ನನ್ನಪ್ಪನ ಪಿಟೀಲು
ನಾನು ಈಗ ಹೇಳಲು ಹೊರಟಿರುವುದು ಸುಮಾರು 1925 ರಿಂದ 1960ರ ಆಸುಪಾಸಿನಲ್ಲಿ ನಡೆದ ವಿಚಾರಗಳು. ನನ್ನ ತಂದೆಯವರಾದ ಶ್ರೀ. ವಿ. ಶ್ರೀನಿವಾಸ ಐಯ್ಯಂಗಾರ್ಯರು 1906ರಲ್ಲಿ ಜನಿಸಿ 1994ರಲ್ಲಿ ಕಾಲವಾದರು. ಅವರ ಜೀವಿತಕಾಲದಲ್ಲಿ ನಡೆದ ಅನೇಕ ರೋಚಕ ಘಟನೆಗಳನ್ನು ನಿಮ್ಮ ಮುಂದೆ ಇಟ್ಟಿದ್ದೇನೆ. ಚಾಮರಾಜನಗರದ ಸಮೀಪದಲ್ಲಿರುವ ವೆಂಕಟೈಯ್ಯನಛತ್ರ ಎಂಬ ಕುಗ್ರಾಮದಲ್ಲಿ ಜನಿಸಿ, ತಮ್ಮ ಬಾಲ್ಯವನ್ನು ಗ್ರಾಮಕ್ಕೆ ಸಮೀಪದಲ್ಲಿದ್ದ ತಾಳವಾಡಿಯಲ್ಲಿ ಕಳೆದರು. ಮುಂದೆ ಓದು ಮುಗಿಸಿ ಶಾಲಾಮಾಸ್ತರರಾಗಿ ತಮ್ಮ ಜೀವನ ಪ್ರಾರಂಭ ಮಾಡಿದರು. ಅವರ ಮಾಸ್ತರಿಕೆಯ ಬಹುಪಾಲು ತಾಳವಾಡಿ ಫಿರ್ಕಾದಲ್ಲಿದ್ದ ಗ್ರಾಮೀಣ ಶಾಲೆಗಳಲ್ಲಿಯೇ ಕಳೆಯಿತು. ಗುಮ್ಮುಟಾಪುರ, ತಲೆಮಲೆ, ಚಿಕ್ಕಹಳ್ಳಿ, ಪಾಳ್ಯ ಮುಂತಾದ ಕುಗ್ರಾಮಗಳಲ್ಲಿನ ಶಾಲೆಗಳಲ್ಲಿ ಅವರು ಮಾಸ್ತರಿಕೆ ಮಾಡಿದರು. ಈ ಗ್ರಾಮಗಳೆಲ್ಲ ದಿಂಬಂ ಬೆಟ್ಟದ ತಪ್ಪಲಿನಲ್ಲಿ ಕಾಡಿನ ಅಂಚಿನಲ್ಲಿದ್ದ ಗ್ರಾಮಗಳು. ಆಗಿನ ಕಾಲದಲ್ಲಿ ಕಾಡುಗಳು ಬಹಳ ದಟ್ಟವಾಗಿ ಅನೇಕಾನೇಕ ಕಾಡುಪ್ರಾಣಿಗಳಿಂದ ತುಂಬಿದ್ದವು. ಈಗಿನಂತೆ ಕಾಡನ್ನೆಲ್ಲ ಕಡಿದು ಬಟಾಬಯಲು ಮಾಡಿ ಅರಣ್ಯ ಸಂಪತ್ತನ್ನೇ ನಾಶವಾಗಿಸಿರಲಿಲ್ಲ.
ನಮ್ಮತಂದೆಯವರದ್ದು ಚಿಕ್ಕಂದಿನಿಂದಲೇ ಬಹಳ ಸಾಹಸೀ ಪ್ರವೃತ್ತಿ. ಜತೆಗೆ ನಾಟಕ ಮತ್ತು ಸಂಗೀತದ ಬಗ್ಗೆ ಅಪಾರ ಖಯಾಲಿ ಹೊಂದಿದ್ದರು. ನಾಟಕ ಶಿರೋಮಣಿ ವರದಾಚಾರ್ಯರು, ಗುಬ್ಬಿ ಕಂಪನಿ, ನಟಭಯಂಕರ ಗಂಗಾಧರರಾಯರು, ರಾಚೂಟಪ್ಪ ನಾಟಕ ಕಂಪನಿ, ಕೊಟ್ಟೂರಪ್ಪ, ಎಸ್. ಜಿ. ಕಿಟ್ಟಪ್ಪ ಮುಂತಾದ ನಾಟಕ ಕಂಪನಿಗಳ ನಾಟಕಗಳನ್ನು ಎಲ್ಲಿದ್ದರೂ ತಪ್ಪದೆ ಹೋಗಿ ನೋಡುವ ಹವ್ಯಾಸ ಅವರಿಗಿತ್ತು. ತಾನೇ ಸ್ವಂತವಾಗಿ ಸಂಗೀತ ಕಲಿತು ಅನೇಕ ಸಂಗೀತ ವಾದ್ಯಗಳನ್ನು ನುಡಿಸುವ ಪರಿಣತಿಯನ್ನು ಹೊಂದಿದ್ದರು.
ನಾನು ನಮ್ಮ ಮನೆಯಲ್ಲಿ ನಮ್ಮ ತಂದೆಯವರು ನುಡಿಸುತ್ತಿದ್ದ ಬುಲ್ ಬುಲ್ ತರಂಗ ವಾದ್ಯ ಇದ್ದುದ್ದನ್ನು ನೋಡಿದ್ದೇನೆ. ಎಂದಾದರೂ ಬಿಡುವಿದ್ದಾಗ ಮನೆಯವರೊಂದಿಗೆ ಕುಳಿತು ಮಾತನಾಡುವಾಗ ತಾವು ತಮ್ಮ ಬಾಲ್ಯ ತಾರುಣ್ಯಗಳಲ್ಲಿ ನೋಡಿದ್ದ ನಾಟಕಗಳ, ಕೇಳಿದ್ದ ಸಂಗೀತ ಕಛೇರಿಗಳ ಅನುಭವಗಳನ್ನುಅವರು ನಮಗೆ ಹೇಳುತ್ತಿದ್ದದು ಈಗಲೂ ಸಹ ನನ್ನ ನೆನಪಿನಲ್ಲಿ ಅಚ್ಚಳಿಯದೇ ದಾಖಲಾಗಿದೆ. ಈಗಿನಂತೆ ರೇಡಿಯೋ, ಟಿ.ವಿ. ಮುಂತಾದ ದೃಶ್ಯ, ಶ್ರವ್ಯ ಮಾಧ್ಯಮಗಳು ಇಲ್ಲದ ಅಂದಿನ ದಿನಗಳಲ್ಲಿ ಮನೆಯಲ್ಲಿ ತಂದೆ, ತಾಯಂದರು ತಮ್ಮ ಮಕ್ಕಳೊಂದಿಗೆ ಆರಾಮವಾಗಿ ಕುಳಿತು, ತಿಂಡಿ ತಿನ್ನುವಾಗಲೋ, ಊಟಮಾಡುವಾಗಲೋ ತಮ್ಮ ಮನದಾಳದ ಮಾತುಗಳನ್ನು, ನೀತಿಕತೆಗಳನ್ನು, ಪುರಾಣ ಪುರುಷರುಗಳ ಧೀರ ಧೀಮಂತ ಚರಿತ್ರೆಯನ್ನು ಮಕ್ಕಳಿಗೆ ತಿಳಿ ಹೇಳುವ ಪರಿಪಾಠವಿತ್ತು. ಈಗಿನ ಅವಸರದ ಯುಗದಲ್ಲಿ ಈ ರೀತಿಯಾದ ವ್ಯವಧಾನ ಯಾರಿಗೆ ತಾನೇ ಇದೆ. ಮನೆಯಲ್ಲಿ ಅಪ್ಪನಾದವನು ಕಂಪ್ಯೂಟರಿನ ಮುಂದೆ ಕುಳಿತುತನ್ನ ಪಾಡಿಗೆ ತಾನು ಯಾವುದೋ ಅಂತರ್ಜಾಲ ತಾಣವನ್ನು ಜಾಲಾಡುತ್ತಿರುತ್ತಾನೆ. ಇರುವ ಒಂದೋ ಎರಡೋ ಮಕ್ಕಳು ಯಾವುದಾದರೂ ವಿಡಿಯೋ ಗೇಮಿನ ಗುಂಡಿ ಅದುಮುತ್ತಾ, ಅದರಿಂದ ಚಿತ್ರ ವಿಚಿತ್ರ ಶಬ್ದಗಳನ್ನು ಹೊರಡಿಸುತ್ತಿರುತ್ತವೆ. ಇನ್ನು ತಾಯಿಯಾದವಳು ಟಿ.ವಿ ಮುಂದೆ ಕುಳಿತು ಯಾವುದಾದರೂ ಮೆಗಾ ಸೀರಿಯಲ್ಲನ್ನು ನೋಡುತ್ತಿರುತ್ತಾಳೆ. ಮನೆಯಲ್ಲಿ ಪರಸ್ಪರ ಮಾನವಸಂಬಂಧವಾದ ವಾತ್ಸಲ್ಯ, ಕರುಣೆ, ಕೋಪ ಮುಂತಾದ ಗುಣಗಳ ವಿನಿಮಯವೇ ಮಾಯವಾಗಿದೆ. ಏನು ಮಾಡುವುದು ಕಾಲಾಯ ತಸ್ಮೈ ನಮಃ ಎಂದು ಸುಮ್ಮನಾಗಬೇಕು ಅಷ್ಟೆ.
ಆದರೆ 64 ವರ್ಷ ಮಯಸ್ಸಾಗಿರುವ ನನ್ನ ಬಾಲ್ಯ ಹೀಗಿರಲಿಲ್ಲ. ನಾಟಕ ಸಂಗೀತದ ಖಯಾಲಿ ಇದ್ದ ನನ್ನ ತಂದೆ ಮನೆಯಲ್ಲಿಯೇ ಒಂದು ಗ್ರಾಮಾಫೋನು ಇಟ್ಟುಕೊಂಡಿದ್ದರು. ವಿರಾಮದ ಸಮಯದಲ್ಲಿ ಆಗಿನ ಪ್ರಖ್ಯಾತ ಗಾಯಕರ ರೆಕಾರ್ಡುಗಳನ್ನು ಹಾಕಿ ಹಾಡುಗಳನ್ನು ಕೇಳುತ್ತಿದ್ದರು. ಮನೆಯವರಿಗೆಲ್ಲ ಅಂದಿನ ಹಾಡುಗಳ ಗಾನಮಾಧುರ್ಯವನ್ನು ಸವಿಯುವ ಸದವಕಾಶ ಲಭಿಸುತ್ತಿತ್ತು. ಹಾಡಿನ ಕಾರ್ಯಕ್ರಮ ಮುಗಿದ ಮೇಲೆ, ಆ ಹಾಡುಗಳು ಮತ್ತು ಅದನ್ನು ಹಾಡಿರುವ ಗಾಯಕರುಗಳ ಬಗ್ಗೆ ನಮೆಗೆಲ್ಲ ತಿಳಿಸಿ ಹೇಳುತ್ತಿದ್ದರು. ನಮ್ಮ ಊರಿಗೆ ವಿದ್ಯುಚ್ಛಕ್ತಿ ಸರಬರಾಜು ಪ್ರಾರಂಭವಾಗುವವರೆಗೂ ಈ ರೀತಿಯ ಪರಿಪಾಠ ಮುಂದುವರಿದಿತ್ತು. ವಿದ್ಯುಚ್ಛಕ್ತಿಯು ಬಂದ ನಂತರ ರೇಡಿಯೋ ಕೊಂಡು ಕೊಂಡು ಬಂದರು. ಅದರಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮಗಳಿಂದ ನಮಗೆಲ್ಲ ಸಂಗೀತದ ಪರಿಚಯ ಪ್ರಾರಂಭವಾಯಿತು.
ವೆಂಕಟೈಯ್ಯನಛತ್ರದಲ್ಲಿ ನಾನು ಪ್ರೈಮರಿ ಶಾಲೆಯಲ್ಲಿ ಓದುತ್ತಿದ್ದ ಸಮಯ. ಸುಮಾರು 1955 ರಿಂದ 1959ರ ಸಮಯ. ಆ ಹಳ್ಳಿಯಲ್ಲಿ ಸ್ಲೇಟು ಬಳಪ ಹಿಡಿದುಕೊಂಡು ಅತ್ಯಂತ ಉತ್ಸಾಹದಿಂದ ಶಾಲೆಗೆ ಓಡುತ್ತಿದ್ದ ಕಾಲವದು. ಒಂದುದಿನ ನಾನು ಶಾಲೆ ಮುಗಿದ ಮೇಲೆ ಸುಮಾರು ಸಂಜೆ 5ರ ಸಮಯಕ್ಕೆ ಎಂದಿನಂತೆ ಮನೆಗೆ ವಾಪಸ್ಸಾದೆ. ಮನೆ ಮುಂದಿನ ಜಗುಲಿಯ ಮೇಲೆ ನನ್ನ ತಂದೆಯ ಪಕ್ಕದಲ್ಲಿ ಒಬ್ಬ ತೇಜಸ್ವಿ ವ್ಯಕ್ತಿ ಕುಳಿತು ಮಾತನಾಡುತ್ತಿರುವುದನ್ನು ಕಂಡೆ. ಹೊಂಬಣ್ಣದ ಮೈಕಾಂತಿಯಿಂದ ಕಂಗೊಳಿಸುತ್ತಿದ್ದ ಆ ವ್ಯಕ್ತಿ, ಸಿಲ್ಕ್ ಜುಬ್ಬ, ಧೋತರ ಧರಿಸಿ, ತಲೆಗೆ ಸ್ವಾಮಿ ವಿವೇಕಾನಂದರಂತೆ ಮುಂಡಾಸು ಕಟ್ಟಿಕೊಂಡಿದ್ದರು. ದೊಡ್ಡವರು ಮಾತನಾಡುತ್ತಿರುವಾಗ ಮಧ್ಯ ಮಾತನಾಡುವುದಾಗಲೀ, ಅವರ ಮಧ್ಯ ತೂರಿಕೊಂಡು ಹೋಗುವುದಾಗಲೀ ಮಾಡಲು ಆಗೆಲ್ಲಾ ಅಪ್ಪಣೆ ಇರಲಿಲ್ಲ. ಆದರಿಂದ ನಾನು ಸ್ವಲ್ಪ ದೂರದಲ್ಲಿಯೇ ನಿಂತು ಕಣ್ಣು ಬಾಯಿ ಬಿಟ್ಟುಕೊಂಡು ನನ್ನ ತಂದೆ ಮತ್ತು ಆ ತೇಜಸ್ವಿ ವ್ಯಕ್ತಿ ಯನ್ನು ಬೆರಗಾಗಿ ನೋಡುತ್ತಾ ನಿಂತು ಕೊಂಡಿದ್ದೆ. ಸ್ವಲ್ಪ ಸಮಯದ ನಂತರ ಆ ವ್ಯಕ್ತಿ ನನ್ನ ತಂದೆಯವರಿಗೆ ಕೈ ಮುಗಿದು ಎದ್ದು ಹೊರಟುಬಿಟ್ಟರು. ನನ್ನ ತಂದೆ ಸಹ “ಸರಿಯಪ್ಪ, ತುಂಬಾ ಸಂತೋಷ, ದೇವರು ಒಳ್ಳೆಯದು ಮಾಡಲಿ, ಹೋಗಿ ಬಾ” ಎಂದು ಆ ವ್ಯಕ್ತಿಯನ್ನು ಸ್ವಲ್ಪ ದೂರ ಜತೆಯಲ್ಲಿ ನಡೆಯುತ್ತಾ ಬೀಳ್ಕೊಟ್ಟರು.ಅಷ್ಟು ಹೊತ್ತು ಅಲ್ಲಿ ಬಂದು ನನ್ನ ತಂದೆಯ ಜೊತೆಯಲ್ಲಿ ಮಾತನಾಡುತ್ತಿದ್ದ ಆ ವ್ಯಕ್ತಿ ಯಾರು, ಏಕೆ ಬಂದಿದ್ದರು ಎಂಬ ಕುತೂಹಲ ನನ್ನನ್ನು ಕಾಡತೊಡಗಿತು. ಆದರೆ ತಂದೆಯನ್ನು ಇದರ ಬಗ್ಗೆ ಪ್ರಶ್ನಿಸುವ ಧೈರ್ಯ ಆಗ ನನಗಿರಲಿಲ್ಲ. ಅವರಾಗಿಯೇ ಹೇಳಿದರೆ ಉಂಟು ಇಲ್ಲದ್ದಿದ್ದರೆ ಇಲ್ಲ. ನನ್ನ ಪುಣ್ಯಕ್ಕೆ ಸ್ವಲ್ಪ ಸಮಯದ ನಂತರ ಅಲ್ಲಿ ಗುಂಪು ಸೇರಿದ್ದ ಜನರನ್ನು ಕುರಿತು ನನ್ನ ತಂದೆಯೇ ಹೇಳಿದ್ದು ಇಂದಿಗೂ ಸಿನಿಮಾ ದೃಶ್ಯದಂತೆ ನನ್ನ ಕಣ್ಣಮುಂದೆ ಇದೆ. “ಏನ್ರೋ ಯಾರೂ ಅಂತ ತಿಳಕೊಂಡ್ರೋ ಈಗ ಬಂದಿದ್ದು! ಸಿನೆಮಾ ಹೀರೋ ನಮ್ಮ ರಾಜ್ ಕುಮಾರ್ ಕಣ್ರೋ! ನಮ್ಮ ಸಿಂಗಾನಲ್ಲೂರು ಪುಟ್ಟಸ್ವಾಮಿ ಮಗ. ದೊಡ್ಡ ಹೀರೋ, ಈಗ ತಾನೆ ಸ್ವಲ್ಪ ವರ್ಷದಿಂದ ಸಿನೆಮಾಗಳಲ್ಲಿ ಹೀರೋ ಪಾತ್ರ ಮಾಡ್ತಾ ಇದಾನೆ” ಅಂತ ಬಹಳ ಅಭಿಮಾನದಿಂದ ಹೇಳಿದರು. ಆಕಾಲಕ್ಕೆ ನಮ್ಮೂರಿನಲ್ಲಿ ಟೆಂಟು ಸಿನಿಮಾ ಮಂದಿರ ಸಹ ಇರಲಿಲ್ಲ. ಇನ್ನು ಸಿನಿಮಾ ಎಂದರೆ ಏನೂ ಎಂಬ ಕಲ್ಪನೆಯೂ ಇಲ್ಲದ ನಮಗೆ ಸಿನಿಮಾದ ಹೀರೊ ನಿಜವಾಗಿ ಅವರು ದೇವಮಾನವರೋ, ಗಂಧರ್ವರೋ ಎಂಬ ಸೋಜಿಗವೇ ವಿನಃ ಬೇರೇನೂ ಕಲ್ಪಿಸಿಕೊಳ್ಳಲು ಸಾದ್ಯವಿರಲಿಲ್ಲ.
ಆದರೆ ಕಾಲದ ಕಮಾಲ್ ನೋಡಿ, ಅಂದು ನಾನು ಕಂಡ ಆ ತೇಜಸ್ವಿ ರಾಜ್ ಕುಮಾರ್ ಎಂಬ ವ್ಯಕ್ತಿ ಕನ್ನಡ ಕುಲಕೋಟಿಯ ದೇವತಾ ಮನುಷ್ಯನೆನೆಸಿ, ಆರಾಧ್ಯ ದೈವವಾಗಿ, ಗಾನ ಗಂಧರ್ವನಾಗಿ, ಭೂಮಿಯಲ್ಲಿಯೇ ಹುಟ್ಟಿ ಬಾನನ್ನು ಮುಟ್ಟಿದ ಧೃವತಾರೆಯಾದದ್ದನ್ನು ನೆನಿಸಿಕೊಂಡರೆ ಮೈ ಜುಂ ಎನ್ನುತ್ತದೆ. ಇದು ನಾನು ಡಾ|| ರಾಜ್ ಕುಮಾರ್ ಅವರನ್ನು ಪ್ರಪ್ರಥಬಾರಿ ಕಂಡ ಬಗೆ. ಇನ್ನು ನನ್ನ ಅಪ್ಪನಿಗೂ ಡಾ|| ರಾಜ್ ಕುಮಾರ್ ರಿಗೂ ಯಾವ ರೀತಿಯ ನಂಟು ಇದ್ದಿತು ಎಂದು ನನಗೆ ಮನದಾಳದಲ್ಲಿ ಒಂದು ರೀತಿಯ ಕುತೂಹಲ ಇದ್ದೇ ಇತ್ತು. ಆ ಕುತೂಹಲಕ್ಕೆ ಉತ್ತರ ಸಿಗುವ ಸಮಯ ಸಹ ಬಂತು. ನಾಟಕ ಮತ್ತು ಸಂಗೀತದ ಖಯಾಲಿ ಇದ್ದ ನನ್ನ ತಂದೆ ತಾಳವಾಡಿಯ ಆಸುಪಾಸಿನ ಗ್ರಾಮಗಳಲ್ಲಿಯೇ ಶಾಲಾ ಮಾಸ್ತರಾಗಿದ್ದರು ಎಂದು ಹಿಂದೆಯೇ ತಿಳಿಸಿದ್ದೇನೆ. ತಾಳವಾಡಿಯ ಹತ್ತಿರದ ಗ್ರಾಮ ಗಾಜನೂರು. ಅಂದಿನ ಕಾಲದಲ್ಲಿ ನಾಟಕಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಗಾಜನೂರಿಗೆ ಬರುತ್ತಿದ್ದುದ್ದು ವಾಡಿಕೆ. ಅದು ಅವರ ಧರ್ಮಪತ್ನಿಯ ತವರೂರು. ನಾಟಕದ ಖಯಾಲಿಯ ನಮ್ಮ ತಂದೆಗೆ ಶ್ರೀ ಪುಟ್ಟಸ್ವಾಮಯ್ಯನವರು ಖಾಸಾ ದೋಸ್ತ್ ಆಗಿದ್ದರು. ನಾಟಕಗಳಿಂದ ಬಿಡುವು ದೊರೆತಾಗ ಪುಟ್ಟಸ್ವಾಮಯ್ಯನವರು ಗಾಜನೂರಿನಿಂದ ತಾಳವಾಡಿಗೆ ಬಂದು ನನ್ನ ಅಪ್ಪನ ಜೊತೆ ಹರಟೆ ಹೊಡೆಯುತ್ತಾ ಸ್ವಲ್ಪ ಸಮಯ ಕಳೆಯುವುದು ವಾಡಿಕೆ. ನಾಟದದಲ್ಲಿ ಹೊಸದಾಗಿ ಯಾವುದಾದರೂ ಹಾಡನ್ನು ಹಾಡಿದ್ದರೆ ಅದನ್ನು ಪುಟ್ಟಸ್ವಾಮಯ್ಯನವರು ನಮ್ಮ ತಂದೆಯವರ ಮುಂದೆ ಹಾಡಿ ತೋರಿಸುತ್ತಿದ್ದರಂತೆ. ಇಬ್ಬರೂ ಹೊಸತಾದ ಯಾವುದಾದರೂ ಹಾಡನ್ನು ಹಾಡುತ್ತಾ ಸಂತೋಷಿಸುತ್ತಿದ್ದರು. ನನ್ನ ತಂದೆಯವರು ಶ್ರೀಮಂತರಾಗಿರಲಿಲ್ಲ ಹಾಗೂ ಪುಟ್ಟಸ್ವಾಮಯ್ಯನವರೂ ಸಹ ಶ್ರೀಮಂತರಾಗಿರಲಿಲ್ಲ. ಇದ್ದುದರಲ್ಲಿಯೇ ಸಂತೃಪ್ತಿ ಪಟ್ಟುಕೊಳ್ಳುವ ಮನೋಭಾವದವರಾಗಿದ್ದರು. ಈ ಇಬ್ಬರೂ ಹಣದಲ್ಲಿ ಶ್ರೀಮಂತರಲ್ಲದಿದ್ದರೂ, ಗುಣ ಮತ್ತು ಕಲೆಯಲ್ಲಿ ಸಾಕಷ್ಟು ಶ್ರೀಮಂತಿಕೆ ಹೊಂದಿದ್ದರು.
ಒಮ್ಮೆ ಹೀಗೇ ಪುಟ್ಟಸ್ವಾಮಯ್ಯನವರು ನಮ್ಮ ತಂದೆಯನ್ನು ನೋಡಲು ತಾಳವಾಡಿಗೆ ಬಂದಿದ್ದಾಗ ತಮ್ಮ ಜೊತೆಯಲ್ಲಿ ರಾಜ್ ಕುಮಾರ್ ರವರನ್ನು ಕರೆತಂದಿದ್ದರಂತೆ. ಆಗ ರಾಜ್ ಕುಮಾರ್ ರವರಿಗೆ ಸುಮಾರು ಏಳು ವರ್ಷದ ಪ್ರಾಯ. ಬಾಲಕ ರಾಜ್ ಕುಮಾರ್ ರನ್ನು ಕಂಡ ನನ್ನ ತಂದೆ "ಏನು ಪುಟ್ಟಸ್ವಾಮಿ ಹುಡುಗನಿಗೆ ಹೊಸ ಹಾಡೇನಾದರು ಹೇಳಿಕೊಟ್ಟಿದ್ದೀಯಾ?" ಎಂದು ಕೇಳಿದರಂತೆ. ಭಕ್ತ ಪ್ರಹ್ಲಾದ ನಾಟದಲ್ಲಿ ಬಾಲಕ ಪ್ರಹ್ಲಾದ ನಿದ್ರಿಸುತ್ತಿರುವಾಗ ಅವನ ರೂಪ ಅಂದ ಚೆಂದವನ್ನು ಕಂಡು ಅವನ ತಾಯಿ ಕಯಾದು ತನ್ಮಯಳಾಗಿ ಹಾಡುವ "ಇವನಾರೀ, ಸುಕುಮಾರ ಸುಮನೋಹರ " ಎಂಬ ಹಾಡನ್ನು ಬಹಳ ಚೆನ್ನಾಗಿ ಹಾಡ್ತಾನೆ ಕೇಳಿ ಎಂದು ರಾಜ್ ಕುಮಾರವರನ್ನು ಹಾಡಲು ಹೇಳಿದರಂತೆ. ಏಳು ವರುಷದ ಬಾಲಕ ರಾಜ್ ಕುಮಾರ್ ಆ ಹಾಡನ್ನು ಅತ್ಯಂತ ಶಾಸ್ತ್ರೋಕ್ತವಾಗಿ ಅನೇಕ ಸಂಗತಿಗಳ ಸಮೇತ ಹಾಡಿದರಂತೆ. ಇದನ್ನು ಕೇಳಿದ ನನ್ನ ತಂದೆ ಮತ್ತು ನನ್ನ ತಾಯಿ ಈ ಹಾಡನ್ನು ಅನೇಕ ಬಾರಿ ನೆನೆಪಿಸಿಕೊಂಡು ರಾಜ್ ಕುಮಾರ್ ರವರ ಪ್ರತಿಭೆಯನ್ನು ನಮ್ಮಗಳ ಮುಂದೆ ಕೊಂಡಾಡಿದ್ದು ಈಗಲೂ ನೆನೆಪಿದೆ. ನನ್ನ ತಾಯಿ ಚಿಕ್ಕಂದಿನಲ್ಲಿಯೇ ಶಾಸ್ತ್ರೋಕ್ತವಾಗಿ ಸಂಗೀತ ಕಲಿತಿದ್ದರು. ಅವರಂತೂ "ಇವನಾರೀ, ಸುಕುಮಾರ ಸುಮನೋಹರ " ಎಂಬ ಈ ಹಾಡನ್ನು ಬಾಲಕ ರಾಜ್ ಕುಮಾರ್ ಹಾಡಿದ ರೀತಿಯನ್ನು ಅನೇಕ ಬಾರಿ ಹೊಗಳಿ ಕೊಂಡಾಡಿ ನಮಗೆಲ್ಲಾ ತಾವೇ ಆ ಹಾಡನ್ನು ಹಾಡಿ ಕೇಳಿಸಿದ್ದು, ಈಗಲೂ ನನ್ನ ಕಿವಿಯಲ್ಲಿ ಮಾರ್ದನಿಸುತ್ತಿದ್ದೆ.
ನಾಟಕಗಳು ಇಲ್ಲದ್ದಿದ್ದಾಗ ಶ್ರೀ ಪುಟ್ಟಸ್ವಾಮಯ್ಯನವರು ಗಾಜನೂರಿನಲ್ಲಿ ಸ್ವಲ್ಪ ಸಮಯ ಕಳೆಯುತ್ತಿದ್ದರು. ಆ ಸಮಯದಲ್ಲಿ ಎಂದಾದರೂ ಒಂದುದಿನ ನಮ್ಮ ತಂದೆ ಊರಿನ ಚಾವಡಿಯಲ್ಲಿ ಸಂಜೆ ಪುಟ್ಟಸ್ವಾಮಯ್ಯನವರ ಹಾಡುಗಾರಿಕೆಯನ್ನು ಏರ್ಪಾಡು ಮಾಡುತ್ತಿದ್ದರು. ತಮ್ಮ ಶಾಲೆಯ ಹುಡುಗರ ಮೂಲಕ ಈ ಕಾರ್ಯಕ್ರಮಕ್ಕೆ ಸುತ್ತ ಮುತ್ತಲಿನ ಊರುಗಳಲ್ಲೆಲ್ಲಾ ಪ್ರಚಾರಮಾಡುವಂತೆ ತಾಕೀತು ಮಾಡುತ್ತಿದ್ದರು. ಸಂಜೆ ಎಲ್ಲರೂ ಬಂದು ಸೇರಿದ ಮೇಲೆ ಶ್ರೀ ಪುಟ್ಟಸ್ವಾಮಯ್ಯನವರು ಹಾರ್ಮೋನಿಯಂ ನುಡಿಸುತ್ತಾ ತಮ್ಮ ಕಂಚಿನ ಕಂಠದಿಂದ ಹಾಡುತ್ತಿದ್ದರು. ಕಾರ್ಯಕ್ರಮ ಮುಗಿದ ಮೇಲೆ ನೆರಿದಿದ್ದ ಎಲ್ಲರೂ ತಮ್ಮ ಕೈಲಾದ ದವಸ ಧಾನ್ಯಗಳನ್ನು ಮತ್ತೆ ಕೆಲವರು ಸ್ವಲ್ಪ ಮಟ್ಟಿಗೆ ಹಣವನ್ನೂ ಕಾಣಿಕೆಯ ರೂಪದಲ್ಲಿ ಕೊಡುತ್ತಿದ್ದರಂತೆ. ಅದೆನ್ನೆಲ್ಲಾ ಜಾಗ್ರತೆಯಿಂದ ಸಂಗ್ರಹಿಸಿ, ಅದು ಪುಟ್ಟಸ್ವಾಮಯ್ಯನವರಿಗೆ ಸರಿಯಾಗಿ ತಲುಪುವಂತೆ ಎಚ್ಚರ ವಹಿಸುತ್ತಿದ್ದರು ನನ್ನ ತಂದೆ. ಹೀಗೆ ಸಾಗಿತ್ತು ಅವರ ಅಂದಿನ ಸ್ನೇಹಮಯ ಜೀವನ. ಈ ಎಲ್ಲ ಸಂಭವಗಳೂ ಡಾ| ರಾಜ್ ಕುಮಾರ್ ರವರಿಗೆ ತಮ್ಮ ಬಾಲ್ಯದಿಂದಲೇ ಅರಿವಿಗೆ ಬಂದಿತ್ತು. ಆದ್ದರಿಂದಲೇ ನನ್ನ ತಂದೆಯವರ ಬಗ್ಗೆ ಅವರಿಗೆ ಅಪಾರವಾದ ಗೌರವ, ಆದರಗಳು ಇದ್ದವು.
1960ರ ಸುಮಾರಿನಲ್ಲಿ ನಮ್ಮ ತಂದೆ ಯಾವುದೋ ಕೆಲಸದ ನಿಮಿತ್ತ ಹೊಸಪೇಟೆಗೆ ಹೋಗಿದ್ದರು. ಅಲ್ಲಿ ರಾಜ್ ಕುಮಾರ್ ರವರು ನಟಿಸುತ್ತಿದ್ದ ನಾಟಕದ ಪೋಸ್ಟರ್ ಗಳನ್ನು ಕಂಡರು. ಸಂಜೆ ಆ ನಾಟಕ ಮಂದಿರದ ಹತ್ತಿರ ಹೋಗಿ ಅಲ್ಲಿ ಗೇಟಿನ ಬಳಿ ಇದ್ದ ಒಬ್ಬ ನೌಕರನ ಬಳಿ "ತಾಳವಾಡಿ ಅಯ್ಯಂಗಾರ್ ಮೇಷ್ಟ್ರು" ಎಂದು ಒಂದು ಚೀಟಿಯಲ್ಲಿ ಬರೆದು ಅದನ್ನು ಒಳಗೆ ರಾಜ್ ಕುಮಾರ್ ರವರಿಗೆ ಕೊಡುವಂತೆ ಹೇಳಿದರು. ಚೀಟಿ ತಲುಪಿದ್ದೇ ತಡ, ರಾಜ್ ಕುಮಾರ್ ರವರು ತಾನು ಅರ್ಧ ಮೇಕಪ್ಪು ಹಾಕಿಕೊಳ್ಳುತ್ತಿರುವಾಗಲೇ ಹೊರಗೆ ಎದ್ದು ಬಂದು ನನ್ನ ಅಪ್ಪನ್ನನ್ನು ಆದರದಿಂದ ಬರಮಾಡಿಕೊಂಡು ನಾಟಕ ಮಂದಿರದಲ್ಲಿ ಮುಂದಿನ ಸೀಟಿನಲ್ಲಿ ಕೂಡಿಸಿ "ತಾವು ನಾಟಕ ನೋಡುತ್ತಿರಿ, ನಾಟಕ ಮುಗಿದ ಮೇಲೆ ನಾನೇ ಸ್ವತಃ ಬಂದು ಕಾಣುತ್ತೇನೆ" ಎಂದು ಹೇಳಿದರು. ನಾಟಕ ಮುಗಿದಮೇಲೆ ನನ್ನ ತಂದೆಯನ್ನು ಬಹಳವಾಗಿ ಆದರಿಸಿ, ಮೂರು ದಿನಗಳ ಕಾಲ ತನ್ನ ಆತಿಥ್ಯದಲ್ಲೇ ಇರುವಂತೆ ಬಲವಂತದಿಂದ ಉಳಿಸಿಕೊಂಡು ಅನೇಕ ರೀತಿಯಲ್ಲಿ ನನ್ನ ತಂದೆಗೆ ಉಪಚಾರ ಮಾಡಿದ್ದನ್ನು ಆಗಾಗಾ ನೆನೆಸಿಕೊಂಡು ನಮಗೆ ಹೇಳಿ ಹೇಳಿ ಸಂತೋಷಪಡುತ್ತಿದ್ದರು.
ಡಾ| ರಾಜ್ ಕುಮಾರ್ ರವರ ಬಗ್ಗೆ ಕೇಳಿ ತಿಳಿದುಕೊಂಡ ಮತ್ತೆರೆಡು ಘಟನೆಗಳು ನನ್ನ ನೆನೆಪಿಗೆ ಬರುತ್ತವೆ. ನಾನು ಬೆಳೆದು ದೊಡ್ಡವನಾಗಿ ಬೆಂಗಳೂರಿನಲ್ಲೋ, ಮೈಸೂರಿನಲ್ಲೋ ಕೆಲಸದಲ್ಲಿದ್ದಾಗಲೂ ಸಹ ನಮ್ಮ ತಂದೆಯವರು ಊರಿನಲ್ಲಿ ಅಂದರೆ ವೆಂಕಟೈಯ್ಯನಛತ್ರದಲ್ಲಿಯೇ ನಮ್ಮ ಪೂರ್ವಿಕರ ಹಳೆಯ ಮನೆಯಲ್ಲಿ ಇರುತ್ತಿದ್ದರು. ಆ ಊರಿಗೆ ಕೆಲವೇ ಕಿ.ಮೀ. ದೂರದಲ್ಲಿರುವ ಚಿಕ್ಕಹಳ್ಳಿ ಮತ್ತು ಗಾಜನೂರಿನ ಸುತ್ತ ಮುತ್ತಾ ಡಾ| ರಾಜ್ ಕುಮಾರ್ ರವರು "ಸಂಪತ್ತಿಗೆ ಸವಾಲ್" ಎಂಬ ಚಿತ್ರಕ್ಕಾಗಿ ಚಿತ್ರೀಕರಣ ನಡೆಸಲು ಅಲ್ಲಿಯೇ ಕ್ಯಾಂಪ್ ಮಾಡಿದ್ದರು. ಹೀಗೆ ಡಾ| ರಾಜ್ ಕುಮಾರ್ ರವರು ತಮ್ಮ ಊರಿನ ಹತ್ತಿರದಲ್ಲಿಯೇ ಷೂಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ನಮ್ಮ ಊರಿನಲ್ಲೆಲ್ಲಾ ಹಬ್ಬಿ ಬಿಟ್ಟಿತ್ತು. ಆ ಊರಿನ ಹುಡುಗರೆಲ್ಲಾ ಸೇರಿಕೊಂಡು ನನ್ನ ತಂದೆಯವರ ಹತ್ತಿರ ಬಂದು "ನಿಮಗೆ ಡಾ| ರಾಜ್ ರವರು ಪರಿಚಿತರು, ಈಗ ಅವರು ನಮ್ಮ ಊರಿನ ಹತ್ತಿರದಲ್ಲಿಯೇ ಷೂಟಿಂಗ್ ಮಾಡುತ್ತಾ ಇದ್ದಾರೆ. ನೀವು ಜತೆಯಲ್ಲಿ ಬಂದರೆ ನಮಗೆ ಸಲೀಸಾಗಿ ಅವರನ್ನು ಹತ್ತಿರದಿಂದ ಕಾಣಬಹುದಾಗಿದೆ. ದಯಮಾಡಿ ಬನ್ನಿ" ಎಂದು ಬಲವಂತ ಮಾಡಲು ಶುರು ಮಾಡಿದರು. ಆಗ ನನ್ನ ತಂದೆ "ಕನ್ನಡದ ಸಿನಿಮಾದ ಅಷ್ಟು ದೊಡ್ಡ ಹೀರೋ ರಾಜ್ ಕುಮಾರ್, ಸುಮ್ಮನೇ ಬರಿ ಕೈಲಿ ಹೋಗುವುದು ಮರ್ಯಾದೆಯಲ್ಲ. ಹೂವು, ಹಣ್ಣು, ದೊಡ್ಡ ಹಾರ, ತುರಾಯಿ, ಎಲ್ಲ ತೆಗೆದುಕೊಂಡು ಬಂದರೆ ನಾನು ನಿಮ್ಮೊಂದಿಗೆ ಬರುತ್ತೇನೆ” ಎಂದು ಶರತ್ತು ಹಾಕಿದರು. ಡಾ| ರಾಜ್ ರವರನ್ನು ಕಾಣಲು ತುದಿಗಾಲಲ್ಲಿ ನಿಂತಿದ್ದ ಆ ಯುವ ಪಡೆಗೆ ಇದೆಲ್ಲಾ ಏನು ಮಹಾ ಕೆಲಸ. ಕೆಲವೇ ಗಂಟೆಗಳಲ್ಲಿ ಹತ್ತಿರದ ಚಾಮರಾಜನಗರದಿಂದ ಎಲ್ಲವನ್ನೂ ಹೊಂದಿಸಿಕೊಂಡು ಬಂದೇ ಬಿಟ್ಟರು. ಸರಿ, ಕಮಾನು ಬಂಡಿ ಹೂಡಿಕೊಂಡು, ನನ್ನ ತಂದೆಯವರ ಜೊತೆಗೆ ಹುಡುಗರ ಹಿಂಡು ಡಾ| ರಾಜ್ ರವರನ್ನು ಕಾಣಲು ಹೊರಟಿತು. ಷೂಟಿಂಗ್ ನಡೆಯುತ್ತಿದ್ದ ಸ್ಥಳವನ್ನು ತಲುಪಿದ್ದಾಯಿತು. ಡಾ| ರಾಜ್ ರವರು ನನ್ನ ತಂದೆಯವರನ್ನು ಕಂಡಕೂಡಲೇ ಆದರದಿಂದ ಬರಮಾಡಿಕೊಂಡು ಚಿತ್ರತಂಡದ ಎಲ್ಲರಿಗೂ ಪರಿಚಯ ಮಾಡಿಸಿ, ಕುಡಿಯಲು ಹಾಲು ಕೊಟ್ಟು ಸತ್ಕರಿಸಿದರಂತೆ. ನನ್ನ ತಂದೆ ತನ್ನೊಂದಿಗೆ ಬಂದಿದ್ದ ಹುಡುಗರ ಬಯಕೆಯನ್ನು ಡಾ| ರಾಜ್ ರವರಿಗೆ ತಿಳಿಸಿದಾಗ ಅದಕ್ಕೇನಂತೆ ಎಂದು ಆ ಹುಡುಗರು ಹಾಕಿದ ಹಾರವನ್ನು ಸ್ವೀಕರಿಸಿ ಅವರೊಟ್ಟಿಗೆ ಫೊಟೋ ತೆಗೆಸಿಕೊಂಡರು. ನಮ್ಮ ಊರಿನ ಪಡ್ಡೆ ಹುಡುಗರಿಗೆ ಇದಕ್ಕಿಂತಲೂ ಬೇರೇನು ಬೇಕಿತ್ತು. ಡಾ| ರಾಜ್ ರವರೊಂದಿಗೆ ಫೋಟೋ ತೆಗೆಸಿಕೊಳ್ಳುವುದೆಂದರೆ ಸಾಮಾನ್ಯದ ವಿಷಯವೇ. ಅಂದು ತೆಗೆದ ಫೋಟೋ ಇಂದು ಯಾರ್ಯಾರ ಮನೆಯಲ್ಲಿದೆಯೋ ನಾಕಾಣೆ. ಡಾ| ರಾಜ್ ರವರ ಫೋಟೋ ಇಲ್ಲದ ಕನ್ನಡಿಗರ ಮನೆಯಾದರೂ ಎಲ್ಲಿದೆ?
ಮತ್ತೊಂದು ಸಂಭವ ನನ್ನ ತಂದೆ ಮತ್ತು ಶ್ರೀ ಪುಟ್ಟಸ್ವಾಮಯ್ಯನವರ ಬಾಳಿನಲ್ಲಿ ನಡೆದದ್ದು. ಇದು ನಾನು ನನ್ನ ತಂದೆಯವರಿಂದ ಕೇಳಿ ತಿಳಿದ ವಿಷಯ. ಈ ಘಟನೆ ನಡೆದಾಗ ನಾನಿನ್ನೂ ಹುಟ್ಟಿರಲಿಲ್ಲ.
ಚಿಕ್ಕಹಳ್ಳಿಯೆಂಬ ಒಂದು ಗ್ರಾಮ ತಾಳವಾಡಿ ಫಿರ್ಕಾದಲ್ಲಿದೆ. ಆ ಕಾಲಕ್ಕೆ ದುರ್ಗಮವಾದ ಕಾಡಿನಂಚಿನಲ್ಲಿತ್ತು. ಈಗ ಆ ಊರು ಬಟಾಬಯಲು ಪ್ರದೇಶದಲ್ಲಿದೆ. ಈ ಚಿಕ್ಕಹಳ್ಳಿಯಲ್ಲಿ ಒಂದು ಶಾಲೆ. ಅಲ್ಲಿಗೆ ನನ್ನ ತಂದೆಗೆ ವರ್ಗವಾಯಿತು, ಸರಿ, ಸಂಸಾರ ಹೂಡಿ ಕೆಲಸಕ್ಕೆ ಹಾಜರಾದರು ನನ್ನ ಅಪ್ಪ. ಆ ಊರಿನಲ್ಲಿ ನನ್ನ ಅಪ್ಪನೇ VIP. ಅಲ್ಲಿಗೆ ಬರುತ್ತಿದ್ದ ಮತ್ತೊಬ್ಬ VIP ಅಂದರೆ ಆ ಭಾಗದ ಅರಣ್ಯಾಧಿಕಾರಿ, ಇಂಗ್ಲೀಷ್ನಲ್ಲಿ ರೇಂಜರ್ ಎಂದು ಕರೆಯುತ್ತಾರೆ. ಇವರಿಬ್ಬರಿಗೂ ಬಹಳ ಸ್ನೇಹ. ರಜದ ದಿನಗಳಲ್ಲಿ ಆ ರೇಂಜರ್ ಜೊತೆ ಕಾಡು ಮೇಡು ಗಳನ್ನು ಸುತ್ತಲು ನಮ್ಮ ಅಪ್ಪನೇ ಅವರಿಗೆ ಜೊತೆಗಾರ. ನಿರ್ಜನವಾದ ಆ ಪ್ರದೇಶದಲ್ಲಿ ಅಂದಿನ ದಿನಗಳಲ್ಲಿ ಸಮಯ ಕಳೆಯುವುದಾದರೂ ಹೇಗೆ? ಈ ರೇಂಜರ್ ಬಿಟ್ಟರೆ ನನ್ನ ಅಪ್ಪನನ್ನು ಯಾವಾಗಲಾದರೂ ಒಮ್ಮೆ ಕಾಣಲು ಬರುತ್ತಿದ್ದ ಮತ್ತೊಬ್ಬ VIP ಎಂದರೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು. ಆ ಊರಿನಲ್ಲಿ ತಮ್ಮ ಕೆಲಸ ಮುಗಿದಮೇಲೆ ಕಾಲ ಕಳೆಯಲು ನನ್ನ ಅಪ್ಪ ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ಬಿಡುವಾಗಿರುವ ವೇಳೆಯಲ್ಲಿ ವಾದ್ಯಗಳ ಜೊತೆಯಲ್ಲಿಯೇ ಕಾಲ ಕಳೆಯುತ್ತಿದ್ದರು. ಆಗ ನನ್ನ ಅಪ್ಪನಿಗೆ ಬರುತ್ತಿದ್ದ ಮಾಸಿಕ ಸಂಬಳ ಎಷ್ಟು ಗೊತ್ತೆ? ಬರೋಬ್ಬರಿ ರೂಪಾಯಿ ನಾಲ್ಕು ಮತ್ತು ಆಣೆ ಎಂಟು. ಇಷ್ಟು ಸಂಬಳ ಆ ದಿನಗಳಲ್ಲಿ ಸಂಸಾರ ನಿರ್ವಹಿಸಲು ಸಾಕಾಗುತ್ತಿತ್ತು ಎಂದು ನನ್ನ ತಂದೆ ಹೇಳುತ್ತಿದ್ದರು. ಅದು ಹೇಗೆ ಸಾಕಾಗುತ್ತಿತ್ತು ಮತ್ತು ಅಂದಿನ ದಿನಸಿ ಧಾರಣೆಗಳು ಹೇಗಿದ್ದವು ಮುಂತಾದ ವಿವರಗಳು ಈಗ ಇಲ್ಲಿ ಅಪ್ರಸ್ತುತ.
ಈ ರೂಪಾಯಿ ನಾಲ್ಕು ಮತ್ತು ಆಣೆ ಎಂಟು ಮೊತ್ತಕ್ಕೂ ಮತ್ತು ನಾನು ನನ್ನ ತಂದೆಯಿಂದ ಕೇಳಿದ್ದ ಒಂದು ಸಂಭವಕ್ಕೂ ಸಂಭಂದವಿರುವುದರಿಂದಲೇ ನನಗೆ ಈ ಸಂಖ್ಯೆ ಮರೆಯದೆ ಇದೆ.
ತಾನು ನುಡಿಸಿವುದಕ್ಕೋಸ್ಕರ ಢಾಕ್ಕಾ ಪಟ್ಟಣದಿಂದ (ಇಂದಿನ ಬಾಂಗ್ಲಾದೇಶದ ರಾಜಧಾನಿ) VPPಯಲ್ಲಿ ಒಂದು Stradivarius ಪಿಟೀಲನ್ನು ದೂರದ ದುರ್ಗಮ ಊರಾದ ಚಿಕ್ಕಹಳ್ಳಿಗೆ ತರಿಸಿಕೊಂಡಿದ್ದರಂತೆ ನನ್ನ ಅಪ್ಪ! ಆ Stradivarius ಪಿಟೀಲಿನ ಬೆಲೆ ರೂಪಾಯಿ ನಾಲ್ಕು, ತನಗೆ ಬರುತ್ತಿದ್ದ ನಾಲ್ಕೂವರೆ ರೂಪಾಯಿ ಸಂಬಳದಲ್ಲಿ ಇಡೀ ನಾಲ್ಕು ರೊಪಾಯಿಯನ್ನು ಒಂದು ಪಿಟೀಲಿಗೋಸ್ಕರ ಖರ್ಚು ಮಾಡಿದ ದಿಲ್ದಾರ್ ಮನುಷ್ಯ ನನ್ನ ಅಪ್ಪ. ಹೇಗಿತ್ತು ನೋಡಿ ಅವರ ಸಂಗೀತದ ಹುಚ್ಚು. ಈ ಪಿಟೀಲನ್ನು ತಾನು ಆ ಹಳ್ಳಿಯಲ್ಲಿ ಮಾಸ್ತರಾಗಿರುವ ತನಕ ನುಡಿಸುತ್ತಿದ್ದರು. ಅಲ್ಲಿಂದ ವರ್ಗವಾದ ಮೇಲೆ ಈ ರೀತಿ ಪಿಟೀಲನ್ನು ನುಡಿಸಲು ಸಮಯ ಇರಲಿಲ್ಲ. ಇದೇ ಸಮಯದಲ್ಲಿ ತನ್ನನ್ನು ಕಾಣಲು ಬಂದಿದ್ದ ಪುಟ್ಟಸ್ವಾಮಯ್ಯನವರಿಗೆ ತನ್ನಲ್ಲಿದ್ದ ಪಿಟೀಲನ್ನು ನೆನೆಪಿನ ಕಾಣಿಕೆಯಾಗಿ ಕೊಟ್ಟುಬಿಟ್ಟರಂತೆ. ನಾಟಕಗಳಲ್ಲಿ ಅಭಿನಯಿಸುತ್ತಾ, ಹುಟ್ಟಾ ಕಲಾವಿದರಾಗಿದ್ದ ಪುಟ್ಟಸ್ವಾಮಯ್ಯನವರಿಗೆ ಈ ಪಿಟೀಲು ಹೆಚ್ಚು ಪ್ರಯೋಜನಕಾರಿ ಎಂದು ತಿಳಿದು ನನ್ನ ಅಪ್ಪ ಈ ನಿರ್ಧಾರಕ್ಕೆ ಬಂದಿರಬೇಕು. ಈ ವಿಚಾರವನ್ನು ನನ್ನ ತಂದೆ ನನಗೆ ಹೇಳಿದ್ದು ನನ್ನ ನೆನಪಿನಲ್ಲಿದೆ.
ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಪಾತ್ರಗಳ ಮತ್ತು ಅವರ ವ್ಯಕ್ತಿತ್ವ ಮುಂತಾದವುಗಳ ಬಗ್ಗೆ ನನ್ನ ತಂದೆಯವರು ಹೇಳಿದ್ದ ಕೆಲವು ಸ್ವಾರಸ್ಯಕರವಾದ ಸಂಗತಿಗಳು ನನ್ನ ನೆನಪಿನಲ್ಲಿ ಈಗಲೂ ಉಳಿದಿವೆ. ಅವುಗಳಲ್ಲಿ ಕೆಲವನ್ನು ಹೆಕ್ಕಿ ತೆಗೆದು ಇಲ್ಲಿ ದಾಖಲು ಮಾಡಿದ್ದೇನೆ.
ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರದ್ದು ಭರ್ಜರಿ ಪರ್ಸನಾಲಿಟಿ. ಅವರು ಒಳ್ಳೆ ಧಡೂತಿಯಾದ ಧೃಡಕಾಯದವರಾಗಿದ್ದರು. ಭಾರೀ ಗಿರಿಜಾ ಮೀಸೆ ಬಿಟ್ಟು, ತಲೆಗೂದಲನ್ನು ಉದ್ದಕ್ಕೆ ಬೆಳೆಸಿ ಹಿಂದಕ್ಕೆ ಬಾಚಿ ಬಿಟ್ಟುಕೊಳ್ಳುತ್ತಿದ್ದರು. ಬೀದಿಯಲ್ಲಿ ಅವರು ನಡೆದು ಬರುತ್ತಿದ್ದರೆ, ಅವರನ್ನು ನೋಡಿದವರು ಯಾರೇ ಆಗಲಿ ನಿಂತು, ಮತ್ತೊಮ್ಮೆ ಅವರನ್ನು ನೋಡುವಂಥ ಠೀವಿ ಪುಟ್ಟಸ್ವಾಮಯ್ಯನವರದ್ದು.
ಅಂದಿನ ಕಾಲದ ನಾಟಕಗಳಲ್ಲಿ ಹೆಚ್ಚಿನವು ಪೌರಾಣಿಕ ನಾಟಕಗಳೇ. ಕಂಸವಧೆ, ಕುರುಕ್ಷೇತ್ರ, ಹಿರಣ್ಯಕಶಿಪು ಹೀಗೆ ಹಲವಾರು ಪುರಾಣ ಕಥೆಗಳನ್ನು ಆಧರಿಸಿದ ನಾಟಕಗಳನ್ನೇ ಹೆಚ್ಚಾಗಿ ಆಡುತ್ತಿದ್ದರು. ಇಂಥ ನಾಟಕಗಳಲ್ಲಿನ ಪ್ರಮುಖ ರಾಕ್ಷಸ ಪಾತ್ರಗಳು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಪಾಲಿಗೆ ಬರುತ್ತಿದ್ದವು. ಅಂಥ ರಾಕ್ಷಸ ಪಾತ್ರಗಳು ಇವರಿಗೆ ಹೇಳಿ ಮಾಡಿಸಿದಂತೆ ಒಪ್ಪುತ್ತಿದ್ದುವು. ರುದ್ರ, ಭೀಕರ ರಸವನ್ನು ಹೊರಹೊಮ್ಮಿಸುವ ಪಾತ್ರಗಳಿಗೆ ಅವರ ದೇಹರಚನೆ ಮತ್ತು ಕಂಠಸಿರಿ ಅತ್ಯಂತ ಸೂಕ್ತವಾಗಿತ್ತು. ಅದೂ ಅಲ್ಲದೆ ರಾಕ್ಷಸ ರಾಜನ ಪಾತ್ರವನ್ನು ಯಾರಾದರೂ ಪೀಚು ಮೈಯಿನ, ನರಪೇತಲು ನಾರಾಯಣನಂತೆ ಇರುವವರಿಂದ ಮಾಡಿಸಲು ಸಾಧ್ಯವೆ?
ಆ ಕಾಲಕ್ಕೆ ನಾಟಕ ಕಂಪನಿಗಳು ಕೆಲವು ಪ್ರಮುಖ ಕೇಂದ್ರಗಳಲ್ಲಿ ಮೊಕ್ಕಾಂ ಮಾಡಿ ಒಂದೆರೆಡು ತಿಂಗಳುಗಳ ಕಾಲ ಆ ಮೊಕ್ಕಾಂನಲ್ಲಿ ನಾಟಕಗಳನ್ನು ಆಡಿ ಮುಂದಿನ ಮೊಕ್ಕಾಂಗೆ ತೆರಳುವುದು ವಾಡಿಕೆಯಾಗಿತ್ತು. ನನ್ನ ತಂದೆಯು ಕೆಲಸ ಮಾಡುತ್ತಿದ್ದ ತಾಳವಾಡಿಗೆ ಹತ್ತಿರದ ಮೊಕ್ಕಾಂ ಎಂದರೆ ನಂಜನಗೂಡು, ಮೈಸೂರು ಮುಂತಾದ ದೂರದ ಊರುಗಳು ಮಾತ್ರ. ಈ ಊರುಗಳಿಗೆ ಹೋಗಲು ಇಂದಿನಂತೆ ಸಂಚಾರ, ಸಾರಿಗೆ ಸೌಕರ್ಯಗಳು ಅವರ ಕಾಲಕ್ಕೆ ಇರಲಿಲ್ಲ. ಆ ಊರುಗಳಲ್ಲಿ ನಾಟಕಗಳು ಆಡುತ್ತಿದ್ದರೆ, ತಾಳವಾಡಿಯಿಂದ ಸೈಕಲ್ಲನ್ನು ತುಳಿದುಕೊಂಡು ಹೋಗಿ, ರಾತ್ರಿ ನಾಟಕ ನೋಡಿ, ಮರುದಿನ ಮತ್ತೆ ಸೈಕಲ್ಲಿನಲ್ಲಿಯೇ ಹಿಂದಿರುಗುತ್ತಿದ್ದರಂತೆ. ಅವರಿಗೆ ನಾಟಕಗಳೆಂದರೆ ಅಷ್ಟು ಸೆಳೆತ ಇತ್ತು. ಇನ್ನು ತನ್ನ ಗೆಳೆಯ ಪುಟ್ಟಸ್ವಾಮಯ್ಯನವರು ಅಭಿನಯಿಸುತ್ತಿದ್ದ ನಾಟಕಗಳು ಏನಾದರೂ ಈ ಊರುಗಳಿಗೆ ಬಂದರೆ ನನ್ನ ತಂದೆ ಏನೇ ಆಗಲಿ ತಪ್ಪದೇ ನೋಡಿಯೇ ತೀರುತ್ತಿದ್ದರು.
ನಟಭಯಂಕರ ಗಂಗಾಧರ ರಾಯರು ಅಂದಿನ ಕಾಲದಲ್ಲಿ ರಾಕ್ಷಸ ಪಾತ್ರಗಳನ್ನು ಅಭಿನಯಿಸುವುದರಲ್ಲಿ ಅತ್ಯಂತ ಹೆಸರುವಾಸಿಯಾದ ನಟರು. ಅವರು ಆಜಾನುಬಾಹು ಮತ್ತು ಅದ್ಭುತ ಕಂಠ ಹೊಂದಿದ್ದರು. ರಾಕ್ಷಸರ ಪಾತ್ರಗಳಾದ ಕಂಸ, ಹಿರಣ್ಯಕಶಿಪು ಮುಂತಾದ ಪ್ರಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸುತ್ತಿದ್ದರು. ನಟಭಯಂಕರರಿಗೆ ಸರಿ ಸಮನಾಗಿ ರಾಕ್ಷಸ ಪಾತ್ರಗಳನ್ನು ಅಭಿನಯಿಸಿ ಸೈ ಎನಿಸಿಕೊಂಡಿದ್ದ ಮತ್ತೊಬ್ಬ ನಟ ಎಂದರೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಒಬ್ಬರೆ. ಗಂಗಾಧರರಾಯರ ನಾಟಕಗಳಲ್ಲಿ ಪುಟ್ಟಸ್ವಾಮಯ್ಯನವರಿಗೆ ಪಾತ್ರವಿದ್ದೇ ಇರುತ್ತಿತ್ತು.
ಝಗಝಗಿಸುವ ವರ್ಣರಂಜಿತ ವೇಷತೊಟ್ಟು, ತಲೆಯಮೇಲೆ ಹೊಳೆಯುವ ಕಿರೀಟವನ್ನು ಧರಿಸಿ, ಗದೆಯನ್ನು ಕೈಯಲ್ಲಿ ಹಿಡಿದು ಅತ್ತಿಂದ ಇತ್ತ ತೂಗಾಡಿಸುತ್ತಾ ಈ ಇಬ್ಬರೂ ರಂಗ ಪ್ರವೇಶ ಮಾಡಿದರೆ ನೋಡುಗರ ಎದೆ ಝಲ್ ಎನ್ನುತ್ತಿತ್ತಂತೆ. ತಮ್ಮ ಕಂಚಿನ ಕಂಠದಿಂದ ಸಂಭಾಷಣೆಗಳನ್ನು ಹೇಳುತ್ತಿದ್ದ ರೀತಿ, ಸನ್ನಿವೇಶಗಳಿಗೆ ತಕ್ಕಂತೆ ಮುಖಭಾವಗಳನ್ನು ಬದಲಾಯಿಸುತ್ತಿದ್ದ ಬಗೆ, ಸುಶ್ರಾವ್ಯವಾದ ಹಾಡುಗಾರಿಕೆ ಇವೆಲ್ಲದರೊಂದಿಗೆ ಅತ್ಯಂತ ಸಹಜವಾದ ಅಭಿನಯ ಚಾತುರ್ಯದಿಂದ ಪ್ರೇಕ್ಷಕರ ಮನಗೆದ್ದ ಅಭಿಜಾತ ಕಲಾವಿದರುಗಳಾಗಿದ್ದವರು, ಶ್ರೀ ಪುಟ್ಟಸ್ವಾಮಯ್ಯನವರು ಮತ್ತು ನಟ ಭಯಂಕರ ಗಂಗಾಧರ ರಾಯರು.
ಒಂದು ನಾಟಕದಲ್ಲಿ ನಟಭಯಂಕರ ಗಂಗಾಧರ ರಾಯರು ಹಿರಣ್ಯಕಶಿಪುವಿನ ಪಾತ್ರವಹಿಸಿದ್ದರೆ, ಹಿರಣ್ಯಾಕ್ಷನ ಪಾತ್ರ ಶ್ರೀ ಪುಟ್ಟಸ್ವಾಮಯ್ಯನವರು ವಹಿಸುತ್ತಿದ್ದರು. ಈ ನಾಟಕದಲ್ಲಿ ತಮ್ಮನಾದ ಹಿರಣ್ಯಾಕ್ಷನು, ಅಣ್ಣನಾದ ಹಿರಣ್ಯಕಶಿಪುವಿಗೆ ತಾನು ದೇವಾದಿ ದೇವರುಗಳನ್ನೆಲ್ಲಾ ಜಯಿಸಿ ಬಂದೆ ಎಂದು ಸಂತೋಷದಿಂದ ತಿಳಿಸುವ ದೃಶ್ಯ. ಈ ಸಂತೋಷದ ಸುದ್ದಿ ತಿಳಿದ ಹಿರಣ್ಯಕಶಿಪು ಪಾತ್ರಧಾರಿಯಾದ ಗಂಗಾಧರ ರಾಯರು "ಭಲೇ ತಮ್ಮಾ" ಎಂದು ಹೇಳಿ, ಹಿರಣ್ಯಾಕ್ಷನ ಪಾತ್ರಧಾರಿಯಾದ ಪುಟ್ಟಸ್ವಾಮಯ್ಯನವರನ್ನು ತನ್ನ ಬಲತೋಳನ್ನು ಅವರ ನಡುವಿಗೆ ಬಳಸಿ ಒಂದು ಕ್ಷಣ ಮೇಲಕ್ಕೆ ಎತ್ತಿ, ತಕ್ಷಣವೇ ಕೆಳಕ್ಕೆ ಇಳಿಸಿ ಬಿಡುತ್ತಿದ್ದರು. ಈ ಅದ್ಭುತವಾದ ಕ್ಷಣವನ್ನು ಪ್ರೇಕ್ಷಕರಲ್ಲ ಭಾರೀ ಕರತಾಡನದಿಂದ ಸ್ವಾಗತಿಸುತ್ತಿದ್ದರು.
ಈ ದೃಶ್ಯವನ್ನು ಇವರಿಬ್ಬರೂ ಬಹಳ ಎಚ್ಚರಿಕೆಯಿಂದ ಅಚ್ಚುಕಟ್ಟಾಗಿ ಅಭಿನಯಿಸುತ್ತಿದ್ದರು, ಎಂದು ನನ್ನ ತಂದೆ ನಮಗೆಲ್ಲ ಹೇಳಿ ತಮಗಾದ ಆನಂದವನ್ನು ನಮ್ಮೊಡನೆ ಹಂಚಿಕೊಂಡಿದ್ದು ಈಗಲೂ ನನ್ನ ನೆನಪಿನಲ್ಲಿದೆ. ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರಂಥ ಭರ್ಜರಿ ಪರ್ಸನಾಲಿಟಿಯವರನ್ನು ಒಂದು ತೋಳಿನಿಂದ ಬಳಸಿ ಮೇಲಕ್ಕೆ ಎತ್ತುವುದು ಎಂಬುದು ಸಾಮಾನ್ಯ ವಿಷಯವಾಗಿರಲಿಲ್ಲ.
ಈ ದೃಶ್ಯವನ್ನು ಅಭಿನಯಿಸಲು ಗಂಗಾಧರ ರಾಯರು ಮತ್ತು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಒಂದು ತಂತ್ರವನ್ನು ರೂಢಿಮಾಡಿಕೊಂಡಿದ್ದರು. ತನ್ನ ಡೈಲಾಗು ಮುಗಿದ ಕ್ಷಣದಲ್ಲೇ, ಗಂಗಾಧರ ರಾಯರು ತಮ್ಮ ಬಲ ತೊಡೆಯನ್ನು ಮುಂದಕ್ಕೆ ಚಾಚಿ ತುಸು ಬಗ್ಗಿಸುತ್ತಿದ್ದರು. ಅದೇ ಕ್ಷಣದಲ್ಲಿ ಪುಟ್ಟಸ್ವಾಮಯ್ಯನವರು ಮುಂದಕ್ಕೆ ಬಾಗಿದ್ದ ಗಂಗಾಧರ ರಾಯರ ತೊಡೆಯಮೇಲೆ ತನ್ನ ಒಂದು ಕಾಲನ್ನು ಊರಿ ಸ್ವಲ್ಪ ವೇಲಕ್ಕೆ ಏರುತ್ತಿದ್ದರು. ಆಗಲೇ ಗಂಗಾಧರ ರಾಯರು ತನ್ನ ತೋಳಿನಿಂದ ಅವರನ್ನು ಬಳಸಿ ಲಾಘವವಾಗಿ ಮೇಲಕ್ಕೆ ಎತ್ತಿ ಇಳಿಸಿಬಿಡುತ್ತಿದ್ದರು. ಈ ದೃಶ್ಯ ಪ್ರೇಕ್ಷಕರಿಗೆ ಅಚ್ಚರಿ ಮತ್ತು ರೋಮಾಂಚನವನ್ನು ಉಂಟುಮಾಡುತ್ತಿತ್ತು.
ಅಂದಿನ ಕಾಲದಲ್ಲಿ ಯಾವರೀತಿಯಾದ ಆಧುನಿಕ ತಂತ್ರಜ್ಞಾನದ ಆವಿಷ್ಕಾರಗಳ ಸಹಾಯವಿಲ್ಲದೇ, ಎಲ್ಲವನ್ನೂ ನೈಜವಾಗಿ ಅಭಿನಯಿಸಿ ತೋರಿಸಬೇಕಾದ ನಿರ್ಬಂಧ, ಅಂದಿನ ಕಲಾವಿದರುಗಳಿಗೆ ಇತ್ತು. ಇದ್ದುದರಲ್ಲಿಯೇ ಏನಾದರೊಂದು ಹೊಸತು ಮಾಡಿ ತೋರಿಸದಿದ್ದರೆ ಪ್ರೇಕ್ಷಕರ ಮನಗೆಲ್ಲುವುದಾದರೂ ಹೇಗೆ? ಈ ಕಾರಣಕ್ಕಾಗಿಯೇ ಏನಾದರೂ ಒಂದು ರೀತಿಯ ನಾವೀನ್ಯತೆಯನ್ನು ಸೃಷ್ಟಿಸಿ ನಾಟಕವನ್ನು ರಂಜನೀಯವಾಗಿಸಲು ಶ್ರಮಪದುತ್ತಿದ್ದರು.
ಈಗಿನ ಕಾಲದಲ್ಲಿಯೂ ಸಹ ಸಾಹಸ ದೃಶ್ಯಗಳನ್ನು ಅಭಿನಯಿಸುವಾಗ ನಟರುಗಳಿಗೆ ಅನೇಕ ರೀತಿಯಾದ ಅಪಾಯಗಳು ತಪ್ಪಿದ್ದಲ್ಲ. ಹೀಗಿರುವಾಗ ಹಿಂದಿನ ಕಾಲದಲ್ಲಿ ನಟರುಗಳಿಗೆ, ಎತ್ತರದಿಂದ ಜಿಗಿಯುವಾಗ, ಮಲ್ಲಯುದ್ಧ ಮಾಡುವಾಗ ಹೀಗೆ ಮುಂತಾದ ದೃಶ್ಯಗಳಲ್ಲಿ ಅಪಾಯವನ್ನು ಎದುರುಗೊಳ್ಳಬೇಕಿತ್ತು. ಇದನ್ನೆಲ್ಲಾ ಏಕೆ ಹೇಳಬೇಕಾಯಿತು ಎಂದರೆ, ಕಲಾವಿದರುಗಳು, ಪ್ರೇಕ್ಷಕರ ಮನರಂಜನೆಗೋಸ್ಕರ ಏನಾದರೂ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ.
ಈ ರೀತಿಯ ಕ್ರಿಯಾಶೀಲತೆ ಎಲ್ಲ ಕಾಲಗಳಲ್ಲಿಯೂ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಅನುಸರಿಸುವ ವಿಧಾನಗಳು, ತಂತ್ರಜ್ಞಾನದ ಆವಿಷ್ಕಾರಗಳು ಬದಲಾಗುತ್ತಿರುತ್ತವೆ. ಆದರೆ ಕಲಾವಿದರ ಕ್ರಿಯಾಶೀಲ ತುಡಿತ ಮಾತ್ರ ನಿರಂತರವಾಗಿ ಸಾಗುತ್ತಿರುತ್ತದೆ.
ಆದರೆ ಇವೆಲ್ಲಾ ಬರಿ ಮೌಖಿಕ ದಾಖಲೆಗಳಾಗಿದ್ದು, ಇಂತಹ ಸ್ವಾರಸ್ಯಕರ ವಿಚಾರಗಳನ್ನು ಲಿಖಿತ ದಾಖಲೆಗಳಾಗಿ ಮಾರ್ಪಡಿಸಿ ಮುಂದಿನ ಪೀಳಿಗೆಯವರಿಗೆ ಸಿಗುವಂತೆ ಮಾಡಬೇಕು ಎಂದು ನನಗೆ ಅನ್ನಿಸುತ್ತಲೇ ಇತ್ತು. ಡಾ| ರಾಜ್ ರವರನ್ನು ಒಮ್ಮೆ ನೇರಿನಲ್ಲಿ ಭೇಟಿ ಮಾಡಬೇಕು ಎಂಬ ಹೆಬ್ಬಯಕೆ ನನಗೆ ಇತ್ತು. ನನ್ನ ಅದೃಷ್ಟದಲ್ಲಿ ಅದು ಬರೆದಿರಲಿಲ್ಲ, ಹೀಗಾಗಿ ಆ ಬಯಕೆ ಬರೀ ಬಯಕೆಯಾಗಿಯೇ ಉಳಿದುಬಿಟ್ಟಿತು. ಇದಕ್ಕೆ ಪರೋಕ್ಷವಾಗಿ ನಾನೇ ಕಾರಣ. ಡಾ| ರಾಜ್ ರವರನ್ನು ಭೇಟಿ ಮಾಡಲು ನಾನು ಇನ್ನೂ ಹೆಚ್ಚಿನ ಪ್ರಯತ್ನ ಮಾಡ ಬೇಕಿತ್ತು. ಸ್ವಲ್ಪ ನಿಧಾನ ಮಾಡಿಬಿಟ್ಟೆ ಎಂದು ಅನಿಸುತ್ತಿದೆ.
ವೃದ್ಧಾಪ್ಯದಲ್ಲಿ ನನ್ನ ತಂದೆಗೆ ಅವರ ಕಡೆಯ ಎರಡು ವರ್ಷಗಳಲ್ಲಿ ವಿಸ್ಮೃತಿ ಉಂಟಾಗಿ ಬಿಟ್ಟಿತ್ತು. ಅದನ್ನು Alzheimer's disease ಎಂದು ವೈದ್ಯಕೀಯ ಪರಿಭಾಷೆಯಲ್ಲಿ ಕರೆಯುತ್ತಾರೆ. ಎಲ್ಲವನ್ನೂ ಮರೆತಿದ್ದರೂ ನನ್ನ ಅಪ್ಪ ಎರಡು ವ್ಯಕ್ತಿಗಳನ್ನು ಮಾತ್ರ ತನ್ನ ಕಡೆಯವೆರೆಗೂ ಮರೆಯಲಿಲ್ಲ. ಒಂದು ನನ್ನ ಅಕ್ಕ ಶ್ರೀಮತಿ ರಾಜಲಕ್ಷ್ಮಿ ಮತ್ತು ಮತ್ತೊಂದು ವ್ಯಕ್ತಿಯೆಂದರೆ ಡಾ| ರಾಜ್ ಕುಮಾರ್. ಹೆತ್ತ ಮಕ್ಕಳಾದ ನಮ್ಮನ್ನೂ ಗುರುತಿಸಲಾರದಷ್ಟು ಮರೆವು ಮುಸುಕಿದ್ದ ನನ್ನ ಅಪ್ಪನಿಗೆ ಟಿವಿಯಲ್ಲಿ ಡಾ| ರಾಜ್ ರವರ ಚಿತ್ರಗಳು ಮೂಡಿ ಬಂದರೆ ತಕ್ಷಣವೇ "ಲೋ ನೋಡೋ ರಾಜ್ ಕುಮಾರ್" ಎಂದು ಮಕ್ಕಳಂತೆ ಸಂಭ್ರಮ ಪಡುತ್ತಿದ್ದರು. ನಮ್ಮನ್ನೆಲ್ಲಾ ಗುರುತಿಸಲಾಗದೆ ಅವರು ಬಾಧೆ ಪಡುವುದನ್ನ ಕಂಡು ನಾವು ಮನದಲ್ಲೇ ಅನೇಕ ಬಾರಿ ನೊಂದು ಕೊಂಡಿದ್ದೇವೆ. ಆದರೆ ಡಾ| ರಾಜ್ ರವರನ್ನು ಮಾತ್ರ ಅವರೆಂದೂ ಮರೆಯಲೇ ಇಲ್ಲ. ಡಾ| ರಾಜ್ ರವರ ಬಗ್ಗೆ ಇಷ್ಟೊಂದು ಅಭಿಮಾನ ಹೊಂದಿದ್ದ ಅವರು ಬೇರೆ ಯಾರನ್ನಾಗಲೀ ಹೀರೋ ಎಂದು ಒಪ್ಪುತ್ತಿರಲಿಲ್ಲ.
ಹೀಗಿದ್ದ ನನ್ನ ತಂದೆಯವರ ಬಗ್ಗೆ ಮತ್ತು ಅವರ ಗೆಳೆಯರಾಗಿದ್ದ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಬಗ್ಗೆ ಬಾಲ್ಯದಲ್ಲಿ ನಾನು ಕೇಳಿ ತಿಳಿದ ವಿಷಯಗಳು ಬರೀ ಬಾಯಿಮಾತಿನಲ್ಲಿ ನಿಂತು ಬಿಡದೇ, ಲಿಖಿತ ರೂಪದ ದಾಖಲೆಯಾಗಿರಲಿ ಎಂದು ಯೋಚಿಸಿ ಈ ಕಿರು ಬರಹವನ್ನು ಓದುಗರ ಮುಂದೆ ಇಟ್ಟಿದ್ದೇನೆ.
ನನಗೆ ವೈಯುಕ್ತಿಕವಾಗಿ ತಿಳಿದಿರುವ ವಿಚಾರಗಳು ಇತರರಿಗೂ ತಿಳಿಯಲಿ ಎಂಬುದಷ್ಟೇ ನನ್ನ ಬಯಕೆ. ಮತ್ಯಾವ ಸ್ವಾರ್ಥವೂ ಇದರಲ್ಲಿಲ್ಲ.
Comments
ಉ: ನನ್ನಪ್ಪನ ಪಿಟೀಲು
ಅರವಿಂದತನಯ ಅವರೆ, ಕನ್ನಡಿಗರ ರಾಜ್ ಹಾಗೂ ಅವರ ತಂದೆಯ ಬಗ್ಗೆ ರೋಚಕ ವಿಷಯಗಳು. ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದೀರಿ. ತುಂಬಾ ತುಂಬಾ ಥ್ಯಾಂಕ್ಸ್. "ರಾಜ್"ಗೆ ನೀವು ತಿಳಿಸಲಾಗಲಿಲ್ಲ ..ಪರವಾಗಿಲ್ಲ.. ಈ ಲೇಖನ ಕನ್ನಡಿಗರೆಲ್ಲರ ಅದರಲ್ಲೂ ರಾಜ್ ಮಕ್ಕಳ ಗಮನಕ್ಕೆ ಬಂದರೆ ಒಳ್ಳೆಯದಿತ್ತು.
In reply to ಉ: ನನ್ನಪ್ಪನ ಪಿಟೀಲು by ಗಣೇಶ
ಉ: ನನ್ನಪ್ಪನ ಪಿಟೀಲು
ರೋಚಕ ಅನುಭವಗಳು. ಗಣೇಶರ ಅಭಿಪ್ರಾಯವೇ ನನ್ನದೂ ಸಹ.
ಉ: ನನ್ನಪ್ಪನ ಪಿಟೀಲು
ಓದಿ ಖುಷಿಯಾಯಿತು!
ಉ: ನನ್ನಪ್ಪನ ಪಿಟೀಲು
ಪುಸ್ತಕರೂಪ ತಾಳಿ ಇತಿಹಾಸವಾಗಬೇಕಾಗಿರುವ ಕುತೂಹಲದ ವಿಷಯಗಳು, ನೀವು ಇಲ್ಲಿಯಾದರು ದಾಖಲಿಸುತ್ತಿರುವುದು ಸಂತಸ:
ನಿಮ್ಮ ಈ ಅನುಭವ ನೆನಪುಗಳಿಗೆ ಪುಸ್ತಕ ರೂಪ ಕೊಡಿ
ಉ: ನನ್ನಪ್ಪನ ಪಿಟೀಲು
ಚೆನ್ನಾಗಿದೆ, ಗೆಪ್ತಿ ಮುಂದುವರಿಯಲಿ.