ಶೂನ್ಯತೆ,
ಕೆಲವು ದಿನಗಳ ಹಿಂದೆ, ವಯಸ್ಸಿನಲ್ಲಿ ವೃದ್ದರಾದವರು ವಾಸಿಸುವ ಆಶ್ರಮವೊಂದಕ್ಕೆ ಭೇಟಿ ನೀಡಿದ್ದೆ,,,,ಮಾಗಿದ ಮನಸುಗಳ ಒಟ್ಟು ಸಮೂಹ ಅಲ್ಲಿತ್ತು,,,,,,, ದೇಹದ ಸೌಂದರ್ಯ ಮಾಸಿ ಬಗ್ಗಿ ನಡೆಯುತ್ತಿದ್ದ ವ್ಯಕ್ತಿಗಳು ಅಲ್ಲಿದ್ದರು,,,,,,,,,ಎಲ್ಲರ ಕಣ್ಣು ಆಳದಲ್ಲಿ ಆಡಗಿ ಕುಳಿತಿದ್ದವು, ಇನ್ನು ಕೆಲವರ ದೃಷ್ಟಿಯೂ,,,,,ಎಲ್ಲರಿಗೂ ಹಣ್ಣು ಹಂಚುವುದು ನನ್ನ ಉದ್ದೇಶವಾಗಿತ್ತು,,,,,,,,
ಮಾಗಿದ ಹಣ್ಣು ಉಪಯೋಗಿಸುವ ಜನ, ಮಾಗಿದ ದೇಹಗಳನ್ನು, ರಸ್ತೆಯ ಬದಿಯಲ್ಲಿ ಬಿಸುಟು ಹೋಗಿದ್ದರು, ಅಂತಹ ಬಿಸುಟ ದೇಹಗಳಲ್ಲಿ ಜೀವ ಇತ್ತು ಎನ್ನುವುದು ವಿಪರ್ಯಾಸ, ಆ ರೀತಿ ಅಲ್ಲಿ ಇಲ್ಲಿ ಸಿಕ್ಕ ಜೀವಗಳನ್ನು ಪುಣ್ಯಾತ್ಮರು ಕರೆ ತಂದು ಆಶ್ರಮದಲ್ಲಿ ಆಸರೆ ನೀಡಿದ್ದರು, ಹಣ್ಣು ಹಂಚಲು ಹೋದ ನಾನಾದರೋ ಬರಿಯ ದಾರಿಹೋಕ, ಹಣ್ಣು ಕಂಡ ಕುಶಿಗೆ, ಹಾಗು ಅಲ್ಲಿನ ದಾದಿಯಮ್ಮನ ಮಾತಿಗೆ ಎಲ್ಲರು ಸಾಲಾಗಿ ಕುಳಿತರು, ಕೈ ಇಲ್ಲದವರು ಕೆಲವು ಜನ, ಕಾಲಿಲ್ಲದವರು, ಯಾವಗಲು ನಗುತ್ತಲೇ ಇರುವವರು, ಯಾವಗಲು ಅಳುತ್ತಲೇ ಇರುವವರು, ಆಕಾಶ ದಿಟ್ಟಿಸುವವರು, ನೆಲ ಕೆರೆಯುವವರು, ಬಟ್ಟೆಯನ್ನು ಮುಖದ ತುಂಬಾ ಸುತ್ತಿ ಮುಖದ ಮೇಲಾದ ಗಾಯದ ಕಲೆ ಮರೆಮಾಚುವವರು, ಚರ್ಮದ ಸುಕ್ಕಿನಲ್ಲೂ ಗುಳ್ಳೆಗಳ ನೋವು ಅನುಭವಿಸುವವರು, ಇನ್ನು ಅನೇಕ ತರದವರು ಅಲ್ಲಿದ್ದರು,,,,,
ಅವರ ಸ್ತಿತಿ ನೋಡಿದ ನನಗೆ ಮೈ ಜಳವೆಲ್ಲ ಇಳಿದು ಹೋಯಿತು, ಇವರೆಲ್ಲರ ಮದ್ಯ ನಾನ್ಯಾರು? ಇವರೆಲ್ಲರಿಗಿಂತ ನಾನು ಸುಬುಗ ಸಂಪನ್ನ, ಎಲ್ಲ ಸರಿ ಇರುವ ಶಕ್ತಿಶಾಲಿ ಎನ್ನುವ ಅಹಂ ಅನ್ನು ತೋರ್ಪಡಿಸಲು ಬಂದವನೆಂದು, ಹಾಗು ಇವರಿಗೆ ಹಣ್ಣು ಹಂಚಿ ನಾನು ಮಹಾನ್ ಧಾನಿ ಎನಿಸಿಕೊಳ್ಳಲು ಬಂದ ಕಿರಾತಕ ಎಂದು ಬಾಸವಾಯಿತು,,,,,,, ಒಂದೊಂದೇ ಹೆಜ್ಜೆ ಮುಂದಿಟ್ಟೆ, ಅಜ್ಜಿ ಹಣ್ಣು ಎಂದು ಒಬ್ಬರ ಕೈಗೆ ಇಡಲು ಹೋದೆ, ಕೈ ಚಾಚಲು ಆಕೆಗೆ ಕೈ ಇಲ್ಲ, ನನ್ನ ಮೊದಲ ಹೆಜ್ಜೆಯಲ್ಲಿಯೇ ಅಜ್ಜಿಗೆ ಕೈ ಇಲ್ಲ ಎಂದು ನಾನು ನೆನಪಿಸಿ ಕ್ರೌರ್ಯ ಮೆರೆಯುತ್ತಿರುವೆನೇನೋ ಎಂಬಾ ಬಾವನೆ ಆವರಿಸಿತು,,,,ಅಜ್ಜಿಯ ಪಕ್ಕ ಕುಳಿತ ಅಜ್ಜಿಗಿಂತ ಸ್ವಲ್ಪ ಕಮ್ಮಿ ವಯಸ್ಸಿನಾಕೆ ಇಬ್ಬರ ಪಾಲಿನ ಹಣ್ಣು ಸ್ವೀಕರಿಸಿದಳು, ಅಜ್ಜಿ ಮುಗುಳ್ನಕ್ಕರು, ಆ ನಗುವನ್ನು ನಾನು ವರ್ಣಿಸಲು ಅರ್ಹನೆ ?
ಮುಂದೆ ನಡೆದೇ, ಕೈ ಚಾಚಿದರು ಇನ್ನೊಬ್ಬರು, ಅಯ್ಯೋ ವಿದಿಯೇ ಎನಿಸಿತು, ಕೈ ನಡುಗುತ್ತಿದೆ, ಆಕೆಯದಲ್ಲ, ನನ್ನ ಕೈ, ಆಕೆಯ ಕೈ ತುಂಬಾ ದೊಡ್ಡ ಬಿಳಿ ಗುರುತುಗಳು, ಅಲ್ಲಲ್ಲಿ ರಕ್ತ ವಸರುತ್ತಿದೆ, ಆಕೆಯೇ ಮುಖ ನೋಡಿದೆ, ಸ್ನಿಗ್ಧ ನಗು,,, ಅದು ಹೇಗೆ ಸಾದ್ಯವೋ ನನಗೆ ತಿಳಿಯದು, ಇನ್ನು ಮುಂದೆ ಅಡಿ ಇಟ್ಟೆ, ಆಕೆ ನಗುತ್ತಿದ್ದಾಳೆ, ಸುಮ್ಮನೆ ನಗುತ್ತಿದ್ದಾಳೆ, ಜಾಸ್ತಿ ವಯಸ್ಸೇನು ಆಗಿಲ್ಲ, ಹಣ್ಣನ್ನು ಮುಂದೆ ಚಾಚಿದೆ, ನಗುತ್ತಲೇ ತೆಗೆದುಕೊಂಡಳು,,,,, ನಗು ನಿಂತಿರಲೇ ಇಲ್ಲ,,,, ಅದ್ಯಾವ ನಗು??
ಇನ್ನು ನಾಲ್ಕು ಹೆಜ್ಜೆ ಮುಂದೆ ಅಡಿ ಇಟ್ಟೆ, ಮುದುರಿ ಕುಳಿತ ಮುಗ್ಧ ಕಣ್ಣಿನಾಕೆ, ಕಣ್ಣಲ್ಲಿ ಯಾವ ಭಾವನೆಗಳು ಕಾಣುತ್ತಿಲ್ಲ, ಬರಿ ನಿರ್ವಾಣ,,,,,,,ಅವ್ವಾ ಹಣ್ಣು ಎಂದು ಕೈ ಮುಂಚಾಚಿದೆ,,,, ನಿಧಾನವಾಗಿ ಆಕೆಯ ಕೈ ಎತ್ತಿ ಹಣ್ಣು ತೆಗೆದುಕೊಂಡಳು, ಆಕೆಯ ಮುಖ ನೋಡಿದೆ, ತಕ್ಷಣವೇ ಕೇಳಿದಳು, "ಮಗ! ನನ್ನ ಮಗಳನ್ನಾ ಕರ್ಕ ಬತ್ತಿಯಾ" ಎಂದು,,,,, ನಾನು ಮುಜುಗರದಿಂದ ಮೌನವಾಗಿ ನಿಂತೇ, "ಇದೆ ಕೈ ಯಾಗೆ ಎತ್ಕಂಡಿದ್ದೆ ಮಗ, ಹೋಗಬಿಟ್ಲು ಮಗ,,,,,,, ಮಗ! ನನ್ನ ಮಗಳನ್ ಕರ್ಕಾ ಬತ್ತಿಯಾ" ದೂರದಿಂದ ಒಂದು ಹೆಂಗಸಿನ ದ್ವನಿ ಕೇಳಿತು, ಅಯ್ಯೋ ಆಯಮ್ಮ ಅಂಗೆಯ, ಮಗಳು ಬೇಕು ಅಂತ ಕೇಳ್ತಾ ಇತ್ತದೆ, ನೀನು ಎಲ್ಲರಿಗೂ ಹಂಚಪ್ಪ,,,,,,, ಆಕೆ ಬಡಬಡಿಸುತ್ತನೆ ಇದ್ದಳು,,,,,ಮುಂದೆ ನಡೆದೇ,,,,, ಕಾಲಿಲ್ಲದ ವ್ಯಕ್ತಿಯೊಬ್ಬರು ಕುರ್ಚಿಯ ಮೇಲೆ ಕುಳಿತಿದ್ದರು, ಅವರ ಸ್ಥಿತ ಪ್ರಜ್ಞೆ ಬಹಳ ಗಮನ ಸೆಳೆಯುವಂತಿತ್ತು, ಜಗತ್ತಿನ ಸತ್ಯ ತಿಳಿಯಲು ಹೋರಾಟ ವಿಜ್ಞಾನಿಯ ಕಣ್ಣಲ್ಲಿಯೂ ಗೊಂದಲವೊಂದು ಎಲ್ಲಿಯೋ ಮನೆಮಾಡಿರುತ್ತದೆ, ಆದರೆ ಈಕೆಯ ಕಣ್ಣಲ್ಲಿ ಯಾವ ಗೊಂದಲಗಳೂ ಇಲ್ಲ,, ಸಾಗರವಿದೆ, ಅಲೆಗಳು ಕಾಣುತ್ತಿಲ್ಲ ಎನ್ನಿಸಿತು ನನಗೆ, ಹೌದು ಎಲ್ಲವನ್ನು ಅವಡುಗಚ್ಚಿ ಮುಚ್ಚಿಟ್ಟು ನಗುತ್ತಿದ್ದರು ಆ ವೃದ್ದೆ, ಬಹಳ ಪ್ರೌಡ ಮನಸಿನವರೆಂದು ಅವರ ಮುಖ ಹೇಳುತ್ತಿತ್ತು, ಹಣ್ಣು ತೆಗೆದುಕೊಂಡು ಕೇಳಿದರು,"ಯಾವ ಊರು ಪುಟ್ಟ ನಿನ್ನದು",,,,, ನಾನೆಂದೆ ಸದ್ಯಕ್ಕೆ ಇದೇ ಊರು ಅವ್ವ,,,,ನಿಮ್ಮದು ಯಾವ ಊರು ನಾನು ಕೇಳಿದೆ, ನಕ್ಕರು, ನಿನ್ನ ಉತ್ತರವೇ ನನ್ನದು, ಅವರ ಬಳಿ ಕುಳಿತು ಇನ್ನು ಎನೇನೊ ಕೇಳಬೇಕೆನಿಸಿತು, ಆದರೆ ಅವರೇ ಹೇಳಿದರು, "ಹೋಗು ಪುಟ್ಟಾ ಉಳಿದವರಿಗೆ ಹಂಚು" ಎಂದು, ನಾನು ಮುಂದುವರೆದೆ, ಕೆಲವರು ಇನ್ನು ಜಾಸ್ತಿ ಹಣ್ಣು ಬೇಕೆಂದರು, ಕೆಲವರು ಹಾರೈಸಿದರು, ಕೆಲವರು ನನ್ನನ್ನು ಅತೀ ಚಿಕ್ಕ ಮಗುವಂತೆ ಕಂಡರೂ, ಇನ್ನು ಕೆಲವರು ನನ್ನನ್ನು ಅದ್ಯಾವುದೋ ಅರ್ಥವಿಲ್ಲದ ದೃಷ್ಟಿಯಲ್ಲಿ ನೋಡುತ್ತಿದ್ದರು, ಕೆಲವರು ಕೈ ಮುಗಿಯುವ ಹಾಗೆ ಮಾಡಿದರು, ಆಗಂತೂ ನನಗೆ ಚೇಳು ಕುಟುಕಿದ ಅನುಭವ, ಅವರ ಜೀವನ ಅನುಭವದ ಎದುರು ನಾನು ಶೂನ್ಯ, ಅದು ಅಲ್ಲದೆ ಯಾವ ಮಹಾನ್ ಗುಣಕ್ಕಾಗಿ ನನಗೆ ಕೈ ಮುಗಿಯಬೇಕು ಅವರು, ಕಣ್ಣಲ್ಲಿಯೇ ಬೇಡ ಅವ್ವ, ಹಾಗೆ ಮಾಡಬೇಡಿ ಎಂದು ಕೇಳಿಕೊಂಡೆ,,,,,,
ಅಲ್ಲಿ ದೈಹಿಕವಾಗಿ ಆರೋಗ್ಯವಾಗಿದ್ದ ಕೆಲವರು, ಆಶ್ರಮದ ವಿವಿದ ಕೆಲಸಗಳಲ್ಲಿ ತೊಡಗಿದ್ದರು,,,, ಒಬ್ಬರ ನಿರ್ವಾಣವನ್ನು ಇನ್ನೊಬ್ಬರು ತುಂಬುತ್ತಿದ್ದರು,,,,, ಒಬ್ಬರಿಗೊಬ್ಬರು ದೇಹದ ಶುಚಿತ್ವದಲ್ಲಿ ಬಾಗಿಯಾಗುತ್ತಿದ್ದರು,,,,, ಪೊಳ್ಳು ಬದುಕು ಅಲ್ಲಿರಲಿಲ್ಲ, ಪ್ರತಿ ಕ್ಷಣವೂ ನೋವಿತ್ತು, ಪ್ರತಿ ಕ್ಷಣವೂ ನೋವನ್ನು ಮೀರಿ ಬೆಳೆಯುವ ನಲಿವಿತ್ತು,,,,,,, ಈಗ ಒಬ್ಬರ ಮುಂದೆ ನಿಂತು ಹಣ್ಣನ್ನು ಚಾಚಿದೆ,,,,,, "ಬುಟ್ಬುಟ್ಟ ಕಣ್ ಮಗಾ, ನನ್ನ ಬೀದಿ ಮೇಲ್ ಬುಟ್ ಬುಟ್ಟಾ, ಆ ತಾಟಗಿತ್ತಿ ಸೆರಗು ಹಿಡಿದುಕೊಂಡು ಹೊಗವ್ನೆ ಮಗಾ, ಒಂದ್ ಸಲ ಅವನ್ನ ನೋಡ್ ಬೇಕು ಮಗ, ಚುರಕ್ ಅಂತದೆ ಮಗ ಹೆತ್ತ ಕರಳು, ಅಂವಾ ಬಂದೆ ಬತ್ತನೆ ಅಂತಾ ಅನ್ಸ್ತೈತೆ ಮಗಾ,,,,, ಬತ್ತಾನ?" ಕೇಳಿತು ಆ ಜೀವ,,,,,,ನಾನು ಏನು ಉತ್ತರಿಸಲಿ,,,,, ಬರ್ತಾನೆ ಅವ್ವ ಎಂದೇ, "ಕಾಯ್ತಾ ಇವ್ನಿ ಮಗ",,,,,ನನ್ನದು ಮೌನ,,,,
ಅಲ್ಲಿ ಹಾಡು ಹೇಳುತ್ತಾ ಎಲ್ಲರನ್ನು ನಗಿಸುತ್ತಾ ಕುಳಿತಾ ಒಂದು ಅಜ್ಜಿ ಕಣ್ಣಿಗೆ ಬಿದ್ದರು ,,,,,ಅಜ್ಜಿ ನೈಟಿ ಹಾಕಿ ಚಿಗುರಿದ ಹುಡುಗಿಯಂತೆ ಕಾಣುತ್ತಿದ್ದರು , (ಚಿತ್ರದಲ್ಲಿ ಇರುವಂತೆ),,,,,,,,ಅವರು ನಾಟಕದ ಕೆಲವು ಗೀತೆಗಳನ್ನು ಹಾಡ್ತಾ ಇದ್ದರು, ಎಲ್ಲರೂ ನಗುತ್ತ ಅವರ ಹಾಡು ಕೇಳುತ್ತಿದ್ದರು, ಹಾಗೆಯೇ ನಾಟಕದ ಕೆಲವು ಸಂಬಾಷಣೆಗಳು ಕೂಡ, ಕೇಳುತ್ತಾ ಎಲ್ಲರೂ ನಗೆಗಡಲಲ್ಲಿ ತೇಲುತ್ತಿದ್ದರು, ಜೊತೆಗೆ, ಅದು ಹೇಳು, ಇದು ಹೇಳು, ಕೀಚಕನ ಸಂಬಾಷಣೆ ಹೇಳು ಎಂದೆಲ್ಲ ದುಂಬಾಲು ಬಿದ್ದಿದ್ದರು, ಅಜ್ಜಿ ನಗುತ್ತಲೇ ಹೇಳುತ್ತಿದ್ದರು,,,,, ಹಾಗೆಯೇ ತಟ್ಟನೆ ಅಜ್ಜಿಯ ಕಣ್ಣಲ್ಲಿ ನೀರು, ಈಗ ನಗು ಮಾಯಾ, ಅಳುತ್ತಾ ಹೇಳಿದ್ರು, ಇದು ನಮ್ಮೆಜಮಾನ್ರು ಹೇಳಿ ಕೊಟ್ಟ ನಾಟಕದ ಸಾಲುಗಳು,,,, ಮತ್ತೆ ಅಳು,,,,,,ಪಕ್ಕದಲ್ಲಿ ಕುಳಿತ ಅಜ್ಜಿ ಹೇಳಿತು " ಬಸ್ ಸ್ಟ್ಯಾಂಡಿನಾಗ ಈವಮ್ಮನ ಗಂಡ ಬುಟ್ಟು ಹೋಗ್ ಬುಟ್ನನಂತೆ, ಮಗ ಒಂದು ಚಿಕ್ಕ ವಯಸ್ಸಲ್ಲೇ ಸತ್ತೊಯ್ತಂತೆ, ಈಯಮ್ಮಂಗೆ ಅವಳ್ ಯಜಮಾನಪ್ಪಂದೆ ಗ್ಯಾನ, ಬಂದೆ ಬತ್ತಾನೆ ಅಂತಾ ಕಾಯ್ತಾ ಐತೆ" ಎಂದು,,,,,,,, ಕಾತುರತೆ ಅಂದರೆ ಏನು ಅಂತ ಸರಿಯಾಗಿ ಅರ್ಥವಾಯಿತು,,,,,
ಈಗ,,,,,, ನಡೆಯಲೂ ಆಗದೆ ಕಟ್ಟಡದ ಒಳಗೆಯೇ ಕುಳಿತವರಿಗೆ ಹಂಚಲು ಹೊರಟೆ, ಒಳಗೆ ಹೋಗುತ್ತಿದ್ದಂತೆ, ಅಲ್ಲಿನ ದೃಶ್ಯಗಳು ಮನಸ್ಸನ್ನು ಹಿಂಡಿ ಹಿಪ್ಪೆ ಮಾಡಿ ಬಿಟ್ಟವು, ಸಾವಿಗೆ ಅತೀ ಹತ್ತಿರ ಆದವರು ಅವರು, ಅವರ್ಯಾರ ಕಣ್ಣಲ್ಲಿಯೂ ಭಯವೆನ್ನುವುದ ನಾನು ಕಾಣಲೇ ಇಲ್ಲ, ಆದರೆ ನರಳಾಟ ಇತ್ತು, ನನ್ನ ಎದೆ ಕಂಪಿಸಲಾರಂಬಿಸಿತು, ಕಾಲುಗಳು ನಡುಗಲು ಆರಂಬಿಸಿದವು, ಯಮ ಯಾತನೆ ಏನೆಂದು ಕೇಳಿದ್ದೆ, ಈಗ ನೋಡುತ್ತಿದ್ದೇನೆ, ಸಾಂತ್ವನ ಹೇಳುವುದು ಯಾರಿಗೆ?
ಆ ನರಳಾಟದ ದ್ವನಿಗಳ ಮಧ್ಯ ಕೆಲವು ಮಂದಸ್ಮಿತ ಜೀವಗಳು ಕಾಣಸಿಕ್ಕಿದವು, ಅವರೆಲ್ಲರಿಗೂ ಬಹಳಷ್ಟು ಸಾವನ್ನು ನೋಡಿ, ಸಾವಿನ ಮಹಿಮೆ ಅರ್ಥವಾದಂತೆ ಕಾಣುತ್ತಿತ್ತು, ಎಲ್ಲರೂ ಸಾವಿಗೆ ಕಾದು ಕುಳಿತಂತೆ ತೋರುತ್ತಿತ್ತು,,,,,ಆ ಕಟ್ಟಡದಿಂದ ಹೊರಬರುವ ವೇಳೆಗೆ, ನಾನು ಅದೇನೋ ಹೇಳಲಾಗದ ಸಂದಿಗ್ಧ ಪರಿಸ್ತಿತಿಯಲ್ಲಿ ಸಿಲುಕಿದ್ದೆ,,,,
"ದಗದಗಿಸುವ ದಿಗಿಲಿನ ಜೀವಗಳಿಲ್ಲಿ,,,,
ಹೆತ್ತವರ ದೇಹವನ್ನು ಬಿಸುಟು,ಮನಸ್ಸನ್ನು ಸುಟ್ಟು ಹೋದ ಜೀವಗಳು ಎಲ್ಲಿ?
ಯುದ್ಧಬೇಕು ನಮಗೆ, ದೇಶ ಕಾಪಾಡಲು,
ನಗ-ನಾಣ್ಯ ಬೇಕು, ಐಶಾರಾಮ ಬೇಕು,
ಕಾಮದಿ ಮೆರೆದು, ಪ್ರೇಮವ ಸುಟ್ಟು,
ಸಂಬಂದಗಳನು ಕಳಚಿ, ಮೆರೆದಾಡಬೇಕು,
ಎಲ್ಲರನು ಹಿಂಸಿಸಿ, ದ್ವಂಸ ಮಾಡಿ ನಾವು ಬಧುಕಬೇಕು,
ನಮಗೆ ಧರ್ಮ ಬೇಕು, ಧರ್ಮಕ್ಕಾಗಿ ಹೊಡೆದಾಟ ಬೇಕು,
ದೇವರು ಬೇಕು ನಮಗೆ, ಅವನ ಕೃಪೆ ಬೇಕು,
ವಿದ್ಯೆ ಬೇಕು, ವಿಜ್ಞಾನದ ಸವಲತ್ತು ಬೇಕು,
ಪ್ರಕೃತಿಯನು ದಹಿಸಿ, ನಾವು ಸಂಪದ್ಭರಿತವಾದೆವೆಂದು ಬೀಗಬೇಕು,,
ಚಿರಂಜೀವಿ ಆಗಬೇಕು ನಾವು,,,,,
ಎಲ್ಲವು ಬೇಕುಗಳೇ,,,,,
ನಮಗೆ ಸಾವು ಮಾತ್ರ ಬೇಡ,,,,,
ಆಶ್ರಮಕ್ಕೆ ಹೋಗುವ ಮುಂಚೆ ನಾನು ಬೀಗುತ್ತಿದ್ದೆ, ಆಶ್ರಮದಿಂದ ಹೊರಬಂದಾಗ ನನ್ನ ನಶ್ವರತೆಯ ಅರಿವಾಯಿತು, ಎಲ್ಲ ಸುಳ್ಳಿಲ್ಲಿ, ಯಾವುದೂ ಶಾಶ್ವತ ಅಲ್ಲ, ನಾವೇ ಪ್ರಪಂಚದ ಸರ್ವೋತ್ತಮ ಮಹಶಯರಂತೆ ಬದುಕುತ್ತೇವೆ,ಆದರೆ ಪ್ರಕೃತಿ ನಮಗಿಂತ ಬಹಳ ದೊಡ್ಡದು, ಅದು ಏನು ಬೇಕಾದರೂ ಮಾಡಬಲ್ಲದು, ಮನಸ್ಸು ಮತ್ತು ಭಾವನೆ, ಇವೆರಡರ ಅಡಿಯಲ್ಲಿ ಸಿಲುಕಿ ಗಳ-ಗಳ ನಡುಗುತ್ತೇವೆ,,,,, ಗಟ್ಟಿಗರಾರು ???
ಬದುಕಿಗೆ ವ್ಯಕ್ಯಾನ ನೀಡುವ ವ್ಯಕ್ತಿ ಯಾರಿದ್ದಾರೆ?
ಅದೇನೇ ಇರಲಿ ವಾಸ್ತವದ ದಿನಗಳಲ್ಲಿ ಇಳಿವಯಸ್ಸಿನ ತಂದೆ ತಾಯಿಗಳನ್ನು ಒಂಟಿ ಮಾಡುವುದು ಬೇಡ,,,,,,,,,,,, ಬೇಡವೇ ಬೇಡ,,,,,,,,,,
ಇದು ಲೇಖನ ಅಲ್ಲ, ಕಥೆ ಅಲ್ಲ, ಕಾವ್ಯ ಅಲ್ಲ,,, ಇದು ಏನೇನು ಅಲ್ಲ, ಇದು ಶೂನ್ಯತೆ,
-ನವೀನ್ ಜೀ ಕೇ
Comments
ಉ: ಶೂನ್ಯತೆ,
ನಿಮ್ಮ ಕಳಕಳಿ ಅಭಿನಂದನೀಯ. ಅವರ ಪೈಕಿ ಒಬ್ಬರನ್ನು, ಅಧಿಕೃತವಾಗಿ ಅಲ್ಲದಿದ್ದರೂ, ದತ್ತು ತೆಗೆದುಕೊಂಡಂತೆ ಅವರ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾದರೆ ಒಳಿತು. ನಿಮ್ಮ ಸ್ನೇಹಿತರನ್ನೂ ಈ ಬಗ್ಗೆ ಪ್ರೇರಿಸಬಹುದು. ಧನ್ಯವಾದಗಳು, ನವೀನರೇ.
In reply to ಉ: ಶೂನ್ಯತೆ, by kavinagaraj
ಉ: ಶೂನ್ಯತೆ,
ಕವಿಗಳಿಗೆ ನಮಸ್ತೆ, ಖಂಡಿತಾ ಕವಿಗಳೇ ನಿಮ್ಮ ಮಾತುಗಳನ್ನು ಸ್ವೀಕರಿಸಿದ್ದೇನೆ,,,,,