ಕಥೆ: ಪರಿಭ್ರಮಣ..(15)

ಕಥೆ: ಪರಿಭ್ರಮಣ..(15)

(ಪರಿಭ್ರಮಣ..(14)ರ ಕೊಂಡಿ : http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... )

ತನಗಾದ ಆಘಾತದಿಂದ ಚೇತರಿಸಿಕೊಳ್ಳಲಾಗದೆ ಗರ ಬಡಿದವನ ಹಾಗೆ ಬೆಪ್ಪನಂತೆ ಒಬ್ಬನೆ ಅದೆಷ್ಟು ಹೊತ್ತು ನಿಂತಿದ್ದನೊ ಏನೊ ..ಶ್ರೀನಾಥನಿಗೆ ಆ ಗಳಿಗೆಯಲ್ಲಿ ಮುಂದೇನು ಮಾಡಬೇಕೆಂದು ತೋಚದಾ, ಪ್ರಜ್ಞೆಯಿರದೆಲ್ಲೊ ಪೂರ್ತಿ ಕಳುವಾಗಿ ಹೋದಂತೆನಿಸುವ ಅಯೋಮಯ ಸ್ಥಿತಿ.. ಅದೇನು, ಹೀಗೆ ಮತ್ತೆ ಮತ್ತೆ ಬೇಸ್ತು ಬಿದ್ದೆನಲ್ಲಾ ಎಂಬ ಕೀಳರಿಮೆಯೊ, ಈಜಲು ಬರದೆ ನೀರಲ್ಲಿ ಪೂರ್ತಿ ಮುಳುಗಿದ ಮೇಲೆ ಇನ್ನು ಚಳಿಯೇನು, ಮಳೆಯೇನು? ಎನ್ನುವ ಅಭಾವ ವೈರಾಗ್ಯವೊ, ಆಘಾತದ ದಿಗ್ಭ್ರಮೆಯಿಂದುದಿಸಿದ ಏನೂ ಮಾಡಲರಿಯದ ದಿಗ್ಮೂಢತೆಯ ಮೂರ್ಖತನವೊ - ತನಗಾದ ಏಟಿನ ಕುರಿತು, ಪೆಟ್ಟು ತಿಂದಂತೆ ವಿಲವಿಲ ಒದ್ದಾಡುತ್ತಿದ್ದ ಆತ್ಮಾಭಿಮಾನದ ಚಡಪಡಿಕೆಯ ಬಗ್ಗೆ ಚಿಂತಿಸದೆ, ಆ ಹೊತ್ತಿನಲ್ಲೂ 'ಅವಳಷ್ಟು ಪರಿಚಿತಳಂತೆ ಕಂಡಳಲ್ಲ? ಎಲ್ಲಿ ನೋಡಿದ್ದೆ ಅವಳನ್ನ ?' ಎಂದೆ ಆಲೋಚಿಸುತ್ತ ನಿಂತವನ ಮನಸ್ಥಿತಿಗೆ ಅವನಿಗೆ ವಿಚಿತ್ರ ಗೊಂದಲವಾಗುತ್ತಿತ್ತು. ಆ ಕ್ಲೇಷೋನ್ಮಾದದಲ್ಲೆ ಸುತ್ತ ಮುತ್ತ ಏನಾಗುತ್ತಿದೆಯೆಂಬ ಪರಿವೆಯಾಗಲಿ, ತಾನೊಬ್ಬನೆ ಒಂಟಿಯಾಗಿ ನಿರ್ಜನ ಪ್ರದೇಶದಲ್ಲಿ ನಿಂತಿಹನೆಂಬ ಅರಿಮೆಯಾಗಲಿ ಬಾಹ್ಯದಿಂದ್ರಿಯ ಪ್ರಜ್ಞೆಯನ್ನೆಚ್ಚರಿಸದೆ ವಿಚಿತ್ರ ವಿವಶಾವಸ್ಥೆಯಲ್ಲಿ ಸಿಲುಕಿಸಿದ್ದ ಕ್ಷಣ.. ಬೇರೆ ಹೊತ್ತಿನಲ್ಲಾಗಿದ್ದರೆ ಬಾಹ್ಯ ಪ್ರಚೋದನೆ, ಆಕಸ್ಮಿಕಗಳಿಗೆ ಸ್ವಾಭಾವಿಕವಾಗಿ, ಆಯಾಚಿತವಾಗಿ ಸ್ವಯಂಪ್ರೇರಣೆಯಿಂದ ಪ್ರತಿಕ್ರಿಯಿಸುತ್ತಿದ್ದ ಪ್ರಜ್ಞೆ, ಆ ಗಳಿಗೆಯಲ್ಲಿ ಎದುರಿನಿಂದೇನೊ ವೇಗದಿಂದ ಓಡಿ ಬರುತ್ತಿರುವಂತಿದೆಯಲ್ಲಾ ಎಂಬುದನ್ನೂ ಗಮನಿಸಲಿಲ್ಲ. ಕತ್ತಲು ತುಂಬಿದ್ದ ಎದುರು ಓಣಿಯನ್ನು ಭೇಧಿಸಿಕೊಂಡು ಯಾವುದೊ  ಪ್ರಾಣಿಯಾಕಾರವೊಂದು ದಢಕ್ಕನೆ ಮೈ ಮೇಲೆ ನೆಗೆಯುತ್ತಿದೆಯೆಂಬ ಅರಿವಾಗುವಷ್ಟರಲ್ಲಿ ಅದಾಗಲೆ ತನ್ನ ಮೇಲೆ ಬಿದ್ದಾಯಿತೆಂಬ ಗ್ರಹಿಕೆಯುದಿಸಿ ಪ್ರವಾಹಕ್ಕೆ ಸಿಕ್ಕ ಈಜಲು ಬರದವ ಮಥನ ಮಂಥನ ಪರಿವೆಯ ಹೊರತಾಗಿ ಸುತ್ತಲ ನೀರನ್ನೆ ಆಧಾರವಾಗಿ ಹಿಡಿಯಲೆತ್ನಿಸುವಂತೆ,  ಕೈಯೆರಡನ್ನು ಮುಖಕ್ಕೆ ಅಡ್ಡ ಹಿಡಿದು ತಲೆ ಬಗ್ಗಿಸಿ ಕುಸಿದು ತಪ್ಪಿಸುವ ಪ್ರಯತ್ನ ಮಾಡಿದ್ದ. ಆದರೆ ಆ ಕೊನೆಗಳಿಗೆಯ ಸರಿಗಟ್ಟಲಾಗದ ವೇಗದಭಾವಕ್ಕೊ, ಸಮಯ ಸಾಲದ ಕಾರಣಕ್ಕೊ - ಆ ಯತ್ನದಲ್ಲಿ ಸಾವರಿಸಿಕೊಂಡು ನಿಲ್ಲಲಾಗದೆ ತೊಡರಿ ಸಮತೋಲನ ತಪ್ಪಿ ಹೋಗಿ ಮುಖ ಮುಚ್ಚಿಕೊಂಡಿದ್ದ ಹಸ್ತದ ಮೇಲೆ ಪರಚಿಕೊಂಡು ಹೋದ ಉಗುರುಗಳ ಮೊನೆಚಷ್ಟೆ ಅನುಭವ ಗಮ್ಯವಾಗಿ, ಆ ಘಟಿತಕ್ಕೆ ಬೆಚ್ಚಿ ಹಿಮ್ಮುಖವಾಗಿ ಕೆಳಗುರುಳಿಬಿದ್ದೆನೆಂಬ ಅನುಭೂತಿಯ ಅರಿವು ಶ್ರೀನಾಥನಿಗೆ ಆಗಿದ್ದು ಅವನು ಬಿದ್ದ ಜಾಗದ ಸುತ್ತ ಮುದುರಿ ಬಿದ್ದಿದ್ದ ರಟ್ಟಿನ ಪೆಟ್ಟಿಗೆಗಳ ತೆರೆದ ತುದಿಗಳು ಮೈ ಚುಚ್ಚಿದಂತಾದಾಗಲೆ. 

ಹೆದರಿದ್ದವನ ಮೇಲೆ ಕಪ್ಪೆಯೆಸೆದಂತೆ ಧೃತಿಗೆಡಿಸಿ, ಮೈಯೆಲ್ಲಾ ಕಂಪಿಸುವಂತೆ ಮಾಡಿ ಎದೆಯೊಳಗಿನ ಡವ ಡವ ಶಬ್ದವನ್ನು ಅವನಿಗೆ ಸ್ಪಷ್ಟವಾಗಿ ಕೇಳುವಂತೆ ಮಾಡಿದ ಆ ಆಘಾತಕರ ಆಕಸ್ಮಿಕದಿಂದ ಚೇತರಿಸಿಕೊಳ್ಳಲೆ ಒದರೆಕ್ಷಣ ಹಿಡಿದಿತ್ತು. ನಡುಗುತ್ತಿದ್ದ ತನುಮನಗಳನ್ನು ತುಸು ತಹಬಂದಿಗೆ ತಂದು ಏನಾಗುತ್ತಿದೆಯೆಂಬುದನ್ನು ಗ್ರಹಿಸುವ ಮೊದಲ ಯತ್ನದಲ್ಲಿ ಸುತ್ತಲೂ ಕಣ್ಣಾಡಿಸಿದಾಗ ಕಂಡಿತ್ತು ಓಡಿ ಹೋಗುತ್ತಿದ್ದ ಒಂದು ಬಿಳಿ ದಢೂತಿ ಬೆಕ್ಕು. ಸುತ್ತಲಿನ ಪೆಟ್ಟಿಗೆಗಳನ್ಹಿಡಿದೆ ಹಾಗೂ ಹೀಗೂ ಸಾವರಿಸಿಕೊಳ್ಳುತ್ತ ಮೇಲೆದ್ದು ನೋಡಿದರೆ ಮೂಲೆಯಿಂದ ಬೆಕ್ಕನ್ನು ಓಡಿಸಿಕೊಂಡು ಬಂದಿದ್ದ ಇನ್ನೊಂದು ದೊಡ್ಡ ಕಪ್ಪು ಬೆಕ್ಕೊಂದು ಅದೇ ದಾರಿಗಡ್ಡವಾಗಿ ನಿಂತಿದ್ದವನ ಮೇಲೆ ಎಗರಿ  ಬೀಳುವ ಹಾಗೆ, ಎದುರಿನ ರಟ್ಟಿನ ಡಬ್ಬವೊಂದರ ಮೇಲೆ ಕವುಚಿಕೊಂಡು ಕುಳಿತು ಗಾಬರಿಯಿಂದ ಇವನನ್ನೆ ದಿಟ್ಟಿಸಿ ನೋಡುತ್ತಿತ್ತು, ಬಹುಶಃ ಇವನ ಪ್ರತಿಕ್ರಿಯೆಯೇನೆಂದು ಗಮನಿಸುತ್ತ.  ತದೇಕಚಿತ್ತದಿಂದ ಇವನನ್ನೆ ನೋಡುತ್ತಿದ್ದ ಆ ದಢೂತಿ ಬೆಕ್ಕಿನ ಎರಡು ಕಣ್ಣುಗಳನ್ನು ನೋಡುತ್ತಿದ್ದಂತೆ ಶ್ರೀನಾಥನಿಗೆ ಆ ಗಳಿಗೆಯಲ್ಲೂ ಏನೊ ಮಿಂಚು ಹೊಳೆದಂತಾಗಿ, ಮತ್ತೆ ಆ ಯುವತಿಯ ಪರಿಚಿತ ಕಣ್ಣುಗಳೆ ಕಣ್ಮುಂದೆ ಬಂದು ನಿಂತಂತಾಯ್ತು. ಏನೊ ಅದಮ್ಯ ಹೋಲಿಕೆ, ಸುಪರಿಚಿತತೆಯ ಹುಳು ಮತ್ತೆ ತಲೆಗೆ ಹೊಕ್ಕು ಕೊರೆಯಲಾರಂಭಿಸುತ್ತಿದ್ದಂತೆ, ನೆನಪಿನ ಪದರಗಳನ್ನೊದ್ದು ಯಾವುದೊ ಮೂಲೆಯಿಂದ ತಟ್ಟನೆ ಅನಾವರಣಗೊಂಡ ಜ್ಞಾಪಕಶಕ್ತಿಯ ಎಳೆಗಳು ಆ ಕಣ್ಣುಗಳನ್ನು ನೋಡಿದ್ದೆಲ್ಲೆಂದು ತಟ್ಟನೆ ನೆನಪಾಗುವಂತೆ ಮಾಡಿಬಿಟ್ಟವು..!

ಭೀತಿಯಿಂದ ಅದುರುತ್ತ ಭಯದಿಂದ ಕಂಪಿಸುತ್ತ ಅಂಜಿಕೆ, ಆತಂಕದೊಂದಿಗೆ ರಾತ್ರಿಯ ಹೊತ್ತಿನಲ್ಲಿ ನೋಡಿದ್ದ ಭಯಾನಕ ಚಿತ್ರ 'ದಿ ಐ' ನ ನಾಯಕಿಯ ಮುಖ ಚಹರೆಯಲ್ಲಿದ್ದುದು ಅದೇ ಕಣ್ಣುಗಳು; ಯಥಾವತ್ತಾಗಿ ನಾಯಕಿಯ ಕಣ್ಣಿನ ನಕಲಿಸಿದ ಪ್ರತಿರೂಪದಂತೆ ಇದ್ದವು ಆ ಯುವತಿಯ ಕಣ್ಣುಗಳು...! ತೀವ್ರ ಗಾಢತೆಯ ಭಾವಕಂಪನದೊಂದಿಗೆ ನೋಡಿದ ಚಿತ್ರವಾದ ಕಾರಣ ಆ ನಾಯಕಿಯ ಗಾತ್ರ, ಎತ್ತರ, ಮುಖ ಚಹರೆ ಮನಸಿನಲ್ಲಿ ಅಚ್ಚೊತ್ತಿದಂತೆ ನೆಲೆಸಿಬಿಟ್ಟಿತ್ತು ಶ್ರೀನಾಥನಿಗೆ. ಅದರಲ್ಲೂ ಆ ಚಿತ್ರ ಕಣ್ಣಿಗೆ ಸಂಬಂಧಪಟ್ಟಿದ್ದ ಕಾರಣ ಆ ನಾಯಕಿಯ ಕಣ್ಣಿನ ಚಿತ್ರವೂ ಅಳಿಸಲಾಗದ ಹಾಗೆ ನೆಲೆ ನಿಂತುಬಿಟ್ಟಿತ್ತು. ಇವನನ್ನು ಏಮಾರಿಸಿದ ಆ ತರುಣಿ, ಹೆಚ್ಚುಕಡಿಮೆ ಅದೇ ಗಾತ್ರ ಎತ್ತರದ ಮುಖ ಚಹರೆಯವಳಾಗಿದ್ದ ಕಾರಣ ತೀರಾ ಸುಪರಿಚಿತ ಭಾವನೆ ಮೂಡಿ ಬರಲು ಕಾರಣವಾಗಿತ್ತೆಂದು ಈಗ ಹೊಳೆದಿತ್ತು. ದಿಗಿಲಿನಿಂದ ಅಧೀರನಾಗಿ ಚಡಪಡಿಸುವ ಆ ಹೊತ್ತಲ್ಲೂ 'ಸದ್ಯ, ಆ ಸುಪರಿಚಿತತೆಯ ಒಗಟು ಬಗೆಹರಿಯಿತಲ್ಲ' ಎಂದು ನಿರಾಳವಾದಾಗ ಅವನಿಗೆ ಅಚ್ಚರಿಯಾಗಿತ್ತು. ಈ ಮನಸಿನ ವ್ಯಾಪಾರವೆ ವಿಚಿತ್ರವೆಂದು ಅಂದುಕೊಳ್ಳುತ್ತಲೆ, ಯಾಕೊ ಈ ದಿನ ಎದ್ದ ಗಳಿಗೆಯೆ ಸರಿಯಿಲ್ಲ ; ಪರ್ಸು ಕಳೆದುಕೊಂಡು ದಾರಿಗಾಣದೆ ನಿಲ್ಲುವಂತಾಯ್ತು ಎಂದು ಪರಿತಪಿಸುತಿದ್ದ ಹೊತ್ತಲೆ ಹಾಳು ಬೆಕ್ಕು ಮೇಲೆ ಬಿದ್ದು ಹೆದರಿಸಿ ಹೋಯ್ತು.. ಬರಿ ಬೆಕ್ಕಡ್ಡವಾದರೆ ಅಪಶಕುನದ ಮಾತಾಡುತ್ತಾರೆ..ಇನ್ನು ಬೆಕ್ಕು ಮೈ ಮೇಲೆ ಬಿದ್ದೊದ್ದಾಡಿ ಹೋದದ್ದಕ್ಕೆ ಏನೇನು ಗತಿ ಕಾದಿದೆಯೊ ? ಎಂದು ಹಪಹಪಿಸುತ್ತ ಮೇಲೆದ್ದ ಶ್ರೀನಾಥ. ಮೇಲೇಳುತ್ತ, 'ಈ ಬೆಕ್ಕಿನ ಪ್ರಕ್ರಿಯೆಯಿಂದ ತಾನೆ ಅವಳ ಸುಪರಿಚಿತ ಮುಖದ ಭಾವನೆಯ ಹಿಂದಿನ ಗುಟ್ಟು ಬಯಲಾದದ್ದು? ಅದನ್ನು ಅಪಶಕುನವೆನ್ನುವುದು ಹೇಗೆ ?' ಎಂದುಕೊಳ್ಳುತ್ತಲೆ ಅಲ್ಲಿಂದ ಹೊರಗೆ ಹೋಗಲಿಕ್ಕೆ ಸಾಧ್ಯವಿದ್ದ ಒಂದೆ ಒಂದು ಕಿರಿದಾಗಿದ್ದ ಬಾಗಿಲಿನತ್ತ ಹೆಜ್ಜೆ ಹಾಕತೊಡಗಿದ, 'ಜೇಬಿನಲ್ಲಿರುವ ಬರಿ ಐವತ್ತು ಬಾತಿನಲ್ಲಿ ಮನೆ ಸೇರುವುದು ಹೇಗೆ ?' ಎಂದು ಚಿಂತಿಸುತ್ತ. ಆ ಚಿಂತೆಯಲ್ಲೆ ತಲೆ ತಗ್ಗಿಸಿ ಬಾಗಿಲು ದಾಟಿ ಹೊರಬಂದವನಿಗೆ ಕೆಳಗೇನೊ ತನ್ನ ಪರ್ಸಿನಂತದ್ದೆ ವಸ್ತು ಕಂಡಂತಾಗಿ, ನೆಲದತ್ತ ಬಾಗಿ ಕೈಗೆತ್ತಿಕೊಂಡರೆ - ಅದು ಅವನ ಪರ್ಸೆ ಆಗಿತ್ತು !

ಆತುರಾತುರವಾಗಿ ಬಾಚೆತ್ತಿಕೊಂಡು ಪರ್ಸು ಬಿಡಿಸಿ ನೋಡಿದರೆ - ನಿರೀಕ್ಷಿಸಿದ್ದಂತೆ ಇಟ್ಟಿದ್ದ ಹಣವೆಲ್ಲ ಪೂರ್ತಿ ಮಾಯವಾಗಿತ್ತು - ಒಂದೆ ಒಂದು ಐನೂರರ ನೋಟಿನ ಹೊರತಾಗಿ. ಆದರೆ, ಹಣದ ಹೊರತಾಗಿ ಮಿಕ್ಕೆಲ್ಲಾ ಕಾರ್ಡು, ಕಾಗದ, ಪೋಟೊ ಇತ್ಯಾದಿಗಳು ಮೊದಲು ಹೇಗೆ ಇಟ್ಟಿತ್ತೊ ಹಾಗೆ ಇತ್ತು.. ಪರ್ಸಿನ ಹಣ ತೆಗೆಯುವಾಗಲೂ ಅದಾವ ಮಾನವೀಯ ಅಂತಃಕರಣ ಭಾಧಿಸಿತ್ತೊ ಏನೊ, ಐನೂರರ ನೋಟೊಂದನ್ನು ಮಾತ್ರ ಅಲ್ಲೆ ಹಾಗೆ ಬಿಟ್ಟಿದ್ದಳು. ಹೊರ ಹೋಗಲಿಕ್ಕೆ ಇದೊಂದೆ ಬಾಗಿಲು ತೆರೆದಿರುವ ಕಾರಣ ಆ ಮೂಲಕವೆ ಬರುವನೆಂದು ಊಹಿಸಿ ಹಣ ಮಾತ್ರ ತೆಗೆದುಕೊಂಡು ಪರ್ಸನ್ನು ಅಲ್ಲೆ ಎಸೆದು ಹೋಗಿದ್ದಳು ಆ ಚತುರ ಯುವತಿ. ಶ್ರೀನಾಥನಲ್ಲದೆ ಬೇರಾರಾದರೂ ಆ ಪರ್ಸನ್ನು ತೆಗೆದುಕೊಂಡರೆ? ಎನ್ನುವ ಸಂಶಯ ಕಾಡಿರಬಹುದಿದ್ದರೂ, ಬಹುಶಃ ದೂರದಲೆಲ್ಲೊ ಅವಿತುಕೊಂಡು ನೋಡುತ್ತಲೂ ಇರಬಹುದು, ಯಾರ ಕೈಗೆ ಸಿಕ್ಕೀತೆಂದು. ಹಣ ಹೋದರೂ ಮಿಕ್ಕೆಲ್ಲ ಕ್ಷೇಮವಾಗಿ - ಅದೂ ಐನೂರರ ನೋಟಿನೊಂದಿಗೆ ವಾಪಸ್ಸು ಸಿಕ್ಕಿದ ಆ ದಿನದ ಅದೃಷ್ಟ ತೀರಾ ಖೋಟ ಎಂದೇನೂ ಅನಿಸಲಿಲ್ಲ ಶ್ರೀನಾಥನಿಗೆ. ಬೆಕ್ಕಿನ ಅನಿರೀಕ್ಷಿತ ಧಾಳಿ ಮತ್ತು ಅಡ್ದ ಬರುವಿಕೆಯ ಪರಿಣಾಮ ಅವನಂದುಕೊಂಡಷ್ಟು ಕೆಟ್ಟದಾಗಿರಲಿಕ್ಕಿಲ್ಲ ಎಂದೂ ಅನಿಸಿತು. ಹಾಗೆ ಯೋಚನೆಯ ನಡುವಲ್ಲೆ ನಡೆದಿದ್ದಾಗ ಟ್ರೈನು ಸ್ಟೇಷನ್ನಿನ ದ್ವಾರ ತಲುಪಿದ ಅರಿವಾಗಿ ಮುಂದೇನು ಮಾಡುವುದೆಂಬ ಆಲೋಚನೆಯಲ್ಲಿ ಅರೆಗಳಿಗೆ ಹಾಗೆ ನಿಂತ. ಸರಿ ಈ ಮೊದಲೆ ಅಂದುಕೊಳ್ಳುತ್ತಿದ್ದ ಹಾಗೆ ಆ ನ್ಯಾಶನಲ್ ಮಾನ್ಯುಮೆಂಟಿನತ್ತವಾದರೂ ಹೋಗಿ ಬರೋಣವೆಂದು ನಿರ್ಧರಿಸಿ, ಪಕ್ಕದಲ್ಲೆ ಇದ್ದ ಮೇಷಿನಿನಲ್ಲಿ ಜೇಬಿನಲ್ಲಳುದುಳುದಿದ್ದ ಚಿಲ್ಲರೆಯನ್ನೆಲ್ಲ ಕೂಡಿಸಿ ಹಾಕಿ ಟ್ರೈನು ಟಿಕೇಟು ಖರೀದಿಸಿದ. ಐದು ನಿಮಿಷ ಕಾದ ಮೇಲೆ  ಬಂದ ಆ ದಿಕ್ಕಿನತ್ತ ಹೋಗುವ ಟ್ರೈನಿನ ಒಳಗೆ ತೂರಿ ಜಾಗ ಮಾಡಿಕೊಂಡು ನಿಂತಾಗ, ಮತ್ತೆ ಆ ದಿನದ ಘಟನೆಗಳೆಲ್ಲ ತಲೆಯಲ್ಲಿ ಪ್ರತಿಫಲಿಸತೊಡಗಿ ಮತ್ತದೆ ಚಾಲಾಕಿ ಯುವತಿಯ ಕಣ್ಣುಗಳು ಕಣ್ಮುಂದೆ ನಿಂತ ಹಾಗೆ, ಪಕ್ಕದಲ್ಲೆ ಜತೆಯಲ್ಲೆ ಪಯಣಿಸಿದ ಹಾಗೆ ಫೀಲಾಗುತ್ತಿದ್ದ ಹೊತ್ತಿನಲ್ಲೆ ಅಷ್ಟು ಸುಲಭದಲ್ಲಿ ಬಲೆಗೆ ಸಿಲುಕಿ ಬೇಸ್ತು ಬಿದ್ದ ಕಹಿ ಭಾವನೆ ಮತ್ತೆ ತೇಲಿ ಬಂದಾಗ - ಅವನಿಗೆ ಬಹುಶಃ ಅದು ಅವನ ಜೀವಮಾನದಲ್ಲನುಭವಿಸಿದ 'ಅತ್ಯಂತ ತುಟ್ಟಿಯ ಅಪ್ಪುಗೆಯ ಸ್ಪರ್ಶ' ಎಂದನಿಸದೆ ಇರಲಿಲ್ಲ...

ಹಾಗೆ ಟ್ರೈನಿನಲ್ಲಿ ಕಂಬಿಯೊಂದನ್ನು ಹಿಡಿದು ನಿಂತಿದ್ದ ಶ್ರೀನಾಥ ಮುಂದಿನ ಯಾವ ಸ್ಟೇಶನ್ನಿನ್ನಲ್ಲಿ ಇಳಿಯಬೇಕೆಂದು ತಿಳಿದುಕೊಳ್ಳಲು ಟ್ರೈನೊಳಗೆ ಹಾಕಿದ್ದ ಬೋರ್ಡಿನತ್ತ ಕಣ್ಣು ಹಾಯಿಸಿದರೆ ಅಲ್ಲಿ ನ್ಯಾಶನಲ್ ಮಾನ್ಯುಮೆಂಟ್ ಅನ್ನುವ ಹೆಸರಿನ ಸ್ಟೇಷನ್ನೆ ಕಾಣಿಸಲಿಲ್ಲ.. ಅರೆರೆ ತಪ್ಪು ಗಾಡಿಯೇನಾದರೂ ಏರಿಬಿಟ್ಟೆನೇನೊ ಎಂಬ ಆತಂಕದಲ್ಲಿ ಮತ್ತೆ ಗಮನವಿಟ್ಟು ನೋಡಿದಾಗ ಅಲ್ಲಿ 'ವಿಕ್ಟರಿ ಮಾನ್ಯುಮೆಂಟ್' ಎಂಬ ಹೆಸರು ಕಣ್ಣಿಗೆ ಬಿದ್ದಾಗ ತಾನೆ ತಪ್ಪಾಗಿ ಹೆಸರು ನೆನಪಿಟ್ಟುಕೊಂಡಿದುದರ ಅರಿವಾಗಿ ತುಟಿ ಕಚ್ಚಿಕೊಂಡ... ಈ ಜಾಗ ರಾಷ್ಟ್ರೀಯ ಸ್ಮಾರಕ ಅನ್ನುವುದಕ್ಕಿಂತ ಮಿಲಿಟರಿ ಸ್ಮಾರಕವೆನ್ನುವುದೆ ಸೂಕ್ತವಾಗಿತ್ತು...1945 ರ ಆಸುಪಾಸಿನಲ್ಲಿ ಆಗಿನ ಥಾಯ್ ಆಡಳಿತಕ್ಕೂ ಫ್ರೆಂಚರಿಗು ನಡುವೆ ನಡೆದ ಕದನದ ಗೆಲುವಿನ ಸ್ಮರಣಾರ್ಥ ತುರಾತುರಿಯಲ್ಲಿ ಕಟ್ಟಿಸಿದ ಸ್ಮಾರಕವಾಗಿದ್ದರೂ, ವಿಶ್ವ ಮಹಾಯುದ್ಧದ ತರುವಾಯದ ಮಿತ್ರ ಪಕ್ಷಗಳ ಜಯದಿಂದಾಗಿ ಮತ್ತೆ ಎಲ್ಲವನ್ನು ಫ್ರೆಂಚರಿಗೆ ಹಿಂದಿರುಗಿಸಬೇಕಾಗಿ ಬಂದಿತ್ತು. ಮಸಲ, ಆ ಯುದ್ಧದ ಗೆಲುವೇನೂ ನಿರ್ಣಾಯಕವಾದ ಗೆಲುವಾಗಿರಲಿಲ್ಲ. ಯುದ್ಧದ ಪರಿಣಾಮ ಯಾರೂ ಸೋಲದ, ಯಾರೂ ಗೆಲ್ಲದ ಎಡಬಿಡಂಗಿ ಸ್ಥಿತಿಯಲ್ಲಿದ್ದಾಗ ಜಪಾನಿನ ಮಧ್ಯಸ್ಥಿಕೆಯಲ್ಲಿ ನಡೆದ ಅರೆಬರೆ ಒಪ್ಪಂದ, ಎರಡೂ ಕಡೆಯಲ್ಲೂ ಅತೃಪ್ತಿಯ ತುಣುಕುಳಿಸಿದ ಸಂಧರ್ಭವಾಗಿತ್ತು. ಆದರೂ, ಮಿಲಿಟೆರಿ ಆಡಳಿತ ಆತುರಾತುರವಾಗಿ ತಾನು ವಾಪಸ್ಸು ಗಳಿಸಿದ್ದ ಭಾಗಗಳನ್ನು ನೆಪವಾಗಿರಿಸಿಕೊಂಡು ಕೆಲವೆ ತಿಂಗಳುಗಳಲ್ಲಿ ಈ ಸ್ಮಾರಕ ನಿರ್ಮಿಸಿತ್ತು. ಆದರೆ ಮಹಾಯುದ್ಧಾ ನಂತರ ಗಳಿಸಿದ್ದೆಲ್ಲವನ್ನು ಮತ್ತೆ ಹಿಂತಿರುಗಿಸಬೇಕಾಗಿ ಬಂದಾಗ, ಈ ಸ್ಮಾರಕದ ಮೂಲೋದ್ದೇಶವೆ ಕಸಿವಿಸಿಯ ವಸ್ತುವಾದಂತಾಗಿ, ಮುಜುಗರಕ್ಕೆ ಕಾರಣವಾಗಿತ್ತು. ಹೀಗಾಗಿ ಈ ಸ್ಮಾರಕಕ್ಕಿಂತ, ಮತ್ತೊಂದೆಡೆಯಿರುವ ಡೆಮಾಕ್ರಸಿ ಮಾನ್ಯುಮೆಂಟನ್ನೆ ರಾಷ್ಟ್ರೀಯ ಸ್ಮಾರಕದಂತೆ ಪರಿಗಣಿಸಿದವರೆ ಹೆಚ್ಚು. ಆದರೂ ಈ ವಿಕ್ಟರಿ ಮಾನ್ಯುಮೆಂಟು ಸ್ಮಾರಕವಾಗಿ ಹಾಗೆಯೆ ಉಳಿದುಕೊಳ್ಳಲು ಕಾರಣ - ಅದಕ್ಕೆ ಸೇರಿದಂತೆಯೆ ಇದ್ದ ಅದೇ ಹೆಸರಿನ ಟ್ರೈನ್ ಸ್ಟೇಷನ್ ಮತ್ತು ಜನ ನಿಭಿಢತೆಯ ವಾತಾವರಣದೊಂದಿಗೆ ಒಂದು ಸ್ಥಳೀಯ ಪ್ರವಾಸಿ ತಾಣವಾಗಿ ಚಲಾವಣೆಯಲಿದ್ದ ನೆಪ. ಅದರ ಹೊರತಾಗಿ ಅದನ್ನು ಕಟ್ಟಲು ಮೂಲ ಕಾರಣವಾದ ಭಾಗಗಳೆ ಮರಳಿದ ನೆಲಗಳಾಗಿ ಹಿಂದಕ್ಕೆ ಹೋದ ಮೇಲೆ , ಅಲ್ಲಿ ಮತ್ತಾವ ಭಾವನಾತ್ಮಕ ಸಂಬಂಧವೂ ಇರಲು ಸಾಧ್ಯವಿರಲಿಲ್ಲ. ಆದರೂ ಸಾಂಕೇತಿಕವಾಗಿ ಅದು ಜನ ಸಾಮಾನ್ಯರ ನಡುವೆ ಬಳಕೆಯಲಿ ಉಳಿದುಕೊಂಡುಬಿಟ್ಟಿತ್ತು. ಶ್ರೀನಾಥ ಸುಮಾರು ಬಾರಿ ಆ ಮಾರ್ಗ ಮುಖೇನ ಓಡಾಡುತಿದ್ದರೂ ಎಂದೂ ಹತ್ತಿರಕ್ಕೆ ಹೋಗಿ ನೋಡಿರಲಿಲ್ಲ. ಇಂದು ಬೆಳ್ಳಂಬೆಳಗ್ಗೆಯೆ ಆದ ಆಘಾತಕರ ಅನುಭವದ ಹಿನ್ನಲೆಯಲ್ಲಿ ಯಾಕೊ ಮನೆಗೆ ವಾಪಸ್ಸು ಹೋಗಲೇ ಮನಸಾಗದೆ, ಬೇರೆಲ್ಲಿಗಾದರೂ ಹೋಗಬೇಕೆನಿಸಿದ್ದರಿಂದ ಈ ಮಾರ್ಗ ಹಿಡಿದಿದ್ದ - ಸುಮ್ಮನೆ ಸುತ್ತಾಡಿಕೊಂಡು ಬಂದ ಹಾಗೆ ಆದೀತೂ ಎಂದು. ಎಂದಿನಂತೆ ಸ್ಟೇಶನ್ ತಲುಪಿ ಕೆಳಗಿಳಿದು ಆ ಪರಿಚಿತವಲ್ಲದ ಹಾದಿಯಲ್ಲೆ ಅಲ್ಲಲ್ಲಿ ತಗುಲಿ ಹಾಕಿದ್ದ ಬೋರ್ಡುಗಳನ್ನು ನೋಡಿಕೊಂಡು ನಡೆಯತೊಡಗಿದ.

ಎಂದಿನಂತೆ ಹಾದು ಹೋಗುವ ದಾರಿಯಲ್ಲಿ ಸಾಲು ಸಾಲು ತಾತ್ಕಾಲಿಕ ಮಳಿಗೆಗಳು ಗುಡಾರ ಹಾಕಿ ತಮ್ಮ ವ್ಯಾಪಾರ ಆರಂಭಿಸಿಕೊಂಡಿದ್ದವು...ಈ ರಜೆಯ ದಿನಗಳಲ್ಲಿ ಮಾಮೂಲಿ ಅಂಗಡಿಗಳು ಮುಚ್ಚಿರುವ ಹೊತ್ತಿನಲ್ಲಿ ಇವರದೆ ಸಾಮ್ರಾಜ್ಯ... ಅಲ್ಲಲ್ಲಿ ಕೂತು ಖರೀದಿಯ ಚರ್ಚೆ, ಚೌಕಾಸಿ ಮಾಡುತ್ತಿರುವ ಕೆಲವು ವಿದೇಶೀ ಪ್ರವಾಸಿಗರೂ ಕಾಣಿಸುತ್ತಿದ್ದರು. 'ಚೌಕಾಸಿ ವ್ಯಾಪಾರ' ಬ್ಯಾಂಕಾಕಿನ ಒಂದು ವಿಶಿಷ್ಠ ಪ್ರತ್ಯೇಕತೆಯೆ ಎಂದು ಹೇಳಬೇಕು... ಪರಸ್ಪರ ಭಾಷೆ ಬಲ್ಲದ ಎರಡು ವ್ಯಕ್ತಿತ್ವಗಳು ಮಾಡುವ ವ್ಯಾಪಾರದ ಚರ್ಚೆ, ಸಂವಹನದ ರೀತಿ ಕೆಲವೊಮ್ಮೆ ತಮಾಷೆಯಾಗಿದ್ದರೆ ಮತ್ತೆ ಕೆಲವೊಮ್ಮೆ ತಲೆ ಚಿಟ್ಟು ಹಿಡಿಸಿಬಿಡುತ್ತಿದ್ದವು.. ಆದರೆ ಮುಕ್ಕಾಲು ಪಾಲು ಪ್ರವಾಸಿಗರು ಮತ್ತು ಸ್ಥಳೀಯರು ಅನುಕರಿಸುವ 'ಕ್ಯಾಲುಕ್ಯುಲೇಟರ್ ಚೌಕಾಸಿ' ಮಾತ್ರ ಸಂವಹನದ ಅತ್ಯುತ್ತಮ ಮಾಧ್ಯಮದ ರೀತಿಯಲ್ಲಿ ಬಳಕೆಯಲ್ಲಿತ್ತು.. ಬರಿ ದೈಹಿಕ ಚರ್ಯೆ, ಸಂಜ್ಞೆ ಮತ್ತು ಸಂಕೇತಗಳ ಮೂಲಕವಷ್ಟೆ ನಡೆಯುತ್ತಿದ್ದ ಈ ಪ್ರಕ್ರಿಯೆಗೆ ಮಾತಿನ ರೂಪ ಕೊಡುತ್ತಿದ್ದ ಏಕೈಕ ಆಯುಧವಾಗಿತ್ತು ಈ ಕ್ಯಾಲುಕುಲೇಟರ್. ಗಿರಾಕಿ ತನಗೆ ಬೇಕಾದ ವಸ್ತುವಿನತ್ತ ಕೈ ತೋರಿಸುವುದೊ, ಕೈಗೆತ್ತಿಕೊಳ್ಳುವುದೊ ಮಾಡಿದರೆ , ಮಾರುವವ ಕ್ಯಾಲುಕುಲೇಟರ್ ಚಾಚಿ ಅದರ ಬೆಲೆಯನ್ನು ಒತ್ತಿ ಪರದೆಯ ಮೇಲೆ ಪ್ರಸ್ತಾಪಿಸುವುದು...ಗಿರಾಕಿ ಅದನ್ನು ನೋಡಿ ತುಟಿ ಬಿಗಿಸಿ ತಲೆಯಾಡಿಸಿತ್ತ ಹೆಚ್ಚು ಕಡಿಮೆ ಅರ್ಧಕ್ಕರ್ಧ ಬೆಲೆಯ ಅಂದಾಜಿನಲ್ಲಿ ತನ್ನ ಬೆಲೆಯನ್ನು ಅದೇ ಕ್ಯಾಲುಕುಲೇಟರಿಗೆ ರವಾನಿಸುವುದು...ಹೀಗೆ ಇಬ್ಬರೂ ತಲೆಯಾಡಿಸಿಕೊಂಡೆ ತಾವು ಒಪ್ಪುವ ಬೆಲೆ ತಲುಪುವ ತನಕ, ಈ ಕ್ಯಾಲುಕುಲೇಟರಿನ ಚೆಲ್ಲಾಟ ಸಾಗುತ್ತಿತ್ತು. ಇಬ್ಬರೂ ಕೊನೆಗೊಂದು ಒಪ್ಪಂದಕ್ಕೆ ಬಂದರೆ - ಅವ ದುಡ್ಡೆತ್ತಿ ಕೊಟ್ಟ, ಇವ ಪೊಟ್ಟಣ ಕಟ್ಟಿಕೊಟ್ಟ. ಮಾತಿಲ್ಲಾ ಕಥೆಯಿಲ್ಲ - ಬರಿ ಮುಗುಳ್ನಗೆಯ ವಿನಿಮಯದಲ್ಲೆ ಇಡೀ ವ್ಯವಹಾರ ಮುಕ್ತಾಯವಾಗಿರುತ್ತಿತ್ತು. ಈಗಲ್ಲೂ ನಡೆಯುತ್ತಿದ್ದ ಅದೇ ರೀತಿಯ ಆ ವ್ಯಾಪಾರದ ತುಣುಕುಗಳನ್ನೆ ನೋಡುತ್ತ ಮುಂದೆ ಸಾಗಿದ್ದ ಶ್ರೀನಾಥ. 

ಆ ದಿನವೇಕೊ ವಿಕ್ಟರಿ ಮಾನ್ಯುಮೆಂಟಿನ ಬಡಾವಣೆಯಲ್ಲಿ ಮೋಡ ಮುಸುಕಿದ ವಾತಾವರಣ. ಎತ್ತರದ ಹಿನ್ನಲೆಯಲ್ಲಿ , ಇಡೀ ತಾಣವೆ ಮೋಡಗಳ ಬಗೆಬಗೆಯಾಕಾರದ ಬೆಡಗು ಬಿನ್ನಾಣಗಳ ಸಂತೆಯಾಗಿ, ತಂಪು ವಾತಾವರಣದ ಪರಿಸರವನ್ನು ಅನಾವರಣಗೊಳಿಸಿತ್ತು. ಅದಕ್ಕೆ ಮತ್ತಷ್ಟು ಮೆರುಗೀಯುವಂತೆ, ಮೋಡದ ಸೆರಗಿನಲ್ಲಿ ಬಂಧಿಯಾಗಿದ್ದ ಸೂರ್ಯಕಿರಣದ ಪ್ರಖರತೆಯ ಸಾರವೆಲ್ಲ, ಸ್ಪಂಜಿನಂತೆ ಹೀರಿಕೊಂಡ ಆ ಮೋಡಗಳೊಳಗೆ ಹಂಚಿ ಹೋಗಿ, ಆ ಮೇಘದ ಗರ್ಭದಲ್ಲೆ ಬೆಳ್ಳಿ, ಬಂಗಾರ, ನೀಲಿ, ಕೆಂಪಿನ ವೈವಿಧ್ಯಗಳ ವರ್ಣಜಾಲವನ್ನೆ ಸೃಜಿಸಿ ಆಕಾಶದಲ್ಲೆ ಮತ್ತೊಂದು ಜಗಮಗಿಸುವ ಅರಮನೆಯನ್ನು ಕಟ್ಟಿಸಿ ಬಿಟ್ಟಿದೆಯೇನೊ ಎನ್ನುವ ಭ್ರಮೆ ಹುಟ್ಟಿಸುವಂತಿತ್ತು. ಮುಗ್ದ ಆಗಸಕಿಟ್ಟ ಕುಚಬಂಧಗಳಂತೆ ಆವರಿಸಿಕೊಂಡ ಮೋಡಗಳ ನಡುವೆ, ಸಂದಿ ಸಿಕ್ಕಿದ ಕಡೆಯೆಲ್ಲಾ ತೂರಿಕೊಂಡು ಗೆದ್ದ ಪೌರುಷದಿಂದ ಇಣುಕುತ್ತಾ , ನುಸುಳಿ ಬೆಳಗುವ ಬಿಸಿಲಿನ ಕೋಲ್ಗಿರಣಗಳು ದೇವರ ಕಿರೀಟದ ಹಿಂದಿರುವ ಪ್ರಭಾವಳಿಯ ಹಾಗೆ ಹೊಳೆಯುತ್ತ ಇಡೀ ಪರಿಸರಕ್ಕೆ ಒಂದು ಬಗೆಯ ದೈವತ್ವವನ್ನು ಆರೋಪಿಸಿಬಿಟ್ಟಿದ್ದವು. ಗಗನದೆಲ್ಲೆಡೆಗು ನೆರಳು ಬೆಳಕಿನೊಡಗೂಡಿದ ಬಣ್ಣದ ಚಿತ್ತಾರವನ್ನು ಆರೋಪಿಸಿ, ಒಂದು ರಂಗುರಂಗಿನ ಭ್ರಮಾಲೋಕವನ್ನೆ ಸೃಷ್ಟಿಸಿ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದ್ದರೂ, ಶ್ರೀನಾಥ ಮಾತ್ರ ಈ ಅದ್ಭುತ ಸೌಂದರ್ಯವನ್ನು ನೋಡುತ್ತಾ ಆನಂದದಿಂದ ಆಸ್ವಾದಿಸುವ ಮನಸ್ಥಿತಿಯಲ್ಲಿ ಇರಲಿಲ್ಲ. ಆದರೂ ಆ ದೃಶ್ಯ ವೈಭವ ಬೇಸತ್ತಂತಿದ್ದ ಅವಿಶ್ರಾಂತ ಮನಕೆ ಮುದ ನೀಡಿ ತಂಪೆರೆಯುವ ಸಂಜೀವಿನಿಯಂತೆ ಭಾಸವಾಗಿ, ಭಾವೋನ್ಮೇಷದ ತೀವ್ರತೆಯನ್ನು ತುಸು ಕುಗ್ಗಿಸಿ ಮೃದುವಾಗಿಸಿತು. ಆ ಹೊತ್ತಿನಲ್ಲೆ ಬೀಸುತ್ತಿದ್ದ ಆಹ್ಲಾದಕರ ತಂಗಾಳಿಯೂ ಮೆಲುವಾಗಿ ನೇವರಿಸಿ, ಸ್ವಾಭಾವಿಕವಾಗಿ ಪ್ರತಿಸ್ಪಂದಿಸಲು ನಿರಾಕರಿಸುತ್ತಿದ್ದ ಅವಯವಗಳನ್ನು ಮೃದುವಾಗಿ ಸೋಕಿ, ಬಿಗಿ ಹಿಡಿದಿದ್ದ ನರಮಂಡಲವನ್ನು ತುಸು ಸಡಿಲಿಸಿ ನಿರಾಳವಾಗಿಸಿತು. ಆ ಗಳಿಗೆಯಲ್ಲಿ, ಅಂದಿನ ಬೆಳಗಿನ ಸಂಘಟನೆಯೆಲ್ಲ ನಡೆದೆ ಇಲ್ಲದ ವಿಚಿತ್ರ ಕನಸಿನಂತೆ ತೋರಿ ಏನೂ ನಡೆದೆ ಇರಲಿಲ್ಲವೆಂಬ ಅನುಮಾನವನ್ನು ಹುಟ್ಟಿಸಿಬಿಟ್ಟಿತ್ತು.. ಆ ಅನುಮಾನದಲ್ಲೆ, ಮತ್ತೊಮ್ಮೆ ಖಚಿತಪಡಿಸಿಕೊಳ್ಳಲೆಂಬಂತೆ ಪರ್ಸು ತೆಗೆದು ಹಣ ಖಾಲಿಯಾಗಿರುವುದನ್ನು ಖಾತ್ರಿಪಡಿಸಿಕೊಂಡೆ, ಅದು ಕನಸಲ್ಲ, ನೈಜ್ಯವೆಂದು ಮನವರಿಕೆ ಮಾಡಿಕೊಳ್ಳಲೆತ್ನಿಸುತ್ತ ಹತ್ತಿರದಲ್ಲಿದ್ದ ಆಸನವೊಂದರಲ್ಲಿ ಆಸೀನನಾದ - ಆ ಸುಂದರ ಗಗನ-ರಾಗರತಿಯ ವೈವಿಧ್ಯವನ್ನು ಕಣ್ಣಿಗೆ ತುಂಬಿಕೊಳ್ಳುತ್ತಲೆ. 

ಸದಾ ವಾಹನಗಳಿಂದ ತುಂಬಿ ಗಿಜಿಗುಡುವ ರಸ್ತೆಗಳಿಂದ ಸುತ್ತುವರೆದಿರುವ ವಿಕ್ಟರಿ ಮಾನ್ಯುಮೆಂಟ್, ಆ ಹೊಸವರ್ಷದ ರಜೆಯ ಕಾರಣದಿಂದಲೊ ಏನೊ - ಅಪರೂಪಕ್ಕೆಂಬಂತೆ ವಿರಳ ವಾಹನ ನಿಭಿಢತೆಯಿಂದ ಖಾಲಿ ಖಾಲಿ ಕಾಣುತ್ತಿತ್ತು. ಅದಕ್ಕೆ ಸಂವಾದಿಯೇನೊ ಎಂಬಂತೆ ನೀಲಾಗಸದಲ್ಲಿ ಮೂಡಿದ್ದ ಮುಗಿಲ ಮಲ್ಲಿಗೆಯ ಕೋಲ ಇಡೀ ಪ್ರದೇಶವನ್ನೆ ಒಂದು ಅದ್ಭುತ ಕಲಾಕೃತಿಯಾಗಿ ಮಾರ್ಪಡಿಸಿ 'ವಾಹ್! ಛಾಯ ಚಿತ್ರಕ್ಕೆ ಸೂಕ್ತವಾದ ಮನಮೋಹಕ ದೃಶ್ಯ..!' ಎಂದು ಉದ್ಗರಿಸುವಂತೆ ಮಾಡಿತ್ತು. ಪದೆ ಪದೆ ಆ ರೀತಿಯ ಪ್ರಕೃತಿಯ ವಿಸ್ಮೃತಿ ಕಾಣುವುದು ಅಶಕ್ಯವೆಂದರಿತಿದ್ದ ಶ್ರೀನಾಥ, 'ಛೆ..! ಪುಟ್ಟ ಕ್ಯಾಮರವನ್ನಾದರೂ ಜೇಬಿಗೆ ಹಾಕಿಕೊಂಡು ಬಂದಿದ್ದರೆ ಚೆನ್ನಾಗಿತ್ತು..ಎಂಥಹ ಅದ್ಭುತವಾದ ಪೋಟೊ ಸಿಗುತ್ತಿತ್ತಲ್ಲಾ?' ಎಂದು ತನ್ನಲ್ಲೆ ಪೇಚಾಡಿಕೊಂಡ ಹೊತ್ತಿನಲ್ಲೆ ತಟ್ಟನೆ, 'ಅರೆ..ಹಾಗೇನಾದರೂ ತಂದಿದ್ದರೂ ಪ್ರಯೋಜನವಾಗುತ್ತಿರಲಿಲ್ಲವೊ ಏನೊ? ಮೊಬೈಲು, ಪರ್ಸಿನಲ್ಲಿದ್ದ ಹಣದ ಜತೆಗೆ ಕ್ಯಾಮರಾ ಕೂಡ ಕೈ ಜಾರಿ ಹೋಗುತ್ತಿತ್ತೊ ಏನೊ? ಸದ್ಯ, ತರದಿದ್ದುದೆ ಒಳ್ಳೆಯದಾಯ್ತು' ಎಂಬ ಅನಿಸಿಕೆಯೂ ಹಿಂದೆಯೆ ಮೂಡಿ ಆ ವಿಚಿತ್ರ ವಿಪರ್ಯಾಸಕ್ಕೆ ತನ್ನಲ್ಲಿ ತಾನೆ ನಗುವಂತಾಯ್ತು. ಸರಿ, ಆ ದೃಶ್ಯ ವೈಭವ ಕರಗಿ ಸರಿದು ಹೋಗುವ ಮೊದಲೆ ಸಾಧ್ಯವಾದಷ್ಟು ಕಣ್ಣಿಗೆ ತುಂಬಿಕೊಂಡು ಆಸ್ವಾದಿಸಿಬಿಡುವ ಎನ್ನುತ್ತ ಎದುರಿನ ಗಗನದಲ್ಲಿ ಘನಿಕರಿಸಿದಂತೆ ಮೂಡಿದ್ದ, ದಟ್ಟ ಸಾಂದ್ರತೆಗೆ ಬದಲಾಗುತ್ತಿದ್ದ ಬಗೆಬಗೆಯ ಮೋಡದ ಗೋಪುರಗಳನ್ನೆ ತದೇಕ ಚಿತ್ತನಾಗಿ ದಿಟ್ಟಿಸತೊಡಗಿದ. ಒಂದು ರೀತಿ ಕ್ಯಾಮರ ಇರದಿದ್ದುದೆ ಒಳಿತಾಯ್ತು - ಇಲ್ಲದಿದ್ದರೆ ಆಸ್ವಾದನೆಗೆ ಬದಲು ಚಿತ್ರ ಕ್ಲಿಕ್ಕಿಸುವತ್ತಲೆ ಗಮನ ಹರಿದು ಆ ದೃಶ್ಯವನ್ನು ನೋಡುವ ಮೊದಲೆ ಅದು ಕರಗಿ ಮಾಯವಾಗಿರುವ ಸಾಧ್ಯತೆಯೆ ಹೆಚ್ಚಿರುತ್ತಿತ್ತು ಅಂದುಕೊಂಡ.. ಆದರೆ ದಟ್ಟವಾಗುತ್ತಿರುವ ಮೋಡದ ಸಂದಣಿಯನ್ನು ಗಮನಿಸಿದರೆ, ಇನ್ನು ಸ್ವಲ್ಪ ಹೊತ್ತಿಗೆ ಜೋರಾದ ಮಳೆಯಾಗಿ ಸುರಿದರೂ ಅಚ್ಚರಿಯಿಲ್ಲವೆನಿಸಿತು. ಮತ್ತೆ ಜತೆಯಲ್ಲಿ ಛತ್ರಿಯೊಂದನ್ನು ತಂದಿಲ್ಲವೆಂದು ನೆನಪಾಗಿ ಯಾವುದಕ್ಕೂ ಸುರಕ್ಷಿತವಾಗಿರುವುದು ಒಳಿತೆನಿಸಿ ಬಯಲಿನಂತಿದ್ದ ಕಡೆಯಿಂದ ಮೇಲೆದ್ದು, ಮಳೆ ಬಂದರೆ ಆಸರೆಯಾಗುವಂತೆ ಮಂಟಪದ ರೀತಿಯ ಚಾವಣಿಯಿದ್ದ ಕಡೆ ಬಂದ. ಗಳಿಗೆಗಳಿಗೆಗೂ ಬದಲಾಗುತಿದ್ದಂತಿದ್ದ ಆ ದೃಶ್ಯ ವೈಭವವನ್ನು ಆ ದೊಡ್ಡ ವಿಸ್ತಾರದ ನೈಸರ್ಗಿಕ ಕ್ಯಾನ್ವಾಸಿನಲ್ಲಿ ನೋಡಿದಾಗ, ಬೇಕೆಂದರೂ ಅಂತಹ ಚಿತ್ತಾರ ವೈಭವ ಕೃತಕವಾಗಿ ಬಿಡಿಸಲು ಅಸಾಧ್ಯವೆನಿಸಿ, ಪ್ರಕೃತಿಯ ವೈವಿಧ್ಯತೆ, ತಾಕತ್ತಿಗೆ ಬೆರಗಾಗುತ್ತ ಕುಳಿತಿದ್ದವನಿಗೆ ಹೊತ್ತು ಸರಿದುದ್ದೆ ಅರಿವಾಗದ ಮೈಮರೆತ ತನ್ಮಯತೆಯ ಪರಿಸ್ಥಿತಿ... ಆ ಪ್ರಜ್ಞಾ ಸಮಾಧಿಯ ನಿರ್ವಾಣದಲ್ಲಿ ಇಹ ಜಗದಿಂದದೃಶ್ಯನಾದಂತೆ ಮೈ ಮರೆತು ಪರವಶನಾಗಿ ಕುಳಿತವನನ್ನು ಧಢಕ್ಕನೆ ಬೆಚ್ಚಿ ಬೀಳಿಸುವಂತೆ ಲೌಕಿಕಕ್ಕೆಳೆದು ತಂದಿದ್ದು ದಟ್ಟವಾಗಿದ್ದ ಮೋಡದ ಗೂಡು ಕರಗಿ ದಪ್ಪ ದಪ್ಪ ಹನಿಗಳಾಗಿ ಉದುರುತ್ತ ಬಂದ ಮಳೆ, ಶ್ರೀನಾಥನ ಮುಖದ ಮೇಲೂ ಪರಪರನೆ ರಾಚತೊಡಗಿದಾಗಲೆ. ಏಕಾಏಕಿ ಜೋರಾದ ರಭಸದಿಂದ ಧಾಳಿಯಿಕ್ಕತೊಡಗಿದ ಮಳೆರಾಯನ ಅರ್ಭಟ, ಭಾವ ಪ್ರಸ್ತಾರದಲಿದ್ದ ಶ್ರೀನಾಥನ ಪ್ರಜ್ಞೆ ಬಾಹ್ಯಕ್ಕೆ ಮರಳುವುದನ್ನೂ ಕಾಯದೆ ಅವನ ನೆನೆಯುತಿದ್ದ ತನುವನ್ನು ಅಸೀಮ ವೇಗದಲ್ಲಿ ಆಸರೆಯಿದ್ದ ಛಾವಣಿಯತ್ತ ಓಡಿಸಿತ್ತು.

ಆಚೆಯ ಮೂಲೆಯಲ್ಲಿ ತನ್ನ ಹಾಗೆ ಯಾರೊ ಇಬ್ಬರು ಭಾರತೀಯ ಹುಡುಗರು ಕ್ಯಾಮೆರ ನೇತು ಹಾಕಿಕೊಂಡು, ಹಿಂದಿಯಲ್ಲಿ ಮಾತಾಡುತ್ತ ಕರ್ಚೀಫಿನಿಂದ ತಲೆ ಒರೆಸಿಕೊಳ್ಳುತ್ತ ನಿಂತಿದ್ದನ್ನು ಗಮನಿಸಿ, ಅವರ ಹಿಂಬದಿಯ ಮರೆಯಲಿದ್ದ ಎದುರು ಪಕ್ಕದ ಗೋಡೆಗೊರಗಿದಂತೆ ನಿಂತುಕೊಳ್ಳುವ ಹೊತ್ತಿಗೆ ಸರಿಯಾಗಿ, ಧಾರಾಕಾರವಾಗಿ ಸುರಿಯತೊಡಗಿತು ಭಾರಿಯಾದ ಮಳೆ. ಲಂಬಾಕೃತಿಯ ಹಜಾರದಂತಿದ್ದ ಅದರ ತುದಿಯಲ್ಲೊದರಿ ಬರುತ್ತಿರುವ ಎರಚಲಿಗೆ ಸಿಗದಂತೆ ನಿಲ್ಲಬೇಕಾದರೆ ಗೋಡೆಗೊತ್ತಿಕೊಂಡಂತೆ ಹಿಂದಿಂದೆ ಹೋಗದೆ ವಿಧಿಯಿರಲಿಲ್ಲ. ಇದರಿಂದಾಗಿ ಬೀಳುತ್ತಿರುವ ಮಳೆಯನ್ನು ಹತ್ತಿರದಿಂದ ನೋಡುವ ಅವಕಾಶ ಕುಂದಿದರೂ, ಬಟ್ಟೆ ಒದ್ದೆಯಾಗದಂತೆ ಸುರಕ್ಷಿತವಾಗಿ ನಿಲ್ಲಲು ಸಾಧ್ಯವಾಗಿತ್ತು. ಹಾಗೆ ಗೋಡೆಗೆ ಒರಗಿಕೊಂಡೆ ಬಲದ ಕಾಲನ್ನು ಅರ್ಧ ಕೋನಾಕೃತಿಯಲ್ಲಿ ಮಡಿಸಿ ಗೋಡೆಗಾನಿಸಿ ಮೈ ಅದುರದಂತೆ ಕೈ ಕಟ್ಟಿ ನಿಂತ ಶ್ರೀನಾಥ. ರೊಚ್ಚಿನಿಂದಲೆ ಆರಂಭವಾದ ಮಳೆ ಶುರುವಿನಲ್ಲಿ ವೇಗದಲ್ಲಿ ಹೆಚ್ಚು ಕಡಿಮೆಯಾಗುತ್ತ, ಹುಚ್ಚು ಹಿಡಿದಂತೆ ಸುರಿಯುತ್ತಿದ್ದರೂ ತುಸು ಕ್ಷಣಗಳ ನಂತರ ನಿಂತು ಹೋದ ಗಾಳಿಯ ಹೊಡೆತಕ್ಕೊ ಏನೊ - ತನ್ನ ಚಂಚಲ ಚಿತ್ತವನ್ನು ಬದಲಿಸಿ ಗಾಂಭೀರ್ಯದ ಸೆರಗು ಹೊದ್ದ ಹಾಗೆ ಒಂದೆ ವೇಗದಲ್ಲಿ ಏಕತಾನತೆಯಿಂದ ಸುರಿಯತೊಡಗಿತು. ಗಾಳಿಯಿರದ ಕಾರಣ ಎರಚಲಿನ ಪ್ರೋಕ್ಷಣೆಯ ಹೊಡೆತವೂ ಕಡಿಮೆಯಾಯ್ತು. ಆದರೆ ಮಳೆಯ ಆವೇಗವೇನು ಕಡಿಮೆಯಾದಂತೆ ಕಾಣಲಿಲ್ಲ - ಅಡ್ಡಾದಿಡ್ಡಿಯಾಗಿ ಒಂದೈದು ಹತ್ತು ನಿಮಿಷ ಸುರಿದು ಹೋಗುವ ಬದಲು ರಚ್ಚೆ ಹಿಡಿದ ಮಗುವಂತೆ ಒಂದೆರಡು ಗಂಟೆಯ ತನಕ ಸುರಿದೇ ಹೋಗುವ ಸರಕಾಗಿ ಕಂಡಿತು.. ಈ ವೇಳೆಯಲ್ಲಿ ಕನಿಷ್ಠ ಪುಸ್ತಕವೊಂದಾದರೂ ಇದ್ದಿದ್ದರೆ ಓದುತ್ತಾ ಕೂತಿರಬಹುದಿತ್ತು ಅನಿಸಿತ್ತು. ಕೂರುವ ಯೋಚನೆ ಬಂದಾಗ 'ಹೇಗೂ ಇದು ತಕ್ಷಣಕ್ಕೆ ನಿಲ್ಲುವ ಮಳೆಯಂತೆ ಕಾಣುತ್ತಿಲ್ಲ..ಸುಮ್ಮನೆ ನಿಂತು ಕಾಲು ನೋಯಿಸಿಕೊಳ್ಳುವುದೇಕೆ? ಆರಾಮವಾಗಿ ಕೂತೆ ವಿಶ್ರಮಿಸಿಕೊಳ್ಳೋಣ' ಎನಿಸಿ ಹಾಗೆಯೆ ಗೋಡೆಯ ತುದಿಗೆ ಸರಿದು ಮೂಲೆ ಕೊನೆಯಾಗುವ ತುದಿಗೆ ಸ್ವಲ್ಪ ಹಿಂದೆಯೆ ಒರಗಿ ಕೂತವನೆ ಕೈಗಳೆರಡನ್ನು ಎರಡೂ ಬದಿಗೂ ಇಳಿಬಿಟ್ಟು, ನೀಳವಾಗಿ ಕಾಲು ಚಾಚಿದ. ಇವನು ಒರಗಿ ಕೂತ ಎಡಪಕ್ಕಕ್ಕೆ ಕೊನೆಯಾದ ಗೋಡೆಯ ತುದಿ ಮತ್ತೆ ಎಡದಲ್ಲೆ ತೊಂಭತ್ತು ಡಿಗ್ರಿಯ ಲಂಬಾಕಾರದಲ್ಲಿ ಮುಂದುವರೆದು ಮತ್ತೊಂದು ತುದಿಯನ್ನು ತಲುಪುತ್ತಿತ್ತು. ಆದರೆ ಇವನು ಕುಳಿತಿದ್ದ ರೀತಿಯಿಂದಾಗಿ ಎದುರಿನ ಮಳೆ ಕಣ್ಣಿಗೆ ಬೀಳುತ್ತಿತ್ತೆ ಹೊರತು ಹಿಂದುಗಡೆಗಿದ್ದ ಮಂಟಪದ ಹಜಾರವಲ್ಲ. ಆದರೂ ಅಲ್ಲಿಂದ ಯಾರೊ ಮಾತಾಡಿದ ಶಬ್ದ ಕೇಳಿಸುತ್ತಿದ್ದ ಕಾರಣ ಅಲ್ಲೂ ಯಾರೊ ನಿಂತಿರುವುದು ಗಮ್ಯಕ್ಕೆ ನಿಲುಕುತ್ತಿತ್ತು. ತುಸು ಹೊತ್ತು ಹಾಗೆ ಕುಳಿತು ಅಭ್ಯಾಸವಾದ ಮೇಲೆ ಸುತ್ತಮುತ್ತಲ ವಾತಾವರಣ ಶಬ್ದಸೂಕ್ಷ್ಮಗಳೆಲ್ಲ ಮಳೆಯ ಸದ್ದಿನೊಂದಿಗೆ ಮಿಳಿತಗೊಂಡು ಒಂದು ಬಗೆಯ ಸಹ ಜೀವನದ ಸಮತೋಲನೆಯ ಹೊಂದಾಣಿಕೆ ಮಾಡಿಕೊಂಡ ಹಾಗೆ ಏಕತಾನದೊಂದಿಗೆ ಅನುರಣಿಸತೊಡಗಿ, ಅದುವರೆವಿಗೂ ಎಲ್ಲೊ ದೂರದಲ್ಲಿ ಅಸ್ಪಷ್ಟವಾಗಿ ಮಾತಾಡಿಕೊಂಡಂತೆ ಬಿಟ್ಟೂ ಬಿಟ್ಟೂ ಕೇಳುತ್ತಿದ್ದ ಸಂಭಾಷಣೆ ಈಗ ಸ್ಪಷ್ಟವಾಗಿ ನಿರಂತರತೆಯೊಂದಿಗೆ ಕೇಳಿಸಲು ಮೊದಲಾಯ್ತು. ನಿರಾಸಕ್ತಿಯಿಂದಲೆ ಕಿವಿಗೆ ಬೀಳುತ್ತಿದ್ದ ಮಾತನ್ನು ಯಾಂತ್ರಿಕವಾಗಿ ಆಲಿಸುತ್ತಿದ್ದ ಶ್ರೀನಾಥನಿಗೆ ಆ ಮಾತುಗಳು ಸುಪರಿಚಿತವಾದ ಭಾರತೀಯ ಭಾಷೆಯಂತೆ ಭಾಸವಾದಾಗ ತುಸು ಗಮನವಿತ್ತು ಆಲಿಸಿದ - ಹೌದು, ಸಂದೇಹವೆ ಇರಲಿಲ್ಲ. ಬಹುಶಃ ಇವನು ಬರುವಾಗ ಅದಾಗ ತಾನೆ ದಾರಿಯಲ್ಲಿ ಕಾಣಿಸಿದ್ದ ಅವರಿಬ್ಬರೆ ಇರಬೇಕೇನೊ - ಆ ಸಂಭಾಷಣೆ ಹಿಂದಿಯಲ್ಲಿ ನಡೆದಿತ್ತು. ಸುಮಾರಾಗಿ ಹಿಂದಿ ಅರ್ಥವಾಗುತ್ತಿದುದರ ಜತೆಗೆ ಮಾಡಲೂ ಬೇರೇನೂ ಕೆಲಸವಿಲ್ಲದ ಕಾರಣ ನಿರಾಸಕ್ತಿಯಿಂದಲೆ ಆ ಮಾತಿಗೆ ಕಿವಿಗೊಟ್ಟು ಕುಳಿತ ಶ್ರೀನಾಥನಿಗೆ, ಆಲಿಸುತ್ತಾ ಹೋದಂತೆ ಅವರು ಮಾತನಾಡುತ್ತಿದ್ದ ವಿಷಯದಿಂದಲೊ ಅಥವಾ ಬೋರಾಗದಂತೆ ಕಾಲದೂಡುವ ಒತ್ತಾಸೆಗೊ ಅವರ ಸಂಭಾಷಣೆಯತ್ತ ಆಸಕ್ತಿ ಚಿಗುರಿ ಮೈಯೆಲ್ಲ ಕಿವಿಯಾದಂತೆ ಗಮನವಿಟ್ಟು ಕೇಳತೊಡಗಿದ ಆ ಗಾಳಿಯಲ್ಲಿ ತೇಲಿ ಬರುತ್ತಿದ್ದ ಮಾತುಗಳತ್ತ.

ಅವರಿಬ್ಬರ ಸಂಭಾಷಣೆ ಮಾತಿನ ರೀತಿಯಲ್ಲೆ ಅವರಿಬ್ಬರು ತರುಣರು ಪ್ರವಾಸಿಗಳಾಗಿ ಬಂದವರೆಂದು ಗೊತ್ತಾಗುತ್ತಿತ್ತಷ್ಟೆ ಅಲ್ಲದೆ ಬಂದು ಈಗಾಗಲೆ ಎರಡು ಮೂರು ದಿನಗಳು ಕಳೆದಿತ್ತೆಂದು ಕೂಡ ಅರಿವಾಗುತ್ತಿತ್ತು. ಅವರ ಸಂಭಾಷಣೆಯಲ್ಲೆ ಶ್ರೀನಾಥನಿಗೆ ಗೊತ್ತಾದ ಮತ್ತೊಂದು ವಿಷಯವೆಂದರೆ ಅವರಿಬ್ಬರು ಒಟ್ಟಾಗಿ ಬಂದ ಪ್ರವಾಸಿಗಳಲ್ಲ. ಇಲ್ಲಿ ಬಂದ ಮೇಲೆ ಭೇಟಿಯಾಗಿದ್ದರಷ್ಟೆ. ಕೆಲವು ಕಡೆಗಳಿಗೆ ಒಟ್ಟಾಗಿ ಹೋಗಿ ಬಂದಿದ್ದರೂ ಇನ್ನು ಕೆಲವು ಕಡೆಗಳಿಗೆ ಬೇರೆ ಬೇರೆಯಾಗಿ ಭೇಟಿ ಕೊಟ್ಟಿದ್ದು ಇತ್ತು. ಅವರು ಒಬ್ಬಂಟಿಯಾಗಿ ನೋಡಿದ್ದ ತಾಣಗಳ ಕುರಿತು ಪರಸ್ಪರರಿಗೆ ವಿವರಿಸುತ್ತ ಅನುಭವವನ್ನು ಹಂಚಿಕೊಳ್ಳುತಲಿದ್ದಾಗ ಅವರಲೊಬ್ಬ ಇದ್ದಕ್ಕಿದ್ದಂತೆ ಎರಡನೆಯವನಿಗೆ ಹಿಂದಿಯಲ್ಲೆ,

"ನಿನ್ನೆ ನಾನೊಂದು ವಿಶೇಷ ಜಾಗಕ್ಕೆ ಹೋಗಿದ್ದೆ.." ಎಂದ ಒಂದು ರೀತಿಯ ತುಂಟತನದ ದನಿಯಲ್ಲಿ ನಗುತ್ತ.

"ವಿಶೇಷ ಜಾಗ? ಎಲ್ಲಿ? ಹತ್ತಿರದ ಜಾಗವೊ, ದೂರದ್ದೊ?" 

" ಹತ್ತಿರ ದೂರ ಎಂದೇನಿಲ್ಲ..ಈ ಊರಲ್ಲಿ ಎಲ್ಲಾ ಕಡೆಯೂ ಇರುವ ಜಾಗ...ನಾವಿರುವ ಹೋಟೆಲಿನ ಹತ್ತಿರವೂ ಬೇಕಾದಷ್ಟಿವೆ.." ದನಿಯಲ್ಲಿನ ತುಂಟತನ ಈಗ ದೊಡ್ಡ ನಗುವಿನ ರೂಪ ತಾಳಿತ್ತು...

" ಸರಿ ಸರಿ..ಗೊತ್ತಾಯ್ತು ಬಿಡು..ನೀನು ಹೋಗಿದ್ದೆಲ್ಲಿಗೆ ಎಂದು..." ಆ ಕಡೆಯವನು ತುಂಟದನಿಯಲ್ಲಿ ಉತ್ತರಿಸಿದ್ದ..

"ಅದು ಹೇಗೆ ಅಷ್ಟು ಸುಲಭದಲ್ಲಿ ಗೊತ್ತಾಗಿಬಿಟ್ಟಿತು?..ಬಹುಶಃ ಅಲ್ಲಿಗೆ ನೀನು ಹೋಗಿದ್ದೆಯೆಂದು ಕಾಣುತ್ತದೆ.." ಛೇಡನೆಯ ದನಿಯಲ್ಲಿ ಮೊದಲಿನವನ ಅಣಕದ ಮಾತು..

" ಹೋಗಿದ್ದೊ ಬಿಟ್ಟಿದ್ದೊ ಆಮೇಲಿನ ಮಾತು...ನೀನು ನಿಖರವಾಗಿ ಹೋಗಿದ್ದಾದರೂ ಯಾವ ಜಾಗಕ್ಕೆ? ಬೆಲೆಗಳೆಲ್ಲ ತುಟ್ಟಿಯೊ ಅಗ್ಗವೊ..?"

"ಅದೆ ನಾವಿರುವ ಹೋಟೆಲಿನ ಬೀದಿಗಿಂತ ನಾಲ್ಕು ರಸ್ತೆ ಆಚೆಗೆ..ಬೆಳಿಗ್ಗೆ ರೂಮು ಕ್ಲೀನು ಮಾಡಲು ಬಂದ ಹುಡುಗನ ಹತ್ತಿರ ತುಟ್ಟಿಯಿಲ್ಲದ ಸರಿಯಾದ ಜಾಗ ಹೇಳು ಎಂದು ಐವತ್ತು ಬಾತಿನ ನೋಟು ತೋರಿಸಿದೆ..ಅವನು ಕಿಸಕ್ಕನೆ ನಕ್ಕು ಹೋಟೆಲಿನ ಮೂಲಕ ಹೋಗಬೇಡಿ, ದುಬಾರಿಯಾಗುತ್ತದೆ ಅಂದು ಈ ವಿಳಾಸ ಹೇಳಿದ... ಅವನೊಂದು ಗುರುತಿನ ಕಾರ್ಡ್ ಕೊಟ್ಟು ತೋರಿಸಲು ಹೇಳಿದ್ದ - ಅದನ್ನು ತೋರಿಸಿದರೆ ವಿಶೇಷ ಅಗ್ಗದ ಬೆಲೆ ಕೊಡುವರೆಂದು..."

"ಬೆಲೆ ಅಗ್ಗವಿತ್ತೆ, ತುಟ್ಟಿಯಿತ್ತೆ..?"

" ಬೆಲೆಯೇನೊ ಮಾಮೂಲೆ ಎಲ್ಲಾ ಕಡೆಯೂ ಇದ್ದ ಬೆಲೆಯೆ.. ಆದರೆ ಕಾರ್ಡು ತೋರಿಸಿದ್ದಕ್ಕೆ ಇಪ್ಪತ್ತು ಪರ್ಸೆಂಟು ಡಿಸ್ಕೌಂಟ್ ಸಿಕ್ಕಿತು...!"

"ವಾಹ್...! ಅಲ್ಲಿಗೆ ಕೊನೆಗೆ ನೀನೆಷ್ಟು ಕೊಟ್ಟೆ?"

" ಬಾಡಿ ಮಸಾಜಿಗೆ ಐನೂರರ ಬದಲು ನಾನೂರು.."

"ಸಾಕು ಬಿಡು ನಿನ್ನ ಬುರುಡೆ... ನೀನು ಬರಿ ಮಸಾಜಿಗೆಂದು ಅಲ್ಲಿಗೆ ಹೋಗಿದ್ದೆಯೆಂದು ಏಮಾರಿಸಬೇಡ.." - ಮತ್ತೆ ಇಬ್ಬರೂ ಗಹಿಗಹಿಸಿ ನಕ್ಕ ದನಿ..

"ಅದೇನೊ ಸರಿಯೆನ್ನು...ಆದರೆ 'ಮಸಾಜಿಗೂ ' ಮತ್ತು 'ಸ್ಪೆಷಲ್ ಮಸಾಜಿಗೂ' ಇರುವ ವ್ಯತ್ಯಾಸ ಒಂದಕ್ಕೆ ನಾಲ್ಕರಷ್ಟು ಬೆಲೆ ತಾನೆ? ಮಸಾಜಿನ ರೇಟು ತಿಳಿದರೆ ಇನ್ನೊಂದೂ ತಾನಾಗೆ ತಿಳಿದಂತಲ್ಲವೆ?" - ಮತ್ತೊಮ್ಮೆ ಇಬ್ಬರೂ ಗಹಿಗಹಿಸಿದ ಸದ್ದು..

" ಅದು ಸರಿ ಬಿಡು...ಆ ಜಾಗದ ಹೆಸರೇನಂದೆ?..ಆ ಗುರುತಿನ ಕಾರ್ಡ್ ಇನ್ನು ನಿನ್ನ ಹತ್ತಿರವೆ ಇದೆಯೊ ಹೇಗೆ?"

" ಅದರ ಹೆಸರು ' ಹೆವನ್ಲೀ ರೋಸ್ ಪೆಟಲ್ಸ್' ಅಂತ..ಕಾರ್ಡು ನನ್ನ ಹತ್ತಿರವೆ ಇದೆ ..ಬೇಕಾದರೆ ಹೇಳು ಕೊಡುತ್ತೇನೆ..."

"ಅನುಭವ ಹೇಗೆ? ವ್ಯಾಲ್ಯೂ ಫಾರ್ ಮನೀ?"

" ನನ್ನ ಅನುಭವವೇನೊ ಸುಪರ್...! ಬೇಕಿದ್ದರೆ ಆ ಹೆಸರನ್ನೆ ಕೇಳು - 'ಕುನ್. ಪಿಂಕ್' ಅಂಥ ಹೆಸರು..."

ಬಹುಶಃ ಆತ ಎರಡನೆಯವನಿಗೆ ಕಾರ್ಡು ಕೊಟ್ಟಿರಬೇಕು..ಮತ್ತೆ ಛೇಡಿಸುವ ದನಿಯಲ್ಲಿ " ಯಾವುದಕ್ಕೂ ಹುಷಾರಪ್ಪ...ಏನೆ ಆದರೂ ಸುರಕ್ಷೆಯಿಲ್ಲದೆ ಮುಂದುವರೆಯಬೇಡ...ಹೇಳಿ ಕೇಳಿ ಊರು ಕೇರಿ ಗೊತ್ತಿಲ್ಲದ ಜಾಗ.."

ಆ ಮಾತಿನ ಹಿಂದೆಯೆ ಇಬ್ಬರೂ ಒಟ್ಟಾಗಿ ಇನ್ನೂ ಜೋರಾಗಿ ಗಹಗಹಿಸುವ ಸದ್ದು ಕೇಳಿಸಿತು. ಅದೆ ಹೊತ್ತಿಗೆ ಸರಿಯಾಗಿ ಮಳೆಯಲ್ಲೆ ಓಡುತ್ತ ಇನ್ನೊಂದಿಬ್ಬರು ಮೂವ್ವರು ಅದೇ ಜಾಗಕ್ಕೆ ಆಶ್ರಯ ಹಿಡಿಯಲು ಬಂದು ನಿಂತಾಗ ಅವರಿಬ್ಬರ ಸಂಭಾಷಣೆ ಅಲ್ಲಿಗೆ ತಟ್ಟನೆ ನಿಂತು ಹೋಯ್ತು. ಮತ್ತೆ ಬರಿ ಮಳೆಯ ಸದ್ದಿನ ಆಲಾಪ ಕಿವಿಗಳನ್ನು ತುಂಬುತ್ತ, ಅದೇ ತಾನೆ ಮುಗಿದ ಮಾತುಗಳಿಂದ ಆವರಿಸಿಕೊಂಡ ಯಾವುದೊ ಬಗೆಯ ವಿಚಿತ್ರ ಖಿನ್ನತೆಯ ಭಾವವನ್ನಪ್ಪಿಕೊಂಡು ವಿನಾಕಾರಣ ಮಂಕು ಹಿಡಿದವನಂತೆ ಕುಳಿತ ಶ್ರೀನಾಥ. ಆ ಹೊತ್ತಿನಲ್ಲಿ ಅವರಿಬ್ಬರ ಮಾತುಗಳು ಅವನ ಮರೆತಂತಿದ್ದ ಹಳೆಯ ಕಹಿ ಅನುಭವದ ನೆನಪುಗಳನ್ನು ಮತ್ತೆ ಮರುಕಳಿಸುವಂತೆ ಮಾಡಿ ಖೇದ ಹುಟ್ಟಿಸಿಬಿಟ್ಟವು. ಬಾಸಿನ ಮತ್ತು ಇತರ ಸಹೋದ್ಯೋಗಿಗಳ ಜತೆ ಪಾಟ್ಪೋಂಗ್ನಲ್ಲಿನ ಉಸಿರುಗಟ್ಟಿಸಿದ ಅನುಭವ, ಪೋನ್ ಮಾಡಿ ಮನೆಗೆ ಕರೆಸಿಕೊಂಡ ದುಬಾರಿ ಬೆಲೆವೆಣ್ಣಿನ ಜತೆಯಲಿದ್ದಾಗಿನ ಪರದಾಟದ ಪ್ರಸಂಗ, ಹೆಣ್ಣೆಂದುಕೊಂಡು 'ಲೇಡಿ ಬಾಯ್' ಹಿಂದೆ ಬಿದ್ದು ಬೇಸ್ತು ಬಿದ್ದು ಪೆಚ್ಚಾದ ಪ್ರಸಂಗ, ಆ ದಿನದ ಬೆಳಗೆ ಚತುರ ಯುವತಿಯ ಮಾಯಾಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ಮೂಢತನ ಎಲ್ಲವೂ ಚಲನ ಚಿತ್ರದ ರೀಲಿನ ಹಾಗೆ ಮನಃಪಟಲದ ಮುಂದೆ ಹಾದು ಹೋಯ್ತು. ಈಗೀಗ ಮೀಸೆ ಮೂಡುತ್ತಿರುವ ಹುಡುಗರೂ ಏನೊ ನಗಣ್ಯವಾದದ್ದೇನೊ ನಿಭಾಯಿಸಿ ಏನೂ ಘನವಾದದ್ದೇನೂ ನಡೆದೆ ಇಲ್ಲವೆಂಬಂತೆ ಕೂಲಾಗಿ ಚರ್ಚಿಸುತಿದ್ದರೆ ಶ್ರೀನಾಥನ ಹೊಟ್ಟೆಯಲ್ಲೇನೊ ಕೀಳರಿಮೆಯ ಸಂಕಟ. ತೀರಾ ಎಳಸು ಹುಡುಗರ ಮುಂದೆಯೂ ತಾನು 'ಬಚ್ಚಾ' ಹಾಗೆ ಕಾಣುತ್ತಿರುವನೆಂಬ ಅನಿಸಿಕೆಯೆ ಶ್ರೀನಾಥನನ್ನು ಇನ್ನಷ್ಟು ಕುಗ್ಗಿಸಿ ತಾನು ನಿಜಕ್ಕೂ ಏನೂ ಮಾಡಲಾಗದ ಕೈಲಾಗದವನೆಂದು, ಅಸಹಾಯಕನೆಂದು ಅನಿಸಿ ತಾನು ತೀರಾ ಕೆಲಸಕ್ಕೆ ಬಾರದ ಹಂದೆಯೆಂಬ ಭಾವನೆಗೆ ಮತ್ತಷ್ಟು ಕುಮ್ಮುಕ್ಕು ನೀಡಿ ಪೆಚ್ಚಾಗಿಸಿಬಿಟ್ಟಿತು. ಮನದೊಳಗೆಲ್ಲ ಈ ಕೆಸರಿನ ರಾಡಿಯೆಬ್ಬಿಸಿದ ಈ ಸಂಭಾಷಣೆಯಡಿ ಯಾಕೆ ಸಿಕ್ಕಿಕೊಂಡೆನೊ, ಯಾಕೆ ಈ ದಿನ ಈ ರೀತಿ ಕತ್ತಲೆ ಬೆಳಕಿನ ಹೊಯ್ದಾಟದ ಹಾಗೆ ವಿಚಿತ್ರ ಘಟನೆಗಳು ನಡೆದು ಯಾವುದೊ ಟ್ರಾನ್ಸಿನಲ್ಲಿರುವ ಹಾಗೆ ಭ್ರಮೆಯುಂಟು ಮಾಡುತ್ತಿವೆಯೊ ಎಂದೆಲ್ಲಾ ಚಿಂತಿಸುತ್ತ ಕುಳಿತವನಿಗೆ ಯಾಕೊ ಆ ಗಳಿಗೆಯಲ್ಲೂ ಇದ್ದಕ್ಕಿದ್ದಂತೆ ನೆನಪಾದ ಮುಖ ಕುನ್. ಸೂ. ಇಷ್ಟೆಲ್ಲದರ ನಡುವೆ ಯಾಕೆ ಇದ್ದಕ್ಕಿದ್ದಂತೆ ಅವಳ ನೆನಪಾಯಿತೆಂದು ಅರಿವಾಗದೆ ಅಚ್ಚರಿಪಡುತ್ತಿದ್ದವನಿಗೆ ತಟ್ಟನೆ ಸುತ್ತಲಿನ ಜನರು ಮತ್ತೆ ಬೀದಿಗಿಳಿಯುತ್ತಿರುವುದನ್ನು ನೋಡಿದಾಗಲಷ್ಟೆ ಮಳೆ ನಿಂತಿದ್ದುದು ಗಮನಕ್ಕೆ ಬಂತು. ಅದೆ ಹೊತ್ತಿನಲ್ಲಿ ನೆನಪಾಗಿದ್ದ ಕುನ್. ಸೂ ವಿನ ದೆಸೆಯಿಂದಾಗಿ ಇದ್ದಕ್ಕಿದ್ದಂತೆ ತಾನು ಬೆಳಗ್ಗಿನಿಂದ ಕಾಫಿಯನ್ನೆ ಕುಡಿದಿಲ್ಲವೆಂಬ ನೆನಪಾಗಿ ಎದುರು ಸಾಲಿನಲ್ಲಿದ್ದ ಕಾಫಿ ಬಾರ್ / ರೆಸ್ಟೋರೆಂಟಿನತ್ತ ಹೆಜ್ಜೆ ಹಾಕಿದ್ದ ಶ್ರೀನಾಥ.

(ಇನ್ನೂ ಇದೆ)
_______________
 

Comments

Submitted by nageshamysore Tue, 04/08/2014 - 03:14

In reply to by kavinagaraj

ಕವಿಗಳೆ, ಚಿತ್ತ ವಿಹಾರದ ಕೈಗೆ ಬುದ್ದಿ ಕೊಟ್ಟಾಗ ಹುಡುಕುವ ವಿಳಾಸ ನೆಟ್ಟಗಿದ್ದರೇನೊ ಸರಿ; ಇಲ್ಲದಿದ್ದರೆ ಹೊಕ್ಕಿದ್ದು ಬಂಗಲೆಯೆಂದನಿಸಿದರೂ 'ಭೂತ ಬಂಗಲೆ' ಎನ್ನುವುದನ್ನು ಬಹು ಬೇಗನೆ ಅರಿವಾಗಿಸಿಬಿಡುತ್ತದೆ. ಮಾಡಿದ್ದೆಲ್ಲಾ ಕರ್ಮ ಫಲ ತಿರುಗುವ ಚಕ್ರದಲ್ಲಿನ ಬಿಂದುವಿದ್ದಂತೆ - ಮೇಲೆ ಹತ್ತಿದಷ್ಟೆ ಸಹಜವಾಗಿ ಕೆಳಗಿಳಿಸಿಬಿಡುತ್ತದೆ ಕಾಲ ಚಕ್ರ. ಶ್ರೀನಾಥನ ಕಥೆ ಹೇಗೊ ಕಾದು ನೋಡೋಣ :-)