ಗೋಕುಲಾಷ್ಟಮಿ ತಿಂಡಿ

ಗೋಕುಲಾಷ್ಟಮಿ ತಿಂಡಿ

ನನ್ನಪ್ಪನ ತಾಯಿಯ ಊರು ಕಪಿಲಾ ನದೀತೀರದಲ್ಲಿರುವ ಕುಂಟನ ಬೆಳತೂರು. ಈ ಊರು ಈಗಲೂ ಒಂದು ಕುಗ್ರಾಮ. ನನ್ನಪ್ಪ ಹುಟ್ಟಿದ ಕಾಲದಲ್ಲಂತೂ ಇನ್ನೂ ಕುಗ್ರಾಮ ಮತ್ತು ಅಲ್ಲಿಗೆ ತಲುಪಲು ಬಹಳ ಪಾಡುಪಡಬೇಕಾಗಿತ್ತು. ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿಭಾಗದ ಗ್ರಾಮ ಅದು. ಆ ಊರಿಗೆ ಯಾವ ಕಡೆಯಿಂದ ಹೋದರೂ ಕಪಿಲಾ ನದಿಯನ್ನು ದಾಟಿಯೇ ತೀರಬೇಕು. ನದಿದಾಟಲು ತೆಪ್ಪಗಳನ್ನು ಬಳಸುತ್ತಿದ್ದರು. ಬೇಸಿಗೆ ಕಾಲದಲ್ಲೂ ನದಿ ತುಂಬಿ ಹರಿಯುತ್ತಿದ್ದ ಕಾಲವದು. ಆದ್ದರಿಂದ ಆ ಊರಿಗೆ ಹೋಗಿ ಸೇರಬೇಕಾದರೆ ತೆಪ್ಪದ ಸಹಾಯವಿಲ್ಲದೆ ಬೇರೆ ದಾರಿಯೇ ಇರಲಿಲ್ಲ.

ಈ ಬೆಳತೂರು ಮೈಸೂರಿನಿಂದ ಸುಮಾರು 30 ರಿಂದ 40 ಕಿ.ಮೀ ದೂರದಲ್ಲಿದೆ. ಇಷ್ಟು ಹತ್ತಿರದಲ್ಲಿದ್ದ ಆ ಊರಿನಿಂದ ಮೈಸೂರಿಗೆ ಜನ ನಡೆದುಕೊಂಡೇ ಬರಬೇಕಾಗಿತ್ತು. ನನ್ನಪ್ಪನ ಬಾಲ್ಯದ ಕಾಲದಲ್ಲಿ ಯಾವ ಊರಿಗೂ ಬಸ್ಸಿನ ಸೌಕರ್ಯ ಇರಲಿಲ್ಲ. ಕೈಕಾಲು ಗಟ್ಟಿ ಇದ್ದವರು ನಡೆದೇ ಬರುತ್ತಿದ್ದರು. ಕೈಲಾಗದವರೂ, ಹೆಂಗಸರೂ, ಮಕ್ಕಳೂ ಎತ್ತಿನ ಗಾಡಿಯಲ್ಲಿ ಬರೆಬೇಕಿತ್ತು. ಹಳ್ಳಿಹಳ್ಳಿಗೆಲ್ಲ ಸಂಚಾರ ವ್ಯವಸ್ಥೆ ಇರಲೇ ಇಲ್ಲ. ಪ್ರಮುಖ ನಗರ ಪಟ್ಟಣಗಳಿಗೆ ಮಾತ್ರ ಒಂದೋ ಅಥವಾ ಎರಡೋ ಬಸ್ಸಿನ ಸಂಪರ್ಕ ಇತ್ತು.

ಬೆಳತೂರಿನಲ್ಲಿ ತನ್ನ ತಾಯಿಯ ಮನೆಗೆ ಅಂದರೆ ನನ್ನ ಅಜ್ಜಿಯ ಮನೆಗೆ ಯಾವಾಗಲಾದರೊಮ್ಮೆ ನನ್ನ ಅಪ್ಪ ಹೋಗುವ ರೂಢಿ ಇತ್ತು. ಏನಾದರೂ ವಿಶೇಷ ಸಮಾರಂಭ, ಹಬ್ಬ ಹರಿದಿನ ಮುಂತಾದ ಮುಖ್ಯವಾದ ಸಂದರ್ಭಗಲ್ಲಿ ಮಾತ್ರ ಜನ ಒಂದೂರಿಂದ ಇನ್ನೊಂದೂರಿಗೆ ಹೋಗುತ್ತಿದ್ದರು. ಇಲ್ಲದಿದ್ದರೆ ತಮ್ಮ ತಮ್ಮ ಹಳ್ಳಿಗಳಲ್ಲಿಯೇ ತಮ್ಮ ದೈನಂದಿನ ಚಟುವಟಿಕೆಗಳನ್ನು ಗಮನಿಸುತ್ತಾ ತಮ್ಮ ಪಾಡಿಗೆ ತಾವು ಇದ್ದು ಬಿಡುತ್ತಿದ್ದರು. ಅದಲ್ಲದೆ ಈ ಬೆಳತೂರು ಅದರ ಪಕ್ಕದ ಊರಾದ ಸರಗೂರು ಮುಂತಾದ ಗ್ರಾಮದವರಂತೂ ಆ ಕಾಲದಲ್ಲಿಯೇ ಸೋಂಬೇರಿತನಕ್ಕೆ ಹೆಸರಾಗಿದ್ದವರು. ವರ್ಷದ ಮುಕ್ಕಾಲು ಬಾಗ ಮಳೆ ಬೀಳುತ್ತಿತ್ತು ಮತ್ತು ಕಪಿಲಾನದಿಯ ಪ್ರವಾಹ. ಜಮೀನಿನಲ್ಲಿ ಬಿತ್ತನೆ, ಕಟಾವು ಮುಗಿದ ಮೇಲಂತೂ ಜನರಿಗೆ ಬೇರೇನೂ ಕೆಲಸವೇ ಇರುತ್ತಿರಲಿಲ್ಲ. ಜಗುಲಿಯ ಮೇಲೆ ಕುಳಿತು ಕಾಲ ಕಳೆಯಲು ಇಸ್ಪೀಟು ಆಡುವುದು, ಸ್ವಲ್ಪ ಚುರುಕಾಗಿರಲು ನಸ್ಯ ಏರಿಸುವುದು ಇವೆರಡೇ ಅಲ್ಲಿನ ಜನರ ಅತಿಮುಖ್ಯ ಚಟುವಟಿಕೆ. ಇದಲ್ಲದೆ ಭಾರತದ ಜನಸಂಖ್ಯೆಯ ಹೆಚ್ಚಳಕ್ಕೆ ತಮ್ಮಿಂದಾದ ಕೊಡುಗೆಯನ್ನು ತಪ್ಪದೇ ನೀಡುತ್ತಿದ್ದರು. ಇದಕ್ಕೆ ಅಲ್ಲಿನ ಜನರ ಮನೋಭಾವ ಕಾರಣವಲ್ಲ. ಆ  ಊರುಗಳ ಪರಿಸ್ಥಿತಿ ಹಾಗಿತ್ತು. ಆ ಜನರಿಗೆ ಬೇರೆ ಯಾವ ಮಾರ್ಗವೂ ಇರಲಿಲ್ಲ. ಊರಿಂದ ಊರಿಗೆ ಹೋಗಲು ಸಾರಿಗೆ ಸಂಪರ್ಕ ಇಲ್ಲ, ವಿದ್ಯುಚ್ಛಕ್ತಿ ಇಲ್ಲ, ಯಾವಾಗಲೂ ಜಿಟಿ ಜಿಟಿ ಮಳೆ, ಬೇರೇನೂ ತಾನೆ ಮಾಡಿಯಾರು.

ಈ ಬೆಳತೂರಿನ ನನ್ನ ಅಜ್ಜಿ ಮನೆಗೆ ಹೋದರೆ ನನ್ನ ಅಪ್ಪನಿಗೆ ಅಲ್ಲಿ ತನ್ನ ಸೋದರ ಮಾವನ ಮಗನೊಬ್ಬನೇ ಜತೆಗಾರ. ಇಬ್ಬರೂ ಓರಗೆಯವರಾದ್ದರಿಂದ ಅವರಿಬ್ಬರಲ್ಲಿ ಹೆಚ್ಚಿನ ಸ್ನೇಹ ಇತ್ತು. ಅದಲ್ಲದೆ ಇಬ್ಬರೂ ಅಸಾಮಾನ್ಯ ಈಜುಗಾರರು. ಊರ ಮುಂದಿನ ಕಪಿಲಾ ನದಿಯಲ್ಲೇ ಇವರಿಬ್ಬರ ಈಜಿನ ಪ್ರಾವೀಣ್ಯ ಪ್ರದರ್ಶನ. ಮೈಲುಗಟ್ಟಲೆ ನದಿಯಲ್ಲಿ ಈಜಿಕೊಂಡೇ ತೀರದ ಊರುಗಳಿಗೆ ಹೋಗಿಬಿಡುತ್ತಿದ್ದರು. ಇವರಿಬ್ಬರ ಈಜಿನ ಸಾಹಸಗಳು ಆ ಸುತ್ತಮುತ್ತಲಿನ ಹಳ್ಳಿಯವರಿಗೆಲ್ಲಾ ತಿಳಿದಿತ್ತು.

ನನ್ನ ಅಪ್ಪ ಬೆಳತೂರಿಗೆ ಬರುವುದನ್ನೇ ಕಾಯುತ್ತಿದ್ದ ಅವರ ಸೋದರ ಮಾವನ ಮಗ, ಬಂದ ಕೂಡಲೇ ಇಬ್ಬರೂ ಸೇರಿಕೊಂಡು ಬೆಳಿಗ್ಗೆಯಿಂದ ಸಂಜೆಯವರೆಗೂ ಈಜುವುದು. ತೀರದಲ್ಲಿ ಬೃಹದಾಕಾರವಾಗಿ ಬೆಳೆದು ನದಿಯ ಮಧ್ಯಭಾಗಕ್ಕೆ ರೆಂಬೆಗಳನ್ನು ಚಾಚಿಕೊಂಡಿದ್ದ ಮರದ ಮೇಲೆ ಹತ್ತಿ ನದಿಯ ಮಧ್ಯಕ್ಕೆ ಜಿಗಿದು ಈಜುವುದು ಹೀಗೆ ಇವರ ಆಟಗಳು. ಆ ಊರಿನಲ್ಲಿ ಇದ್ದಷ್ಟು ದಿನ ಹೀಗೆಯೇ ಇವರಿಬ್ಬರ ಫಟಿಂಗತನಕ್ಕೆ ತಡೆಯೇ ಇರುತ್ತಿರಲಿಲ್ಲ. ಇವರಿಬ್ಬರಿಗೆ ತಮ್ಮ ಮನೆಯಲ್ಲೇ ಊಟ ಮಾಡಬೇಕೆಂಬ ನಿಯಮವಿರಲಿಲ್ಲ. ಇಷ್ಟು ಪ್ರಸಿದ್ಧ ಫಟಿಂಗರಾಗಿದ್ದ ಇವರಿಬ್ಬರಿಗೆ ಯಾರ ಮನೆಯಲ್ಲಾದರೂ ಊಟಕ್ಕೆ ಆಹ್ವಾನ ಇದ್ದೇ ಇರುತ್ತಿತ್ತು. ನನ್ನ ಅಪ್ಪನನ್ನು ಶೀನು ಎಂದೂ ಅವರ ಸೋದರಮಾವನ ಮಗನನ್ನು ಸಾಮಿ ಎಂದೂ ಕರೆಯುತ್ತಿದ್ದರು. ಈ ಶೀನು-ಸಾಮಿ ಜೋಡಿ ಎಂದರೆ ತಿಳಿಯದವರೇ ಆ ಊರಿನಲ್ಲಿರಲಿಲ್ಲ. ಒಂದು ಸಲ ನನ್ನ ಅಪ್ಪ ಗೋಕುಲಾಷ್ಟಮಿ ಹಬ್ಬದ ವೇಳೆಗೆ ಬೆಳತೂರಿಗೆ ಹೋಗಿದ್ದರು. ಶ್ರೀ ವೈಷ್ಣವರಿಗೆ ಗೋಕುಲಾಷ್ಟಮಿ ಬಹಳ ಪ್ರಮುಖವಾದ ಹಬ್ಬ. ಆ ಹಬ್ಬವನ್ನು ಅವರು ಅತೀ ವಿಜೃಂಭಣೆಯಿಂದ ಆಚರಿಸುತ್ತಿದ್ದರು. ಗೋಕುಲಾಷ್ಟಮಿಗೆ ಎರಡು ತಿಂಗಳು ಮುಂಚಿನಿಂದಲೇ ಹಬ್ಬಕ್ಕೆ ಬೇಕಾದ ತಯಾರಿಗಳು ಪ್ರಾರಂಭವಾಗಿಬಿಡುತ್ತಿದ್ದವು. ಈಗಿನಂತೆ ಗ್ರೈಂಡರ್ ಮಿಕ್ಸಿ ಇರಲಿಲ್ಲವಾದ್ದರಿಂದ ತಿಂಡಿಗಳನ್ನು ತಯಾರು ಮಾಡಲು ಬೇಕಾದ ಅಕ್ಕಿಹಿಟ್ಟು, ಹೆಸರು ಬೇಳೆ ಹಿಟ್ಟು, ಮುಂತಾದ ಹಿಟ್ಟುಗಳನ್ನು ಹಬ್ಬಕ್ಕೆ ಮೊದಲೇ ತಯಾರು ಮಾಡಿಕೊಳ್ಳಬೇಕು. ಅದಕ್ಕಾಗಿ ಅಕ್ಕಿ ಮತ್ತು ಇತರ ಧಾನ್ಯಗಳನ್ನು  ತೊಳೆದು ಅಂಗಳದಲ್ಲಿ ಬಿಸಿಲಿಗೆ ಹಾಕಿ, ಒಣಗಿಸಿ ತೆಗೆದು ಇಟ್ಟುಕೊಳ್ಳುವುದು. ನಂತರ ಅವುಗಳನ್ನು ಹುರಿದು ಬೀಸುವ ಕಲ್ಲಿನಲ್ಲಿ ಹದವಾಗಿ ಬೀಸಬೇಕು. ಬೀಸುವ ಕ್ರಿಯೆ ಸಾಮೂಹಿಕವಾಗಿ ನಡೆಯುತ್ತಿತ್ತು. ಎಲ್ಲರೂ ಒಬ್ಬರಿಗೆ ಒಬ್ಬರು ಸಹಾಯ ಮಾಡುತ್ತಿದ್ದರು. ಬೀಸಿದ ಹಿಟ್ಟುಗಳನ್ನು ಸರಿಯಾಗಿ ವಿಂಗಡಿಸಿ ಇಡಬೇಕು.

ನಂತರ ಇವನ್ನೆಲ್ಲ ಕರಿಯಬೇಕಲ್ಲ. ಅದಕ್ಕಾಗಿ ಬಹಳ ಮುಂಚಿನಿಂದಲೇ ಬೆಣ್ಣೆ ಶೇಖರಣೆ ಮಾಡಿ, ಬೆಣ್ಣೆ ಕಾಯಿಸಿ ತುಪ್ಪ ಮಾಡಿಕೊಳ್ಳಬೇಕು. ಆಗೆಲ್ಲ ತಿಂಡಿಗಳನ್ನು ತುಪ್ಪದಲ್ಲೇ ಕರಿಯುತ್ತಿದ್ದರು. ಎಣ್ಣೆ ಉಪಯೋಗಿಸುವ ಅಭ್ಯಾಸವೇ ಇರಲಿಲ್ಲ. ಕಟ್ಟಿಗೆ ಒಲೆಹಚ್ಚಿಕೊಂಡು, ಅದರ ಮುಂದೆ ಕುಳಿತು ಆ ಹೊಗೆಯಲ್ಲಿ ಈ ಎಲ್ಲಾ ತಿಂಡಿಗಳನ್ನು ಒಂದೊಂದಾಗಿ ಕರಿದು ಸಿದ್ಧಪಡಿಸುತ್ತಿದ್ದರು. ಅಯ್ಯಂಗಾರ್ಯರ ಮನೆಯ ಚಕ್ಕುಲಿ (ಇದನ್ನು ಮುರುಕು ಎಂದು ಕರೆಯುತ್ತಾರೆ), ಮುಚ್ಚೋರೆ, ತೇಂಗೊಳಲು, ಕೋಡುಬಳೆ, ಕಜ್ಜಾಯ ಎಂದು ಕನ್ನಡದಲ್ಲಿ ಹೇಳಲ್ಪಡುವ ಅತಿರಸ, ರವೆಉಂಡೆ ಮುಂತಾದ ತಿಂಡಿಗಳು ಬಹಳ ಹೆಸರುವಾಸಿ. ಎಲ್ಲವನ್ನೂ ತುಪ್ಪದಲ್ಲೇ ಕರಿದಿದ್ದರಿಂದ ಅವುಗಳನ್ನು ಬಾಯಲ್ಲಿ ಹಾಕಿದರೇ ಗರಗರನೇ ಕರಗಿ ಬಿಡುತ್ತಿದ್ದುವು. ಇಂಥ ರುಚಿಕಟ್ಟಾದ ತಿಂಡಿಗಳನ್ನು ಮಾಡಿಟ್ಟರೆ ತಿನ್ನುವುದಕ್ಕೆ ಜನರಿಗೇನು ಕಮ್ಮಿ. ಗೋಕುಲಾಷ್ಟಮಿ ಹಬ್ಬ ಬರುವುದನ್ನೇ ಎಲ್ಲರೂ ಕಾತುರದಿಂದ ಎದುರು ನೋಡುತ್ತಿದ್ದರು.

ಹಬ್ಬದ ದಿನ ಮನೆಯನ್ನೆಲ್ಲ ಶುಭ್ರವಾಗಿ ತೊಳೆದು ಮಾವಿನ ತೋರಣಗಳಿಂದ ಸಿಂಗರಿಸಿ, ವಿಧವಿಧವಾದ ಹಣ್ಣುಗಳು, ಅಂದರೆ ಸೀಬೆಹಣ್ಣು, ಕಿತ್ತಳೆ, ಮುಂತಾದವು, ತರಕಾರಿಗಳು, ಬದನೆ, ಸೌತೆ ಮುಂತಾದುವು, ಜತೆಗೆ ಸುಲಿಯದೇ ಇರುವ ಇಡೀ ತೆಂಗಿನಕಾಯಿ, ಇವನ್ನೆಲ್ಲ ಮರದಿಂದ ಮಾಡಿರುವ ಚೌಕಟ್ಟಿಗೆ ನೇತುಹಾಕಿ, ಜತೆಗೆ ಸಿದ್ಧಪಡಿಸಿದ ತಿಂಡಿಗಳಲ್ಲಿ, ಚಕ್ಕುಲಿ, ಮುಚ್ಚೋರೆ,ತೇಂಗೊಳಲು, ಮುಂತಾದವುಗಳನ್ನೂ ಸಹ ಈ ಹಣ್ಣು ತರಕಾರಿಗಳ ಜತೆ ಒಪ್ಪವಾಗಿ ಜೋಡಿಸಿ ಈ ಮರದ ಚೌಕಟ್ಟನ್ನು ಮನೆಯಲ್ಲಿ ಹಜಾರದ ಸೂರಿಗೆ ಎತ್ತರದಲ್ಲಿ ಕಟ್ಟಿ ಅದಕ್ಕೆ ಮತ್ತೆ ಹೂವು ತೋರಣಗಳಿಂದ ಅಲಂಕಾರ ಮಾಡುತ್ತಿದ್ದರು.

ಈ ಚೌಕಟ್ಟಿನ ಮಧ್ಯದಲ್ಲಿ ಒಂದು ಸಣ್ಣ ಬೆಳ್ಳಿ ತೊಟ್ಟಿಲನ್ನು ಕಟ್ಟಿ, ಅದರಲ್ಲಿ ಪುಟ್ಟ ಅಂಬೆಗಾಲು ಕೃಷ್ಣನ ವಿಗ್ರಹವನ್ನೂ ಇಡುತ್ತಿದ್ದರು. ಗೋಕುಲಾಷ್ಟಮಿಯ ದಿನ ಬೆಳಗಿನಿಂದಲೂ ಮನೆಯವರೆಲ್ಲ ಉಪವಾಸ ಇರುತ್ತಿದ್ದರು. ಶ್ರೀ ಕೃಷ್ಣಪರಮಾತ್ಮನು ಹುಟ್ಟಿದ್ದು ಅರ್ಧರಾತ್ರಿಯಲ್ಲಿ ತಾನೆ, ಆದ್ದರಿಂದ ಅರ್ಧರಾತ್ರಿ ಹನ್ನೆರಡು ಗಂಟೆಯ ಸಮಯಕ್ಕೆ ವಿಶೇಷವಾದ ಪೂಜೆ ಭಜನೆ ಎಲ್ಲಾ ಮಾಡಿ,ದೇವರಿಗೆ ಮಂಗಳಾರತಿ ಮಾಡಿ ಶ್ರೀಕೃಷ್ಣನು ಹುಟ್ಟಿದ ಸಂಭ್ರಮವನ್ನು ಬಹಳ ಸಡಗರದಿಂದ ಕೊಂಡಾಡುತ್ತಿದ್ದರು.
ಮನೆಯವರೆಲ್ಲರಿಗೂ ಈ ಪೂಜೆಯ ನಂತರ ಊಟ ತಿಂಡಿ. ಗೋಕುಲಾಷ್ಟಮಿ ಹಬ್ಬ ಎಂದರೆ ಇಷ್ಟೂ ಕಾರ್ಯಕ್ರಮಗಳನ್ನು ಎಲ್ಲಾ ಅಯ್ಯಾಂಗಾರ್ಯರ ಮನೆಗಳಲ್ಲೂ ಚಾಚೂ ತಪ್ಪದೇ ಪಾಲಿಸುತ್ತಿದ್ದರು. ಗೋಕುಲಾಷ್ಟಮಿಯ ಮಾರನೆದಿನದಿಂದ ಎಲ್ಲರಿಗೂ ಮಾಡಿಟ್ಟಿರುವ ತಿಂಡಿಗಳನ್ನು ಒಂದೊಂದಾಗಿ ತಿಂದು ಮುಗಿಸುವುದೇ ಕೆಲಸ. ಇದಲ್ಲದೇ ರೈತಾಪಿ ಜನರಿಗೆಲ್ಲ ಬುಟ್ಟಿ ಬುಟ್ಟಿ ತಿಂಡಿ ಕೊಡಲೇಬೇಕು. ಅವರೆಲ್ಲ ಸಾಲುಸಾಲಾಗಿ ಬಂದು ಎಲ್ಲ ಅಯ್ಯಂಗಾರರ ಮನೆಯಿಂದ ತಿಂಡಿ ಸಂಗ್ರಹಿಸಿಕೊಂಡು ಹೋಗುವ ಪದ್ಧತಿ ಇತ್ತು. ಇಷ್ಟೇ ಅಲ್ಲ, ಯಾವ ಮನೆಯಲ್ಲಿ ಮುರುಕು, ಚೆನ್ನಾಗಿ ಮಾಡಿದ್ದಾರೆ ಯಾವ ಮನೆಯ ತೇಂಗೋಳಲು ರುಚಿ, ಹೀಗೆ ತಿಂಡಿ ತಿಂದವರಿಂದ ಗುಣಮಾಪನ ಪ್ರಶಸ್ತಿಯನ್ನು ಎದುರು ನೋಡುತ್ತಿದ್ದರು. ಸುಮಾರು ಹದಿನೈದು ದಿನಗಳು ಈ ತಿಂಡಿ ಭಕ್ಷಣಗಳ ವಿತರಣೆ ನಡೆಯುತ್ತಿತ್ತು.
ಈಗಿನ ಕಾಲದಲ್ಲಿ ಜನರಿಗೆ ಇಷ್ಟೆಲ್ಲಾ ವ್ಯವಧಾನ ಇಲ್ಲ. ಗೋಕುಲಾಷ್ಟಮಿ ಹಬ್ಬವನ್ನೂ ಸಹ ಯಾಂತ್ರಿಕವಾಗಿ ಆಚರಿಸಬೇಕಲ್ಲ ಎಂಬ ನಿರ್ಭಂಧದಿಂದ ಆಚರಿಸುತ್ತಾರೆ. ಯಾರಿಗೂ ಹಬ್ಬಗಳಲ್ಲಿ ತಲ್ಲೀನರಾಗಿ ಸಡಗರದಿಂದ ಆಚರಿಸಲು ಸಮಯ ಇಲ್ಲ.
ಗೋಕುಲಾಷ್ಟಮಿಗೆ ಮಾಡಿದ ತಿಂಡಿಗಳು, ಭಕ್ಷಣಗಳನ್ನು ದೂರದ ಊರುಗಳಲ್ಲಿದ್ದ ಮಗಳ ಮನೆಗೋ ಅಥವಾ ಬೇರೆ ಹತ್ತಿರದ ಸಂಬಂಧಿಗಳ ಮನೆಗೋ ತೆಗೆದುಕೊಂಡು ಹೋಗಿ ಕೊಡುವ ಅಭ್ಯಾಸವೂ ಇತ್ತು. ಹೀಗೆ ಈ ಹಬ್ಬದ ಸಮಯದಲ್ಲಿ ಬೆಳತೂರಿಗೆ ಬಂದಿದ್ದ ನನ್ನ ಅಪ್ಪ ಹಬ್ಬ ಮುಗಿದ ಎರಡು ದಿನಗಳ ನಂತರ ಮೈಸೂರಿಗೆ ಹೊರಟರು. ಜತೆಗೆ ಸೋದರ ಮಾವನ ಮಗ ಸಾಮಿಯೂ ಸಹ ಹೊರಟ. ಈ ಶೀನು-ಸಾಮಿ ಮೈಸೂರಿಗೆ ಹೊರಡುವ ಸಮಾಚಾರ ತಿಳಿದ ಅಜ್ಜಿಯೊಬ್ಬಳು ಇವರಿಬ್ಬರನ್ನೂ ಕಂಡು, “ಲೋ ಮಕ್ಕಳಿರಾ ಹೇಗೋ ಮೈಸೂರಿಗೆ ಹೋಗುತ್ತಿದ್ದೀರಿ, ಹೋಗುವಾಗ ಈ ಎರಡು ಬುಟ್ಟಿ ಗೋಕುಲಾಷ್ಟಮಿ ತಿಂಡಿಯನ್ನು ಮೈಸೂರಿನಲ್ಲಿರುವ ನನ್ನ ಮಗಳಿಗೆ ತಲುಪಿಸಿಬಿಡಿ. ಇದೋ ನಿಮಗೆ ತಿನ್ನಲು ಬೇರೆ ತಿಂಡಿ ಮೂಟೆ ಇಟ್ಟಿದ್ದೇನೆ. ಅದನ್ನು ದಾರಿಉದ್ದಕ್ಕೂ ತಿಂದು ಮುಗಿಸಿ, ಈ ಎರಡು ಬುಟ್ಟಿಗಳನ್ನು ನನ್ನ ಮಗಳಿಗೆ ತಲುಪಿಸಿಬಿಡಿ” ಎಂದು ಹೇಳಿತು. ಸರಿ, ದಾರಿಸವೆಸಲು ಹೇಗೋ ತಿಂಡಿ ಮೂಟೆ ಕೊಟ್ಟಿದೆ ಈ ಮುದುಕಿ ನಮ್ಮದೇನು ಹೋಗಬೇಕು, ತೆಗೆದುಕೊಂಡು ಹೋಗಿ ಕೊಟ್ಟರಾಯಿತು ಎಂದು ಅಜ್ಜಿಯಿಂದ ಎರಡು ತಿಂಡಿ ತುಂಬಿದ ಬುಟ್ಟಿಗಳನ್ನು ತೆಗೆದುಕೊಂಡರು. ಜತೆಗೆ ತಮಗೆ ಕಟ್ಟಿಟ್ಟಿದ್ದ ತಿಂಡಿ ಮೂಟೆಯನ್ನು ಮರೆಯದೇ ತೆಗೆದುಕೊಂಡದ್ದಾಯಿತು.

ಇಬ್ಬರೂ ಮೈಸೂರಿನ ಕಡೆ ಹೆಜ್ಜೆ ಹಾಕಲು ಶುರು ಮಾಡಿದರು. ಸ್ವಲ್ಪ ದೂರ ಸವೆಸಿದ ಮೇಲೆ ದಾರಿಯಲ್ಲಿದ್ದ ಒಂದು ಮರದ ನೆರಳಿನಲ್ಲಿ ಸುಧಾರಿಸಿಕೊಂಡು, ಅಜ್ಜಿಯು ಇವರಿಗೆಂದೇ ಕೊಟ್ಟಿದ್ದ ತಿಂಡಿ ಮೂಟೆಯನ್ನು ಬಿಚ್ಚಿ ತಿಂಡಿಯನ್ನೆಲ್ಲಾ ತಿಂದು ಮುಗಿಸಿಬಿಟ್ಟು, ಆ ಎರಡು ತಿಂಡಿ ಬುಟ್ಟಿಯನ್ನು ಹೆಗಲಿಗೇರಿಸಿ ಪುನಃ ನಡೆಯಲು ಶುರು ಮಾಡಿದರು. ಸುಮಾರು 5 ರಿಂದ 6 ಕಿಲೋ ಮೀಟರ್ ನಡೆದಿದ್ದಾರೆ,ಆಯಾಸವಾಯಿತು. ಸರಿ ಹತ್ತಿರದ ಮರದ ನೆರಳಲ್ಲಿ ಸ್ವಲ್ಪ ಸುಧಾರಿಸಿಕೊಳ್ಳುವ ಎಂದು ಇಬ್ಬರೂ ಕುಳಿತರು.
ಸಾಮಿ ಸುಮ್ಮನೇ ಇರಬೇಕಲ್ಲ, “ಲೋ ಶೀನ ಒಂದು ಬುಟ್ಟಿಯ ಮುಚ್ಚಳ ಸ್ವಲ್ಪ ತೆಗೆಯೋ ಆ ಮುದುಕಿ ಏನಿಟ್ಟಿದೆ ಒಳಗೆ ಅಂತ ನೋಡೋಣ” ಅಂದ.

ಸರಿ, ನನ್ನ ಅಪ್ಪ ಒಂದು ಬುಟ್ಟಿಯ ಮುಚ್ಚಳತೆರೆದರು. ಆ ಬುಟ್ಟಿಯ ಮೇಲು ಪದರದಲ್ಲಿ ಗರಿಗರಿಯಾದ ಮುರುಕು ಅಥವಾ ಚಕ್ಕುಲಿಗಳನ್ನು ಪೇರಿಸಿ ಇಡಲಾಗಿತ್ತು. ಇದನ್ನು ನೋಡಿದ ಸಾಮಿ “ಏಯ್ ಶೀನ, ಎಲ್ಲ ಚಕ್ಕುಲಿಯಿಂದ ಒಂದೊಂದು ರೌಂಡು ಮುರಿದುಕೋ, ಚಕ್ಕುಲಿಯಲ್ಲಿ ಎಷ್ಟು ರೌಂಡ್ ಇದೇ ಎಂದು ಯಾರು ಲೆಕ್ಕ ಇಟ್ಟಿರುತ್ತಾರೆ. ನಮಗೆ ಈಗ ತಿನ್ನಲು ಚಕ್ಕಲಿ ಸಿಕ್ಕಿದಂತೆಯೂ ಆಯ್ತು, ಆ ಮುದುಕಿ ಮಗಳ ಮನೆಗೆ ತಿಂಡಿ ತಲುಪಿಸಿದಂತೆಯೂ ಆಯ್ತು” ಎಂದ
ಸರಿ ಎಲ್ಲ ಚಕ್ಕುಲಿಗಳಿಂದ ಅವುಗಳ ಹೊರಗಿನ ಒಂದೊಂದು ಸುತ್ತು ಮುರಿದುಕೊಂಡು ತಿಂದು ಹಾಕಿದರು. ಮಿಕ್ಕ ತಿಂಡಿಯನ್ನು ಹಾಗೇ ಇಟ್ಟು ಮತ್ತೆ ಬುಟ್ಟಿ ಹೊತ್ತುಕೊಂಡು ನಡೆಯಲು ಶುರು ಮಾಡಿದರು. ಮುಂದೆ ಐದಾರು ಮೈಲಿ ನಡೆದು ಸುಸ್ತಾದಾಗ ಪುನಃ ಮರದ ನೆರಳಿನಲ್ಲಿ ಕುಳಿತು ಹಿಂದೆ ಮಾಡಿದಂತೆಯೇ ಚಕ್ಕುಲಿಗಳನ್ನು ಒಂದೊಂದು ಸುತ್ತಾಗಿ ಮುರಿದುಕೊಂಡು ತಿಂದದ್ದಾಯಿತು. ಶ್ರಮವಹಿಸಿ ನಡೆಯುತ್ತಿದ್ದರಿಂದ ಈ ತುಪ್ಪದಲ್ಲಿ ಕರಿದ ತಿಂಡಿಗಳು ಇವರಿಬ್ಬರ ಹೊಟ್ಟೆ ಸೇರಿದ ಕ್ಷಣ ಮಾತ್ರದಲ್ಲಿ ಜೀರ್ಣವಾಗಿ ಬಿಡುತ್ತಿದ್ದವು. ಇದೇ ರೀತಿ ಎರಡು ಸಲ ದಣಿವಾರಿಸಿಕೊಳ್ಳುವಷ್ಟರಲ್ಲಿ ಬುಟ್ಟಿಯಲ್ಲಿದ್ದ ಚಕ್ಕುಲಿಗಳು ಮಾಯವಾದವು. ಸರಿ ಆ ಮುದುಕಿ ಚಕ್ಕುಲಿ ಕುಳುಹಿಸಿದ್ದಾಳೋ ಇಲ್ಲವೋ ಎಂದು ಅವಳ ಮಗಳು ಏತಕ್ಕೆ ತನಿಖೆ ಮಾಡುತ್ತಾಳೆ. ಬುಟ್ಟಿಗಳನ್ನು ತಲುಪಿಸಿದರೆ ಸಾಕು. ಅವಳೇನು ನಮ್ಮ ಮುಂದೆಯೇ ಬುಟ್ಟಿ ಬಿಚ್ಚಿ ಏನೇನು ತಂದಿದ್ದಾರೆ ಎಂದು ನೋಡುತ್ತಾಳೆಯೇ ಎಂದುಕೊಂಡು ಇವರಿಬ್ಬರೂ ಮುಂದೆ ಸಾಗಿದರು. ಸಣ್ಣ ವಯಸ್ಸು ಮತ್ತು ಅಷ್ಟು ದೂರ ನಡೆದುಕೊಂಡೇ ಹೋಗಬೇಕಲ್ಲ.

ಮುಂದೆ ಮಧ್ಯಾಹ್ನ ಊಟದ ಸಮಯ. ಸ್ವಲ್ಪ ವಿಶ್ರಮಿಸಿಕೊಳ್ಳೋಣ ಎಂದು ನೀರಿನ ಕಟ್ಟೆಯೊಂದರ ಹತ್ತಿರ ಮರದ ನೆರಳಲ್ಲಿ ಮಲಗಿದರು. ಆಗ ಸಾಮಿ ನನ್ನ ಅಪ್ಪನನ್ನು ಕುರಿತು, “ಲೋ ಶೀನ ಆ ಮುದುಕಿ ಎರಡು ಬುಟ್ಟಿಗಳನ್ನು ನಮ್ಮ ಹತ್ತಿರ ಕೊಟ್ಟು ಕಳುಹಿಸಿದ್ದಾಳೆ ಎಂದು ಅವಳ ಮಗಳಿಗೇನು ಗೊತ್ತು. ಅವಳೇನು ತನ್ನ ಮಗಳಿಗೆ ಕಾಗದ ಬರೆದು ತಿಳಿಸುತ್ತಾಳೇನು? ಆ ಮುದುಕಿಯಂತೂ ಮೈಸೂರಿಗೆ ಸಧ್ಯದಲ್ಲಿ ಬರೋಲ್ಲ. ಒಂದು ಕೆಲಸ ಮಾಡೋಣ ಒಂದು ಬುಟ್ಟಿಯಲ್ಲಿ ಮಿಕ್ಕಿರುವ ತಿಂಡಿಯನ್ನು ತಿಂದು ಮುಗಿಸಿಬಿಟ್ಟು ಉಳಿದ ಒಂದು ಬುಟ್ಟಿಯನ್ನು ಜೋಪಾನವಾಗಿ ತಲುಪಿಸಿಬಿಡೋಣ” ಎಂದ.

ಸಾಮಿಯ ಈ ಮಾತು ನನ್ನ ಅಪ್ಪನಿಗೂ ಸರಿ ಎಂದು ತೋರಿತು. ಹೇಗಿದ್ದರೂ ಬಿಚ್ಚಿದ ಒಂದು  ಬುಟ್ಟಿಯಲ್ಲಿ ಎಲ್ಲ ಬಗೆ ತಿಂಡಿಗಳನ್ನು ಸ್ವಲ್ಪ ಸ್ವಲ್ಪ ಸ್ವಾಹ ಮಾಡಿದ್ದಾಗಿದೆ ಅದನ್ನೇಕೆ ಕೊಂಡೊಯ್ಯಬೇಕು. ಇನ್ನೊಂದು ಬುಟ್ಟಿ ಹೇಗೋ ಇದೆ. ಅದನ್ನು ಕೊಟ್ಟರೆ ಆಯಿತು ಎಂದು ಯೋಚಿಸಿ, “ಸರಿ ಸಾಮಿ ಹಾಗೇ ಮಾಡೋಣ” ಎಂದರು. ಒಂದು ಬುಟ್ಟಿ ತಿಂಡಿ ಸ್ವಾಹ ಆಗಿಹೋಯಿತು.

ಆಯಾಸ ಪರಿಹಾರ ಆದ ಮೇಲೆ ಪುನಃ ಶೀನು-ಸಾಮಿಯ ಮೈಸೂರು ಪ್ರಯಾಣ ಮುಂದುವರೆಯಿತು.

ಮೈಸೂರು ಸೇರಲು ಇವರು 30 ರಿಂದ 40 ಕಿ.ಮೀ ನಡೆಯಬೇಕಿತ್ತು. ಆಗತಾನೇ ಇನ್ನೂ ಅರ್ಧದಾರಿ ಕೂಡ ಸವೆದಿರಲಿಲ್ಲ. ಸರಿ ಪಡ್ಡೆ ಹುಡುಗರು ತಾನೆ, ದೈಹಿಕ ಆಯಾಸ ಬೇರೆ, ಜೀರ್ಣಶಕ್ತಿಯಂತೂ ಅಪಾರ. ಈ ತಿಂಡಿಗಳು ಇವರಿಗೆ ಯಾವ ಲೆಕ್ಕ.
ಅರ್ಧದಾರಿಯವರೆಗೂ ಹೇಗೋ ಬಂದದ್ದಾಯ್ತು, ಇನ್ನು ಮುಂದುವರಿಸೋಣ ಏನು ಅವಸರ, ಎಷ್ಟೊತ್ತಾಗಲೀ ಮೈಸೂರು ತಲುಪಿದರೆ ಸರಿ ಎಂದು ಇವರಿಬ್ಬರೂ ತಮ್ಮ ಪ್ರಯಾಣ ಮುಂದುವರೆಸಿದರು.
ಮಿಕ್ಕ ಅರ್ಧದಾರಿ ನಡೆಯುವುದರಲ್ಲಿ, ಮಧ್ಯದಲ್ಲಿ ಅಲ್ಲಲ್ಲಿ ನಿಂತು ಒಂದೊಂದಾಗಿ ತಿಂಡಿಗಳನ್ನು ತಿಂದು ಮುಗಿಸಿದರು. ಇಬ್ಬರ ಕೈಯಲ್ಲೂ ಒಂದೊಂದು ಖಾಲಿ ಬುಟ್ಟಿ ಅದನ್ನು ಕೈಯಲ್ಲಿ ಹಿಡಿದುಕೊಂಡು ಹಿಂದಕ್ಕೆ ಮುಂದಕ್ಕೆ ಅದನ್ನು ತೂಗಾಡಿಸುತ್ತ ಮೈಸೂರಿನ ಹೊರವಲಯದಲ್ಲಿ ಸಿಗುವ ರಾಯನಕೆರೆ ಹತ್ತಿರ ಬಂದು ಸೇರಿದ್ದಾಯಿತು. ಈ ರಾಯನ ಕೆರೆ ಬಹಳ ವಿಶಾಲವಾಗಿತ್ತು. ಅಲ್ಲಿಯೇ ಹತ್ತಿರದಲ್ಲಿ ಮೈಸೂರು ಅರಮನೆಗೆ ಹಾಲು ಸರಬರಾಜು ಮಾಡಲು ಅರಮನೆ ಹಸುಗಳನ್ನು ಸಾಕಿದ್ದರು.
ಅಲ್ಲಿಗೆ ಬಂದ ಈ ಶೀನ-ಸಾಮಿ ಜೋಡಿ ಕೆರೆಯಲ್ಲಿ ಇಳಿದು ಕೈಕಾಲುಮುಖ ತೊಳೆದುಕೊಂಡು ಅಲ್ಲಿಯೇ ಸ್ವಲ್ಪ ಹೊತ್ತು ವಿಶ್ರಮಿಸಿಕೊಂಡರು. ಕೈಯಲ್ಲಿದ್ದ ಖಾಲಿ ಬುಟ್ಟಿಯನ್ನು ನೋಡಿ, “ಇದ್ಯಾವ ಪ್ರಯೋಜನಕ್ಕೆ, ಇವುಗಳನ್ನು ಏಕೆ ಮೈಸೂರಿನವರೆಗೂ ತೆಗೆದುಕೊಂಡು ಹೋಗಬೇಕು. ಇನ್ನು ಆ ಮುದುಕಿ ಅವಳ ಮಗಳಿಗೆ ಗೋಕುಲಾಷ್ಟಮಿ ತಿಂಡಿ ಕಳುಹಿಸಿದ ಸಮಾಚಾರ ತಿಳಿಯುವುದು ಯಾವತ್ತೋ. ಹಾಗೆ ತಿಳಿದರೂ ನಮ್ಮನ್ನು ಎಲ್ಲಿ ಬಂದು ಕೇಳುತ್ತಾರೆ. ನಾವಿಬ್ಬರೂ ಪಾಠಶಾಲೆ ಪ್ರಾರಂಭವಾದ ಮೇಲೆ ಮೇಲುಕೋಟೆಗೆ ಹೋಗಿ ಬಿಟ್ಟಿರುತ್ತೇವೆ. ಆಗ ನೋಡಿಕೊಳ್ಳೋಣ ಎಂದು ಯೋಚಿಸಿ, ಇಬ್ಬರೂ ತಮ್ಮ ಕೈಯಲ್ಲಿದ್ದ ಖಾಲಿ ಬುಟ್ಟಿಗಳನ್ನು ಪುಟ್‍ಬಾಲಿನಂತೆ ಒದ್ದು ಕೆರೆಯ ಮಧ್ಯಕ್ಕೆ ಚಿಮ್ಮಿಸಿ ಒಗೆದು ಬಿಟ್ಟರು. ಮುಂದೆ ಆ ಅಜ್ಜಿಯೂ ಇವರನ್ನು ಕೇಳಲಿಲ್ಲ. ಇವರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಹೀಗಾಯಿತು ಈ ಗೋಕುಲಾಷ್ಟಮಿ ತಿಂಡಿಯ ಪ್ರಸಂಗ.

ಈಗಿನ ಕಾಲದಲ್ಲಾಗಿದ್ದರೆ ಒಂದು ವೇಳೆ ತಿಂಡಿ ಕಳುಹಿಸಿದ್ದರೂ ಅದನ್ನು ಇಂಥವರ ಮೂಲಕ ಕಳುಹಿಸಿದ್ದೇನೆ, ಇಷ್ಟು ಬಗೆಯಾದ ತಿಂಡಿಗಳು ಇಷ್ಟಿಷ್ಟೇ ಇವೆ, ಅವರು ಹೊರಟ ಬಸ್ ಎಷ್ಟು ಹೊತ್ತಿಗೆ ಹೊರಟಿತು, ಅಲ್ಲಿಗೆ ಎಷ್ಟು ಹೊತ್ತಿಗೆ ತಲುಪುತ್ತದೆ, ತಿಂಡಿ ತಲುಪಿದ ತಕ್ಷಣ ಪೋನ್ ಮಾಡು, ಹೀಗೆ ಹಲವು ಬಗೆ ವರ್ತಮಾನಗಳು ಮೊಬೈಲ್ ಪೋನ್ ಮೂಲಕ ರವಾನೆಯಾಗಿ ಬಿಡುತ್ತಿತ್ತು.

ದೂರ ಸಂಪರ್ಕ ಮತ್ತು ಸಂಚಾರ ವ್ಯವಸ್ಥೆ ಇಲ್ಲದಿರುವುದೇ ಒಂದು ವಿಧದಲ್ಲಿ ಅನುಕೂಲಕರವಾಗಿತ್ತು ಎಂದು ಮೇಲಿನ ತಿಂಡಿ ಪ್ರಕರಣದಿಂದ ತಿಳಿಯುತ್ತದೆ. ಬೇರೇನೂ ಅನುಕೂಲವಿಲ್ಲದಿದ್ದರೂ ರುಚಿಕಟ್ಟಾದ ತಿಂಡಿ ತಿನ್ನಲು ಅನುಕೂಲವಾಗಿತ್ತು ಆಗಿನ ಕಾಲ

Rating
No votes yet

Comments

Submitted by kavinagaraj Thu, 03/27/2014 - 08:54

ಸೊಗಸಾಗಿದೆ, ತಿಂಡಿ ಪ್ರಕರಣ. ಈಗಿನವರು ಚಕ್ಕುಲಿ, ಕೋಡಬಳೆ, ರವೆಉಂಡೆ, ತೇಂಗೊಳಲು, ಇತ್ಯಾದಿ ತಿಂಡಿಗಳನ್ನು ಮನೆಯಲ್ಲಿ ಮಾಡುವುದೇ ಇಲ್ಲ. ಎಲ್ಲಾ ರೆಡಿಮೇಡ್ ಸಿಗುತ್ತದಲ್ಲಾ! ಹಬ್ಬಕ್ಕೆ ಹೋಳಿಗೆ ಸಹಾ ಹೊರಗಿನಿಂದಲೇ ತರುವುದು! ನಾವು ಚಿಕ್ಕವರಿದ್ದಾಗ ಮನೆಮಂದಿಯೆಲ್ಲಾ ಸಿನೆಮಾಕ್ಕೆ ಹೋಗುವಾಗ ದೊಡ್ಡವರು ಬುಟ್ಟಿ ತುಂಬಾ ಚಕ್ಕುಲಿ, ಕೋಡಬಳೆ, ಉಂಡೆ ಮೂಂತಾದ ತಿಂಡಿಗಳನ್ನು ತರುತ್ತಿದ್ದರು. ಆಗೆಲ್ಲಾ ನೀತಿಬೋಧಕ ಸಿನೆಮಾಗಳು! ಕೊನೆಯಲ್ಲಿ ಸುಖಾಂತ್ಯ!! ಶುಭಂ! ರಾಷ್ಟ್ರಗೀತೆ ಹಾಕುತ್ತಿದ್ದರು. ಎಲ್ಲರೂ ಎದ್ದು ನಿಲ್ಲುತ್ತಿದ್ದರು.