ಬೆನ್ನೆಲುಬಿಲ್ಲದ ಭಾರತ, ಜಗತ್ತಿನೆದುರು ತಲೆಯೆತ್ತಿ ನಿಂತೀತೇ?
ಈ ಲೇಖನ 25 ಮಾರ್ಚ್ 2014 ರಂದು ಕನ್ನಡ ಪ್ರಭ (ಪುಟ 8) ಪತ್ರಿಕೆಯಲ್ಲಿ ಪ್ರಕಟವಾಗಿರುತ್ತದೆ. ( www.http://goo.gl/R3sWV4 )
ಬೆನ್ನೆಲುಬೇ ಇಲ್ಲದ ಮಾನವ ಅಥವಾ ಪ್ರಾಣಿಯನ್ನು ಊಹಿಸಿಕೊಳ್ಳಿ. ಸಾಧ್ಯವೇ? ಖಂಡಿತಾ ಇಲ್ಲ. ಇನ್ನು ಬೆನ್ನೆಲುಬೇ ಇಲ್ಲದ ದೇಶವೆಂದರೆ? ಚಿಕ್ಕದೊಂದು ದೇಹವನ್ನೇ ಊಹಿಸಿಕೊಳ್ಳಲಾಗುವುದಿಲ್ಲವೆಂದರೆ, ದೇಶವನ್ನು ಊಹಿಸಿಕೊಳ್ಳಲು ಸಾಧ್ಯವೇ? ನಿಮ್ಮ ಮಕ್ಕಳು ಬೆನ್ನೆಲುಬೇ ಇಲ್ಲದ ದೇಶವನ್ನು ನೋಡುವ ಸಾಧ್ಯತೆ ಇದೆ. ಅನ್ನದಾತನ ಬಗ್ಗೆ ಸರ್ಕಾರದ ನಿರ್ಲಕ್ಷ್ಯದ ಕಥೆ ಕೇಳಿ.
ದೇಶದ ಬೆನ್ನೆಲುಬು "ರೈತ". ರೈತನಿಲ್ಲದ ಭಾರತ ಊಹಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ ಇಡೀ ಜಗತ್ತು ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಕಾಯುವುದೇ ಅವನ ಭಿಕ್ಷೆಗೆ. ಜಗತ್ತು ಅದನ್ನೆಲ್ಲಾ ದುಡ್ಡು ಕೊಟ್ಟೇ ಖರೀದಿಸಬಹುದು. ಆದರೆ ಅವನ ಶ್ರಮವನ್ನು ಎಷ್ಟೇ ದುಡ್ಡು ಕೊಟ್ಟರೂ ಸರಿದೂಗಿಸಲು ಆಗುವುದಿಲ್ಲ. ಆತನ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವೇ? ಬೆಲೆ ಕಟ್ಟಲು ಪ್ರಯತ್ನಿಸಿದರೆ ಅದು ಮೂರ್ಖತನ. ನಾವು ತಿನ್ನುವ ಸಣ್ಣ ಬರ್ಫಿಯಿಂದ ಹಿಡಿದು ಡೊಮಿನೊಸ್ನ ಪಿಜ್ಜಾವರೆಗೆ, ಎಲ್ಲದರಲ್ಲೂ ರೈತನ ಶ್ರಮ ಅಡಗಿರುತ್ತದೆ. ರೈತನ ನಂತರದ ಸ್ಥಾನವೇ ವೈದ್ಯನದ್ದು. ಅಕ್ಕಿ, ಬೇಳೆ, ಸಾಮಗ್ರಿ, ತರಕಾರಿ ಇತ್ಯಾದಿಗಳೆಲ್ಲವೂ ಯಂತ್ರಗಳಿಂದ ತಯಾರಿಸುವ ಹಾಗಿದ್ದಿದ್ದರೆ, ರೈತನನ್ನು ಚಪ್ಪಲಿಗಿಂತ ಕಡೆಯಾಗಿ ನೋಡಲಾಗುತ್ತಿತ್ತೇನೋ? ತಂಪು ಪಾನೀಯಗಳನ್ನು ತಯಾರಿಸಿದ ಹಾಗೆ ಹಾಲನ್ನೂ ತಯಾರಿಸುವ ಹಾಗಿದ್ದಿದ್ದರೆ, ಗೋಮಾತೆಗೆ ದೇವರ ಸ್ಥಾನ ಕೊಡುತ್ತಿದ್ದೆವೇ? ನಮ್ಮ ಬೆಳಗ್ಗಿನ ಮೊದಲ ಕೆಲಸವೆಂದರೆ ಹಾಲಿನ ಪಾರ್ಲರ್ಗೆ ಹೋಗಿ ಹಾಲು ತರುವುದು. ರೈತ ಹಸುವಿಗೆ ಮೇವು ಹಾಕಿ, ಹಾಲು ಕರೆದು ಡೈರಿಗೆ ಬರುವ ಹೊತ್ತಿಗೆ ಅವನ ಪಾಡು ದೇವರಿಗೇ ಗೊತ್ತಾಗಬೇಕು. ಅಮೃತವನ್ನು ಹರಿಸುವ ದೇವರು ರೈತ. ತಟ್ಟೆಗೆ ಬಡಿಸಿಕೊಂಡಾಗ ರೈತನನ್ನು ನೆನೆಸಿಕೊಳ್ಳುವವರು ಎಷ್ಟು ಜನ? ಬಹುಶಃ ಜಗತ್ತಿನಲ್ಲಿ ಎಲ್ಲವೂ ಯಂತ್ರದ ಸಹಾಯದಿಂದ ಸಿಗಬಹುದು. ಆದರೆ ಊಟ, ಹಾಲು ಹಾಗೂ ರಕ್ತ ಯಂತ್ರದಿಂದ ಸಿಗುವುದಿಲ್ಲ. ಅದು ಸಾಧ್ಯವೂ ಇಲ್ಲ.
ಭ್ರಷ್ಟಾಚಾರದ ವಿರುದ್ಧ, ಕಡಿಮೆ ಸಂಬಳ ವಿರುದ್ಧ, ಸರ್ಕಾರದ ದುರಾಡಳಿತದ ವಿರುದ್ಧ, ಸಲಿಂಗಕಾಮಕ್ಕೆ ನಿಷೇಧ ಹೇರಿರುವ ಸುಪ್ರಿಂಕೋರ್ಟ್ ವಿರುದ್ಧ, ಒಂದು ಕೋಮಿನ ಬಗ್ಗೆ ಇನ್ನೊಂದು ಕೋಮಿನವರು ಅವಹೇಳನಕಾರಿ ಹೇಳಿಕೆ ಕೊಡುವುದರ ವಿರುದ್ಧ, ಬೆಲೆ ಏರಿಕೆಗಳ ವಿರುದ್ಧ, ರಾಜಕೀಯ ನಾಯಕರ ಅಕ್ರಮ ಸಂಬಂಧದ ವಿರುದ್ಧ ಹೋರಾಡುವ ಜನರು, ದಿನನಿತ್ಯ ತಮ್ಮ ಊಟಕ್ಕಾಗಿ ಶ್ರಮಪಡುವ ರೈತನ ಮೂಲಭೂತ ಸೌಕರ್ಯಗಳಿಗೋಸ್ಕರ ಏಕೆ ಧ್ವನಿ ಎತ್ತುವುದಿಲ್ಲ? ರೈತನ ಆತ್ಮಹತ್ಯೆಗೆ ಸರ್ಕಾರ ಕೊಡುವ ಒಂದು ಅಥವಾ ಎರಡು ಲಕ್ಷ ಹಣ ಆತನನ್ನು ಬದುಕಿಸಬಲ್ಲದಾ? ಜೀವನಪರ್ಯಂತ ಆತನ ಕುಟುಂಬ ನೋವಿನಲ್ಲೇ ಬದುಕುತ್ತದೆ. ರೈತರ ಆತ್ಮಹತ್ಯೆಗಳನ್ನು ತಡೆಯಲು ಎಚ್ಚರಿಕೆ ವಹಿಸದಿರುವುದು ಸರ್ಕಾರದ ನಿರ್ಲಕ್ಷ್ಯವಲ್ಲದೇ ಇನ್ನೇನು? ರೈತರ ಹೆಸರು ಹೇಳಿಕೊಂಡು ಮೊಸಳೆ ಕಣ್ಣೀರು ಸುರಿಸುವ ನಾಯಕರು ಸಹ ತಮ್ಮ ರಾಜಕೀಯ ಬೇಳೆ ಬೇಯುವವರೆಗೆ ಮಾತ್ರ ರೈತರ ಬಗ್ಗೆ ಮಾತನಾಡುತ್ತಾರೆ. ಕರ್ನಾಟಕದಲ್ಲಿ ರೈತರ ಪರವಾಗಿ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ್ದು ವಿಶೇಷವೆನಿಸಿದರೂ ಹೇಳಿಕೊಳ್ಳುವ ರೀತಿಯಲ್ಲಿ ಅದು ವರ್ಕೌಟ್ ಆಗಿಲ್ಲ. ಭಾರತದ ರೈತರ ಈಗಿನ ಮನಸ್ಥಿತಿ ಹೇಗಿದೆ ಗೊತ್ತೇ? ಇಲ್ಲಿದೆ ನೋಡಿ ಎಸ್.ಎಫ್.ಎಸ್.ಡಿ.ಎಸ್. ಸಂಸ್ಥೆ ನಡೆಸಿರುವ ಸಮೀಕ್ಷೆಯ ಸಂಕ್ಷಿಪ್ತ ವರದಿ.
ಸೆಂಟರ್ ಫಾರ್ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಎಸ್.ಎಫ್.ಎಸ್.ಡಿ.ಎಸ್.) ಸಂಸ್ಥೆಯ ಸಮೀಕ್ಷೆಯ ಪ್ರಕಾರ ಶೇ. 85ರಷ್ಟು ರೈತರು ಗ್ರಾಮೀಣ ಉದ್ಯೋಗ ಖಾತ್ರಿ ಹೆಸರು ಕೇಳಿದ್ದರೆ, ಶೇ. 51ರಷ್ಟು ಕುಟುಂಬಗಳಿಗೆ ಈ ಯೋಜನೆ ಲಭಿಸಿಲ್ಲ. ಶೇ. 70ರಷ್ಟು ರೈತರಿಗೆ ಸಬ್ಸಿಡಿ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಬರುತ್ತದೆ ಎಂಬುದೇ ಗೊತ್ತಿಲ್ಲ. ಗೊತ್ತಿರುವವರಲ್ಲಿ ಶೇ. 34ರಷ್ಟು ರೈತರು ಮಾತ್ರ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುವುದನ್ನು ಬೆಂಬಲಿಸಿದ್ದಾರೆ. ಶೇ. 83ರಷ್ಟು ಜನರಿಗೆ ಎಫ್.ಡಿ.ಐ. ಬಗ್ಗೆ ಗೊತ್ತೇ ಇಲ್ಲ. ಎಫ್.ಡಿ.ಐ. ಬಗ್ಗೆ ತಿಳಿದಿರುವವರ ಪೈಕಿ ಶೇ. 51ರಷ್ಟು ಮಂದಿ ಕೃಷಿ ಕ್ಷೇತ್ರದಲ್ಲಿ ಎಫ್.ಡಿ.ಐ. ಅಳವಡಿಕೆಯನ್ನು ವಿರೋಧಿಸಿದ್ದಾರೆ. ದೇಶದ ಶೇ. 76ರಷ್ಟು ರೈತರು ಕೃಷಿ ಬಿಟ್ಟು ಬೇರೆ ಉದ್ಯೋಗ ಮಾಡುವುದೇ ಉತ್ತಮ ಎನ್ನುತ್ತಿದ್ದಾರೆ. ಶೇ. 60ರಷ್ಟು ರೈತರು ತಮ್ಮ ಮಕ್ಕಳು ತಮ್ಮಂತೆ ಕಷ್ಟಪಡುವುದು ಬೇಡ. ಅದರ ಬದಲು ನಗರಕ್ಕೆ ಹೋಗಿ ಉದ್ಯೋಗ ಹುಡುಕಿಕೊಳ್ಳಲಿ ಎಂದಿದ್ದಾರೆ. ಶೇ. 58 ಕೃಷಿಕರು "ಎಲ್ಲಾ ಸಮಸ್ಯೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ನೇರ ಕಾರಣ" ಎಂದಿದ್ದಾರೆ. ಈ ಮೇಲೆ ನೀಡಿರುವ ಅಂಕಿ ಅಂಶಗಳನ್ನು ನೋಡಿದರೆ ನಿಜವಾಗಲೂ ರೈತರು ತಮ್ಮ ಉದ್ಯೋಗದ ಬಗ್ಗೆ ಆಸಕ್ತಿಯನ್ನು ಕಳೆದುಕೊಂಡಿದ್ದಾರೆ ಎನಿಸುವುದಿಲ್ಲವೇ?
ಅವರಿಗೆ ತಮ್ಮ ವೃತ್ತಿಯ ಬಗ್ಗೆ ಏಕೆ ಇಂತಹ ನಿರಾಸೆ ಮೂಡಿದೆ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟಾಗ, ರೈತರು ಅನೇಕ ರೀತಿಯ ಸಮಸ್ಯೆಗಳನ್ನು ವಿವರಿಸುತ್ತಾರೆ. ಸರ್ಕಾರಿ ಬ್ಯಾಂಕ್ಗಳಲ್ಲಿ ಸಾಲ ಬೇಕೆಂದು ಹೊರಟ ಒಬ್ಬ ರೈತನಿಗೆ ಏನೇನೋ ದಾಖಲೆಗಳನ್ನು ಕೇಳುತ್ತಾರೆ. ಆ ರೈತ ಅವೆಲ್ಲವನ್ನೂ ಒದಗಿಸಲಾಗದೇ ಸಾಲ ಪಡೆಯುವ ಯೋಚನೆಯನ್ನೇ ಬಿಟ್ಟು ಬಿಡುತ್ತಾನೆ. ಆದರೆ ಒಬ್ಬ ಪ್ರಭಾವಿ ವ್ಯಕ್ತಿಯ ಸಹಾಯದಿಂದ ರೈತನಲ್ಲದವನೂ ಸಹ ಕಮಿಷನ್ ನೀಡಿ ಲೋನ್ ಪಡೆದುಕೊಳ್ಳುತ್ತಾನೆ. ನಕಲಿ ಬಿತ್ತನೆ ಬೀಜ ದೊರೆತು ಒಂದು ಕಂತಿನ ಇಳುವರಿ ಪೂರ್ತಿ ನಷ್ಟವಾಗುತ್ತದೆ. ಸರಿಯಾದ ಬೆಂಬಲ ಬೆಲೆ ಇಲ್ಲದೆ ಪರದಾಡುತ್ತಾನೆ. ವಿಧಾನಸೌಧದ ಮುಂದೆ ಕುಳಿತು ಧರಣಿ ಮಾಡಿದರೂ ಕೇಳುವವರಿಲ್ಲ. ಧರಣಿ ಮಾಡುವಾಗ ಅವರಿಗೆ ಸಾಥ್ ಕೊಡಲು ವಿರೋಧ ಪಕ್ಷದವರು ಬಂದರೆ, ಧರಣಿನಿರತ ಆತ್ಮಹತ್ಯೆ ಮಾಡಿಕೊಂಡು ಸತ್ತರೆ ಮಾತ್ರ ಆಡಳಿತ ಪಕ್ಷದವರು ಬರುತ್ತಾರೆ. ಇದು ಯಾವುದೇ ಪಕ್ಷಕ್ಕೆ ಹೊರತಾಗಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ ಸಹ ವ್ಯವಸಾಯ ಮಾಡುವವರು ಸಾಕಷ್ಟು ಜನ ಇದ್ದಾರೆ. ಅವರಲ್ಲಿ ನನ್ನ ತಂದೆ ಸಹ ಒಬ್ಬರು. ವ್ಯವಸಾಯದಲ್ಲಿ ನಷ್ಟವಾಗುವುದಲ್ಲದೇ ಪಾಲಿಕೆಗೆ ಕಂತೆಗಟ್ಟಲೆ ಕಂದಾಯವನ್ನು ಸಹ ಕಟ್ಟಬೇಕು. ಕಷ್ಟಪಟ್ಟು ದುಡಿಯುವವರಿಗೇ ಇಲ್ಲದ ಮಾಸಾಶನ ಪದವಿ ಮುಗಿಸಿರುವ ನಿರುದ್ಯೋಗಿಗಳಿಗೆ ಏಕೆ? 40 ವರ್ಷವಾದರೂ ಮದುವೆ ಆಗದಿರುವ ಮಹಿಳೆಗೇಕೆ? ಪದವಿ ಮುಗಿಸಿರುವವರನ್ನು ಕರೆಸಿ ಸರ್ಕಾರಿ ಜಮೀನಿನಲ್ಲಿ ವ್ಯವಸಾಯ ಏಕೆ ಮಾಡಿಸುವುದಿಲ್ಲ? ಪದವಿ ಮುಗಿಸಿರುವವರು ಕೃಷಿ ಮಾಡಬಾರದೆಂದು ಸಂವಿಧಾನವೇನಾದರೂ ಹೇಳಿದೆಯೇ? ಕೃಷಿಯನ್ನು ಅಷ್ಟು ಕೀಳು ಮಟ್ಟದಲ್ಲಿ ಇಡಲು ಪ್ರಯತ್ನಿಸಲಾಗುತ್ತಿರುವುದೇಕೆ? ಕೃಷಿಕನನ್ನು ಬೆಂಬಲಿಸದ ಸರ್ಕಾರ, ತಾಯಿಯನ್ನು ಸಾಕದ ಮಗನಿದ್ದಂತೆ. ರಾಜ್ಯದ ಬಹುತೇಕ ರೈತರಿಗೆ ಸಿಗುವ ಸರ್ಕಾರಿ ಯೋಜನೆ ಪಂಪ್ಸೆಟ್ಗೆ ಉಚಿತ ವಿದ್ಯುತ್ ನೀಡುತ್ತದೆ. ಇದನ್ನು ಬಿಟ್ಟು ಬೇರೆಲ್ಲಾ ಯೋಜನೆಗಳು ಪ್ರಭಾವಿ ವ್ಯಕ್ತಿಯ ಮುಖಾಂತರವೇ ಹೋಗಬೇಕು. ಆಗಾಗ ರೈತರ ಸಾಲ ಮನ್ನಾ ಮಾಡುವುದರ ನೆಪದಲ್ಲಿ ಸರ್ಕಾರಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತವೆ. ಹಾಗಾದರೆ ರೈತರ ಪರ ಪ್ರಾಂಜಲ ಮನಸ್ಸಿನಿಂದ ಹೋರಾಡುವವರೇ ಇಲ್ಲವೆ? ಚುನಾವಣಾ ಸಮಯದಲ್ಲಿ ಮಾತ್ರ ರಾಜಕೀಯ ನಾಯಕರು ನೆನಪಾಗೋದಾ? ರೈತನಿಗೆ ಜನನಾಯಕ ಸಿಗುವುದು ಐದು ವರ್ಷಕ್ಕೊಮ್ಮೆ ಮಾತ್ರವೇನಾ? ದೇಶದಲ್ಲಿ ರೈತರನ್ನು ಕಡೆಗಣಿಸಲಾಗುತ್ತಿದೆಯೇ? ಅನ್ನದಾತ ಅಪ್ರತಿಮ ಅಲಕ್ಷ್ಯಕ್ಕೆ ಒಳಗಾಗಿದ್ದಾನಾ? ಕೃಷಿಗೆ ಸಂಬಂಧಿಸಿದಂತೆ ಬೇರೆ ರಾಷ್ಟ್ರಗಳ ಜೊತೆ ಭಾರತದ ಸಂಬಂಧ ಹಳಸಿದೆಯಾ? ರೈತರ ಕರೆಗೆ ಒಗೊಟ್ಟು ಓಡೋಡಿ ಬರುವ ನಾಯಕನ ಉದಯವಾಗುತ್ತದಾ? ರಾಜಕಾರಣಿಗಳು ಹೇಗೆ ತಮ್ಮ ಮಕ್ಕಳನ್ನು ರಾಜಕಾರಣಿಗಳನ್ನಾಗಿ ಮಾಡುತ್ತಾರೋ ಹಾಗೆಯೇ ರೈತರೂ ತಮ್ಮ ಮಕ್ಕಳನ್ನು ರೈತರನ್ನಾಗೇ ಮಾಡುವ ಕಾಲ ಬರುತ್ತದಾ? ವಿದೇಶದಲ್ಲಿ ಕೃಷಿಗೆ ಸಂಬಂಧಿಸದ ವಿಷಯವನ್ನು ಅಧ್ಯಯನ ಮಾಡಿ ಬಂದಿರುವ ವ್ಯಕ್ತಿ ಕರ್ನಾಟಕದಲ್ಲಿ ಕೃಷಿ ಮಂತ್ರಿಯಾಗಿ ಏನು ಮಾಡಬಲ್ಲ? ದೇವರೇ ಬಲ್ಲ. ಹಸುವಿನ ಮುಖವನ್ನೇ ನೋಡದ ವ್ಯಕ್ತಿ ಪಶುಸಂಗೋಪನಾ ಸಚಿವನಾಗಿ ಕಾರ್ಯನಿರ್ವಹಿಸತ್ತಾನೆ! ಏಕಾಏಕಿ ಸಂಸದರಾಗಿ ರಾಜಕೀಯ ಪ್ರವೇಶ ಮಾಡುವ ವ್ಯಕ್ತಿಗಳ ಕೈಯಲ್ಲಿ ರೈತರ ಏಳಿಗೆ ಸಾಧ್ಯವೇ? ಟಿಕೆಟ್ ಕೊಡುವ ಪಕ್ಷಗಳ ಮುಖಂಡರಿಗೆ ಇದರ ಬಗ್ಗೆ ಯೋಚಿಸುವ ಶಕ್ತಿ ಇಲ್ಲವೇ? ಕ್ಷೇತ್ರದಲ್ಲೆಲ್ಲ ಪ್ರವಾಸ ಮಾಡಿದರೆ ಸಾಕೇ? ಇದನ್ನೆಲ್ಲ ಕೇಳುವವರು ಯಾರೂ ಇಲ್ಲವೇ? 2014ಕ್ಕೆ ಉದಯಿಸುವ ಹೊಸ ಸರ್ಕಾರವಾದರೂ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಾ? ರೈತರ ಬಳಿ ತೆರಳಿ ಸಮಸ್ಯೆ ಇತ್ಯರ್ಥಪಡಿಸುತ್ತದಾ? ಐದು ವರ್ಷವೂ ರೈತರ ಕೈಗಳಿಗೇ ಸಿಗುತ್ತಾನಾ ಸಂಸದ? ರೈತರ ಏಳಿಗೆಗೆ ಶ್ರಮಿಸುತ್ತಾರಾ ಮುಂದಿನ ಪ್ರಧಾನಿ? ಮುಂದಿನ ಪೀಳಿಗೆಯವರೆಗೆ ಇರುವುದೇ, ರೈತ ಸಮುದಾಯ?
Comments
ಉ: ಬೆನ್ನೆಲುಬಿಲ್ಲದ ಭಾರತ, ಜಗತ್ತಿನೆದುರು ತಲೆಯೆತ್ತಿ ನಿಂತೀತೇ?
ಒಳ್ಳೆಯ ವೈಚಾರಿಕ ಬರಹ. ಗಮನಿಸಬೇಕಾದವರು ಗಮನಿಸುವುದೇ ಇಲ್ಲ! ದುರಂತ!!
In reply to ಉ: ಬೆನ್ನೆಲುಬಿಲ್ಲದ ಭಾರತ, ಜಗತ್ತಿನೆದುರು ತಲೆಯೆತ್ತಿ ನಿಂತೀತೇ? by kavinagaraj
ಉ: ಬೆನ್ನೆಲುಬಿಲ್ಲದ ಭಾರತ, ಜಗತ್ತಿನೆದುರು ತಲೆಯೆತ್ತಿ ನಿಂತೀತೇ?
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು...
In reply to ಉ: ಬೆನ್ನೆಲುಬಿಲ್ಲದ ಭಾರತ, ಜಗತ್ತಿನೆದುರು ತಲೆಯೆತ್ತಿ ನಿಂತೀತೇ? by Rupesh R
ಉ: ಬೆನ್ನೆಲುಬಿಲ್ಲದ ಭಾರತ, ಜಗತ್ತಿನೆದುರು ತಲೆಯೆತ್ತಿ ನಿಂತೀತೇ?
ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು...
ಉ: ಬೆನ್ನೆಲುಬಿಲ್ಲದ ಭಾರತ, ಜಗತ್ತಿನೆದುರು ತಲೆಯೆತ್ತಿ ನಿಂತೀತೇ?
ಉತ್ತಮ ಬರಹ, ಆದರೆ ಅದೇ ರೈತರೆ, ಯಾವುದೆ ರೈತ ಪರ ಕೆಲಸ ಮಾಡದ ನಾಯಕರನ್ನೆ ಆರಿಸಿ ಕಳಿಸುತ್ತಾರೆ, ಯಾಕೆ ಹೀಗೆ?