ತುರ್ತು ಪರಿಸ್ಥಿತಿ! ಕಹಳೆ !! ಒಂದು ನೆನಪು

Submitted by hariharapurasridhar on Fri, 06/06/2014 - 11:43

ಎಲ್ಲಾ ಓದಲಿ ಎಂದು ನಾನು
ಬರೆಯಲೆ ಇಲ್ಲ
ಬರೆಯುವುದು ಅನಿವಾರ್ಯ ಕರ್ಮ ನನಗೆ!

ಇನ್ನೇನ್ ಮಾಡಲಿ ! ಬೆಳಗಿನಿಂದ  ಸಂಜೆಯ ವರಗಿನ ನನ್ನ ಭಾವನೆಗಳನ್ನು ಇಲ್ಲಿ ಗೀಜಿದೊಡನೆ  ಎಲ್ಲಾ ಖಾಲಿ         ಖಾಲಿ. ಹಾಸಿಗೆ    ಮೇಲ್ ಕಾಲು ಚಾಚಿದ ಕೂಡಲೇ ಗೊರಕೆ ಶುರು........ 

ಅರೆ, ನಾಳೆ ಮತ್ತೆ ಶುರುವಾಗಿ  ಬಿಡುತ್ತಲ್ಲಾ!!!!!!

ಅಷ್ಟಕ್ಕೇ ಆದರೆ ಬರೀ ಬೇಕಾಗಿರಲಿಲ್ಲ. ಈಗಿರುವ ನನ್ನ ವಯೋಮಾನದವರು ಯಾರ್ಯಾರು ನಾಲ್ಕೈದು ದಶಕಗಳಿಂದ RSS ಕಾರ್ಯಕರ್ತರಾಗಿ ಆಗ ಕೆಲಸ ಮಾಡಿದ್ದೀವಿ , ಅವರ ಅನುಭವ ರೋಮಾಂಚನ!!

1975-76 ರಲ್ಲಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ RSS ನ್ನು  ಬ್ಯಾನ್ ಮಾಡಿದ ಆ ದಿನಗಳಿವೆಯಲ್ಲಾ!! ನೆನಸಿಕೊಂಡರೆ ತಲೆ   ಸುತ್ತಿ  ಬರುತ್ತೆ!  ಅಂದಿನ ಕಾರ್ಯಕರ್ತರು ಇಂದೂ ಸಾವಿರಾರು ಜನರು ಇದ್ದಾರೆ. ಕೆಲವರು ಉನ್ನತ ಸ್ಥಾನದಲ್ಲಿದ್ದಾರೆ. ಆಗಿನ ಸಿಟ್ಟನ್ನು ಈಗ ತೀರಿಸಿ ಕೊಳ್ಳಲು ಈಗಲೂ ಬದುಕಿರುವ ಅಂದಿನ ಕಾರ್ಯಕರ್ತರು   ಮನಸ್ಸು ಮಾಡಿದ್ದರೆ  ಇಂದಿರಾ ಅನುಯಾಯಿಗಳ ಗತಿ ಏನಾಗುತ್ತಿತ್ತೋ! ಆದರೆ ಯಾರೂ ಹಾಗೆ ಮಾಡಲಿಲ್ಲ. ಕಾರಣ ಸಿಕ್ಕಿರುವ ಸಂಸ್ಕಾರ ಅಂತಾದ್ದು!!

ಇಂದು ಏನೇ ಹೋರಾಟವಿರಲಿ.ಅರೆಸ್ಟ್ ಮಾಡಿ ಜೈಲ್ ನಲ್ಲಿ ಒಂದು ದಿನ ಇಟ್ಟು ಬಿಡಬಹುದು.
ಅಂದು!!!

ಏರೋಪ್ಲೇನ್!!! ಅಂದರೆ  ಅದೊಂದು ಶಿಕ್ಷೆ ಅಂತಾ ಈಗಿನ ಯುವಕರಿಗೂ ಗೊತ್ತಿಲ್ಲ ಬಿಡಿ. ಲಾಟಿ ಏಟು,ಬೂಟುಗಾಲಿನ ಒದೆತ!! ಇವೆಲ್ಲಾ  ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಚಳುವಳಿ ಮಾಡಿದ  RSS  ಕಾರ್ಯಕರ್ತರಿಗೆ! ಕಹಳೆ  [ಭೂಗತ ಪತ್ರಿಕೆ] ಹಂಚಿದವರಿಗೆ!

ತುರ್ತು ಪರಿಸ್ಥಿತಿಯಲ್ಲಿ ನಾನು ಬೆಂಗಳೂರಿನ ದೂರವಾಣಿ ಭಾಗದಲ್ಲಿ  ವಿಸ್ತಾರಕ್ .ಆಗತಾನೇ ದೂರವಾಣಿ ಕಾರ್ಖಾನೆಯಲ್ಲಿ ತರಬೇತಿ ಮುಗಿಸಿ ಹೊರಬಂದಿದ್ದೆ. ತುರ್ತುಪರಿಸ್ಥಿತಿ ವಿರೋಧಿಸಿ ದೇಶಾದ್ಯಂತ ಚಳುವಳಿ ನಡೆಯುತ್ತಿದೆ. ಜೈಲ್ ಬರೋ ಕಾರ್ಯಕ್ರಮ. 

ದೂರವಾಣಿ ಭಾಗಕ್ಕೆ  ರಮೇಶ್ ಎನ್ನುವ ಪ್ರಚಾರಕರು ಕಹಳೆ  ಪತ್ರಿಕೆಯನ್ನು ತಂದುಕೊಟ್ಟರೆ ರಾತ್ರೋರಾತ್ರಿ  ಪೋಲೀಸರ ಕಣ್ಣಿಗೆ ಮಣ್ಣೆರಚಿ  ದೂರವಾಣಿನಗರದ [ITI Colony] ಎಲ್ಲಾ ಅಧಿಕಾರಿಗಳ ಮನೆಯ ಪೋಸ್ಟ್ ಡಬ್ಬಕ್ಕೆ ಹಾಕುವ ಕೆಲಸ  ನನ್ನದು. ಯಶಸ್ವಿಯಾಗಿ ಮಾಡಿದೆ. ನಿತ್ಯವೂ  ITI ಕಾರ್ಖಾನೆಯಲ್ಲಿ  ಕಹಳೆಯನ್ನು ಒಬ್ಬರಿಂದೊಬ್ಬರು ಪಡೆದು ಓದುತ್ತಿದ್ದರಂತೆ

ದೂರವಾಣಿ ಭಾಗದಲ್ಲೂ ಚಳುವಳಿ ದಿನ ಫಿಕ್ಸ್ ಆಯ್ತು.  ಅದ್ಯಾವುದೋ ಫ್ಯಾಕ್ಟರಿಯಲ್ಲಿ ಕೆಲಸಮಾಡುತ್ತಿದ್ದ ಸುಂದರೇಶ್ ನೇತೃತ್ವ [ಆಜಾನುಭಾಹು ವ್ಯಕ್ತಿ]  ಹಾಡುಗಾರ ರಾಮನಾಥ್ [  ನಂತರ RBI ನಲ್ಲಿ ಕೆಲಸ ಸಿಕ್ತೂ ಅಂತಾ ಕಾಣುತ್ತೆ]  ಮತ್ಯಾರೋ ಒಬ್ಬರು .ಹೆಸರು ನೆನಪಿಲ್ಲ .ಇವರಿಂದ  ಸರ್ಕಾರದ ವಿರುದ್ಧ ಚಳುವಳಿ. ಎಂತಾ ಸಮಯವನ್ನು  ಮತ್ತು ಜಾಗವನ್ನು ಆಯ್ದು ಕೊಂಡೆವು  ಎಂದರೆ ಹಳೆಯ ಮದ್ರಾಸ್ ರಸ್ತೆಯಲ್ಲಿ  ITI Main gate ಮುಂದೆ. ಮೊದಲ ಪಾಳಿ ಬಿಡುವ ಎರಡನೆಯ     ಪಾಳಿ ಒಳ ಹೋಗುವ ಸಮಯ ಮಧ್ಯಾಹ್ನ 2.00 ಗಂಟೆ. ಸಹಸ್ರಾರು ಕಾರ್ಮಿಕರು !!! ನಡುವಿನಿಂದ "ಭಾರತ ಮಾತಾಕೀ ಜೈ"   ಇಂದಿರಾಗಾಂಧಿಗೆ ಧಿಕ್ಕಾರ!! "  ಘೋಷ ಣೆ    ಕೂಗುತ್ತಾ  ಕೈಲಿದ್ದ  ಕರಪತ್ರಗಳನ್ನು ಮೇಲೆಸೆದರು ಸುಂದರೇಶ್. ಜನರೆಲ್ಲಾ ಆಯ್ದು ಕೊಂಡರು. ಪೋಲೀಸರು ಅವರು ಮೂರೂ ಜನರನ್ನು ಬಂಧಿಸಿದರು. ಘೋಷಣೇ ಕೂಗುತ್ತಲೇ ಇದ್ದರು.......

............ಆಗ ಇದ್ದಕ್ಕಿದ್ದಂತೆ ನೆನಪಾಯ್ತು "  ಗುಪ್ತ ಸಾಹಿತ್ಯವೆಲ್ಲಾ ಸುಂದರೇಶ್ ಮನೆಯಲ್ಲಿದೆ"...ಪೋಲೀಸರು ಅವರ ಮನೆ ರೈಡ್ ಮಾಡುವುದು ಗ್ಯಾರಂಟಿ!

ಸೈಕಲ್ ಹತ್ತಿದೆ. ನೇರವಾಗಿ ಅವರ ಮನೆ ತಲುಪಿದೆ. ಕೃಷ್ನರಾಜಪುರಮ್ ನಲ್ಲಿ   ಅನಂತರಾಮಯ್ಯ ಎಂಬ ಮಾಜಿ ಪ್ರಚಾರಕರ ಮನೆಯಲ್ಲಿ ಬಾಡಿಗೆಗೆ ಇದ್ದರು..ಎಂಬ ನೆನಪು. ಸಾಹಿತ್ಯವಿದ್ದ ಸೂಟ್ ಕೇಸ್ ತೆಗೆದು ಕೊಂಡು ಹೊರಗೆ ಹೊರಟೆ. ಮಹಡಿ ಮೆಟ್ಟಿಲು   ಇಳಿಯುತ್ತಿದ್ದೇನೆ. ನಾಲ್ಕು ಜಮ ಪೋಲೀಸರು  ಮೇಲೆ ಹತ್ತುತ್ತಿದ್ದಾರೆ. ನಾನು ಇಳಿದೆ. ಅವರು ಹತ್ತಿದರು. ಅದ್ಯಾವ ವೇಗದಲ್ಲಿ ಸೈಕಲ್ ತುಳಿದೆನೋ ನೇರವಾಗಿ  ITI Colony ಯಲ್ಲಿ ವೆಂಕಟರಾಮ್ ಮನೆಗೆ ಸುದ್ಧಿ ಮುಟ್ಟಿಸಿದೆ. ಅಲ್ಲಿ ಇಡುವಂತಿಲ್ಲ. ಪೋಲೀಸರು ಅಲ್ಲಿಂದ ವೆಂಕಟರಾಮ್ ಮನೆಗೆ ಬರುತ್ತಾರೆಂಬ ಅನುಮಾನವಿತ್ತು. ಅಲ್ಲಿಂದ ಮತ್ತೆ ಸೈಕಲ್ ತುಳಿದೆ ITI ಆಸ್ಪತ್ರೆ ಮುಂದೆ ಸೈಕಲ್ ನಿಂದ ಬಿದ್ದಿದ್ದು ಗೊತ್ತೇ ಇಲ್ಲ. ಪ್ರಜ್ಞೆ ಬಂದಾಗ ಪಕ್ಕದಲ್ಲಿ ಚಿಕ್ಕಮ್ಮ [ವೆಂಕಟರಾಮ್ ಚಿಕ್ಕಮ್ಮನನ್ನು ನಾನೂ ಚಿಕ್ಕಮ್ಮ ಅಂತಿದ್ದೆ. ಈಗಲೂ ಇದ್ದಾರೆ] ಇದ್ದರು. " ಏನೂ ಗಾಭರಿಯಾಗಬೇಡ ನೀನು ಬಿದ್ದಿದ್ದನ್ನು ಕೃಷ್ಣಪ್ಪ ನೋಡಿ ನಿನ್ನನ್ನು  ಆಸ್ಪತ್ರೆಗೆ ಸೇರಿಸಿ ಸೂಟಕೇಸನ್ನು ಸುರಕ್ಷಿತವಾಗಿ ಬೇರೆಡೆ ತಲುಪಿಸಿ  ಅವರು ಡ್ಯೂಟಿಗೆ ಹೋಗಿ ನನ್ನನ್ನು ಕಳಿಸಿದರು" ಎಂದರು

ಅಬ್ಭಾ ! ಪೋಲೀಸರಿಗೆ ಸಾಹಿತ್ಯ ಸಿಗಲಿಲ್ಲವಲ್ಲಾ!! ನಿಟ್ಟುಸಿರು ಬಿಟ್ಟೆ. 

ಆಸ್ಪತ್ರೆಯಲ್ಲಿ ಒಂದುವಾರವಿದ್ದೆ.  ನಾನು ಸಂಘದ ವಿಸ್ತಾರಕನಾಗಿದ್ದರಿಂದ ಚಳುವಳಿ ಮಾಡದೆ ಕಹಳೆ  ಹಂಚುವ ಕೆಲಸ ಮಾಡಬೇಕೆಂದು ನನಗೆ ಸೂಚನೆ ಇತ್ತು. ನನ್ನೊಡನೆ ಪ್ರಚಾರಕ್ ರಮೇಶ್ ಕೂಡ. ಗುಪ್ತವಾಗಿಯೇ ಸುತ್ತಾಟ. ಬೈಠಕ್ ಗಳು. 

ಅಂದಿನ ಹೋರಾಟಕ್ಕೆ   ಗುರೂಜಿಯವರೇ  ಪ್ರೇರಣೆ!  ಅಂತಾ ಪುಣ್ಯಾತ್ಮನ ಸ್ಮರಣೆ ಇಂದು!

Comments