ಬಹುರೂಪಿ ಕಾಮ
ಕಾಮವೆಂಬುದು ಅರಿಯು ಕಾಮದಿಂದಲೆ ಅರಿವು
ಕಾಮವೆಂಬುದು ಪಾಶ ಕಾಮದಿಂದಲೆ ನಾಶ |
ಕಾಮವೆಂಬುದು ಶಕ್ತಿ ಕಾಮದಿಂದಲ್ತೆ ಜೀವಸಂವೃದ್ಧಿ
ಕಾಮದಿಂದಲೆ ಸಕಲ ಸಂಪದವು ಮೂಢ ||
ಮನುಷ್ಯನನ್ನು ಅಧಃಪಾತಾಳಕ್ಕೆ ತಳ್ಳುವ ಆರು ಪ್ರಧಾನ ಸಂಗತಿಗಳಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಕಾಮ. ಅದೇ ಮನುಷ್ಯನನ್ನು ಮುಕ್ತಿಯೆಡೆಗೆ ಸಾಗಿಸುವ ನಾಲ್ಕು ಪುರುಷಾರ್ಥಗಳಲ್ಲಿ ಸಹ ಪ್ರಧಾನವಾಗಿರುವುದು ಇದೇ ಕಾಮ. ಒಂದು ರೀತಿಯಲ್ಲಿ ಮನುಷ್ಯನನ್ನು ಅಧಃಪತನಗೊಳಿಸುವುದು ಮತ್ತು ಉದ್ಧಾರಗೊಳಿಸುವುದು ಎರಡೂ ಸಾಧ್ಯವಿರುವುದು ಎರಡು ಅಲಗಿನ ಚೂಪಾದ ಖಡ್ಗದಂತಿರುವ ಈ ಕಾಮಕ್ಕೇ! ಕಾಮ ಎಂದಾಕ್ಷಣ ನಮಗೆ ನೆನಪಾಗುವುದೇನೆಂದರೆ ಅದು ಸ್ತ್ರೀ-ಪುರುಷರ ಲೈಂಗಿಕತೆಗೆ ಸಂಬಂಧಿಸಿದ್ದೆಂದು ಅನ್ನಿಸುವುದಲ್ಲವೇ? ಆದರೆ ಕಾಮವೆಂದರೆ ಇಷ್ಟೇ ಅಲ್ಲ, ಕಾಮವೆಂದರೆ ಈ ಅರ್ಥವೂ ಸೇರಿದಂತೆ ಇಚ್ಛೆ, ಬಯಕೆ, ಆಸೆ, ಅಭಿಲಾಷೆ, ಇತ್ಯಾದಿ ಅರ್ಥಗಳೂ ಇವೆ. ಈ ಇಚ್ಛೆ, ಬಯಕೆ, ಆಸೆಗಳು ಎರಡು ರೀತಿಯಲ್ಲೂ ಇರಬಹುದು. ಉನ್ನತಿ ಬಯಸುವ ಆಸೆಗಳು ಸಮಾಜಕ್ಕೂ, ಸ್ವಂತಕ್ಕೂ ಹಿತಕಾರಿಯಾಗಿರುತ್ತವೆ. ತಾನೂ ಹಾಳಾಗಿ ಪರರರನ್ನೂ ತೊಂದರೆಗೀಡುಮಾಡುವ ಕಾಮನೆಗಳೂ ಇರುತ್ತವೆ. ಆದರೆ ಕಾಮರಾಹಿತ್ಯ ಅಥವ ನಿಷ್ಕಾಮ ಸ್ಥಿತಿ ಎಂಬುದು ಇರಲಾರದು. ಏಕೆಂದರೆ ಉನ್ನತ ಸ್ಥಿತಿಗೆ ಏರಬೇಕು, ನೆಮ್ಮದಿ, ಶಾಂತಿ ಬೇಕು, ಆತ್ಮ/ಪರಮಾತ್ಮನನ್ನು ಅರಿಯಬೇಕು, ಇತ್ಯಾದಿ ಕಾಮನೆಗಳಾದರೂ ಇದ್ದೇ ಇರುತ್ತವೆ. ಮನುಷ್ಯನನ್ನು ನೀಚನನ್ನಾಗಿಸುವ, ಪಾತಾಳಕ್ಕೆ ತಳ್ಳುವ ಕಾಮನೆಗಳು ಮಾನವನ ಶತ್ರುವಾಗುತ್ತದೆ. ಮಾನವಜೀವನದ ಉದ್ದೇಶ ಸಾಧನೆಗೆ ಪೂರಕವಾಗುವ ಪುರುಷಾರ್ಥ ಕಾಮ ಅವನನ್ನು ನಿಜಮಾನವನನ್ನಾಗಿಸುತ್ತದೆ.
ಕಾಮಿಗೆ ಕಣ್ಣಿಲ್ಲ ಕ್ರೋಧಿಗೆ ತಲೆಯಿಲ್ಲ
ಮದಕೆ ಮೆದುಳಿಲ್ಲ ಮೋಹದ ಕಿವಿಮಂದ |
ಲೋಭಿಯ ಕೈಮೊಟಕು ಮತ್ಸರಿ ರೋಗಿಷ್ಟ
ಅಂಗವಿಕಲನಾಗದಿರೆಲೋ ಮೂಢ ||
ಕಾಮ ನಮ್ಮ ಹಿಡಿತದಲ್ಲಿದ್ದರೆ ಅದರಿಂದ ಏನು ಬೇಕಾದರೂ ಸಾಧಿಸಬಹುದು. ಅದರ ಹಿಡಿತಕ್ಕೆ ನಾವು ಸಿಕ್ಕಿಬಿದ್ದರೆ ಮುಗಿದೇಹೋಯಿತು. ಅನೇಕ ವರ್ಷಗಳ ಸಾಧನೆಯನ್ನು ಕ್ಷಣಾರ್ಧದಲ್ಲಿ ನುಂಗಿ ನೀರು ಕುಡಿಯುವ ಸಾಮರ್ಥ್ಯ ಕಾಮಕ್ಕಿದೆ. ಆಧ್ಯಾತ್ಮಿಕ ಪಥದಲ್ಲಿ ಸಾಗುತ್ತಿರುವವರು, ಜನನಾಯಕರೆನಿಸಿಕೊಂಡವರು, ಸಮಾಜದಲ್ಲಿ ಉನ್ನತ ಸ್ಥಾನ-ಮಾನಗಳನ್ನು ಹೊಂದಿದವರು ಹಲವರು ಕ್ಷಣಿಕ ದೌರ್ಬಲ್ಯದ ಸುಳಿಗೆ ಸಿಕ್ಕಿ ಅಧಃಪತನ ಹೊಂದಿದ, ಮತ್ತೆ ಮೇಲಕ್ಕೇರಲು ಸಾಧ್ಯವೆನಿಸದ ಸ್ಥಿತಿಯಲ್ಲಿರುವ ಅನೇಕರನ್ನು ನಾವು ಕಂಡಿದ್ದೇವೆ, ಕಾಣುತ್ತಿದ್ದೇವೆ. ಈ ಸುಳಿಗೆ ಸಿಕ್ಕಿದವರ ಸಂಸಾರಗಳು ಹಾಳಾಗಿರುವ, ನೆಮ್ಮದಿ ಕಳೆದುಕೊಂಡಿರುವ, ಪ್ರಾಣ ಕಳೆದಿರುವ ಮತ್ತು ಕಳೆದುಕೊಂಡಿರುವವರ ಉದಾಹರಣೆಗಳು ಹೇರಳವಾಗಿ ಸಿಗುತ್ತವೆ. ಅಪಕ್ವ ಮತ್ತು ದುರ್ಬಲ ಮನಸ್ಕರು ಕಾಮದ ಈ ಮುಖದ ಬಲಿಪಶುಗಳಾಗುತ್ತಾರೆ. ಇಂತಹ ಕಾಮಿಗಳ ಬುದ್ಧಿಗೆ ಮಂಕು ಕವಿದಿರುತ್ತದೆ, ಲಜ್ಜೆ, ಮಾನ-ಅಪಮಾನಗಳ ಅರಿವು ಇರುವುದಿಲ್ಲ. 'ಕಾಮಾತುರಾಣಾಂ ನ ಭಯಂ ನ ಲಜ್ಜಾ' ಎಂಬ ನುಡಿಯಂತೆ ಕೆಲವು ಅವಿವೇಕಿಗಳು ತಮ್ಮ ಮಕ್ಕಳು, ಸಂಬಂಧಿಕರು, ಆಶ್ರಿತರು, ಮುಂತಾದವರ ದುರ್ಬಲತೆಯ ದುರ್ಲಾಭ ಪಡೆದು ಅವರನ್ನೂ ಬಲಿಪಶುಗಳನ್ನಾಗಿಸಿರುವ ಪ್ರಸಂಗಗಳ ಬಗ್ಗೆ ತಿಳಿದಾಗ ಹೇಸಿಗೆಯೆನ್ನಿಸುತ್ತದೆ. ಕ್ಷಣಿಕ ಆನಂದದ ಉನ್ಮಾದ ಜೀವನದ ದಿಕ್ಕನ್ನೇ ತಿರುಗಿಸಬಲ್ಲದು ಎಂಬುದರ ಅರಿವು ಮೂಡುವಷ್ಟರಲ್ಲಿ ಪ್ರಮಾದ ಘಟಿಸಿಬಿಟ್ಟಿರುತ್ತದೆ.
ಬೇಕು ಬೇಕೆಂಬುದಕೆ ಕೊನೆಯೆಂಬುದೆಲ್ಲಿ?
ಬಯಸಿದ್ದು ಸಿಕ್ಕಲ್ಲಿ ಮತ್ತಷ್ಟು ಬೇಕು ಮತ್ತಷ್ಟು |
ಸಿಕ್ಕಲ್ಲಿ ಮಗದಷ್ಟು ಬೇಕೆಂಬುದಕೆ ಕಾರಣವು
ಕಾಮ, ಅದಕಿಲ್ಲ ಪೂರ್ಣ ವಿರಾಮ ಮೂಢ ||
ದಾನಗಳಲ್ಲಿ ಅನ್ನದಾನ ಶ್ರೇಷ್ಠವೆಂದು ಹೇಳುತ್ತಾರೆ. ಏಕೆಂದರೆ 'ಸಾಕು' ಎನ್ನಿಸಲು ಸಾಧ್ಯವಿರುವುದು ಅದರಲ್ಲಿ ಮಾತ್ರ. ಹೊಟ್ಟೆ ತುಂಬಿದ ಮೇಲೆ ಎಂತಹ ಸ್ವಾದಿಷ್ಟ ಖಾದ್ಯ ಕೊಟ್ಟರೂ ತಿನ್ನಲಾಗದೆ 'ಸಾಕು, ಸಾಕು' ಎನ್ನಲೇಬೇಕು. ಆದರೆ ಇತರ ಬಯಕೆಗಳ ವಿಷಯದಲ್ಲಿ ಹೀಗೆ ಹೇಳಲಾಗುವುದಿಲ್ಲ. ಎಷ್ಟಿದ್ದರೂ ಸಾಲದು! ಬೇಕುಗಳಿಗೆ 'ಬ್ರೇಕು' ಇರುವುದೇ ಇಲ್ಲ. ತನು, ಮನಗಳ ತೀರದ ದಾಹಗಳೇ ಕಾಮ. ಈ ದಾಹವನ್ನು ತೀರಿಸಲು ಮಾಡುವುದೇ ಕರ್ಮ. ದೇವರ ಆಟವನ್ನು ಬಲ್ಲವರು ಯಾರು? ದಾಹ ತಣಿಯುವುದಿಲ್ಲ, ಕರ್ಮ ನಿಲ್ಲುವುದಿಲ್ಲ. ಈ ಕಾಮವನ್ನು ತಣಿಸಿ ಶಮನಗೊಳಿಸಲು ಕಷ್ಟವೇ ಸರಿ. ತಾತ್ಕಾಲಿಕ ಶಮನವಾದರೂ, ನಂತರದಲ್ಲಿ ಮತ್ತೆ ಆಸೆ ಉದಿಸುತ್ತದೆ. ಇಹ-ಪರಗಳೆರಡರಲ್ಲೂ ನೆಮ್ಮದಿ, ಶಾಂತಿ ಸಿಗಬೇಕಾದರೆ ಕಾಮವನ್ನು ನಮ್ಮ ಉದ್ದೇಶಕ್ಕೆ ತಕ್ಕಂತೆ ಚಾಕಚಕ್ಯತೆಯಿಂದ ಬಳಸಿದರೆ ಮಾತ್ರ ಸಾಧ್ಯ. ಇನ್ನುಳಿದ ಪುರುಷಾರ್ಥಗಳಾದ ಧರ್ಮ. ಅರ್ಥ ಮತ್ತು ಮೋಕ್ಷಗಳ ಸಾಧನೆಗೆ ಈ ಕಾಮವೇ ಪ್ರೇರಕ ಮತ್ತು ಪೂರಕ. ಕಾಮ ಪುರುಷಾರ್ಥ ಸಾಧನೆಯೆಂದರೆ ಆಸೆ, ಬಯಕೆ, ಇಚ್ಛೆಗಳನ್ನು ಯಾರಿಗೂ ನೋವಾಗದಂತೆ, ಹಿಂಸೆಯಾಗದಂತೆ, ಭಾವನೆಗಳಿಗೆ ಧಕ್ಕೆಯಾಗದಂತೆ ಪೂರ್ಣಗೊಳಿಸಿಕೊಳ್ಳುವುದು. ಕಾಮನೆಗಳನ್ನು ಹತ್ತಿಕ್ಕುವುದು ಒಳ್ಳೆಯದಲ್ಲ. ಬಲವಂತವಾಗಿ ಹತ್ತಿಕ್ಕಲ್ಪಟ್ಟ ಆ ಶಕ್ತಿ ಅರಿವಿಲ್ಲದಂತೆ ಇದ್ದಕ್ಕಿದ್ದಂತೆ ಪುಟಿದೆದ್ದರೆ ಅನಪೇಕ್ಷಿತ ಪರಿಣಾಮಗಳುಂಟಾಗುತ್ತವೆ. ಕಾಮವನ್ನು ಹತ್ತಿಕ್ಕುವುದಕಿಂತ ಗೆಲ್ಲುವುದು ಹಿತಕಾರಿ.
ಕಾಮವನು ಹತ್ತಿಕ್ಕಿ ಮುಖವಾಡ ಧರಿಸದಿರು
ಕಾಮವನೆ ಬೆಂಬತ್ತಿ ಓಡುತ್ತಾ ಹೋಗದಿರು |
ಧರ್ಮದಿಂ ಬಾಳಿದರೆ ಸಂಯಮದಿ ಸಾಗಿದರೆ
ದಿವ್ಯ ಕಾಮ ರಮ್ಯ ಕಾಮ ನಿನದಲ್ತೆ ಮೂಢ ||
ಉನ್ನತಿಗೆ ಕಾರಣವಾಗುವ ಕಾಮ ಮನುಷ್ಯನಿಗೆ ಅಗತ್ಯವಾದ ಪುರುಷಾರ್ಥವೆನಿಸುತ್ತದೆ. ಇದನ್ನು ಸಾಧಿಸಲು ಮನೋನಿಗ್ರಹವಿರಬೇಕು, ಸಮಾಜದ ಸ್ವಾಸ್ಥ್ಯದ ಕಡೆಗೆ ಗಮನವಿರಬೇಕು. ಅಥರ್ವವೇದದ ಈ ಮಂತ್ರವನ್ನೊಮ್ಮೆ ನೋಡೋಣ:-
ಯಾಸ್ತೇ ಶಿವಾಸ್ತನ್ವಃ ಕಾಮ ಭದ್ರಾ ಯಾಭಿಃ ಸತ್ಯಂ ಭವತಿ ಯದ್ವೃಣೇಷೇ |
ತಾಭಿಷ್ಟ್ಯಮಸ್ಮಾನ್ ಅಭಿಸಂವಿಶಸಾ sನ್ಯತ್ರ ಪಾಪೀರಪ ವೇಶಯಾ ಧಿಯಃ || (ಅಥರ್ವ.೯.೨.೨೫.)
"ಓ ಕಾಮವೇ, ಯಾವ ನಿನ್ನ ವಿಸ್ತಾರಗಳು ಅಥವಾ ರೂಪಗಳು ಮಂಗಳಕರವೂ, ಕಲ್ಯಾಣಕಾರಿಯೂ ಆಗಿವೆಯೋ, ಯಾವುದನ್ನು ನೀನು ಬಯಸುತ್ತೀಯೋ, ಯಾವ ಸತ್ಯದ ದರ್ಶನ ನಿನ್ನ ಕಾರಣದಿಂದ ಲಭಿಸುತ್ತದೆಯೋ, ಆ ರೂಪಗಳೊಂದಿಗೆ ನಮ್ಮಲ್ಲಿ ಪ್ರವೇಶ ಮಾಡು. ಬುದ್ಧಿಯಲ್ಲಿ ಹುಟ್ಟುವ ಪಾಪದ ರೂಪವುಳ್ಳ ನಿನ್ನ ವಿಸ್ತಾರಗಳನ್ನು ಬೇರೆಕಡೆಗೆ ಅಟ್ಟಿಬಿಡು" ಎಂದು ಹೇಳುವ ಈ ಮಂತ್ರ ಸಾಧಕರಿಗೆ ಮಾರ್ಗದರ್ಶಿಯಾಗಿದೆ. ಜಗತ್ತು ನಡೆದಿರುವುದೇ ಕಾಮದಿಂದ. ಅದಿಲ್ಲದಿದ್ದರೆ ಜಗತ್ತು ನಿಶ್ಚಲವಾಗಿರುತ್ತಿತ್ತು. ಯಾವುದೇ ಬಯಕೆಗಳು, ಆಕಾಂಕ್ಷೆಗಳಿಲ್ಲದ ಬದುಕು ಬದುಕಾಗಲಾರದು. ಆದರೆ, ಈ ಅಕಾಂಕ್ಷೆಗಳು ಧರ್ಮ ಮಾರ್ಗದಲ್ಲಿರಬೇಕು, ಸಂಪಾದಿಸುವ ಅರ್ಥವನ್ನು ಆತ್ಮಕ್ಕೆ ಸಮ್ಮತವಾದ ರೀತಿಯಲ್ಲಿ, ಇತರರಿಗೆ ನೋವು, ಕಷ್ಟ ನೀಡದಂತೆ ಸರ್ವರ ಹಿತ ಗಮನದಲ್ಲಿರಿಸಿಕೊಂಡು ಕಾಮನೆಗಳ ಈಡೇರಿಕೆಗೆ ಬಳಸಬೇಕು. ಈರೀತಿ ಮಾಡಿದಲ್ಲಿ ಚತುರ್ಥ ಪುರುಷಾರ್ಥ ಮೋಕ್ಷಕ್ಕೆ ಹಾದಿ ಸುಗಮವಾಗುತ್ತದೆ. ಗೃಹಸ್ಥಾಶ್ರಮದಲ್ಲಿ ತಿಳಿಸಿದ ಸ್ತ್ರೀ-ಪುರುಷರ ಲೈಂಗಿಕ ಸಂಬಂಧಗಳೂ ಶಾಸ್ತ್ರೀಯವಾಧ ಮರ್ಯಾದೆಗೆ ಅನುಸಾರವಾಗಿದ್ದಲ್ಲಿ ಅದು ಇಹ-ಪರಗಳ ಸಾಧನೆಗೆ ಅಡ್ಡಿಯಾಗುವುದಿಲ್ಲ. ಈ ವೇದಮಂತ್ರದ ಭಾವ ಸುಸ್ಪಷ್ಟವಾಗಿದ್ದು, ಜೀವನ ಸರಸ ಸುಂದರವಾಗಲು, ಸುಖ, ಶಾಂತಿ, ನೆಮ್ಮದಿಗಳಿಂದ ಕೂಡಿರಲು -ಇಹದಲ್ಲಷ್ಟೇ ಅಲ್ಲ, ಪರದಲ್ಲೂ- ನಿಯಂತ್ರಿತ, ಧರ್ಮಮಾರ್ಗಿ, ಸರ್ವಹಿತದ ಕಾಮನೆಗಳು ಇರಬೇಕು. ಕೀಳು ಕಾಮನೆಗಳಿಂದ ಸ್ವಂತದ ಬದುಕಿನೊಂದಿಗೆ ಸಮಾಜದ ಆರೋಗ್ಯವೂ ಹಾಳಾಗುತ್ತದೆ.
-ಕ.ವೆಂ.ನಾಗರಾಜ್.
Comments
ಉ: ಬಹುರೂಪಿ ಕಾಮ
ಕಾಮದ ಸ್ವರೂಪಗಳ ವಿವರಣೆ ಚೆನ್ನಾಗಿದೆ ಕವಿಗಳೇ,,,,, ಬೇಕುಗಳಿಗೆ ಬ್ರೆಕ್ ಇಲ್ಲ ಎನ್ನುವ ಸತ್ಯದ ಅನಾವರಣ,,,, ಅಭಿವ್ಯಕ್ತಿಗೊಂಡ ಬಗೆ ಸುಂದರ, (ನೀವು ಬರೆಯುವ ಎಲ್ಲಾ ಬರಹಗಳು, ಬರಿಯ ಬರಹವಾಗಿರದೇ, ಅದನ್ನು ನೀವೆ ಅನುಭವಿಸಿ ಪ್ರತಿಯೊಂದು ಪದವನ್ನು ನೀವೇ ಆಸ್ವಾದಿಸಿ ಬರೆಯುತ್ತೀರಿ ಎನ್ನುವುದು ಬಹಳ ಮುದ ನೀಡುವ ವಿಷಯ)
ಧನ್ಯವಾದಗಳು
ಜೀ ಕೇ ನ
In reply to ಉ: ಬಹುರೂಪಿ ಕಾಮ by naveengkn
ಉ: ಬಹುರೂಪಿ ಕಾಮ
ಮೆಚ್ಚುಗೆಯ ಪ್ರತಿಕ್ರಿಯೆಗೆ ದನ್ಯವಾದಗಳು, ನವೀನರೇ.
ಉ: ಬಹುರೂಪಿ ಕಾಮ
ಒಳ್ಳೆಯ ವಿಚಾರ ಧಾರೆ. "ಕಾಮಕ್ಕೆ ಕಣ್ಣಿಲ್ಲ ..... ಮೂಢ" ಕವನ ಸೊಗಸಾಗಿದೆ :-)
In reply to ಉ: ಬಹುರೂಪಿ ಕಾಮ by bhalle
ಉ: ಬಹುರೂಪಿ ಕಾಮ
ವಂದನೆಗಳು ಭಲ್ಲೆಯವರೇ.
ಉ: ಬಹುರೂಪಿ ಕಾಮ
ಯಾಸ್ತೇ ಶಿವಾಸ್ತನ್ವಃ ಕಾಮ ಭದ್ರಾ ಯಾಭಿಃ ಸತ್ಯಂ ಭವತಿ ಯದ್ವೃಣೇಷೇ |
ತಾಭಿಷ್ಟ್ಯಮಸ್ಮಾನ್ ಅಭಿಸಂವಿಶಸಾ sನ್ಯತ್ರ ಪಾಪೀರಪ ವೇಶಯಾ ಧಿಯಃ || (ಅಥರ್ವ.೯.೨.೨೫.)
ಕವಿನಾಗರಾಜರೆ, ....."ಆ ರೂಪಗಳೊಂದಿಗೆ ನಮ್ಮಲ್ಲಿ ಪ್ರವೇಶ ಮಾಡು" ಎನ್ನುವ ಬದಲು ಎಲ್ಲರಲ್ಲೂ ಪ್ರವೇಶ ಮಾಡು ಎನ್ನುತ್ತಿದ್ದರೆ ಲೋಕ ಕಲ್ಯಾಣವಾಗುತ್ತಿರಲಿಲ್ಲವೆ?”
>>’ಬುದ್ಧಿಯಲ್ಲಿ ಹುಟ್ಟುವ ಪಾಪದ ರೂಪವುಳ್ಳ ನಿನ್ನ ವಿಸ್ತಾರಗಳನ್ನು ಅನ್ಯತ್ರ ಪಾಪೀರಪ ವೇಶಯಾ’ ಎಂದು, ನೀವೇ "ಅಮಂಗಳಕರ ಕಾಮ"ವನ್ನು ಪಾಪಿಗಳ ಕಡೆ ಅಟ್ಟಿ, ಪಾಪಿಗಳನ್ನು ದೂರುವುದೇತಕೆ? :)
In reply to ಉ: ಬಹುರೂಪಿ ಕಾಮ by ಗಣೇಶ
ಉ: ಬಹುರೂಪಿ ಕಾಮ
:) ಗಣೇಶರಿಗೆ ನಮಸ್ತೆ. ನಮ್ಮಲ್ಲಿ ಎನ್ನುವಲ್ಲಿ ಎಲ್ಲರಲ್ಲಿ ಎನ್ನುವ ಭಾವವೇ ಬರುತ್ತದೆ. 'ನನ್ನಲ್ಲಿ' ಎಂದಿದ್ದರೆ ನೀವು ಹೇಳುವ ಅರ್ಥ ಬರುತ್ತಿತ್ತೇನೋ! ಕಾಮದ ಕೆಟ್ಟ ವಿಸ್ತಾರಗಳನ್ನು ನಮ್ಮಿಂದ ದೂರ ಅಟ್ಟು ಅಂದರೆ 'ಪಾಪಿಗಳ ಕಡೆಗೆ ಅಟ್ಟು' ಎಂದು ಅರ್ಥ ಬರಲಾರದು. ಕೆಟ್ಟ ವಿಸ್ತಾರಗಳು ನಮ್ಮಲ್ಲಿ ಉಳಿದರೆ ನಾವೂ ಪಾಪಿಗಳೇ! ಅಷ್ಟಕ್ಕೂ ಜೀವಿಗಳಾರೂ ಪಾಪಿಗಳಲ್ಲ. ವರ್ತಿಸುವ ರೀತಿ-ನೀತಿಗಳಿಂದ ಪಾಪಿಗಳಾದಾರು! :)
In reply to ಉ: ಬಹುರೂಪಿ ಕಾಮ by kavinagaraj
ಉ: ಬಹುರೂಪಿ ಕಾಮ
ಕವಿನಾಗರಾಜರೆ,
ಇದೇ ನಮ್ಮಲ್ಲಿರುವ ತೊಂದರೆ. ನಮಗೆ ಬೇಕಾದ ಹಾಗೆ ಅರ್ಥೈಸಿಕೊಂಡು ವೇದಗಳಲ್ಲೇ ತಪ್ಪು ಹುಡುಕಲು ಹೊರಡುವೆವು. ಶ್ಲೋಕ ಮತ್ತದರ ಅರ್ಥವನ್ನು ಗುರುಮುಖೇನ ತಿಳಕೊಂಡರೆ ಉತ್ತಮ. ಗುರುವಿನಂತೆ ಅರ್ಥವನ್ನು ವಿವರಿಸಿ ಹೇಳಿದ್ದಕ್ಕೆ ಧನ್ಯವಾದಗಳು.
In reply to ಉ: ಬಹುರೂಪಿ ಕಾಮ by ಗಣೇಶ
ಉ: ಬಹುರೂಪಿ ಕಾಮ
ಗಣೇಶರೇ, ನೀವು ಗುಣೇಶರೂ ಹೌದು. ಧನ್ಯವಾದಗಳು.