ಇನ್ನು ಕಾಯುವ ಗಳಿಗೆ..
ಕರ್ನಾಟಕದ ಮತದಾರರ ಮನದಿಂಗಿತ ಈಗ ಮತದಾನದ ಪೆಟ್ಟಿಗೆಯೊಳಗೆ ಭದ್ರವಾಗಿ ಸೇರಿಕೊಂಡಿದೆ. ಇಷ್ಟು ದಿನದ ಆತಂಕ ಪೂರ್ಣ ಒತ್ತಡಗಳಿಗೆಲ್ಲ ವಿರಾಮ ಹಾಕಿ ಕರ್ನಾಟಕ ಮತದಾರ ನಿರಾಳವಾಗಿ ಉಸಿರಾಡಬಹುದು - ಯಾವುದೆ ಪ್ರಚಾರ ಗದ್ದಲಗಳ ಪರಿವೆಯಿಲ್ಲದೆ. ಇನ್ನೇನಿದ್ದರೂ ಅಂತಿಮ ಫಲಿತಕ್ಕೆ ಕಾಯುವುದಷ್ಟೆ - ಜಯಲಕ್ಷ್ಮಿಯ ವರಮಾಲೆ ಯಾರ ಕೊರಳಿಗೆ ಬೀಳುವಳೆಂಬ ಕುತೂಹಲದಲ್ಲಿ. ಹಿಂದೆ ಕೆಲವು ಬಾರಿಯಾದಂತೆ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬೇರೆ ಬೇರೆ ಪಕ್ಷಗಳು ಅಧಿಕಾರ ಚುಕ್ಕಾಣಿ ಹಿಡಿದ ಪರಿಸ್ಥಿತಿಯಾಗುವುದೆ? ಎಂಬ ಒಂದು ಕುತೂಹಲವಾದರೆ, ರಾಜ್ಯದಿಂದಾದ ಆಯ್ಕೆಯಲ್ಲಿ ಯಾರಿಗೆ ಹೆಚ್ಚು ಸ್ಥಾನ - ರಾಜ್ಯದಲ್ಲಿ ಅಧಿಕಾರ ಹಿಡಿದ ಪಕ್ಷಕ್ಕೊ, ಅಥವ ವಿರೋಧ ಪಕ್ಷಕ್ಕೊ ? ಇಬ್ಬರಿಗೂ ಸಮ ಸಮ ಹಂಚಿ ಹೋಗಬಹುದಾ? ಎನ್ನುವ ಮತ್ತೊಂದು ತರದ ಕುತೂಹಲ.
ಇದೆಲ್ಲಕ್ಕೂ ಉತ್ತರ ಸಿಗಲಿಕ್ಕೆ ಮೇ ಹದಿನಾರರ ತನಕ ಕಾಯಬೇಕು. ಅಲ್ಲಿಯತನಕ ಮಿಕ್ಕೆಡೆಯೆಲ್ಲ ನಡೆಯಲಿರುವ ಚುನಾವಣ ಪ್ರಕ್ರಿಯೆ, ವಾದ-ವಿವಾದ, ವಾಗ್ವಾದ-ವಾಗ್ಯುದ್ಧ, ಆರೋಪ-ಪ್ರತ್ಯಾರೋಪ, ದೂಷಣೆಗಳ ಮಜಾ ಅನುಭವಿಸುತ್ತಲೆ ಇನ್ನು ಒಂದು ತಿಂಗಳವರೆಗಿನ ಒತ್ತಡವನ್ನು ಎಲ್ಲ ಪಕ್ಷಗಳು ಹೇಗೆ ಸಂಭಾಳಿಸಿಕೊಂಡು ಹೋಗುತ್ತಾರೆ, ಕೊನೆತನಕದ ಸಂಯಮವನ್ನು ಹೇಗೆ ಕಾಪಾಡಿಕೊಂಡು ಹೋಗುತ್ತಾರೆ, ಹೇಗೆ ಕಾಲು ಕೆರೆದು ಜಗಳವಾಡಿಕೊಂಡು ಮನರಂಜನೆ ಕೊಡುತ್ತಾರೆ, ನೈತಿಕವಾಗಿ ಯಾವ ಮಟ್ಟಕ್ಕಿಳಿಯುತ್ತಾರೆ ಎಂಬುದಕ್ಕೆಲ್ಲ ಸಾಕ್ಷೀಭೂತರಾಗಬಹುದು.
ಅದೆಲ್ಲದ ನಡುವೆಯೆ ಇದೊಂದು ಸರಳ ಪದ್ಯ - ಕಣದ ಗದ್ದಲ ನೋಡಿ ಬೇಸರವಾದಾಗ 'ಟೈಮ್ಪಾಸಿಗೆ' ಓದಿಕೊಳ್ಳಲೆಂದು :-)
ಜಾರಿದ್ದಾಯ್ತು ಚುನಾವಣೆ ಗಳಿಗೆ
ಸೇರಿದ್ದಾಯ್ತು ಮತದಾನ ಪೆಟ್ಟಿಗೆಗೆ
ಏನನು ನುಡಿದನೊ ಕನ್ನಡ ಜಾಣ
ಕೊನೆ ಫಲಿತದಲಿದೆಯೆ ಶುಭಶಕುನ?||
ಎದ್ದು ಬಿದ್ದು ಭಾರಿ ಹೊಡ್ದಾಟನಂತೆ
ಎರಡು ಪಾರ್ಟಿಗೂ ಫೈಟು ಜೋರಂತೆ
ಅರ್ಧರ್ಧ ಹಣ್ಣು ಹಂಚ್ಕೋಬಹುದಂತ
ಸಮೀಕ್ಷೇಲಿ ಗಿಣಿರಾಮ ಬಾಯ್ಬಿಟ್ನಂತೆ ||
ಓಟ್ ಹಾಕೋರ್ಗೂ ಅರೆ ಮನಸಂತೆ
ಆಚೆಗೊ? ಈಚೇಗೊ? ಬಲು ಗೊಂದಲವಂತೆ
ರಾಜ್ಯ ಪಕ್ಷ ಗೆಲಿಸಿದರೆ ವಾಸಿಯೇನು?
ಕೊಟ್ಟು ಬಹುಮತ ಬರದಿರೆ ಘಾಸಿಯೇನು ?? ||
ಇತಿಹಾಸದ ಪುಟದಲಿ ಕಾಣುವ ತರಹ
ಕರ್ನಾಟಕದಲ್ಲಿ ಸದಾ ಇದೆ ಹಣೆಬರಹ
ರಾಜ್ಯವಾಳುವ ಪಕ್ಷ ಕೇಂದ್ರದಿಂದ ಖಾಲಿ
ಕೇಂದ್ರ ಗದ್ದಿಗೆ ಹಿಡಿದರೆ ರಾಜ್ಯದೆ ಸೋಲಿ ! ||
ಅಂತು ಇಂತು, ಕುಂತಿ ಮಕ್ಕಳಿಗೆ ರಾಜ್ಯವಿಲ್ಲ
ಕಥೆ ಹಾಗಾಗದಿರಲೆಂದು ಆಸೆಯಲ್ಲ
ಅದಕೆಂದೆ ಕುತೂಹಲ ಕಾದು ಕೂತಿದೆ
ಫಲಿತಾಂಶ ಬರಲೆ ತಿಂಗಳೆ ಕಾಯಬೇಕಿದೆ ! ||
- ಧನ್ಯವಾದಗಳೊಂದಿಗೆ,
ನಾಗೇಶ ಮೈಸೂರು
Comments
ಉ: ಇನ್ನು ಕಾಯುವ ಗಳಿಗೆ..
ನಾಗೇಶರಿಗೆ ನಮಸ್ತೆ,,,,,,,,ಈ ವರ್ಶದ ಕಾಯುವಿಕೆಲ್ಲಿ ಕಾತುರವೂ ಇದೆ,,,,,ಬರಹ ಸುಂದರವಾಗಿದೆ,,,,,
In reply to ಉ: ಇನ್ನು ಕಾಯುವ ಗಳಿಗೆ.. by naveengkn
ಉ: ಇನ್ನು ಕಾಯುವ ಗಳಿಗೆ..
ಹೌದು ನವೀನರೆ, ಈ ಕಾಯುವಿಕೆಯಲ್ಲಿರುವ ಮತ್ತೊಂದು ವಿಶೇಷವೆಂದರೆ - ಬರಿ ಮತದಾರ ಮಾತ್ರವಲ್ಲ, ಅಭ್ಯರ್ಥಿಯೂ ಕಾಯಬೇಕು. ಫಲಿತಾಂಶ ಹೊರಬೀಳುವ ತನಕ ಅವರ ಬೀಪಿಗೂ ಬೆಂಡು. ಅಂತೆಯೆ ಬಿಸಿಯೆಲ್ಲ ಆರಿ ಕೂಲಾಗುವುದರಿಂದ ತುಸು ಸಮಚಿತ್ತತೆಯೂ ಬರಬಹುದೆನಿಸುತ್ತದೆ..:-)
ಉ: ಇನ್ನು ಕಾಯುವ ಗಳಿಗೆ..
ಮಳೆ ನಿಂತು ಹೋದ ಮೇಲಿನ ಸ್ಥಿತಿ!! ಮರದ ಎಲೆಗಳಿಂದ ಹನಿಗಳು ಮತ್ತೂ ಕೆಲವು ಕಾಲ ಉದುರುತ್ತಿರುತ್ತವೆ. ಕೊನೆಗೆ ಅದೂ ನಿಲ್ಲುತ್ತದೆ. ಇಲ್ಲಿ ಅದು ನಿಲ್ಲಲು ಒಂದು ತಿಂಗಳು ಬೇಕು!!
In reply to ಉ: ಇನ್ನು ಕಾಯುವ ಗಳಿಗೆ.. by kavinagaraj
ಉ: ಇನ್ನು ಕಾಯುವ ಗಳಿಗೆ..
ಚುನಾವಣೆಯ ಕಡತದಲ್ಲೂ ಪ್ರಕೃತಿಯನ್ನು ಕಾಣುವ ಕವಿ ಮನಸಿಗೆ ಶರಣು !
ಮಳೆ ನಿಂತ ಮೇಲೆ ಬಿರುಗಾಳಿ ಆರಂಭವಾಗದೆ ಹಿತವಾದ ತಂಗಾಳಿ ಬೀಸಲಿ ಎಂದು ಆಶಿಸೋಣ :-)
ಉ: ಇನ್ನು ಕಾಯುವ ಗಳಿಗೆ..
>>>ಅಂತು ಇಂತು, ಕುಂತಿ ಮಕ್ಕಳಿಗೆ ರಾಜ್ಯವಿಲ್ಲ :)
-ಮೋರಿ ಸರಿ ಮಾಡಿಸಿ ಎಂದರೆ ಮೋದಿ ಗೆಲ್ಲಿಸಿ ಅಂದರು!
ಮೋದಿ ಗೆದ್ದರೆ..ಇಲ್ಲಿ ಕಾಂಗ್ರೆಸ್ ಅಲ್ಲಿ ಬಿಜೆಪಿ.. ಮೋರಿ ಗತಿ?:)
In reply to ಉ: ಇನ್ನು ಕಾಯುವ ಗಳಿಗೆ.. by ಗಣೇಶ
ಉ: ಇನ್ನು ಕಾಯುವ ಗಳಿಗೆ..
ಗಣೇಶ್ ಜಿ, ಅಲ್ಲಿ ಮೋದಿ ಗೆದ್ದರೂ ಇಲ್ಲಿ ಮೋರಿಯ ಮಾತೆತ್ತುವುದಿಲ್ಲ... ಮೋರಿ ಲೋಕಲ್ ಟಾಫಿಕ್ಕು. ಮೊದಲು ವಿಧಾನ ಸಭೆಯಲ್ಲಿ ಗೆಲ್ಲಿಸಿ ಆಮೇಲೆ ನೋಡೋಣ ಅಂದುಬಿಡುತ್ತಾರೊ ಏನೊ. ಅದೇನೆ ಆದರೂ ನದಿ ಜೋಡಿಸುವ ಪ್ರಾಜೆಕ್ಟಿನಲ್ಲಿ ಮೋರಿ ನೀರು ಜತೆಗೆ ಸೇರಿಸಿಕೊಳ್ಳದಿದ್ದರೆ ಸಾಕು.. :-)