" ಗೀತ ಸಂಗೀತಗಳಲ್ಲಿ ವಸಂತ "

" ಗೀತ ಸಂಗೀತಗಳಲ್ಲಿ ವಸಂತ "

ಚಿತ್ರ

                                     

     ಲಲಿತಕಲೆಗಳಲ್ಲಿ ಸಂಗೀತಕಲೆ ವಿಶಿಷ್ಟವಾದುದು, ಏಕೆಂದರೆ ಇದು ಬಹು ಸೂಕ್ಷ್ಮತೆಗಳನ್ನು ಹೊಂದಿದ ಜೊತೆಗೆ ಕೇಳುಗ ನನ್ನು ಆನಂದದ ಚರಮ ಸೀಮೆಗೊಯ್ಯುವ ಒಂದು ದೇವಕಲೆ. ಇದರಲ್ಲಿ ಪ್ರಮುಖವಾಗಿ ಎರಡು ಪ್ರಾಕಾರಗಳಿವೆ. ಒಂದು ಗಾಯನದ ಮೂಲಕ ಪ್ರಸ್ತುತ ಪಡಿಸುವಂತಹುಯದಾದರೆ ಮತ್ತೊಂದು ವಾದ್ಯಗಳ ಮೂಲಕ ದಶ೵ನ ಮಾಡಿಸುವಂತಹುದು. ಇಲ್ಲಿ ಗಾಯಕ ಇಲ್ಲವೆ ಗಾಯಕಿ ಸ್ವರ ಲಯ ತಾನಗಳ ಮುಖಾಂತರ ಭಾವನೆಗಳನ್ನು ಅಭಿವ್ಯಕ್ತಿ ಗೊಳಿಸಿದರೆ ವಾದಕ ವಾದ್ಯಗಳ ಮೂಲಕ ಸ್ವರ ಲಯ ತಾನಗಳ ಸಂಗೀತವನ್ನು ಅದರ ಏರಿಳಿತಗಳ ಮೂಲಕ ಸಾಕ್ಷೀಕರಿಸುತ್ತಾನೆ. ಇನ್ನು ಚಿತ್ರಕಲೆ ನಾಟ್ಯ ಮತ್ತು ಶಿಲ್ಪಕಲೆ ಮುಂತಾದವುಗಳು ದೃಶ್ಯ ಮತ್ತು ಗ್ರಾಹ್ಯವಾದವುಗಳಾದರೆ ಸಂಗೀತ ಒಂದು ಶ್ರವಣ ಪ್ರಧಾನವಾದ ಒಂದು ದೈವೀದತ್ತಕಲೆ. ಜೊತೆಗೆ ಇದು ಕ್ಷಣದಿಂದ ಕ್ಷಣಕ್ಕೆ ಸಾಗುತ್ತ ಬೆಳೆಯುತ್ತ ಕೇಳುಗನನ್ನು ಸಂಗೀತದ ರಸಗ್ರಹಣದ ಉತ್ತುಂಗಕ್ಕೆ ಒಯ್ಯುತ್ತ ಆನಂದದ ಲೋಕದಲ್ಲಿ ತೇಲಾಡಿಸುವಂತಹುದು. ಹೀಗಾಗಿ ಸಂಗೀತ ನೀಡುವ ರಸಾನುಭೂತಿಯೆ ಒಂದು ರೀತಿ ಬೇರೆ ತರಹದ್ದು. ಈ ಸಂಗೀತದಲ್ಲಿ ಸಪ್ತ ಸ್ವರಗಳು ಪ್ರಧಾನ, ಅವುಗಳನ್ನು ಆಧಾರವಾಗಿಟ್ಟುಕೊಂಡು ಗಾಯಕ ಸೃಷ್ಟಿಸುವ ರಸಗಾನಲೋಕ ಒಂದು ರೀತಿಯ ತೃಪ್ತಿಯ ಭಾವವನ್ನುಂಟು ಮಾಡುವಂತಹುದು. ಇಲ್ಲಿ ಗಾಯಕನ ಕಂಠದಿಂದ ಹುಟ್ಟುವ ಸ್ವರ ಪೂರ್ಣಗೊಳ್ಳುವ ಮೊದಲು ಎರಡನೆ ಸ್ವರಕ್ಕೆ ಪೀಠಿಕೆಯಾಗುತ್ತ ಸೃಷ್ಟಿಯಾಗುತ್ತ ಬೆಳೆಯು್ತ್ತ ಸದಾಕಾಲ ಪ್ರವ ಹಿಸುವು ಒಂದು ಅದ್ಭುತ ಸಂಗೀತ ಗಂಗೆ. ಇಲ್ಲಿ ಸೃಷ್ಟಿಯಾಗುವ ಸಂಗೀತದ ಜೊತೆಗೆ ವಿಹರಿಸುವುದು ಒಂದು ಸುಂದರ ಪ್ರಕೃತಿಯ ಮಧ್ಯದ ಅರಳಿ ನಿಂತ ಹೂದೋಟದ ಮಧ್ಯೆ ಅರಾಮವಾಗಿ ಸುಂದರ ಪರಿಸರವನ್ನು ವೀಕ್ಷಿಸುತ್ತ ಸಾಗಿದಂತೆ. ಇಲ್ಲಿ ಗಾಯಕ ಸಾಹಿತ್ಯ ರಚನೆಯ ತುಣುಕುಗಳನ್ನು ಸ್ವರ ರಾಗ ತಾನ ಮತ್ತು ಲಯಗಳ ಮೂಲಕ ಕೇಳುಗನ ಮನದಲ್ಲಿ ದಟ್ಟವಾದ ಅನುಭವಗಳ ಕಲ್ಪನಾ ಚಿತ್ರಗಳನ್ನು ಕೊಡುವ ಒಬ್ಬ ಅಪರೂಪದ ಗಾನ ಗಂಧರ್ವ ಎನ್ನಬಹುದು.

     ಈ ಸಂಗೀತ ಪರಂಪರೆಯಲ್ಲಿ ಕೆಲವು ವರ್ಗೀಕರಣಗಳಿವೆ, ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಹಿಂದುಸ್ಥಾನಿ ಮತ್ತು ಕರ್ನಾಟಕಿ ಗಾಯನ ಶೈಲಿಯ ಎರಡು ಪ್ರಮುಖ ಪ್ರಾಕಾರಗಳು. ಕರ್ನಾಟಕಿ ಸಂಗೀತ ನಮ್ಮ ದೇಶದ ದಕ್ಷಿಣ ಭಾಗದಲ್ಲಿ ಜನಪ್ರಿಯವಾಗಿದ್ದರೆ ಹಿಂದುಸ್ಥಾನಿ ಪದ್ಧತಿಯ ಸಂಗೀತ ಉತ್ತರದಲ್ಲಿ ಬಹು ಜನಪ್ರಿಯವಾಗಿದೆ. ಈ ಗಾಯನ ಶೈಲಿಗಳನ್ನು ಉತ್ತರಾದಿ ಮತ್ತು ದಕ್ಷಣಾದಿ ಸಂಗೀತ ಪದ್ಧತಿಗಳೆಂದೂ ಕರೆಯತ್ತಾರೆ. ಇನ್ನು ನಮ್ಮ ರಾಜ್ಯದ ಮಟ್ಟಿಗೆ ಬರುವುದಾದರೆ ತುಂಗಭಧ್ರಾ ನದಿಯ ಉತ್ತರ ದಂಡೆಯ ಭಾಗದಲ್ಲಿ ಹಿಂದುಸ್ಥಾನಿ ಸಂಗೀತ ಕುರಿತು ಹೆಚ್ಚಿನ ಒಲವಿದ್ದರೆ ದಕ್ಷಿಣ ದಂಡೆಯ ಆಚೆಗಿನ ಭಾಗದಲ್ಲಿ ಕರ್ನಾಟಕಿ ಸಂಗೀತ ಹೆಚ್ಚು ಜನ ಮನ್ನಣೆಯನ್ನು ಪಡೆದಿದೆ. ಇನ್ನು ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ದಲ್ಲಿ ರಾಗ ತಾಳ ಲಯಗಳ ಬಂಧಗಳಲ್ಲಿ ರಚಿಸಿದ ಅರ್ಥಪೂರ್ಣ ಸಾಹಿತ್ಯ ರಚನೆಗಳಿರುತ್ತವೆ. ಇವುಗಳನ್ನು ಬಂದಿಶ್ಅ ಗಳೆಂದು ಕರೆಯಲಾಗುತ್ತದೆ. ಈ ಪರಂಪರೆಯಲ್ಲಿ ಖ್ಯಾಲ್, ಠಪ್ಪಾ, ಥುಮ್ರಿ, ದಾದರಾ ಎಂಬ ಗಜಲ್ ಗಾಯಕಿ ಸೇರಿದಂತೆ ಇನ್ನೂ ಕೆಲವು ಪ್ರಾಕಾರಗಳಿವೆ. ಖ್ಯಾಲ ಗಾಯಕಿ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ  ಪ್ರಮುಖ ವಾದುದು. ಇದನ್ನು ಖಯಾಲ ಎಂದೂ ಕರೆಯಲಾಗುತ್ತದೆ. ಇದರಲ್ಲಿ ಬಡಾ ಖ್ಯಾಲ ಮತ್ತು ಛೋಟಾ ಖ್ಯಾಲಗಳೆಂಬ ವರ್ಗೀಕರಣವೂ ಇದೆ. ಖ್ಯಾಲ ಗಾಯಕಿಯನ್ನು ಹೊರತು ಪಡಿಸಿದರೆ ಇನ್ನುಳಿದವುಗಳು ಹಿಂಧೂಸ್ಥಾನಿ ಶಾಸ್ತ್ರೀಯ ಸಂಗೀತ ಆಧಾರಿತ ಲಘು ಶಾಸ್ತ್ರೀಯ ಸಂಗೀತದ ವಿಧಗಳು. ಖ್ಯಾಲ ಸಂಗೀತ ಪ್ರಸ್ತುತಿಯಲ್ಲಿ ರಾಗವನ್ನು ಸಾದರ ಪಡಿಸಲು ಸಾಹಿತ್ಯ ರಚನೆಗಳನ್ನು ಬಳಸಿ ಕೊಂಡರೆ ಲಘು ಶಾಸ್ತ್ರೀಯ ಸಂಗೀತದಲ್ಲಿ ರಾಗಗಳಾಧಾರಿತ ಸಾಹಿತ್ಯ ಪ್ರಧಾನವಾಗುತ್ತದೆ.

     ಹಿಂದುಸ್ಥಾನಿ ಸಂಗೀತ ಕ್ಷೇತ್ರದಲ್ಲಿ ಹಲವು ಗಾಯನ ಪರಂಪರೆಗಳು ಬೆಳೆದು ಉಳಿದು ಬಂದಿವೆ, ಅವುಗಳಲ್ಲಿ ಪ್ರಮುಖ ವಾದವುಗಳೆಂದರೆ ಕಿರಾನಾ, ಪಟಿಯಾಲಾ, ಜಯಪುರ, ಗ್ವಾಲಿಯರ ಮತ್ತು ಅತ್ರೋಲಿ ಮುಂತಾದವುಗಳು. ಆ ಸಂಗೀತ ಪರಂಪರೆಗಳಲ್ಲಿ ಅನೇಕ ಸಂಗೀತ ದಿಗ್ಗಜರು ಆಗಿ ಹೋಗಿದ್ದಾರೆ. ಆ ಸಂಗೀತ ಪರಂಪರೆಗಳಲ್ಲಿ ಅನೇಕ ಸಂಗೀತ ವಿದ್ವಾಂಸ ರಿಂದ ರಚಿತವಾದ ಸುಂದರವಾದ ಮನಸೂರೆಗಳುವ ಬಂದಿಶಗಳಿವೆ. ಋತು ಕಾಲಗಳನ್ನು ಅನ್ವಯಿಸಿ ಭಾವಗಳನ್ನು ಬಡಿ ದೆಬ್ಬಸುವ ಬಂದಿಶಗಳನ್ನು ಆಯಾ ಪರಂಪರೆಗಳ ಖ್ಯಾತನಾಮರಾದ ಗಾಯಕ ಗಾಯಕಿಯರು ಹಾಡಿ ಅವುಗಳನ್ನು ಅಮರ ಗೊಳಿಸಿದ್ದಾರೆ. ಇನ್ನೇನು ವಸಂತ ಈ ಭೂಮಿಗೆ ತನ್ನೆಲ್ಲ ವೈಭವಗಳೊಂದಿಗೆ ಕಾಲಿಡಲಿದ್ದಾನೆ. ಜನ ಸಾಮಾನ್ಯನಿಂದ ಹಿಡಿದು ಪಂಡಿತ ಪಾಮರರ ವರೆಗಿನ ಎಲ್ಲ ಜನ ಸಮುದಾಯಗಳನ್ನು ಸಮ್ಮೋಹನಗೊಳಿಸುವ ಒಂದು ವಿಶೇಷ ಋತು ಈ ವಸಂತ ಋತು ಇದನ್ನು ಮಧುಮಾಸವೆಂತಲೂ ಕರೆಯುತ್ತಾರೆ. ಇಂತಹ ಉತ್ಕೃಷ್ಟ ಸಂಗೀತ ಪರಂಪರೆಗಳು ಹೇಗೆ ಹು್ಟ್ಟಿ ಬೆಳೆದು ಬಂದವು ಎನ್ನುವುದು ಒಂದು ಕುತೂಹಲದ ಪ್ರಶ್ನೆ.

     ಮನುಷ್ಯ ಈ ಜಗದ ಒಂದು ಅದ್ಭುತ ಸೃಷ್ಟಿ, ಆತನಲ್ಲಿ ಎಲ್ಲ ಪಶು ಪಕ್ಷಿ ಮತ್ತು ಪ್ರಾಣಿ ಸಂಕುಲಗಳ ಸಹಜ ವಾಂಛೆ ಗಳು ಮೃಗೀಯ ಪ್ರವೃತ್ತಿಗಳು ಆತನಲ್ಲಿ ಅಂತರ್ಗತವಾಗಿದ್ದರೂ ಈ ಸೀಮಿತತೆಗಳನ್ನು ಆತ ಮೀರಿರುವುದು ಆತನಲ್ಲಿರುವ ಬುದ್ಧಿ ಶಕ್ತಿ ಅದರಿಂದುಂಟಾಗುವ ತರ ತಮಾಲೋಚನೆಗಳು ಮನದಲುಂಟಾಗುವ ಭಾವಗಳು ಒಟ್ಟುಗೂಡಿ ಆತ ತಾನು ಪಶುಗಳಿಗಿಂತ ಭಿನ್ನ ಮತ್ತು ಶ್ರೇಷ್ಟನೆಂಬುದನ್ನು ಸಾಬೀತು ಪಡಿಸಿದ್ದಾನೆ. ನಂತರದಲ್ಲಿ ಆತನ ಪ್ರಕೃತಿಯ ಸೂಕ್ಷ್ಮ ಗ್ರಹಿಕೆ ಮತ್ತು ಆತನ ಒಳನೋಟಗಳ ಮೂಲಕ ಅವುಗಳಿಗೆ ಅರ್ಥ ಕೊಡಲು ಮಾಡಿದ ಪ್ರಯತ್ನಗಳೆ ಲಲಿತಕಲೆಗಳ ಹುಟ್ಟಿಗೆ ಕಾರಣ. ನಮ್ಮಲ್ಲಿ ನಮ್ಮ ದೈನಂದಿನ ಬದುಕಿಗೆ, ದಿನ ವಾರ ತಿಂಗಳ ನಕ್ಷತ್ರ ಮಾಸ ಹುಣ್ಣಿಮೆ ಮತ್ತು ಅಮವಾಸ್ಯೆಗಳು ಹಾಗೂ ಎಲ್ಲ ಹಬ್ಬ ಹರಿದನಗಳ ಆಚರಣೆಗಳಿಗೆ ಈ ಋತುಗಳು ಮೂಲ ಕಾರಣಗಳೆಂಬುದನ್ನು ಮರೆಯುವಂತಿಲ್ಲ. ಅನಾಗರಿಕನಾಗಿದ್ದ ಮನುಷ್ಯ ನಾಗರಿಕತೆಯೆಡೆಗೆ ಸಾಗಿ ಬಂದಂತೆ ಸಂಕೇತಗಳ ಮೂಲಕ ನಂತರ ಭಾಷೆಯ ಆಷಿಷ್ಕಾರವಾದಂತೆ ತನ್ನ ಸುಖ ದುಃಖಗಳ ಆಧಾರಿತ ಭಾವನೆಗಳ ಅಭಿವ್ಯಕ್ತಿಗಾಗಿ ಹಾಡುತ್ತ ಬಂದ. ಅವುಗಳು ಬಾಯಿಂದ ಬಾಯಿಗೆ ಪ್ರಚುರಗೊಂಡು ಆಸಕ್ತರ ಮಸ್ತಿಷ್ಕದ ನೆನಪಿನ ಕೋಶಗಳಲ್ಲಿ ದಾಖಲುಗೊಂಡು ಪೀಳಿಗೆಯಿಂದ ಪೀಳಿಗೆಗೆ ದಾಟಿಕೊಂಡು ಬಂದು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಬಂದವು. ಕ್ರಮೇಣ ಇವುಗಳು ಜನಪದರ ಗೀತೆಗಳೆಂದೂ ನಂತರ ಈ ಸಂಗೀತ ಪರಂಪರೆ ಜನಪದ ಸಂಗೀತವೆಂದು ಹೆಸರು ಪಡೆಯಿತು. ಈ ಸಂಗೀತ ಸ್ವರ ಲಯ ಮತ್ತು ಭಾವಾಭಿವ್ಯಕ್ತಿ ಕ್ರಮ ಶ್ರೀಮಂತವಾದುದು. ಗತಕಾಲದ ಪ್ರದೇಶಾಧಾರದ ಜನಜೀವನ ಮತ್ತು ಮಾನವ ಜನಂಗದ ಗತಕಾಲದ ಬದುಕಿನ ಕುರಿತು ಬೆಳಕು ಚೆಲ್ಲು ವಂತಹುದು. ಇದು ಎಲ್ಲ ಋತು ಕಾಲ ಅಯನಗಳ ಪರಮಿತಿಯನ್ನು ಮೀರಿದಂತಹುದು.

     ಒಟ್ಟಿನಲ್ಲಿ ಈ ಜಗತ್ತನ್ನು ಗಮನಿಸುವುದಾದರೆ ಜನಾಂಗ ದೇಶ ಕಾಲ ಪ್ರಕೃತಿ ಮತ್ತು ಪರಿಸರಗಳು ಭಿನ್ನವಾದವುಗಳು. ಅದರಂತೆಯೆ ಎಲ್ಲ ಲಲಿತಕೆಗಳೂ ಧೇಶ ಕಾಲಗಳನ್ನು ಆಧರಿಸಿ ಭಿನ್ನವಾಗಿರುವಂತಹವು. ಕಾಲ ಚಕ್ರದ ಜೊತೆಗೆ ಜನಾಂಗ ಗಳು ಪ್ರಗತಿ ಪಥದಲ್ಲಿ ಸಾಗಿದಂತೆ ವಿಜ್ಞಾನ ಮತ್ತು ಕಲಾ ಕ್ಷೇತ್ರಗಳಲ್ಲಿ ಆದ ಆವಿಷ್ಕಾರಗಳು ಮನುಷ್ಯ ಬದುಕನ್ನು ಸುಂದರ ಗೊಳಿಸಿವೆ. ಗಾಯನದಲ್ಲಿ ಪುನರುತ್ಪತ್ತಿ ಇರುವಂತೆ ಋತುಗಳಲ್ಲಿಯೂ ಈ ನಿಯಮವಿದೆ. ಬೇಂದ್ರೆ ತಮ್ಮ ಋತುಗಾನ ಕವನ ದಲ್ಲಿ ಈ ರೀತಿಯಾಗಿ ಹೇಳುತ್ತಾರೆ.

 

                         ಕ್ಷಣ ಕ್ಷಣವೂ ಹೊಸ ಹೊಸದಿದು ಘನ ಗಗನವಿತಾನ 

                         ದಿನ ದಿನ ದಿನ ಗ್ರಹಮಾಲೆಯ ರಿಂಗಣಗುಣಿತದ ತಾನ

                         ತಿರು ತಿರುಗಿಯು ಹೊಸತಾಗಿರಿ ಎನುತಿದೆ ಋತುಗಾನ

                         ಈ ಹಾಡಿಗೆ ಶೃತಿ ಹಿಡಿದಿದೆ ಬ್ರಹ್ಮಾಂಡದ ಮೌನ

     ಅನುಪಮ ಗೇಯತೆಯ ಗುಣ ಹೊಂದಿದ ಈ ಋತುಗಾನ ಓದುಗನಲ್ಲಿ ಬಿಚ್ಚಿಕೊಳ್ಳುವ ಪರಿ ಅದು ಮಾಡಿಸುವ ಪ್ರಕೃತಿಯ ಪರಿವರ್ತನೆ ಮತ್ತು ಜೀವನ ದರ್ಶನ ವಿವರಿಸಲಾಗದಂತಹದು. ಬೀಸುವ ಓಣಗಾಳಿ ಎಲೆಯುದುರಿಸಿ ನಿಂ|ತ ಸಸ್ಯ ಸಮೂಹ ಬಳಲಿ ನಿಂತ ಪ್ರಕೃತಿ ಚಾತಕ ಪಕ್ಷಿಯಂತೆ ಕಾಯುವುದೆ ವಸಂತನ ಆಗಮನಕ್ಕಾಗಿ. ಈ ಋತು ಬಸಂತನ ಆಗಮನ ಪ್ರಕೃತಿಯ ಒಂದು ಜೀವೋದ್ಭವದ ಸಂಕೇತ ಎನ್ನಬಹುದು, ಇದೆ ವಸಂತನನ್ನು ಕುರಿತು ನಮ್ಮ ನಾಡಿನ ಶ್ರೇಷ್ಟ ಕವಿಗಳಲ್ಲೊಬ್ಬರಾದ ಜಿ.ಎಸ್.ಶಿವರುದ್ರಪ್ಪ ತಮ್ಮ ವಸಂತಗೀತೆ ಎಂಬ ಕವನದಲ್ಲಿ ವಸಂತನನ್ನು ಕುರಿತು ಈ ರೀತ ಹೇಳುತ್ತಾರೆ.

                        ಋತು ವಸಂತ ಬಂದನಿದೋ          

                        ಉಲ್ಲಾಸವ ತಂದನಿದೋ

                        ಬತ್ತಿದೆದೆಗೆ ಭರವಸೆಗಳ ಹೊಸ ಬಾವುಟವೇರಸಿ

                        ಹಳೆಗಾಡಿಗೆ ಹೊಸ ಕುದುರೆಯ

                        ಹೊಸಗಾಲಿಯ ಜೋಡಿಸಿ

     ಹಸಿರು ಜೀವನದ ಪಲ್ಲವದ ಸಂಕೇತ ಪ್ರಕೃತಿಯ ಹಸಿರು ಮನಕ್ಕೆ ಮುದ ನೀಡುವಂತಹುದು. ಈ ಹಬ್ಬಿ ಹರಡಿದ  ಹಸಿರು ಎಲ್ಲ ಜೀವಿಗಳನ್ನ  ಸಂಭ್ರಮದ ಕಡಲಲ್ಲಿ ತೇಲಿಸಿ ಬಿಡುತ್ತದೆ. ಋತು ವಸಂತ ಬಂಧ   ಉಲ್ಲಾಸವನು ತಂದ ಎಂದು  ಹಾಡುವ ಕವಿಯ ಆಶಾಭಾವವನ್ನು ಇಲ್ಲಿ ನೋಡಿ, ಬತ್ತಿದ ಎದೆಗಳಿಗೆ ಭರವಸೆಗಳ ಹೊಸ ಬಾವುಟ ಏರಿಸಿ ವ್ಯಕ್ತಿಗಳ ಬದುಕೆಂಬ ಬಂಡಿಗೆ ಆಶೆಯದ ಹೊಸ ಕುದುರೆ ಮತ್ತು ಹೊಸ ಗಾಲಿಗಳ ಜೋಡಿಸಿ ಸಾಗುವ ಪಯಣ ಜೀವನದ ಬಗೆಗಿನ ಆಶಾ ಭಾವನೆಯ ಒಂದು ಅದ್ಭುತ ನಿರೂಪಣೆ. ಇಲ್ಲಿ ವಸಂತನೆಂದರೆ ಜೀವನದ ಬಗೆಗೆ ಆಶೆ ಹುಟ್ಟಿಸುವ ಒಂದು ಚೈತನ್ಯ ಎನ್ನಬಹುದು. ಈ ವಸಂತ ಸಂಸ್ಕೃತ ಕವಿಗಳನ್ನೂ ಮೋಡಿ ಮಾಡದೆ ಬಿಟ್ಟಿಲ್ಲ. ಅವರೂ ಸಹ ಈತನ ಮೋಡಿಗೆ ಪರವಶ ರಾಗಿದ್ದಾರೆ. ಅವರು ತಮ್ಮ ಕೃತಿಗಳಲ್ಲಿ ಈ ಋ ತು ವಸಂತನನ್ನು ಕುರಿತು ದಾಖಲಿಸದೆ ಬಿಟ್ಟಿಲ್ಲ. ಆ ದಾಖಲೆಗಳದರೂ ಎಂತಹವು ಎಲ್ಲ ಕಾಲಕೂ ನವ ನವೀನವಾಗಿ ಉಲ್ಲಾಸವನ್ನುಂಟುವಂತಹವು. ಉದಾಹರಣೆಗಾಗಿ ಪ್ರಖ್ಯಾತ ಸಂಸ್ಕೃತ ಕವಿ ಜಯದೇವ ಭಕ್ತಿಯೋಗದ ಮಹತಿಯನ್ನು ಸಾರುವ ತನ್ನ ಪ್ರಸಿದ್ಧ ಕೃತಿ ‘ಗೀತ ಗೋವಿಂದ’ದಲ್ಲಿ ಶೃಂಗಾರ ರಸವೂ ಸಹ ಸ್ಥಾನ ಪಡೆದುದು ಒಂದು ಕೌತುಕದ ವಿಷಯ.    

                        ಲಲಿತ ಲವಂಗ ಲತಾ ಪರಿಶೀಲನ ಕೋಮಲ ಮಲಯ ಸಮೀರೆ

                        ಮಧುಕರ ನಿಕರ ಕರಂಬಿತ ಕೋಕಿಲ ಕೂಜಿತ ಕುಂಜ ಕುಟೀರೆ

                        ವಿಹರಿತ ಹರಿರಿಹ ಸರಸ ವಸಂತೆ ನೃತ್ಯತಿ     

                        ಯುವತಿ ಜನೇನ ಸಮಂ ಸಖಿ ವಿರಹಿ ಜನಸ್ಯ ದುರಂತೆ         

     ಇದನ್ನು ಸ್ಥೂಲಾಥ೵ದಲಿ ಅರ್ಥೈಸುವುದಾದಲ್ಲಿ ಪ್ರಕೃತಿಯಲ್ಲಿ ಅರಳಿನಿಂತ ಎಲ್ಲ ಹೂಗಿಡ ಬಳ್ಳಿಗಳ ಕಲುಸುಮಗಳ ಸುಗಂಧವನ್ನು  ಕೋಮಲವಾದ ಮರುತ ಹೊತ್ತು ತರುತ್ತಿದ್ದಾನೆ. ಕುಟಿರದ ಸುತ್ತಲಲೆಲ್ಲ ದಂಬಿಗಳು ಗುಂಯ್ಗುಡುತ್ತಿವೆ, ಕೋಗಿಲೆ ತನ್ನ ಮಧುರ ಕಂಠದಿಂದ ಉಲಿಯುತ್ತಿದ. ವಿರಹಿಗಳನ್ನು ವಿರಹ ವೇದನೆಯಿಂದ  ನರಳುವಂತೆ ಮಾಡುವ ವಸಂತ ದಲ್ಲಿ ಕೃಷ್ಣ ಯುವ ಗೋಪಿಕೆಯರೊಡನೆ ಲಾಲಿತ್ಯಪೂರ್ಣ ಹೆಜ್ಜೆಗಳನ್ನು ಕುಣಿಯುತ್ತಿರುವ ಎಂದು ಜಯದೇವ ಸುಂದರ ಲೋಕವನ್ನೆ ಇಲ್ಲಿ ಸೃಷ್ಟಿಸಿದ್ದಾನೆ.

                                          *

     ಹಿಂದುಸ್ಥಾನಿ ಸಂಗೀತ ಪ್ರಾಕಾರದಲ್ಲಿ ವರ್ಷ ಅಂದರೆ ಮಳೆಯ ಪರಿಕಲ್ಪನೆ ನಮ್ಮ ಮನದಲ್ಲಿ ಮೂಡಿ ಮರೆಯಾಗುತ್ತದೆ. ಇದೊಂದು ಅದ್ಭುತ ಸೃಷ್ಟಿಯ ಪರಿಕಲ್ಪನೆ. ಇಲ್ಲಿ ಖ್ಯಾಲ ಗಾಯನ ಪದ್ಧತಿ ವಿಶೇಷವಾದ ಶಾಸ್ತ್ರೀಯ ಮಾನ್ಯತೆಯನ್ನು ಪಡೆದಿದೆ. ಇಲ್ಲಿ ಖ್ಯಾಲ ಎಂದರೆ ಹಿಂದಿ ಮತ್ತು ಉರ್ದುವಿನಲ್ಲಿ ಬಳಸಲ್ಪಡುವ ಖಯಾಲ್ ಎಂತಲೂ ಪರಿಗಣನೆಯಿದೆ. ಖ್ಯಾಲ ಎಂದರೆ ಭಾವಿಸಿಕೊಳ್ಳಲುವುದು, ಕಲ್ಪಿಸಿಕೊಳ್ಳುವುದು ಮತ್ತು ತರ್ಕಮಾಡುವುದು ಎಂತಲೂ ಅರ್ಥೈಸಲಾಗುತ್ತದೆ. ಇದರಲ್ಲಿ ಆಲಾಪ, ಬೋಲ ಆಲಾಪ, ಬೋಲತಾನು ತಾನುಗಳ ಪ್ರಯೋಗ ಸಮೃದ್ಧವಾಗಿದೆ. ಇಲ್ಲಿ ಆಲಾಪದೊಂದಿಗೆ ಆಕಾರ ಪಡವ ಸಂಗೀತ ಕ್ರಮೇಣ ಬಂದಿಶಗಳಲ್ಲಿಯ ಶಬ್ದಗಳನ್ನು ಬೋಲ ಆಲಾಪ ಮೂಲಕ ಒಂದು ರಸಘಟ್ಟಕ್ಕೆ ಬರುವ ಸಂಗೀತ ಬೋಲತಾನು ಮತ್ತು ತಾನುಗಳ ಮೂಲಕ ಸಮೃದ್ಧವಾಗುತ್ತ ಕೇಳುಗನನ್ನು ಅನಂತ ಆನಂದ ಸಾಗರದಲ್ಲಿ ತೇಲುವಂತೆ ಮಾಡಿ ಬಿಡುತ್ತವೆ. ಈ ಸಂಧರ್ಭದಲ್ಲಿ ಗಾಯಕ ಸ್ವರ ಲಯ ಮತ್ತು ಭಾವಗಳನ್ನು ಪ್ರಸ್ತುತ ಪಡಿಸುವ ಪರಿಯೆ ಒಂದು ಅನನ್ಯ ಭಾವಲೋಕ. ಇಲ್ಲಿ ಗಾಯಕರು ತಮ್ಮ ಖ್ಯಾಲ ಗಾಯನವನ್ನು ಒಂದು ರಾಗವನ್ನು ಬಂದಿಶ ಮೂಲಕ ಸಾದರ ಪಡಿಸುತ್ತಾರೆ. ಇಲ್ಲಿ ವಿಲಂಬಿತ ನಲ್ಲಿ ಹಾಡುವುದು ಬಡಾ ಖ್ಯಾಲ ಎಂತಲೂ ಮಧ್ಯ ಅಧವಾ ಧೃತಲಯದಲ್ಲಿ ಹಾಡುವುದನ್ನು ಛೋಟಾ ಖ್ಯಾಲ ಎಂತಲೂ ಕರೆಯಲಾಗುತ್ತಿದೆ.

     ಮಾನವ ಸಹಜ ಭಾವನೆ ಮತ್ತು ಮನೋಲಹರಿಗಳನ್ನು ಆದಷ್ಟು ಕಡಿಮೆ ಶಬ್ದಗಳಲ್ಲಿ ನಿರ್ದಿಷ್ಟ ರಾಗ ಮತ್ತು ತಾಳಗಳಲ್ಲಿ ರಚಿಸಿದ ರಚನೆಗಳನ್ನು ಬಂದಿಶಗಳೆಂದು ಕರೆಯಲಾಗುತ್ತದೆ. ಇವುಗಳನ್ನು ಚೀಜ್ ಗಳೆಂದೂ ಕರೆಯಲಾಗುತ್ತಿದೆ. ಈ ಬಂದಿಶ ಗಳ ರಚನಕಾರರನ್ನು ಹಿಂದೂಸ್ಥಾನಿ ಸಂಗೀತ ಪರಂಪರೆಯ ವಾಗ್ಗೇಯಕಾರರೆಂದು ಕರೆಯಬಹುದು. ಇವರಲ್ಲಿ ಅನೇಕರು ತಮ್ಮ ಕಾವ್ಯನಾಮಗಳನ್ನು ಹೊಂದಿದ್ದು ಇವರುಗಳು ತಮ್ಮ ಮೂಲನಾಮಗಳಿಗಿಂತ ಕಾವ್ಯನಾಮಗಳಖಿಂದಲೆ ಹೆಚ್ಚು ಪ್ರಚಲಿತ ರಾಗಿದ್ದಾರೆಂದು ಹೇಳಬಹುದು. ಉದಾಹರಣೆಗಾಗಿ ಕಲೆವರ ಮೂಲ ನಾಮಗಳನ್ನು ಅವರ ಕಾವ್ಯನಾಮಗಳ ಜೊತೆಗೆ ಹೆಸರಿಸು ವುದಾದಲ್ಲಿ ಅವುಗಳು ಈ ಮುಂದೆ ಹೇಳಲ್ಪಡುವಂತಿವೆ. ಭೂಪತ್ ಖಾನ್ (ಮಹಾರಂಗ), ಫೀರೋಜ್ ಖಾನ್ (ಅದಾರಂಗ), ಬಡೇಗುಲಾಮ್ ಅಲಿ ಖಾನ್ (ಸಬರಂಗ), ನಿಯಾಮತ ಖಾನ್ (ಸದಾರಂಗ), ವಾಜೀರ ಹುಸ್ಸೇನ ಖಾನ್ (ಲಗನಪಿಯಾ), ಫಯಾಜ್ ಖಾನ್ (ಪ್ರೇಮಪ್ರಿಯಾ), ಜಯಸುಖಲಾಲ (ವಿನಯ) ಮತ್ತು ನಾರಾಯಣ ಪಂಡಿತ (ನಾದಪಿಯಾ) ಎಂದು ಇವೆ. ಇವರು ರಚಿಸಿದ ಬಂದಿಶ(ಚೀಜ್)ಗಳಲ್ಲಿ ಕಾವ್ಯ ನಾಮಗಳ ಬಳಕೆ ಬಹುತೇಕ ಇದ್ದರೂ ಅನೇಕ ಕಡೆಗೆ ಅವುಗಳ ಬಳಕೆ ಇಲ್ಲದೆಯೂ ಇರಬಹದುದಾಗಿದೆ. ಇದರ ಬಗೆಗೆ ಸಂಪೂರ್ಣ ವಿವರ ಬೇಕಿದ್ದಲ್ಲಿ ಖ್ಯಾತ ಸಂಗೀತಜ್ಞ ವಿಷ್ಣು ನಾರಾಯಣ ಬಾತಖಾಂಡೆ ಯವರು ಹೊರತಂದ ಬಂದಿಶಗಳ ಪುಸ್ತಕದಲ್ಲಿ ಸಮಗ್ರ ವಿವರ ದೊರೆವ ಸಾಧ್ಯತೆಯಿದೆ. ಇದೊಂದು ಹಿಂದೂಸ್ಥಾನಿ ಸಂಗೀತ ಪರಂಪರೆಯ ಅಮೂಲ್ಯ ದಾಖಲೆಯೆಂದು ಪರಿಗಣಿಸಲಾಗಿದೆ. ಈ ಬಂದಿಶಗಲ್ಲಿ ಸ್ಥಾಯಿ ಮತ್ತು ಅಂತರಾ ಎಂಬ ವಿಂಗಡಣೆಗಳಿದ್ದು ಇವುಗಳು ಹೆಚ್ಚಾಗಿ ಹಿಂದಿ ಬೃಜ ಮತ್ತು ಫಾರ್ಷಿ ಭಾಷೆಗಳಲ್ಲಿವೆ.

     ಈ ಹಿಂದುಸ್ಥಾನಿ ಸಂಗೀತ ಪರಂಪರೆ ಮೊಗಲರ ಆಡಳಿತ ಕಾಲದಿಂದ ಸಮೃದ್ದಿ ಪಡೆದು ಬೆಳಕಿಗೆ ಬಂದಂತಹದು ಎಂದು ಪರಿಗಣಿಸಲಾಗಿದೆ. ಮೊಗಲರ ಆಡಳಿತ ಕಾಲಕ್ಕು ಮೊದಲು ಇದ್ದ ಲೋಕ ಸಂಗೀತ ಮುಂತಾದ ಸಂಗೀತ ಪ್ರಾಕಾರ ಗಳು ಮತ್ತು ಬಾಬರನ ದಾಳಿಯ ನಂತರದಲ್ಲಾದ ಭಾಷೆ ಮತ್ತು ಕಲಾ ಪ್ರಾಕಾರಗಳಲ್ಲಿ ಕೊಡು ಕೊಳುವಿಕೆ ನಡೆದಂತೆ ಸಂಗೀತದಲ್ಲೂ ಕೊಡು ಕೊಳುವಿಕೆ ನಡೆದು ಈಗಿನ ಹಿಂದುಸ್ಥಾನಿ ಸಂಗೀತದ ರೂಪ ಪಡೆದು ಕಾಲ ಕಾಲಕ್ಕೆ ಪರಿಷ್ಕೃತ ಗೊಳ್ಳುತ್ತ ಸಾಗಿ ಬಂದ ಒಂದು ಅದ್ಭುತ ಸಂಗೀತ ಪರಂಪರೆ. ಮುಂದೆ ಭಾರತವನ್ನಾಳಿದ ಮೊಘಲ್ ದೊರೆಗಳಾಧ ಅಕಬರ, ಶಹಾಜಹಾನ ಮತ್ತು ಔರಂಗಜೇಬ್ ಸ್ವತಃ ಸಂಗೀತ ಪ್ರೇಮಿಗಳಾಗಿದ್ದರು. ಔರಂಗಜೇಬ್ ಕೆಲವು ಬಂದಿಶಗಳನ್ನು ಸಹ ರಚನೆ ಮಾಡಿದ್ದ ಎನ್ನಲಾಗಿದೆ. ಅಲ್ಲದೆ ಔರಂಗಜೇಬನ ಮಗಳು ಜೆಬುನ್ನಿಸಾ ಸಹ ಸಂಗೀತ ಮತ್ತು ಸಾಹಿತ್ಯ ಪ್ರೇಮಿಯಾಗಿದ್ದು ಅವಿವಾಹಿತೆಯಾಗಿಯೆ ಉಳಿದ ಈಕೆ ಒಂದು ವರ್ಷಕ್ಕ ತನಗೆ ದೊರಕುತ್ತಿದ್ದ ಸುಮಾರು ನಾಲ್ಕು ಲಕ್ಷ ರೂ.ಗಳನ್ನು ಸಂಗೀತ ಮತ್ತು ಸಾಹಿತ್ಯ ಪ್ರಾಯೋಜಕತ್ವಕ್ಕೆ ಉಪಯೋಗಿಸುತ್ತಿದ್ದಳು ಎನ್ನಲಾಗಿದೆ. ಹೀಗೆ ಭಾರತದಲ್ಲಿ ರಾಜ ಮಹಾರಾಜರು ಮತ್ತು ನವಾಬರು ಮುಂದೆ ಸಂಸ್ಥಾನಿಕರು ಮತ್ತು ಜಹಗೀರದಾರರ ಕೃಪಾಶ್ರಯದಲ್ಲಿ ಈ ಹಿಂದುಸ್ಥಾನಿ ಸಂಗೀತ ಪರಂಪರೆ ಉಳಿದು ಬೆಳದು ಬಂತು. ಸಂಗೀತಗಾರರ ವಂಶಜರು ಮತ್ತು ಅವರ ಶಿಷ್ಯ ಪರಂಪರೆಗಳ ಮೂಲಕ ಬೆಳದು ಬಂದ ಪರಿ ಸಾಗಿ ಬಂದ ದಾರಿ ಕಾಲಾನುಕ್ರಮವಾಗಿ ಸಮೃದ್ಧವಾಗಿ ಬೆಳೆದು ಬಂತು. ಇದೇ ಹಿಂದುಸ್ಥಾನಿ ಸಂಗಿತ ಪರಂಪರೆ.

     ಇಂತಹ ಅದ್ಭುತ ಸಂಗೀತ ಪರಂಪರೆಯಲ್ಲಿ ಬೆಳೆದು ಬಂದ ಹಿಂದುಸ್ಥಾನಿ ಸಂಗೀತದ ಬಂದಿಶಗಳು ನಮ್ಮ ದೇಶದ ಮಾಸ ಋತುಮಾನಗಳನ್ನು ಮತ್ತು ಆಯಾ ಕಾಲಗಳ ಪ್ರಕೃತಿಯ ವಿಸ್ಮಯಗಳನ್ನು ಮನೋರಂಜಕ ಭಾವನೆಗಳನ್ನು ಸುಂದರವಾಗಿ ಪಡಿ ಮೂಡಿಸಿದವು. ಇವುಗಳ ರಚನೆಯಾಗಿ ಶತಮಾನಗಳೆ ಸಂದಿದ್ದರೂ ಇಂದಿಗೂ ಅವುಗಳು ನವ ನವೀನ. ಈ ಬಂದಿಶಗಳು ವಿಶೇಷವಾಗಿ ವರ್ಷದ ಪರಿಕಲ್ಪನೆಗಳು. ವಸಂತ ಮತ್ತು ವರ್ಷ ಋತುಗಳು ಹಾಗೂ ಛೈತ್ರ ಮತ್ತು ವೈಶಾಖ ಮಾಸಗಳ ಕುರಿತ ವರ್ಣನೆಗಳು ಬಂದಿಶಗಳಲ್ಲಿ ಸಮೃದ್ಧವಾಗಿವೆ. ಋತು ವಸಂತನ ಆಗಮನ ಚೈತ್ರ ಮಾಸದ ಆಗಮನದಿಂದ ಆಗುತ್ತದೆ  ಎಂಬುದು ಪ್ರಾಥಮಿಕ ಕಲ್ಪನೆಯಾದರೂ ನಿಜ ಅರ್ಥದಲ್ಲಿ ಈತನ ಆಗಮನ ಫಾಲ್ಗುಣ ಮಾಸದಲ್ಲಿ ಬರುವ ಕೊನೆಯದಾದ ಹೋಳಿ ಹುಣ್ಣಿಮೆಯಿಂದಲೆ ಪ್ರಾರಂಭವಾಗುತ್ತದೆ. ಈ ರಿತು ಬಸಂತನ ಕುರಿತು ಅನೇಕ ಬಂದಿಶಗಳು ರಚನೆ ಯಾಗಿವೆ. ಅವುಗಳಲ್ಲಿ ಕೆಲವು ಬಂದಿಶಗಳ ಅವಲೋಕನ ಈ ಬರಹದ ಉದ್ದೇಶ.

                      ರಾಗ ಗೌರಿ ಬಸಂತ, ಮಧ್ಯ ಲಯ ಮತ್ತು ತೀನ ತಾಲ್

                          ಆಜ ಪೇರಿಲೇ ಗೋರಿ ರಂಗ ಬಸಂತಿ ಚೀರ

                          ಆಯ ಋತುರಾಜ ಕೋಯಲರಿಯಾ ಕೂಕೆ  |

                          ರಂಗಾದೇ ರಂಗಾದೇ ಆರೆ  ರಂಗರೇಜರಾ

                          ಆಯ ಋತುರಾಜ, ಕೋಯಲರೀಯಾ ಕೂಕೆ ||    

     ಓ ಸುಂದರಿ! ಋತು ರಾಜ ವಸಂತನ ಆಗಮನವಾಗಿದೆ, ಕೋಗಿಲೆ ಕುಕಿಲಿಡುತ್ತಿದೆ. ಈಗಲೆ ಪಟ್ಟೆ ಪೀತಾಂಬರವನ್ನುಟ್ಟು ಶೋಭಿಸುವಂತಹವಳಾಗು, ಸ್ವಲ್ಪ ಅನುಗ್ರಹಿಸಿ ಆನಂದವನ್ನು ನೀಡು ಎಂದು ವಿರಹಿ ತನ್ನ ಪ್ರೇಯಿಸಿಗೆ ಗೋಗರಯುತ್ತಾನೆ  ಇಲ್ಲಿ ಋತು ವಸಂತನ ಆಗಮನದಿಂದ ಆನಂದತುಂದಿಲನಾದ ಪ್ರಿಯಕರನೊಬ್ಬ ತನ್ನ ಮನದನ್ನೆಗೆ ಹೊಸ ಪೀತಾಂಬರವನ್ನು ಉಟ್ಟು ಆತನ ಜೊತೆ ವಿಹರಿಸಿ ಸಂತೋಷ ಪಡಲು ಆಗ್ರಹ ಪಡಿಸುವ ಪ್ರಣಯಭಿಕ್ಷೆಯ ಕೋರಿಕೆಯಿದೆ. ಆದರೆ ಇಲ್ಲಿ ಬಂದಿಶ ರಚನಾಕಾರ ತನ್ನ ಕಾವ್ಯನಾಮವನ್ನು ಬಳಸಿಲ್ಲ ಎಂಬುದನ್ನು ಗಮನಿಸಬೇಕು.   

 

                                ರಾಗಧಾನಿ ಧೃತಲಯ ತೀನ ತಾಲ      

                              ಮೋಹನ ಮಧುಬನೆಮೆ ಝೂಲೆ

                              ಸಂಗ ಪ್ಯಾರ ರಾಧಾ ಝೂಲೆ   

                              ಚೈತ ಋತುರಾಜ ಬನಮೆ ಝೂಲೆ  

                              ಕುಸುಮ ಸುಗಂಧಿತ  ಪವನ ಮೇ ಡೋಲೆ

                              ದೇಖ ನಾದ ಪಿಯಾ ಮನ ಹೋಲೆ

                             ಸಂಗ ಪ್ಯಾರಿ ರಾಧಾ ಝೂಲೆ

      ಇಲ್ಲಿ ಯಮುನಾ ತೀರ ವಿಹಾರಿ ಮೋಹನ ಮಧುವನದಲ್ಲಿ ತನ್ನ ಪ್ರಿಯೆ ರಾಧೆಯ ಜೊತೆಗೆ ಉಯ್ಯಾಲೆಯಲಿ ಕುಳಿತು ಜೀಕುತ್ತಿದ್ದಾನೆ. ಚೈತ್ರದ ವಸಂತ ಋತುರಾಜ ಆ ಮಧುವನದಲ್ಲಿ ಕುಸುಮಗಳ ಸುಗಂಧವನು ಹೊತ್ತು ತಂದ ಪವನನ ಪಲ್ಲಕ್ಕಿಯಲಿ ಕುಳಿತು ಜೀಕುತ್ತಿದ್ದಾನೆ ಇವುಗಳನ್ನು ನೋಡಿದ ನಾದಪಿಯ ಆನಂದ ಭರಿತನಾಗಿದ್ದಾನೆ. ಇಲ್ಲಿ ವಗ್ಗೇಯಕಾರ ತನ್ನ ಕಾವ್ಯನಾಮವನ್ನು ಬಳಸಿದ್ದು ಇದು ನಾದಪಿಯ ಕಾವ್ಯ ನಾಮದ ನಾರಾಯಣ ಪಂಡಿತರ ರಚಸಿದ ಬಂದಿಶ ಆಗಿದೆ.

                        ರಾಗ ಬಹಾರ, ವಿಲಂಬಿತ ಲಯ, ತೀನ ತಾಲ   

                        ರಸ ಬರಸಾಯೋರೆ ಉಮಂಗ ಭರ ಆಯೋ,

                        ಮನ ರಿಝಾವನ ಸೋ |

                        ಮಧ ಸುಗಂಧ ಲೇ ಋತುರಾಜ ರಂಗಾಯೋ

                        ಬನ ಘನ ಚಹುಂ ದಿಸ ಸಜಾವನಸೋ ||    

     ಬಳಲಿ ಬೆಂಡಾದ ಜನ ಸಮೂಹದ ಮನವನ್ನು ತಣಿಸಲು ಎಲ್ಲ ದಿಕ್ಕುಗಳಿಂದ ಮನವನ್ನುದ್ದೀಪಿಸುವ ಸುಗಂಧವನ್ನು ಹೊತ್ತು ಋತುರಾಜ ವಸಂತ ಬಂದಿದ್ದಾನೆ. ಸುಖಾನುಭವದ ಮಳೆಯನ್ನು ಸುರಿಸಿದ್ದಾನೆ ಎನ್ನುತ್ತಾನೆ ಕವಿ ಇಲ್ಲಿ. ಇಲ್ಲಿಯೂ ಸಹ ಬಂದಿಶ ರಚಿಸಿದ ರಚನೆಕಾರ ತನ್ನ ಕಾವ್ಯನಾಮವನ್ನು ಬಳಸಿಲ್ಲದುದನ್ನು ಗಮನಿಸಬೇಕು. ಇಲ್ಲಿ ಉಲ್ಲೇಖಿಸಲಾದ ಮೂರೂ ಬಂದಿಶಗಳಲ್ಲಿ ವಸಂತ ಋತುವನ್ನು ಋತುರಾಜನೆಂದು ಬಣ್ಣಿಸಲಾಗಿದೆ. ಎರಡನೆ ಬಂದಿಶನಲ್ಲಿ ಚೈತ ಎಂಬ ಪದ ಪ್ರಯೋಗ ವಿದ್ದು ಅದು ಚೈತ್ರ ಪದದ ಇನ್ನೊಂದು ರೂಪ ಎಂಬುದನ್ನು ಗಮನಿಸಬೇಕು. ಇಂತಹ ಅನೇಖ ಬಂದಿಶಗಳ ರಚನೆಯಾಗಿವೆ ಅವುಗಳನ್ನು ಗಾಯಕರು ಇಂದಿನ ವರೆಗೂ ಪ್ರಸ್ತುತ ಪಡಿಸುತ್ತಲೆ ಬಂದಿದ್ದಾರೆ. ಈಗ ಎಲ್ಲ ಘರಾನಾಗಳಲ್ಲಿ ಹಿರಯ ಗಾಯಕರು ಕಾಲಗತಿಚಕ್ರದಲ್ಲಿ ಸೇರೀ ಹೋಗಿದ್ದಾರೆ, ಅವರ ಶಿಷ್ಯ ಪರಂಪರೆಯ ನವ ಪೀಳಿಗೆ ಈ ಸಂಗೀತ ಯಾತ್ರೆಯನ್ನು ಮುಂದು ವರಿಸಿಕೊಂಡು ಹೋಗುತ್ತಿದೆ. ಇಲ್ಲಿ ಬಂದಿಶಗಳು ಮತ್ತು ಅವುಗಳ ಗಾಯನ ಪರಂಪರೆ ಅಜರಾಮರ ಅವು ಎಂದಿಗೂ ನಶಿಸಿ ಹೋಗುವುದಿಲ್ಲ.  ಹಿಂದಿನದನ್ನು ಗೌರವಿಸುವ ಮತ್ತು ಬೆಳೆಸಿಕೊಂಡು ಹೋಗುವ ಮನಸು ನಮ್ಮದಾಗಬೇಕು. ಋತು ವಸಂತ ತಪ್ಪದೆ ಪ್ರತಿ ವರ್ಷ ಬರುತ್ತಾನೆ ನೊಂದ ಜನ ಮನಕೆ ಸಾಂತ್ವನ ನೀಡುತ್ತಾನೆ. ಯಾಕೆಂದರೆ ಆತ ಚಿರ ಯೌವನಿಗ ಭೂಮಿ ಅಸ್ತಿತ್ವದಲ್ಲಿರುವ ವರೆಗೆ  ಆತ ಇದ್ದೇ ಇರುತ್ತಾನೆ. ಓ ವಸಂತ ! ನೀನು ಕಾಲಾತೀತ ನಿನಗೆ ನಮ್ಮೆಲ್ಲರ ಸ್ವಾಗತ.

                                           ***

 ಚಿತ್ರ ಕೃಪೆ : ಗೂಗಲ್ ಇಮೇಜಸ್.                                              

Rating
No votes yet

Comments

Submitted by ravindra n angadi Tue, 04/01/2014 - 15:16

ನಮಸ್ಕಾರ ಸರ್
ತುಂಬಾ ಚನ್ನಾಗಿದೆ ಸರ್ ನಿಮ್ಮ ಲೇಖನ ಗೀತ ಸಂಗೀತದಲಿ ವಂಸಂತ ಸುಂದರವಾಗಿ ಮೂಡಿ ಬಂದಿದೆ .

Submitted by H A Patil Thu, 04/03/2014 - 18:45

ಎಲ್ಲ ಸಂಪದಿಗರಿಗೆ ಯುಗಾದಿ ಹಬ್ಬದ ಶುಭಾಶಯಗಳು, ಈ ಲೇಖನಕ್ಕೆ ಪ್ರತಿಕ್ರಿಯೆ ಬರೆದ ರವೀಂದ್ರ ಎನ್ ಅಂಗಡಿ ಮತ್ತು ಕವಿ ನಾಗರಾಜ ರವರಿಗೆ ವಂದನೆಗಳು. ನನಗೆ ಈಗ 15 ದಿನಗಳ ಹಿಂದೆ ಎಡಗಣ್ಣಿಗೆ ಕ್ಯಾಟ್ ರ್ಯಾಕ್ಟ್ ಆಪರೇಶನ್ ಮಾಡಿಸಿಕೊಂಡಿದ್ದು ಸಂಪದದಲ್ಲಿ ಕ್ರಿಯಾತ್ಮಕವಾಗಿ ತೊಡಗಿಸಿ ಕೊಳ್ಳಲು ಆಗತ್ತಿಲ್ಲ, ಹೀಗಾಗಿ ಸಂಪದದ ಲೇಖನಗಳನ್ನು ಓದಲು ಮತ್ತು ಪ್ರತಿಕ್ರಿಯಿಸಲು ಆಗುತ್ತಿಲ್ಲ. ಈ ಲೇಖನ ನನ್ನ ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಮೊದಲೆ ಬರದು ಸಿದ್ಧ ಪಡಿಸಿದ್ದು ಸ್ನೇಹಿತರ ಸಹಾಯ ಪಡೆದು ಅವರ ಲ್ಯಾಪ್ ಟಾಪ್ ಮೂಲಕ ಸಂಪದದಲ್ಲಿ ಹಾಕಲಾಗಿದೆ.ಧನ್ಯವಾದಗಳು