ಕಾಂಬೋಡಿಯ
ಹೋಟೆಲು ರೂಮಿನ ಬೀಗ ಹಾಕಿ ಒಮ್ಮೆ ಹೊರಗೆ ಬಂದು ರಸ್ತೆ ದಾಟುತ್ತಿರುವಂತೆ ಇದ್ದಕ್ಕಿದ್ದ ಹಾಗೆ ಬೆಂಗಳೂರಿನ ಶಿವಾಜಿನಗರದ ರೋಡು ಹೊಕ್ಕಂತೆ ಭಾಸವಾಯಿತು. ಆದರೆ ಅಲ್ಲಿನ ಮುಖಗಳು ಮಾತ್ರ ಈಶಾನ್ಯ ರಾಜ್ಯದ ಗೆಳೆಯರಂತೆ. ಒಂದು ಕಾಲದಲ್ಲಿ ರೋಡಿನ ಎರಡೂ ಮಗ್ಗಲುಗಳಲ್ಲಿ ನಾಜೂಕಾಗಿ ಕಲ್ಲುಗಳನ್ನು ಜೋಡಿಸಿ ಅಲ್ಲಲ್ಲಿ ಗಿಡ ಮರಗಳನ್ನು ನೆಟ್ಟು ಫ್ರೆಂಚರು ಕಟ್ಟಿಸಿಕೊಟ್ಟ ವಿಶಾಲವಾದ ಬುಲವಾಯೊ (boulevard) ಈಗ ಪಾದಚಾರಿಗಳಿಗೆ ಒಂದಷ್ಟೂ ಜಾಗಬಿಡದಂತೆ ಸಣ್ಣ ವ್ಯಾಪಾರಿಗಳು, ತಿಂಡಿ ಗಾಡಿಗಳಿಂದ ತುಂಬಿಕೊಂಡಿತ್ತು. ನಡುರಸ್ತೆಯಲ್ಲೇಅತ್ತಕಡೆಯಿಂದ ಬರುತ್ತಿದ್ದ ವಾಹನಗಳೆಡೆ ಒಂದು ಕಣ್ಣಿಟ್ಟು ಮುಂದೆ ನಡೆದಿದ್ದೆ. ರಸ್ತೆಯ ಬಲಮಗ್ಗುಲಲ್ಲಿ ಮುಂಬದಿಯಿಂದ ವಾಹನಗಳು ಬರುತ್ತಿದ್ದುದರಿಂದ ನಡುರಸ್ತೆಯಲ್ಲಿ ಚಲಿಸುವಾಗ ಹಿಂದೊಮ್ಮೆ ಗಮನಿಸಿಯೇ ಮುಂದಕ್ಕೆ ಹೋಗಬೇಕು. ಅಲ್ಲೊಂದು ವರ್ಕ್ ಶಾಪಿನ ವೆಲ್ಡಿಂಗ್ ಮೆಶೀನು ರೋಡು ತುದಿಗೆ ಬಂದು ಕುಳಿತದ್ದು ನನಗೆ ಹಿರಿಯೂರಿನ ನೆನಪು ತಂದಿತ್ತು.
ಅಲ್ಲಲ್ಲಿ ಗುಂಪು ಗುಂಪಾಗಿ ಕುಳಿತಿದ್ದ ಆಟೋ ಡ್ರೈವರುಗಳು ಹೊರದೇಶದವನಾದ ನನ್ನನ್ನು ಕಂಡು "ತುಕ್ ತುಕ್?" ಎಂದು ಕೂಗುತ್ತ ಓಡಿ ಬಂದರು. ಏನೂ ಸ್ಪಷ್ಟ ಕೇಳಲೊಲ್ಲದಂಥ ನುಡಿ. ಅತ್ತ ಚೀನಿ ಭಾಷೆಯೂ ಅಲ್ಲ, ಇತ್ತ ಮಲಯ್ ಭಾಷೆಯಂತೆಯೂ ಕೇಳುವುದಿಲ್ಲ.
ರಸ್ತೆ ಬದಿಯಲ್ಲಿ ಒಂದು ದೊಡ್ಡ ದೇವಸ್ಥಾನ ಕಂಡಿತು. ಹೊರಗಿನಿಂದ ನೋಡುವುದಕ್ಕೆ ನಮ್ಮ ದೇಶದಲ್ಲಿ ಕಾಣಸಿಗುವ ಹಳೆಯ ದೇವಾಲಯದಂತೆ ಕಾಣುತ್ತಿತ್ತು - ಆದರೆ ಶಿಲ್ಪಗಳು ವಿಭಿನ್ನ ಶೈಲಿಯವು. ಇಲ್ಲಿ ನಾಲ್ಕು ಹೆಡೆಯ ಸರ್ಪ, ಸಿಂಹ - ಇವುಗಳ ಶಿಲ್ಪ ಎಲ್ಲ ಧಾರ್ಮಿಕ/ಸಾಂಪ್ರದಾಯಿಕ ಕಟ್ಟಡಗಳಲ್ಲಿ ಕಾಣಸಿಗುತ್ತದೆ. ಅಲ್ಲಿಯೇ ಒಂದಷ್ಟು ಮುಂದೆ ಥೇಟ್ ನಮ್ಮ ಬೆಂಗಳೂರಿನವರ ಥರಾ ಲೌಡ್ ಸ್ಪೀಕರ್ ಹಾಕಿಕೊಂಡು ರೋಡು ಅಡ್ಡಗಟ್ಟಿ ಶಾಮಿಯಾನ ಹಾಕಿಸಿದ್ದರು! ವ್ಯತ್ಯಾಸವೆಂದರೆ ಶಾಮಿಯಾನ ಅರ್ಧ ರಸ್ತೆಯನ್ನು ಮಾತ್ರ ಆಕ್ರಮಿಸಿಕೊಂಡಿತ್ತು. ಮೊದಲಿಗೆ ಶ್ಲೋಕಗಳಂತೆ ಕೇಳಿಬಂದರೂ ಇದು ಭೌದ್ಧ ಸಂಪ್ರದಾಯದಂತೆ ನಡೆಯುತ್ತಿದ್ದ ವಿವಾಹವೆಂಬುದು ಹತ್ತಿರ ಹೋದಂತೆ ಸ್ಪಷ್ಟವಾಯಿತು.
ಕಾಂಬೋಡಿಯದ ರಾಜಧಾನಿ ಫ್ನೌಮ್ ಪೆನ್ (Phnom Penh). ಇಲ್ಲಿ ಮಾತನಾಡುವ ಭಾಷೆ ಖ್ಮೇರ್. ಈ ನಗರ ನದಿಗಳಿಂದ ಸುತ್ತುವರೆದಿದೆ. ಒಂದು ಕಾಲದಲ್ಲಿ ಫ್ರೆಂಚರು ಈ ಊರಿಗೆ ಕಾಲಿಟ್ಟಾಗ ಅವರು ಅಲ್ಲಿನ ಸೌಂದರ್ಯವನ್ನು ಕಂಡು "ಪರ್ಲ್ ಆಫ್ ಏಶಿಯ" ಎಂದು ಅದನ್ನು ಕರೆದಿದ್ದರಂತೆ. ಈಗ ಆ ಸೌಂದರ್ಯ ಉಳಿದಿಲ್ಲವೆಂದು ಹಲವರು ಅಭಿಪ್ರಾಯಪಟ್ಟರೂ ಇತ್ತೀಚೆಗೆ ಬಹಳಷ್ಟು ಅಮೇರಿಕನ್ನರಿಗೆ, ಯೂರೋಪಿಯನ್ನರಿಗೆ ಇದು ನೆಚ್ಚಿನ ವಾಸಸ್ಥಳವಾಗಿಬಿಟ್ಟಿದೆ. ಅಲ್ಲದೆ ಪ್ರತಿ ವರ್ಷ ಲಕ್ಷಾಂತರ ಜನ ಪ್ರವಾಸಿಗರು ಈ ಊರಿಗೆ ಬರುತ್ತಾರೆ. ಒಂದಾನೊಂದು ಕಾಲದಲ್ಲಿ ಎರಡನೇ ಜಯವರ್ಮನ್ ಎಂಬ ಹಿಂದೂ ರಾಜ ಕಟ್ಟಿಸಿದ ದೇವಸ್ಥಾನ (ಆಂಗ್ಕೋರ್ ವಾಟ್) ಮತ್ತು ಅದರೊಂದಿಗೆ ಇರುವ ಹಲವು ದೇವಸ್ಥಾನಗಳು ಈ ದೇಶದ ಪ್ರಮುಖ ಪ್ರವಾಸ ತಾಣಗಳು. ಈ ದೇವಸ್ಥಾನಗಳ ಸಮೂಹ ಎಷ್ಟು ಜನಪ್ರಿಯವೆಂದರೆ ಇದನ್ನು ವಿಶ್ವದ ವಿಸ್ಮಯಗಳಲ್ಲೊಂದಾಗಿ ಗುರುತಿಸುತ್ತಾರೆ.
ರಾಜಧಾನಿಯ ಹೆರಿಟೇಜ್ ಮ್ಯೂಸಿಯಮ್ ಒಳಹೊಕ್ಕರೆ ಗಣೇಶನ ಪ್ರತಿಮೆ, ವಾಲಿ-ಸುಗ್ರೀವರು ಯುದ್ಧ ಮಾಡುತ್ತಿರುವುದರ ಶಿಲ್ಪ, ವಿಷ್ಣುವಿನ ಹಲವು ರೂಪಗಳನ್ನು ಕೆತ್ತಿರುವ ಶಿಲ್ಪಗಳೆಲ್ಲ ಕಾಣಬಹುದು. ಜೊತೆಗೆ ಸಮುದ್ರ ಮಂಥನ ಮುಂತಾದವುಗಳ ಕೆತ್ತನೆಗಳೂ ಇವೆ. ಮ್ಯೂಸಿಯಂ ಒಳಗೆ ಪ್ರಮುಖ ಆಕರ್ಷಣೆ ಅನಂತಶಯನ ವಿಷ್ಣುವಿನ ಪ್ರತಿಮೆ - ಭಾಗಶಃ ಮಾತ್ರ ಉಳಿದಿದೆ. ಒಂದು ಕಾಲದಲ್ಲಿ ಸೀಮ್ ರೀಪ್ ಅಥವ ಆಂಗ್ ಕೋರ್ ದೇವಸ್ಥಾನಗಳ ಸಮೂಹ ಇದ್ದ ಜಾಗದಲ್ಲಿ ಜನಜೀವನ ಹೇಗೆದ್ದಿರಬಹುದು ಎಂಬುದರ ಅನಿಮೇಟೆಡ್ ವೀಡಿಯೋ ಒಂದನ್ನು ಬಂದವರಿಗೆ ತೋರಿಸುತ್ತಾರೆ. ಇತ್ತೀಚೆಗೆ ಭಾರತವನ್ನೂ ಸೇರಿಸಿದಂತೆ ಹಲವು ಯುರೋಪಿನ ದೇಶಗಳು ಹಾಗು ಅಮೇರಿಕ ಹಲವು ಆಂಗ್ಕೋರ್ ದೇವಸ್ಥಾನಗಳನ್ನು ಸಂರಕ್ಷಿಸಿಕೊಂಡು ಹೋಗುವ ಪ್ರಯತ್ನ ಮಾಡುತ್ತಿವೆಯಂತೆ. ಎಲ್ಲ ದೇವಸ್ಥಾನಗಳು ಹಂಪಿಯ ಹಲವು ದೇವಸ್ಥಾನಗಳಂತೆ ಇಲ್ಲೂ ಪಾಳು ಬಿದ್ದಿವೆ.
ಸಂಜೆಯ ಹೊತ್ತು ಈ ಊರಿನಲ್ಲಿ ಎಲ್ಲೆಲ್ಲೂ ತಿಂಡಿಯ ಗಾಡಿಗಳು ತೆರೆದುಕೊಳ್ಳುತ್ತವೆ. ಹಾವು, ಇಲಿ ಎಂಬ ಭೇದವಿಲ್ಲದೆ ಎಲ್ಲವನ್ನೂ ಇಲ್ಲಿ ಸುಟ್ಟು ತಿನ್ನುತ್ತಾರೆ. ಊರಿನ ಮಧ್ಯದಲ್ಲಿ ನೂರೆಂಟು ಹೋಟೆಲುಗಳಿವೆ. ಇವುಗಳಲ್ಲಿ ಫ್ರೆಂಚ್ ಪ್ರಭಾವ ಇರುವ ಹೋಟೆಲುಗಳು ಹೆಚ್ಚು. ಗಂಟೆಗಟ್ಟಲೆ ಹರಟೆ ಹೊಡೆಯುತ್ತ ಕೂರಬಹುದಾದ ಹೋಟೆಲುಗಳಿಂದ ಹಿಡಿದು ಕೂಡಲೆ ಒಂದಷ್ಟು ತಿಂದು ಓಡುವಂತಹ ಚಿಕ್ಕ ಹೋಟೆಲುಗಳೂ ಇವೆ. ರಾತ್ರಿಯ ಹೊತ್ತು ಕುಡಿಯುತ್ತ ಕಳೆಯಲು ಇಷ್ಟಪಡುವವರಿಗೆ ಚಿತ್ರ ವಿಚಿತ್ರ ಜಾಗಗಳೂ ಇವೆ.
ಥಾಯ್ ಹಾಗೂ ಥೈವನೀಸ್ ಭೌದ್ಧರಲ್ಲಿ ಕೆಲವರು ಮಾಂಸ ತಿನ್ನದಿರುವ ಕಾರಣ ಥೈವನೀಸ್ ವೆಜಿಟೇರಿಯನ್ ಹೋಟೇಲುಗಳೆಂದರೆ ಇಲ್ಲಿ ನಮ್ಮ ವೆಜ್ ಹೋಟೆಲುಗಳಂತೆ. ಅದೂ ಸಂಪೂರ್ಣ ವೆಜಿಟೇರಿಯನ್. ಹೀಗಿದ್ದೂ ಮೆನುವಿನಲ್ಲಿ ಮಾಂಸದಂತೆಯೇ ಕಾಣುವ ಹಲವು ಪದಾರ್ಥಗಳನ್ನು ಬಳಸಿ ತಯಾರಿಸಿದ ಅಡುಗೆ ಇರಲಿಕ್ಕೂ ಸಾಕು. ಇವುಗಳನ್ನು ಮಾಂಸ ತಿನ್ನದಿರುವವರಿಗಾಗಿಯೇ ಸೋಯ ಬಳಸಿ ತಯಾರಿಸುತ್ತಾರಂತೆ.
ನೇಪಾಳಿ ವ್ಯಾಪಾರಿಗಳು ಇಲ್ಲಿ ತಮ್ಮ ವ್ಯಾಪಾರಗಳನ್ನು ಕುದುರಿಸಿಕೊಂಡಿದ್ದಾರೆ. ಹಲವು ಭಾರತೀಯ ಹೋಟೆಲುಗಳನ್ನು ನೇಪಾಳಿಗಳೇ ನಡೆಸುತ್ತಿದಾರೆ. ತಮಿಳರು, ಮಲಯಾಲಿಗಳು ಅಲ್ಲಲ್ಲಿ ವ್ಯಾಪಾರಗಳನ್ನು ಸ್ಥಾಪಿಸಿಕೊಂಡಿದ್ದಾರೆ. ಹೆಚ್ಚಿನಂತೆ ಭಾರತದಿಂದ ಔಷಧಿ ಮಾರುವ ಕಂಪೆನಿಗಳು ಇಲ್ಲಿ ವ್ಯಾಪಾರದಲ್ಲಿ ತೊಡಗಿಸಿಕೊಳ್ಳುತ್ತಿವೆಯಂತೆ. ಮೆಡಿಮಿಕ್ಸ್ ಸೋಪು ಇಲ್ಲಿ ಕೂಡ ಜನಪ್ರಿಯ.
ಕಾಂಬೋಡಿಯ ದೇಶ ತನ್ನ ಕರಾಳ ದಿನಗಳಿಂದ ಹೊರಬರುತ್ತಿದೆ ಎಂಬುದೇ ಅಲ್ಲಿ ಎಲ್ಲರ ಅಂಬೋಣ. ಪೋಲ್ ಪಾಟ್ ಎಂಬ ನರಹಂತಕನ ದುರಾಡಳಿತದಲ್ಲಿ ಒಂದು ತಲೆಮಾರಿನ ಕ್ಮೇರ್ ಜನಸಂಖ್ಯೆಯೇ ನಿರ್ನಾಮವಾಗಿ ಈಗ ಮತ್ತೆ ಹೊಸತಾಗಿ ಸಂಸ್ಕೃತಿ ನಿರ್ಮಾಣವಾಗುತ್ತಿದೆ. ಹಣಕಾಸು ವ್ಯವಹಾರ ಉತ್ತಮಗೊಳ್ಳುತ್ತಿದೆ. ಇಲ್ಲಿನ ಮಕ್ಕಳು ಇಂಗ್ಲೀಷ್ ಮಾತನಾಡಲು ಹಿಜರಿಯುತ್ತಾರಾದರೂ ಕ್ರಮೇಣ ಆಂಗ್ಲ ಭಾಷೆಗೆ ಒಗ್ಗಿಕೊಳ್ಳುತ್ತಿದ್ದಾರೆ. ಫ್ರೆಂಚ್ ಮಾತನಾಡುವ ಹಲವರು ಸುಲಭದಲ್ಲಿ ಸಿಗುತ್ತಾರೆ. ಎಕಾನಮಿ ಬೆಳೆಯುತ್ತಿದೆ. ಆದರೂ ಅಲ್ಲಿನ ಕರೆನ್ಸಿ ಬಳಕೆಯಲ್ಲೇ ಇಲ್ಲದಷ್ಟು ಕುಗ್ಗಿ ಹೋಗಿದೆ. ಎಲ್ಲಿ ಹೋದರೂ ಯೂ ಎಸ್ ಡಾಲರುಗಳನ್ನೇ ಬಳಸುತ್ತಾರೆ. ಚಿಕ್ಕ ಪುಟ್ಟ ಚಿಲ್ಲರೆಗಾಗಿ ಖ್ಮೇರ್ ನೋಟುಗಳನ್ನು ಬಳಸುತ್ತಾರೆ. ನಾಲ್ಕು ಸಾವಿರ ಮೌಲ್ಯದ ಖ್ಮೇರ್ ನೋಟುಗಳನ್ನು ನೀಡಿದರೆ ಒಂದು ಯೂ ಎಸ್ ಡಾಲರ್ ನಿಮಗೆ ಸಿಗುತ್ತದೆ. ಅಂದರೆ ಭಾರತದ ಅರವತ್ತು ರೂಪಾಯಿಗಳಿಗೆ ಅಲ್ಲಿನ ನಾಲ್ಕು ಸಾವಿರ ಎಂಬಂತೆ ಲೆಕ್ಕ ಇಟ್ಟುಕೊಳ್ಳಬಹುದು.
ಇಲ್ಲಿ ಡ್ರಾಗನ್ ಫ್ರೂಟ್ ಹಾಗೂ ರಂಬೂಟಾನ್ ಎಂಬ ಹಣ್ಣುಗಳು ಸುಲಭದಲ್ಲಿ ಸಿಗುತ್ತವೆ. ಬೆಂಗಳೂರಿನಲ್ಲಿ ಹೆಚ್ಚಿನ ಬೆಲೆ ಕೊಟ್ಟು ತರಬೇಕಾದ ಹಣ್ಣುಗಳು ಇಲ್ಲಿ ತೀರ ಕಡಿಮೆ ಬೆಲೆಗೆ ಎಲ್ಲೆಲ್ಲೂ ಲಭ್ಯ.
ಮತ್ತೊಂದು ಭಾರತೀಯ ಹೋಟೇಲಿನಲ್ಲಿ ತಮಿಳು ನಾಡಿನ ಒಂದು ದೇವಸ್ಥಾನದ ಗಣಪನ ಫೋಟೋ ಹಾಕಿ ಅದಕ್ಕೊಂದು ಹಾರ ಏರಿಸಿದ್ದರು. ಅಲ್ಲಿ ಅಡುಗೆ ಮಾಡುತ್ತಿದ್ದವರನ್ನು ಬಿಟ್ಟರೆ ಯಾರೂ ತಮಿಳರಂತೆ ಕಾಣಲಿಲ್ಲ. ಕ್ಯಾಶ್ ಕೌಂಟರಿನಲ್ಲಿದ್ದವರು ಮಾತ್ರ ತಮಿಳರಂತೆ ಕಾಣದಿದ್ದರೂ ಅಡುಗೆಯವರೊಂದಿಗೆ ಸರಾಗವಾಗಿ ತಮಿಳು ಮಾತನಾಡುತ್ತಿದ್ದುದು ನೋಡಿ ಆಶ್ಚರ್ಯವಾಗಿತ್ತು. ಮಸಾಲೆ ದೋಸೆ, ಇಡ್ಲಿ, ಉಪ್ಮ ಈ ಊರಿನಲ್ಲಿ ಇನ್ನೆಲ್ಲೂ ಸಿಗದು.
ನಾನು ಊಟಕ್ಕೆಂದು ನಿತ್ಯ ಭೇಟಿ ಕೊಡುತ್ತಿದ್ದ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದ ನೇಪಾಳಿ ಹುಡುಗ "ಸಾರ್, ಇಲ್ಲೇನೂ ಜೀವನ ಸುಲಭವಿಲ್ಲ - ಹಾಗೆಯೇ ಬೇರೆಡೆಗೆ ಹೋಲಿಸಿದರೆ ಕಷ್ಟವೆಂಬುವಂತೆಯೂ ಇಲ್ಲ. ಎಲ್ಲ ಕಡೆ ಇದ್ದಂತೆ ಇಲ್ಲೂ" ಎಂದು ಹೇಳಿದ್ದು ನನಗೆ ಈಗಲೂ ಆಗಾಗ ನೆನಪಾಗುತ್ತಿರುತ್ತದೆ.
Comments
ಉ: ಕಾಂಬೋಡಿಯ
ಸುಂದರ ಪ್ರವಾಸ ಕಥನ.
In reply to ಉ: ಕಾಂಬೋಡಿಯ by kavinagaraj
ಉ: ಕಾಂಬೋಡಿಯ
ವಂದನೆಗಳು, ನಾಗರಾಜ್.
ಉ: ಕಾಂಬೋಡಿಯ
ಕಾಂಬೋಡಿಯಾ ಬಗ್ಗೆ ಹಲವು ವಿಷಯಗಳು ಸಿಕ್ಕಾವು ನಿಮ್ಮ ಪ್ರವಾಸ ಕಥನದಲ್ಲಿ, ಹರಿ. boulevard, ಪದಕ್ಕೆ ಬುಲಾವಾಯೋ ಎಂದು ಉಚ್ಚರಿಸಿದಿರೋ ಅಥವಾ ಬುಲಾವಾಯೋ ಬೇರೊಂದು ಶಬ್ದವೋ? ಏಕೆಂದರೆ boulevard ನ ಉಚ್ಛಾರ 'ಬೂಲೇವಾರ್ಡ್'. ಧನ್ಯವಾದಗಳು
In reply to ಉ: ಕಾಂಬೋಡಿಯ by abdul
ಉ: ಕಾಂಬೋಡಿಯ
ಅಬ್ದುಲ್, ನೀವು ಹೇಳಿರುವುದು ಸರಿ ಇದೆ. ಅದು ಬೂಲೆವಾರ್ಡ್ ಎಂದು ಆಗಬೇಕಿತ್ತು.
ಉ: ಕಾಂಬೋಡಿಯ
ಕಾಂಬೋಡಿಯಾದ ಒಂದು ಸುತ್ತು ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು. ಆಂಗ್ಕೋರ್ ವಾಟ್ ಇತ್ಯಾದಿ ಬಗ್ಗೆ ಇನ್ನಷ್ಟು ಸರಣಿ ಲೇಖನದ ನಿರೀಕ್ಷೆಯಲ್ಲಿರುವೆ..
>>..ಫ್ರೆಂಚರು ಕಟ್ಟಿಸಿಕೊಟ್ಟ ವಿಶಾಲವಾದ ಬುಲವಾಯೊ (boulevard)
ನಾನೂ ಸಹ ಎಮ್ ಜಿ ರೋಡ್‌ನ boulevard ಬಗ್ಗೆ ಬರೆಯುವಾಗ ಅದಕ್ಕೆ ಸರಿಯಾದ ಕನ್ನಡ ಶಬ್ದಕ್ಕಾಗಿ ಹುಡುಕಿದೆ. ಕೆಲವು ಕಡೆ ನೀವು ಬರೆದಂತೆ "ಬುಲವಾಯೊ" ಅಂತಲೂ ಕೆಲವು ಕಡೆ "ಬುಲವಾ" ಅಂತಲೂ ಬರೆದಿತ್ತು. ರಗಳೆಯೇ ಬೇಡ ಎಂದು boulevard ಎಂದೇ ಇಂಗ್ಲೀಶಲ್ಲಿ ಬರೆದೆ- http://sampada.net/blog/%E0%B2%AE%E0%B3%8D%E0%B2%AF%E0%B2%BE%E0%B2%82%E0...
In reply to ಉ: ಕಾಂಬೋಡಿಯ by ಗಣೇಶ
ಉ: ಕಾಂಬೋಡಿಯ
'ಬುಲಾವಾಯೋ॑ ಎಂದು ಎಲ್ಲೋ ಕೇಳಿದ್ದ ನೆನಪು - ಅದಕ್ಕೇ ಬರೆದು ಸೇರಿಸಿದ್ದೆ. ಖರೆ ತಿಳಿದಿರಲಿಲ್ಲ.
ಬಹುಶಃ ಫ್ರೆಂಚ್ ಭಾಷೆಯಲ್ಲಿ ಹೀಗೆ ಉಚ್ಛಾರ ಮಾಡುತ್ತಾರೇನೊ?
ಉ: ಕಾಂಬೋಡಿಯ
ಬರಹ ತುಂಬಾ ಚೊಕ್ಕವಾಗಿ ಸುಂದರವಾಗಿ ಮೂಡಿಬಂದಿದೆ, ಹರಿ. ನಿಮಗೆ ಅಭಿನಂದನೆಗಳು. ಜೊತೆಗಿರುವ ಚಿತ್ರಗಳು ಲೇಖನಕ್ಕೆ ಮೆರಗು ಸೇರಿಸಿದೆ..!
ನಾನು ಗಮನಿಸಿದ ಹಾಗೆ, ಕಾಂಬೋಡಿಯ ಬಗ್ಗೆ, ಕನ್ನಡ ವಿಕಿಪೀಡಿಯದಲ್ಲಿ ಒಂದೆರಡು ವಾಕ್ಯಗಳು ಮಾತ್ರ ಇವೆ. ಈ ಲೇಖನ ಅಲ್ಲಿಗೆ ಸಾಗಿಸಬಹುದಲ್ಲ?
In reply to ಉ: ಕಾಂಬೋಡಿಯ by Varun Karthik
ಉ: ಕಾಂಬೋಡಿಯ
ಥ್ಯಾಂಕ್ಸ್, ವರುಣ್.
ವಿಕಿಪೀಡಿಯ ಮಾಹಿತಿಕೋಶ, ವಿಶ್ವಕೋಶ - ಅಲ್ಲಿ ಈ ರೀತಿಯ ಲೇಖನಗಳನ್ನು ಈಗಿರುವಂತೆಯೇ ಸೇರಿಸುವುದು ಸರಿಯಾಗದು.
ಸದ್ಯಕ್ಕೆ ನಾನು ಕನ್ನಡ ವಿಕಿಪೀಡಿಯದಲ್ಲಿ ಕಾರಣಾಂತರಗಳಿಂದ ಸಕ್ರಿಯವಾಗಿ ಬರೆಯುವುದನ್ನು, ಸಂಪಾದನೆ ಮಾಡಿರುವುದನ್ನು ನಿಲ್ಲಿಸಿರುವೆ.
ಉ: ಕಾಂಬೋಡಿಯ
ಹರಿಯವ್ರೆ ನಿಮ್ಮ ಲೇಖನದ ಶಿರ್ಷೀಕೆಯನ್ನು ನೋಡಿ ಕೂತುಹಲಕ್ಕೆ ಒಳಗಾದೆ. ಏಕೇಂದರೆ ನಾವೂ ಸ್ನೇಹಿತರು ಕಾಂಬೋಡಿಯ ಪ್ರವಾಸದ ಯೋಜನೆಯಲ್ಲಿದ್ದೇವೆ! ನಿಮ್ಮ ಈ ಲೇಖನ ಇನ್ನು ಕೊಂಚ ವಿವರಣಪೂರ್ಣವಾಗಿದ್ದರೆ ನಮ್ಮಗೆ ಸಹಾಯವಾಗುತಿತ್ತು :) ಅದನ್ನು ನಿಮ್ಮಿಂದ ಮತ್ತೆ ನಿರೀಕ್ಷಿಸಬಹುದೆ? ಧನ್ಯವಾದಗಳು!
In reply to ಉ: ಕಾಂಬೋಡಿಯ by lgnandan
ಉ: ಕಾಂಬೋಡಿಯ
ಪ್ರವಾಸದ ಕುರಿತಾಗಿ ವಿವರ ಬೇಕಿದ್ದಲ್ಲಿ ನನಗೆ ನೇರ ಇ-ಮೇಯ್ಲ್ ಕಳುಹಿಸಿ. ನನಗೆ ತಿಳಿದಿರುವ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಲ್ಲೆ.
ಉ: ಕಾಂಬೋಡಿಯ
ಆಯ್ದ ವಿಷಯಗಳನ್ನು ವಿಕಿಪೀಡಿಯಕ್ಕೆ ಏರಿಸಬಾರದೇಕೆ?