ಪರವಾಗಿಲ್ಲ ಅಲ್ವೇನಮ್ಮ?
ಮಳೆ ನಿಂತು ಹೋದ ಮೇಲೆ ಹನಿಯೊಂದು ಜಾರಿತೇ? ಅನ್ನಬೇಡಿ .... ಈ ವರ್ಷದ ಅಮ್ಮಂದಿರ ದಿನದ ಆಚರಣೆ ಈಗ ಗತವೈಭವ. ಎಲ್ಲ ಮಕ್ಕಳು ನಿಮ್ಮಷ್ಟೇ ಒಳ್ಳೆಯವರಾಗಿರೋದಿಲ್ಲ. ಅದಕ್ಕೊಂದು ಉದಾಹರಣೆ ಹೀಗಿದೆ:
ದಿನವೂ ನೀ ಎನ್ನ ಕೈ ಹಿಡಿದು ನೆಡೆದಾಡಿಸಿದ್ದೆಯಂತೆ
ನಾ ನಿನ್ನ ಕೈ ಪಿಡಿದು ಒಂದು ದಿನಕ್ಕೂ ನೆಡೆಸಲೇ ಆಗಲಿಲ್ಲ
ಪರವಾಗಿಲ್ಲ ಅಲ್ವೇನಮ್ಮ?
ದಿನವೂ ನೀ ಎನ್ನ ಎತ್ತಿಕೊಂಡು ತುತ್ತುಣಿಸುತ್ತಿದ್ದೆಯಂತೆ
ನಿನ್ನೊಂದಿಗೆ ಕೂತುಣ್ಣಲು ನನಗೆ ಸಮಯವೇ ಆಗಿರಲಿಲ್ಲ
ಪರವಾಗಿಲ್ಲ ಅಲ್ವೇನಮ್ಮ?
ಸದಾ ನಾ ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರವೀಯುತ್ತಿದ್ದೆಯಂತೆ
ಮೂರು ದಿನಕ್ಕೊಮ್ಮೆ ಹೇಗಿದ್ದೀ ಎಂದೂ ನನಗೆ ಕೇಳಲಾಗುತ್ತಿಲ್ಲ
ಪರವಾಗಿಲ್ಲ ಅಲ್ವೇನಮ್ಮ?
ನೀ ಎನ್ನ ಬಟ್ಟೆಬರೆಗಳನ್ನು ಒಪ್ಪ ಓರಣ ಮಾಡುತ್ತಿದ್ದೆಯಂತೆ
ನಾ ನಿನ್ನ ಹರಕಲು ಸೀರೆಯ ಕಂಡೂ ಕಾಣದಂತಿರುತ್ತಿದ್ದೆನಲ್ಲ
ಪರವಾಗಿಲ್ಲ ಅಲ್ವೇನಮ್ಮ?
ದಿನ ನಿತ್ಯ ನೀನು ಎನಗೆ ಕಥೆಗಳ ಹೇಳದೆ ಇರುತ್ತಿರಲಿಲ್ಲ
ನಾ ನಿನಗೆ ಒಮ್ಮೆಯೂ ಒಂದು ಪೇಪರ್ ಕೂಡ ಓದಲಿಲ್ಲವಲ್ಲ
ಪರವಾಗಿಲ್ಲ ಅಲ್ವೇನಮ್ಮ?
ಒಮ್ಮೆ ನಾ ಸೀನಿದರೂ ಕಷಾಯವ ನೀ ಮಾಡಿಕೊಡುತ್ತಿದ್ದೆ
ನೀ ಕೆಮ್ಮಲೊಮ್ಮೆ, ಗಲಾಟೆ ಎನ್ನುತ್ತ ನಾ ಸಿಡಿಗುಟ್ಟುತ್ತಿದ್ದೆ
ಪರವಾಗಿಲ್ಲ ಅಲ್ವೇನಮ್ಮ?
ನನ್ನೊಂದಿಗಾಡುತ್ತಿದ್ದ ಓಣಿ, ಬೀದಿ ಮಕ್ಕಳನ್ನು ನನ್ನಂತೆಯೇ ನೀ ಕಂಡೆ
ನನ್ನೀ ಮಕ್ಕಳನ್ನು ನಿನ್ನೊಂದಿಗಾಡದಂತೆ ನಾನಾಗಿದೆ ದೊಡ್ಡ ಕಲ್ಲುಬಂಡೆ
ಪರವಾಗಿಲ್ಲ ಅಲ್ವೇನಮ್ಮ?
ಶಾಲ ದಿನಗಳಲ್ಲಿ ಶಾಲೆಯ ಬಾಗಿಲವರೆಗೂ ಬಂದು ನೀ ಕೈಬೀಸುತ್ತಿದ್ದೆ
ಕಛೇರಿಗೆ ಹೋಗುವಾಗ ನೀ ಬೀಸಿದ ಕೈಯನ್ನು ಕಾಣದಂತೆ ನಾ ಓಡುತ್ತಿದ್ದೆ
ಪರವಾಗಿಲ್ಲ ಅಲ್ವೇನಮ್ಮ?
ನೀ ಎನ್ನ ಕೇಳದೇ ಮನೆಗೆ ಪುಟ್ಟ ತಂಗಿಯೊಬ್ಬಳ ತಂದಿದ್ದೆ
ನಾ ನಿನ್ನನ್ನು ಕೇಳದೆ ಮನೆಗೆ ಸೊಸೆಯೊಬ್ಬಳ ತಂದಿದ್ದೆ
ಪರವಾಗಿಲ್ಲ ಅಲ್ವೇನಮ್ಮ?
ಮಕ್ಕಳಲ್ಲೇ ದೇವರ ಕಂಡ ನಿನಗೆ ವರ್ಷವೆಲ್ಲ ಅಮ್ಮನ ದಿನದ ನಿತ್ಯೋತ್ಸವ
ಇದ್ದಾಗ ಅರಿಯದೆ ಬೆಲೆ ನಾನೂ ಆಚರಿಸಿದ್ದೆ ಅಮ್ಮನ ದಿನದ ಸಂಭ್ರಮೋತ್ಸವ
ಪರವಾಗಿಲ್ಲ ಅಲ್ವೇನಮ್ಮ?
Comments
ಉ: ಪರವಾಗಿಲ್ಲ ಅಲ್ವೇನಮ್ಮ?
ಭಲ್ಲೇ ಜಿ, ನಮಸ್ಕಾರ ಸರ್. 'ನೀ ಕೆಮ್ಮಲೊಮ್ಮೆ, ಗಲಾಟೆ ಎನ್ನುತ್ತ ನಾ ಸಿಡಿಗುಟ್ಟುತ್ತಿದ್ದೆ', 'ನಾ ನಿನ್ನನ್ನು ಕೇಳದೆ ಮನೆಗೆ ಸೊಸೆಯೊಬ್ಬಳ ತಂದಿದ್ದೆ'?! ಹೌದೇ,, ಕವನ ತುಂಬ ಆಪ್ತವಾಗಿದೆ, ಇಷ್ಟವಾಯಿತು, ನಿಮ್ಮೊಳಗಿನ ಕವಿಗೆ ನಮನ.
In reply to ಉ: ಪರವಾಗಿಲ್ಲ ಅಲ್ವೇನಮ್ಮ? by lpitnal
ಉ: ಪರವಾಗಿಲ್ಲ ಅಲ್ವೇನಮ್ಮ?
ಇಟ್ನಾಳರಿಗೆ ನಮಸ್ಕಾರಗಳು
ಅಲ್ಲಿ ಇಲ್ಲಿ ಕೇಳಿದ್ದು,ನೋಡಿದ ಅನುಭವ ಈ ಕವನದ್ದು. ಸ್ವಂತ ಅನುಭವ ಅಲ್ಲ ಸಾರ್ :-)))
ಧನ್ಯವಾದಗಳು :-)
ಉ: ಪರವಾಗಿಲ್ಲ ಅಲ್ವೇನಮ್ಮ?
ವಸ್ತುಸ್ಥಿತಿಗೆ ಹಿಡಿದ ಕನ್ನಡಿಯಿದು, ಭಲ್ಲೆಯವರೇ.
ಇದನ್ನೂ ಒಮ್ಮೆ ಓದಿ: http://kavimanadaaladinda.blogspot.in/2014/03/blog-post_17.html
ಇದು ವಾಸ್ತವ ಘಟನೆಗೆ ಕೊಟ್ಟಿದ್ದ ಕವನದ ರೂಪ.
In reply to ಉ: ಪರವಾಗಿಲ್ಲ ಅಲ್ವೇನಮ್ಮ? by kavinagaraj
ಉ: ಪರವಾಗಿಲ್ಲ ಅಲ್ವೇನಮ್ಮ?
:-(((
ಹಳ್ಳಿ ಮಕ್ಕಳು ಅಪ್ಪ-ಅಮ್ಮನ ತೊರೆದು ಪಟ್ನಾ ಸೇರ್ತಾರೆ. ಪಟ್ಟಣದವರು ವಿದೇಶ ಸೇರ್ತಾರೆ. ಸಾಯೋ ಕಾಲಕ್ಕೆ ಎಲ್ಲರೂ ದಶರಥರೇ!
- ಭಲ್ಲೆ.