ಅಭಿನವ ರಾಮಾನುಜ
ನನ್ನ ತಂದೆಯ ವೇಷಭೂಷಣಗಳೆಲ್ಲ ತೀರ ಸಂಪ್ರದಾಯಸ್ಥರ ರೀತಿಯಲ್ಲಿತ್ತು. ಆದರೆ ಈಗಾಗಲೇ ತಿಳಿಸಿದಂತೆ ಅವರ ನಡೆ ನುಡಿ ಯೋಚನಾಲಹರಿ ಎಲ್ಲ ಬಹಳ ಕ್ರಾಂತಿಕಾರಿಯಾಗಿದ್ದವು.
ಶ್ರೀ ವೈಷ್ಣವ ಮತವನ್ನು ನೆಲೆಗೊಳಿಸಿ ಅದಕ್ಕೆ ಒಂದು ಸಾಮಾಜಿಕ ನಿಷ್ಠೆಯನ್ನು ನೀಡಿ ಪ್ರವೃದ್ಧಮಾನಕ್ಕೆ ತಂದದ್ದು ಶ್ರೀ ರಾಮಾನುಜಾಚಾರ್ಯರು. ಆಚಾರ್ಯತ್ರಯರಲ್ಲಿ ಮಧ್ಯದವರಾದ ರಾಮಾನುಜರ ಸಾಮಾಜಿಕ ಕಾಳಜಿ, ಅವರು ತೆಗೆದುಕೊಂಡ ನಿಲುವುಗಳಿಂದ ನಮಗೆ ಸ್ಪಷ್ಟವಾಗುತ್ತವೆ. ತಮ್ಮ ಗುರುಗಳು ತಮಗೆ ಬೋಧಿಸಿದ ತಿರುಮಂತ್ರವನ್ನು ಅತ್ಯಂತ ರಹಸ್ಯವಾಗಿ ಕಾಪಾಡಿಕೊಳ್ಳಬೇಕು ಮತ್ತು ಬೇರಾರಿಗೂ ಹೇಳಬಾರದು ಎಂದು ಗುರುವಿನ ಅಪ್ಪಣೆ ಇದ್ದರೂ ಲೆಕ್ಕಿಸದೆ ದೇವಸ್ಥಾನದ ಗೋಪುರದ ಮೇಲೇರಿ ನಿಂತು ಎಲ್ಲರಿಗೂ ತಿಳಿಯಲಿ ಎಂದು ಗಟ್ಟಿಯಾಗಿ ಕೂಗಿ ಹೇಳಿದರಂತೆ.
ಹಾಗೆಯೇ ಕರ್ನಾಟಕದ ಮೇಲುಕೋಟೆಯಲ್ಲಿ ಅವರು 12 ವರ್ಷಗಳ ಕಾಲ ತಂಗಿದ್ದರು. ಆ ಸಮಯದಲ್ಲಿ ಮೇಲುಕೋಟೆಯ ಚಲುವನಾರಾಯಣಸ್ವಾಮಿಯ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ದೊರಕುವಂತೆ ಮಾಡಿದರು. ಸಾವಿರ ವರ್ಷಗಳ ಹಿಂದೆಯೇ ಇಂಥ ಪಥ ನಿರ್ಮಾಣ ಮಾಡಿ. ಸಾಮಾಜಿಕ ಕ್ರಾಂತಿಯನ್ನು ಪ್ರಾರಂಭಿಸಿದರವರು ಆಚಾರ್ಯ ರಾಮಾನುಜರು. ಅವರು ದೀನ ಕುಲ ದಿನಮಣಿಯಾಗಿ, ದಲಿತಜನ ಮಂದಾರನಾಗಿ ಪ್ರಸಿದ್ಧಿ ಪಡೆದರು. ಸಮಾಜದಲ್ಲಿ ಎಲ್ಲರೂ ಒಂದೇ, ಕರುಣಾಮಯನಾದ ಭಗವಂತನ ಕೃಪೆ ಎಲ್ಲರಿಗೂ ಒಂದೇ ಎಂದು ಧೃಢವಾಗಿ ನಂಬಿ ಅದರಂತೆ ನಡೆದ ಮಹಾಮಹಿಮ ಶ್ರೀರಾಮಾನುಜ.
ಇಷ್ಟೆಲ್ಲಾ ರಾಮಾನುಜರ ಮಹಿಮೆಯನ್ನು ಏತಕ್ಕೆ ಬರೆಯಬೇಕಾಯಿತೆಂದರೆ ನನ್ನ ಅಪ್ಪ ಶ್ರೀ ವೈಷ್ಠ ಸಂಪ್ರದಾಯದವರಾಗಿ ಆಚಾರ್ಯ ರಾಮಾನುಜರ ಪರಂಪರೆಯಲ್ಲಿ ಬಂದವರು. ಅವರು ತನ್ನ ಸಂಪ್ರದಾಯದಲ್ಲಿ ಜಾತಿ ವ್ಯವಸ್ಥೆಗೆ ಜಾಗವಿಲ್ಲ ಎಂಬ ರಾಮಾನುಜರ ತತ್ವವನ್ನು ಅಕ್ಷರಶಃ ಪಾಲಿಸಿದವರು.
ಇದಕ್ಕೆ ಒಂದು ನಿದರ್ಶನವಾಗಿ ನನ್ನ ಕಣ್ಣುಮುಂದೆ ನಡೆದ ಒಂದು ಘಟನೆಯ ವಿವರ ಇಲ್ಲಿದೆ. ನನ್ನೂರಿಂದ ಒಂದೆರಡು ಕಿ.ಮೀ ದೂರದಲ್ಲಿ ಒಂದು ವೆಂಕಟರಮಣಸ್ವಾಮಿ ದೇವಸ್ಥಾನ ಇದೆ. ನಾನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಆ ದೇವಸ್ಥಾನಕ್ಕೆ ಪೂಜೆಯ ವ್ಯವಸ್ಥೆ ಇಲ್ಲದೆ ಮುಚ್ಚಿಹೋಗಿತ್ತು. ಕೆಲವು ದನಗಾಹಿಗಳು ಆ ದೇವಸ್ಥಾನ ಮುಂದೆ ಇದ್ದ ಜಗುಲಿಯ ಮೇಲೆ ಮಧ್ಯಾಹ್ನದ ವೇಳೆ ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಮಲಗಿ ನಿದ್ರಿಸುತ್ತಿದ್ದರು. ಇಷ್ಟನ್ನು ಬಿಟ್ಟರೆ ಅಲ್ಲಿಗೆ ಯಾರೂ ಹೋಗುತ್ತಿರಲಿಲ್ಲ.
ನನ್ನ ಅಪ್ಪ ಮತ್ತು ಊರಿನ ಇತರ ಪ್ರಮುಖರು ಸೇರಿಕೊಂಡು ಪೂಜೆ ಇಲ್ಲದೆ ಮುಚ್ಚಿಹೋಗಿದ್ದ ಆ ದೇವಸ್ಥಾನದ ಪುನರುದ್ಧಾರದ ಕೆಲಸ ಪ್ರಾರಂಭಿಸಿದರು. ಅದಕ್ಕಾಗಿ ಒಂದು ಕಮಿಟಿ ರಚನೆ ಮಾಡಿ ಅದಕ್ಕೆ ಆ ಸುತ್ತಲಿನ ಎಲ್ಲಾ ಗ್ರಾಮದ, ಎಲ್ಲಾ ವರ್ಗಗಳ ಮುಖ್ಯಸ್ಥರನ್ನು ಮೆಂಬರುಗಳನ್ನಾಗಿ ಮಾಡಿದರು. ಚಂದಾ ವಸೂಲಿ ಮಾಡಲಾಯಿತು. ಎಲ್ಲರಿಗಿಂತ ಮುಂದಾಗಿ ನನ್ನ ಅಪ್ಪ ತನ್ನ ಹೆಸರಿನಲ್ಲಿದ್ದ ಎರಡು ಎಕರೆ ಜಮೀನನ್ನು ದೇವಸ್ಥಾನದ ಹೆಸರಿಗೆ ವರ್ಗಾಯಿಸಿ ಬಿಟ್ಟರು.
ಸುಮಾರು ಊರುಗಳನ್ನು ಸುತ್ತಿ, ಅಲ್ಲಿ ಪೂಜೆ ಮಾಡಲು ಒಬ್ಬ ಪೂಜಾರಿಯನ್ನು ಪತ್ತೆ ಮಾಡಿ ಕರೆತಂದರು. ಅವನು ಮತ್ತು ಅವನ ಸಂಸಾರ ತಂಗಲು ದೇವಸ್ಥಾನದ ಹಿಂದುಗಡೆ ಒಂದು ಸಣ್ಣ ಮನೆ ನಿರ್ಮಾಣಗೊಂಡಿತು. ಹೀಗೆ ಎಲ್ಲ ಏರ್ಪಾಟುಗಳನ್ನು ಮಾಡಿ ಒಂದು ಶುಭಮುಹೂರ್ತದಲ್ಲಿ ಆ ದೇವಸ್ಥಾನದ ಪ್ರಾರಂಭೋತ್ಸವವನ್ನು ಬಲು ಅದ್ಧೂರಿಯಿಂದ ಕೊಂಡಾಡಲಾಯಿತು. ಸುಮಾರು 8 ರಿಂದ 10 ಹಳ್ಳಿಗಳಿಂದ ಜನ ಬಂದು ಈ ಸಮಾರಂಭದಲ್ಲಿ ಪಾಲುಗೊಂಡು ಸುಮಾರು ಒಂದು ವಾರಕಾಲ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.
ಆ ದೇವಸ್ಥಾನದ ಮುಂದೆ ಒಂದು ಸಿಹಿನೀರಿನ ಬಾವಿ ಇತ್ತು ಈಗಲೂ ಇದೆ. ಆದರೆ ಅಂತರ್ಜಲ ಬತ್ತಿ ಈಗ ಬರಡು ಬಾವಿಯಾಗಿ ಬರಿ ಬಾವಲಿಗಳ ಆಶ್ರಯ ತಾಣವಾಗಿದೆ.
ಈ ಬಾವಿಯೇ ಅಲ್ಲಿನ ಸುತ್ತಮುತ್ತಲಿನ ಜನರಿಗೆ ಮತ್ತು ದೇವಸ್ಥಾನಕ್ಕೆ ನೀರಿನ ಸೆಲೆಯಾಗಿತ್ತು. ಈ ದೇವಸ್ಥಾನ ಪ್ರಾರಂಭವಾದ ಸಮಯದಲ್ಲಿಯೇ ಅಲ್ಲಿಂದ ಹತ್ತಿರದಲ್ಲಿಯೇ ಹರಿಯುತ್ತಿದ್ದ ಒಂದು ಸಣ್ಣ ಹೊಳೆಗೆ ಡ್ಯಾಂ ಕಟ್ಟುವ ಕೆಲಸವನ್ನೂ ಸರ್ಕಾರ ಪ್ರಾರಂಭಿಸಿತು. ಬೇರೆಲ್ಲೂ ಜಾಗವಿಲ್ಲದ್ದರಿಂದ ಈ ದೇವಸ್ಥಾನದ ಸುತ್ತ ಮುತ್ತಲೂ ಆ ಡ್ಯಾಂ ಕೆಲಸದ ಮೇಲ್ವಿಚಾರಣೆ ಮಾಡಲು ಬರುವ ಇಂಜನೀಯರ್ಗಳಿಗೆ ವಸತಿ ಗೃಹಗಳನ್ನು ಕಟ್ಟಲು ಸರ್ಕಾರದ ಲೋಕೋಪಯೋಗಿ ಇಲಾಖೆ ನಕ್ಷೆ ತಯಾರು ಮಾಡಿ ಕಟ್ಟುವ ಕೆಲಸ ಶುರುಮಾಡಿತು. ಸುಮಾರು 6 ರಿಂದ 7 ತಿಂಗಳಿನಲ್ಲಿ ದೇವಸ್ಥಾನದ ಸುತ್ತ ಸುಂದರವಾದ ಮನೆಗಳು ನಿರ್ಮಾಣಗೊಂಡು ಅದೊಂದು ನವನಗರವಾಗಿ ಪರಿವರ್ತನೆಯಾಗಿ ಬಿಟ್ಟಿತು. ಆ ಮನೆಗಳ ಸುತ್ತಲೂ ಗೋಡೆ ನಿರ್ಮಿಸಿ ಅದನ್ನೊಂದು ವಸತಿ ಸಮುಚ್ಚಯವನ್ನಾಗಿ ಮಾಡಿದ್ದರು. ದೇವಸ್ಥಾನ ಮತ್ತು ಅದಕ್ಕೆ ಸೇರಿದ್ದ ಬಾವಿ ಎಲ್ಲ ಈ ಸಮುಚ್ಚಯದ ಒಳಗೆ ಸೇರಿ ಬಿಟ್ಟಿತು. ಈ ದೇವಸ್ಥಾನದ ಮುಂದಿನ ಬಾವಿಗೆ ಪಂಪು ಅಳವಡಿಸಿ ಎಲ್ಲ ಮನೆಗಳಿಗೂ ನೀರಿನ ಅನುಕೂಲ ಮಾಡಿದರು. ಆದರೂ ಆ ಬಾವಿಗೆ ಜನ ನೀರು ಸೇದಿಕೊಳ್ಳಲು ಹಿಂದಿನಿಂದ ಇದ್ದ ರಾಟೆಯಗಳನ್ನು ಹಾಗೇ ಉಳಿಸಿಕೊಂಡಿದ್ದರು. ಎರಡು ರಾಟೆಗಳಿದ್ದುವು ಬಾವಿಯ ಒಂದೊಂದು ಬದಿಯಲ್ಲಿಯೂ ಒಂದೊಂದು ರಾಟೆ ಎರಡೂ ಕಡೆಯಿಂದಲೂ ನೀರು ಸೇದಬಹುದಾಗಿತ್ತು.
ದೇವಸ್ಥಾನದ ಅರ್ಚಕರು ದಿನಾ ದೇವರಪೂಜೆಗೆ ಈ ಬಾವಿಯಿಂದಲೇ ನೀರು ಸೇದಿಕೊಂಡು, ಅಭಿಷೇಕ, ಪೂಜೆ ಎಲ್ಲದಕ್ಕೂ ಉಪಯೋಗಿಸಿಕೊಳ್ಳುತ್ತಿದ್ದರು. ಈ ದೇವಸ್ಥಾನದ ನಿರ್ವಹಣಾ ಕಮಿಟಿಯನ್ನು ಪ್ರಾರಂಭಿಸಿದವರೇ ನನ್ನ ಅಪ್ಪ. ದೇವಸ್ಥಾನ ಪುನಃ ಪ್ರಾರಂಭವಾಗಿ ಸ್ವಲ್ಪ ಸಮಯದವರೆಗೂ ಅದರ ಕೆಲಸಕಾರ್ಯಗಳಲ್ಲಿ ಸಕ್ರಿಯ ಪಾತ್ರ ವಹಸಿದ ಮೇಲೆ ಇನ್ನು ದಿನನಿತ್ಯದ ಕೆಲಸಗಳಿಗೆ ತಾನು ಇರಬೇಕಿಲ್ಲ ಎಂದು ತೀರ್ಮಾನಿಸಿ, ಆ ಎಲ್ಲಾ ಕೆಲಸಗಳನ್ನೂ ಇತರ ಸದಸ್ಯರಿಗೇ ಬಿಟ್ಟು ತನ್ನ ಪಾಡಿಗೆ ತಾನಿದ್ದು ಬಿಟ್ಟಿದ್ದರು. ಆದರೂ ಆ ದೇವಸ್ಥಾನ ಧರ್ಮದರ್ಶಿಯಾಗಿ ಮಾತ್ರ ಮುಂದುವರಿದು, ನಿತ್ಯದ ಕೆಲಸಗಳನ್ನು ಬೇರೆ ಜನರಿಗೆ ವಹಿಸಿಬಿಟ್ಟರು.
ಇದು ಹೀಗೆ ನಿರಾಂತಕವಾಗಿ ನಡೆಯುತ್ತಿತ್ತು. ಈ ಕಾಲಕ್ಕಾಗಲೇ ನನ್ನ ಅಪ್ಪನಿಗೆ ವೃದ್ಧಾಪ್ಯ ಪ್ರಾರಂಭವಾಗಿತ್ತು. ಹೆಚ್ಚಾಗಿ ಯಾವ ಕೆಲಸಕ್ಕೂ ಕೈಹಾಕುತ್ತಿರಲಿಲ್ಲ. ತಮ್ಮ ದೈನಂದಿನ ಕೆಲಸಗಳನ್ನು ಮಾಡಿಕೊಂಡು ಒಂದು ರೀತಿಯ ವಿಶ್ರಾಂತ ಜೀವನ ನಡೆಸುತ್ತಿದ್ದರು. ಮಿಕ್ಕೆಲ್ಲ ಜವಾಬ್ದಾರಿಗಳನ್ನು ನನ್ನ ಅಣ್ಣಂದಿರುಗಳೇ ನಿಭಾಯಿಸಿಕೊಂಡು ಹೋಗುತ್ತಿದ್ದರು. ನನ್ನ ಅಪ್ಪ ಸುಮ್ಮೆನೆ ಉಸ್ತುವಾರಿ ಮಾಡುತ್ತಾ ಬರೀ ಲೋಕಾಭಿರಾಮವಾಗಿ ಬಂದವರೊಂದಿಗೆ ಹರಟುತ್ತ ಕಾಲಕಳೆಯುತ್ತಿದ್ದರು.
ಒಂದು ಸಂಜೆ ಹೀಗೆ ಜಗುಲಿಯ ಮೇಲೆ ಕುಳಿತು ಅಲ್ಲಿದ್ದ ಕೆಲವು ಜನರೊಂದಿಗೆ ಏನೋ ಸುಮ್ಮನೆ ಮಾತನಾಡುತ್ತ ಕುಳಿತಿದ್ದರು. ಆಗ ಅಲ್ಲಿಗೆ ಒಬ್ಬ ಬಂದು ನನ್ನಪ್ಪನನ್ನು ಉದ್ದೇಶಿಸಿ, “ಬುದ್ದೀ ದೇವಸ್ಥಾನಕ್ಕೆ ಬರಬೇಕೆಂತೆ, ಅಲ್ಲಿ, ಸಬ್ಇನ್ಸ್‌ಪೆಕ್ಟರ್, ಎಂಎಲ್‍ಎ ಎಲ್ಲ ಇದ್ದಾರೆ ನಿಮ್ಮನ್ನು ಬರಹೇಳಿದರು” ಎಂದ.
ಇದನ್ನು ಕೇಳಿದ ನನ್ನ ಅಪ್ಪ “ಸಬ್‍ಇಇನ್ಸ್‌ಪೆಕ್ಟರ್‌ಗೆ ನನ್ನ ಹತ್ತಿರ ಏನು ಕೆಲಸ, ನಾನೇಕೆ ಅಲ್ಲಿಗೆ ಹೋಗಲಿ ನಾನು ಬರೋಲ್ಲ” ಅಂದರು. ಅಷ್ಟರಲ್ಲಿ ಒಬ್ಬ ಪೋಲೀಸ್ ಪೇದೆ ಸಹ ಅಲ್ಲಿಗೆ ಬಂದ. “ಸ್ವಾಮಿ ದೇವಸ್ಥಾನದ ವಿಚಾರ, ಧರ್ಮದರ್ಶಿಯಾದ ತಾವು ಬರಲೇಬೇಕು, ನಮ್ಮ ಸಾಹೇಬರು ಬರಹೇಳಿದರು” ಎಂದ. ಇಷ್ಟೆಲ್ಲಾ ಆದಮೇಲೆ ಹೋಗದೇ ಇರಲು ಸಾಧ್ಯವೆ. ಸರಿ ಎಂದು ಆ ಪೇದೆಯೊಂದಿಗೆ ದೇವಸ್ಥಾನದ ಕಡೆ ನಡೆದರು. ಇವರ ಹಿಂದೆ ನಮ್ಮೂರಿನ ಒಂದಷ್ಟು ಮಂದಿ ಸಹ ಹೆಜ್ಜೆ ಹಾಕಿದರು.
ಎಲ್ಲರೂ ದೇವಸ್ಥಾನದ ಬಳಿ ಬಂದು ಸೇರಿದರು. ಅಲ್ಲಿ ನೋಡಿದರೆ ಸುಮಾರು 800 ರಿಂದ 1000 ಸಾವಿರ ಜನ ದೇವಸ್ಥಾನದ ಮುಂದೆ ಇದ್ದ ಅರಳಿಕಟ್ಟೆಯ ಬಳಿ ಜಮಾಯಿಸಿದ್ದಾರೆ. ನನ್ನ ಅಪ್ಪ ಬಂದ ಕೂಡಲೇ ಅಲ್ಲಿದ್ದ ಸಬ್‍ಇನ್ಸ್‌ಪೆಕ್ಟರ್ ಮತ್ತು ಆ ಕ್ಷೇತ್ರದ ಶಾಸಕ (ಅವನು ಮಾಧ್ಯಮಿಕ ಶಾಲೆಯಲ್ಲಿ ನನ್ನ ಅಪ್ಪನ ವಿದ್ಯಾರ್ಥಿಯಾಗಿದ್ದವನು) ಇಬ್ಬರೂ ನನ್ನ ಅಪ್ಪನ ಬಳಿಬಂದು, “ಬನ್ನಿ ಬನ್ನಿ ಅಯ್ಯಂಗಾರ್ರೇ” ಎಂದು ಕುಳಿತುಕೊಳ್ಳಲು ಜಾಗ ಮಾಡಿಕೊಟ್ಟರು.
ಆಗ ನನ್ನ ಅಪ್ಪ ಆ ಸಬ್‍ಇನ್ಸ್‌ಪೆಕ್ಟರು ಮತ್ತು ಶಾಸಕನನ್ನು ಉದ್ದೇಶಿಸಿ, “ಇದೇನಿದು, ಇಲ್ಲಿ ಇಷ್ಟು ಅವಾಂತರ, ಏನಾಯಿತು ಯಾಕಿಷ್ಟು ಜನ ಸೇರಿದ್ದಾರೆ” ಎಂದು ಕೇಳಿದರು. ಆಗಲ್ಲವೆ ಪರಿಸ್ಥಿತಿಯ ನಿಜ ಸ್ವರೂಪ ತಿಳಿದದ್ದು. ವಿಷಯ ಏನೆಂದರೆ,
ಅಂದು ಸುಮಾರು 12 ಗಂಟೆ ಮಧ್ಯಾಹ್ನದ ಸಮಯದಲ್ಲಿ ದೇವಸ್ಥಾನದ ಮುಂದಿನ ಬಾವಿಯಿಂದ ಬಾಯಾರಿಕೆ ತೀರಿಸಿಕೊಳ್ಳಲು ದಲಿತ ಸಮುದಾಯದ ಒಬ್ಬ ಯುವಕ, ನೀರು ಸೇದಿ ಕುಡಿದಿದ್ದಾನೆ. ತಮಗೆ ಮಾತ್ರ ಮೀಸಲಾಗಿದ್ದ ಹಗ್ಗ, ಬಿಂದಿಗೆಯನ್ನು ಉಪಯೋಗಿಸಿ ಬಾವಿನೀರು ಸೇದಿದ್ದು, ಮಲಿನ ಮಾಡಿದ್ದು ಮಹಾಪರಾಧ ಎಂದು ಅಲ್ಲಿನ ಜನ ಮತ್ತು ದೇವಸ್ಥಾನದ ಅರ್ಚಕ ಎಲ್ಲರೂ ಸೇರಿ, ಆ ಹುಡುಗನನ್ನು ಹಿಡಿದು ಕಟ್ಟಿಹಾಕಿ ಅವನಿಂದ ಅಪರಾಧ ರೂಪದಲ್ಲಿ ಹಣವಸೂಲಿ ಮಾಡಬೇಕೆಂದು ಹಟ ಹಿಡಿದಾಗ, ಈ ಪ್ರಕರಣ ಪೋಲೀಸರವರೆಗೂ ಹೋಗಿ, ಸಬ್ಇನ್ಸ್‌ಪೆಕ್ಟರ್ ಮತ್ತು ಸ್ಥಳೀಯ ಶಾಸಕ ಎಲ್ಲರೂ ಅಲ್ಲಿಗೆ ಬಂದು ಪಂಚಾಯ್ತಿ ಮಾಡುತ್ತಿದ್ದಾರೆ ಎಂದು ತಿಳಿಯಿತು.
ಆದರೆ ಅಲ್ಲಿ ಒಂದು ಕಾನೂನು ಸೂಕ್ಷ್ಮ ಎದುರಾಗಿತ್ತು. ಆ ದೇವಸ್ಥಾನ ಮತ್ತು ಅದರ ಮುಂದಿನ ಭಾವಿ ಪೊದು ಸ್ವತ್ತೋ ಅಥವಾ ಖಾಸಗಿಯೋ ಎಂಬ ತರ್ಕ ಎದ್ದು ಅದರ ಬಗ್ಗೆ ತಿಳಿಯಲೆಂದೇ ಆ ದೇವಸ್ಥಾನದ ಧರ್ಮದರ್ಶಿಯಾಗಿದ್ದ ನನ್ನ ಅಪ್ಪನನ್ನು ಆ ಪಂಚಾಯ್ತಿಗೆ ಬರಹೇಳಿದ್ದಾರೆ ಎಂಬುದನ್ನು ನನ್ನ ಅಪ್ಪ ತಿಳಿದರು.
ದೇವಸ್ಥಾನ ಮತ್ತು ಬಾವಿ ಪೊದುವಾದರೆ ಅದರ ಉಪಯೋಗವನ್ನು ಅದಕ್ಕೆ ಪ್ರವೇಶವನ್ನು ಜಾತಿ ಆಧಾರದ ಮೇಲೆ ತಡೆಯುವುದು ಕಾನೂನು ರೀತಿ ಅಪರಾಧ ಮತ್ತು ಶಿಕ್ಷಾರ್ಹ. ಖಾಸಗಿ ಸ್ವತ್ತಾದರೆ ಈ ಕಾನೂನು ಅಲ್ಲಿಗೆ ಅನ್ವಯವಾಗುವುದಿಲ್ಲ.
ಇದು ಕಾನೂನಿನ ನೋಟವಾಯಿತು. ಆದರೆ ಮನಷ್ಯತ್ವ ಮತ್ತು ಸಾಮಾಜಿಕ ಆಯಾಮದಿಂದ ಬೇರೆ ಯಾವ ವಾದ ಸೃಷ್ಟಿಯಾಗುತ್ತದೆ. ನನ್ನ ಅಪ್ಪ ಆ ದೇವಸ್ಥಾನದ ಧರ್ಮದರ್ಶಿ. ಆ ದೇವಸ್ಥಾನ ಸರ್ಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಇಲ್ಲ. ಹಾಗಾಗಿ ಆ ದೇವಸ್ಥಾನ, ಆ ಬಾವಿ ಎರಡು ಪೊದು ಅಲ್ಲ ಎಂದು ಹೇಳುತ್ತಾರೆ ಎಂದು ಅಲ್ಲಿ ನೆರೆದಿದ್ದ ಮೇಲುವರ್ಗದ ಜನರೆಲ್ಲ ಬಹಳ ಕುತೂಹಲದಿಂದ ನನ್ನ ಅಪ್ಪನ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದ್ದಾರೆ. ಅಲ್ಲಿ ಒಂದು ವಿಶೇಷ ಸಂಗತಿ ಏನಪ್ಪ ಅಂದರೆ ಆ ಸುತ್ತಮುತ್ತಲಿನ ಸಾಗುವಳಿ ಜಮೀನುಗಳೆಲ್ಲ ಮುಕ್ಕಾಲು ಪಾಲು ಮೇಲ್ವರ್ಗದವರ ಸ್ವಾಮ್ಯದಲ್ಲಿಯೇ ಇತ್ತು. ಆದರೆ ಆ ಜಮೀನಿನಲ್ಲಿ ಕೂಲಿ ಮಾಡಿ ಸಾಗುವಳಿ ಮಾಡುತ್ತಿದ್ದವರೆಲ್ಲ ದಲಿತ ಸಮುದಾಯದವರು. ಜನಸಂಖ್ಯೆಯಲ್ಲಿ ದಲಿತರು ಹೆಚ್ಚು, ಯಜಮಾನಿಕೆಯಲ್ಲಿ, ಭೂಸ್ವಾಮ್ಯದಲ್ಲಿ, ಇತರ ಮೇಲ್ವರ್ಗದವರದ್ದೇ ಮೇಲುಗೈ. ಇನ್ನು ಬೆರಳೆಣಿಕೆಯಷ್ಟು ಬ್ರಾಹ್ಮಣರಿದ್ದರು. ಅವರು ಯಾವ ಲೆಕ್ಕಕ್ಕೂ ಇಲ್ಲದವರಾಗಿದ್ದರು.
ಸುತ್ತಲೂ ಒಮ್ಮೆ ಕಣ್ಣು ಹಾಯಿಸಿದನ್ನ ಅಪ್ಪ, ಆ ಸಬ್ಇನ್ಸ್‌ಪೆಕ್ಟರ್ ಮತ್ತು ಶಾಸಕರನ್ನು ಉದ್ದೇಶೀಸಿ ಹೀಗೆ ಹೇಳಿದರು. “ಈ ದೇವಸ್ಥಾನ ಮತ್ತು ಬಾವಿ ಎಲ್ಲಿದೆ? ಅದರ ಸುತ್ತ ಏನಿದೆ?” ಅಂದರು. “ಇದೇನು ಸ್ವಾಮಿ, ದೇವಸ್ಥಾನ ಮತ್ತು ಬಾವಿ, ಇಲ್ಲೇ ಇದೆ ಅದರ ಸುತ್ತ ಕಾಂಪೌಂಡು ಇದೆ” ಅಂದರು. “ಆ ಕಾಂಪೌಂಡು ಯಾರದ್ದು?” ಎಂದು ಮರುಪ್ರಶ್ನೆ ನನ್ನಪ್ಪನದು. “ಅಯ್ಯೋ ಇದೇನು ಪ್ರಶ್ನೆ. ಅದನ್ನು PWD ಹಾಕಿದ್ದು” ಎಂದರು ಅಲ್ಲಿದ್ದ ಜನ. “PWD ಯಾರದ್ದು?” ಎಂದು ಮತ್ತೆ ಪ್ರಶ್ನೆ ನನ್ನಪ್ಪನಿಂದ. “PWD ಸರ್ಕಾರದ್ದು, ಸರ್ಕಾರ ಎಲ್ಲರದ್ದು” ಎಂದು ಉತ್ತರ ಬಂತು. ಹಾಗಾದರೆ ಈ ದೇವಸ್ಥಾನ, ದೇವರು, ಬಾವಿ ಎಲ್ಲ ಎಲ್ಲರಿಗೂ ಸೇರಿದ್ದು ಎಂದು ತೀರ್ಪು ಕೊಟ್ಟರು ನನ್ನ ಅಪ್ಪ. ಅಷ್ಟಕ್ಕೇ ಬಿಡದೆ, ಇಷ್ಟಕ್ಕೆಲ್ಲಾ ಕಾರಣನಾಗಿದ್ದ ಆ ದಲಿತ ಯುವಕನನ್ನು ಕರೆದು “ಲೋ, ನೀನು ಬಾ ಇಲ್ಲಿ, ನೋಡು ಒಂದು ಲೋಟ ತೆಗೆದುಕೊಂಡು ಬಾ ಅದನ್ನು ಚೆನ್ನಾಗಿ ತೊಳೆ, ಇಲ್ಲಿರುವ ಬಿಂದಿಗೆಯಿಂದ ಈ ಬಾವಿಯಲ್ಲಿ ನೀರು ಸೇದಿ ಆ ಲೋಟಕ್ಕೆ ಸುರಿದು ಕೊಡು, ನಾನು ಅದನ್ನು ಕುಡಿಯುತ್ತೇನೆ. ನೋಡಪ್ಪ ಸಬ್‍ಇನ್ಸ್‌ಪೆಕ್ಟರ್, ನೋಡಪ್ಪ ಸ್ವಾಮಿ ಶಾಸಕ ನೀವೂ ಸಹ ಆ ಹುಡುಗ ಸೇದಿಕೊಟ್ಟ ನೀರನ್ನು ಕುಡಿಯುತ್ತೀರಾ” ಎಂದು ಹೇಳಿ ಅವರಿಬ್ಬರನ್ನು ಮತ್ತು ಅಲ್ಲಿ ಸೇರಿದ್ದವರೆಲ್ಲರನ್ನೂ ಕಕ್ಕಾಬಿಕ್ಕಿ ಮಾಡಿಬಿಟ್ಟರು.
“ನೋಡಿ ದೇವರು, ನೀರು, ಗಾಳಿ ಇವೆಲ್ಲ ಯಾರ ಸ್ವಂತ ಸ್ವತ್ತಲ್ಲ. ಇದೆಲ್ಲ ಇಡೀ ಮನುಷ್ಯರಿಗೆಲ್ಲ ಸೇರಿದ್ದು, ಇದನ್ನು ಜಾತಿ ದೃಷ್ಟಿಯಿಂದ ನೋಡುವುದು ಧರ್ಮವಲ್ಲ” ಎಂದುಬಿಟ್ಟರು. ನನ್ನಪ್ಪನಿಂದ ಬೇರೆಯೇ ರೀತಿಯಾದ ಪ್ರತಿಕ್ರಿಯೆ ಎದುರು ನೋಡಿದ್ದ ಇತರ ಮೇಲ್ವರ್ಗದ ಜನ ಇದರಿಂದ ಬಹಳ ಕೋಪಗೊಂಡು ಅವರನ್ನು ಹಲ್ಲೆ ಮಾಡಲು ಮುಂದಾದರು. ಇದನ್ನು ಕಂಡ ಅಲ್ಲಿ ನೆರೆದಿದ್ದ ದಲಿತ ಸಮುದಾಯದ ಜನ ನನ್ನಪ್ಪನನ್ನು ಸುತ್ತುವರಿದು ರಕ್ಷಣಾ ವರ್ತುಲ ನಿರ್ಮಿಸಿ ಅವರನ್ನು ಹಲ್ಲೆಯಿಂದ ಪಾರು ಮಾಡಿದರು. ಅಷ್ಟೇ ಅಲ್ಲದೆ ಅವರನ್ನು ಬಹಳ ಜೋಪಾನವಾಗಿ ನನ್ನೂರವರೆಗೂ ಕರೆತಂದು ಮನೆ ಸೇರಿಸಿ ಮತ್ತೇನಾದರೂ ಅಪಾಯ ಬರಬಹುದೆಂದು ಮುಂಜಾಗರೂಕತೆಯಿಂದ ನಮ್ಮ ಮನೆಯ ಸುತ್ತ ಸುಮಾರು ಏಳೆಂಟು ಜನ ಕಾವಲಿರಲು ಮೊದಲು ಮಾಡಿದರು.
ಈ ರಗಳೆಯ ಮಧ್ಯದಲ್ಲಿ ಆ ಶಾಸಕ ಮತ್ತು ಸಬ್‍ಇನ್ಸ್‌ಪೆಕ್ಟರ್ ಸ್ಥಳದಿಂದ ಮಾಯವಾಗಿಬಿಟ್ಟರು. ಇದಾದ ಎರಡು ಮೂರು ದಿನಗಳಲ್ಲಿ ಈ ಸುದ್ದಿ ಇಡೀ ಜಿಲ್ಲೆ ಮತ್ತು ತಾಲ್ಲೂಕಿನಲ್ಲಿ ಕಾಳ್ಗಿಚ್ಚಿನಂತೆ ಹರಡಿ, ತಾಲ್ಲೂಕು ಸಮಿತಿ ಅಧ್ಯಕ್ಷ, ಇತರ ರಾಜಕೀಯ ಮುಖಂಡರುಗಳೆಲ್ಲಾ ನನ್ನ ಮನೆಗೆ ಬಂದು ನನ್ನ ಅಪ್ಪನನ್ನು ಭೇಟಿ ಮಾಡಿ, ವಿವರ ಪಡೆಯ ತೊಡಗಿಬಿಟ್ಟರು.
ನನ್ನ ಅಪ್ಪ ಅವರುಗಳಿಗೆಲ್ಲ ಹೇಳಿದ್ದು ಇಷ್ಟೆ, ತಾನು ಯಾವ ಪ್ರಚಾರಕ್ಕಾಗಲಿ, ಸ್ವಂತ ಲಾಭಕ್ಕಾಗಲಿ ಹೀಗೆ ಮಾಡಲಿಲ್ಲ. ಎಂಥದೇ ಸಂದರ್ಭದಲ್ಲಾಗಲಿ ಮನುಷ್ಯತ್ವ ಮರೆಯಬಾರದು, ಸಾಮಾಜಿಕ ನಿಷ್ಠೆಯನ್ನು ಮರೆಯಬಾರದು ಅಷ್ಟೆ. ಬೇರಾವ ಉದ್ದೇಶವೂ ಇಲ್ಲ. ಅದಲ್ಲದೆ ಶ್ರೀ ವೈಷ್ಣವ ಸಂಪ್ರದಾಯದಲ್ಲಿ ಜಾತಿ ವ್ಯವಸ್ಥೆಗೆ ಅವಕಾಶವಿಲ್ಲ. ತಾನೇನಿದ್ದರು ತನ್ನ ಹಿಂದಿನ ಆಚಾರ್ಯರಂತೆಯೇ ಅವರು ನಡೆದ ದಾರಿಯಲ್ಲಿ ನಡೆದಿದ್ದೇನೆ. ಇದರಲ್ಲಿ ನನ್ನ ಹಿರಿಮೆ ಏನೂ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.
ಕೆಲವರಂತೂ ನನ್ನ ಅಪ್ಪನನ್ನು ಹೇಗಾದರೂ ಒಪ್ಪಿಸಿ ತಾಲ್ಲೂಕು ಪಂಚಾಯಿತಿಗೆ ತಮ್ಮ ಪಕ್ಷದ ಅಭ್ಯರ್ಥಿಯಾಗಿ ನಿಲ್ಲಿಸಬೇಕೆಂದು ಸಹ ಪ್ರಯತ್ನಪಟ್ಟರು. ನನ್ನಪ್ಪ ಇವೆಲ್ಲಕ್ಕೂ ಸೊಪ್ಪುಹಾಕಲಿಲ್ಲ. ರಾಜಕೀಯಕ್ಕೂ ತನಗೂ ದೂರ, ಅದರ ಸಹವಾಸವೇ ಬೇಡ ಅಂದುಬಿಟ್ಟರು.
ಸರ್ಕಾರ ಮತ್ತು ಕಾನೂನಿನ ಬಲವಂತ ಮತ್ತು ಭಯ ಇವೆರಡೂ ಇಲ್ಲದೇ ಹೋದರೆ ಅಸ್ಪೃಶ್ಯತೆ ಇಂದಿಗೂ ಸಹ ಮುಂಚಿನಂತೆಯೇ ತಲೆಯೆತ್ತಿ ತನ್ನ ಪಿಶಾಚಿತನವನ್ನು ಪ್ರಾರಂಭ ಮಾಡುತ್ತದೆ. ಜನರೆಲ್ಲ ಕಾನೂನಿನ ಶಿಕ್ಷೆಯ ಭಯಕ್ಕೆ ಬಾಯಿ ಮುಚ್ಚಿಕೊಂಡು ಸಾರ್ವಜನಿಕವಾಗಿ ಅಸ್ಪೃಶ್ಯತೆಯನ್ನು ಪಾಲಿಸುತ್ತಿಲ್ಲ. ಹೃದಯ ಪರಿವರ್ತನೆ ಇನ್ನೂ ಸಂಪೂರ್ಣವಾಗಿ ಆಗಿಲ್ಲ ಎಂದೇ ನನ್ನ ಭಾವನೆ. ಈ ಅನಿಷ್ಠ ಪದ್ಧತಿಗಳು ಎಲ್ಲ ದೇಶಗಳಲ್ಲಿಯೂ ಒಂದಲ್ಲ ಒಂದು ರೀತಿಯಲ್ಲಿ ಇದ್ದೇ ಇವೆ. ದಕ್ಷಿಣ ಆಫ್ರಿಕ, ಜಿಂಬಾಬ್ವೆ ಅಮೇರಿಕ ಮುಂತಾದ ಕಡೆ ನಡೆದ ಕರಿಯರ ಮೇಲಿನ ದೌರ್ಜನ್ಯಗಳು, ನಮ್ಮ ಸಮಾಜದಲ್ಲಿ ಇದ್ದ ಅಸ್ಪೃಶ್ಯತೆ ಎಂಬ ಹೀನ ಪದ್ಧತಿ ಇವೆಲ್ಲ ಮನುಕುಲಕ್ಕೆ, ಈ ಸಮಾಜಕ್ಕೆ ಅಂಟಿದ ಕಳಂಕಗಳು.
ಹುಟ್ಟು ಮತ್ತು ಬಣ್ಣ ಅವಲಂಬಿಸಿ ಜನರನ್ನು ಮೇಲು ಕೀಳು ಎಂದು ವಿಭಜಿಸುವ ಹೀನಾಯವಾದ ಆಚರಣೆಯು ಎಂದು ಉದ್ಭವವಾಯಿತೋ ತಿಳಿಯದು. ಆಚಾರ್ಯ ರಾಮಾನುಜರಿಂದ ಮೊದಲಾಗಿ, ಕನಕದಾಸ, ಏಬ್ರಹಾಂ ಲಿಂಕನ್, ಮಾರ್ಟಿನ್‍ಲೂಥರ್ ಕಿಂಗ್, ಮಹಾತ್ಮಾಗಾಂಧಿ, ಜ್ಯೋತಿ ಬಾ ಪುಲೆ, ಅಂಬೇಡ್ಕರ್ ಇಂಥ ಮಹನೀಯರುಗಳಿಂದ ಅವರ ಕ್ರಾಂತಿಕಾರಿಯಾದ ಸಮಾಜಮುಖಿಯಾದ ಪ್ರವರ್ತನೆಗಳಿಂದ ಮನುಕುಲದ ಉದ್ಧಾರ ಆಗಿದೆ.
ನನ್ನ ಅಪ್ಪನ ಸಮಾಜ ಮುಖಿಯಾದ ನಡತೆ ನನ್ನ ಜೀವನದ ಮೇಲೆ ಅಚ್ಚಳಿಯದ ಪ್ರಭಾವ ಬೀರಿದೆ. ಇದಕ್ಕೆ ಮೇಲೆ ವಿವರಿಸಿದ ಘಟನೆ ಒಂದೇ ಸಾಕು. ಯಾವುದೇ ಪ್ರಚಾರದ ಆಸೆಯ ಇಲ್ಲದೆ ತಾನು ನಂಬಿದ್ದ ತತ್ವಗಳಿಗೆ ಬದ್ಧರಾಗಿದ್ದು, ತನ್ನ ಜೀವನದುದ್ದಕ್ಕೂ ಹಾಗೆಯೇ ನಡೆದ ನನ್ನ ಅಪ್ಪ ಸಹ ತನ್ನದೇ ಆದ ರೀತಿಯಲ್ಲಿ ಸಾಮಾಜಿಕ ನಿಷ್ಠೆಯನ್ನು ಮೆರೆದ ಮಹನೀಯ.
Comments
ಉ: ಅಭಿನವ ರಾಮಾನುಜ
ಸಮಾಜ ಸುಧಾರಕರು ಸಮಾಜ ಸುಧಾರಣೆಗಾಗಿ ಹಂಬಲಿಸುತ್ತಾರೆ. ಆದರೆ ಅನುಯಾಯಿಗಳು ಬೇಲಿ ಹಾಕಿಬಿಡುತ್ತಾರೆ. ಬಸವಣ್ಣ, ಶಂಕರ, ರಾಮಾನುಜ, ಇವರೆಲ್ಲರುಗಳ ವಿಚಾರದಲ್ಲಿ ಆಗಿರುವುದು ಇದೇ!
ಉ: ಅಭಿನವ ರಾಮಾನುಜ
ಅರವಿಂದತನಯರೆ
ನಿಮ್ಮ ತಂದೆಯವರ ವರ್ತನೆ ಬಹಳ ವೈಚಾರಿಕವಾದುದ್ದು. ಜಾತಿಬೇದದ ಆಚರಣೆಗಳು ಸಲ್ಲ.
ಭಾರತದಲ್ಲಿ ರಾಜಕೀಯ ಪದ್ದತಿ ಬದಲಾದರೆ, ಚುನಾವಣ ಪದ್ದತಿ ಬದಲಾದರೆ ಬಹುಷಃ ಜಾತಿಪದ್ದತಿಯು ಬದಲಾಗಬಹುದು ಅನ್ನಿಸುತ್ತೆ
ಪಾರ್ಥಸಾರಥಿ
ಉ: ಅಭಿನವ ರಾಮಾನುಜ
ಜಾತ್ಯಾತೀತ ಬಗ್ಗೆ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸಬಹುದು,ಜಾತ್ಯಾತೀತ ಬಗ್ಗೆ ಢೋಂಗಿತನ ಪ್ರದರ್ಶಿಸಿ ರಾಜಕಾರಣ ಮಾಡಬಹುದು.ಆದರೆ ನೈತಿಕ ಮತ್ತು ವಾಸ್ತವತೆಯ ನೆಲೆಗಟ್ಟಿನಲ್ಲಿ ಬದುಕಿನುದ್ದಕ್ಕು ಅದನ್ನು ಆಚರಿಸಲಿಕ್ಕೆ ಶುದ್ಧ ಮಾನವೀಯತೆ ಮತ್ತು ಬದ್ಧತೆ ಬೇಕು, ಇದು ಎಲ್ಲರಲ್ಲಿಯೂ ಕಾಣಸಿಗುವುದಿಲ್ಲಾ. ಇದೇ ವಿಚಾರ ಉಳ್ಳವರ ಜನನವಾಗಿ ಅವರು ಕ್ರಾಂತಿಕಾರಿಗಳಾಗುತ್ತಾರೆ. ಅಂಥವರಲ್ಲಿ ಒಬ್ಬರು ಈ ಅಭಿನವ ರಾಮಾನುಜರು. ಅವರ ಆಚರಣೆಯಲ್ಲಿನ ಕಿಂಚಿತ್ ಆದರೂ ನಾವು ಪಾಲಿಸಿದರೆ ಈ ಜಾತಿ ವ್ಯವಸ್ಥೆ ನಿರ್ಮೂಲನ ಆಗುವುದು ಖಂಡಿತ.ಹೊಲಸು ವಿಚಾರಗಳ ಕೆಸರಿನಲ್ಲಿ ಬಿದ್ದು ನರಳಾಡುತ್ತಿರುವ ನಮ್ಮಂಥವರಿಗೆ ಈ ಲೇಖನ ಸ್ಫೂರ್ತಿಯಾಗುವುದು ಖಂಡಿತ.ಬರಹವು ಅಭಿನಂದನಾರ್ಹ, ಮುಖ್ಯವಾಗಿ ಸ್ವಾಗತಾರ್ಹ.