ತಮದಿಂದ ಜಾಗೃತಿಯತ್ತ 

ತಮದಿಂದ ಜಾಗೃತಿಯತ್ತ 

ಈ ಬ್ರಹ್ಮಾಂಡವೆ ಕತ್ತಲು ಬೆಳಕಿನ ಕಿತ್ತಾಟದಲಿ ಜನಿಸಿದ ಸಮಷ್ಟಿ ಮೊತ್ತದ ಫಲಿತ. ಅದೆಂದೊ ಒಮ್ಮೆ ಮೊಟ್ಟ ಮೊದಲಿಗೆ ಬರಿ ಗಾಢಾಂಧಕಾರದ ವಿನಃ ಬೇರೇನೂ ಇರದ ನಿರ್ವಾಣದ ಸ್ಥಿತಿಯಿತ್ತಂತೆ. ಈ ವಿಶ್ವಶಕ್ತಿಯ ಸಮಸ್ತ ಸೃಷ್ಟಿಮೂಲವೆಲ್ಲ ಅದರೊಳಗಿನ ಅಂತರ್ಗತ ನಿಗೂಢತ್ವದ ಭಾಗಾಣುಗಳಾಗಿ ಕೇವಲ ತಮದ ಪ್ರತಿಫಲಿತ ರೂಪವೊಂದೊ ಇಣುಕುವ ಭೌತಿಕ ವಿಸ್ತಾರವಾಗಿ ಪ್ರಸ್ಥಾನಗೊಂಡಿತ್ತಂತೆ. ಅದೇನಾಯಿತೊ,ಹೇಗಾಯಿತೊ,ಏಕಾಯಿತೊ - ಇದ್ದಕ್ಕಿದ್ದಂತೆ ಒಮ್ಮೆಗೆ ಬೃಹತ್ ಸ್ಪೋಟವೊಂದು ಸಂಭವಿಸಿತಂತೆ ಈ ನಿಷಾದದ ಒಡಲಿನಾಂತರ್ಯದ ಅರಿಯಲಾಗದ ಪ್ರಜ್ಞೆಯಿಂದ. ಸ್ಫೋಟವೆಂದರೆ ಮೊದಲು ಬೆಳಕು ಮತ್ತದರ ಬೆನ್ನಲ್ಲೆ ಸದ್ದಿನ ಕಲರವ; ಎರಡನ್ನು ಅಟ್ಟಿಸಿಕೊಂಡು ಬರುವುದು ಅವೆರಡರ ಬೇರ್ಪಡೆಯಲ್ಲಿ ಬಿಡುಗಡೆಯಾಗುವ ಸ್ಪೋಟ ಶಕ್ತಿಯ ಫಲಿತ ತರಂಗಗಳು. ಈ ತರಂಗ ಭ್ರಮಣ ತನ್ನ ಸುತ್ತಲಿನ ಪರಿಧಿಯ ವಿಸ್ತಾರದಲ್ಲಿ ಸಾಗುತ್ತ ಉಂಟುಮಾಡಿದ ಕ್ಷೋಭೆ, ಪ್ರಲೋಭನೆಯ ಭೌತಿಕ ಫಲಿತವೆ ಈ ಗ್ರಹ ತಾರೆ ನಿಹಾರಿಕೆಗಳಿಂದೊಡಗೂಡಿದ ಪಂಚಭೂತಾ ರಚಿತ ಬ್ರಹ್ಮಾಂಡವೆನ್ನುತ್ತಾರೆ. ಈ ಬರಹದ ಉದ್ದೇಶ ನಿಜಕ್ಕೂ ಆ ಬ್ರಹ್ಮಾಂಡದುಗಮದ ಮೂಲ ತಲೆಬುಡ ಸೋಸುವುದಲ್ಲ. ಬದಲಿಗೆ, ಇಂದು ಭೌತಿಕ ಜಗದಲ್ಲಿ ನಾವೇನೆ ಕಾಣುತ್ತಿದ್ದರೂ ಅದರ ನೈಜ ಮೂಲೋತ್ಮೂಲ ಕೇವಲ ಕತ್ತಲು ಬೆಳಕಿನ ಸಮಷ್ಟಿ ಮೊತ್ತವೆ ಆಗಿತ್ತೆನ್ನುವುದನ್ನು ಎತ್ತಿ ತೋರಿಸಲು. 

ಹೀಗಾಗಿ ನಮಗರಿವಿದ್ದೊ ಇಲ್ಲದೆಯೂ ಈ ಕತ್ತಲು ಬೆಳಕು ನಮ್ಮ ವ್ಯಕ್ತಿಗತ ಜೀವನದಲ್ಲೂ ವಹಿಸುವ ಪಾತ್ರ ಅಗಾಧವಾದದ್ದು. ಜೀವನದ ಪ್ರತಿಯೊಂದು ಆಗು ಹೋಗುಗಳನ್ನು, ಸಂಗತ ಅಸಂಗತಗಳನ್ನು ಅದರ ಯಾವುದೆ ರೀತಿಯ ಬಾಹ್ಯ ಪ್ರಕಟ ಸ್ಥಿತಿಯಿಂದ ಪ್ರತ್ಯೇಕಿಸಿ ಬರಿ ಕತ್ತಲು ಬೆಳಕಿನಾಟಕ್ಕೆ ಸಮೀಕರಿಸಿಬಿಡಬಹುದು. ಆ ದೃಷ್ಟಿಯಿಂದಲೊ ಏನೊ ಬದುಕಿನಲ್ಲಿ ಎದುರಾಗುವ ಸುಖ ದುಃಖಗಳನ್ನು ಹಗಲು ರಾತ್ರಿಗಳಿಗೆ ಹೋಲಿಸಿದಾಗ ಸ್ವಲ್ಪವೂ ಅನುಮಾನಕ್ಕೆಡೆಯಿಲ್ಲದಂತೆ ಅದನ್ನು ಬಹುತೇಕ ಎಲ್ಲರೂ ಒಪ್ಪಿ ಸ್ವೀಕರಿಸುವುದು. ಮುಂದಿನ ಹಾದಿ ಕಾಣದೆ ತಡಕಾಡುವ ಸ್ಥಿತಿಯಲ್ಲಿದ್ದಾಗ ಕತ್ತಲಿಗೆ ಹೋಲಿಸುವಷ್ಟೆ ಸಹಜವಾಗಿ, ಆಶಾವಾದದ ಚಿಗುರೊಡೆಯುವಾಗ ಬೆಳಕಿನ ರೂಪಕವನ್ನು ಅಪ್ಪಿಕೊಳ್ಳುವುದು ಸಹಜವಾಗಿ ಕಾಣುವ ಅಂಶ. ಒಟ್ಟಾರೆ ಕತ್ತಲು ಬೆಳಕಿನ ಸಮಗ್ರ ಸಮಷ್ಟಿತ ರೂಪವೆ ಈ ಜೀವನಸಾರಾಂಶವನ್ನು ಪ್ರತಿಬಿಂಬಿಸುವ ಪ್ರತೀಕ ಎನ್ನುವುದರಲ್ಲಿ ಎರಡು ಮಾತಿರಲಾರದು.

ಆದರೆ ನಿಮಿತ್ತ ಮಾತ್ರ ಬದುಕಿನ ಪ್ರಸ್ತಾವನೆಯ ರೂವಾರಿಗಳಾದ ನಾವು ಹೆಜ್ಜೆ ಹೆಜ್ಜೆಗೂ ಈ ಕತ್ತಲು ಬೆಳಕಿನ ದ್ವಂದ್ವದಲ್ಲಿ ಸಿಲುಕಿ ತೊಳಲಾಡುವುದು ಕೂಡ ಅಷ್ಟೆ ಸತ್ಯ. ಈ ಎರಡು ದ್ವೈತ ದೈತ್ಯಗಳ ನಡುವಿನ ತಿಕ್ಕಾಟ, ತಾಕಲಾಟದಲ್ಲಿ ಎರಡೂ ಸಂಗಮಿಸಿದ ಅದ್ವೈತ ಸ್ಥಿತಿಯನ್ನು ತಲುಪುವುದು ಅಷ್ಟು ಸುಲಭವಲ್ಲ. ಕೆಲವೊಮ್ಮೆ ತಾಮಸ ಭೂತ ಗೆದ್ದು ಬರಿ ತಮ ತುಂಬಿದ ಅದ್ವೈತದಲ್ಲಿ ಸಿಲುಕಿಸಿ ದಾನವತ್ವದ, ದುಷ್ಟತನದ ಸಂತಾನವನ್ನು ಸಲಹುವ, ಪೋಷಿಸುವ ಪೀಡನೆಯಾಗಿಬಿಡಬಹುದು. ಮತ್ತೆ ಕೆಲವೊಮ್ಮೆ ಬರಿಯ ಬೆಳಕೆ ತುಂಬಿ ಸ್ಪುರಿಸುವ ಅದ್ವೈತ ಜಗದಲ್ಲಿ ಇಳಿಸಿ ದೈವತ್ವದ ಪೀಯೂಷವನ್ನೂಡಿಸುವ ಕ್ಷೀರಧಾರೆಯಾಗಲೂ ಬಿಡಬಹುದು. ಆದರೆ ಬೆಳಕು ಮತ್ತು ಕತ್ತಲು - ಇವೆರಡರ ಶಕ್ತಿಯೂ ಅಗಾಧ - ಕತ್ತಲು ಬೆಳಕನ್ನು ನುಂಗುವಷ್ಟೆ ಸಹಜವಾಗಿ, ಬೆಳಕು ಕತ್ತಲನ್ನು ತೊಡೆದು ತೊಳೆದು ಹಾಕಿಬಿಡಬಹುದು. ವಿಪರ್ಯಾಸವೆಂದರೆ ಬೆಳಕು ಕತ್ತಲೊಡನೆ ತನ್ನಂತಾನೆ ಹೋರಾಡಲು ಸಾಧ್ಯವಾಗದು.. ಯಾಕೆಂದರೆ ಬೆಳಕು ಉಂಟಾಗಲೂ ಬೇರೊಂದು ಬೆಳಕು ಸೂಸುವ ಮೂಲದ ಅಗತ್ಯವಿರುತ್ತದೆ - ಸೂರ್ಯನ ಹಾಗೆ. ಕತ್ತಲೆಗೆ ಆ ತೊಡಕಿಲ್ಲ - ಬೆಳಕಿನ ಶಕ್ತಿ ಕ್ಷೀಣಿಸಿತೆಂದರೆ ಸಾಕು ಅಲ್ಲೇ ಹಾಸಿಕೊಂಡು ಬಿದ್ದಿರುವ ಕತ್ತಲು ತನ್ನಂತಾನೆ ಅನಾವರಣಗೊಂಡುಬಿಡುತ್ತದೆ. ಇನ್ನೂ ಸಾಂಕೇತಿಕವಾಗಿ ಹೇಳುವುದಾದರೆ, ಕತ್ತಲು ಎಲ್ಲೆಡೆ ಯಾವಾಗಲೂ ತುಂಬಿಕೊಂಡೆ ಇರುತ್ತದೆ. ಅಲ್ಲೊಂದು ಬೆಳಕಿನ ಮೂಲ ಅರಳಿದರೆ, ಕಾಂತಿಯ ಬೀಜ ಬಿತ್ತಿದರೆ - ಅದು ಉರಿಯುವ ತನಕ ಬೆಳಕಿನ ರಾಜ್ಯ. ಆ ಉರಿ ಆರಿದರೆ ಮತ್ತೆ ಕತ್ತಲಿನದೆ ಸಾಮ್ರಾಜ್ಯ. ಬಹುಶಃ ಕತ್ತಲೊಡನೆಯ ಈ ಹೋರಾಟಕ್ಕೆಂದೆ ಏನೊ ಅಗಣಿತ ತಾರಾ ಸಮೂಹಗಳು ಈ ಬ್ರಹ್ಮಾಂಡದುದ್ದಗಲಕ್ಕು ಹಾಸುಹೊಕ್ಕಾಗಿ ಹರವಿಕೊಂಡಿರುವುದು. ಆದರೂ ಕತ್ತಲ ಬಯಲನ್ನು ಪೂರ್ತಿ ಸ್ಥಳಾಂತರಿಸಲಾಗದಷ್ಟು ವಿಸ್ತಾರ ವೈಶಾಲ್ಯ - ವ್ಯೋಮದ ತಮ ಸಾಮ್ರಾಜ್ಯದ್ದು. ಇನ್ನು ಬೆಳಕಿದ್ದೆಡೆಯೆಲ್ಲವು ಅದು ಕತ್ತಲನ್ನು ಪೂರ್ತಿ ಗೆದ್ದುಬಿಟ್ಟಿತೆಂದು ಹೇಳಬರುವುದಿಲ್ಲ. ಬೆಳಕಿನ ಬೆನ್ನಲ್ಲೆ ನೆರಳಿನ ರೂಪಲ್ಲಿ ಹಿಂಬಾಲಿಸಿಕೊಂಡೆ ಬರುತ್ತಿರುತ್ತದೆ ಕತ್ತಲ ಭೂತ. ಹೀಗಾಗಿ ಸದಾ ಬೆಳಗಿಕೊಂಡಿರುವ ನಿರಂತರ ಯತ್ನ ಮಾಡದಿದ್ದರೆ ಬೆಳಕಿಗೆ ಉಳಿಗಾಲವಿಲ್ಲ.

ಇನ್ನು ಹುಲು ಮನುಜರಾದ ನಮ್ಮ ಆಂತರ್ಯದಲ್ಲಿ ಸದಾ ಈ ಕತ್ತಲು ಬೆಳಕಿನ ಜಿಜ್ಞಾಸೆ ನಡೆಯುತ್ತಲೆ ಇರುತ್ತದೆ - ಸರಿ ತಪ್ಪುಗಳ ರೂಪದಲ್ಲೊ, ನೈತಿಕಾನೈತಿಕತೆಗಳ ಹೋರಾಟದಲ್ಲೊ, ಸುಳ್ಳು ಸತ್ಯಗಳ ನಡುವಿನ ದ್ವಂದ್ವದಲ್ಲೊ, ಸ್ವಾರ್ಥ ನಿಸ್ವಾರ್ಥಗಳ ಹುನ್ನಾರದಲ್ಲೊ. ಅಲ್ಲೆಲ್ಲ ಗೆಲ್ಲುವುದು ಕತ್ತಲೊ ಬೆಳಕೊ ಎನ್ನುವುದರ ಮೇಲೆ ವ್ಯಕ್ತಿಯ ವ್ಯಕ್ತಿತ್ವ ಸಜ್ಜನಿಕೆಯದೊ ಅಥವಾ ದುರ್ಜನತೆಯದೊ ಎಂದು ನಿರ್ಧಾರಿತವಾಗುತ್ತದೆ. ಕತ್ತಲು ಗೆದ್ದ ಸಂದರ್ಭಗಳಲ್ಲಿ ದಾನವ ಗುಣ ಪ್ರಕಾಶಕ್ಕೆ ಬಂದರೆ ಬೆಳಕು ಗೆದ್ದರೆ ಮಾನವ ಗುಣಕ್ಕೆ ಜಾಗೃತಿಯ ಪರುಷವ್ಹಿಡಿದಂತೆ ಸಕಾರಾತ್ಮಕತೆ ತಾಂಡವವಾಡುತ್ತದೆ. ಬಲಶಾಲಿ, ಸರ್ವವ್ಯಾಪಿ ಕತ್ತಲನನ್ನು ಜಯಿಸಬೇಕೆಂದರೆ ಸದಾ ಬೆಳಕಿನ ದೀಪ ಹಚ್ಚುತ್ತಲೇ ಇರಬೇಕು, ಬೀಜ ಬಿತ್ತುತ್ತಲೇ ಇರಬೇಕು. ಸಾಧ್ಯವಾಗುವುದಾದರೆ ಕತ್ತಲಿನ ಬೀಜಾಣುವಿನೊಳಗೆ ಹೊಕ್ಕು ಅದರಲ್ಲೇ ಬೆಳಕಿನ ಬೀಜ ನೆಟ್ಟು ಬಂದುಬಿಡಬೇಕು. ಆಗಲೆ ಕತ್ತಲ ಮೇಲೆ ಬೆಳಕು ಜಯಿಸಲು ಸಾಧ್ಯ; ಜಾಗೃತಿ ನಿರಂತರವಾಗಿ, ಎಲ್ಲೆಡೆ ಅಂಧಕಾರವಿರುವಷ್ಟೆ ಸಹಜವಾಗಿ ಜ್ಞಾನದ ಬೆಳಕು ಪಸರಿಸಲು ಸಾಧ್ಯವಾಗುವುದು. 

ಈ ಕತ್ತಲು ಬೆಳಕಿನ ದ್ವಂದ್ವಕ್ಕೆ ಸಂವಾದಿಯಾಗಿ ಇದೊಂದು ಪುಟ್ಟ ಕವನದಾಶಯ - ಸಹ ಆಸ್ವಾದನೆಗೆ :-)

ತಮದಿಂದ ಜಾಗೃತಿಯತ್ತ 
___________________

ತಮದಿಂದುತ್ತಮದತ್ತ ನಡೆಸು ಮುಗ್ದತೆ
ಬರಿ ಬೆಳಕೆ ಜಾಗೃತಿಯ ಅವತಾರ ತಾಳುತೆ
ತೊಳೆದುಬಿಡಲಿ ನಿರ್ಜಲ ನಿರ್ವಾತದೆ ಸುತ್ತ
ತಮದ ಕಣಗಳಲಿ ತುಂಬಿದ ಶಕ್ತಿಯ ಮೊತ್ತ ||

ಅಣುವಿನೊಳಗ್ಹೊಕ್ಕು ಮೂಲರೂಪದ ಸೊಕ್ಕು
ಮೂಲೋತ್ಪಾಟನೆಗೈದು ಬಿತ್ತುತಲ್ಲಿ ಬೆಳಕು
ಬಿತ್ತಿದ್ದು ತಾನೆ ಬೆಳೆದು ಹೆಮ್ಮರವಾಗೆ ತೃಪ್ತಿ
ಕಿತ್ತೊಗೆದ ಕತ್ತಲ ಕಣಗಳಿಂದಾಗಿ ಜೀವನ್ಮುಕ್ತಿ ||

ಹೆಜ್ಜೆಜ್ಜೆಗು ಕಂಗೆಡಿಸಿ ವಿಚಾರಧಾರೆಗೆ ದುಡಿಸಿ
ಸರಿತಪ್ಪಿನ ದಾರಿಯಲನುಮಾನದ ಬೇರಿಡಿಸಿ
ದಿಕ್ಕು ತಪ್ಪಿಸೊ ಗಾಢಂಧಾಕಾರದ ಕೂಟ ತಂತ್ರ
ಶುದ್ಧ ನೆಲ ಹಸನಾಗಿಸಿ ಕಿತ್ತೆಸೆವ ಮೂಲ ಮಂತ್ರ | |

ನೆಲವೆ ಕಾಣದ ತಂತ್ರ, ಬರಿ ಕಲ್ಲು ಮುಳ್ಳ ನಿಮಂತ್ರ
ಜಾಲ ಹಬ್ಬಿಸಿ ಕಾಡುವುದು, ದುಷ್ಟಶಕ್ತಿಗಳ ಕುತಂತ್ರ
ಕೈಯಲೊಂದಿರಲಿ ಕೊಡಲಿ, ಬೆಳಕಿನ ಕಿರಣವೆ ಕೂಲಿ
ಸವರುತ್ತ ನಡೆದಂತೆ ಕಲ್ಲು ಕರಗಿ, ನೆಲ ಕಾಣಿಸಿ ಖಾಲಿ ||

ತಮದ ನಿಗೂಢ ಶಕ್ತಿಯೆ, ನೆರಳು ಚಾಚುವ ಪಿಶಾಚಿ
ಬೆಳಕಿನ ಹಂಗಿಲ್ಲದೆ ಬದುಕಿರದು, ಪರತಂತ್ರ ವಿಶಾಚಿ
ಬೆಳಕೆ ಬೆಳಕಿದ್ದರೆ ಎಲ್ಲೆಡೆ, ಜಾಗೃತಿ ತಮಟೆಯ ಬಲ
ಬೆಳಕ ರಾಜ್ಯದೆ ಕತ್ತಲೆ ಶವ, ಜಾಗೃತಿಯೆ ದುಡಿವ ಕಾಲ ||

---------------------------------------------------------
ನಾಗೇಶ ಮೈಸೂರು, ಸಿಂಗಪುರ
----------------------------------------------------------
 

Comments

Submitted by naveengkn Thu, 06/12/2014 - 10:28

ನಾಗೇಶರಿಗೆ ನಮಸ್ತೆ, ಬೆಳಕಿನೊಳಗಿನ‌ ಕತ್ತಲೇ ಆಟ, ಕಲ್ಪನೆಯ‌ ಸವಾರಿ ಛೆನ್ನಾಗಿದೆ, ಧನ್ಯವಾದಗಳು

Submitted by nageshamysore Thu, 06/12/2014 - 18:13

In reply to by naveengkn

ನವೀನರೆ ಧನ್ಯವಾದಗಳು. ಸಮಸ್ತವನ್ನು ಕಪಿಮುಷ್ಟಿಯಲ್ಲಿ ಮುಚ್ಚಿಟ್ಟುಕೊಂಡ ಕತ್ತಲೆಯ ವಿಶ್ವ(ಕು)ರೂಪ, ಜ್ಞಾನರೂಪಿ ಬೆಳಕನ್ನು ನಿಯಂತ್ರಿಸಬಲ್ಲ ಪರಿಯ ಅದ್ಭುತ ಪದಗಳಾದ ಬಗೆ ಹೀಗೆ :-)

Submitted by nageshamysore Sat, 06/21/2014 - 06:52

In reply to by kavinagaraj

ಕವಿಗಳೆ ನಮಸ್ಕಾರ ಹಾಗು ಧನ್ಯವಾದಗಳು. ಕತ್ತಲೆಯ ಕುರಿತಾದ ಸೊಗಸಾದ ವಿವರಣೆ ಮತ್ತು ಸುತರ್ಕ! ನಾನಿದನ್ನು ಬರೆದಾಗ ಅಂಧಕಾಸುರನ ಅಬ್ಬರದಲ್ಲಿ ಸದಾ ಹೆಣಗುವ ಪಾಡು ಬೆಳಕಿನದಾಯ್ತಲ್ಲ ಎನ್ನುವ ಖೇದ ಭಾವವಿತ್ತು. ನಿಮ್ಮ ಮಾತಿಂದ ಕತ್ತಲೆ ಸಹ ಬೆಳಕಿನ ಬೀಜವೆ ಎನ್ನುವ ಅರ್ಥವೂ ಸ್ಪುರಿಸಿದಂತಾಯ್ತು. ಅದೆ ರೀತಿ ಬೆಳಕೆನ್ನುವುದು ತೀರಾ ತೀರಾ ಕಡಿಮೆ ಕತ್ತಲು ಎನ್ನುವ ಸಂವಾದಿ ಅರ್ಥ ಅವೆರಡು ಒಂದೆ ರೂಪದ ಎರಡು ಗುಣ ಎನ್ನುವ ಅದ್ವೈತಕ್ಕೂ ದಾರಿ ಮಾಡಿಕೊಡುತ್ತದೆ!