ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ
ಇಂಗ್ಲಿಷ್ ಭಾಷೆಯನ್ನು ಯಾವ ತರಗತಿಯಿಂದ ಕಲಿಸಬೇಕು ಎಂಬ ಚರ್ಚೆಗೆ ದಿನದಿಂದ ದಿನಕ್ಕೆ ಕಾವೇರುತ್ತಲೇ ಇದೆ. ಭಾಷಾ ಬೋಧನೆಯ ಸಾಧ್ಯತೆ ಮತ್ತು ಮಿತಿಗಳನ್ನು ಅರಿತವರಿಗಿಂತ ಹೆಚ್ಚಾಗಿ ಇಡೀ ವಿಷಯವನ್ನು ಭಾವನಾತ್ಮಕವಾಗಿ ಗ್ರಹಿಸಿದವರು ಮಾತ್ರ ಈ ವಿಷಯದ ಚರ್ಚೆಯ ಮುಂಚೂಣಿಯಲ್ಲಿದ್ದಾರೆ. ಪರಿಣಾಮವಾಗಿ ಯಾವುದು ಚರ್ಚೆಯಾಗಬೇಕಿತ್ತೋ ಅದು ಚರ್ಚೆಯಾಗದೆ ಕನ್ನಡದ ಬಳಕೆ ಎಂಬುದು ವರ್ಗ, ವರ್ಣ, ಜಾತಿ ಮುಂತಾದುವುಗಳ ಚರ್ಚೆಯಾಗಿ ಬದಲಾಗುತ್ತಿದೆ. ಭಾಷೆಯೊಂದರ ಕಲಿಕೆಯ ಹಿಂದೆ ಈ ಎಲ್ಲಾ ಸಾಮಾಜಿಕ ಅಸಮಾನತೆಗಳು ಪರಿಣಾಮ ಬೀರುತ್ತವೆಯಾದರೂ ಕೇವಲ ಅವುಗಳನ್ನಷ್ಟೇ ಪರಿಗಣಿಸಿ ಭಾಷೆಯೊಂದರ ಕಲಿಕೆಗೆ ಸಂಬಂಧಿಸಿದ ನೀತಿ ರೂಪಿಸಲು ಸಾಧ್ಯವಿಲ್ಲ.
ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸುವುದರಿಂದ ಮಕ್ಕಳಿಗೆ ಹೊರೆಯಾಗುತ್ತದೆ. ಕನ್ನಡಕ್ಕೆ ಅಪಾಯ, ಕನ್ನಡ ಸಂಸ್ಕೃತಿಗೆ ಅಪಾಯ ಎಂದು ಒಂದು ಗುಂಪಿನವರು ವಾದಿಸುತ್ತಿದ್ದಾರೆ. ಈ ಗುಂಪಿನಲ್ಲಿರುವ ಹಿರಿಯರಲ್ಲಿ ಹಲವರು ‘ತಮ್ಮದೇ ಆದ’ ಕಾರಣಗಳಿಗಾಗಿ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಓದಿಸಿಯೂ ಇದ್ದಾರೆ. ಮತ್ತೊಂದು ಗುಂಪಿನವರು ಇಂಗ್ಲಿಷ್ ಸಾಮಾಜಿಕ ಅಸಮಾನತೆಯ ನಿವಾರಣೆಗೆ ಅವಶ್ಯ. ಆಧುನಿಕ ಉದ್ಯೋಗ ಮಾರುಕಟ್ಟೆಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಇಂಗ್ಲಿಷ್ ಇಲ್ಲದಿದ್ದರೆ ಸಾಧ್ಯವಿಲ್ಲ. ಶೋಷಿತ ವರ್ಗಗಳಿಗೆ ಇಂಗ್ಲಿಷ್ ನಿಂದಲೇ ವಿಮೋಚನೆ ಎನ್ನುತ್ತಿದ್ದಾರೆ. ಈ ವಾದಗಳನ್ನು ಮಂಡಿಸುತ್ತಿರುವವರೆಲ್ಲರೂ ತಮ್ಮ ಮಕ್ಕಳಿಗೆ ಪ್ರತಿಷ್ಠಿತ ಇಂಗ್ಲಿಷ್ ಶಾಲೆಗಳಲ್ಲಿ ಪ್ರವೇಶಗಿಟ್ಟಿಸಿಕೊಂಡಿದ್ದಾರೆ. ಇಂಗ್ಲಿಷ್ ಪರವಾಗಿ ವಾದಿಸುವ ಮೂಲಕ ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗಳಿಗೆ ಸೇರಿಸಿರುವುದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂಬುದು ಮೊದಲ ಗುಂಪಿನವರ ಆರೋಪ.
ವಾಸ್ತವದಲ್ಲಿ ಈ ಎರಡೂ ವಾದಗಳೂ ವಿತಂಡವಾದಗಳೇ ಸರಿ. ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಕನ್ನಡ ಸಂಸ್ಕೃತಿ ಇಷ್ಟೂ ವರ್ಷಗಳಿಂದ ಉಳಿದುಕೊಂಡು ಬಂದಿದೆ. ಈ ಕನ್ನಡ ಸಂಸ್ಕೃತಿ ಎಂಬುದು ಇತರ ಎಲ್ಲಾ ಸಂಸ್ಕೃತಿಗಳಂತೆ ಚಲನಶೀಲವೇ ಆಗಿರುವುದರಿಂದ ಆಯಾ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ತನ್ನನ್ನು ಉಳಿಸಿಕೊಂಡಿದೆ. ಹೈದರ್, ಟಿಪ್ಪು, ಬಹಮನಿ ಸುಲ್ತಾನರ ಆಡಳಿತದ ಅವಧಿಯಲ್ಲಿ ದಖ್ಖನಿ ಆಡಳಿತ ಭಾಷೆಯಾಗಿತ್ತು. ಹಾಗೆಂದು ಕನ್ನಡ ಮರೆಯಾಗಲಿಲ್ಲ. ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ಇಂಗ್ಲಿಷ್ ಆಳುವವರ ಭಾಷೆಯಾಗಿತ್ತು. ಆಗಲೂ ಕನ್ನಡ ಮರೆಯಾಗಲಿಲ್ಲ. ಈ ಸವಾಲುಗಳನ್ನು ಎದುರಿಸಿ ಅದು ಉಳಿದುಕೊಂಡಿತು. ಈಗಲೂ ಅಷ್ಟೆ ಜಾಗತೀಕರಣದ ಎಲ್ಲ ಸವಾಲುಗಳನ್ನೂ ಅದು ಎದುರಿಸಿ ಉಳಿದುಕೊಳ್ಳುತ್ತದೆ. ಈ ಸವಾಲುಗಳನ್ನು ಎದುರಿಸಲು ನಮ್ಮ ಭಾಷೆಯನ್ನು ಸಿದ್ಧಗೊಳಿಸಬೇಕು. ಅಂದರೆ ಹೊಸ ಪರಿಕಲ್ಪನೆಗಳನ್ನು ನಮ್ಮ ಭಾಷೆಯಲ್ಲಿ ಚರ್ಚಿಸಬೇಕು. ಇದರ ಬದಲಿಗೆ ಕಂಪ್ಯೂಟರನ್ನು ‘ಗಣಕ ಯಂತ್ರ’ ಎಂದರೆ ಮಾತ್ರ ಕನ್ನಡವಾಗುತ್ತದೆ ಎಂಬ ಕೂದಲು ಸೀಳುವ ಕೆಲಸವನ್ನು ಮಾತ್ರ ಮಾಡುತ್ತಾ ಹೋದರೆ ಕನ್ನಡವನ್ನು ಶಿಶುವಿಹಾರದಿಂದ ಸ್ನಾತಕೋತ್ತರ ಮಟ್ಟದವರೆಗೆ ಕಡ್ಡಾಯ ಮಾಡಿದರೂ ಅದು ಉಳಿಯಲಾರದು.
ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿತವರೆಲ್ಲರೂ ಇಂಗ್ಲಿಷ್ ಪಂಡಿತರಾಗಿ ಬಿಡುವುದಿಲ್ಲ. ನನ್ನ ತಲೆಮಾರಿನ ಹಾಗೂ ಅದಕ್ಕೂ ಹಿಂದಿನವರೆಲ್ಲರೂ ಹಳ್ಳಿಯ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಕಲಿತು ಬಂದು ಕಾಲೇಜು ಮಟ್ಟದಲ್ಲಿ ಇಂಗ್ಲಿಷಿಗೆ ತೆರೆದುಕೊಂಡವರು. ಇವರೆಲ್ಲರೂ ಇಂಗ್ಲಿಷನ್ನು ಸಲೀಸಾಗಿ ಬಳಸುತ್ತಿಲ್ಲವೇ? ಹೌದು, ಕೆಲ ಸಂದರ್ಭಗಳಲ್ಲಿ ಇಂಗ್ಲಿಷ್ ಒಂದು ಸವಾಲು ಎನಿಸಿತ್ತು. ಆದರೆ ಇದು ಮೀರಲಾರದ ಸವಾಲಾಗಿರಲಿಲ್ಲ.
ಈಗಲೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರೆಲ್ಲರೂ ಸರ್ವಜ್ಞರಲ್ಲ. ಕನಿಷ್ಠ ಇಂಗ್ಲಿಷ್ ನಲ್ಲೂ ಅವರು ಸರ್ವಜ್ಞರಾಗಿಲ್ಲ.
ನಮಗಿರುವ ಸವಾಲು ಮಾಧ್ಯಮದ್ದಲ್ಲ. ಶಿಕ್ಷಣದ್ದು. ಈ ಸವಾಲನ್ನು ಎದುರಿಸುವ ಬದಲಿಗೆ ಅದರಿಂದ ತಪ್ಪಿಸಿಕೊಳ್ಳುವ ಹಾದಿಯಾಗಿ ಮಾಧ್ಯಮದ ಕುರಿತ ಚರ್ಚೆಯನ್ನು ಅನವಶ್ಯಕವಾಗಿ ಬೆಳಸುತ್ತಿದ್ದೇವೆ. ನಮ್ಮ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಿಕ್ಷಣಗಳೆರಡೂ ಈ ಕಾಲದ ಅಗತ್ಯವನ್ನು ಪೂರೈಸುತ್ತಿಲ್ಲ. ಜಗತ್ತು ಹಳ್ಳಿಯಾಗಿರುವ ಈ ಹೊತ್ತಿನಲ್ಲಿಯೂ ನಮ್ಮ ಜ್ಞಾನದ ಎಲ್ಲೆಗಳನ್ನು ವಿಸ್ತರಿಸಿಕೊಳ್ಳಲು ಅಗತ್ಯವಿರುವ ಪರಿಕರಗಳನ್ನು ಒದಗಿಸುತ್ತಿಲ್ಲ. ಈ ಮೂಲಭೂತ ಪ್ರಶ್ನೆಗೆ ಉತ್ತರ ಕಂಡುಕೊಳ್ಳದೆ ಮಾಧ್ಯಮ ಯಾವುದಾಗಿರಬೇಕು ಎಂಬುದರ ಕುರಿತು ಚರ್ಚಿಸುವುದರಲ್ಲಿ ಯಾವ ಅರ್ಥವೂ ಇಲ್ಲ. ಬದುಕಿಗೆ ಪ್ರಸ್ತುತವಾಗದ ಶಿಕ್ಷಣವನ್ನು ಯಾವ ಮಾಧ್ಯಮದಲ್ಲಿ ಒದಗಿಸಿದರೂ ಅದು ವ್ಯರ್ಥವೇ.
namismail @ rediffmail. com
Comments
ವಾಸ್ತವ ಚಿತ್ರಣ
In reply to ವಾಸ್ತವ ಚಿತ್ರಣ by hpn
ವಸ್ತುಸ್ಥಿತಿ
In reply to ವಾಸ್ತವ ಚಿತ್ರಣ by hpn
Re: ವಾಸ್ತವ ಚಿತ್ರಣ
ನಿಮ್ಮ ವಿಚಾರಗಳು ನಿಜಕ್ಕೂ ವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ.
ತರ್ಕಬದ್ಧವಾಗಿದೆ
ಕನ್ನಡದ ಬಳಕೆ ಹೆಚ್ಚಿಸ ಬೇಕಾದ ಅಗತ್ಯ
Re: ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ
ಉ: ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ
ಉ: ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ
ಉ: ಕನ್ನಡವೇ ಸತ್ಯ, ಇಂಗ್ಲಿಷ್ ನಿತ್ಯ