ಯಾರನ್ನು ನಂಬಲಿ? ಯಾರಿಂದ ನಮ್ ಬಲಿ?

ಯಾರನ್ನು ನಂಬಲಿ? ಯಾರಿಂದ ನಮ್ ಬಲಿ?

ಯಾರನ್ನು ನಂಬಲಿ? ಯಾರಿಂದ ನಮ್ ಬಲಿ?

 

ನಗರದ ಹೃದಯ ಭಾಗದಲ್ಲಿನ ಮಧ್ಯಮ ವರ್ಗದವರ ಪ್ರಸಿದ್ದ ಬಡಾವಣೆಯಲ್ಲೊಂದು ಮನೆಯಲ್ಲಿ, ಯಾರಿಗೆ ಕೆಲಸವಿರಲಿ, ಇಲ್ಲದಿರಲಿ ತಾನು ಮಾತ್ರ ದಿನಕ್ಕೆ ಇಪ್ಪತ್ತನಾಲ್ಕು ಘಂಟೆಯೂ ಬಿಜಿ ಎಂಬಂತೆ ಉರಿಯುತ್ತಿತ್ತೊಂದು ಟಿವಿ. ಎಣ್ಣೆ ತೀರಿದರೆ ದೇವರ ಮುಂದೆ ಬೆಳಗೋ ನಂದಾದೀಪವಾದರೂ ನಂದೀತು. ಆದರೆ ಕರೆಂಟ್ ಇರೋವರೆಗೂ ಟಿವಿ ಮಾತ್ರ ನಂದೋದಿಲ್ಲ.

 

ಮನೆಯಲ್ಲಿನ ಮೂರು ಪೀಳಿಗೆಯವರಾದ ತಾತ-ಮಗ-ಮೊಮ್ಮಗ ಇವರುಗಳಿಗೆ ಅವರವರದೇ ಚಾನೆಲ್ಲುಗಳು ಬೇಕು. ಇರೋದೊಂದು ಟಿವಿ. ಹಾಗಾಗಿ ರಿಮೋಟ್ ಎಂಬ ಅಸ್ತ್ರಕ್ಕಾಗಿ ಹೊಂಚು ಹಾಕುತ್ತಿದ್ದವು ದೊಡ್ಡವರ ಕಂಗಳು. ಟಿವಿ ಪರದೆ ಮೇಲೆ ಬಂದದ್ದೇ ಬರುವ ಕಾರ್ಟೂನ್ ಚಾನಲ್ ಬೆಳಗುತ್ತಿತ್ತು. ರಿಮೋಟ್ ಕಾಣುತ್ತಿಲ್ಲ ಅದರ ಜೊತೆ ಕಾರ್ಟೂನ್ ಚಾನಲ್ಲನ್ನೇ ನೋಡೋ ಭೂಪತಿಯೂ ಕಾಣ್ತಿಲ್ಲ. ತಾತ, ನಾಗರಾಜ ಶಾಸ್ತ್ರಿಗಳು, ರಿಮೋಟ್ ಹುಡುಕುತ್ತ ಗೊಣಗುತ್ತಿದ್ದರು "ಈ ಸಚಿನ್ ಎಲ್ಲಿಟ್ಟ ರಿಮೋಟ್? ಅವನೂ ಇಲ್ಲ, ರಿಮೋಟೂ ಇಲ್ಲ. ಥತ್!" ಅಂತ. ಮಗ, ಪ್ರಕಾಶ್, ನುಡಿದ "ಕನ್ನಡಕ ಹಾಕಿಕೊಂಡು ನೋಡಿ ಅಪ್ಪ, ಅಲ್ಲೇ ಇರಬೇಕು" ಅಂತ. "ಅದು ಸರಿ ಕಣೋ ಪ್ರಕಾಶ, ಆದರೆ ನನ್ ಕನ್ನಡಕ ಎಲ್ಲಿ?" !

 

ಹೋಗ್ಲಿ ಬಿಡಿ, ರಿಮೋಟ್ ಇಲ್ಲದೇ ಚಾನಲ್ ಬದಲಿಸಲಿಕ್ಕೆ ಬರೋಲ್ವೇ ಅಂತ ತಾನೇ ನಿಮ್ಮ ಪ್ರಶ್ನೆ? ಹೀಗೇ ಒಮ್ಮೆ ಯಥಾಪ್ರಕಾರ ರಿಮೋಟ್ ಎಲ್ಲೋ ಕಣ್ಮರೆಯಾಗಿದ್ದರಿಂದ ಶಾಸ್ತ್ರಿಗಳು ಟಿ.ವಿ ಮೇಲೆ ಇರುವ ಬಟನ್ ಒತ್ತಿ ಚಾನಲ್ ಬದಲಿಸಲು ಹೋಗಿ, ಇನ್ಯಾವುದೋ ಚಾನಲ್ ಮೂಡಿ ಬಂದಿತ್ತು. ಕನ್ನಡಕವನ್ನು ಹಾಕದೇ ಮಸುಕು ಕಣ್ಣಲ್ಲಿ ಹತ್ತಿರದಲ್ಲೇ ನಿಂತು, ಮೂಡಿ ಬಂದ ದೃಶ್ಯ ನೋಡುತ್ತಿದ್ದವರನ್ನು, ಅದೇ ವೇಳೆಗೆ ಮನೆ ಒಳಗೆ ಕಾಲಿಟ್ಟ ಪಕ್ಕದ ಮನೆ ರಂಗಮ್ಮ ನೋಡಬೇಕೇ? ಟಿವಿ ಪರದೆ ಮೇಲೆ ನರ್ತಿಸುತ್ತಿದ್ದ ಕನಿಷ್ಟ ವಸ್ತ್ರಧಾರಿಣಿಯನ್ನು ಹತ್ತಿರದಿಂದ ನೋಡುತ್ತಿದ್ದ ಶಾಸ್ತ್ರಿಗಳನ್ನು ನೋಡಿ ಮೂರ್ಛೆ ಬೀಳೋದೊಂದು ಬಾಕಿ. ಅಂದು ಅವರ ಮನೆಗೆ ವಾಪಸ್ ಓಡಿದ ರಂಗಮ್ಮ ಇಂದಿಗೂ ಇವರ ಮನೆ ಮುಂದಿನ ಮೆಟ್ಟಿಲು ತುಳಿದಿಲ್ಲ. ಹಿಂದುಗಡೆ ಬಾಗಿಲಿನಿಂದಲೇ ಬರೋದು ಅನ್ನಿ ! ಅಂದಿನಿಂದ ರಿಮೋಟ್ ಇಲ್ಲದೆ ಚಾನಲ್ ಬದಲಿಸುವ ದುಸ್ಸಾಹಸಕ್ಕೆ ಕೈಹಾಕಲಿಲ್ಲ.

 

ಅಪ್ಪನಿಗೆ ಸಿಗಲಿಲ್ಲ ಎಂದು ಪ್ರಕಾಶನೂ ಹುಡುಕಲು ಶುರು ಮಾಡಿದ. ಹೆಚ್ಚು ಕಮ್ಮಿ ರೈಡ್ ಮಾಡೋ ರೀತಿಯಲ್ಲಿ. ಸೋಫಾದ ಒಳಗೆಲ್ಲ ಹುಡುಕುತ್ತಿದ್ದರು ಪುಣ್ಯಕ್ಕೆ ಬ್ಲೇಡ್ ತೊಗೊಂಡ್ ಹರಿಯಲಿಲ್ಲ ಅಷ್ಟೇ! ಹುಡುಕಾಟ ಮುಂದುವರೆದಿರಲು, ಮೊಮ್ಮಗ ಸಚಿನ್ ಟಾಯ್ಲೆಟ್’ನಿಂದ ಹೊರಗೆ ಬಂದ, ಕೈಯಲ್ಲಿ ರಿಮೋಟ್ ಹಿಡಿದುಕೊಂಡು. ತಾತ ಆ ದೃಶ್ಯ ನೋಡಿ ಮುಖ ಕಿವುಚಿ ಸಿಡಿಸಿಡಿ ಮಾಡಲು, ಪ್ರಕಾಶ ರಿಮೋಟನ್ನು ಒಂದು ಒದ್ದೆ ಬಟ್ಟೆಯಲ್ಲಿ ಒರೆಸಿದ. ಈಗ ಮಾತನಾಡಿದರೆ "ಓದ್ಕೋ ಹೋಗೋ" ಅಂತ ಬೈತಾರೆ ಅನ್ನೋದಕ್ಕೆ ಸಚಿನ್ ರಿಮೋಟ್ ಕೊಟ್ಟು ಸುಮ್ಮನಾದ. ಅಪ್ಪನ ಸ್ಮಾರ್ಟ್-ಫೋನ್ ಕೈಗೆ ತೆಗೆದುಕೊಂಡು ಗೇಮ್ಸ್ ಆಡುತ್ತ ಕೂತ, ಅನ್ನೋದು ಬೇರೆ ಮಾತು.

 

ಪ್ರಕಾಶ ಚಾನಲ್ ಬದಲಿಸುತ್ತಿರಲು ಯಾವುದೋ ಕ್ರಿಕೆಟ್ ಮ್ಯಾಚ್ ಬರ್ತಿತ್ತು. ಕೂಡಲೇ ಸಚಿನ್ "ಅಪ್ಪ, ಇದೇ ಇರಲಿ" ಅಂದ. ಶಾಸ್ತ್ರಿಗಳು ಅದಕ್ಕೆ "ಈ ಟಿಕ್-೨೦ ಎಲ್ಲ ಬೇಡ ಬೇರೆ ಏನಾದ್ರೂ ಬರುತ್ತಾ ನೋಡೋ". ಸಚಿನ್ ಅದಕ್ಕೆ "ಟಿಕ್-೨೦ ಅಲ್ಲಾ ತಾತ. ೨೦-೨೦. ಪೂರಾ ಆಕ್ಷನ್ ಇರುತ್ತೆ". ಪ್ರಕಾಶ ಆಗಲೇ ಅದನ್ನು ಹಾದು ಮುಂದೆ ಹೋಗಿದ್ದ ನ್ಯೂಸ್ ಚಾನಲ್ ಹುಡುಕಿಕೊಂಡು. ಮತ್ತೊಮ್ಮೆ ಟೆಲಿಕ್ಯಾಸ್ಟ್ ಆಗ್ತಿರೋ ಹಳೇ ಮ್ಯಾಚು ಎಂಬ ಕಾರಣಕ್ಕೆ ಸಚಿನ್ ಕೂಡ ಸುಮ್ಮನಿದ್ದ. ಹಾಗೇ ಚಾನಲ್ ಬದಲಿಸುತ್ತಿರಲು, ಒಂದು ಚಾನಲ್’ನಲ್ಲಿ ಯಾವುದೋ ಸಿನಿಮಾ ಬರುತ್ತಿತ್ತು. ಮೈಯೆಲ್ಲ ರಕ್ತಸಿಕ್ತನಾಗಿ ಕೈಯಲ್ಲಿ ಮಚ್ಚೋ, ಲಾಂಗೋ ಹಿಡಿದು ಹೋರಾಡ್ತಿದ್ದ ನಾಯಕ. ತಾತನಿಗೆ ತಲೆಕೆಡ್ತು "ಆಟದಲ್ಲೂ ಆಕ್ಷನ್ನು. ಸಿನಿಮಾದಲ್ಲೂ ಆಕ್ಷನ್ನು. ಒಂದು ದಿನ ಉಪವಾಸ ಮಾಡಿದರೇ ಮರುದಿನ ನಿಂತುಕೊಳ್ಳೋಕ್ಕೆ ಶಕ್ತಿ ಇರೋಲ್ಲ. ಅಂಥಾದ್ರಲ್ಲಿ ಆ ಪಾಟಿ ಮೈಕೈಯೆಲ್ಲ ಏಟು ಬೀಳಿಸಿಕೊಂಡು ಇನ್ನೂ ಫೈಟ್ ಮಾಡ್ತಿದ್ದಾನೆ. ಅವನನ್ನ ನೋಡಿದರೆ ನೆಲ ಒರೆಸಿರೋ ಬಟ್ಟೆ ಥರಾ ಕಾಣ್ತಾನೆ. ಬರೀ ಬಂಡಲ್ಲು".

 

ಆ ಕ್ಷಣದಲ್ಲಿ, ಆಪತ್ಭಾಂಧವನಂತೆ ಮೂವರ ಅಳಲಿಗೆ ಓಗೊಟ್ಟ ಸರ್ಕಾರ ಪವಿತ್ರವಾದ ಕರೆಂಟನ್ನು ತೆಗೆದಿತ್ತು. ಫವಿತ್ರವಾದದ್ದನ್ನು ಯಾರೂ ಮುಟ್ಟುವುದಿಲ್ಲ. ಅದಕ್ಕೇ ಕರೆಂಟು ಪವಿತ್ರ ಅಂದಿದ್ದು.

 

ತಾತ "ಈಗ ನೆಮ್ಮದಿ, ನೋಡು". ಪ್ರಕಾಶ್ "ಲೋ! ಸಚಿನ್, ಮೊದಲೇ ಕರೆಂಟ್ ಇಲ್ಲ. ನನ್ ಫೋನಿನ ಬ್ಯಾಟರಿ ಖಾಲಿ ಮಾಡಿಬಿಡಬೇಡ. ಯಾವುದಾದರೂ ಫೋನ್ ಬಂದರೆ, ನಾನು ಹಲೋ ಅನ್ನೋಷ್ಟರಲ್ಲಿ ಪುಸ್ ಅಂತ ಸತ್ತಿರುತ್ತೆ, ಕೊಡಿಲ್ಲಿ". ಟಿವಿ ಇಲ್ಲ, ಫೋನ್ ಇಲ್ಲ ಅಂತ ಗೊಣಗಿಕೊಂಡೇ ಅಮ್ಮನ ಐ-ಪ್ಯಾಡ್ ಕೈಗೆತ್ತಿಕೊಂಡ. ಕರೆಂಟ್ ಹೋದಾಗಲೆಲ್ಲ ತಾತನ ಜೊತೆ ಹರಟೆ ಹೊಡೆಯೋಕ್ಕೆ ಬರುವ ಎದುರು ಮನೆ ರಾಮರಾಯರು ಈಗಲೂ ಬಂದರು. ಮೆಟ್ಟಿಲ ಮೇಲೆ ಹೋಗಿ ಬರುವವರಿಗೆಲ್ಲ ಅಡ್ಡವಾಗುವಂತೆ ಕೂತು ಇವರಿಬ್ಬರ ಮಾತು. ಅನ್ನೋ ಹಾಗಿಲ್ಲ, ಅನುಭವಿಸೋ ಹಾಗಿಲ್ಲ, ಎಷ್ಟೇ ಆಗಲಿ ಹಿರಿಯರು!

 

ಕೈಗೆಟುಕದ ದ್ರಾಕ್ಷಿ ಹುಳಿ ಅನ್ನೋ ಹಾಗೆ ಶಾಸ್ತ್ರಿಗಳು ಬಾಯಿಬಿಟ್ಟರು "ಮಾತಿಗೆ ಹೇಳ್ತೀನಿ ರಾಯರೇ, ನಮ್ ಕಾಲದಲ್ಲಿ ಈ ಸುಟ್ಟು ಟಿವಿ ಇರಲಿಲ್ಲ. ಆಗೆಲ್ಲ ಚೆನ್ನಾಗಿತ್ತು ನೋಡಿ. ನಮ್ಮ ಮಕ್ಕಳು ಮರಕೋತಿ ಆಟ, ಗೋಲಿ, ಬುಗುರಿ ಅಂತೆಲ್ಲ ಆಡ್ಕೊಂಡು ಬರೀ ಬೀದೀಲ್ಲೆ ಇರ್ತಿದ್ರು. ಮನೆ ಸೇರುತ್ತಿದ್ದೇ ಹೊಟ್ಟೆ ಖಾಲಿಯಾದಾಗ. ಆದರೆ ಈಗಿನವರು ಬಿಡಿ. ಆ ಆಟವೆಲ್ಲ ಏನೂ ಅಂತ್ಲೇ ಗೊತ್ತಿಲ್ಲ. ಟಿವಿ ಬೇಡ ಅಂತ ರಿಮೋಟ್ ಕಿತ್ತುಕೊಂಡ್ರೆ ಎಕ್ಕದೆಲೆ ರೀತಿ ಇರೋ ಫೋನು. ಅದೂ ಬೇಡ ಅಂತ ಹೇಳಿದ್ದಕ್ಕೆ ಮದುವೆ ಮನೆ ತಿಂಡಿ ಎಲೆ ಥರ ಇರೊ ಪ್ಯಾಡು." ಬೊಚ್ಚು ಬಾಯಿ ಬಿಟ್ಟುಕೊಂಡು ನಕ್ಕ ರಾಯರು "ಸರಿಯಾಗಿ ಹೇಳಿದಿರಿ ಶಾಸ್ತ್ರಿಗಳೇ ನಮ್ ಮನೇಲೂ ಇದೇ ಕಥೆ. ಮಗ, ಸೊಸೆ ಇಬ್ರೂ ’ಲ್ಯಾಪ್ಟಾಪ್’ ಅನ್ನೋ ’ತೊಡೆ ಮೇಲ್ ತಟ್ಟೆ’ ಇಟ್ಕೊಂಡು ಕೂತಿರ್ತಾರೆ. ಇನ್ನು ಮೊಮ್ಮಗಳು ಮತ್ತಿನ್ಯಾವುದೋ ಸಲಕರಣೆ. ನಾನು ಒಂದು ಪುಸ್ತಕ. ನಾಲ್ಕೂ ಜನ ಒಂದೇ ಹಾಲ್’ನಲ್ಲಿ ಕೂತ್ಕೊಳ್ಳೋ ಈ ನೋಟಕ್ಕೆ ಫ್ಯಾಮಿಲಿ ಟೈಮ್ ಅಂತಾಳೆ ಮೊಮ್ಮಗಳು".

 

"ಅದನ್ನೇ ನಾನು ಕೇಳೋದು ರಾಯರೇ. ಈ ಮಕ್ಕಳನ್ನು ಹಾಳು ಮಾಡ್ತಿರೋರೇ ಅವರಪ್ಪ ಅಮ್ಮಂದಿರು. ಮೊದಲು ಅವರಿಗೆ ಬುದ್ದಿ ಹೇಳಬೇಕು". ಅಲ್ಲಿಯವರೆಗೂ ಸುಮ್ಮನಿದ್ದ ಪ್ರಕಾಶ ಇವರನ್ನು ಸೇರಿಕೊಂಡ. ಎರಡು ತಲೆಮಾರಿನ ಮಧ್ಯದ ಕೊಂಡಿ. ಹಳಬರ ಗೊಣಗಾಟವನ್ನು ಸಂಭಾಳಿಸಿಕೊಂಡು, ಕಿರಿಯರ ಲೇಟೆಸ್ಟ್ ಟೆಕ್ನಾಲಜಿಯೊಂದಿಗೆ ಹೊಂದಿಕೊಂಡು ಎರಡೂ ತಲೆಮಾರಿನವರೊಂದಿಗೆ ಬೆಸುಗೆಯಾಗಿ ಮಹತ್ತರ ಪಾತ್ರವಹಿಸೋ ಮಹಾನುಭಾವನ ಪ್ರತೀಕ.

 

"ಅಪ್ಪಾ, ಅಂದಿನ ಕಾಲ ಹಾಗಿತ್ತು, ನಾವು ಹಾಗಿದ್ದೆವು. ನಿಮ್ಮ ಕಾಲಕ್ಕೂ ನಮ್ಮ ಕಾಲಕ್ಕೂ ಬೆಳವಣಿಗೆ ಇತ್ತು. ಆದರೆ ನಮ್ಮ ಬಾಲ್ಯ ದಿನಕ್ಕೂ ಇಂದಿನ ದಿನಕ್ಕೂ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಇದೆ. ಅಂದಿಗೂ ಇಂದಿಗೂ ಕಾಲ ಸಿಕ್ಕಾಪಟ್ಟೆ ಮುಂದುವರೆದಿದೆ. ನಿಗದಿತ ಸಮಯಕ್ಕೆ ಮಾತ್ರ ಬರೋ ನಾಲ್ಕಾರು ಚಾನಲ್ ಬಿಟ್ರೆ ಬೇರೆ ಇರಲಿಲ್ಲ. ಅದೇ ಇಂದು? ಇಪ್ಪತ್ತುನಾಲ್ಕು ಘಂಟೆಯೂ ಕಾರ್ಯಕ್ರಮ ಇರೋ ಸಾವಿರಾರು ಚಾನಲ್’ಗಳು ಇವೆ. ಅಂದು ಫಿಯಟ್ಟು, ಅಂಬಾಸಡರ್ ಕಾರು ಬಿಟ್ರೆ ಮೂರನೇ ಕಾರು ನಾ ಕಂಡಿರಲಿಲ್ಲ. ಇಂದು, ಬೋಂಡಾ ಬಿದ್ದರೆ ಕಾಣದೇ ಹೋಗೋ ಮುಂಬೈ ಬೀದಿಯಲ್ಲಿ ಫರಾರಿ ಬಂದಿದೆ. ನಮ್ಮ ಮನೆ ಮುಂದೆಯಿಂದ ಈ ರಾಯರ ಮನೆಗೆ ಹೋಗಬೇಕೆಂದರೆ ನೀವು ಮೂರು ನಿಮಿಷ ಆ ಕಡೆ ಈ ಕಡೆ ನೋಡ್ಕೊಂಡು ಹೋಗ್ತೀರಾ. ಯಾವ ಆಟೋ ಬಂದು ಗುದ್ದುತ್ತೋ, ಯಾವ ಬೈಕು ಬಂದು ಹೊಸಕಿಹಾಕುತ್ತೋ ಅಂತ! ಈ ಸಣ್ಣ ಬೀದಿಯಲ್ಲೇ ಅಷ್ಟು ಟ್ರಾಫಿಕ್ಕು. ಇಂಥಾ ಬೀದೀಲಿ ಗೋಲಿ, ಬುಗುರಿ ಆಡಲಿಕ್ಕೆ ಆಗುತ್ಯೇ?"

 

ರಾಯರು ನುಡಿದರು "ಆಯ್ತಪ್ಪ ಪ್ರಕಾಶ, ಈ ಬೀದೀಲಿ ಬೇಡ. ಮೂರು ಬೀದಿ ಹೋದರೆ ಅಲ್ಲೊಂದು ಖಾಲಿ ಸೈಟಿದೆ. ಅಲ್ಲಿ ಆಡಿಕೊಳ್ಳಲಿ." ಖಿನ್ನನಾಗಿ ನುಡಿದ ಪ್ರಕಾಶ "ಏನು ಹೇಳಲಿ ಅಂಕಲ್ ನಿಮ್ಮ ಮಾತಿಗೆ? ಮೊನ್ನೆ ಯಾರೋ ಕಾಲೇಜು ಹುಡುಗರು ಆಟ ಆಡ್ತಿದ್ದಾಗ, ಬೇಲಿ ಹಾಕಿದ್ದ ಆ ಖಾಲಿ ಸೈಟಿನಲ್ಲಿ ಬಾಲ್ ಹೋಯ್ತಂತೆ. ಬಾಲ್ ತೆಗೆದುಕೊಳ್ಳ ಹೋದವನು ಸುಮ್ಮನೆ ಬರಬಾರದೆ? ಅಲ್ಲೇ ನಿಂತು ಮೂತ್ರ ಮಾಡಿ ಬಂದ. ಅದನ್ಯಾರೋ ನೋಡಿದರು. ನಮ್ಮ ಜಾತಿಯವನ ಸೈಟಿನಲ್ಲಿ ಈ ಜಾತಿಯವನು ಮೂತ್ರ ಮಾಡಿ ಅಪಚಾರ ಮಾಡಿದ್ದಾನೆ ಎಂತ ಗುಲ್ಲೆದ್ದು, ಒಂದು ದಿನ ಅಂಗಡಿ ಮುಂಗಟ್ಟೆಲ್ಲ ಬಂದ್, ಎರಡು ಬಸ್’ಗಳಿಗೆ ಬೆಂಕಿ, ಮೂರು ದಿನ ಕರ್ಫ್ಯೂ. ಬೀದಿ ದೀಪ ಎಲ್ಲ ಒಡೆದು ಹಾಕಿರೋದ್ರಿಂದ ಈಗ ಆ ಬೀದೀಲಿ ಸರಗಳ್ಳತನ ಜಾಸ್ತಿ ಆಗಿದೆ. ಇನ್ನು ಈ ಮಕ್ಕಳು ಅಲ್ಲಿ ಹೋಗಿ ಗೋಲಿ ಆಡಬೇಕಾ? ಹೇಳಿ?"

 

ಅದಕ್ಕೆ ಶಾಸ್ತ್ರಿಗಳೇ "ಜಾತಿ ಭೇದದ ಗಲಭೆಗಳು ನಿತ್ಯ ಏರ್ತಾನೇ ಇದೆ. ಹೋಗ್ಲಿ ಬಿಡಪ್ಪ. ಈ ಕಾಲದಲ್ಲಿ ಗೋಲಿ, ಬುಗುರಿ ಸಿಗೋದದ್ರೂ ಎಲ್ಲಿ? ಮನೆ ಮುಂದೆ ಕ್ರಿಕೆಟ್ ಆಡ್ಕೋಬಹುದಲ್ವೇ?". "ಅಲ್ಲಪ್ಪ, ಈ ಟ್ರಾಫಿಕ್’ನಲ್ಲೇ ಹಂಗೂ ಹಿಂಗೂ ಅಡ್ಜಸ್ಟ್ ಮಾಡಿಕೊಂಡು ಕಳೆದ ಬೇಸಿಗೆಯಲ್ಲಿ ಈ ಮಕ್ಕಳು ಹಿಂದಿನ ಬೀದಿಯಲ್ಲಿ ಆಡ್ಕೋತಿದ್ರು. ರೋಡಿನ ಒಂದು ಬದಿ ಬರೀ ಕಾರುಗಳು. ಒಂದು ಸಾರಿ ಇವರು ಹೊಡೆದ ಬಾಲ್, ಹಿಂದಿನ ಮನೆಯನ ಬಿ.ಎಂ.ಡಬ್ಲ್ಯೂ ಕಾರಿನ ಗ್ಲ್ಯಾಸ್ ಒಡೆದು, ಆತ ಪೋಲೀಸ್ ಕಂಪ್ಲೈಂಟ್ ಕೊಟ್ಟು ದೊಡ್ಡ ರಂಪ ಆಗಿತ್ತು. ಮರೆತುಬಿಟ್ರಾ?"

 

ರಾಯರು ಅದಕ್ಕೆ "ಅದೂ ಬೇಡ ಬಿಡು. ಆ ಕಾಲೇಜು ಮೈದಾನ ಇದೆಯಲ್ಲ, ಅಲ್ಲಿ ಆಡಬಾರದೇ?". ಪ್ರಕಾಶ ನುಡಿದ "ಮೊನ್ನೆ ನೆಡೆದ ವಿಷಯ ನಿಮಗೆ ಗೊತ್ತಿಲ್ಲ ಅನ್ನಿಸುತ್ತೆ. ಮಟ ಮಟ ಮಧ್ಯಾನ್ನ, ಆ ಗ್ರೌಂಡ್ಸ್ನಲ್ಲಿ ಆಡ್ತಾ ಇದ್ದ ಒಬ್ಬ ಸೇಠು ಮಗನ್ನ ಯಾರೋ ಕಿಡ್ನ್ಯಾಪ್ ಮಾಡಿದ್ರಂತೆ. ಆ ಸೇಠು ತಾನು ದುಡ್ಡು ಕೊಡೋಲ್ಲ ಅಂದದ್ದಕ್ಕೆ ... ಹೋಗ್ಲಿ ಬಿಡಿ. ಆ ಗ್ರೌಂಡ್ಸ್ ಆಡೋದಕ್ಕೆ ಚೆನ್ನಾಗಿದ್ರೂ ಮುಸ್ಸಂಜೆ ಹೊತ್ತಿಗೆ ಅಲ್ಲೇನೋ ಗಾಂಜಾ ವಹಿವಾಟು ಬೇರೆ ನೆಡೆಯುತ್ತಂತೆ. ಎಷ್ಟೋ ಸಾರಿ ಈ ವ್ಯವಹಾರ ಚಿಕ್ಕಪುಟ್ಟ ಗಲಭೆಗೂ ಎಡೆ ಮಾಡಿಕೊಟ್ಟಿದೆ".

 

ಬೆಚ್ಚಿಬಿದ್ದ ಶಾಸ್ತ್ರಿಗಳು ನುಡಿದರು "ಏನು ಕಾಲ ಬಂದಿದೆ ರಾಯರೇ? ಅಲ್ಲಾ, ಒಂದು ಕಡೆ ನಾವೇ ಈ ಮಕ್ಕಳ ಸೌಲಭ್ಯಗಳನ್ನೆಲ್ಲ ಕಿತ್ತುಕೊಂಡು ಅವರನ್ನು ದೂಷಿಸುತ್ತೇವೆ. ಎಲ್ಲೆಲ್ಲೂ ಬಿಲ್ಡಿಂಗ್’ಗಳನ್ನು ಕಟ್ಟಿ ಕಾಡಿನ ನಾಡನ್ನು ಕಾಂಕ್ರೀಟ್ ನಾಡು ಮಾಡಿ ಪರಿಸರ ಸುಖದಿಂದ ವಂಚಿತರನ್ನಾಗಿ ಮಾಡಿದ್ದೇವೆ. ಇನ್ನೊಂದೆಡೆ, ಜನರ ನಡುವೆ ಅದೇನೋ ಕಂಡು ಕಾಣದ ದ್ವೇಷ, ಅಸಹನೆ ಇತ್ಯಾದಿ. ಮಕ್ಕಳೂ, ಹಿರಿಯರು ಯಾರೂ ನೆಮ್ಮದಿಯಾಗಿ ಆಡೋ ಹಾಗಿಲ್ಲ, ಬದುಕೋ ಹಾಗಿಲ್ಲ. ಪಾಪ ಮಕ್ಕಳು ಈ ವಯಸ್ಸಿನಲ್ಲೇ ಮಾನಸಿಕವಾಗಿ, ದೈಹಿಕವಾಗಿ ಎಷ್ಟೆಲ್ಲ ಹಿಂಸೆ ಅನುಭವಿಸ್ತಾರೆ? ದಿನಬೆಳಗಾದರೆ ಪೇಪರ್’ನಲ್ಲಿ ಇಂಥದೇ ಸುದ್ದಿಗಳು. ಇದು ಸರಿ ಇಲ್ಲ. ಇದಕ್ಕೆಲ್ಲ ಪರಿಹಾರವೇ ಇಲ್ವೇ? "

 

ರಾಯರು ನುಡಿದರು "ಏನಾದರೂ ಪರಿಹಾರ ಕಂಡುಕೊಳ್ಳಬೇಕು. ಮಕ್ಕಳು ಆಡ್ತಿದ್ದಾಗ, ಹಿರಿಯರಾದ ನಾವು ಮನೆಯೊಳಗೆ ಸೇರಿಕೊಳ್ಳದೇ ಅವರ ಮೇಲೆ ಒಂದು ಕಣ್ಣಿಟ್ಟಿರಬೇಕು. ಆದರೆ ಅದೂ ಸರಿ ಕಾಣೋಲ್ಲ. ತಮ್ಮ ಮನೆ ಜನ ಗಮನಿಸುತ್ತಿದ್ದಾರೆ ಅನ್ನೋ ಹಿಂಸೆ ಅವರಲ್ಲಿದ್ದು ಮನ ಬಿಚ್ಚಿ ನೆಮ್ಮದಿಯಾಗಿ ಇನ್ನೊಬ್ಬರ ಜೊತೆ ಸೇರಿಕೊಂಡು ಆಡಲೂ ಆಗೋದಿಲ್ಲ. ಯಾವ ಆಪತ್ತಿಗೂ ಸಿಲುಕದ ಹಾಗೆ, ನಾಲ್ಕು ಗೋಡೆ ಮಧ್ಯೆ ಬೆಳೆಯಲಿ ಅಂದುಕೊಂಡರೆ ಅದೂ ತಪ್ಪು. ಮುಷಂಡಿಗಳಾಗಿ ಬಿಡ್ತಾರೆ. ಹೊರಗಿನವರೊಂದಿಗೆ ಹೇಗೆ ವ್ಯವಹರಿಸಬೇಕು ಅನ್ನೋದೇ ತಿಳಿಯದೆ ಹೋಗ್ತಾರೆ. ಜನರಿಂದ ಆಪತ್ತು ಅಂತ ಮಕ್ಕಳನ್ನ ಉಡಿಯಲ್ಲೇ ಕಟ್ಟಿಕೊಂಡು ಓಡಾಡ್ಲಿಕ್ಕೆ ಆಗುತ್ತ? ಯಾರನ್ನು ನಂಬಬೇಕು? ಯಾರಿಂದ ರಕ್ಷಣೆ? ಯಾರಿಂದ ನಮ್ಮ ಮಕ್ಕಳ ಸುರಕ್ಷತೆಗೆ ದಕ್ಕೆ? ಒಂದೂ ಅರ್ಥವಾಗೋಲ್ಲ."

 

ಶಾಸ್ತ್ರಿಗಳು ನುಡಿದರು "ಏನೋ, ಅವರಿಗೆ ಸಿಗೋ ಅಲ್ಪ-ಸ್ವಲ್ಪ ಸಮಯ ಏನೋ ಆಡ್ಕೊಂಡು ಅವರೂ ಸ್ವಲ್ಪ ಹಾಯಾಗಿರಲಿ. ಆ ಓದು, ಈ ಓದು, ಸಂಗೀತ, ಡ್ಯಾನ್ಸು, ಟಿವಿ ಶೋ’ಗಳಲ್ಲಿ ಪೈಪೋಟಿ ಅಂತೆಲ್ಲ ಅವರ ಸಮಯವನ್ನೆಲ್ಲ ತಮ್ಮ ಪ್ರತಿಷ್ಟೆಗೆ ತಂದೆ-ತಾಯಂದಿರು ಕದ್ದು, ಅವರ ಮನಸ್ಸನ್ನು ಬರೀ ಮೊದಲಿಗನಾಗೇ ಇರಬೇಕೆಂದು ಒತ್ತಡ ಕೂರಿಸಿಬಿಟ್ಟಿರುತ್ತಾರೆ. ಅಂತಹ ಸ್ಥಿತಿಯಲ್ಲಿನ ಅವರಿಗೆ ಒಮ್ಮೆ ಸೋತರೇ ಜಗತ್ತೇ ಕೊನೆಯಾಯಿತು ಅನ್ನಿಸೋ ಖಿನ್ನತೆ ಮೂಡುತ್ತದೆ. ಅಂದು ಒಂದು ರೂಮಿನಂತಹ ಮನೆಯಲ್ಲಿ ಐದಾರು ಮಕ್ಕಳು ಉತ್ತಮ ರೀತಿಯಲ್ಲಿ ಬೆಳೆಯುತ್ತಿದ್ದರು. ಇಂದು ಐದು ರೂಮುಗಳಿರೋ ಮನೆಯಲ್ಲಿ ಒಬ್ಬನನ್ನು ಉತ್ತಮ ಪ್ರಜೆಯನ್ನಾಗಿ ಬೆಳೆಸುವುದೇ ದೊಡ್ಡ ವಿಷಯವಾಗಿದೆ. ಸಮಾಜ ಈ ರೀತಿ ಆಗಲು ನಮ್ಮ ಕೊಡುಗೆ ಧಾರಾಳವಾಗಿದೆ. ಆದರೆ ಇದಕ್ಕೇನು ಪರಿಹಾರ?"

 

ಮಾತುಕತೆಗಳಿಂದ ಸಮಸ್ಯೆ ಬಗೆ ಹರಿಯಿತೋ ಇಲ್ಲವೋ, ಪರಿಹಾರ ಕಂಡಿತೋ ಇಲ್ಲವೋ ತಲೆಯಂತೂ ಬಿಸಿಯಾಯ್ತು. ಆ ಬಿಸಿಯ ಹಬೆಗೋ ಏನೋ ಕರೆಂಟ್ ಕೂಡ ಬಂತು. ಪ್ರತಿ ಬಾರಿ ಇಂತಹ ಗಹನವಾದ ವಿಷಯಗಳು ಕರೆಂಟ್ ಹೋದಾಗ ಬೆಳಗಿ, ಕರೆಂಟು ಬಂದ ಕೂಡಲೇ ನಂದಿ ಹೋಗುತ್ತದೆ. ಈಗಲೂ ಹಾಗೆಯೇ.

 

ಹಿರಿಯರ ಮಾತುಗಳಿಂದ ನನ್ನ ತಲೆಯಲ್ಲಿ ನಿಂತಿದ್ದು "ಯಾರನ್ನು ನಂಬಲಿ? ಯಾರಿಂದ ನಮ್ ಬಲಿ?"

(ಕಳೆದ ಭಾನುವಾರದ ಅರ್ಥಾತ್ ಮಾರ್ಚ್ ೨೩ ೨೦೧೪ ರಂದು ಕನ್ನಡಪ್ರಭ ಪತ್ರಿಕೆಯ ಖುಷಿ ಪತ್ರಿಕೆಯಲ್ಲಿ ಪ್ರಕಟವಾದ ಈ ಲೇಖನವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಖುಷಿಯಾಗುತ್ತಿದೆ)

Comments