ವೋಟು ಹಾಕಿದ ಗುರುತು ಮಾಸುತ್ತಿದೆ

ವೋಟು ಹಾಕಿದ ಗುರುತು ಮಾಸುತ್ತಿದೆ

              ಅಂತೂ ಮತ ಚಲಾವಣೆ ಮುಗಿದಿದೆ, ಒಂದು ವರುಷದಿಂದ ಜನತೆಯಲ್ಲಿ ಗುಲ್ಲೆಬ್ಬಿಸಿದ ಎಲೆಕ್ಷನ್ ಬಿರುಗಾಳಿ ಮೆಲ್ಲಗೆ ತನ್ನ ಬಿರುಸನ್ನು  ಇಲಿಮುಖಗೊಳಿಸುತ್ತಿದೆ.. ಫೇಸ್ ಬುಕ್ , ವಾಟ್ಸ್ ಆಪ್, ಮೊಬೈಲ್ ಸಂದೇಶಗಳಲ್ಲಿ ನಿರರ್ಗಳವಾಗಿ, ನಿಸ್ಸಂಕೋಚವಾಗಿ , ಹರಿದಾಡುತ್ತಿದ್ದ ಮೋದಿ , ರಾಹುಲರ ಪೈಪೋಟಿಗಳ ಚಿತ್ರಗಳು , ವೀಡಿಯೋಗಳು , ಹಾಸ್ಯಗಳು, ಬೇಕಾದ ಅಭ್ಯರ್ಥಿಗಳ ಗುಣಶ್ಲಾಘನೆಗಳನ್ನೂ , ಬೇಡದವರ ಮುಖಸ್ತುತಿಗಳನ್ನೂ ಮಾಡಿ ಮುಗಿಸಿ, ಎಲ್ಲಾ ಪಕ್ಷ ವಿಪಕ್ಷಗಳ ಪ್ರಣಾಳಿಕೆಗಳ ಧನಾತ್ಮಕ ಋಣಾತ್ಮಕ ಅಂಶಗಳನ್ನು ತೂಗಿ ನೋಡಿದ್ದಾಗಿದೆ. ಅವುಗಳಲ್ಲಿ ಎಷ್ಟು ಅರ್ಥವಾಯಿತೋ ವ್ಯರ್ಥವಾಯಿತೋ ಗೊತ್ತಿಲ್ಲಾ, ಆದರೆ ಆಫೀಸಿನ ಕ್ಯಾಂಟೀನ್ ಟೇಬಲ್^ಗಳಲ್ಲಿ, ಫಾಸ್ಟ್ ಫುಡ್ , ಹೋಟೆಲ್^ಗಳಲ್ಲಿ, ಟಿ.ವಿ ಮುಂದಿನ ಸೋಫಾಗಳಲ್ಲಿ, ಮನೆ ಹೊರಗಿನ ಕಲ್ಲು ಬೆಂಚುಗಳಲ್ಲಿ,   ಬಸ್ಸು, ರೈಲುಗಳ ದೂರ ಪ್ರಯಾಣಗಳಲ್ಲಿ ಕಾಲ ಕಳೆಯಲು ಮಾತನಾಡುವ ಬಾಯಿಗಳಿಗೆ, ಒಳ್ಳೆಯ ಸ್ವಾದಿಷ್ಟ ಸಮಾಚಾರ ಸಿಕ್ಕಂತಾಯಿತು.  ಅ ಮಾತುಗಳ ರಾಶಿಗಳಲ್ಲಿ ಸಮಾಧಾನದ ಬಣ್ಣಕ್ಕಿಂತಾ ಅಸಮಾಧಾನವೇ ಹೆಚ್ಚು ಕಣ್ಣಿಗೆ ರಾಚುತ್ತಿರುವಂತಿದೆ. ಪಕ್ಷಗಳ, ಅಭ್ಯರ್ತಿಗಳ  ಸಾಧನೆಗಳಿಗಿಂತ  ವಿವಾದಗಳದೇ  ವರ್ಣನೆ, ಚರ್ಚೆಗಳು ಜಾಸ್ತಿ.  ದೇಶದ ಸ್ಥಿಥಿಗತಿಗೆ ರೋಸಿಹೋದ ಜನಕ್ಕೆ, ತಮ್ಮ ಮನದಾಳದ ನಿರಾಶಭಾವನೆಗಳನ್ನು, ಬೇಸರ ಬೇಗುದಿಗಳನ್ನು ಹೊರಹಾಕಲು ಅವಕಾಶ ದೊರೆತಂತಾಯಿತು. ತಮ್ಮ ಎಲ್ಲಾ ಸಮಸ್ಯೆಗಳಿಗೂ  (ಸ್ವಯಂಕೃತ   ಅಪರಾಧಗಳೂ ಸೇರಿ) ದೇಶದ ರಾಜಕಿಯವನ್ನೇ ಹೊಣೆಯಾಗಿಸಿ ನಿಡುಸುಯ್ಯುತ್ತಿದ್ದಾರೆ ನಮ್ಮ ಜನ . ಅಭರ್ತಿಗಳ ಪರಿಚಯವೇ ಇರದೇ ಪಕ್ಷಕ್ಕೆ ಮತ ಹಾಕಲು ನಿರ್ಧರಿಸಿಯಾಗಿದೆ., ಕೆಲವು ಮುಗ್ಧರೋ ಗೋಜಿಗೆ ಅಕ್ಕಪಕ್ಕದವರ, ಮನೆಮಂದಿಯವರ  ನಿರ್ಧಾರದ ಗಿಡಕ್ಕೆ ತಮ್ಮ ಕುರಿಯನ್ನು ಕಟ್ಟಿದ್ದಾರೆ. ಬಹಳಷ್ಟು ಜನ ಗೋಜಿಗೆ ಹೋಗದೆ ತಮ್ಮ ನೆಚ್ಚಿನ ಊರುಕೆರಿಗಳಿಗೆ , ಪ್ರವಾಸ ತಾಣಗಳಿಗೆ ಜವಾಬ್ಧಾರಿಯಿಂದ ಬಹು ದೂರ ಕಾಲು ಕಿತ್ತಿದ್ದಾರೆ.

          ಈಗ ವೋಟು  ಹಾಕಿ ಕೈತೊಳೆದುಕೊಂಡಾಗಿದೆ,  ವೋಟು ಹಾಕದವರನ್ನು ಬೈದೂ ಆಗಿದೆ. ವೋಟು ಹಾಕಿದ ಗುರುತು ಮಾಸುತ್ತಿದೆ,  ಆದರೆ ಮುಂಚೆ ಹಲವುಸಲ, ಇದೇ ರೀತಿ ವಿಶೇಷ ವಿಪರೀತವಾಗಿ ದೇಶದ ಭವಿಷ್ಯದ ಬಗ್ಗೆ ಚಿಂತಿಸಿ, ಮತ ಚಲಾಯಿಸಿ, ಅಭರ್ಥಿಗಳನ್ನು ಗೆಲ್ಲಿಸಿ , ಪ್ರಗತಿಯಲ್ಲಿ ಯಾವುದೇ ಬದಲಾವನೆಗಳು ಕಾಣದ  ಬೇಸರಗಳು ಮಾತ್ರ ಮನಸ್ಸಿನಿಂದ ಮಾಸದೆ ಹಾಗೆ ಉಳಿದಿದೆ. ಆದರು ಯಾವುದೋ ಒಂದು ಹೊಸ ಭರವಸೆ, ನಮ್ಮ  ಭವಿಷ್ಯವು ಮುಂದೆ ಉತ್ತಮಗೊಳ್ಳಬಹುದು ಎಂದು, ಬಹು ದೂರದಲ್ಲಿ ಮಬ್ಬಾಗಿ ಕನಸಿನ ಕಣ್ಣಿಗೆ ಅಸ್ಪಷ್ಟವಾಗಿ ಕಾಣಿಸುತ್ತಿದೆ. ಅದು ಮಯಮೃಗವೋ ಅಥವಾ ಜಿವನ್ಮೃಗವೋ ಎಂದು ಕಾಲವೇ ತಿಳಿಸಬೇಕು. ಯಾಕೆಂದರೆ ಇಂತಹ ಅಸ್ಪಷ್ಟ ದರ್ಶನಗಳನ್ನು ಚರಿತ್ರೆಗಳಲ್ಲಿ ಕಾಲವೇ ಸ್ಪಷ್ಟಪಡಿಸಿದ ಉದಾಹರಣೆಗಳಿವೆ. ಜಪಾನ್ , ಚೈನಾ , ಕೊರಿಯಾ, ವಿಯಟ್ನಾಂ ದೇಶಗಳ ಚರಿತ್ರೆಗಳಲ್ಲಿ ಅಂತಹ  ಬರಿಯ ಕನಸುಗಳು ಇಂದು ನನಸುಗಳ ಸತ್ಯಸಂಗತಿಗಳಾಗಿವೆ. ನಮಗಿಂತ ಬಹುಪಾಲು ಕಡಿಮೆ  ಮಾನವ ಸಂಪನ್ಮೂಲ, ನೈಸರ್ಗಿಕ ಸಂಪನ್ಮೂಳವಿರುವ ದೇಶಗಳಿಂದ ನಮಗಿಂತ ಎಷ್ಟೋ ಮುಂದೆ ಇವೆ. ಇಂದಲ್ಲಾ ನಾಳೆ ನಮ್ಮ  ದೇಶವು ಸುಭಿಕ್ಷ ಸಮೃದ್ಧವಾಗಿ ಬೆಳೆದು ಜನರ ಬಾಳನ್ನು ಹಸನಾಗಿದುವೆಂಬ  ಹೊಸ ಕನಸು  ಮತ್ತೆ  ಈ  ಚುನಾವಣೆಯ ಬೆನ್ನನ್ನೇರಿ ಕುಳಿತು ಜನರ ಮನಸ್ಸಿನ ಬೀದಿಗಳಲ್ಲಿ ಸುತ್ತು ಹೊಡೆಯುತ್ತಿದೆ.

ಇಷ್ಟು ದಿವಸಗಳ ಕಾಲ ದೇಶದ ಉಜ್ವಲ ಭವಿಷ್ಯದ ಬಗ್ಗೆ, ಪ್ರಗತಿಯ ಸಂಚಾಲನೆಯ ಬಗ್ಗೆ, ಬಡತನ, ಬ್ರಷ್ಟಾಚಾರಗಳನ್ನು ಬುಡಸಮೇತ ಕಿತ್ತುಹಾಕುವ ಬಗ್ಗೆ,  ಜವಾಬ್ಧಾರಿಯುತರಾಗಿ  ಉದ್ವೇಗತಿಶಯದಿಂದ ಚರ್ಚಿಸುತ್ತಿದ್ದ ಮನಸ್ಸುಗಳು,  ಈಗ ನಿಧಾನವಾಗಿ ತಮ್ಮ ತಮ್ಮ ಜೀವನಕ್ರಮಗಳತ್ತ, ಜಂಜಾಟಗಳತ್ತ ಸರಿಯತೊಡಗಿವೆ. ತಮ್ಮ ವಯೋಧರ್ಮಕ್ಕೆ ತಕ್ಕಂತೆ ಜನರೆಲ್ಲಾ ಮತ್ತೆ  ಹಣಕಾಸು ಹೂಡಿಕೆಗಳ, ಶೃಂಗಾರ  ಕನಸುಗಳ , ಮಕ್ಕಳ ಭವಿಷ್ಯಗಳ, ಅರೋಗ್ಯ, ವ್ಯಾಯಮಗಳ , ಜಗಳ, ಅಸೂಯೆಗಳ , ಬಾಡಿಗೆ ವಸೂಲಿಗಳ , ಮನೆ ನಿರ್ಮಾಣಗಳ  ಕರ್ಮಗಳಲ್ಲಿ ಮಗ್ನರಾಗಿದ್ದಾರೆ, ನಾಗರಿಕತೆಯ ಜೊತೆಗೆ ಮಾಡಿಕೊಂಡ  ಒಡಂಬಡಿಕೆಯ ಪ್ರಕಾರ  ವ್ಯವಸ್ಥಿತ ಜೀವನಕ್ಕೆ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಚುನಾವಣೆಯ ಫಲಿತಾಂಶ ಬರಲು ಇನ್ನು ಸಮಯವಿದೆ, ಬಂದ ಮೇಲೆ ಮತ್ತೆ ತಲೆಯೊಳಗೆ ಭರವಸೆ, ಕನಸು, ವಾಗ್ದಾನಗಳ ಮಹಾಪೂರವೇ ಹರಿದುಬರಲಿದೆ. ಅಲ್ಲಿಯ ತನಕ ಚುನಾವಣೆ ಜನತೆಗೆ ಒಂದು ಸಣ್ಣ ಬ್ರೇಕ್ ನೀಡಿದೆ.!! 

Comments