ಮೂವತ್ತಕ್ಕೇ ಮುಪ್ಪಿನ ಕಾಲ ಈ ಕಾಲ !

ಮೂವತ್ತಕ್ಕೇ ಮುಪ್ಪಿನ ಕಾಲ ಈ ಕಾಲ !

ನಾವು ಅರವತ್ತರ
ಗಡಿಯಲ್ಲಿರುವವರು
ಎಲ್ಲವನೂ ಕಂಡವರು
ನಮ್ಮಜ್ಜನ ಕಾಲ 
ನಮ್ಮಪ್ಪನ ಕಾಲ
ಈಗಿನ ವಿಜ್ಞಾನದ ಕಾಲ!

ತುತ್ತಿಗೆ ಹಾಹಾಕಾರವಿದ್ದ ಕಾಲ
ತಿಂದು ತೇಗುವವರೂ ಇದ್ದ ಕಾಲ
ಮಡಿ ಮೈಲಿಗೆಯ ಕಾಲ
ದಿಮಾಕು-ದೈನ್ಯತೆಯು
ಒಟ್ಟೊಟ್ಟಿಗೆ ಇದ್ದ ಕಾಲ!

ಬಿಕ್ಷುಕರ ಕಾಲ
ಬಡ ರೈತನ ಕಾಲ
ಬಡ ಬ್ರಾಹ್ಮಣನ ಕಾಲ
ಹರವಿದ ಬಟ್ಟೆ ಕದಿಯುವವರ ಕಾಲ
ದಾನ -ಧರ್ಮಗಳ ಕಾಲ

ವಿಧವೆಯ ಸಂಪತ್ತನ್ನು
ದೋಚಿ ಅನುಭವಿಸಿದವರ ಕಾಲ
ಬಿದ್ದವರನು ಇನ್ನೂ ತುಳಿದಕಾಲ
ಕದ್ದು ಮುಚ್ಚಿ ಬಸುರು ಮಾಡುತ್ತಿದ್ದ ಕಾಲ

ಧರ್ಮದ ಕಾಲ-ಅಧರ್ಮದ ಕಾಲ
ಮಾನ-ಅಪಮಾನಗಳ ಕಾಲ
ಶೋಷಣೆಯ ಕಾಲ,ದಬ್ಬಾಳಿಕೆಯ ಕಾಲ
ಬಡವ-ಬಲ್ಲಿದರ ಬಿರುಕಿನ ಕಾಲ

ಸ್ಲೇಟು-ಬಳಪದ ಕಾಲ
ಮಸಿಯಲಿ ಬರೆಯುವ ಕಾಲ
ಚಡ್ಡಿಯಲಿ ಶಾಲೆಗೆ ಹೋಗುತ್ತಿದ್ದ ಕಾಲ
ಊರ ಸಂತರ್ಪಣೆಗಳ ಕಾಲ

ಮೃಷ್ಟಾನ್ನದೂಟ ಅಪರೂಪದ ಕಾಲ
ರಾಗಿ ಮುದ್ದೆ-ರೊಟ್ಟಿಯ ಕಾಲ
ಇಡ್ಲಿ ಕಾಣದ ಕಾಲ
ಅನ್ನವೇ ಅಪರೂಪದ ಕಾಲ

ಶ್ರೀ ಮಂತರ ಸೇಬಿನ ಕಾಲ
ಬಡವನ ಗಣಿಕೆಹಣ್ಣಿನ ಕಾಲ
ತಂಬಿಟ್ಟು-ಚಿಗುಲಿಯ ಕಾಲ
ಹುರಿಟ್ಟು ಇಟ್ಟು ತಿನ್ನುವ ಕಾಲ

ಕದ್ದು ಮುಚ್ಚಿ ತೋಟ ಗದ್ದೆಗಳಲಿ
ಹುಡುಗಿಯರೊಡನೆ
ಸರಸವಾಡಿಸಿಕ್ಕಿ ಬಿದ್ದು 
ತಾಳಿ ಕಟ್ಟುತ್ತಿದ್ದ ಕಾಲ

ಇದು ವಿಜ್ಞಾನದ ಕಾಲ
ವಿಶ್ವವನೇ ಜಾಲಾಡಿದ
ಅಂತರ್ಜಾಲದ ಕಾಲ
ಫೇಸ್ ಬುಕ್ಕಿನ ಕಾಲ

ಬದುಕುವವರಿಗೆ 
ಬದುಕು ಹಸನಾಗಿಸುವ ಕಾಲ
ದಾರಿ ತಪ್ಪಿದರೆ
ಪಾತಾಳಕೆ ಬೇಗ ತಳ್ಳುವ ಕಾಲ

ಬಚ್ಚಿಟ್ಟಿದ್ದೆಲ್ಲಾ 
ಬಿಚ್ಚಿ ಹೇಳುತ್ತಿರುವ ಕಾಲ
ಆಬಾಲವೃದ್ಧರಿಗೆ
ಸಮನಾದ ಕಾಲ

ಮೂವತ್ತಕ್ಕೇ ಮುಪ್ಪಿನ ಕಾಲ-ಈ ಕಾಲ ||

Rating
No votes yet

Comments

Submitted by naveengkn Tue, 05/13/2014 - 09:45

ಶ್ರಿಧರರೇ ನಮಸ್ತೆ,,,,,, ಕಾಲದ‌ ಮಹಿಮೆ,,,,, ಬದುಕು ಚಿಕ್ಕದಾಗುತ್ತಿದೆ ಎನ್ನುವ‌ ಕಳವಳದ‌ ಜೊತೆ ನಿಮ್ಮ ತುಂಬು ಬದುಕಿನ‌ ಮಧುರ‌ ಸ್ಮ್ರುತಿ,,,, , ಸಾಂಧರ್ಭಿಕ‌ ಕೂಡ‌,,,
ಧನ್ಯವಾದಗಳೊಂದಿಗೆ ಜೀ ಕೇ