ಮಣ್ಣು ಮೂಲ: ಗುಲ್ಜಾರ್ ಸಾಹಬ್ ಅನುವಾದ : ಲಕ್ಷ್ಮೀಕಾಂತ ಇಟ್ನಾಳ

ಮಣ್ಣು ಮೂಲ: ಗುಲ್ಜಾರ್ ಸಾಹಬ್ ಅನುವಾದ : ಲಕ್ಷ್ಮೀಕಾಂತ ಇಟ್ನಾಳ

ಮಣ್ಣು
          ಮೂಲ: ಗುಲ್ಜಾರ್ ಸಾಹಬ್
          ಅನುವಾದ : ಲಕ್ಷ್ಮೀಕಾಂತ ಇಟ್ನಾಳ
ಸಾವಿನ ಶೋಕದ ವಾತಾವರಣ ಸುತ್ತ
ಆವೇಶ ಉದ್ವೇಗಗಳ ಗಲಿಬಿಲಿ ಎತ್ತ
‘ಅವರಿಗೂ’ ಹೇಳು, ಸುದ್ದೀ ಮುಟ್ಟಿಸು
‘ಇಂತಿಂಥ’ ಮಂದಿಗೆ ಹೇಳಿದೆ ಇಲ್ಲೊ ವiತ್ತ
ಊರ ಫೋನೆಲ್ಲ ಒಂದಕ್ಕೊಂದು ಹೆಣೆದುಕೊಳ್ಳುತಿತ್ತು
ಸಂದಣಿ ಅಲ್ಲಲ್ಲಿ ಮಡುಗಟ್ಟುತಿತ್ತು

ದು:ಖಿಸುತ ಬಿಕ್ಕಿದರೊಬ್ಬರು,
‘ಮುಖ ನೋಡಿದರೆ, ಥೇಟ್ ಮಲಗಿದಂತೆಯೇ
ಅನಿಸುತ್ತಿದೆ’
 ‘ಅಣ್ಣಾ’ ಎಂದರೆ, ಎದ್ದೇಳುವರೇನೊ’
ಜವಾಬ್ದಾರಿ ಹೊತ್ತ ಕೆಲವರು,
ಯಜಮಾನಿಕೆಯಿಂದ ಕೇಳಿದರು,
“ಎಷ್ಟು ಗಂಟೆಗೆ ಎತ್ತುವುದು”
“ಸ್ವಲ್ಪ ಹುಳಿ ಮೊಸರನ್ನ ತರಿಸಿ ಇಡಿರಿ”
“ಕೊನೆಯ ದರ್ಶನ ಮಾಡಿ ಬಿಡಲು ತಿಳಿಸಿರಿ”
“ಕೊನೆಯ  ಫ್ಲೈಟಿನ ಹಾದಿ ಕಾಯಿರಿ,
ಕೆಲ ನೆಂಟರು ಬರುವವರಿದ್ದಾರೆ”
ಯಾವುದೋ ಗಾಡಿ ಬಂತೆಂದು ಕಾಣುತ್ತದೆ,
ಮುಖಗಳೆಲ್ಲ ಅತ್ತ ತಿರುಗಿದವು, ಯಾರೆಂದು ನೋಡಲು,
ದೂರದಿಂದಲೇ ಎತ್ತರದ ಧ್ವನಿಯಲ್ಲಿ ರೋಧಿಸುವ ಶಬ್ದ,
ಯಾರೋ ಬಹಳ ಬೇಕಾದವರೇ ಇರಬೇಕು,
ಒಬ್ಬಿಬ್ಬರು ಅವರನ್ನು ಸಂತೈಸಲು
ಧಾವಿಸಿದರು ಅತ್ತ, ಅವರತ್ತ,
“ಸಮಾಧಾನ ಮಾಡಿಕೊಳ್ರಿ, ಧೈರೇ ತಗೊಳ್ರೀ”
“ಎಲ್ಲರಿಗೂ ಒಂದು ದಿನ ಹೋಗೂದು ಇದ್ದೇ ಇದೆ”
“ಆಗೂದನ್ನು ತಡೆಯೋದು ಯಾರ ಕೈಯಾಗೈತಿ?”

ಬಿಕ್ಕಳಿಸಿ ಅಳುವವರು,
ದು:ಖ ತಡೆಯುತ್ತ ಮತ್ತೆ ಕೇಳಿದರು,
“ಯಾವಾಗಾತು? ಹೆಂಗಾತು ? ಯಾವ ರೀತಿ?”  ಹಯ್ಯೋ…ಅ…ಯ್ಯೋ….
ಇನ್‍ಅ  ನಿನ್ನೆರ ಅಗದಿ ಗಟ್ಟಿ ಮುಟ್ಟಾಗಿದ್ದರು….
ಹೋದ ಮಂಗಳವಾರ ಭೆಟ್ಟಿಯಾಗಿದ್ದರು ನಂಗ,
ವಿಷಾದದ ನಗುವಲ್ಲಿ ಮುಂದುವರೆಸಿದರೊಬ್ಬರು,
“ಈ ಸಾರಿ ಮನೀಗಿ ಬರದಿದ್ದರ…..
ಮುಖಾನ ನೋಡೂದಿಲ್ಲ ಮುಂದ’ “
ಅಂದು, ಮತ್ತೆ ಕಣ್ಣೀರಾದರು ಯಾರೋ!
“ಸಮಾಧಾನ ಮಾಡಿಕೊಳ್ರೀ, ಧೈರೇ ತಗೊಳ್ರೀ”

ರೋಧಿಸುವುದಾದರೂ, ಅದೆಲ್ಲಿವರೆಗೆ
ಹೊಟ್ಟೆ ಚುರುಗುಟ್ಟುವವರೆಗೆ ಅನ್ನು
ಸುತ್ತ ನೀರವತೆಯಲ್ಲಿ ಹರಡಿತು ಗುಸು ಗುಸು,
ತಡಮಾಡುವುದು ಬೇಡ, ಎತ್ತಿರೋ ಶವವನ್ನು, ಇನ್ನು

ಸಂದಣಿ ತುಂಬಿತ್ತು  ಶವಯಾತ್ರೆಯಲ್ಲಿ
ಯಾರದಿದು ಶವವೊಂದು ಬರುತ್ತಿದೆಯಲ್ಲಾ
ದೊಡ್ಡ ದೊಡ್ಡ ಮಂದಿ ಕಾಣುತ್ತಿರುವರಲ್ಲಾ
“ರಸ್ತೆಯಲ್ಲಿಯೇ ಸುದ್ದಿ ಕಿವಿಮುಟ್ಟಿತು ನಂಗೆ,
ಅಲ್ಲಿಂದ ಸೀದಾ ಇಲ್ಲಿಗೇ ಬಂದೆ, ಬಿಟ್ಟು ಎಲ್ಲಾ”
“ನಿಮ್ಮ ಆ ಕೇಸ್ ಏನಾಯಿತೋ ಕೋರ್ಟಲ್ಲಿ?”
“ಮತ್ತೆ ಮುಂದಿನ ತಾರೀಖಿಗೆ ಬಿತ್ತಲ್ಲಾ”
“ನಾನಂತೂ ದಂಗಾಗಿ ಬಿಟ್ಟೆ, ಸುದ್ದಿ ಕೇಳಿ
ಇನ್ನೂ ಕೂಡ ಗಟ್ಟಿಮುಟ್ಟಾಗಿದ್ದ ಜೀವ,
‘ಕಟಿಗಿ ಮುಟ್ಟಿದಂಗ ಮಾಡ್ರೆಲಾ”
“ಒಂದಿಷ್ಟು ಕಟ್ಟಿಗೆ ಎತ್ತಿ ಶವದ ಮೇಲೆ ಇಡ್ರಿ ಎಲ್ಲಾ”

ಮಣ್ಣಿಗೆ ಹೋದವರೆಲ್ಲಾ ಮರಳಿದರು
ಮಣ್ಣು ಕೊಟ್ಟವರು ಜಳಕ ಮಾಡಿದರು
“ಕೊಡು- ತುಗೊಳ್ಳೋದು  ಚುಕ್ತಾ  ಆಗಿದೆ” ಅಂದರೊಬ್ಬರು
ನಿರಾಳರಾದರು ಕೈಗೂಡಿದ ಎಲ್ಲರೂ

ಸಂಜೆವರೆಗೆ ಬೂದಿ ತಣ್ಣಗಾಗಿರಬಹುದು
ಮಡಕೆಯಲ್ಲಿ ಬೂದಿ-ಎಲುವೆಲ್ಲವನ್ನು ತುಂಬಿ
ಹಿಂದಿನ ಸಮುದ್ರದಲ್ಲಿ ಬರಲು ಬಿಟ್ಟು
ಎರಡು ರೂಪಾಯಿ ಆಳಿನ ಕೈಗಿಟ್ಟು
ನೀಳುಸಿರಿಟ್ಟರು ಹೇಳುತ್ತ,
“ಮಣ್ಣು ಮರಳಿತು, ಮತ್ತೆ ಮಣ್ಣಿಗೆ”

ನಾಳೆ ಕ್ಯಾಲೆಂಡರಲ್ಲಿ ಬೆಳಗಾದರೆ
“ನಾನು ಎಂಬುದು ಎಲ್ಲಿಯೂ ಸಿಗದು
ನಾನು ಎಂಬುದರ ‘ಇರುವೆ’ ಹೋಗಿ, ‘ಇದ್ದೆ’ ಎಂದಾಗುವುದು”

Rating
No votes yet

Comments

Submitted by lpitnal Wed, 06/18/2014 - 21:06

In reply to by ಗಣೇಶ

ಆತ್ಮೀಯ ಗಣೇಶ ಜಿ, ಕೊಂಡಿ ನೋಡಿದೆ, 'ಕೊಯೀ ಬಾತ್ ಚಲೇ', ತುಂಬ ಹಿಡಿಸಿತು, ತಮ್ಮ ಮೆಚ್ಚುಗೆಗೂ ವಂದನೆಗಳು.

Submitted by ksraghavendranavada Tue, 06/17/2014 - 09:29

ಓದಿಸಿಕೊ೦ಡು ಹೋಗುವ ತಾಕತ್ತು ಈ ಅನುವಾದಿತ ಕವನಕ್ಕೆ ಲಭ್ಯವಾಗಿದ್ದರೂ, ಕವನದಲ್ಲಿ ಸಾವನ್ನು ಹಾಗೂ ಶವದ ಮು೦ದಿನ ಸ೦ಬ೦ಧಿಸಿದವರ ಗಡಿಬಿಡಿಯನ್ನು ವರ್ಣಿಸಲಾಗಿದ್ದರೂ, ಮೂಲ ಕವನದಲ್ಲಿನ ಅರ್ದ್ರತೆಯ ಕೊರತೆ ಅನುವಾದಿತ ಕವನದಲ್ಲಿ ಕ೦ಡುಬರುತ್ತಿದೆ ಎ೦ದು ಅನ್ನಿಸಿತು. ಮತ್ತೆಲ್ಲಾ ಓಕೆ...
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

Submitted by lpitnal Wed, 06/18/2014 - 21:15

In reply to by ksraghavendranavada

ಆತ್ಮೀಯ ಗೆಳೆಯ ನಾವಡ್ ರೆ, ತಮ್ಮ ವಿಮರ್ಶೆ ಮೆಚ್ಚುಗೆಯಾಯಿತು, ತಮ್ಮ ಸಲಹೆಯಂತೆ ಸಧ್ಯಕ್ಕೆ ತಮಗೆ ಕಾಣದ ಆ ಆರ್ದ್ರತೆಗಾಗಿ ಮರು ಪರಿಷ್ಕರಣೆಗೆ ಪ್ರಯತ್ನಿಸುವೆ, ಇಂತಹ ಆರೋಗ್ಯಯುತ ಅನಿಸಿಕೆಗೆ ನಾನೆಂದೂ ನನ್ನ ಮನವನ್ನು ಸದಾ ತೆರೆದುಕೊಂಡಿರುತ್ತೇನೆ. ಕಾಯುತ್ತಿರುತ್ತೇನೆ ಸಲಹೆಗಳಿಗೆ. ತಮ್ಮ ಕಾಳಜಿಪೂರ್ವ ಮುಕ್ತ ಸಲಹೆಗೆ ಧನ್ಯವಾದಗಳು ಸರ್.

Submitted by H A Patil Tue, 06/17/2014 - 18:58

ಲಕ್ಷ್ಮೀಕಾಂತ ಇಟ್ನಾಳ್ ರವರಿಗೆ ವಂದನೆಗಳು
ಕವಿ ಗುಲ್ಜಾರರ ಕವನದ ಅನುವಾದ ಮಣ್ಣು ಸೊಗಸಾಗಿ ಮೂಡಿ ಬಂದಿದೆ, ಸಾವಿನ ಮನೆಯ ಚಿತ್ರಣವನ್ನು ಇಡಿಯಾಗಿ ಕಟ್ಟಿ ಕೊಟ್ಟಿದ್ದೀರಿ, ಎಲ್ಲ ಸಾವುಗಳ ಸಂಧರ್ಭದಲ್ಲೂ ಮರುಕಳಿಸುವ ಚಿತ್ರಣ ಇದು. ಕೊನೆಯ ಸಾಲುಗಳಂತೂ ಬಹಳ:ಪರಿಣಾಮಕಾರಿಯಾಗಿವೆ. ಸೊಗಸಾದ ಕವನವನ್ನು ಮೂಲಕ್ಕೆ ಚ್ಯುತಿ ಬಾರದಂತೆ ಕನ್ನಡಕ್ಕೆ ತಂದಿದ್ದೀರಿ, ಧನ್ಯವಾದಗಳು.

Submitted by lpitnal Wed, 06/18/2014 - 21:19

In reply to by H A Patil

ಹಿರಿಯರೂ ಆತ್ಮೀಯರೂ ಆದ ಹೆಚ್ ಎ ಪಾಟೀಲರವರೇ, ಲಕ್ಷ್ಮೀಕಾಂತ ಇಟ್ನಾಳರ ವಂದನೆಗಳು. ಎಂದಿನಂತೆ ಹುರಿದುಂಬಿಸುವ ಮನದ ಬೆನ್ನ ಚಪ್ಪರಿಕೆಗೆ ಖುಷಿಯಾಗುತ್ತದೆ, ಒಂದು ರೀತಿಯ ವಾರ್ಮ್ಥ್ ಮನದಲ್ಲಿ ಮೂಡುತ್ತದೆ. ತಮ್ಮ ಓದೇ ನನಗೆ ಸ್ಫೂರ್ತಿ. ತಮಗೆ ಮತ್ತೊಮ್ಮೆ ನಮ್ರ ವಂದನೆಗಳು.