ಅಂದ್ರೇ ... ಕೆಲಸ ಮಾಡಬೇಕಾ?
ದೊಡ್ಡ ಸರಕಾರಿ ಕಾಂಪೌಂಡು. ಶೆಡ್’ಗಳಂತಹ ಆಫೀಸುಗಳು. ಟಾರು ಕಂಡು ಎಷ್ಟೋ ವರ್ಷಗಳಾದ ಒಳ ರಸ್ತೆ. ಎಲ್ಲೆಂದರಲ್ಲಿ ನಿಂತಿದ್ದ ಸರಕಾರಿ ಜೀಪುಗಳು, ಕಾರುಗಳು. ಒಂದು ಡಿಪಾರ್ಟ್ಮೆಂಟ್’ನಿಂದ ಇನ್ನೊಂದೆಡೆ ಕಂದು ಬಣ್ಣದ ಫೈಲು ಹಿಡಿದು ಓಡಾಡುವ ಕೆಲವೇ ಕೆಲವರು. ಅಲ್ಲಲ್ಲೇ ಚರ್ಚೆಗಳಲ್ಲಿ ನಿರತರಾದ ಮೂರು ನಾಲ್ಕು ಜನರ ಗುಂಪುಗಳೇ ಅಧಿಕ. ಅವರುಗಳು ಸರಕಾರಿ ನೌಕರರೋ ಅಥವಾ ತಮ್ಮ ಕೆಲಸಕ್ಕಾಗಿ ಕಛೇರಿಗೆ ಬಂದವರೋ ಅರಿತವಾರು? ಹಲವರು ಧೂಮಪಾನಿಗಳಾದರೆ ಮತ್ತಷ್ಟು ಜನ ಕಾಫಿ/ಚಹಾ’ಪಾನಿಗಳು. ಒಳಾಂಗಣದಲ್ಲೇ ದೊಡ್ಡದೊಂದು ಮರ. ಅದರ ಕೆಳಗೆ ಕಾಫಿ-ಟೀ ಅಂಗಡಿ ಇಟ್ಟವನ ಬಳಿಯಂತೂ ಜನಸ್ಥೋಮ. ಅವನಿಗೆ ಬಿಡುವಿಲ್ಲದಷ್ಟು ಕೆಲಸ. ಅವನಷ್ಟು ಕೆಲಸ ಮಾಡುವವರು ಇಡೀ ಕಾಂಪೌಂಡ್’ನಲ್ಲೇ ಇಲ್ಲ. ಮೊನ್ನೆ ರಿಟೈರ್ ಆದ ಚೀಫ್ ಇಂಜಿನಿಯರ್ ಹೆಂಡತಿ ತಮ್ಮನ ಅಂಗಡಿ ಅದು. ಬೋರ್ಡ್ ಇಲ್ಲ, ಜಾಗಕ್ಕೆ ಬಾಡಿಗೆ ಇಲ್ಲ, ಪರವಾನಗಿ ಪತ್ರ ಮೊದಲೇ ಇಲ್ಲ. ಅವನ ತಿಂಗಳ ಕಮಾಯಿ ಅಸಿಸ್ಟೆಂಟ್ ಇಂಜಿನಿಯರ್’ಗಿಂತ ಹೆಚ್ಚು. ವ್ಯತ್ಯಾಸ ಅಂದರೆ ಇವನಿಗೆ ಗಿಂಬಳ ಇಲ್ಲ, ಮರ್ಯಾದೆ ಇಲ್ಲ ಅನ್ನೋದಷ್ಟೇ!
ಅಂಥದೇ ಒಂದು ಶೆಡ್’ನಲ್ಲಿ ಒಂದು ಬದಿಯಲ್ಲಿ ದಿನಂಪ್ರತಿ ಬರುವ ಅಂಚೆ ವಿಲೇವಾರಿ ವಿಭಾಗ ಒಂದೆಡೆಯಾದರೆ ಮತ್ತೊಂದು ಕಡೆ ಹತ್ತು ಜನ ಟೈಪಿಣಿ’ಗಳು ಕೂರೋ ವಿಭಾಗದ ಕೋಣೆ. ಅಂಚೆಯವ ಬಂದ ಕೂಡಲೆ ಯಾವುದಕ್ಕೆ ಸಹಿ ಹಾಕಬೇಕೋ ಹಾಕಿ, ಬಂದ ಪತ್ರಗಳನ್ನು ಕಂಪ್ಯೂಟರ್’ನಲ್ಲಿ ಲಾಗ್ ಮಾಡಿ, ಲಾಗ್ ಅನ್ನು ಪ್ರಿಂಟ್ ಮಾಡಿ ಕಡತಕ್ಕೆ ಸೇರಿಸಿ, ಅಂಚೆಯನ್ನು ಕೊಡಬೇಕಾದವರಿಗೆ ಜವಾನನ ಕೈಲಿ ಕಳಿಸುವುದು ಒಂದು ಕೆಲಸವಾದರೆ ಮತ್ತೊಂದು ಘನ ಕೆಲಸವೆಂದರೆ ಆಯಾ ಕಛೇರಿಗಳಿಂದ ಹೊರಗೆ ಹೋಗಬೇಕಾದ ಪತ್ರಗಳನ್ನು ಲಾಗ್ ಮಾಡಿ ಖುದ್ದಾಗಿ ಅಂಚೆ ಕಛೇರಿಗೆ ಹೋಗಿ ಅಂಚೆ ಹಾಕಿ ರಸೀತಿ ಪಡೆದು ಅದನ್ನು ಕಡತಕ್ಕೆ ಸೇರಿಸುವುದು. ಕಂಪ್ಯೂಟರ್’ನಿಂದ ಆಗಬೇಕಾದ ಕೆಲಸ ಕಡಿಮೆ. ದೈಹಿಕ ಕೆಲಸ ಜಾಸ್ತಿ. ಹಲವಾರು ವರ್ಷಗಳಿಂದ ನಿಷ್ಠೆಯಿಂದ ಇದೇ ಕೆಲಸ ಮಾಡಿಕೊಂಡು ಬಂದಿದ್ದಾನೆ ಆನಂದರಾಯ. ನಿಷ್ಠೆಯಿಂದ ಮಾಡಿದರಿಂದಲೇ ಪ್ರಮೋಷನ್ ಎಂಬುವುದು ಅವನ ಪಾಲಿಗೆ ಗಗನಕುಸುಮ.
ಕಛೇರಿಯ ಗೋಡೆಗಳ ಮೇಲೆ ಏಳಾಳುದ್ದ ಇಲ್ಲಣಗಳು, ಎಲ್ಲೆಂದರಲ್ಲಿ ಕಟ್ಟಿದ ಜೇಡರಬಲೆಗಳು, ಎಂದೋ ಸತ್ತು ಶಿಥಿಲಗೊಂಡ ಹಲ್ಲಿಯ ಅಸ್ತಿಪಂಜರ, ಕಡತಗಳ ಮೇಲಿನ ಧೂಳು, ಸ್ಟೀಲ್ ಕಪಾಟುಗಳಲ್ಲಿ ಹೇಗೆಂದರೆ ಹಾಗೆ ಜೋಡಿಸಿದ ಫೈಲುಗಳು, ಮುರಿದ ಗಾಜಿನ ಕಿಟಕಿ, ಗಾಜು ಎಂದು ಪ್ರಮಾಣ ಮಾಡಿದರೂ ನಂಬಲಾಗದ ಗಾಜಿನ ಕಿಟಕಿ ಹೀಗೆ. ಇದು ಒಂದು ನೋಟ.
ಇನ್ನು ಮನುಷ್ಯರ ಬಗ್ಗೆ ಹೇಳೋದಾದರೆ ತಲೆ ಕೆಡಿಸಿಕೊಂಡ ಮುಖಗಳು, ಮುಖ ಕೆಡಿಸಿಕೊಂಡು ತಲೆಗಳು, ಎಣ್ಣೆ ಕಾಣದ್ ತಲೆಗೂದಲುಗಳು, ತಲೆಗೂದಲು ಕಾಣದ್ ಮಿಂಚೋ ಮಸ್ತಕಗಳು, ಸಿಸ್ತಾಗಿ ಕತ್ತರಿಸಿರೋ ತಲೆಗೂದಲ ತಲೆಗಳು, ಕತ್ತರಿ ಕಾಣದ್ ತಲೆಗೂದಲ ಮುಖಗಳು, ಬೆಳಿಗ್ಗೆ ಪೂಜೆ ಮಾಡಿ ಬಂದ ಲವಲವಿಕೆಯ ಲಾವಣ್ಯವತಿಯರು, ಮತ್ತಿನ್ಯಾವುದೋ ತಾಲೂಕಿನಿಂದ ಬೆಳಗಿನ ಜಾವ ಟ್ರೈನ್ ಹಿಡಿದು ಕಛೇರಿಗೆ ಬಂದ ನಿದ್ದೆಮೊಗಗಳು, ನಿಟ್ಟಿಂಗ್ ನಿಪುಣೆಯರು, ಕಾದಂಬರಿ ಕನ್ಯಾಮಣಿಗಳು, ಪೇಪರ್ ಪದ್ಮನಾಭರು, ಗಾಸಿಪ್ ಗೌರಮ್ಮಂದಿರು, ರಾಜಕಾರಣ ರಾಜಶೇಖರರು ಹೀಗೆ ...
ಅಂತಹ ದಿನಗಳಲ್ಲಿ ಒಂದಾದ ಇಂದು, ಹಿಂದಿನ ದಿನದ ಧಾರಾವಾಹಿಗಳ ಬಗೆಗಿನ ಮಾತು, ಅವರಿವರ ವಿಚಾರಗಳ ಬಗ್ಗೆ ಗಾಸಿಪ್ಪುಗಳನ್ನು ಬದಿಗೆ ಹಾಕಿದ ಮಹಾ ವಿಷಯ ಅಂದರೆ ಮೋದಿ ಅಲೆ ! ಎಲ್ಲೆಲ್ಲೂ ಪ್ರಧಾನಮಂತ್ರಿಯ ಬಗ್ಗೆಯೇ ಮಾತು. "ಮೂರನೇ ಮಾಡಿಗೆ ವಿಸಿಟ್ ಮಾಡ್ತೀನಿ ಅಂತ ಹೇಳಿ ಇದ್ದಕ್ಕಿದ್ದಂತೆ ಆರನೇ ಮಾಡಿ ಹೋಗಿ, ಅಲ್ಲಿರೋವ್ರಿಗೆ ಬೆಂಡೆತ್ತಿದ್ರಂತೆ?", "ಕಛೇರಿಯಲ್ಲಿ ಸಿಗರೇಟ್ ತುಂಡು ಸಿಕ್ತು ಅಂತ ನೋಡಿದ್ಯಾ ಏನಾಯ್ತು?", "ನೋಡಿದ್ಯೇನ್ಲಾ ಅವರ ನೂರು ದಿನದ್ ಅಜೆಂಡಾ?" ಹೀಗೆ ಥರಥರಾವರಿ ಮಾತುಗಳು ...
ಇನ್ನು ಕೆಲವರಂತೂ ಹಳೇ ವಿಚಾರಗಳ ಬಿಟ್ಟು ಹೊರಗೇ ಬರೋದಿಲ್ಲ. "ನಮ್ ಕಾಲದಲ್ಲಿ ..." ಅಂತ ಶುರು ಹಚ್ಚಿಕೊಂಡರೆ ಕೆಲವರು ಎದ್ದು ಆಚೆಗೆ ಹೋದರೂ ಗೊತ್ತಾಗೋಲ್ಲ. ಅಂತಹ ಪೀಳಿಗೆಯನ್ನು ಹೋಲುವ ಹಲವು ಮಂದಿ, ಫಲಿತಾಂಶ ಬಂದು ಇಷ್ಟು ದಿನವಾದರೂ ಇನ್ನೂ ಚರ್ಚೆಗಳು ನೆಡೆದೇ ಇವೆ. "ಮೆಟ್ಟಿಲಿಗೆ ನಮಸ್ಕಾರ ಮಾಡಿಕೊಂಡು ಒಳಗೆ ಹೋದ್ರಲ್ಲ? ಏನ್ ದೊಡ್ಡ ಮನುಷ್ಯ ಗುರೂ .. ವಾಹ್" ಅಂದಾಗ ಒಬ್ಬ, "ಮೆಟ್ ಹಾಕ್ಕೊಂಡ್ ಮೆಟ್ಟಿಲಿಗೆ ನಮಸ್ಕಾರ ಮಾಡೋದು ಸರಿಯಾ?" ಎಂದು ಕೊಂಕು ನುಡಿದ ಮತ್ತೊಬ್ಬ. ಆಗಲೇ ಶುರುವಾಯ್ತು "ಲೇಯ್! ಮೆಟ್ ಬಿಚ್ಚಿ ನಮ್ಸ್ಕಾರ ಮಾಡೋದ್ರೊಳ್ಗೆ ನಿನ್ ಪಾರ್ಟಿಯವರು ಮೆಟ್ ಎತ್ಕೊಂಡ್ ಹೋಯ್ತೀರ ... ನನ್ ಗೊತ್ತಿಲ್ವಾ? ಗಮ್ಮನೆ ಕೂತ್ಕೊಳ್ಳೋ !" ಮುಂದೆ ನೆಡೆದ ಮಾತೆಲ್ಲ ಅವಾಚ್ಯ. ಮಾತಿನ ಜೊತೆ ಕೈ ಕೂಡ ಮಾತಾಡಿ ಸ್ನೇಹಿತರು ವೈರಿಗಳಾದರು.
ಇತ್ತ ಅಂಚೆ ವಿಭಾಗದಲ್ಲಿ, ಪೇಪರ್ ಓದೋದನ್ನ ಮುಗಿಸಿ, ಮೊದಲ ಪುಟದ ಒಂದು ಕೊನೆಯನ್ನು ಹರಿದು ಸುರುಳಿ ಮಾಡಿ ಕಿವಿಗೆ ಹಾಕಿಕೊಂಡು ಹೊರಳಿಸುತ್ತ ನುಡಿದ ಟೈಪಿಸ್ಟ್’ಗಳ ಸೂಪರ್ವೈಸರ್ ಮುನಿಸ್ವಾಮಿ "ನಮ್ ಕರ್ನಾಟಕದ್ ಹಣೇ ಬರಹ ಇಷ್ಟೇ ಆಯ್ತು ನೋಡಿ. ಅಲ್ಲೊಂದು ಪಾರ್ಟಿ ಆದರೆ ಇಲ್ಲಿ ಬೇರೆ ಪಾರ್ಟಿ". ಆನಂದರಾಯ ನುಡಿದ "ಹೌದು, ಜನ ವೋಟ್ ಹಾಕೋಕ್ಕೆ ನಾಚಿಕೊಂಡ್ರೆ ಇನ್ನೇನಾಗುತ್ತೆ? ನೀವು ಹಾಕಿದ್ರೋ ವೋಟು?".... ಚುನಾವಣೆ ಸಮಯದಲ್ಲಿ ಹೇಗಿದ್ರೂ ರಜ ಅಂತ ಮುನಿಸ್ವಾಮಿ ಸಂಸಾರ ಸಮೇತ ಐದು ದಿನ ನಾಗರಹೊಳೆಯಲ್ಲಿ ಕ್ಯಾಂಪ್ ಹಾಕಿದ್ದ. ಆನಂದರಾಯನಿಗೆ ಈ ವಿಷಯ ಗೊತ್ತಿದ್ದರಿಂದಲೇ ಸುಮ್ಮನೆ ಕೇಳಿದ್ದ. ಮುನಿಸ್ವಾಮಿಯಿಂದ ಉತ್ತರ ಬರಲಿಲ್ಲ. ಅದೇ ಬೇಕಿತ್ತು ಇವನಿಗೂ. ಕೆಲಸದಲ್ಲಿ ಅದರಲ್ಲೂ ಸರಕಾರಿ ಕೆಲಸದಲ್ಲಿ ರಾಜಕೀಯ ಮಾತನಾಡುವುದು ತಪ್ಪು ಅನ್ನೋದಕ್ಕಿಂತ ಅಪಾಯ ಅನ್ನೋದನ್ನ ಆನಂದರಾಯ ಬಲ್ಲ.
ಆದರೆ ಮುನಿಸ್ವಾಮಿ ಬಿಡಬೇಕಲ್ಲ? ಮತ್ತೆ ಮಾತಿಗೆಳೆದ ...
"ನನಗೂ ತುಮುಕೂರಿಂದ ಬೆಂಗಳೂರಿಗೆ ಓಡಾಡಿ ಓಡಾಡಿ ಸಾಕಾಗಿದೆ. ಮೋದಿ ಸರಕಾರ ನನ್ ಪ್ರಾಬ್ಲಮ್ಮೂ ಸರಿ ಹೋಗುತ್ತೆ". ಆನಂದರಾಯ ನಕ್ಕ! ಬಾಯಿ ಮಾತಿಗೆ ಮುನಿಸ್ವಾಮಿ ಈ ಮಾತು ಹೇಳ್ತಿರೋದು ಅನ್ನೋದನ್ನ ಇವನು ಚೆನ್ನಾಗಿ ಬಲ್ಲ. ಟ್ರೈನ್ ಹಿಡೀಬೇಕು, ಬಸ್ ಹಿಡೀಬೇಕು ಅಂತೆಲ್ಲ ನೆವ ಒಡ್ಡಿ ವಾರಕ್ಕೆ ನಾಲ್ಕು ದಿನ ಮೂರೂವರೆಗೇ ಜಾಗ ಖಾಲಿ ಮಾಡುತ್ತಿದ್ದ ಮುನಿಸ್ವಾಮಿ. ಮತ್ತೆ ಮುನಿಸ್ವಾಮಿಯ ವರಾತ ಮುಂದುವರೆಯಿತು "ರಾತ್ರಿ ಆದ್ರೆ ಕರೆಂಟು ಪುರ್ ಅಂತ ಹೋಗುತ್ತೆ. ಒಂದು ಕಡೆ ಸೊಳ್ಳೇ ಕಾಟ ಇನ್ನೊಂದ್ ಕಡೆ ಸೆಖೆ. ಥತ್! ಏನ್ ಸರಕಾರಾನೋ ಏನೋ? ನಮ್ ಮನೆ ಪಕ್ಕದಾಗಿರೋ ಮೋರಿ ಸರಿಯಾದ್ರೆ ಸೊಳ್ಳೆಗಳೆಲ್ಲ ಮಾಯ ಆಗುತ್ತೆ. ಹೊಸ ಸರಕಾರ ಕುದುರಿಕೊಳ್ಳಲಿ, ಎಲ್ಲ ಹಾದಿಗೆ ಬರುತ್ತೆ"
ಮೋದಿ ಸರಕಾರದ ಜನ ಮನೆ ಮನೆಗೂ ಬಂದು ಸಮಸ್ಯೆಗಳನ್ನ ಬಗೆಹರಿಸ್ತಾರೆ ಅಂತ ಇವರಿಗೆ ಹೇಳಿದವರು ಯಾರು? ತಮ್ಮ ಕೈಲಾಗೋ ಕೆಲ್ಸ ಹೊಸ ಸರಕಾರದ ಮೇಲೆ ಯಾಕೆ ಹೇರುತ್ತಿದ್ದಾರೆ? ಇಲ್ಲದ ಕಲ್ಪನೆ ಮಾಡಿಕೊಂಡು, ತಮ್ಮ ಕೆಲಸ ಆಗದೇ ಹೋದರೆ ಮತ್ತೆ ಸರಕಾರವನ್ನು ದೂಷಿಸೋದು ಯಾಕೆ?
ತನ್ನ ಬ್ಯಾಗಿನಿಂದ ಯಾವುದೋ ಮ್ಯಾಗಜೀನ್ ತೆಗೆದುಕೊಂಡು ತಿರುವುತ್ತ ಗುಜರಾತ್’ನ ಬೆಳವಣಿಗೆ ಬಗ್ಗೆ ಶುರು ಮಾಡಿದ. "ಹೊಸ ಸರಕಾರ ಬಂದ ಮೇಲೆ ಈ ಹಾಳು ಟ್ರ್ಯಾಫಿಕ್ ತೊಂದರೆಗಳು ಇರೋಲ್ಲ. ಎಲ್ಲೆಡೆ ಸೋಲಾರ್ ಪ್ರಾಜಕ್ಟ್’ಗಳು ಶುರುವಾಗುತ್ತೆ. ಮೆಟ್ರೋ ಅತ್ಲಾಗೆ ಮುಗಿಯುತ್ತೆ. ಮ್ಯಾಜಿಕ್ ಆಗುತ್ತೆ ನೋಡ್ತಿರಿ ಮ್ಯಾಜಿಕ್. ಸಿಂಗಾಪುರ, ಮಂಗಾಪುರ ಎಲ್ಲ ನಾಚ್ಕೋಬೇಕು. ಏನಂತೀರ?" ಎಂದೋನೇ ಸ್ವಲ್ಪ ಆ ಕಡೆ ಹೋಗಿ ಉಗಿದು ಬಂದು ಕೂತ ಮುನಿಸ್ವಾಮಿ.
ತನ್ನ ಕೆಲಸ ಮಾಡಿಕೊಂಡೇ ಆನಂದರಾಯ ಕೇಳಿದ "ನಿಮ್ಮ ಪ್ರಕಾರ ಗುಜರಾತ್’ನಲ್ಲಿ ಈ ಅಭಿವೃದ್ದಿ ಕೆಲಸಗಳನ್ನ ಮೋದಿಯವರೇ ಮಾಡಿದ್ದಾ? ಅವರ ಪಕ್ಷದವರು ಮಾಡಿದ್ದಾ? ಅಥವಾ ಮೋದಿಯವರು ಜನರಿಂದ ಕೆಲಸ ತೆಗೆದಿದ್ದಾ?"
"ಆನಂದಾ, ನೀವು ಏನೇನೋ ಕೇಳಬೇಡಿ ... ಒಂದೊಂದು ಸಾರಿ ನಿಮ್ ಮಾತೇ ಅರ್ಥವಾಗೋಲ್ಲ. ಒಟ್ಟಿನಲ್ಲಿ ಮೋದಿಯವರು ನುಡಿದಂತೆ ರಾಜ್ಯದಲ್ಲಿ ದೇಶದಲ್ಲಿ ಪ್ರಗತಿ ಆಗುತ್ತೆ. ಅದಂತೂ ನಿಜ ತಾನೇ?"
"ನೋಡಿ, ನೀವೇ ವಿಷಯಕ್ಕೆ ಬಂದಿರಿ ಈಗ. ದೇಶ ಪ್ರಗತಿ ಹೊಂದಬೇಕಾದರೆ, ನಾನೊಬ್ಬನೇ ದುಡಿಯೋಕ್ಕೆ ಆಗೋಲ್ಲ, ನಿಮ್ಮೆಲ್ಲರ ಸಹಕಾರ ಬೇಕು ಅಂತ ಅವರೇ ಹೇಳಿದ್ದಾರೆ ತಾನೇ?’
"ನಾವು ಗೆಲ್ಲಿಸಿರೋ ಲೋಕಸಭಾ ಮೆಂಬರ್’ಗಳು ಇಲ್ವಾ ... ಅವರ ಬಗ್ಗೆ ಹೇಳಿರೋದು ಆ ಮಾತು"
ಆನಂದರಾಯ ಮತ್ತೆ ನಕ್ಕು "ಅಲ್ರೀ ಮುನಿಸ್ವಾಮಿ ... ಅವರು ಹೇಳಿದ್ದು ’ನಾವೆಲ್ಲರೂ ಒಟ್ಟಿಗೆ ದುಡೀಬೇಕು’ ಅಂದರೆ ದೇಶದ ಸಕಲ ಜನತೆ ಒಟ್ಟಾಗಿ ದುಡೀಬೇಕು ಅಂತ. ಅಂದರೆ ನೀವು, ನಾವು ಎಲ್ಲರೂ. ತೊಗೊಳ್ಳೋ ಸಂಬಳಕ್ಕೆ ಸರಿಯಾಗಿ ದಿನಂಪ್ರತಿ ದುಡೀಬೇಕು. ಒಬ್ಬೊಬ್ಬನ ಬದಲಾಗಿ ತನ್ನ ಕೆಲಸ ಮಾಡಿಕೊಂದು ಹೋದರೆ ದೇಶ ಪ್ರಗತಿ ಸಾಧಿಸುತ್ತೆ ಅಂತ ಅವರು ಹೇಳಿದ್ದು. ಇನ್ನು ಮುಂದೆ ಬರೀ ಸಂಬಳ ನೋ ಗಿಂಬಳ. ಕೆಲಸ ಸರಿಯಾಗಿ ಮಾಡದೇ ಇದ್ರೆ ಆಕ್ಷನ್ ತೊಗೋತಾರೆ. ಅರ್ಥ ಆಯ್ತಾ? ಒಟ್ಟಿಗೆ ’ದುಡಿ’ಯೋಣ ಅಂದರೆ ಅದು ವಿಷ್ಯ"
"ರ್ರೀ! ಸ್ವಾಮಿ, ಏನೇನೋ ಹೇಳಿ ತಲೆಕೆಡಿಸಬೇಡಿ ..."
"ಮೋದಿ ಸರಕಾರದ ಸಚಿವರು ಬೆಳಿಗ್ಗೆ ಒಂಬತ್ತಕೆ ಬಂದು ರಾತ್ರಿ ಒಂಬತ್ತಕ್ಕೆ ಮನೆಗೆ ಹೋಗ್ತಾರೆ. ಅದು ನಿಮಗೆ ಗೊತ್ತೋ? ಖುದ್ದು ಅವರೇ ದಿನಕ್ಕೆ ಹದಿನೆಂಟು ಘಂಟೆ ಕೆಲಸ ಮಾಡ್ತಾರೆ. ಪ್ರಧಾನಮಂತ್ರಿಗಳಿಗೆ ಏನಾದರೂ ವಿಷಯ ಬೇಕಿದ್ರೆ ರಾತ್ರೋ ರಾತ್ರಿ ಮೋದಿಯವರ ಕಛೇರಿಯಿಂದ ಸಚಿವರ ಮನೆಗೆ ಕರೆ ಹೋಗುತ್ತೆ. ಪ್ರತಿ ದಿನ ಸಂಜೆಯ ಒಳಗೆ ಆಯಾ ದಿನದ ಪ್ರಗತಿ ತೋರಿಸಬೇಕು. ಇವೆಲ್ಲ ತಮಗೆ ಗೊತ್ತೋ?"
ಕೆಲಸದ ವಿಚಾರ ತಲೆ ಹೋಯ್ತೋ ಇಲ್ವೋ ಗೊತ್ತಿಲ್ಲ. ಟೇಬಲ್ ಕೆಳಗಿನ ಕಾಸಿಗೆ ಕುತ್ತು ಬರುತ್ತೆ ಅನ್ನೋದೇ ಮುನಿಸ್ವಾಮಿ ತಲೆಯಲ್ಲಿ ಸುತ್ತುತ್ತಿತ್ತು "ಅಂದರೇ, ನೀವು ಹೇಳೋದು, ಇನ್ಮೇಲೆ ಮೇಲ್ ಕಾಸು ಇರೋಲ್ಲ ಅಂತೀರಾ?"
ಖಂಡಿತ ಆ ದಿನ ಬಂದೇ ಬರುತ್ತೆ ಅನ್ನೋ ವಿಶ್ವಾಸದಿಂದಲೇ ಆನಂದರಾಯ ತಾನೇ ನಿರ್ಧಾರ ತಳೆದು ನುಡಿದ "ಇರೋಲ್ಲ".
"ಅಂದ್ರೇ ... ಸಚಿವರುಗಳೇ ಈ ಪಾಟಿ ಕೆಲಸ ಮಾಡ್ತಿದ್ದಾರೆ ಅಂದ್ರೇ, ನಾನೂ ಕೆಲಸ ಮಾಡಬೇಕಾ????"
ಹೊಸ ಸರಕಾರದ ಮೇಲೆ ಭರವಸೆ ಇರಲಿ. ದಕ್ಷ ಆಡಳಿತಕ್ಕೆ ಓಗೊಡೋಣ. ದಿನ ಬೆಳಗಾಗೋದ್ರೊಳಗೆ ಎಲ್ಲೆಡೆ ಅಭಿವೃದ್ದಿಯಾಗುತ್ತೆ ಎನ್ನುವ ವಿಪರೀತ ಕಲ್ಪನೆ ಬೇಡ. ದೇಶ ಬದಲಾಗಬೇಕು ಅಂತ ಎಣಿಸೋದಾದರೆ ಮೊದಲು ನಾವು ಬದಲಾಗಬೇಕು. ಕೆಲಸ ಮಾಡಲು ಟೊಂಕಕಟ್ಟಿ ನಿಂತಿರುವ ಮೋದಿಯವರಿಗೆ ಹಸ್ತ ಜೋಡಿಸಲು ಮುಂದಾಗೋಣವೇ?
Comments
ಉ: ಅಂದ್ರೇ ... ಕೆಲಸ ಮಾಡಬೇಕಾ?
ಸರ್ಕಾರೀ ನೌಕರರಿಗೆ ಅತಿಯಾದ ನೌಕರಿಯ ಭದ್ರತೆ ಇರುವುದೇ ಉದಾಸೀನ ಹಾಗೂ ಬೇಜವಾಬ್ದಾರಿ ನಡವಳಿಕೆಗೆ ಪ್ರಧಾನ ಕಾರಣವಾಗಿದೆ. ಒಬ್ಬ ಕೆಳಮಟ್ಟದ ಸರಕಾರೀ ನೌಕರನಿಗೂ ಧಿಮಾಕು ತುಂಬಿ ತುಳುಕಲು ಕಾರಣ ಏನೆಂದರೆ ಅವರನ್ನು ಸುಲಭದಲ್ಲಿ ನೌಕರಿಯಿಂದ ತೆಗೆಯುವಂತೆ ಕಾನೂನು ಅನುವು ಮಾಡಿಕೊಡುವುದಿಲ್ಲ. ಹೀಗಾಗಿ ಸರ್ಕಾರೀ ನೌಕರರು ಎಷ್ಟೇ ಭ್ರಷ್ಟರಾದರೂ, ಸೋಮಾರಿಗಳಾದರೂ, ಅದಕ್ಷರಾದರೂ ಅವರನ್ನು ಅಮಾನತು ಮಾಡಬಹುದಷ್ಟೇ ಹೊರತು ಕೆಲಸದಿಂದ ವಜಾ ಮಾಡುವಂತೆ ಇಲ್ಲ. ಅವರು ಇದನ್ನು ಬೇರೆ ಬೇರೆ ವೇದಿಕೆಗಳಲ್ಲಿ ಪ್ರಶ್ನಿಸಬಹುದು, ಕೋರ್ಟುಗಳಲ್ಲಿ ದಾವೆ ಹೂಡಿ ರಕ್ಷಣೆ ಪಡೆಯಬಲ್ಲರು. ಹೀಗಾಗಿ ಲೋಪ ಇರುವುದು ಸರ್ಕಾರೀ ನೌಕರರ ನೇಮಕ ಹಾಗೂ ನೇಮಕದ ನಂತರದ ನೌಕರಿಯ ಅತಿಯಾದ ಭದ್ರತೆಯಲ್ಲಿ. ಇದಕ್ಕೆ ಸಂಬಂಧಪಟ್ಟ ನಿಯಮಾವಳಿಗಳಿಗೆ ತಿದ್ದುಪಡಿ ತಂದು ಲೋಪವನ್ನು ಸರಿಪಡಿಸದ ಹೊರತು ಸರ್ಕಾರೀ ನೌಕರರಿಂದ ಹೆಚ್ಚಿನ ದಕ್ಷತೆಯನ್ನು ನಿರೀಕ್ಷಿಸುವಂತಿಲ್ಲ. ಖಾಸಗಿ ಸಂಸ್ಥೆಗಳಲ್ಲಿ ಇಂಥ ಅತಿಯಾದ ನೌಕರಿಯ ಭದ್ರತೆ ಇಲ್ಲ. ಹೀಗಾಗಿ ಖಾಸಗಿ ಸಂಸ್ಥೆಗಳಲ್ಲಿ ಸಂಸ್ಥೆಯ ಮಾಲಕನು ಎಲ್ಲ ಕಡೆ ಕೆಲಸದ ಮೇಲುಸ್ತುವಾರಿ ನೋಡದೆ ಇದ್ದರೂ ಇತರ ನೌಕರರ ಮೂಲಕ ದಕ್ಷತೆಯ ಕೆಲಸ ತೆಗೆಯುತ್ತಾನೆ. ಅಲ್ಲಿ ದಕ್ಷತೆಯ ಕೆಲಸಕ್ಕೆ ಮೂಲ ಸಂಬಳದ ಜೊತೆ ಕೆಲಸದ ಸಾಮರ್ಥ್ಯ, ದಕ್ಷತೆ, ಶ್ರದ್ಧೆ ನೋಡಿಕೊಂಡು ಹೆಚ್ಚುವರಿ ಭತ್ತೆ ನೀಡುವ ಪದ್ಧತಿ ಚಾಲ್ತಿಯಲ್ಲಿದೆ. ಹೀಗಾಗಿ ನೌಕರರು ಆದ್ಯತೆಯ ಮೇಲೆ ಹೆಚ್ಚಿನ ಭತ್ತೆ ಪಡೆಯಲು ಶ್ರದ್ಧೆಯಿಂದ ಹಾಗೂ ಎಚ್ಚರಿಕೆಯಿಂದ, ವಿನಯದಿಂದ ಸಾರ್ವಜನಿಕರ ಜೊತೆ ನಡೆದುಕೊಂಡು ಕೆಲಸ ಮಾಡುತ್ತಾರೆ. ಸರ್ಕಾರೀ ವಲಯದಲ್ಲಿಯೂ ಇದೇ ರೀತಿಯ ನಿಯಮಾವಳಿಗಳನ್ನು ತರದ ಹೊರತು ಸರಕಾರೀ ನೌಕರರ ಕೆಲಸದ ಮಟ್ಟ, ದಕ್ಷತೆ, ಶ್ರದ್ಧೆ ಹಾಗೂ ಸಾರ್ವಜನಿಕರೊಂದಿಗೆ ವಿನಯವಂತಿಕೆಯ ವ್ಯವಹಾರ ನಿರೀಕ್ಷಿಸಲು ಸಾಧ್ಯವಿಲ್ಲ. ಭ್ರಷ್ಟ ಹಾಗೂ ಅದಕ್ಷ ಅಧಿಕಾರಿಗಳನ್ನು, ನೌಕರರನ್ನು ಶೀಘ್ರವಾಗಿ ಕೆಲಸದಿಂದ ವಜಾ ಮಾಡುವ ವ್ಯವಸ್ಥೆ ಬರದ ಹೊರತು ಸರ್ಕಾರಿ ನೌಕರರ ಕೆಲಸದ ಸಂಸ್ಕೃತಿಯಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಇದನ್ನು ಮಾಡಬೇಕಾದ ಸಂಸದರು, ಶಾಸಕರು ಇಂಥ ಕಾನೂನು ತಿದ್ದುಪಡಿಗಳನ್ನು ಮಾಡಲು ಮುಂದೆ ಬರುತ್ತಿಲ್ಲ. ಇದನ್ನು ಮಾಡುವುದು ದೇಶದ ಬದಲಾವಣೆಗೆ ಅತೀ ಅಗತ್ಯವಾಗಿದೆ.
In reply to ಉ: ಅಂದ್ರೇ ... ಕೆಲಸ ಮಾಡಬೇಕಾ? by anand33
ಉ: ಅಂದ್ರೇ ... ಕೆಲಸ ಮಾಡಬೇಕಾ?
ಅನಂದ ಅವರಿಗೆ ನಮಸ್ಕಾರಗಳು
ನಿಮ್ಮ ಅನಿಸಿಕೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ...
ಯಾವುದೇ ವಿಧವಾಗಿ ಒಂದು ಕ್ರಮ ತೆಗೆದುಕೊಳ್ಳಬೇಕು ಅಂದಾಗ ಧುತ್ತನೆ ಎದುರಾಗುವ ಪ್ರಶ್ನೆ 'ಆತ/ಆಕೆ ಯಾವ ಮತ? ಯಾವ ಜಾತಿ' ಇತ್ಯಾದಿಗಳು ... ಅರ್ಧಕ್ಕರ್ಧ ವಿಚಾರಣ ಕ್ರಮಗಳು ಸೋಲುವುದು / ಸಾಯುವುದು ಅಲ್ಲೇ. ಆಫೀಸರ್ 'ಬ್ರಾಹ್ಮಣ' ತನ್ನ ಕೈಕೆಳಗಿನ ಹಿಂದುಳಿದವರನ್ನು ಸರಿಯಾಗಿ ನೆಡೆಸಿಕೊಳ್ಳುತ್ತಿಲ್ಲ ಎಂದು ದಾವೆ ಹೂಡಿದರೆ, ಅಲ್ಲಿಗೆ ಮುಗೀತು, ಬಡ ತೆರಿಗೆದಾರನ ಕೆಲಸವೂ ಅಲ್ಲಿಗೇ ಖತಂ.
ಸರಕಾರಿ ಕಛೇರಿಗಳಲ್ಲಿ ಬೇಕಿರುವುದು 'ಅಕೌಂಟಬಿಲಿಟಿ'. ಅದು ಬರುವವರೆಗೂ ಕೆಲಸಗಳೆಲ್ಲ ಆಮೆಗತಿಯ ವೇಗದಲ್ಲೇ ಸಾಗುತ್ತದೆ.
In reply to ಉ: ಅಂದ್ರೇ ... ಕೆಲಸ ಮಾಡಬೇಕಾ? by anand33
ಉ: ಅಂದ್ರೇ ... ಕೆಲಸ ಮಾಡಬೇಕಾ?
"ಅಂದ್ರೇ ... ನಾನೂ ಕೆಲಸ ಮಾಡಬೇಕಾ????" :) :)
ಭಲ್ಲೇಜಿ,>>ಹೊಸ ಸರಕಾರದ ಮೇಲೆ ಭರವಸೆ ಇರಲಿ. ದಕ್ಷ ಆಡಳಿತಕ್ಕೆ ಓಗೊಡೋಣ. ದಿನ ಬೆಳಗಾಗೋದ್ರೊಳಗೆ ಎಲ್ಲೆಡೆ ಅಭಿವೃದ್ದಿಯಾಗುತ್ತೆ ಎನ್ನುವ ವಿಪರೀತ ಕಲ್ಪನೆ ಬೇಡ.
- ನೀವು ಹೇಳಿದಿರಿ ಎಂದು ಹೊಸ ಸರಕಾರದ ಮೇಲೆ ಭರವಸೆ ಇಡುತ್ತೇನೆ. ಆದರೆ.........
ಹತ್ತು ವರ್ಷದ ಮೊದಲು ಹೊಸ ಸರಕಾರ ಬಂದಾಗ-"Ahead of Union budget, .. hints at 'bitter medicine'.. ಹೇಳಿದ ಡಯಲಾಗ್ಏ ಹೊಸ ಪಿ.ಎಮ್ ಬಾಯಲ್ಲೂ ಬಂತು. ಜತೆಗೆ ಇರಾಕ್ ಅಂತಃ ಕಲಹ- ಪೆಟ್ರೋಲ್..ಗ್ಯಾಸ್ ಬೆಲೆ ಏರಿ...ಬೇಡ ಬಿಡಿ ನಿಮ್ಮ ಹಾಗೇ ಆಶಾವಾದಿಯಾಗಿರುವೆ. :)
ಆನಂದ್ ಮೇಲೆ ಹೇಳಿದ ಸಲಹೆಗೆ ನನ್ನದೂ+೧. >>ಭ್ರಷ್ಟ ಹಾಗೂ ಅದಕ್ಷ ಅಧಿಕಾರಿಗಳನ್ನು, ನೌಕರರನ್ನು ಶೀಘ್ರವಾಗಿ ಕೆಲಸದಿಂದ ವಜಾ ಮಾಡುವ ವ್ಯವಸ್ಥೆ ಬರದ ಹೊರತು ಸರ್ಕಾರಿ ನೌಕರರ ಕೆಲಸದ ಸಂಸ್ಕೃತಿಯಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ.
-ಜತೆಗೆ ಭೃಷ್ಟ ಅದಕ್ಷ ಸಂಸದ/ಶಾಸಕರನ್ನೂ ಕೂಡಲೇ ವಜಾ ಮಾಡಬೇಕು. ಸಾಧ್ಯಾನಾ?
In reply to ಉ: ಅಂದ್ರೇ ... ಕೆಲಸ ಮಾಡಬೇಕಾ? by ಗಣೇಶ
ಉ: ಅಂದ್ರೇ ... ಕೆಲಸ ಮಾಡಬೇಕಾ?
ನಿಜ ಗಣೇಶರೇ ... ಆಶಾವಾದಿಯಾಗಿರೋಣ
ವಜಾ ಮಾಡಬೇಕು ಎಂಬೋದು ನಿಜ ಆದರೆ ಅದರೊಂದಿಗೇ ಹುಟ್ಟುವ ಸಮಸ್ಯೆಗಳಂತೂ ಊಹಾತೀತ. ಇಷ್ಟೂ ವರ್ಷಗಳು ಗಬ್ಬು ಹಿಡಿದಿರುವ ಈ ವ್ಯವಸ್ತೆಗೆ ಸಾಮಾನ್ಯ ಜನರೇ ಒಗ್ಗಿಹೋಗಿದ್ದಾರೆ ... ಎಲ್ಲೋ ಒಂದಿಷ್ಟು ಆಶಯ ಇದೆ. ಏನೋ ಆಗಬಹುದು ಅಂತ. ನೋಡೋಣ.
ಉ: ಅಂದ್ರೇ ... ಕೆಲಸ ಮಾಡಬೇಕಾ?
ಒಂದಾದರೂ ಹೆಜ್ಜೆ ಮುಂದಿಟ್ಟಂತೆ, 'ನಾನೂ ಕೆಲಸ ಮಾಡಬೇಕು' ಅನ್ನುವುದು!
In reply to ಉ: ಅಂದ್ರೇ ... ಕೆಲಸ ಮಾಡಬೇಕಾ? by kavinagaraj
ಉ: ಅಂದ್ರೇ ... ಕೆಲಸ ಮಾಡಬೇಕಾ?
ಸತ್ಯ ಕವಿಗಳೇ ... ಆ ಸಂಕಲ್ಪವೇ ಮೊದಲ ಮತ್ತು ಹಿರಿದಾದ ಹೆಜ್ಜೆ!
ಧನ್ಯವಾದಗಳು !