ವಸಂತದ ಗಾಳಿ
ಬೀಳ್ವ ಮಂಜನು ಬೀಳ್ಕೊಡುವುದಕೆ ಋತು ವಸಂತನು ಬಂದಿರೆ
ಹೂತ ಮಾಮರದಲ್ಲಿ ಮೆಲ್ಲಗೆ ಕೊಂಬೆರೆಂಬೆಯನಲುಗಿಸಿ
ಕೋಗಿಲೆಯ ಸವಿದನಿಯ ಹಾಡನು ದಿಕ್ಕುದಿಕ್ಕಲಿ ಪಸರಿಸಿ
ಮಂದ ಮಾರುತ ಹೃದಯಗಳನೂ ಜೊತೆಯಲೇ ಸೆಳೆದೊಯ್ದನೆ!
ಸಂಸ್ಕೃತ ಮೂಲ (ಕಾಳಿದಾಸನ ಋತುಸಂಹಾರ, 6ನೇ ಸರ್ಗ-22):
ಅಕಂಪಯನ್ ಕುಸುಮಿತಾ: ಸಹಕಾರ ಶಾಖಾ
ವಿಸ್ತಾರಯನ್ ಪರಭೃತಸ್ಯ ವಚಾಂಸಿ ದಿಕ್ಷು
ವಾಯುರ್ವಿವಾತಿ ಹೃದಯಾನಿ ಹರನ್ನರಾಣಾಂ
ನೀಹಾರಪಾತ ವಿಗಮಾತ್ ಸುಭಗೋ ವಸಂತೇ
-ಹಂಸಾನಂದಿ
ಕೊ: ಮಾರ್ಚ್ ೨೦ ವಸಂತ ವಿಷುವ - ಅಂದರೆ ವಸಂತದ ಮೊದಲ ದಿನ. ಈ ದಿನ ಹಗಲು ಇರುಳು ಭೂಮಿಯ ಮೇಲೆ ಎಲ್ಲ ಕಡೆಯಲ್ಲೂ ಒಂದೇ ಸಮನಾಗಿರುತ್ತವೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನ ಇಲ್ಲಿ ಮತ್ತೆ ಇಲ್ಲಿ ನೀವು ಓದಬಹುದು.
ಕೊ.ಕೊ: ನಮ್ಮ ಪುರಾಣಗಳ ಪ್ರಕಾರ, ವಸಂತ ಅಂದರೆ ಮನ್ಮಥನ ಗೆಳೆಯನಂತೆ. ಈ ಮನ್ಮಥ ವಸಂತಕಾಲದಲ್ಲಿ ಅರಳುವ ಅರವಿಂದ, ಅಶೋಕ, ನೀಲೋತ್ಪಲ, ಚೂತ (ಮಾವು) ಮತ್ತೆ ನವಮಲ್ಲಿಕಾ - ಹೀಗೆ ಐದು ಹೂವಿನ ಅಂಬುಗಳನ್ನು ನೇರವಾಗಿ ಪ್ರೇಮಿಗಳ ಎದೆಗೇ ಗುರಿ ಇಡುತ್ತಾನಂತೆ! ತಪಸ್ಸು ಮಾಡಲು ಕುಳಿತಿದ್ದ ಶಿವನನ್ನೇ ಬಿಡಲಿಲ್ಲ ಈ ಮದನ ಅಂದರೆ, ಇವನು ಅದೆಷ್ಟು ಗಟ್ಟಿಗ ನೋಡಿ! ಶಿವನ ಮೂರನೇ ಉರಿಗಣ್ಣಿಂದ ಬೂದಿ ಆದರೂ, ದೇಹವೇ ಇರದೇ ಹೋದರೂ ತನ್ನ ಕಾಯಕವನ್ನು ಮಾತ್ರ ಮುಂದುವರಿಸಿಯೇ ಇದ್ದಾನೆ, ಯುಗ ಯುಗಾಂತರದಿಂದಲೂ. ಇಂತಹ ಹೂ ಬಾಣ ಹಿಡಿದವನ ಮೇಲೊಂದು ಹಳೆಯ ಹರಟೆ ಇಲ್ಲಿದೆ.
ಕೊ.ಕೊ.ಕೊ: ಇಂತಹ ವಸಂತ ಕಾಲದಲ್ಲಿ ಬೀಸುವ ಗಾಳಿ ಅದೆಂತದದ್ದು ನೋಡಿ? ಎಲ್ಲರಲ್ಲೂ ಪ್ರೇಮವನ್ನು ಚಿಮ್ಮಿಸಿ ಅವರ ಹೃದಯಗಳನ್ನು ಸೆಳೆದೊಯ್ಯುವಂತಹದ್ದು ಅನ್ನುವುದು ಕಾಳಿದಾಸನ ಅಂಬೋಣ. ಕವಿಕುಲಗುರುವಲ್ಲವೇ ಅವನು? ಹಾಗೆಂದಮೇಲೆ ಅವನು ಹೇಳಿರುವುದು ನಿಜವೇ ಇರಬೇಕು, ಏನಂತೀರ?
ಚಿತ್ರ: http://treesplanet.blogspot.com/2013/06/mangifera-indica-mango-tree.html...ಇವರ ಕೃಪೆ
Comments
ಉ: ವಸಂತದ ಗಾಳಿ
ನಮಸ್ಕಾರ ಆತ್ಮೀಯರಿಗೆ, ಕವನ, ಅನುವಾದ ಚನ್ನಾಗಿದೆ. ಅದರ ವಿವರಣೆ ಕೂಡ. ಧನ್ಯವಾದಗಳು ಸರ್.
In reply to ಉ: ವಸಂತದ ಗಾಳಿ by lpitnal
ಉ: ವಸಂತದ ಗಾಳಿ
ಧನ್ಯವಾದಗಳು ಲಕ್ಷ್ಮೀಕಾಂತ ಇಟ್ನಾಳ ಅವರಿಗೆ