ನೆರಳು:

ನೆರಳು:

 

ನೆರಳೊಂದೇ ಬರುತಿದೆ ನನ್ನ ಜೊತೆಯಲ್ಲಿ, 
ಪರಾಕು ಹೇಳಲು ಬೇರೆ ಯಾರೂ ಇಲ್ಲವಿಲ್ಲಿ!

ಎಲ್ಲಿ ಹೋದರೆ ಅಲ್ಲಿ, ಸೋತಲ್ಲಿ, ಗೆದ್ದಲ್ಲಿ 
ಬಿದ್ದಲ್ಲಿ, ಎದ್ದಲ್ಲಿ, ಕುಡಿದು ತೂರಾಡಿದಲ್ಲಿ!

ಭರವಸೆಯ ಸೆಲೆ ಬತ್ತಿ ಹತಾಶನಾಗಿದ್ದಲ್ಲಿ,
ಇನ್ನು ಬದುಕು ಕೊನೆಯಾಯಿತೆನ್ನುವಲ್ಲಿ!

ಬಿದ್ದ ಏಟಿಗೆ ಹೃದಯ ಒಡೆದು ಹೋದಲ್ಲಿ, 
ಕಂಬನಿ ಧಾರೆಯಾಗಿ ಹರಿದು ಹೋದಲ್ಲಿ 

ಕೊನೆಗೊಮ್ಮೆ ಎಲ್ಲ ಗೆದ್ದು ಖುಷಿಯಾದಲ್ಲಿ,
ಜಗವ ಗೆದ್ದೆನೆಂದು ಬೀಗುವ ಸಮಯದಲ್ಲಿ!

ಸಾಗರವ ದಾಟಿಯೂ ಎಲ್ಲಿ ಹೋದರೆ ಅಲ್ಲಿ, 
ನೆರಳೊಂದೇ ಬರುತಿದೆ ನನ್ನ ಜೊತೆಯಲ್ಲಿ!

ನಾನಿರುವೆ ಗೆಳೆಯ ಭಯ ಬಿಡು ಬಾಳಲ್ಲಿ 
ನೀನೆಲ್ಲಿ ಹೋದರೂ ನಾನಿರುವೆ ಎನ್ನುತಲಿ!

Rating
No votes yet

Comments

Submitted by kavinagaraj Thu, 05/01/2014 - 09:56

ಅಂಧಕಾರ ಕವಿದಾಗ ನಮ್ಮ ನೆರಳೂ ನಮ್ಮನ್ನು ಹಿಂಬಾಲಿಸದು!! ನಮಗೆ ನಾವೇ ದಿಕ್ಕು!! ಧನ್ಯವಾದ, ಮಂಜುರವರೇ.

Submitted by manju787 Thu, 05/01/2014 - 14:58

In reply to by kavinagaraj

ಅಂಧಕಾರ ಕವಿದಾಗ ನೆರಳು ಇರದು, ನಿಜ ಹಿರಿಯರೇ, ಆದರೆ ಬೆಳಕಿದ್ದಾಗ ನಮ್ಮೊಡನೆ ಬಿಡದೆ ಇರುವುದು ಮಾತ್ರ ನೆರಳೊಂದೇ ಅಲ್ಲವೇ?

Submitted by partha1059 Thu, 05/01/2014 - 19:26

ಬಹಳ ದಿನಗಳ ನಂತರ ನಿಮ್ಮದೊಂದು ಕವನ ಓದಿದೆ. ಇಷ್ಟವಾಯಿತು.
ನೆರಳು ಸದಾ ಹಿಂಬಾಲಿಸುವುದಾದರು ಕೆಲವೊಮ್ಮೆ ನಮ್ಮ ನೆರಳಿಗೆ ನಾವೆ ಬೆಚ್ಚುವಂತಾಗಬಾರದು.
ನೆರಳು ನಮ್ಮನ್ನು ಚುಚ್ಚುವಂತು ಇರಬಾರದು
ನೆರಳು ನಮ್ಮ ಆತ್ಮೀಯ ಗೆಳೆಯನಂತೆ ಇದ್ದಲ್ಲಿ ನಮ್ಮ ಆತ್ಮಸಾಕ್ಷಿಗೆ ಸಾಕ್ಷಿಯಾಗಿ ಇದ್ದಲ್ಲಿ
ಎಷ್ಟು ಸಂತಸ ಅಲ್ಲವೇ ?
ವಂದನೆಗಳು

Submitted by manju787 Thu, 06/26/2014 - 20:02

In reply to by partha1059

ಧನ್ಯವಾದಗಳು ಪಾರ್ಥರೆ, ನೆರಳೊಂದೇ ಜೊತೆಗಿದೆ, ಬೇರೆ ಯಾರೂ ಇಲ್ಲದಿರುವಾಗ‌ ಎನ್ನುವ‌ ಅರ್ಥದಲ್ಲಿ ಬರೆದ‌ ಕವನವಿದು. ಇತ್ತೀಚೆಗೆ ದುಬೈಗೆ ಬಂದ‌ ನಂತರ‌ ಆದ‌ ಕೆಲವು ಅಸಾಮಾನ್ಯ‌ ಬದಲಾವಣೆಗಳಿಂದಾಗಿ ನನ್ನ‌ ಬರವಣಿಗೆಗಲು ಕಡಿಮೆಯಾಗಿವೆ. ಈಗ‌ ಎಲ್ಲವೂ ಸರಿಯಾಗುತ್ತಿದೆ.