ಕೃತಿಚೌರ್ಯದ ಕಸರತ್ತು

ಕೃತಿಚೌರ್ಯದ ಕಸರತ್ತು

ಹೇಳಿ ಕೇಳಿ ನಮ್ಮದು ರಾಮ ಕೃಷ್ಣರನ್ನು ಪೂಜಿಸುವ ಸಂತತಿ. ರಾಮನಷ್ಟೆ ನೀತಿ ನಿಯತ್ತಿನ ವ್ಯಕ್ತಿತ್ವಗಳು ಇದ್ದಷ್ಟೆ ತುಂಟ ಕೃಷ್ಣನಂತಹ ಹುಡುಗಾಟದ ವ್ಯಕ್ತಿತ್ವಗಳು ಇಲ್ಲಿ ಅಗಾಧ. ಹೇಳಿ ಕೇಳಿ ಇಬ್ಬರೂ ಪುರಾಣ ಪುರುಷರೆ, ಇಬ್ಬರೂ ಅವರವರ ರೀತಿಯಲ್ಲಿ ನಮ್ಮ ಸಂಸ್ಕೃತಿಯಲ್ಲಿ ಪ್ರಭಾವ ಬೀರಿದವರು, ಈಗಲೂ ಬೀರುತ್ತಾ ನಡೆದಿರುವವರೆ. ಹೀಗಾಗಿ ಒಂದೆಡೆ ರಾಮನ ಪಾತ್ರದ ಶ್ರೇಷ್ಠತೆಯನ್ನು ಎಲ್ಲರಲ್ಲೂ ಕಾಣಬಯಸುವಷ್ಟೆ ಸಹಜವಾಗಿ, ಮತ್ತೊಂದೆಡೆ ಕೃಷ್ಣನ ರೀತಿಯ ಹೋಲಿಕೆಯಡಿ ಅದೇ ರೀತಿಯ ತುಂಟಾಟ, ಹುಡುಗಾಟಿಕೆಗಳನ್ನು ಕ್ಷಮಿಸಿಬಿಡುವ ಉದಾರ ಜನರೂ ಇಲ್ಲಿನ ವೈಶಿಷ್ಠ್ಯ. ಹೀಗಾಗಿಯೆ ಏನೊ ಸಣ್ಣ ಪುಟ್ಟ ಕಳ್ಳತನ , ಮೋಸ, ವಂಚನೆಗಳನ್ನು ಮಾಡುವವರಿಗೆ ಏಮಾರಿಸಲು ಜನ ಸಿಗುವುದು ಸುಲಭ. ಮೋಸ ಹೋದವರೂ ಹಾಳಾಗಲಿ ಬಿಡು ಎಂದು ಶಪಿಸಿ ಸುಮ್ಮನಾಗಿಬಿಡುವುದು ಅಷ್ಟೆ ಸಹಜ. ಈ ಸರಿ, ಬೆಸದ ವ್ಯಕ್ತಿತ್ವದ ಮನೋಭಾವಕ್ಕೆ ಆ ಮಹಾಪುರುಷರ ವ್ಯಕ್ತಿತ್ವ ಎಷ್ಟು ಪ್ರಭಾವ ಬೀರಿದೆಯೊ ಇಲ್ಲವೊ ಎನ್ನುವುದು ಚರ್ಚಾರ್ಹ ವಿಷಯವಾದರೂ, ಅನೈಚ್ಚಿಕವಾಗಿ ಅವರ ವ್ಯಕ್ತಿತ್ವದ ಬೇರೆ ಬೇರೆ ಅಂಶಗಳು ಪ್ರತಿಯೊಬ್ಬರಲ್ಲೂ ಬಗೆಬಗೆಯಾಗಿ ಬೀರಿರಬಹುದಾದ ಪ್ರಭಾವವನ್ನು ಅಲ್ಲಗಳೆಯಲಾಗದು. ಒಬ್ಬ ವ್ಯಕ್ತಿಯಲ್ಲಿ ತುಸು ರಾಮನ, ತುಸು ಕೃಷ್ಣನ ಹಾಗೂ ಅದೇ ರೀತಿಯ ಮತ್ತಲವಾರು ಪಾತ್ರಗಳ (ಬೇರೆಯದೆ ಮತಧರ್ಮಗಳ ವ್ಯಕ್ತಿತ್ವ / ಪ್ರಭಾವವೂ ಸೇರಿದಂತೆ) ಕಲಸು ಮೇಲೋಗರ ಒಟ್ಟಾರೆಯಾಗಿ ಪ್ರಭಾವ ಬೀರಿರುವುದು ಸುಲಭದಲ್ಲಿ ಕಾಣಸಿಗುವ ಅಂಶ. ಬಹುಶಃ ಇದರಿಂದಲೆ ಬೇರೆ ಬೇರೆ ಸಂಧರ್ಭಗಳಲ್ಲಿ ಬೇರೆ ಬೇರೆ ರೀತಿಯ ಗುಣ ನಡುವಳಿಕೆಗಳನ್ನು ಕಾಣಬಹುದು ಪ್ರತಿಯೊಬ್ಬನಲ್ಲು. ಋಣಾತ್ಮಕವೆ ಇರದ ಬರಿಯ ಧನಾತ್ಮಕ ವ್ಯಕ್ತಿತ್ವ ಕಾಣ ಸಿಗುವುದು ಹೇಗೆ ಅಪರೂಪವೊ, ಅದೇ ರೀತಿ ಬರಿಯ ಋಣಾತ್ಮಕ ವ್ಯಕ್ತಿತ್ವವೂ ಸಾಮಾನ್ಯ ಜೀವನದಲ್ಲಿ ಅಪರೂಪ. ಸಾಧಾರಣ ಎಲ್ಲರೂ ಎರಡರ ಸಮ್ಮಿಶ್ರ ರೂಪಗಳೆ - ಸಂಯೋಜನೆಯ ಮಿಶ್ರಣದ ಪರಿಮಾಣದಲಷ್ಟೆ ವ್ಯತ್ಯಾಸ.

ಈ ದಿನದ ಕದಿಯುವ ಹವ್ಯಾಸದ ಕುರಿತಾದ ಕವಿ ನಾಗರಾಜರ ಬರಹ ಕೃತಿಚೌರ್ಯದ ಕುರಿತು ಆಲೋಚಿಸುವಂತೆ ಮಾಡುತ್ತಲೆ ಈ ಮೇಲಿನ ಭಾವನೆ ಮೂಡಿಬಂತು. ಅದನ್ನೆ ಸಾಲುಗಳಾಗಿಸಿ ಪ್ರಕಟಿಸುತ್ತಿದ್ದೇನೆ ಕವಿ ನಾಗರಾಜರಿಗೆ ಕೃತಜ್ಞತೆ ಹೇಳುತ್ತ. ಅಂದಹಾಗೆ ಕವಿಗಳೆ, ಇದು ಒಂದು ರೀತಿಯಲ್ಲಿ ನಿಮ್ಮ 'ಕೃತಿಚೌರ್ಯ' ಎನ್ನುವ ಐಡಿಯಾದ ಕೃತಿಚೌರ್ಯ :-)

ಕೃತಿಚೌರ್ಯದ ಕಸರತ್ತು
__________________

ಕುರುಚಲು ಹುಲುಸಿರಬೇಕು
ಗಡ್ಡದ ಬೆಳೆ ಚೌರಕೆ
ಕಿಸೆಯೊಳು ಕಾಸಿರಬೇಕು 
ಕೆರೆವ ಬ್ಲೇಡ ಕಾಯಕಕೆ ||

ಅದೆಲ್ಲ ಏನು ಬೇಡ ಬಿಡಿ
ಹೊಸ ಕವಿಯಾಗಲಿಕ್ಕೆ
ಕಥೆ ಕವಿತೆ ಎಲ್ಲಿದೆ ನೋಡಿ
ಗುಟ್ಟಾಗಿ ಕದಿಯುವುದಕ್ಕೆ ||

ಕದ್ದದೆಲ್ಲ ಆಗುವುದೆ ಪ್ರಕಟ
ಎನ್ನುವ ಅನುಮಾನ ಏಕೆ?
ಫೇಸ್ಬುಕ್ಕು ಬ್ಲಾಗು ಆಡಿದ್ದೆ ಆಟ
ಕಳ್ಳ ಸಂಪಾದನೆಗು ಬೆಳಕೆ ||

ದಿಢೀರ ಕೀರ್ತಿ ರಾತ್ರೋರಾತ್ರಿ
ನೀತಿ ನೈತಿಕತೆ ತೊಡಕು
ಹೇಗಾದರು ಹೆಸರು ಬೇಕು ಖಾತ್ರಿ
ಬರಿ ಅಡ್ಡದಾರಿಯ ಹುಡುಕು ||

ಯಾರದೊ ಬಸಿರ ಕದ್ದು ಮಗು
ತನದೆನ್ನುವುದು ಸುಲಭ
ಲಾಲನೆ ಪಾಲನೆ ಪೋಷಣೆ ಕೂಗು
ಲಘುವಲ್ಲ ದೊರಕದು ಲಾಭ ||

ಹೆತ್ತವರ ಮನ ವಿಲವಿಲ ಕದನ
ಶಿಕ್ಷಿಸೊ ಕ್ಷಮಿಸೊ ಔದಾರ್ಯ
ನಂಬುವುದು ಹೇಗೊ ಜಗದೀ ಜನ
ನೇಮ ನಿಯತ್ತುಗಳೆ ಅನಾರ್ಯ ||

ಬಿಡಿ, ಹುಂಬ ಧೈರ್ಯವಿರಬೇಕು 
ಪರರ ಕೃತಿಯ ಚೌರ್ಯಕೆ
ಹಾಳು ಭಂಡ ಧೈರ್ಯವು ಬೇಕು 
ವಿಕೃತ ಮನದಾ ಶೌರ್ಯಕೆ ||

ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು

 

Comments

Submitted by venkatb83 Thu, 05/01/2014 - 16:43

ನಾಗೇಶ್ ಅಣ್ಣಾ -ಕೃತಿ ಚೌರ್ಯ ಜಾಸ್ತಿ ಆಗುವುದು ಫೇಸ್‌ಬುಕ್ಕಲ್ಲಿ (ಎಲ್ಲೆಲ್ಲಿಂದಲೋ ಯಾರ್ಯಾರ್ದೊ ಕದ್ದಿದ್ದು).. ಯಾರದೋ ಒಬ್ಬರ ಬರಹಕ್ಕೆ ಕೆಲ ಮನ ಸೆಳೆವ ಚಿತ್ರ ಬಣ್ಣ ಇತ್ಯಾದಿ ಸೇರಿಸಿ ತಮ್ಮದೇ ಎಂಬಂತೆ ಪೊಜ್ ಕೊಡುವರು -ನನ್ನ ಪುಣ್ಯಕ್ಕೆ ನನಗೆ ಗೊತ್ತಿರುವ ಹಾಗೆ ಇಲ್ಲಿವರೆಗೆ ಯಾವುದೇ ಬರಹ ಕಳ್ಳತನವಾಗಿಲ್ಲ , ಅದ್ಕೆ ಖುಷಿ ಮತ್ತು ದುಖವೋ ಇದೆ ...!!

ಒಂದು ನನ್ನ ಬರಹಗಳು ಜನಮನ ಸೆಳೆದಿಲ್ಲವೇನೋ ಅಂತ ಮತ್ತು ಈ ಕಾರಣಕ್ಕಾಗಿಯಾದರೂ ನಾ ಫೇಮಸ್ ಆಗ್ಲಿಲ್ಲ ಅಂತ ...!!

ಕೆಲ ತಿಂಗಳುಗಳ ಹಿಂದೆ ದಟ್ಸ್ ಕನ್ನಡದ ಒಂದು ಬರಹವನ್ನು ಯಾರೋ ಒಬ್ಬರು ಇಲ್ಲಿ ತಮ್ಮ ಹೆಸರಲ್ಲಿ ಪ್ರಕಟಿಸಿ ಅದು ಅವರಿಗೆ ಗೊತ್ತಾಗಿ ದಟ್ಸ್ ಕನ್ನಡದ ಸಂಪಾದಕರೇ ಇಲ್ಲಿ ಎಚ್ಚರಿಸಿದ್ದು ನನಗೆ ನೆನಪಿದೆ ..!! ಕೆಲವೊಮ್ಮೆ ಅಲ್ಲಲ್ಲಿ ಪ್ರಕಟ ಆಗುವ ಕೆಲ ಉಪಯುಕ್ತ ಬರ್ಹಗಳನ್ನು ಕ್ರೆಡಿಟ್ಸ್ ಕೊಟ್ಟು ನಾನೂ ಇಲ್ಲಿ ಹಾಕಿದ್ದೆ -

ಕೃತಿ ಚೌರ್ಯದ ಬಗೆಗಿನ ನಿಮ್ಮ ಬರಹ ಸಕಾಲಿಕ ..

ಬಿಡಿ, ಹುಂಬ ಧೈರ್ಯವಿರಬೇಕು
ಪರರ ಕೃತಿಯ ಚೌರ್ಯಕೆ
ಹಾಳು ಭಂಡ ಧೈರ್ಯವು ಬೇಕು
ವಿಕೃತ ಮನದಾ ಶೌರ್ಯಕೆ ||

ನಿಜ.......!!

ಶುಭವಾಗ್ಲಿ

\|/

Submitted by nageshamysore Thu, 05/01/2014 - 18:26

In reply to by venkatb83

ಸಪ್ತಗಿರಿಗಳೆ ನಮಸ್ಕಾರ. ಕೃತಿಚೌರ್ಯದ ವಿಷಯಕ್ಕೆ ಬಂದರೆ ಪ್ರಸವ ವೇದನೆಯನುಭವಿಸಿದವರಿಗೆ ಆ ಕಳ್ಳತನ ನಿಜಕ್ಕೂ ನೋವುಂಟುಮಾಡುವ ವಿಷಯ. ಆದರೆ ನಮ್ಮ ಸಂಸ್ಕೃತಿಯಲ್ಲಿ ಪುರಾಣಗಳಲ್ಲಿ ಅದರಲ್ಲೂ ಬಾಲ್ಯದ ಲೀಲೆಗಳೆಂದು ಪರಿಗಣಿಸಿದಾಗ ಕಳ್ಳತನವೆಂಬುದು ತುಂಟತನದ ಪರದೆಯಡಿ ಸಹನೀಯ ರೂಪ ಪಡೆಯುತ್ತದೆ. ದೊಡ್ಡವರಾದಾಗ ಆ ಪ್ರವೃತ್ತಿ ಮರೆಯಾಗುವುದೆಂಬ ನಿರೀಕ್ಷೆ ಕೆಲವರಲ್ಲಿ ನಿಜವಾಗಬಹುದು ಇನ್ನು ಕೆಲವರಲ್ಲಿ ಸುಳ್ಳಾಗಬಹುದು. ಆದರೆ ಪಾರಂಪರಿಕ ನಿರೀಕ್ಷೆಯ ಅಂದುಕೊಳ್ಳುವಿಕೆ ಹೇಗಿರುತ್ತದೆಂದರೆ ಎಲ್ಲರೂ ಬೆಳೆಯುವತನಕ ಕೃಷ್ಣರಾಗಿರಬೇಕು; ದೊಡ್ಡವರಾದ ಮೇಲೆ ರಾಮರಾಗಿಬಿಡಬೇಕು. ಬಹುತೇಕರ ಪ್ರಯತ್ನ ಈ ನಿಟ್ಟಿನಲ್ಲೇ ಸಾಗಿದ್ದರೂ ಕೆಲವೊಮ್ಮೆ ರಾಮರೊಳಗಿರುವ ಕೃಷ್ಣ ಅಥವಾ ಕೃಷ್ಣರೊಳಗಿರುವ ರಾಮ ಎಚ್ಚರಗೊಂಡಾಗ ವಿರುದ್ಧಾರ್ಥಕ ಪ್ರೇರಣೆಗಳು ಉಂಟಾಗಬಹುದು ಪ್ರಲೋಭನೆಯ ರೂಪದಲ್ಲಿ. ಬಹುಷಃ ರಾಮನಂತವರು ಕೃತಿಚೌರ್ಯಕಿಳಿದಾಗ ಮನ ಕೃಷ್ಣನಾಗಿರುತ್ತದೊ ಏನೋ? ಅಂತೆಯೇ ಕ್ಷಮಿಸುವ ಮನ ರಾಮನಾಗಬಹುದು. ಈ ತಾಕಲಾಟ ರಾಮಕೃಷ್ಣರನ್ನು ನಂಬುವವರೆಲ್ಲರನ್ನು ಪರೋಕ್ಷವಾಗಿ ಕಾಡಬಹುದೆನಿಸಿ ಆ ಹೋಲಿಕೆ ನೀಡಿದೆ. ಕೃಷ್ಣನ ಕಳ್ಳಾಟಗಳು ನಮಗೆ ಪ್ರಿಯವೇ ಅಲ್ಲವೇ?

ಇನ್ನು ಹೆಸರಾಗುವ ವಿಷಯಕ್ಕೆ ಬಂದರೆ - ಇತರರಿಗಾಗಿ ಬರೆಯುತ್ತೇನೆ ಅಂದುಕೊಳ್ಲುವ ಬದಲು ನನ್ನ ಮನಸಿನ ತೃಪ್ತಿಗಾಗಿ ಬರೆಯುತ್ತೇನೆ ಅಂದುಕೊಂಡರೆ ವಾಸಿಯೇನೋ. ನಿರೀಕ್ಷೆಗಳಿರದ ಕಡೆ ನಿರಾಸೆ ಇರುವುದಿಲ್ಲ. ಈಗೆಲ್ಲ ಮಾರ್ಕೆಟಿಂಗ್ ಜಮಾನ. ಚೆನ್ನಾಗಿದ್ದರೂ ಪ್ರಚಾರವಿದ್ದರೆ ಮಾತ್ರ ಓಡುವ ಕುದುರೆ. ಕಾಲ ಕೂಡಿ ಬರುವ ತನಕ ಸಹನೆಯಿಂದಿದ್ದರೆ ಸಾಕೇನೊ? :-)

Submitted by ಗಣೇಶ Fri, 05/02/2014 - 23:32

In reply to by venkatb83

>>ನನಗೆ ಗೊತ್ತಿರುವ ಹಾಗೆ ಇಲ್ಲಿವರೆಗೆ ಯಾವುದೇ ಬರಹ ಕಳ್ಳತನವಾಗಿಲ್ಲ , ಅದ್ಕೆ ಖುಷಿ ಮತ್ತು ದುಖವೋ ಇದೆ ...!!
ಒಂದು ನನ್ನ ಬರಹಗಳು ಜನಮನ ಸೆಳೆದಿಲ್ಲವೇನೋ ಅಂತ ಮತ್ತು ಈ ಕಾರಣಕ್ಕಾಗಿಯಾದರೂ ನಾ ಫೇಮಸ್ ಆಗ್ಲಿಲ್ಲ ಅಂತ ...!! :) -ಸಪ್ತಗಿರಿಯವರ ಜತೆ ನನ್ನದೂ ಇದೇ ಅಳಲು :(
ಒಂದೇ ಒಂದು ನನ್ನ ಕವನವನ್ನು ಯಾರೂ ಕದಿಯಲಿಲ್ಲವೇ..:( "ನೀವೆಲ್ಲಿ ಕವನ ಬರೆದಿದ್ದೀರಿ?" ಅನ್ನಬೇಡಿ. ನನಗೆ ಕವನ ಪ್ರಕಟಿಸಲು ಅವಕಾಶವೇ ಸಿಗಲಿಲ್ಲ :-
"ನೂರೊಂದು ಕವನ ಎದೆಯಾಳದಿಂದಾ..."
"ಮಾತು ನಾಲ್ಕು ಮಾsssತು.."
"ಆಕಾಶದಿಂದ ಧರೆಗಿಳಿದ ಊರ್ವಶೀsssssss" ಹೀಗೇ ನೂರಾರು ಕವನ ನನ್ನ ಸ್ವಂತ ತಲೆ ಹೃದಯ ಪೆನ್ನಿನಿಂದ ಬರೆದಿದ್ದೆ..
ನನ್ನ ಕರ್ಮ.. ಇದಕ್ಕೂ ಮೊದಲು ಇದೇ ತರಹ ಅರ್ಥ ಬರುವ ಕವನ ಯಾರೋ ಬರೆದಿದ್ದಾರಂತೆ! ಒಂದು ನೂರು ವರ್ಷ ಮೊದಲು ಹುಟ್ಟಿದ್ದರೆ ನಾನೂ ದೊಡ್ಡ ಕವಿಯಾಗಬಹುದಿತ್ತು :( ಈಗ ಪ್ರೇಮಗೀತೆ/ಭಾವಗೀತೆ/ಭಕ್ತಿಗೀತೆ...ಎಲ್ಲಾ ತರಹದ ಕವನಗಳನ್ನೂ ಈ ಕವಿಗಳು ನನಗಿಂತ ಮೊದಲು ಬರೆದೂ ಬರೆದೂ...ನನ್ನಂತಹ ಉದಯೋನ್ಮುಖ ಕವಿಗಳಿಗೆ ಏನೂ ಉಳಿದಿಲ್ಲ. :(
ಕವಿನಾಗರಾಜರೆ ಮತ್ತು ನಾಗೇಶರೆ,
ನಿಮಗೆ ನಮ್ಮ ಕಷ್ಟ ಅರ್ಥವಾಯಿತು ಅಂದುಕೊಳ್ಳುತ್ತೇನೆ. ನೀವು ಸಾವಿರಾರು ಕವಿತೆ ರಚಿಸುತ್ತೀರಿ. ಅದರಲ್ಲಿ ಒಂದೆರಡು ಕವಿತೆ ನಿಮ್ಮನ್ನು ಕೇಳದೇ, ನಮ್ಮ ಹೆಸರಲ್ಲಿ ಫೇಸ್ ಬುಕ್/ಪತ್ರಿಕೆಯಲ್ಲಿ ಹಾಕಿದರೆ -ನಿಮಗೆ ದೊಡ್ಡ ನಷ್ಟವೇನಿಲ್ಲ- ನೀವು ಬಹಿರಂಗಪಡಿಸಿ ನಮಗೆ ಹಿಟ್ಸ್ ಜಾಸ್ತಿ ಬೀಳುವಂತೆ ಮಾಡಬೇಡಿ. :)

Submitted by nageshamysore Sat, 05/03/2014 - 03:56

In reply to by ಗಣೇಶ

ಈ ಚುನಾವಣಾ ಪ್ರಚಾರದಲ್ಲಿ ಟೀವಿ ಮಾಧ್ಯಮದಲ್ಲಿ ಎಲ್ಲರೂ ಪರಸ್ಪರ ಕಾಲೆಳೆದು ಕೆಸರೆರಚಾಡುವುದನ್ನು ನೋಡಿದರೆ - 'ಗುಟ್ಟು' ಬಯಲಾಗಿಸಿದರೆ ಹೆಚ್ಚು 'ಹಿಟ್ಟು' ಬೀಳುವುದು ಎಂದು ಕಾಣುತ್ತದೆ :-) ಫೇಮಸ್ ಆಗಲು ಹತ್ತಿರದ ದಾರಿ.
.
ಈಗೊಂದು ಬಿಜಿನೆಸ್ ಐಡಿಯ ಕೂಡ ಬರುತ್ತಿದೆ - ಕವಿಗಳಲ್ಲದವರಿಗೆ ಅವರು ಬಯಸಿದ ಕವಿತೆ 'ಬೇನಾಮಿ' ಬರೆದುಕೊಡುವ ಸೇವೆ! ಕವಿ ಮುದ್ದಣ ಮಾಡಿದ ಹಾಗೆ ಯಾರದೋ ಹೆಸರಲ್ಲಿ ಬಂದರೂ ಕನಿಷ್ಟ ಸ್ವಲ್ಪ ಜನರಾದರೂ ಓದುತ್ತಾರೆನ್ನುವ ಸಾಧ್ಯತೆ ಇರುತ್ತದೆ. ಹೇಗೂ ಪ್ರಕಟವಾಗದೆ ಕೊಳೆಯುವ ಬದಲು ಜನರ ಕಣ್ಣಿಗಾದರೂ ಬೀಳುತ್ತದೆ :-)
.
ನೀವು ತೋಡಿಕೊಂಡ ಅಳಲೆ ನಮ್ಮದೂ ಸಹ - ಎಲ್ಲ ಬರೆದಿಟ್ಟು ಬಿಟ್ಟಿದ್ದಾರೆ ಏನೂ ಮಿಗಿಸಿಲ್ಲ ನಾವು ಬರೆಯುವುದೇನು? ಅಂತ. ಕೊನೆಗೆ ಅದೇ ಥೀಮಿನಲ್ಲಿ ಕೃತಿಚೌರ್ಯ ಅನಿವಾರ್ಯ ಅಂಥ ಇನ್ನೊಂದು ಕವನ ಬರೆದು ಸುಮ್ಮನಾದೆ! :-)

Submitted by naveengkn Thu, 05/01/2014 - 17:57

ನಾಗೇಶರೇ ನಮಸ್ಥೆ,,,,,, ಎಲ್ಲಿಯೋ ಕಲಿತ‌ ನುಡಿಗಳು,,,, ಇನ್ನೆಲ್ಲಿಯೋ ಓದಿದ‌ ಭಾವಗಳು,,,,, ಕಂಡ ಪ್ರಕೃತಿಯ‌ ಬಗೆ ಬಗೆಯ‌ ಬಿನ್ನಾಣಗಳು,,,,, ಎಲ್ಲವನು ಕದ್ದಿದ್ದು ಹೃದಯದಿಂದಾ ಅಲ್ಲವೇ??,,,,,, ಸುಂದರ ಸಾಂದರ್ಬಿಕ‌ ಬರಹ‌,,, ಧನ್ಯವದಗಳು.

Submitted by nageshamysore Thu, 05/01/2014 - 18:35

In reply to by naveengkn

ನಿಜ ನವೀನರೆ, ಹಾಗೆ ನೋಡಿದರೆ ಎಲ್ಲವೂ ಯಾವುದಾದರೊಂದು ಮೂಲದ ಆಧಾರದ ಮೇಲೆ ರಚಿಸಿದ ಸಂಭವಗಳೆ. ಪ್ರಾಯಶಃ ಮೊಟ್ಟ ಮೊದಲ ಬಾರಿಗೆ ಬಂದ ಪ್ರೀತಿ, ಪ್ರೇಮ, ಯುದ್ಧ, ಸಂಬಂಧ, ಭಾವ, ಬಂಧ ಇತ್ಯಾದಿಗಳ ಕಥಾನಕಗಳು ಮಾತ್ರವೆ ಅಪ್ಪಟ ಒರಿಜಿನಲ್. ಮಿಕ್ಕಿದ್ದೆಲ್ಲ ಆ ಮೂಲಕ್ಕೆ ಹಚ್ಚಿದ ಬಣ್ಣದ ಪರದೆಗಳೆ ಏನೊ? ಕ್ರಿಯಾಶೀಲ ಮನಸಿಗೊಂದು ವೇದಿಕೆಯ ಅಗತ್ಯ ಬಿದ್ದಾಗ ಇವೆಲ್ಲ ಹೂರಣಗಳು ಹೊರಬೀಳುತ್ತವೆ ಕಥೆ, ಕವನ, ಬರಹದ ರೂಪದಲ್ಲಿ. ಒಂದಷ್ಟು ಸಹೃದಯರ ಮನಗೆದ್ದರೆ ಸಮ್ಮತ ಚೋರತನವಾಗುತ್ತದೆ. ಇನ್ನಾರದೊ ಕದ್ದು ನಮ್ಮದೆಂದು ಪ್ರಕಟಿಸಿದರೆ ಅಸಮ್ಮತ ಕೃತಿಚೌರ್ಯವಾಗುತ್ತದೆ. ಒಟ್ಟಾರೆ ಚೋರತನದಲ್ಲಿಯೆ ಒಪ್ಪಿತವಾಗುವ ರೀತಿಯ ಚೋರತನವಾಗಿರುವ ತನಕ ಅಡ್ಡಿಯಿಲ್ಲ :-)

Submitted by lpitnal Thu, 05/01/2014 - 23:18

ನಾಗೇಶ್ ಜಿ, ನಮಸ್ಕಾರ. ಕೃತಿಚೌರ್ಯದ ಕುರಿತು ಕವನ ಚನ್ನಾಗಿದೆ. ಮೆಚ್ಚುಗೆಯಾಯಿತು.ಧನ್ಯವಾದ ಗೆಳೆಯರೆ.