು .

ಭಾವುಕರಾಗಿ ಪ್ರತಿಕ್ರಿಯಿಸಿರುವ ಲಕ್ಷ್ಮೀಕಾಂತ ಇಟ್ನಾಳರಿಗೆ ಕೃತಜ್ಞತೆಗಳು. ಅವಕಾಶವಾದಾಗ ಹಾಸನಕ್ಕೆ ಒಮ್ಮೆ ಬನ್ನಿ.